ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ

Date: 04-12-2020

Location: .


ಕನಕದಾಸರ ಲೋಕ ದೃಷ್ಟಿಯನ್ನು ವರ್ತಮಾನದಲ್ಲಿ ಅರ್ಥಮಾಡಿಕೊಳ್ಳುವ ತುರ್ತು ನಮ್ಮದು ಎನ್ನುವ ಕವಿ-ವಿಮರ್ಶಕಿ ಡಾ. ಗೀತಾ ವಸಂತ . ಚರಿತ್ರಾತ್ಮಕ ಕತೆಗಳ ಹಾಗೂ ಕನಕದಾಸರ ಸಮಗ್ರ ದೃಷ್ಟಿಯ ಹಿನ್ನೆಲೆಯಲ್ಲಿ ಅಂತರ್‌ದೃಷ್ಟಿಯ ಅರಿವಿನ ಕುರಿತು ಅವರು ಇಂದಿನ ‘ತೆರೆದಷ್ಟೂ ಅರಿವು’ ಅಂಕಣದಲ್ಲಿ ವಿಶ್ಲೇಷಿಸಿರುವುದು ಇಲ್ಲಿದೆ.

ಲೋಕ ದೃಷ್ಟಿಯೆಂಬುದು ಲೋಕವನ್ನು ಕಾಣುವ ವ್ಯಕ್ತಿಯ ದೃಷ್ಟಿ. ಲೋಕವನ್ನು ವಿವರಿಸುವ ರೂಢಿಗತ ಮಾನದಂಡಗಳನ್ನು ಕಳಚಿಟ್ಟಾಗ ಮಾತ್ರ ಈ ವೈಯಕ್ತಿಕ ದರ್ಶನದ ಸಾಧ್ಯತೆ ಸಾಕಾರಗೊಳ್ಳುತ್ತದೆ. ರೂಢಿಗತ ಚಿಂತನ ಕ್ರಮವನ್ನು ಕಳಚಿಕೊಳ್ಳುವುದು ಅಷ್ಟು ಸುಲಭವಲ್ಲ. ಸಮೂಹ ಸ್ಮೃತಿಯಲ್ಲಿ ಬೇರೂರಿರುವ ನೋಟವನ್ನು ಪಲ್ಲಟಗೊಳಿಸಲು ಪ್ರಜ್ಞೆಯೊಳಗೊಂದು ಕ್ರಾಂತಿಯೇ ಸಂಭವಿಸಬೇಕು. ಭಕ್ತಿಯೆಂಬ ಲೋಕದಷ್ಟ್ಟಿಯ ಮೂಲಕ ಪ್ರಜ್ಞೆಯ ಪರಿವರ್ತನೆಗೆ ಕಾರಣರಾದ ಸಂತ ಪರಂಪರೆಯನ್ನು ಅಖಿಲ ಭಾರತದ ಸಂದರ್ಭದಲ್ಲಿ ಕಾಣುತ್ತೇವೆ. ಅಂತರಂಗದಲ್ಲಿ ಮೂಡಿದ ಪರಿವರ್ತನೆಯು ಸಾಮಾಜಿಕ ನೆಲೆಗೆ ವಿಸ್ತರಿಸುವಲ್ಲಿ ಭಕ್ತಿಯು ಚಳವಳಿಯ ಸ್ವರೂಪವನ್ನು ತಳೆದಿದೆ. ಜ್ಞಾನ ಹಾಗೂ ಭಕ್ತಿ ಎಂಬ ಧಾರೆಗಳನ್ನು ಟಿಸಿಲುಗಳನ್ನು ಧರ್ಮ ಹಾಗೂ ತತ್ವಜ್ಞಾನದ ಪರಿಭಾಷೆಯಲ್ಲಿ ನಾವು ಕಂಡುಕೊಂಡಿದ್ದೇವೆ. ಕನ್ನಡದ ಸಂದರ್ಭವನ್ನೇ ಉದಾಹರಿಸುವುದಾದರೆ ಅಲ್ಲಮ ಜ್ಞಾನಿ ಹಾಗೂ ಕನಕ ಭಕ್ತ. ಅಲ್ಲಮನದು ಬಯಲ ಭಾವವಾದರೆ, ಕನಕನದು ಮೂರ್ತಿಗೊಂಡ ಚೆಲುವನ್ನು ಆರಾಧಿಸುವ ಭಾವ. ವಿಶ್ವಪ್ರಜ್ಞೆಯೊಂದಿಗೆ ಒಂದಾಗುವ ಮೂಲಕ ತಾನು ವಿಶ್ವವೇ ಆಗುವ ಐಕ್ಯ ಸ್ಥಿಯನ್ನು ಸಿದ್ದಿಸಿಕೊಳ್ಳುವ ಯೌಗಿಕ ಸಾಧನಾ ಮಾರ್ಗವಿರುವಂತೆ ಅಹಂ ನಿರಸನದ ಮೂಲಕ ಮಹತ್ತಿನೊಂದಿಗೆ ಕರಗುವ ಭಕ್ತಿಯ ಭಾವಮಾರ್ಗವೂ ಇದೆ. ಎರಡೂ ಕಡೆ ನಡೆಯುವುದು ಸ್ವ ನಿರಚನೆಯೇ. ಆದರೆ ಇದೂ ಕೂಡ ಗ್ರಹಿಕೆಯ ದ್ವಂದ್ವವೇ. ಕನಕದಾಸರ ರಚನೆಗಳಲ್ಲಿ ರೂಢಿಗತ ಚಿಂತನೆಗಳನ್ನು ಒಪ್ಪಿಕೊಂಡಂತೆ ತೋರುವ ಚಿಂತನೆಗಳಿರುವಂತೆ, ನಿಶ್ಚಿತ ತರ್ಕದ ಕ್ರಮವನ್ನು ಬುಡಮೇಲು ಮಾಡುವಂಥ ನೋಟಗಳೂ ಇವೆ. ಕಾಲ ಹಾಗೂ ಸಂದರ್ಭವಶನಾದ ವ್ಯಕ್ತಿ ಹಾಗೂ ದೇಶ-ಕಾಲಾತೀತವಾದ ಪ್ರಜ್ಞೆಯೊಂದಿಗೆ ವ್ಯವಹರಿಸುವ ವ್ಯಕ್ತಿ ಇಬ್ಬರೂ ನಮ್ಮೊಳಗಿನ ಸತ್ಯವೇ ಆಗಿರುವುದರಿಂದ ಕನಕನ ಲೋಕ ದೃಷ್ಟಿಯನ್ನು ಈ ದ್ವಂದ್ವಗಳ ಮೂಲಕವೇ ಅರಿಯುವುದು ಅನಿವಾರ್ಯ.
ಲೋಕದೃಷ್ಟಿಯು ರೂಪುಗೊಳ್ಳುವ ಪ್ರಕ್ರಿಯೆಯು ಅತ್ಯಂತ ಕುತೂಹಲಕಾರಿಯಾದುದು. ನಾವು ಜಗತ್ತನ್ನು ಗ್ರಹಿಸುವುದು ನಮ್ಮ ಇಂದ್ರಿಯಗಳ ಮೂಲಕ. ಆದರೆ ನಮ್ಮ ಇಂದ್ರಿಯಾನುಭವಗಳ ಮಿತಿಯೇ ನಮ್ಮ ಜಗತ್ತನ್ನು ಕುಬ್ಜಗೊಳಿಸಿದೆ. ಜಗತ್ತನ್ನು ಅದು ಇರುವ ಸ್ವರೂಪದಲ್ಲೇ ನಾವು ಕಾಣುವುದು ಸಾಧ್ಯವಿಲ್ಲ. ನಾವು ಕಂಡದ್ದಷ್ಟೇ ನಮ್ಮ ಜಗತ್ತು. ನಿಜದ ಅರಿವು ನಮಗೆ ಎಟುಕಬೇಕಾದರೆ ಇಂದ್ರಿಯಗಳ ಮಿತಿ ಕಳಚಬೇಕು. ಅನುಭವಗಳೇ ನಮ್ಮ ಜ್ಞಾನದ ಮೊದಲ ಮೆಟ್ಟಿಲುಗಳಾಗಿರುವುದರಿಂದ ನಮ್ಮ ಜ್ಞಾನಕ್ಕೂ ಅದರ ಮಿತಿ ಬಂದು ಬಿಡುತ್ತದೆ. ನೈಜ ಜಗತ್ತಿನಲ್ಲಿ ಬಣ್ಣಗಳೇ ಇಲ್ಲ, ವಾಸನೆಯೂ ಇಲ್ಲ. ಮೃದುತ್ವ ಕಾಠಿಣ್ಯಗಳೂ ಇಲ್ಲ. ಅವೆಲ್ಲ ಏನಿದ್ದರೂ ನಮ್ಮ ಮಿದುಳಿನಲ್ಲಿ, ನಮ್ಮ ನಿಮ್ಮ ಜ್ಞಾನದಲ್ಲಿ ಮಾತ್ರ ಇವೆ ಎನ್ನುತ್ತಾನೆ ನೋಬೆಲ್ ವಿಜೇತ ನರ ವಿಜ್ಞಾನಿ ಸರ್ ಜಾನ್ ಐಕೆಲ್ಸ್. ಹೌದು ನಮ್ಮದೆಲ್ಲ ಒಂದೇ ಜಗತ್ತು. ವ್ಯತ್ಯಾಸ ಏನೆಂದರೆ ನೀನು ಈ ಜಗತ್ತಿನೊಳಗೆ ನಿನ್ನನ್ನು ಕಾಣುತ್ತೀಯ ನಾನು ನನ್ನೊಳಗೆ ಇಡೀ ಜಗತ್ತನ್ನು ಕಾಣುತ್ತೇನೆ. ಇದು ಉಪನಿಷತ್ತಿನಲ್ಲಿ ಬರುವ ಗುರು ಶಿಷ್ಯರ ನಡುವಿನ ಸಂಭಾಷಣೆ. (ಕ್ವಾಂಟಂ ಪ್ರಜ್ಞೆ: ಲೇ: ನಾಗೇಶ ಹೆಗಡೆ). ಲೋಕದ ಇರುವು ಒಂದೇ. ಅರಿವಿನ ದ್ವಂದ್ವಗಳು ನಮ್ಮ ಲೋಕವನ್ನು ವಿಭಜಿಸುತ್ತವೆ. ಇಂಥ ಮೂಲ ಜಿಜ್ಞಾಸೆಯನ್ನು ಕನಕದಾಸರ ಕೀರ್ತನೆಯ ಮೂಲಕ ನೋಡಬಹುದು.

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ ಎಂಬಲ್ಲಿ ಇದು ಮೈಪಡೆದಿದೆ.
ಬಯಲು ಆಲಯದೊಳಗೊ ಆಲಯವು ಬಯಲೊಳಗೋ
ಬಯಲು ಆಲಯವೆರಡು ನಯನದ ಒಳಗೋ
ನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೋ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೇ
ದೃಶ್ಯ, ದೃಷ್ಟಿ, ದೃಷ್ಟಾರ ಈ ತ್ರಿಪುಟಿಗಳು ಏಕೀಭವಿಸುವ ಭಕ್ತಿಯ ಅದ್ವೈತಕ್ಕೆ ಕನಕ ಕೊನೆಯಲ್ಲಿ ಬಂದು ತಲುಪಿದ್ದರೂ, ಆ ತಲುಪುವ ಹಾದಿಯ ಜಿಜ್ಞಾಸೆ ವಿಶೇಷವಾಗಿದೆ. ಒಳಗೆ-ಹೊರಗೆ ಎಂಬುದು ಆಕಾರಗಳನ್ನು ಗ್ರಹಿಸುವ ಕಣ್ಣಿನ ಜ್ಞಾನ. ಹಾಗೆ ನೋಡಿದರೆ ಬಯಲಲ್ಲಿ ಆಲಯವೂ ಆಲಯದಲ್ಲಿ ಬಯಲೂ ಇರುವುದರಿಂದ ಅವು ಬೇರೆಯಲ್ಲ. ಅವುಗಳನ್ನ ವಿಭಜಿಸಿ ಗ್ರಹಿಸುವ ಬುದ್ದಿ ಕಣ್ಣಿನ ಕೈಗೊಂಬೆಯೂ ಹೌದು. ಈ ಬಗೆಯಲ್ಲಿ ಬರಿಯ ಭಾಸವಾಗುವ ಜಗತ್ತು ಇದು. ಅದನ್ನೇ ಕನಕ ಮಾಯೆಯೆನ್ನುವುದು. ಇವೆಲ್ಲವೂ ಮಾಯಕಾರನಾದ ನಿನ್ನೊಳಗೇ ಇದೆ ಎನ್ನುತ್ತಾನೆ ಕನಕ. ಇದೇ ರೀತಿ ಸವಿ ಹಾಗೂ ಸಕ್ಕರೆ, ಹೂವು ಹಾಗೂ ಗಂಧಗಳ ಸಂಬಂಧ. ದ್ವೈತ ಹಾಗೂ ಅದ್ವೈತಗಳ ಸಂಬಂಧವನ್ನು ಕನಕ ಪ್ರಕಟಿಸುವ ರೀತಿಯಿದು. ಈ ನೋಟದ ಗುಟ್ಟನ್ನು ತಿಳಿದರೆ ಮೇಲು ಕೀಳು, ಶ್ರೇಷ್ಠ ಕನಿಷ್ಠ, ಮುಖ್ಯ ಅಮುಖ್ಯ ಎಂಬೆಲ್ಲ ದ್ವಂದ್ವ ಗ್ರಹಿಕೆಗಳು ಅಳಿಯುತ್ತವೆ. ನಮ್ಮ ಲೌಕಿಕದ ಲೋಕದೃಷ್ಟಿಯೂ ರೂಪಾಂತರಗೊಳ್ಳುತ್ತದೆ.
ಯುದ್ಧದಲ್ಲಿ ತೊಡಗಿದ್ದ ಕನಕದಾಸ ಪ್ರಭುತ್ವ ನಿರ್ಮಿತ ಹಿಂಸೆಯಿಂದ ಹೊರಗಾಗುವಲ್ಲಿ ಅವನ ಲೋಕ ದೃಷ್ಟಿಯು ಪರಿವರ್ತನೆಗೊಂಡಿರುವುದು ಗೋಚರಿಸುತ್ತದೆ. ಪ್ರಜ್ಞೆಯ ಈ ಪರಿವರ್ತನೆ ದಿಢೀರೆಂದು ಸಂಭವಿಸುವುದಲ್ಲ. ಪ್ರಭುತ್ವದ ನೆಲೆಯಿಂದ ದೂರ ಸಾಗಿ ಅಲೆಮಾರಿಯಂತಾಗಿದ್ದ ಕನಕ ಎಲ್ಲ ತನ್ನ ಪೂರ್ವಗ್ರಹಗಳನ್ನು ಕಳಚಿಕೊಳ್ಳುತ್ತ, ಅಹಂ ನಿರಸನಗೊಳ್ಳುತ್ತ ನಡೆದ ಒಳಪಯಣ ಎಲ್ಲೂ ದಾಖಲಾಗುವುದಿಲ್ಲ. ಕನಕನ ಮುಂಡಿಗೆಗಳ ಬೆಡಗಿನ ಭಾಷೆಯಲ್ಲಿ ಅವನ ಯೌಗಿಕ ಸಾಧನೆಯ ಕುರುಹುಗಳು ಕಾಣಿಸುತ್ತದೆ.
