ಕಲ್ಪನೆಯ ಕ್ಷೀರ ಸಾಗರ

Date: 24-07-2021

Location: ಬೆಂಗಳೂರು


‘ಚೌಕಟ್ಟಿನೊಳಗೆ ಬಂಧಿಯಾಗಿ ಬದುಕನ್ನು ಕಂಡು ಸವಿದು, ಕೊರಗಿ, ಮರಗುವ ನಮಗೆ ಅದರಿಂದ ಆಚೆಗೆ ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಸ್ತರಣೆ ಬಹು ಮುಖ್ಯವಾದುದು’ ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ತಮ್ಮ ಅನಂತಯಾನ ಅಂಕಣದಲ್ಲಿ ಬದುಕಿನ ಹರಿವು ಮತ್ತು ವಿಸ್ತರಣೆಗಳ ಮಹತ್ವದ ಕುರಿತು ಬರೆದಿದ್ದಾರೆ. 

ಬಹುತೇಕರ ಜೀವನ ನಿಂತ ನೀರು. ತಂತಮ್ಮ ಕಾಲ ಬುಡವನ್ನು, ನಿಂತ ನೆಲವನ್ನು ನೋಡಿದರೆ ಅರ್ಥವಾಗುವುದು. ನಿಂತಿರುವ ನೀರಿನಲ್ಲಿ ಹುಟ್ಟುವ ಯೋಚನೆಗಳು ಯಾವತ್ತಿಗೂ ಮಾರಕ. ಹೊಸ ನೀರು ಬರದಂತೆ, ಹೊಸದರತ್ತ ಹರಿಯದಂತೆ ಸ್ವತಃ ಬಂಧಿಸಿ ಕೊಂಡಿರುವುದರಿಂದ ತಳ ಹಿಡಿದ ನೀರು ಪಾಚಿಗಟ್ಟಿ ಹೋಗಿರುತ್ತದೆ. ಪಾಚಿಗಟ್ಟಿದ ಹಾದಿಯಲ್ಲಿ ಜಾರಿ ಬೀಳುವುದೇ ಹೆಚ್ಚು. ಹರಿಯದಂತೆ ಕಟ್ಟಲ್ಪಟ್ಟ  ಕಟ್ಟನ್ನು ಬಿಡಿಸಲು.. ಬಿಗಿದ ಬೇಲಿಯನ್ನು ಕೆಡವಲು.. ಶಬರಿಯಂತೆ ಕಾಯುತ್ತ ಕುಳಿತರೆ ಶ್ರೀರಾಮಚಂದ್ರ ಬರುವನೆಂಬ ಖಾತ್ರಿ ಖಂಡಿತಾ ಇಲ್ಲ. ನಮ್ಮೊಳಗಿನ ಶಬರಿಯ ಶಾಪ ವಿಮೋಚನೆಗೆ ನಾವೇ ಶ್ರೀರಾಮನಾಗಬೇಕೇ ಹೊರತು ಖುದ್ದು ಸಿಯರಾಮನೇ ಅವತರಿಸಲೆಂದು ಕಾದು ಕುಳಿತರೆ ಕಲ್ಲಾಗಿಯೇ ಇರಬೇಕಾಗುತ್ತದೆ ವಿನಃ ವಿಮೋಚನೆಯ ಮಾತಂತೂ ಬಲು ದೂರ. ಹರಿಯುವುದೇ ಬದುಕಿನ ಮೂಲ ಮಂತ್ರ.  ಹರಿಯದೆ ಸರಿಯಲಾಗುವುದಿಲ್ಲ. ಸರಿಯದೆ ಕರಗಲಾಗುವುದಿಲ್ಲ. ಕರಗದೆ ಹರಿಯಲೂ ಆಗುವುದಿಲ್ಲ. ಹರಿದು, ಸರಿದು ಕರಗಿ ಹರಿಯುವುದು ಬಾಳ ಧರ್ಮ. 

