ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...

Date: 15-01-2022

Location: ಬೆಂಗಳೂರು


‘ಕಳೆದೈದು ದಿನದಿಂದ ಜರುಗುತ್ತಿರುವ ಕೊರೊನಾ ಜಂಗೀ ಕುಸ್ತಿಯಲ್ಲಿ ಗೆದ್ದೇ ಗೆಲ್ಲುವ ಆತ್ಮವಿಶ್ವಾಸವೇ ಗೆಲ್ಲಿಸಬಲ್ಲದು. ನಿಮ್ಮೆಲ್ಲರ ಪ್ರೀತಿ ಪರಾಮಳಿಕೆ, ಹಾರೈಕೆಗಳು ಸ್ವಯಾರ್ಜಿತ ಆತ್ಮವಿಶ್ವಾಸಕ್ಕೆ ಶಕ್ತಿ ತುಂಬಲಿ’ ಎನ್ನುತ್ತಾರೆ ರಂಗಕರ್ಮಿ, ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ಸಾಂಕ್ರಾಮಿಕ ರೋಗವಾದ ಕೊರೊನಾ ಮತ್ತು ಅದರೊಂದಿಗೆ ಹೋರಾಡುತ್ತಿರುವ ಅವರ ಅನುಭವಗಳನ್ನು ಅಕ್ಷರರೂಪಕ್ಕಿಳಿಸಿದ್ದಾರೆ.

ಅಷ್ಟಕ್ಕೂ ಅದೇನು ತಪಸ್ಸುಗೈಯ್ದು ಗಳಿಸಿದ ರೋಗನಿರೋಧಕ ಶಕ್ತಿಯೇನಲ್ಲ‌. ಹೆಚ್ಚೆಂದರೆ ಅವ್ವ ಅಪ್ಪನಿಂದ ಬಂದ ಜೈವಿಕ ಬಳುವಳಿ ಇದ್ದೀತು. ಯಾಕೆಂದರೆ ಅನೇಕ ಬಾರಿ ನಾವು ಮಾತಾಡುತ್ತಾ ಅವನು ದೊಡ್ಡ ಧೈರ್ಯಶಾಲಿ, ಇವನು ಜಡ್ಡುಜಾಪತ್ರಿಗೆ ಹೆದರೋದೇ ಇಲ್ಲ, ಯಾವುದಕ್ಕೂ ಡೋಂಟ್ ಕೇರ್ ಮುಂತಾಗಿ ಲೋಕಾರೂಢಿಯಾಗಿ ಹೇಳುತ್ತಿರುತ್ತೇವೆ. ಅದೆಲ್ಲಾ ಬೊಗಳೆ ಮಣ್ಣಂಗಟ್ಟಿ.

ಸಾವಿನಪ್ಪನಂತಹ ಭಲೇ ಭಲೇ ಸಂಕಟಗಳ ಸುಳಿ ಸೆಳವುಗಳಲ್ಲಿ ಈಸಿಬಂದ ನನಗೆ ಸಂತಸಗಳಿಗಿಂತ ಸಂಕಟಗಳೇ ಸುಪರಿಚಿತ. ಹೇಳಲಾಗದ ಮತ್ತು ಹೇಳದಿರಲಾಗದ ಬದುಕಿನ ಅನಂತ ಕವಲುಗಳಲ್ಲಿ ಸಿಲುಕಿ ನಲುಗಿದ ನನಗೆ ನೋವುಗಳೇ ಪರಮಾಪ್ತ. ಅಷ್ಟಕ್ಕೂ ನೋವು, ಅವಮಾನಗಳಿಗಿಂತ ವೈರಲ್, ಬ್ಯಾಕ್ಟೇರಿಯಲ್ ರೋಗಗಳು ದೊಡ್ಡವೇನಲ್ಲ. ಹಾಗೆ ಬಂದು ಹಾಗೇ ಮಿಂಚಿ ಮಾಯವಾಗುವ ಕ್ಷಣಿಕ ಸುಖಗಳಿಗಿಂತ ಸುದೀರ್ಘ ಸಂಕಟಗಳು ಕೊಡುವ ವಿಕ್ಷಿಪ್ತಾನಂದ ಜೀವವೇದ್ಯವಾದುದು. ಅದೊಂದು ಬಗೆಯ ಮನನೀಯ ಮೋಜು ಮತ್ತು ವಿಸ್ಮಯ. ಹೀಗಾಗಿ ಅದು ಜೈವಿಕವಾದ ಆನುಷಂಗಿಕ ಇಮ್ಯುನಿಟಿ. ಬಳುವಳಿಯಂತೆ ಹುಟ್ಟಿನಿಂದಲೇ ಗಟ್ಟಿಗೊಂಡಿರಬಹುದು.