ಸದರವಲ್ಲವೋ ನಿಜಯೋಗ
ಸದಮಲ ಗುರುದಿಗಂಬರನ ಸಂಯೋಗ
ಆದಿಕುಂಭ ಕಾಣದನಕ-ಅಲ್ಲಿ
ಸಾಧಿಸಿ ಭೇದಿಸಿ ಸವಿಯುಣ್ಣದನಕ-ಬಡ
ದಾದಿಕೇಶವ ನಿಮ್ಮ ನೆಲೆಗಾಣದನಕ
ಗುರುಮುಖೇನ ಸಾಧನೆ ಮಾಡುವ ರಹಸ್ಯ ಪಂಥಗಳ ಒಡನಾಟದ ಸೂಚನೆ ಇಲ್ಲಿ ದೊರೆಯುತ್ತದೆ. ದೇಹವನ್ನೇ ಸಾಧನವಾಗಿಸಿ ನಡೆವ ಈ ಸಾಧನೆಯಲ್ಲಿ ಆದಿಕುಂಭ, ಅಗ್ನಿಯ ಕಿಡಿ, ಬ್ರಹ್ಮನಾಡಿ, ಕೊಡನುಕ್ಕಿ ತೊಟ್ಟಿಕ್ಕುವ ರಸ.. ಈ ಎಲ್ಲ ರೂಪಕಗಳು ಕನಕನ ಅಂತರ್ಯಾತ್ರೆಯನ್ನು ಸೂಚಿಸುತ್ತವೆ. ಯೋಗ ಹಾಗೂ ಭಕ್ತಿಧಾರೆಗಳ ಕೂಡುವಿಕೆಯಲ್ಲಿ ಕನಕನ ಸಂತತನವಿದೆ.
ಸಂತನ ಮಾತು ದಾಖಲಾದಂತೆ ಮೌನ ದಾಖಲಾಗುವುದಿಲ್ಲ. ಕನಕದಾಸನಾಗಿ ಪರಿವರ್ತನೆಗೊಂಡವನನ್ನು ಸಮಾಜ ಅಷ್ಟು ಸುಲಭವಾಗಿ ಸ್ವೀಕರಿಸಿರಲಾರದು. ಅವನು ಮತ್ತೆ ಈ ತಾರತಮ್ಯಗಳ ದ್ವಂದ್ವ ಗ್ರಹಿಕೆಯೊಳಗೇ ಈಸಬೇಕಾಯಿತು. ಅವನ ಕುಲದ ಪ್ರಶ್ನೆಯನ್ನೆದುರಿಸಬೇಕಾಯಿತು. ಅವನ ಒಳಜೀವದ ಮಾಗುವಿಕೆಯನ್ನೂ ಕಾಣುವ ದೃಷ್ಟಿ ಲೋಕಕ್ಕೆ ಒದಗದಿರುವುದೇ ಈ ಹಿಂಸೆಗೆ ಕಾರಣ. ಈ ಅರಿವಿನ ಹಿಂಸೆಯನ್ನು ಕನಕ ನಿವಾರಿಸಿಕೊಂಡ ಕ್ರಮ ಸಂತತನಕ್ಕೆ ವಿಶಿಷ್ಟವಾದುದು. ಉಡುಪಿಯ ಕೃಷ್ಣನ ದರ್ಶನಕ್ಕೆ ಕುಲದ ಕಾರಣದಿಂದಾಗಿ ನಿರಾಕರಿಸಲ್ಪಟ್ಟ ಜನಜನಿತ ಘಟನೆಯ ಮೂಲಕವೇ ಇದನ್ನು ನೋಡಬಹುದು. ಕೃಷ್ಣ ತನ್ನ ನಿಷ್ಕಲ್ಮಷ ಭಕ್ತಿದೆ ಒಲಿದೇ ಒಲಿವ ಎಂಬ ನಂಬಿಕೆ ಹಾಗೂ ಅರ್ಪಣೆ ಅವನಿಗೆ ಪ್ರಮುಖವಾಗಿತ್ತೇ ವಿನಃ ಸುತ್ತಲಿನವರ ಪ್ರತಿಕ್ರಿಯೆಗಳಲ್ಲ. ಅವನ ಉತ್ಕಟತೆ ಕೃಷ್ಣನನ್ನೇ ಆಲಯದಿಂದ ಬಯಲುಗೊಳಿಸಿತು. ದೈವದ ದಿಕ್ಕನ್ನೇ ಬದಲಿಸಿತು. ಅವನು ವ್ಯವಸ್ಥೆಯ ವಿರುದ್ಧ ಬಂಡೇಳಲಿಲ್ಲ. ಆದರೆ ವ್ಯವಸ್ಥೆಯ ಅಂತರಂಗವನ್ನೇ ತನ್ನ ಕ್ರಿಯೆಯಿಂದ ಬದಲಿಸುವ ಶಕ್ತಿ ಅವನದಾಗಿತ್ತು. ಅದು ಭಕ್ತಿಯ ಕೊಡುಗೆ. ಕುಲವೆಂಬ ಕೃತಕ ಗುರುತನ್ನು ಅಳಿಸಲು ಸಿದ್ಧಾಂತಗಳಿಗಿಂತ ಎಲ್ಲರನ್ನೂ ಒಳಗೊಳ್ಳುವ ಪ್ರೀತಿ ಹೆಚ್ಚು ಪರಿಣಾಮಕಾರಿ. ಆದರೆ ಅದು ಸಂಭವಿಸಬೇಕೇ ಹೊರತೂ ಅದು ಹಿಚುಕಿ ಹಣ್ಣುಮಾಡುವ ಕ್ರಿಯೆಯಾಗಬಾರದು.