ಚೌಕಟ್ಟಿನೊಳಗೆ ಬಂಧಿಯಾಗಿ ಬದುಕನ್ನು ಕಂಡು ಸವಿದು, ಕೊರಗಿ, ಮರಗುವ ನಮಗೆ ಅದರಿಂದ ಆಚೆಗೆ ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿಸ್ತರಣೆ ಬಹು ಮುಖ್ಯವಾದುದು. ವಿಸ್ತರಿಸಬೇಕು..ವಿಸ್ತರಿಸಿಕೊಳ್ಳುತ್ತಲೇ ಇರಬೇಕು. ವಿಸ್ತಾರಗೊಡಂತೆ ಆಜೂಬಾಜೂ ವಿಸ್ತಾರಗೊಳ್ಳುತ್ತದೆ. ನೋಡಿ, ಕೇಳಿ, ಗ್ರಹಿಸಿ, ಚಿಂತಿಸುವ ಅಷ್ಟೂ ವಿಷಯಗಳ ವಿಸ್ತರಣಾ ಸಾಮರ್ಥ್ಯ ಹೆಚ್ಚಿದಂತೆ ಹೊಸ ಜಗತ್ತೊಂದು ಅನಾವರಣಗೊಳ್ಳುತ್ತದೆ. ಅದಕ್ಕಾಗಿ ಆವರಣದ ಒಳಗಿಂದ ಹೊರಕ್ಕೆ ಜಿಗಿಯಬೇಕಷ್ಟೆ.  ಕಟ್ಟುಪಾಡುಗಳು ಇದ್ದದ್ದೇ. ಕಟ್ಟುಗಳನ್ನು ಬಿಡಿಸಿ ಪಾಡನ್ನು ಆಡಿಸಿ ಹಾಡಿಸಿದೆವೆಂದಾದರೆ; ಪಾಡುಗಳು ಕಟ್ಟುಗಳಾಗುವುದಿಲ್ಲ. ಕಟ್ಟುಗಳು ಯಾವತ್ತಿಗೂ ಪಾಡೆಂದು ಅನ್ನಿಸುವುದೇ ಇಲ್ಲ. ಹೇಗೆ? ಎಲ್ಲಿ? ಯಾವಾಗ? ಏನನ್ನು? ಆಯಾ ಮನಸ್ಸು ಬಿತ್ತುತ್ತದೋ ಹಾಗೆಯೇ ಫಸಲೂ ಬರುವುದು. ಜಳ್ಳು-ಪೊಳ್ಳು ಬೀಜಗಳೇ ತುಂಬಿರುವ ಸ್ಥಿತಿಯಲ್ಲಿ ಆರೋಗ್ಯವಂತ  ಉತ್ತಮ ಬೀಜದ  ಬಿತ್ತನೆಯೇ ನಡೆಯುತ್ತಿಲ್ಲ. 

ವಿಶಾಲವಾದ ಬಯಲ ನಡುವೆ, ಚಾಚಿದ ಕಡಲ ಮುಂದೆ, ಶಿಖರದ ಬುಡದಲ್ಲಿ, ಚಾದರದಂತೆ ಹರಡಿಕೊಂಡ  ಅಂಬರದ  ಕೆಳಗೆ ನಿಂತು, ಕುಳಿತು, ಮಲಗಿದಾಗಲೆಲ್ಲಾ ಕುಬ್ಜರಾಗುತ್ತೇವಲ್ಲ ಆಗ  ವಿಸ್ತಾರಗೊಳ್ಳಬೇಕಿರುವುದು ಎಷ್ಟು ಮುಖ್ಯವೆನ್ನುವುದರ ಅರಿವಾಗುತ್ತದೆ. ಇರುವ, ಇರಿಸಿಕೊಂಡ ಚೌಕಟ್ಟನ್ನು ಮುರಿಯಲು ನಮ್ಮಿಂದ ಮಾತ್ರ ಸಾಧ್ಯ. ಅದ್ಯಾರೋ ಬೇರೆಯವರು ತಂದು ಕಟ್ಟಿದ ಮುಳ್ಳಿನ ಬೇಲಿಯಲ್ಲವಲ್ಲ ಆ ಚೌಕಟ್ಟು. ಅಷ್ಟಕ್ಕೂ ಮನೋನಗರಿಯಲ್ಲಿ ಸಂಚರಿಸಲು ಯಾರ ಅಪ್ಪಣೆಯೂ ಬೇಕಿಲ್ಲ. ನಮ್ಮದೇ ಲೋಕದಲ್ಲಿ ವಿಹರಿಸಲು ನಮಗೊದಗುವ ಭಾಗ್ಯದಲ್ಲಿ- ಭಾವದ ಒಲುಮೆಗಳ ಜೊತೆಗಿನ ಸಾಂಗತ್ಯವಿರುತ್ತದೆ. ನಿರ್ಭೀತಿಯ ಸಂಚಾರವಿದೆ. ಕಣ್ಣಿಗೆ ಕಾಣುವಷ್ಟು ದೂರ.. ದೂರ.. ದೂ…ರ ಸಾಗುವ ಲೋಕದಲ್ಲಿ ಮುಳುಗೇಳುತ್ತಿರುತ್ತೇವೆ. ಅಂತಹ ಒಂದು ಯಾನದಲ್ಲಿ ಆಸರೆ, ಒಲುಮೆಗಳನ್ನು ಬಿಗಿದಪ್ಪಿ ನಡೆಯುತ್ತಿರುವಾಗ ಥಟ್ಟನೆ ಬೆರಳುಗಳು ಬೆಸೆದುಕೊಂಡವೆಂದರೆ ಆತ್ಮಸುಖವು  ಸೋಂಪಾಗಿ ಹಬ್ಬಿ ಬಿಡುತ್ತದೆ.     

