ಕಂಬಾರರ ಈ ಕವಿತೆ ನನ್ನೊಳಗೆ ಅವಿತೂ...

Date: 01-09-2022

Location: ಬೆಂಗಳೂರು


ಪುರಾಣ, ಇತಿಹಾಸ, ಜನಪದದೊಟ್ಟಗೇ ವರ್ತಮಾನಕ್ಕೂ ಅವರ ಬಹುತೇಕ ಪದ್ಯಗಳು ಮುಖ ಮಾಡಿ ನಿಂತು ಸಂವಾದಿಸುತ್ತವೆ ಮತ್ತು ಗೇಯದ ಹಾದಿಯಲ್ಲೇ ಲೇವಡಿಯನ್ನೂ ಮಾಡುತ್ತ ಸನ್ನಿವೇಶದ ವಾಸ್ತವವನ್ನು ಅದ್ಭುತವಾಗಿ ಕಟ್ಟಿಹಾಕಿ ಸಹೃದಯ ಓದುಗನೊಳಗೊಂದು ಗುಂಗೀಹುಳವನ್ನೂ ಬಿಡುತ್ತವೆ ಎಂದು ಚಂದ್ರಶೇಖರ ಕಂಬಾರರ ಕಾವ್ಯದ ಕುರಿತು ಕವಿ ವಿಜಯಕಾಂತ ಪಾಟೀಲ ವಿವರಿಸುತ್ತಾರೆ. ಅವರು ತಮ್ಮ ಹಸಿರು ಬಂಡಿ ಅಂಕಣದಲ್ಲಿ ಕಂಬಾರರ ಕವಿತೆಯೊಂದನ್ನು ಚರ್ಚಿಸಿದ್ದಾರೆ.

ಕಂಬಾರರ ವ್ಯಕ್ತಿತ್ವವೇ ದೇಶೀಯ ಜಾಡಿನದು. ಇನ್ನು ಅವರು ಬರೆದ ಕಾವ್ಯ ಕಥೆ ಕಾದಂಬರಿ ನಾಟಕಗಳ ಒಳತಿರುಳೇನಿರುತ್ತೆ? ಅದೇ ಹಳ್ಳಿಗಾಡಿನ ಜನಪದೀಯ ಭಾವ ಸಂಪನ್ನತೆ, ಹೃದ್ಯ ಎನಿಸುವ ಅನುಭವ ಸಾಂದ್ರತೆ, ಕಳಕಳಿ-ಕಕ್ಕುಲತೆ-ವಾತ್ಸಲ್ಯ ಉಕ್ಕಿಸುವ ಲಹರಿ... ಇತ್ಯಾದಿಯಾಗಿ ಬೇಂದ್ರೆ ನಂತರ ನಮ್ಮನ್ನು ಗಾಢವಾಗಿ ಆವರಿಸಿಕೊಳ್ಳುವ ದೇಶೀಯ ಬರಹಗಾರ ಚಂದ್ರಶೇಖರ ಕಂಬಾರರು; ಅವರ ಲೆಕ್ಕಣಿಕೆಯ ಜಾಡು ಕಚ್ಚಾ ರಸ್ತೆಯ, ಕಾಲುದಾರಿಗಳ ಸಂಗಡ ನಡೆಯುತ್ತಲೇ ಮಹತ್ತರವಾದದ್ದನ್ನು, ವಿಸ್ಮಯ ಮೂಡಿಸುವ ಹೆಜ್ಜೆಯ ಗುರುತನ್ನು ಸಾದರಪಡಿಸುತ್ತದೆ. ಅವರ ಉಮೇದು ಬರವಣಿಗೆ ಮತ್ತು ನಡೆಯಲ್ಲೂ ಸದಾ ಜಾಗೃತ ಆವಸ್ಥೆಯಲ್ಲಿಯೇ ಇರುವುದು ಅವರ ಅದಮ್ಯ ಜೀವನೋತ್ಸಾಹದ ಪ್ರತೀಕವೂ ಅಹುದು. ಅವರ ಮಾತಿನಲ್ಲೂ ಅದೇ ಮಿಂಚು; ಕಾವ್ಯ ಓದುವಾಗಲೂ ಅದೇ ಕೆಂಚು ಪಂಚು. ಕನ್ನಡದ ಮಟ್ಟಿಗೆ ಕಂಬಾರರ ಹಾದಿ ಈ ಹೊತ್ತಿಗೂ ವಿಶಿಷ್ಟ ವಿಭಿನ್ನ ಅವಿಚ್ಛಿನ್ನ; ರುಚಿಯುಳ್ಳ ಚಿತ್ರಾನ್ನದಂತೆಯೇ ಅಂದರೂ ಹೆಚ್ಚಿನ ಮಾತಾಗಲಾರದು.