ಕಳೆದೆರಡು ವರ್ಷಗಳಿಂದಲೇ ನಿರೀಕ್ಷೆ ಇತ್ತು. ಕೊರೊನಾ ಮೂರನೇ ಅಲೆಯಲ್ಲಿ ಆ ನಿರೀಕ್ಷೆ ಸಾಕಾರಗೊಂಡಿತು. ಅಂದಹಾಗೆ ನನ್ನ ಕೊರೊನಾ ಟೆಸ್ಟ್ ಪಾಸಿಟಿವ್. ನಾನೀಗ ಕೊರೊನಾ ರೋಗಿ. "ನೆಗಡಿ ಜಡ್ಡಲ್ಲ ಬುಗುಡಿ ಒಡವೆಯಲ್ಲ" ಎಂಬ ಗಾದೆಯನ್ನೇ ಸುಳ್ಳು ಮಾಡಿದ್ದು ಕೊರೊನಾ ಎಂಬ ನೆಗಡಿ ಜಡ್ಡು. ಸುತ್ತಿ ಸುತ್ತಿಹೊಡೆದ ಎರಡು ಹಗಲು ಎರಡು ರಾತ್ರಿಗಳ ಚಳಿಜ್ವರ. ದೂಸುಗೆಮ್ಮು, ತಲೆಸೀಳಿ ಹೋಳಾದಂತೆ ರಣಗುಟ್ಟುವ ಹಣೆನೋವು. ಕೀಲು, ಕೀಲುಗಳ ಅಣುರೇಣು ತೃಣಕಾಷ್ಟಗಳಲ್ಲಿ ಖಂಡುಗದಷ್ಟು ಬ್ಯಾನಿ. ಅದು ನನ್ನ ದೇಹವನ್ನೆಲ್ಲ ಹಿಂಡಿ ಹಿಪ್ಪೆ ಮಾಡಿತ್ತು. ಹೋಮ್ ಐಸೋಲೇಷನ್ ಇಲ್ಲವೇ ಆಸ್ಪತ್ರೆಗೆ ಸೇರಲೇಬೇಕಾದಂತಹ ಜಜ್ಜಿ ಹೋದ ಮೈ, ಕೈ ನೋವು. ದಾವಣಗೆರೆಯ ಸರಕಾರಿ ಚಿಗಟೇರಿ ಜಿಲ್ಲಾ ಆಸ್ಪತ್ರೆಯ "ಫ್ಲೂ ಕಾರ್ನರ್" ಬಳಿ ನಮ್ಮ ಕಾರು ನಿಲ್ಲುತ್ತಿದ್ದಂತೆ ನಮಗೆದುರಾದದ್ದು ಕೊರೊನಾ ಪರೀಕ್ಷೆಗಾಗಿ ಸಾಲುಗಟ್ಟಿ ನಿಂತ ಜನಗಳ ದೊಡ್ಡಸಾಲು.