ಕಲ್ಪನೆಗಳಿಗೆ ಭಯದ ಹಂಗಿರಬಾರದು. ಕಲ್ಪನಾ ಶಕ್ತಿ ಹೆಚ್ಚಿದಂತೆಲ್ಲಾ ಒಳಗಿನ ಬೆಳವಣಿಗೆಯು ಗೋಚರಿಸುತ್ತದೆ. ಆಯಾ ಮನೋನಗರಿಯಲ್ಲಿ ಅನೂಹ್ಯವಾದ, ಅಚಿಂತ್ಯವಾದ, ಬೇನೆಗಳಿಲ್ಲದ, ಸಂಕಟಗಳು ಕಾಣದ ಖುಷಿಯ ಲೋಕವನ್ನು ನಿರ್ಮಿಸಲು  ನಮಗಲ್ಲದೆ ಇನ್ನೊಬ್ಬರಿಂದದು  ಸಾಧ್ಯವಿಲ್ಲ. ಆ ಲೋಕ ಸಂಚಾರಕ್ಕೆ ಒಂದಷ್ಟು ಕಲ್ಪನಾ  ರಸಗಳಿರಬೇಕು. ಅಂತಹ ಭಾವ ರಸಗಳನ್ನು ಹೀರಿ, ಅನುಭಾವಿಸಿ  ಕಟ್ಟಿಕೊಳ್ಳುವ ಜಗತ್ತಿನಲ್ಲಿ ನಾವು ಮತ್ತು ನಮ್ಮವು ಎನಿಸಿಕೊಳ್ಳುವ ಒಂದಷ್ಟು ಮಾತ್ರ ಜೊತೆಯಲ್ಲಿರುತ್ತವೆ. ಅಲ್ಲಿ ಯಾವುದೇ ಭವ ಬಂಧನಗಳಿರುವುದಿಲ್ಲ.. ಮನಸ್ಸು ಎರಚುವ ತರ್ಕ, ಕುತರ್ಕಗಳೂ ಇರುವುದಿಲ್ಲ.. ರೋಗಗ್ರಸ್ಥ ಪರಿಸರವಂತೂ ಮೊದಲೇ ಇಲ್ಲ.. ಭಯದ ವಾತಾವರಣವೋ ಇಲ್ಲವೇ ಇಲ್ಲ.. ಹಾಗಿರುವ ಮನೋನಗರಿಯೊಳಗಿನ ಸಂಚಾರವು ಸರಳ ಸುಂದರ ಸುಗಂಧ ಭರಿತವಾದದ್ದು. ಮನಸ್ಸಿನಷ್ಟು ಕ್ಷಿಪ್ರ ಗತಿಯಲ್ಲಿ ಸಂಚರಿಸಲು ಬೆಳಕಿಗೂ ಸಾಧ್ಯವಿಲ್ಲ. ಅಂತಹ ಅಧ್ಭುತ ಸಾಮರ್ಥ್ಯವನ್ನು ಮನಸ್ಸು ಹೊಂದಿದೆ. ಕುಳಿತಲ್ಲಿಂದಲೇ ಎಲ್ಲೆಲ್ಲಿಗೋ ಹಾರಿ ಹೋಗಿ  ಬರಬಹುದಾದ ಛಾತಿ ಮನಸ್ಸಿನದ್ದು. ಅಂತಹ ಸಾಧ್ಯತೆಯೊಂದು ಜೊತೆಯಲ್ಲಿರುವಾಗ ವಿಸ್ತರಿಸಿ ಬೆಳೆಯದೆ ನಾಲಕ್ಕು ಗೋಡೆಯ ನಡುವೆ ಕುಬ್ಜರಾಗುತ್ತಾ ಬಾಳನ್ನು ಸವೆಯುವುದು ಬದುಕಿಗೆ ಮಾಡುವ ಅಪಚಾರವೇ ಸರಿ. 

