ಕಾಲುದಾರಿಯ ಕಥಾನಕ 'ಹಾಣಾದಿ': ಎಚ್.ಎಸ್. ಸತ್ಯನಾರಾಯಣ 


ಹೊಲದ ಹಾದಿಯಲ್ಲಿ ಓಡಾಡಿರಬಹುದಾದ ಹೆಜ್ಜೆಗಳ ಸಪ್ಪಳವನ್ನು ಆಲಿಸಬಲ್ಲ ಕಥೆಗಾರರಾದ ಕಪಿಲಾ ತಮ್ಮ ಮೊದಲ ಪ್ರಯತ್ನದಲ್ಲಿಯೇ ಕಥನ ಪ್ರತಿಭೆಯಿಂದ ಗಮನ ಸೆಳೆದಿದ್ದಾರೆ ಎನ್ನುತ್ತಾರೆ ವಿಮರ್ಶಕ ಎಚ್.ಎಸ್.ಸತ್ಯನಾರಾಯಣ. ಅವರು ಕಪಿಲಾ ಪಿ ಹುಮನಾಬಾದೆ ಅವರ ‘ಹಾಣಾದಿ’ ಕೃತಿಯ ಬಗ್ಗೆ ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..

ಲೇಖಕ: ಕಪಿಲ ಪಿ.ಹುಮನಾಬಾದೆ
ಕೃತಿ: ಹಾಣಾದಿ
ಪುಟಗಳು: 112
ಬೆಲೆ: 110
ಮುದ್ರಣ: 2019
ಪ್ರಕಾಶನ: ಕಾವ್ಯಮನೆ ಪ್ರಕಾಶನ

ನಮ್ಮನ್ನು ಪೂರ್ತಿಯಾಗಿ ಹಿಡಿದು ಓದಿಸುವ ಯುವ ಬರಹಗಾರ ಕಪಿಲ ಎಂಬುದು ಹಾಣಾದಿ ಎಂಬ ಹೊಸ ಪುಸ್ತಕವನ್ನು ಓದಿದವರಿಗೆಲ್ಲ ಅನ್ನಿಸುವಷ್ಟು ಪಕ್ವ ಬರವಣಿಗೆ ಇವರದು. ಮೊದಲ ಬರಹವೆಂದು ಅನ್ನಿಸುವುದೂ ಇಲ್ಲ, ಆ ಬಗೆಯ ರಿಯಾಯ್ತಿಯನ್ನೂ ಬಯಸುವುದಿಲ್ಲ ಅಷ್ಟು ಪಕ್ವವಾದ ಬರವಣಿಗೆಯ ಜೊತೆಗೆ, ತಾವು ನಿರೂಪಿಸಬೇಕಾಗಿರುವ ಕಥನಕ್ಕೊಂದು ಅಚ್ಚುಕಟ್ಟಾದ ತಂತ್ರವನ್ನೂ ರೂಪಿಸಿಕೊಂಡು ಈ ಕಿರು ಕಾದಂಬರಿಯನ್ನು ಹೆಣೆದಿದ್ದಾರೆ. ಮೊದಲಿಗೆ ಗಮನ ಸೆಳೆಯುವ ಅಂಶವೆಂದರೆ ಹೈದರಾಬಾದ್ ಕರ್ನಾಟಕದ ಭಾಷೆಯ ಬನಿಯನ್ನು ಸೊಗಸಾಗಿ ಕಾಣಿಸಿರುವುದು ಮತ್ತು ಬಿಗಿಯಾದ ಪ್ರೌಢತೆಯಿಂದ ಮಾಗಿದ ನಿರೂಪಣೆಗೆ ಬಳಸಿರುವ ಶಬ್ದಸಂಪತ್ತು. ಹೊಸ ನುಡಿಗಟ್ಟಿನಲ್ಲಿ ಕಥನವನ್ನು ಹೇಳುವಾಗ ಬಳಸಿಕೊಳ್ಳುವ ಸ್ಥಳೀಯವಾದ ಗಾದೆಮಾತುಗಳು. ಚಿಕ್ಕ ವಯೋಮಾನದಲ್ಲಿ ಈ ಬಗೆಯ ಪ್ರತಿಭೆಯನ್ನು ಕಾಣುವುದು ಸಂತೋಷದ ಸಂಗತಿಯಲ್ಲವೆ?