ಇಂಥ ಕಂಬಾರರ ಕವಿತೆಯ ಸೊಬಗು-ಬೆಡಗು-ಬಿನ್ನಾಣವೇ ಬೇರೆ. ಒಬ್ಬ ಕವಿಯಾಗಿ ಎಲ್ಲದಕ್ಕೂ ತೆರೆದುಕೊಂಡು, ಎಲ್ಲದನ್ನೂ ಒಳಗೊಳಿಸಿಕೊಂಡು ಕಾವ್ಯ ಕಟ್ಟುವ ಅವರ ಪರಿಗೆ ಅವರೇ ಸಾಟಿ. ಕಂಬಾರರ ಯಾವುದೇ ಪದ್ಯ ಮೇಲ್ನೋಟಕ್ಕೆ ಸಂಕೀರ್ಣ ಅನ್ನಿಸುವುದಿಲ್ಲ. ಆದರೆ, ಕಾವ್ಯದ ಭಾವಕ್ಕಿಳಿದು ವಿಹರಿಸುವಾಗ, ಆ ಬಾವಿಯೊಳಗಿಳಿದು ಈಜಿಗೆ ಬಿದ್ದಾಗ ನಾವು ಒಂದು ಮಟ್ಟದ ಸಿದ್ಧತೆಯಲ್ಲೇ ಇರಬೇಕು ಅಂತಾ ನನಗನಿಸಿದ್ದಂತೂ ಖರೆ. ಪುರಾಣ, ಇತಿಹಾಸ, ಜನಪದದೊಟ್ಟಗೇ ವರ್ತಮಾನಕ್ಕೂ ಅವರ ಬಹುತೇಕ ಪದ್ಯಗಳು ಮುಖ ಮಾಡಿ ನಿಂತು ಸಂವಾದಿಸುತ್ತವೆ ಮತ್ತು ಗೇಯದ ಹಾದಿಯಲ್ಲೇ ಲೇವಡಿಯನ್ನೂ ಮಾಡುತ್ತ ಸನ್ನಿವೇಶದ ವಾಸ್ತವವನ್ನು ಅದ್ಭುತವಾಗಿ ಕಟ್ಟಿಹಾಕಿ ಸಹೃದಯ ಓದುಗನೊಳಗೊಂದು ಗುಂಗೀಹುಳವನ್ನೂ ಬಿಡುತ್ತವೆ. ಜಾನಪದದ ಗುಂಗು ಅವರಂತೆ ಮತ್ತೊಬ್ಬ ಕವಿಯೊಳಗೆ ಅಷ್ಟೊಂದು ಸುಲಭವಾಗಿ ಒಳನುಸುಳಿರಲಾರದು.

ಸದ್ಯ ನನ್ನ ಕಣ್ನೆದುರುಗಿರುವ ಪದ್ಯವನ್ನೇ ಓದಿಗೊಳಪಡಿಸಿದರೆ, ಎಷ್ಟೊಂದು ಸರಳವಾಗಿ ಎದುರು ನಿಂತೇ ಹಾಡುತ್ತಿದ್ದಾರೇನೋ ಮಾತಾಡುತ್ತದ್ದಾರೇನೋ ಅನ್ನಿಸುವಷ್ಟು ಅವರ ಕಾವ್ಯ ಭಾಷೆ ಹರಿಗಡಿಯದೇ ಸಹಜವಾಗಿ ಪ್ರವಹಿಸುತ್ತದೆ. `ಕೇಳೆನ್ನ ದೇಶವೇ..' ಎಂಬ ಕವಿತೆಯ ದಾರಿಯೂ ಅಂಥದೇ. ಬೇಂದ್ರೆ ಪದ್ಯಗಳ ಓದಿನ ಗ್ರಹಿಕೆಯಲ್ಲಿ ನಾವೊಮ್ಮೆ ಸೋಲಬಹುದೋ ಏನೋ.! ಬೇಂದ್ರೆಕಾವ್ಯದ ಆಳ ಹರವು ವಿಸ್ತಾರದ ಧಾಟಿ ತೀರಾ ಒಳಗಿನೊಳಗಿನದು ಅನ್ನಿಸುವುದು ಸಹಜ. ಅವರ ಹಾಡುಗಳು ಕೇಳಲಿಂಪೋ ತಂಪೋ ಏನೋ ಒಂದು ಸುಗಮಲೋಕವನ್ನು ಅಂತೂ ತೋರುತ್ತವೆ. ಕಂಬಾರರ ಕಾವ್ಯದಲ್ಲಿ ಮಹಾ ಅನ್ನಿಸುವ ಸಂಗತಿಗಳಿಗಿಂತ ಲಘುವೆನ್ನಿಸುವ ಸಂಗತಿ ಸನ್ನಿವೇಶ ವಸ್ತುಗಳೇ ಮೇಲುಗೈ ಪಡೆದು ಬೇಂದ್ರೆಗಿಂತ ಒಂದು ಕೈ ಮಿಗಿಲು ಅನ್ನುವಷ್ಟರ ಮಟ್ಟಿಗೆ ಎದೆಗೆ ರಾಚುತ್ತವೆ (ಈ ಮಾತು ನನ್ನ ಓದಿನ ಮಿತಿಯಲ್ಲಿ ಮಾತ್ರ).