ಸತ್ತು ಮಲಗಿದ ಭಾವ- ಜೀವ ಕೋಶಗಳಿಗೆ ಮರುಜನ್ಮ ನೀಡಲು ಕಲ್ಪನೆಗಳಿಗೆ ಮಾತ್ರ ಸಾಧ್ಯ. 
ಓದಿನಲ್ಲಿ ಒದಗುವ ಕಲ್ಪನಾವಕಾಶಗಳು  ದೃಶ್ಯಮಾಧ್ಯಮದಲ್ಲಿ  ದೊರಯುವುದಿಲ್ಲ. ಹಾಗಾಗಿಯೇ ಕಥೆ, ಕಾದಂಬರಿಯು ಸಿನೆಮವಾದಾಗ ಓದು ಕೊಟ್ಟ ಸುಖವನ್ನು ಪರದೆಯ ಮೇಲೆ ಅನುಭವಿಸಲಾರದೆ ಹೋಗುತ್ತೇವೆ.  ಸಿನೆಮಾದ ಸಂಭವನೀಯತೆಯೇ ಅಷ್ಟು. ಸೀಮಿತ ಅವಕಾಶಗಳೆಡೆಯಲ್ಲಿ ಬಹುಮಟ್ಟಿನ ಸಾಧ್ಯತೆಗಳ ನಡುವೆಯೂ, ತನ್ನ ಇತಿಮಿತಿಯಲ್ಲಿ   ನ್ಯಾಯವನ್ನು ಕೊಡಲು ಸಿನಿಮಾವು ಶ್ರಮಿಸುತ್ತದೆ ಎನ್ನುವುದೇನೋ ನಿಜ. ಆದರದು ನೋಡುಗರನ್ನು ತಟ್ಟುವಲ್ಲಿ ವಿಫಲವಾಗಲು ಆಯಾ ಮನದ ಕಲ್ಪನಾ ಶಕ್ತಿಯೇ ಕಾರಣವಾಗಿರುತ್ತದೆ. ಚಾಚಿಕೊಂಡಷ್ಟು ವಿಸ್ತಾರವೂ, ಇಳಿದಷ್ಟು ಆಳವಾಗುತ್ತಲೂ  ಹೋಗುವ ಶಕ್ಯತೆಗಳಿಗೆ  ಇತಿಮಿತಿ ಎಂಬುದಿರುವುದಿಲ್ಲ.  ಓದು ಕೊಡುವ ಸುಖವಿದೆಯಲ್ಲ ಅದು ನಿಜಕ್ಕೂ ಒದಗುವುದು ಕಲ್ಪನೆಯಿಂದ. ಒಂದೊಂದು ಹಾಳೆಯಲ್ಲಿ ಕುಳಿತ ಅಕ್ಷರಗಳು ಪೋಣಿಸುವ  ಭಾವಗಳು  ಹರಿದು ಪಾತ್ರಗಳಾಗಿ, ಆಯಾ ಭಾವನೆಗಳ ವಿಹಾರಕ್ಕೆ ತಕ್ಕುದಾದ ಸ್ಥಳವನ್ನು  ಹುಡುಕಿ, ಆಯಾ ಮನೋನಗರಿಯೊಳಗೆ ಚಿತ್ರೀಕರಿಸಿಕೊಳ್ಳುವ ಅವಕಾಶ ಇಲ್ಲಲ್ಲದೆ ಬೇರೆಲ್ಲೂ ಸಿಗದು. 