'ಹಾಣಾದಿ' ಎಂಬ ಪದವೇ ಮೊದಲು ನಮ್ಮನ್ನು ಸೆಳೆದುಬಿಡುತ್ತದೆ. ಎತ್ತಿನಗಾಡಿ ಸಾಗಲು ಬೇಕಾದ ದಾರಿಯನ್ನು ಹಾಣಾದಿ ಎನ್ನುತ್ತಾರಂತೆ.‌ ರಸ್ತೆಗಳಿಲ್ಲದ ಕಡೆಗಳಲ್ಲಿಯೂ ರಸ್ತೆ ಮಾಡಿಕೊಂಡು ಸಾಗುವುದು ಗಾಡಿಯ ಪಯಣದ ಕ್ರಮ. ಅಂದರೆ ರಾಜಮಾರ್ಗಕ್ಕಿಂತ ಭಿನ್ನವಾದ ಕಾಲುದಾರಿಯ ಮಹತ್ತನ್ನು ಪರಿಣಾಮಕಾರಿಯಾಗಿ ಬಿಂಬಿಸುವ ರೂಪಕದಂತೆ ಹಾಣಾದಿಯ ಶೀರ್ಷಿಕೆಯನ್ನು ಲೇಖಕರು ಬಳಸಿರುವುದು ಗಮನಾರ್ಹ. ಕಪಿಲಾ ಪಿ. ಹುಮನಾವಾದೆಯವರ ಕಾಲುದಾರಿಯ ಕಥಾನಕವೆಂದೂ ಇದನ್ನು ಪರಿಭಾವಿಸಬಹುದು.

ಬಾದಾಮಿಗಿಡ ಇಲ್ಲಿನ ಸಶಕ್ತವಾದ ಕೇಂದ್ರ ರೂಪಕ. ಅದರ ಸುತ್ತ ಬಿಚ್ಚಿಕೊಳ್ಳುವ ನೆನಪುಗಳ ಸರಮಾಲೆಯಲ್ಲಿ ವರ್ತಮಾನದ ಕಣ್ಣಿನಲ್ಲಿ ಭೂತವನ್ನು ಬೆದಕುತ್ತಾ ಹೋಗುವ ಕ್ರಮವಿದೆ. ವಾಸ್ತವತೆ ಮತ್ತು ಮಾಂತ್ರಿಕ ವಾಸ್ತವತೆಯನ್ನು ಮುಖಾಮುಖಿಯಾಗಿಸುತ್ತಾ ಕಥೆ ಕಟ್ಟಲಾಗಿದೆ. ಕೊನೆಯವರೆಗೂ ಗುಬ್ಬಿ ಆಯಿ ಸತ್ತ ಆರು ತಿಂಗಳು ಕಳೆದ ಬಳಿಕ ಮನುಷ್ಯ ರೂಪದಲ್ಲಿ ಕಾಣಿಸಿಕೊಂಡು ನಿರೂಪಕನಿಗೆ ಕಥೆ ಹೇಳುತ್ತಿದ್ದಳೆಂಬ ಸ್ಪೋಟಕ ಅಂಶವನ್ನು ಲೇಖಕ ಕೊನೆಯವರೆಗೂ ಗುಟ್ಟಾಗಿರಿಸಿವ ಜಾಣ್ಮೆ ಮೆರೆದಿದ್ದಾರೆ. ಈ ಸಂಗತಿ ಬಯಲಾದ ಬಳಿಕ ನಾವಸೆಳೆದಿದ್ದಾರೆ.ದಿದ್ದು ನಿಜವೋ ಭ್ರಮೆಯೋ ಎಂಬ ಅನುಮಾನ ಮೂಡಿದರೆ ಅಚ್ಚರಿಯಿಲ್ಲ.

ಗುಬ್ಬಿಆಯಿ ನಿರೂಪಕನೊಂದಿಗೆ ಮಾತಾಡುತ್ತ ಒಂದು ಊರಿನ ಸಾಂಸ್ಕೃತಿಕ ಮತ್ತು ಸಮಾಜಶಾಸ್ತ್ರೀಯ ಸಂಗತಿಗಳನ್ನೆಲ್ಲ ಬೆದಕುತ್ತ ಹೋಗುತ್ತಾಳೆ. ಆ ಮೂಲಕ ಹಳ್ಳಿಯೊಂದರ ಅವಸಾನ, ಸಾಮಾಜಿಕ ವಿಘಟನೆಗಳು, ಸಂಕಟಗಳ ನಡುವೆಯೂ ಬದುಕುವ ಹಠ, ಬದುಕಿನ ಏಳು-ಬೀಳುಗಳ ಮೇಲಾಟ, ಮೌಢ್ಯ ಮತ್ತು ಕಂದಾಚಾರ ಹಾಗೂ ಜಾತಿಯತೆಯ ಕರಾಳತೆಗಳಿಂದ ಸಂಭವಿಸುವ ಉಪಟಳಗಳಿಂದಾಗಿ ಗ್ರಾಮ್ಯ ಜೀವನ ಮುಕ್ಕಾಗಿ ಹೋಗುವ ಕಥೆಯನ್ನು ಹೇಳಲು ಕಪಿಲಾ ಅವರು ಬಯಸುತ್ತಾರೆ ಮತ್ತು ಅದರಲ್ಲಿ ಸಫಲರೂ ಆಗಿದ್ದಾರೆ. 'ಕಳೆದು ಹೋದದಕ್ಕೆ ರೆಕ್ಕೆ ಕಟ್ಟುತ್ತಾ ಕೂರಬಾರದು' ಎಂಬ ಮಾತೊಂದನ್ನು ಆಯಿ ನಿರೂಪಕನಾದ ಹುಡುಗನಿಗೆ ಹೇಳುವುದು ಪರಂಪರೆಯೊಂದು ಭವಿಷ್ಯಕ್ಕೆ ಹೇಳುವ ಉಪದೇಶದಂತಿದೆ.