ಕೇಳೆನ್ನ ದೇಶವೆ..
ಕೇಳೆನ್ನ ದೇಶವೆ ಶ್ರೀಮಂತರನು ಮಾತ್ರ
ಕಣ್ಣಲ್ಲಿ ಕಣ್ಣಿಟ್ಟು ನೋಡದಿರು;
ನಿನಗೆ ಮಾಟಾ ಮಾಡಿ ಮೈಮರೆಸಿ ಬಡವರ
ಕಡೆಗೆ ನೋಡದ ಹಾಗೆ ಮಾಡುವರು

ದಿನನಿತ್ಯ ನಿನ್ನನ್ನ ಉನ್ಮಾದದಲ್ಲಿರಿಸಿ
ಸುತ್ತ ಹುಚ್ಚಾಸ್ಪತ್ರೆ ಮಾಡುವರು;
ನೀ ಉಣ್ಣುವನ್ನವನು ಹಸಿರು ಕಾಗದ ಮಾಡಿ
ತುರುಕಿ ಬಾಯಿಗೆ ಉಸಿರುಗಟ್ಟಿಸುವರು

ಕೇಳೆನ್ನ ದೇಶವೆ ಉನ್ಮಾದ ಬದುಕಲ್ಲ
ಮಾಯಾಬಜಾರಿನಲಿ ಬೆಳೆಯಲಾರೆ;
ಆಸ್ಪತ್ರೆಯಿಂದೋಡಿ ಹೊರಗೆ ಬಾ, ಗಾಳಿಯಿದೆ
ಬೆಳಕು ಇದೆ-ತುಕ್ರನೂ ಇಲ್ಲೇ ಇರುವೆ..

(1991)