ನಿತ್ಯದ ದಿನಚರಿಗಳು ಮನಸ್ಸನ್ನು ಬಡ್ಡಾಗಿಸುವುದಿದೆ.  ಸಮಯಾನುಸಮಯಕ್ಕೆ ನವೀಕರಿಸಿಕೊಳ್ಳದಿದ್ದಲ್ಲಿ ಇನ್ನಷ್ಟು ಬಡ್ಡಾಗುತ್ತಲೇ ಹೋಗುತ್ತೇವೆ. ಹಾಗಾಗಬಾರದೆಂದರೆ ಕ್ಷಣಕ್ಷಣಕ್ಕೂ ಮನಸ್ಸನ್ನು ಹರಿತಗೊಳಿಸುತ್ತಲೇ ಇರಬೇಕು. ಚಾಚಿಕೊಳ್ಳುವ ಭಾವಸ್ಥಿತಿಯನ್ನೂ ಅಳವಡಿಸಿಕೊಳ್ಳಬೇಕು. ಪ್ರೋಗ್ರಾಮ್ಡ್ ಆಗಿರುವ ಮನಸ್ಸು ಬೆಳಗಾಗೆದ್ದು ಏನು ಮಾಡಬೇಕೋ ಅದೆಲ್ಲವನ್ನೂ ಮಾಡಿಯೇ ತೀರುತ್ತದೆ. ಹಾಗೆ ನಮ್ಮನ್ನದು ಪಳಗಿಸಿ ಬಿಟ್ಟಿರುತ್ತದೆ. ಬೆಳಗ್ಗಿನಿಂದ ರಾತ್ರಿಯವರೆಗೆ ಯಂತ್ರದಂತೆ ಮಾಡಬೇಕಿರುವುದನ್ನು ನಮ್ಮಿಂದದು ಮಾಡಿಸುತ್ತಿರುತ್ತದೆ. ಒಂದಿಂಚು ಕದಲಿದರೂ ಗಲಿಬಿಲಿಗೊಳ್ಳುತ್ತದೆ. ಪ್ರೋಗ್ರಾಮ್ಡ್ ಮನಸ್ಸಿಗೆ ಎಲ್ಲವೂ ಅಷ್ಟು ಠಾಕು ಠೀಕಾಗಿರಬೇಕು. ಸರ್ಕಸ್ಸಿನ ಪ್ರಾಣಿಗಳಂತೆ ನಾವೂ. ಅಲ್ಲಿ ನಾವು  ಪ್ರಾಣಿಗಳನ್ನು ನಿಯಂತ್ರಿಸಿದರೆ, ಇಲ್ಲಿ ನಮ್ಮ ಮನಸೇ ನಮ್ಮನ್ನು ನಿಯಂತ್ರಿಸುತ್ತದೆ.   

ನಿಯಂತ್ರಣಕ್ಕೆ ಒಳಗಾಗದೇ ಇರಬೇಕಾದರೆ ಕಟ್ಟಿಕೊಂಡ ಸಂಕೋಲೆಗಳಿಂದ ಬಿಚ್ಚಿಕೊಳ್ಳಬೇಕು.. ಬಿಚ್ಚಿಕೊಳ್ಳಬೇಕಿದ್ದರೆ ಎಚ್ಛೆತ್ತುಕೊಳ್ಳಬೇಕು.. ಎಚ್ಛೆತ್ತುಕೊಳ್ಳಬೇಕಿದ್ದರೆ ಭಾವಗಳನ್ನು  ಉದ್ದೀಪಿಸಬೇಕು. ರೇಷನ್ ಅಂಗಡಿಯ ಮುಂದಿನ ಸಾಲಿನಂತೆ ಘಟನೆಗಳು ಕಾದು ಕುಳಿತು ಕಣ್ ರೆಪ್ಪೆ ತೆರೆದು ಮುಚ್ಚುವಲ್ಲಿವರೆಗೆ ಘಟಿಸುತ್ತಿರುತ್ತವೆ.  ಇವಿಷ್ಟರ ನಡುವೆ ನಾವು ಕಂಡುಕೊಳ್ಳುವ ಸಮಯವು ವಿಚಾರ-ವಿಷಯಗಳ ಗ್ರಹಿಕೆಯನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯಲು ಸಹಕರಿಸುವುದು ಕೂಡ ಮತ್ತದೇ ಕಲ್ಪನೆ. ಆಯಾ ಮನೋನಗರಿಯಲ್ಲಿ ಅಂಕುರಿಸಿ ಅವತರಿಸುವ ಭಾಗ್ಯದ ಜೊತೆ ಜೊತೆಗೆ ಕಮರಿ ಹೋಗುವ  ದೌರ್ಭಾಗ್ಯವೂ ಇದೆ. 