ಫ್ಲೂ ಕಾರ್ನರಿನಿಂದ, ಎಣಿಸಿದಂತೆ ನೂರು ಹೆಜ್ಜೆಗಳ ಅಂತರದ ಇನ್ನೊಂದು ಪಕ್ಕದಲ್ಲಿ ANMTC (Auxiliary nurse midwifery training centre)ಯ ಬೃಹತ್ ಕಟ್ಟಡ. ಅಲ್ಲಿ ನಾಕೈದು ವರ್ಷಗಳ ಹಿಂದೆ ನಾಕೈದು ವರ್ಷಗಳ ಕಾಲ ನಾನು ಬೋಧಕನಾಗಿ ನೂರಾರು ವಿದ್ಯಾರ್ಥಿನಿಯರಿಗೆ ಪಾಠ ಮಾಡಿದ ನೆನಪುಗಳು ಧುತ್ತೆಂದು ಎದ್ದು ಬಂದವು. ಇತ್ತೀಚಿನ ನಾಕೈದು ವರ್ಷದಲ್ಲಿ ಆರೋಗ್ಯ ಇಲಾಖೆಯ ಸರಕಾರಿ ವ್ಯವಸ್ಥೆಯಲ್ಲಿ ಬಹಳೇ ಬದಲಾವಣೆಗಳಾಗಿವೆ. ಅದೇನೇ ಇರಲಿ ಆ ನೆಲದಲ್ಲಿ ನಾನು ನಡೆದಾಡಿದ ನೆಲದ ನೆನಪುಗಳು ಇನ್ನೂ ಹಸಿ ಹಸಿಯಾಗಿವೆ. ಅವು ಅಂಗಾಲಿಗಂಟಿದ ಪಾದಧೂಳಿ ಸಮೇತದ ಸಂಮೋಹಕ ಸಲುಗೆಗಳು. ನಿರ್ಮಲಗಾತ್ರದ ನಿರಾಮಯ ಪ್ರೀತಿ. ಫ್ಲೂಕಾರ್ನರ್ ಸಿಬ್ಬಂದಿ ತೋರಿದ ಪ್ರೀತಿಯಲ್ಲಿ ಅದೆಲ್ಲ ಸಾಧ್ಯೀಕರಿಸಿತ್ತು.

Rapid Antigen Test (RAT)ನಲ್ಲೇ ಪಾಸಿಟಿವ್ ಬಂತು. ಪುಟ್ಟ ಕಿಟ್ ಡಿವೈಸಿನ ಎರಡು ಗೆರೆ ನನಗೆ ಅದೆಲ್ಲ ತೋರಿಸಿತ್ತು. RTPCR ರುಜುವಾತಿನ ಅಗತ್ಯವೇ ಇರಲಿಲ್ಲ. ಪ್ರಾಯಶಃ ಜೀವಕೋಶದೊಳಗೆ ವೈರಾಣುವಿನ ಹೆವಿ ಲೋಡ್ ಇರಬಹುದು. ಪರೀಕ್ಷೆ ಮಾಡಿದ ಹುಡುಗಿ ಕ್ಷಣಕಾಲ ಬಿಟ್ಟು "ನೀವು ಕಾರಲ್ಲಿ ಕುಳಿತುಕೊಳ್ಳಿ ಸರ್ ಮೆಸೆಜ್ ಕಳಿಸುವುದಾಗಿ" ಸಮಾಧಾನದ ಮಾತು ಹೇಳಿದಳು. ಅವಳ ಧ್ವನಿಯಲ್ಲಿ ಆಪ್ತ ಸಮಾಲೋಚನೆಯ ಇಂಗಿತ ಇತ್ತು. ಅಷ್ಟೊತ್ತಿಗಾಗಲೇ ರಿಜಲ್ಟ್ ನನಗೆ ತಿಳಿದಿತ್ತು. ಕೊರೊನಾ ಪಾಸಿಟಿವ್ ಫೇಸ್ ಮಾಡಲು ಪಾಸಿಟಿವ್ ಚಿಂತನೆಗಳು ನನ್ನಲ್ಲಿ ಸಿದ್ಧಗೊಂಡಿದ್ದವು. ಅದಕ್ಕೆ ಮುನ್ನ ಪರೀಕ್ಷೆಯಾದ ನನ್ನ ಹೆಂಡತಿ ಅನಸೂಯಳದು ಪಾಸಿಟಿವ್. ಪ್ರಜಾವಾಣಿ ಪತ್ರಿಕೆಯ ಹಿರಿಯ ಉಪ ಸಂಪಾದಕಿ ಆಗಿರುವ ಮಗಳು ಮಂಜುಶ್ರೀ ಮತ್ತು ಮೊಮ್ಮಗಳು ಖುಷಿಯದು ಕೂಡಾ ಪಾಸಿಟಿವ್. ಅಳಿಯ ಅನಂತ ನಾಯಕ್ ಮಾತ್ರ ನೆಗೆಟಿವ್. ಹೈಕೊರ್ಟ್ ವಕೀಲನಾಗಿರುವ ಈತನಿಗೆ ಎರಡನೇ ಅಲೆಯಲ್ಲೇ ಕೊರೊನಾ ವಕ್ಕರಿಸಿ ಹೋಗಿತ್ತು. ಇದೀಗ ಬೀಜದ ಬಳ್ಳಿಯಂತೆ ನಮ್ಮನೆಯ ನಾಲ್ವರಿಗೂ ಕೊರೊನಾ. ನಮ್ಮದೀಗ ಕೊರೊನಾ ಕುಟುಂಬ‌.