`ಕೇಳೆನ್ನ ದೇಶವೇ..' ಎಂಬಲ್ಲಿ ಈ `ದೇಶ' ಯಾರು, ಯಾವುದು ಹಾಗಾದರೆ..?. ಪ್ರಧಾನ ಸೇವಕನೇ, ಜನಸಾಮಾನ್ಯನೇ, ಈ ಬಡ ಸಮಾಜವೇ, ಪ್ರಕೃತಿಯೇ, ಆಳುವ ಜನಗಳೇ, ತ್ರಿವರ್ಣ ಧ್ವಜವೇ, ಉಳ್ಳವನಲ್ಲಿಯೇ ಐಕ್ಯವಾದ ವ್ಯವಸ್ಥೆಯೇ..? ಇಂಥ ನೂರಾರು ಥರದ ಪ್ರಶ್ನೆಗಳ ನಡುವೆಯೇ, ಬಹುರಾಷ್ಟ್ರೀಯ ಮುಕ್ತ ಮಾರುಕಟ್ಟೆಯ ಹಾವಳಿಯ ಬಗೆಗೆ ಬೇಸತ್ತೇ ಈ ಕವಿಯ ಮಾತು ಹಾಡಾಗಿ ನಮ್ಮನ್ನು ತೀವಿಯುತ್ತಿದೆ ಅನ್ನುವುದು ದಿಟ. ಆದರೆ, ಆ ತಿವಿತದ ನಂಜು ನಮ್ಮನ್ನೀಗಾಗಲೇ ಬಹಳಷ್ಟು ಆವರಿಸಿಕೊಂಡಿದೆ. ``ಸಿರಿವಂತರನು ಮಾತ್ರ ಕಣ್ಣಲ್ಲಿ ಕಣ್ಣಿಟ್ಟು ನೋಡದಿರು; ನಿನಗೆ ಮಂಕುಬೂದಿಯೆರಚಿ ಬಡವನ ಹೆಣ ಹೊರುವಂತೆ ಮಾಡುವ ರಕ್ಕಸರು ಅವರು; ನೋಡಿ ನಿಧಾನಿಸಿ ವಿವೇಚಿಸಿ ಹೆಜ್ಜೆಯಿರಿಸು, ವಾಸ್ತವ ಮರೆಮಾಚಿ ಕಣ್ಕಟ್ಟಿಗೆ ಒಳಗಾಗಿ `ನಿಜದ ಪ್ರಜೆ'ಯ ವಧೆ ಮಾಡಬೇಡ; ತುತ್ತು ಅನ್ನಕ್ಕೂ ಎರವಾಗಬೇಡ; ನಿನ್ನ ಪ್ರತಿ ನಡೆಯಲ್ಲಿಯೂ ಜನಸಾಮಾನ್ಯನ ಬಗೆಗೆ ನೆದರೂ ಇರಲಿ..' ಎಂಬ ಎಚ್ಚರಿಕೆಯನ್ನು ಈ ದೇಶವೆಂಬ ವ್ಯವಸ್ಥೆಗೆ ನೀಡುವ ಕವಿ, `ನಿನ್ನನ್ನು ಕ್ಷಣಕ್ಷಣವೂ ಮದೋನ್ಮತ್ತನನ್ನಾಗಿಸಿ ಯಾ ಉನ್ಮಾದದಲ್ಲಿರಿಸಿ, ಹುಚ್ಚಾವಸ್ಥೆಗೆ ತಂದು ಆಡಳಿತವನ್ನೇ ಬುಡಮೇಲು ಮಾಡುವ, ವ್ಯವಸ್ಥೆಯ ಶಿಸ್ತನ್ನೇ ಉಲ್ಟಾ ಮಾಡುವ ಕೂಳರು, ಕಳ್ಳರು, ಖದೀಮರು ಎಲ್ಲ ಕಡೆಗೂ ವ್ಯಾಪಿಸಿದ್ದಾರೆ. ಮೋಸ-ದಗಾಕೋರತನವೇ ಪ್ರಧಾನವಾದ ಈ ಹೊತ್ತು ಇಡೀ ದೇಶವೇ ಹುಚ್ಚಾಸ್ಪತ್ರೆಯಂತಾಗಿದ್ದನ್ನು ನೀ ಮನಗಾಣು; ನೀ ಉಣ್ಣುವ ಆಹಾರ/ಅನ್ನವನೇ ಹಣವಾಗಿ ಮಾಡಿ ನಿನ್ನ ಬಾಯಿಗೆ ತುರುಕುತ್ತಾರೆ; ನಿನ್ನ ಉಸಿರನ್ನೇ ಅಂದರೆ ನಿನ್ನ ಜೀವವನೇ ಎಕ್ಕುಟ್ಟಿಸಿ ಬಿಡುತ್ತಾರೆ.. ಬಾಯಿ ತೆರೆಯುವ ಮುನ್ನ ವಿವೇಚನೆಯಿರಲಿ..!'' ಎಂಬುದಾಗಿಯೂ ಕವಿ ಏಕಕಾಲಕ್ಕೇ ಪ್ರಜೆಗೂ ಪ್ರಭುತ್ವಕ್ಕೂ ತಿಳಿ ಹೇಳುತ್ತಾರೆ.