ಮನೋಪಟಲದಲ್ಲಿ ಪಟಪಟನೆ ಬಿತ್ತರಗೊಳ್ಳುವ ಭಾವನೆಗಳು ಬೆಳೆಯುತ್ತಾ ಸಾಗಬೇಕು. ಹಾಗಿರಬೇಕು ಭಾವಕೋಶದ ವಿಸ್ತರಣೆ. ಮನಸ್ಸು ಹೇಳುವಂತೆ ನಡೆದರೆ ಬೆಳೆಯುವ ಅವಕಾಶಗಳು ಕಡಿಮೆಯೇ. ಆದರೆ ಹೃದಯ ಕೂಗಿತೆಂದರೆ ಅನಂತ ಅವಕಾಶ ಭಾಗ್ಯಗಳು ಪಕ್ಕಾ. ಮನಸ್ಸು ಹಾಕುವ ಬಲವಂತದ ಕಡಿವಾಣವು ವಿಸ್ತರಣೆಗೆ ಅಡ್ಡಿಯೆಂದರೂ ತಪ್ಪಿಲ್ಲ. ಭಾವನೆಗಳಲ್ಲಿ ಅದ್ದಿಸಿಕೊಂಡು ಉದ್ದೀಪನಗೊಂಡೆವೆಂದಾದರೆ ಅನಿರ್ವಚನೀಯ ಸುಖದ ಕ್ಷಣಗಳಲ್ಲಿ ತೇಲುತ್ತಿರುತ್ತೇವೆ. ಮನೋನಗರಿಯ ಸಂಚಾರದಲ್ಲಿ  ನಿಬಂಧನೆಗಳಿಗೆ ಅವಕಾಶವಿಲ್ಲ. ಗಾಯಕನ ಮನೋಧರ್ಮ ಗಾಯನದಿಂದ ಗಾಯನಕ್ಕೆ ವ್ಯತ್ಯಸ್ತವಾಗಿ ಹರಿದು ಅಭಿವ್ಯಕ್ತಗೊಂಡು ಸಾಗುತ್ತಿರುತ್ತದಲ್ಲ  ಅದೇರೀತಿ  ಮನೋನಗರಿಯ ಸಂಚಾರವೂ.  ಅಂದು ಹಾಡಿದಂತೆ ಇಂದು ಆತ ಹಾಡುವುದಿಲ್ಲ. ಇಂದು ಹಾಡಿದಂತೆ ನಾಳೆ ಹಾಡುತ್ತಾನೆಂಬ ಖಾತ್ರಿಯೂ ಇಲ್ಲ.  ಹೊಸತನದಿಂದ  ಮೂಡಿ ಬರುವ ಸ್ವರಗಳು,  ಆಲಾಪಗಳು, ಭಾವ-ಜತಿ-ಗತಿಗಳು ಸೃಷ್ಟಿಸುವ ಅಚ್ಚರಿ ಕೌತುಕಕ್ಕೆ ಎಣೆಯೆಂಬುದೇ ಇಲ್ಲ. ಅಂತೆಯೇ ಮನೋನಗರಿಯೊಳಗಿನ  ವಿಲಾಸವೂ.  