ಆಪ್ತಮಿತ್ರರಂತಿರುವ ಜಿಲ್ಲಾ IDSP ಅಧಿಕಾರಿ ಡಾ. ಜಿ. ರಾಘವನ್, ಮಕ್ಕಳರೋಗ ತಜ್ಞರಾದ ಡಾ. ರಾಘವೇಂದ್ರ ದೊಡಮನಿ, ಡಾ. ಮಹೇಶ್, ಲ್ಯಾಬ್ ಟೆಕ್ನಿಷಿಯನ್ ಝಾಕಿರ್ ಇವರೆಲ್ಲ ಆಗಾಗ ಆಪ್ತ ಸಮಾಲೋಚಕರಂತೆ ಸೂಕ್ತ ಸಲಹೆಗಳನ್ನು ನೀಡುತ್ತಿದ್ದಾರೆ. ಎಂದಿನಂತೆ Symptomatic treatment ಶುರು. ಅರೇ ಅದೆಷ್ಟೋ ಜಾಗರೂಕರಾಗಿರುವ ನಿಮಗೆ ಕೊರೊನಾ ಬಂತೆ!? ಎಂಬುದು ಗೊತ್ತಿದ್ದ ಕೆಲವರಿಗೆ ಅಚ್ಚರಿ.! ದೂರದ ಮೈಸೂರಲ್ಲಿರುವ ತಜ್ಞ ವೈದ್ಯದಂಪತಿ (ಮಗಳು ಮತ್ತು ಅಳಿಯ) ವಾಟ್ಸ್ಯಾಪ್ ಮೂಲಕವೇ ಪಲ್ಸ್ ಆಕ್ಸಿಮೀಟರ್ ವಿವರಗಳನ್ನು ದಿನಕ್ಕೆ ಮುರ್ನಾಲ್ಕು ಬಾರಿ ಪಡೆಯುತ್ತಿದ್ದಾರೆ. ಬೆಂಗಳೂರಿನ ಮಗಳು ಅಳಿಯಂದಿರು, ಬಹುದೂರದ ಮುಂಬಯಿಯಿಂದಲೂ ಅಳಿಯ ಮಗಳು ದಿನಕ್ಕೆ ಐದಾರು ಬಾರಿ ವಾಟ್ಸ್ಯಾಪ್ ಕಾಲ್ ಮೂಲಕ ಮಾತಾಡಿ ಜೀವ ಹಗುರ ಮಾಡುತ್ತಿದ್ದಾರೆ. ಇದೊಂದು ರೀತಿಯ ಚಿಕಿತ್ಸೆಯೇ. ಅಗತ್ಯವಾದಾಗ ನಮ್ಮನ್ನು ದವಾಖಾನೆಗೆ ಕರಕೊಂಡು ಹೋಗುವುದು, ಒಂದು ಕ್ಷಣವೂ ಮನೆಬಿಟ್ಟು ಹೋಗದೇ ಸದಾ ಕಾರನ್ನು ಸನ್ನದ್ಧವಾಗಿಟ್ಟುಕೊಂಡಿದ್ದು ಸೂಕ್ತ ನಿರ್ಧಾರದ ನಡೆಯಲ್ಲಿ ತೊಡಗಿರುವವನು ಅಳಿಯನಲ್ಲ ಮಗನೋಪಾದಿಯ ಅನಂತನಾಯಕ್.