`ಉನ್ಮಾದವೇ ಬದುಕಲ್ಲ; ಮಾಯಾಬಜಾರಿನಲ್ಲಿ ಬೆಳೆಯಲಾರೆ..!' ಎಂಬ ಸಾಲು ನೋಡಿದಾಗ ಈ ಕವಿತೆಯನ್ನು ಕಂಬಾರರು ಬರೆದ ಹೊತ್ತು ಬಹುರಾಷ್ಟ್ರೀಯ ಕಂಪನಿಗಳಿಗಾಗಲೇ ಇಂಡಿಯಾ ಶರಣು ಹೊಡೆದಾಗಿತ್ತು. ನಮ್ಮತನ ಅಥವಾ ದೇಶೀಯತೆಯ ಮೇಲೆ ಆಗಲೇ ಭೀಕರ ಪ್ರಹಾರ ಶುರುವಾಗಿತ್ತು. ಆ ಒಪ್ಪಂದ ಈ ಒಪ್ಪಂದಗಳ ಮಧ್ಯೆ ಇಂಡಿಯಾ ಸಪ್ಪೆಯಾದ ಹೊತ್ತದು. ದೇಶೀಯತೆಯನ್ನೇ ಉಸಿರಾಡುವ, ಧೇನಿಸುವ ಈ ಕವಿಗೆ ಆ ಹರಾಮೀ ಒತ್ತಡ/ ಪ್ರಭುತ್ವದ ಬಗೆಗೆ ಬಲು ಜಿಗುಪ್ಸೆಯಾಗಿ ಈ ಪದ್ಯವಷ್ಟೇ ಅಲ್ಲ, ಇಂಥ ಹಲವಾರು ಪದ್ಯಗಳಲ್ಲಿ ಈ ಎಚ್ಚರ ಮತ್ತು ಕಾಳಜಿಗಳಿಂದಲೇ ಕವಿ ಪ್ರತಿಕ್ರಿಯಿಸಿದ್ದನ್ನು ನಾವು ಕಾಣುತ್ತೇವೆ. ಈಗಂತೂ ಮಾಲ್-ಎಂ.ಎನ್.ಸಿ (ಮಾಯಾಬಜಾರ್) ಉತ್ಪನ್ನಗಳ ಮಾದಕ ಮೈಕೈಮಾಟಕ್ಕೆ ನಾವು ಏಳಲಾರದಷ್ಟು ಜಾರಿಬಿದ್ದಾಗಿದೆ. ಒಂದು ಕಟ್ಟು ಸೊಪ್ಪು ತರಲೂ ನಾವು ಮಾಲಿಗೇ ಹೋಗುತ್ತಿದ್ದೇವೆ ಅಂದರೆ.. ನಾವೆಷ್ಟರ ಮಟ್ಟಿಗೆ ಬಿಕರಿಯಾಗಿದ್ದೇವೆ ಎಂಬುದಕ್ಕೆ ಮತ್ತೊಂದು ಉದಾಹರಣೆಯೇ ಬೇಡ. `ಇಂಥ ಹುಚ್ಚಾಸ್ಪತ್ರೆಯನು ಬಿಟ್ಟು ಹೊರಗೆ ಓಡಿ ಬಾ.. ಇಲ್ಲಿ ಬೆಳಕೂ ಇದೆ; ಗಾಳಿಯೂ ಇದೆ; ತುಕ್ರನೆಂಬ ನಾನೂ ಇದ್ದೇನೆ..' ಅನ್ನವಲ್ಲಿನ ಕವಿಯ ಕನವರಿಕೆಗೆ ಕಾಳಜಿಗೆ ಅಮ್ಮತನದ ಸ್ಪರ್ಷವೂ ಇದೆ. ಈ ಹೊತ್ತಿನಲ್ಲಿ ಮತ್ತೆ ಮತ್ತೆ ಓದಬೇಕಾದ, ಒಳಗೊಳ್ಳಿಸಿಕೊಂಡೂ ಇಳಿಸಿಕೊಳ್ಳಬೇಕಾದ ನಿಜದ ಕಾವ್ಯವಾಗಿ ಕಂಬಾರರ ಈ ಕವಿತೆ ನಮ್ಮ ಮನ ತಟ್ಟುತ್ತದೆ ಅನ್ನುವುದಕ್ಕಿಂತ ಎದೆಯಮಟ ಸರಿದು ಎಚ್ಚರವನೂ ಕೊಡುತ್ತದೆ..

-ವಿಜಯಕಾಂತ ಪಾಟೀಲ

ಈ ಅಂಕಣದ ಹಿಂದಿನ ಬರಹಗಳು:
ಚಾಲಕನೆಂಬ ದೊಡ್ಡಪ್ಪನೂ..

ಚಂಪಾ ಎಂಬ ಸಾಲಿಯೂ ಮಠವೂ…
ನೆಲ ನೆಲ ನೆಲವೆಂದು…

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...