ಬೇಡದಿರುವುದನ್ನು ಬೇಕಿರುವುದರಲ್ಲಿ.. ಬೇಕಿರುವುದನ್ನು ಬೇಡದ್ದರಲ್ಲಿ  ಕಾಣುವ ಈ ಹೊತ್ತಲ್ಲಿ ಬದುಕನ್ನು ಸುಂದರಗೊಳಿಸುವ ಪರಿಕರಗಳು ಬೇಕಿವೆ. ನಾವು ಕಂಡುಕೊಳ್ಳುವ ಪುರುಸೊತ್ತುಗಳು ಹಕೀಕತ್ತುಗಳಾದಂತೆಯೇ ಮೊಹಬ್ಬತ್ತಿನ ಮೊಗ್ಗುಗಳು ಹೂವಾಗಿ ಅರಳುವುದೂ ಕೂಡ ಕಲ್ಪನಾ  ಲೋಕದಲ್ಲೇ. ಬೆಳೆದು ಅನುಭವಿಸ ಬೇಕಿದ್ದರೆ ವಿಸ್ತರಿಸಿಕೊಳ್ಳುವುದು ಮುಖ್ಯವೂ, ಅಗತ್ಯವೂ ಆಗಿರುತ್ತದಷ್ಟೆ. ಭಾವನೆಗಳಿಗೆ ಜೀವರಸ ಹರಿಸಿ ಸಾಕ್ಷೀಕರಿಸಿಕೊಳ್ಳಲ್ಪಡುವುದು ಕೂಡ ಊಹೆಗೆ ಮಾತ್ರ ಸಾಧ್ಯವಿರುವ ಸಂಗತಿ. ರಚನಾತ್ಮಕವಾಗಿ ಮೂಡುವ ಹೊಳಹುಗಳು ಬರೆಸುವ ಸಾಲುಗಳಲ್ಲಿ ಹಲವಾರು ಅರ್ಥಗಳು ಅಡಗಿರುತ್ತವೆ. ನಿಟ್ಟುಸಿರು ಬಿಡುವ ಗಾಳಿ.. ಮೇಘ ಹಾಕುವ ತಾಳ.. ಮಿಂಚಲ್ಲಿ ಹೊಳೆಯುವ ನರ್ತನ.. ಮಳೆ ಹನಿಗಳು ಕೋಲಾಗಿ ಕುಣಿಯುವ ಸೊಗಸುಗಳೆಲ್ಲವೂ ಕಲ್ಪನೆಯ ಕೂಸುಗಳೇ.  ಮನಸ್ಸು-ಹೃದಯದ ತಾಳ, ಮೇಳ ಸರಿ ಇದ್ದಿತೆಂದಾದರೆ  ಕಲ್ಪನಾ ಸೀಮೆಯ ವಿಸ್ತಾರವನ್ನು ಹಿಡಿದಿಡಲು ಸಾಧ್ಯವಿಲ್ಲ.     

ಗತಿ-ಮತಿಗಳ ನಿರ್ಧಾರದಲ್ಲೂ ಕಲ್ಪನಾಲೋಚನೆಯ ಪಾತ್ರವಿದೆ. ನಮ್ಮೊಳಗೆ ಸುಖದ ಒಸರು ಹುಟ್ಟಬೇಕೆಂದಾದರೆ ಬಹುಶ್ರುತಿಯ ಕಲ್ಪನೆಗಳಿಗೆ ಮೊರೆ ಹೋಗದೆ ವಿಧಿಯಿಲ್ಲ. ಅಲ್ಲಿ ಚಿಗುರುವ ಸುಖದ ಮೊಗ್ಗುಗಳಿಗೆ ಅರಳುವ ಸೌಭಾಗ್ಯವಿದೆ. ಅರಳುವಿಕೆಗೆ ಯಾವುದರ ಹಂಗೂ ಇರುವುದಿಲ್ಲ. ಹಮ್ಮು-ಬಿಮ್ಮು ಖಂಡಿತಾ ಇಲ್ಲ. ಬೇಲಿಗಳಂತೂ ಮೊದಲೇ ಇಲ್ಲ ಬಿಡಿ. ಹೂವಿಂದ ಹೂವಿಗೆ ಹಾರುವಾಗಿನ ಸ್ವಂಚ್ಚಂದ ಸುಖ.. ತಿಳಿನೀರ ಕೊಳದಲ್ಲಿ ಈಜುವ ರಸಮಯ ಕ್ಷಣ.. ಮಂದಾರ ಗಿರಿ, ಪರ್ವತಗಳನ್ನೇರುವ ಉಮೇದು.. ಅಂಬರ ತುಂಬಾ ಚೆಲ್ಲಿದ ತಾರೆಗಳ ಚಾದರ ಹೊದ್ದು ಮಲಗುವ ಸುಖ..  ಉಹಾಲೋಕಕ್ಕೆ ಹೊಕ್ಕೆವೆಂದರೆ; ಎಡೆಬಿಡದೆ ಸುರಿದು ಮಳೆಯೆಬ್ಬಿಸುವ ನೆನಪುಗಳ ಜೊತೆಗೆ ಅನುಸಂಧಾನವೊಂದು ಏರ್ಪಡುತ್ತದೆ. ಅಷ್ಟಕ್ಕೇ ಕಲ್ಪನೆಗಳು ಗರಿಗೆದರಿ ನಿಂತಿರುತ್ತವೆ. ಎಣಿಸಿದಷ್ಟೂ ಮುಗಿಯದ ಖುಷಿಗಳೆಲ್ಲವೂ ಜೊತೆಗೂಡಿ, ಮುಖದ ಮಾಂಸ ಖಂಡಗಳನ್ನು ಸಡಿಲಿಸಿ ಮುಖಾರವಿಂದವನ್ನು ಬೆಳಗಿಸುವುದನ್ನು ಆಂತರಿಕ ಆನಂದವೆನ್ನಿ ಅಥವಾ ಸಮಾಧಾನ ಅಂತಲೂ ಅನ್ನಿ. ಅವೆರಡೂ ನೀಡುವ ಅನುಭೂತಿ ಒಂದೇ.   