ಹೋಮ್ ಐಸೋಲೇಷನ್ ಹೊಸ ಮಾರ್ಗಸೂಚಿ, ICMR guidelines ಮತ್ತು WHO ಮಾರ್ಗಸೂಚಿಗಳನ್ನು ಓದಿ, ಓದಿ, ಕೇಳಿ, ಕೇಳಿ ತಲೆ ಚಿಟ್ಟು ಹಿಡಿದಿದೆ. ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯ ಕೊವಿಡ್ ವಾರ್ ರೂಮಿನಿಂದ ಕಿರಣಕುಮಾರ ಎಂಬ ಅಧಿಕಾರಿ ಫೋನಲ್ಲಿ ನನಗೆ ಕೌನ್ಸಿಲಿಂಗ್ ಮಾಡುವ ಮೊದಲು "ಸರ್ ನೀವು ನಮಗೆಲ್ಲ ಕೌನ್ಸಿಲಿಂಗ್ ಮಾಡುವಷ್ಟು ಸಮರ್ಥರು. ತಪ್ಪು ತಿಳಿಯದಿದ್ರೇ ಒಂದು ರಿಕ್ವೆಸ್ಟ್. ಸರ್ ಯಾವುದೇ ಕಾರಣಕ್ಕೂ ಟೀವಿ ನೋಡಬೇಡಿ ಪ್ಲೀಸ್, ಎಂದರಲ್ಲದೇ ದಯವಿಟ್ಟು ನಿಮ್ಮ ಈ ಅನುಭವವನ್ನು ಅಂಕಣ ಬರಹದ ಮೂಲಕ ಹಂಚಿಕೊಳ್ಳಿ ಸರ್. " ಅದು ನಾವು ಮಾಡುತ್ತಿರುವ ಕೆಲಸದಲ್ಲಿ ನೆರವಿಗೆ ಬರಬಹುದೆಂಬುದು ಅವರ ಕಳಕಳಿಯ ಮಾತುಗಳು.