ಕುಲಕುಲ ಕುಲವೆನ್ನುತಿಹರೋ ಕುಲವಾವುದು ಸತ್ಯ ಸುಜನರಿಗೆ? ಎಂದು ಪ್ರಶ್ನಿಸುವ ಕನಕ ಶ್ರೇಷ್ಠ- ಕನಿಷ್ಠಗಳು ಬರಿ ನೋಟದ ತೊಡಕುಗಳೆಂಬುದನ್ನು ಲೋಕವಿವರಣೆಯ ಮೂಲಕವೇ ಅರಿವಾಗುವಂತೆ ಮಾಡುತ್ತಾನೆ.
ಕೆಸರೊಳು ತಾವರೆ ಪುಟ್ಟಲು ಅದ ತಂದು
ಕುಸುಮನಾಭನಿಗೆ ಅರ್ಪಿಸರೇನಯ್ಯ
ಪಶುವಿನ ಮಾಂಸದೊಳುತ್ಪತ್ತಿ ಕ್ಷೀರವ
ವಸುಧೆಯೊಳಗೆ ಭೂಸುರರುಣ್ಣರೇನಯ್ಯ
ಹೀಗೆ ತರ್ಕಸರಣಿಯೊಂದನ್ನು ಕಟ್ಟುವ ಕನಕ ತರ್ಕದ ಮೂಲಕವೇ ಅದನ್ನು ಮೀರುವ ಬಗೆಯನ್ನು ಕಾಣಿಸುತ್ತಾನೆ. ಕೆಸರೊಳಗೆ ಹುಟ್ಟುವ ತಾವರೆ ಜಗದ್ವಂದ್ಯನಾದ ಹರಿಗೆ ಒಪ್ಪಿತವಷ್ಟೇ ಅಲ್ಲ ಪ್ರಿಯವಾದುದು. ಧರೆಗೆ ಶ್ರೇಷ್ಠರೆನಿಸಿಕೊಂಡ ಬ್ರಾಹ್ಮಣರು ಪವಿತ್ರವೆಂದು ಸ್ವೀಕರಿಸುವ ಹಾಲು ಉತ್ಪತ್ತಿಯಾಗುವುದು ಪಶುವಿನ ಮಾಂಸಲವಾದ ದೇಹದಲ್ಲೇ. ಮೂಲಕ್ಕೆ ಹೋಗಿ ನೋಡಿದಾಗ ಶ್ರೇಷ್ಟ ಕನಿಷ್ಟವೆಂಬ ತರ್ಕವೇ ಅರ್ಥಹೀನ. ಆದರೆ ಇಲ್ಲಿ ಪ್ರಶ್ನೆಯಿರುವುದು ಸಾಮಾಜಿಕ ಸ್ವೀಕಾರಾರ್ಹತೆಯದು. ಸಾಂಸ್ಕೃತಿಕ ಮಾದರಿಗಳನ್ನು ಮೀರುವುದು. ಕನಕದಾಸರು ಎಲ್ಲಿಯೂ ಆಕ್ರೋಶಗೊಳ್ಳದೇ ಈ ಕಣ್ಕಟ್ಟುಗಳು ಕಳಚುವಂತೆ ಮಾಡುತ್ತಾರೆ. ಮೂಲವನ್ನು ದರ್ಶನಮಾಡಿಸುತ್ತಾರೆ.