ಹೊಲದ ಹಾದಿಯಲ್ಲಿ ಓಡಾಡಿರಬಹುದಾದ ಹೆಜ್ಜೆಗಳ ಸಪ್ಪಳವನ್ನು ಆಲಿಸಬಲ್ಲ ಕಥೆಗಾರರಾದ ಕಪಿಲಾ ತಮ್ಮ ಮೊದಲ ಪ್ರಯತ್ನದಲ್ಲಿಯೇ ಕಥನ ಪ್ರತಿಭೆಯಿಂದ ಗಮನ ಸೆಳೆದಿದ್ದಾರೆ.

ಹಾಣಾದಿಯ ಓದು ಹೊಸ ಬಗೆಯ ಅನುಭವವನ್ನು ಕೊಟ್ಟಿದೆ. ಇಂತಹ ತಾಂತ್ರಿಕ ಸ್ಪರ್ಶ ಇಂಗ್ಲಿಷ್ ಸಿನಿಮಾಗಳಲ್ಲಿ ಸಾಮಾನ್ಯ ಎಂದೊಬ್ಬ ಗೆಳೆಯರು ಚರ್ಚಿಸಿದರು. ನಾನು ಅವರು ಹೇಳಿದ ಸಿನಿಮಾ ನೋಡಿಲ್ಲವಾದ್ದರಿಂದ ಹಾಣಾದಿಯನ್ನು ಕುರಿತಷ್ಟೇ ಯೋಚಿಸಿ ಈ ಟಿಪ್ಪಣಿ ಬರೆಯುವ ಪ್ರಯತ್ನ ಮಾಡಿದೆ.

ಎಚ್.ಎಸ್. ಸತ್ಯನಾರಾಯಣ ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

ಕಪಿಲ ಪಿ.ಹಮನಾಬಾದೆ ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

‘ಹಾಣಾದಿ’ ಕೃತಿ ಪರಿಚಯ ಇಲ್ಲಿದೆ..

MORE FEATURES

ಆಧುನಿಕ ಮಾಧ್ಯಮರಂಗದ ಅಗತ್ಯಕ್ಕನುಗು...

19-01-2022 ಬೆಂಗಳೂರು

ಮಾಧ್ಯಮ ರಂಗಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳನ್ನು ರೂಪಿಸುವ ಪತ್ರಿಕೋದ್ಯಮ ಶಿಕ್ಷಣದ ಪಠ್ಯಕ್ರಮ, ಕಲಿಸುವ ವಿಧಾನದಲ್ಲೂ...

ಶಿಕ್ಷಣ ಕ್ಷೇತ್ರದ ಧನಾತ್ಮಕ ಅನುಭವಗ...

19-01-2022 ಬೆಂಗಳೂರು

ಲೇಖಕರ ಶಿಕ್ಷಣ ಕ್ಷೇತ್ರದ ಅನುಭವಗಳು ಶಾಲಾಹಂತದಿಂದ ಆಡಳಿತ ಹಂತದವರೆಗಿನ ವಿಚಾರಗಳನ್ನು ಸ್ಪಷ್ಟಪಡಿಸುತ್ತವೆ. ಶಾಲಾ ವಾತಾವ...

ಸಾಮಾನ್ಯ ಹೆಣ್ಣಿನ ಅಸಾಮಾನ್ಯ ಕಥನ ‘...

18-01-2022 ಬೆಂಗಳೂರು

ಮೀನಾಕ್ಷಮ್ಮನವರ ಈ ಆತ್ಮಕಥೆ 'ಹರಿವನದಿ' ನಮ್ಮ ನಾಡಿನ ಹೆಸರಾಂತ ನದಿಗಳಂತೆ ಜನಮನದಲ್ಲಿ ನೆಲೆನಿಂತ ಯಾವ ಪ್ರಸಿದ್...