ಇದೆಲ್ಲ ಬರವಣಿಗೆ ನನ್ನ ಪುಟ್ಟ ಮೊಬೈಲಲ್ಲಿ ಟೈಪ್ ಮಾಡುತ್ತಿರುವಾಗ ಬೆರಳಿನ ಸಂದು ಸಂದುಗಳೆಲ್ಲ ಒಂದೇಸಮನೆ ನೋಯುತ್ತಲಿವೆ. ಕಣ್ಣಲ್ಲಿ ಕೆಂಡದುಂಡೆಗಳು. ಕುಳಿತು ಬರೆಯಲು ಆಗದಷ್ಟು ಸುಸ್ತು. ಕಳೆದೆರಡು ವರ್ಷಗಳಿಂದ ಪ್ರಾಯಶಃ ಕೊವಿಡ್ ಆರಂಭಗೊಂಡ ದಿನಗಳಿಂದ ವಾರಕ್ಕೆರಡು ಚೆಂದನೆಯ ಬರಹಗಳನ್ನು ಬರೆಯುವುದನ್ನು ರೂಢಿಯಾಗಿಸಿಕೊಂಡಿದ್ದೇನೆ. ಇದು ಒಂದು ವಾರವೂ ನಿಂತಿಲ್ಲ, ಹರಿಗಡಿಯದೇ ತಿಳಿನೀರಿನಂತೆ ಜುಳು ಜುಳು ಹರಿಯುತ್ತಲಿದೆ. ನನ್ನ ಬರಹ ಓದಲೆಂದೇ ತುದಿಗಣ್ಣಲ್ಲಿ ಕಾಯುತ್ತಿರುವ‌ ಓದುಗರ ಹಿಂಡು ನಿರ್ಮಾಣಗೊಂಡಿದೆ. ಅವರಿಗಾಗಿ ನನ್ನೆಲ್ಲ ಭಾದೆಗಳನ್ನು ಸಹಿಸಿಕೊಂಡು ಬರೆಯುವ ಪ್ರೀತಿ ನನ್ನದು. ಅದೆಲ್ಲಕ್ಕಿಂತ ಮುಖ್ಯ ಸಂಗತಿಯೆಂದರೆ ಓದು, ಬರಹ ನನಗೆ ಮೆಡಿಸಿನ್ ಮತ್ತು ಚಿಕಿತ್ಸೆ. ಓದು ಬರಹವಿಲ್ಲದೇ ಬದುಕಿರಲಾರೆ. ಇವತ್ತು ಬುಕ್ ಬ್ರಹ್ಮಕ್ಕೆ ‘ರೊಟ್ಟಿಬುತ್ತಿ’ ಬೇರೆ ಕಟ್ಟಿಕೊಡಬೇಕಿದೆ.

ಮೂಗಿಗೆ ಉಸಿರಾಟ ಮಾತ್ರ ಗೊತ್ತಾಗುತ್ತಿದೆ. ಗುಡ್ & ಬ್ಯಾಡ್ ಸ್ಮೆಲ್ ಗೊತ್ತಾಗುತ್ತಿಲ್ಲ. ನಾಲಗೆ ಎಲ್ಲಬಗೆಯ ರುಚಿಸ್ವಾದ ಕಳಕೊಂಡಿದೆ. ಸ್ವೇದಗ್ರಂಥಿಗಳನ್ನೇ ವೈರಾಣು ನುಂಗಿ ನೊಣೆದಂತಿದೆ. ಮತ್ತೆ ನಾಲಗೆಗೆ ನನ್ನ ಮೈ ಕೈ ನೋವಿಗೆ ಸಹಜವಾದ ಮುಂಚಿನ ಚಟುವಟಿಕೆಗಳು ಮರುಕಳಿಸಲು ಸಾಧ್ಯವೇ.? ಉಳಿದ ಮೂವರ ಸ್ಥಿತಿ ಇದಕ್ಕೆ ಭಿನ್ನವೇನಾಗಿಲ್ಲ. ಶಾಂತಿನಗರದ ತೋಟದಮನೆ ಮಹಡಿಯ ವಿಶಾಲವಾದ ಕೋಣೆಯಲ್ಲಿ ಐಸೋಲೇಟ್ ಆಗಿದ್ದೇವೆ. ಅದೀಗ ಕೊವಿಡ್ ವಾರ್ಡನಂತಾಗಿದೆ.