ಮನೋನಗರಿಯೊಳಗಿನ ಪರ್ಯಟನೆಯು ಕಲ್ಪನಾ ಪ್ರಪಂಚದ ಗಡಿ ರೇಖೆಗಳನ್ನು ತುಂಡರಿಸಿ, ಸೀಮಾತೀತವಾದ ಲೋಕದೊಳಕ್ಕೆ ಕೊಂಡೊಯ್ಯುತ್ತದೆ.  ವಿಸ್ತರಿಸಿ ಹರಡಿಕೊಳ್ಳುವುದು ಬೇಕಿರುವ ವಿಷಯವೇ. ಆದರೆ ಅದಕ್ಕೂ ಮೊದಲು ಮನದ ಬೇಲಿಯನ್ನು ಕಿತ್ತೊಗೆಯಬೇಕಿದೆ. ಅದೂ ಕೂಡ ನಮ್ಮದೇ ಸೃಷ್ಟಿ-ಲಯ. ಬರಡು ನೆಲಕ್ಕೆ ಹರಿದ ನೀರನ್ನು ಭೂಮಿಯು ಸರಕ್ಕನೆ ಹೀರಿ ದೀರ್ಘ ಉಸಿರನ್ನು ಬಿಡುವಂತೆ- ಬಾಯಾರಿದ ಹೃದಯವು ಕಲ್ಪನಾ ಲೋಕದೊಳಕ್ಕೆ ಇಳಿದು ಭಾವರಸವನ್ನು ಕುಡಿದು  ಆಸ್ವಾದಿಸುತ್ತಿರಬೇಕು. ಗುಟುಕು ಗುಟುಕಷ್ಟನ್ನೇ ಹೀರುತ್ತಾ ಸಾಗುವ  ಕಲ್ಪನಾಪಾನ ಯಾನದಲ್ಲಿ  ಮನಸ್ಸನ್ನು ದೂರವಿಟ್ಟು ಹೃದಯ ಕಮಲ ಅರಳಿದ್ದೇ ಆದರೆ; ಸೌಖ್ಯ ಕಡಲಿನಲ್ಲಿ ಅಲೆಗಳು ಮೃದುವಾಗಿ ಹೊರಳುತ್ತಲೂ.. ಬೇಕೆಂದಾಗ ಅಬ್ಬರಿಸುತ್ತಲೂ ಕ್ಷೀರ ಸಾಗರ ಶಯನದ ಹರ್ಷವನ್ನು ನೀಡುತ್ತಿರುತ್ತದೆ. 

ಈ ಅಂಕಣದ ಹಿಂದಿನ ಬರೆಹಗಳು:
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...