ನಿದ್ರೆಬಾರದ ನಟ್ಟ ನಡುರಾತ್ರಿಗಳಲ್ಲಿ ಕೊರೊನಾ ಡೆಲ್ಟಾ ಎರಡನೇ ಅಲೆಯ ಮರಣ ಪ್ರಮಾಣದ ಧಡಲ್ಭಾಜಿ ಸಪ್ಪಳಗಳ ಸಣ್ಣದೊಂದು ಭಯ. ಹುಚಖೋಡಿ ಅದೇನ್ಮಾಡ್ತದ ನಗಡಿಕೆಮ್ಮ, ಅಂಥದರ ಮ್ಯಾಲ ನೀ ಎಂಥ ಚೆಂದ ಬರದೀಯಪ (ಸಂಯುಕ್ತ ಕರ್ನಾಟಕದಲ್ಲಿ ಕೊವಿಡ್ ಕುರಿತಾದ ನನ್ನ ಬರಹ ಓದಿ) ಅಂತಂದ, ಗೆಳೆಯ ಡಾ. ಈಶ್ವರಯ್ಯ ಮಠ ತನಗೇ ಕೊವಿಡ್ ಆದಾಗ ಎದೆ ಝಲ್ಲೆನಿಸಿಕೊಂಡು ಮೂರೇ ದಿನದಲ್ಲಿ ಮರಣವನ್ನಪ್ಪಿದ. ಕಾಮ್ರೆಡ್ ಮಾರುತಿ ಮಾನ್ಪಡೆ,‌ ನಮ್ಮ ಮುಂದಿನ ಪ್ರಗತಿಪರ ತರುಣ ಡಾ. ವಿಠಲ ಭಂಡಾರಿ ಹೀಗೆ ಸಾಲು ಸಾಲು ಸನ್ಮಿತ್ರರ ಸಾವುಗಳು ಸಿನೆಮಾ ರೀಲಿನಂತೆ ಕಲರ್ಫುಲ್ ಕಲರಿನಲ್ಲಿ ಕಣ್ಮುಂದೆ ಬರತೊಡಗುತ್ತವೆ. ಆದರೆ ಎರಡು ಬಾರಿ ಕೋವಿಶೀಲ್ಡ್ ಲಸಿಕೆ ಪಡೆದ ವೈಜ್ಞಾನಿಕ ಧೈರ್ಯ ಬಲಭೀಮನಂತೆ ನೆರವಿಗೆ ನಿಲ್ಲುತ್ತದೆ. ಅವರುಗಳೆಲ್ಲ ಕೊಂಚ ನಿರ್ಲಕ್ಷ್ಯ ಮತ್ತು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಕ್ಕೆ ಬಾರದೇ ಮರಣವನ್ನಪ್ಪಿದರೆಂಬ ಸೆಲ್ಫ್ ಸಮಜಾಯಿಷಿ.

ಸರಕಾರಿ ದವಾಖಾನೆ ಸಲಹೆಗಳನ್ನು ನಂಬಿ ಕೂಡಬೇಡಿ ಪ್ಲೀಸ್ ಎಂದು ಈಗಾಗಲೇ ಕೊರೊನಾದ ಅನುಭವ ಪಡೆದ ಕೆಲವರ ಅನುಭವ ಅರ್ಧ ಧೈರ್ಯಗೆಡಿಸಿದ್ದು ಖರೇ. ಮತ್ತೆ ಅನೇಕರ ಅನುಭವ ಕಂಡಾಪಟಿ ಧೈರ್ಯ ತಂದಿವೆ. ಕೊರೊನಾ ಯುದ್ಧಕಾಂಡದಲ್ಲಿ ಗೆದ್ದು ಬರುವ ಆತ್ಮವಿಶ್ವಾಸವಿದೆ. ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ನಿನ್ನೆಯಷ್ಟೇ ಲಂಗ್ಸ್ ಸ್ಕ್ಯಾನಿಂಗ್ ಮಾಡಿದ್ದಾರೆ. ಕಳೆದೈದು ದಿನದಿಂದ ಜರುಗುತ್ತಿರುವ ಕೊರೊನಾ ಜಂಗೀ ಕುಸ್ತಿಯಲ್ಲಿ ಗೆದ್ದೇ ಗೆಲ್ಲುವ ಆತ್ಮವಿಶ್ವಾಸವೇ ಗೆಲ್ಲಿಸಬಲ್ಲದು. ನಿಮ್ಮೆಲ್ಲರ ಪ್ರೀತಿ ಪರಾಮಳಿಕೆ, ಹಾರೈಕೆಗಳು ಸ್ವಯಾರ್ಜಿತ ಆತ್ಮವಿಶ್ವಾಸಕ್ಕೆ ಶಕ್ತಿ ತುಂಬಲಿ.

ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು:
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ

 

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...