ಆತ್ಮ ಯಾವಕುಲ ಜೀವ ಯಾವಕುಲ
ತತ್ವೇಂದ್ರಿಯಗಳ ಕುಲ ಪೇಳಿರಯ್ಯ
ಆತ್ಮನು ಕಾಗಿನೆಲೆಯಾದಿಕೇಶವನೊಲಿದ
ಭಕ್ತರಿಗೆ ಕುಲವಾವುದು ಹೇಳಿರಯ್ಯ
ಮೇಲಿನಿಂದ ಆರೋಪಿಸಿಕೊಂಡ ಗುಣಧರ್ಮಗಳೆಲ್ಲ ಕಳಚಿದ ಮೇಲೆ ಉಳಿಯುವ ನಗ್ನತೆಯೇ ಸತ್ಯ. ಅದನ್ನು ಅರಿವಿನಿಂದಲೂ ಮುಟ್ಟಬಹುದು ಭಕ್ತಿಯಿಂದಲೂ ಕಾಣಬಹುದು. ಪರಮಾತ್ಮನ ಭಾಗವೇ ಎಲ್ಲರೂ ಆಗಿರುವಾಗ ಅಲ್ಲಿ ತಾರತಮ್ಯ ಅನಗತ್ಯ. ಸೃಷ್ಟಿಯಲ್ಲಿ ಎಲ್ಲವೂ ಪವಿತ್ರವೇ. ನಮ್ಮ ಆಯ್ಕೆಗಳ ಹಿಂದೆ ನಮ್ಮದೇ ಸ್ವಾರ್ಥವಿರುತ್ತದೆ. ನಾವು ಮುಖ್ಯರಾಗುವುದೆಂದರೆ ಇನ್ನೊಂದು ಅಮುಖ್ಯವೆಂಬ ಅಹಂಕಾರವೇ. ಅಹಂಕಾರವು ತನಗೆ ಗೊತ್ತಿಲ್ಲದೇ ಇನ್ನೊಂದರ ಮೇಲೆ ಪ್ರಭುತ್ವ ಸ್ಥಾಪಿಸುತ್ತಿರುತ್ತದೆ. ಭಕ್ತಿಯು ಅಹಂ ನಿರಸನದ ಮಾಧ್ಯಮ. ಮಹತ್ತಿನ ಮುಂದೆ ಕರಗಿದಾಗ ಮಾತ್ರ ಆ ಮಹತ್ತೇ ತಾನಗುವುದು ಸಾಧ್ಯ. ಕಾಗಿನೆಲೆಯಾದಿಕೇಶವನೇ ಆ ಮೂಲಸತ್ಯ. ಮೂಲ ಶಕ್ತಿ ಎಲ್ಲವೂ ಹೌದು ಭಕ್ತ ಕನಕನಿಗೆ. ಅವಿನಾಶಿಯಾದ ಆ ಆತ್ಮಸ್ವರೂಪಿಗೆ ಕುಲ ಗೋತ್ರಗಳ ಮಿತಿಯು ಅಂಟುವುದಿಲ್ಲ. ಅವನೇ ನಮ್ಮೊಳಗೂ ಇರುವಾಗ ಭಕ್ತರಿಗೆ ಯಾವ ಕುಲ? ಎಂದು ಆತ ಪ್ರಶ್ನಿಸುತ್ತಾನೆ. ಭಕ್ತನಾಗಿ ಪರಿವರ್ತನೆಯಾದವನಿಗೆ ಮಾತ್ರ ಎಟುಕುವ ನೋಟವಿದು. ಆಥವಾ ಇದು ಭಕ್ತಿಯೆಡೆಗೆ ನಮ್ಮನ್ನು ಪರಿವರ್ತಿಸುವ ನೋಟವೂ ಹೌದು.
ಭಕ್ತಿಯೆಂಬ ಎಲ್ಲರನ್ನೂ ಒಳಗೊಳ್ಳುವ ಭಾವ ಕನಕನ ಲೋಕದೃಷ್ಟಿಯೇ ಆಗುವಲ್ಲಿ ಅವನ ಬದುಕಿನ ಸಂಘರ್ಷಗಳ ಹಿನ್ನೆಲೆ ಇದ್ದೇ ಇದೆ. ಕುಲದ ಕಾರಣಕ್ಕಾಗಿ ಅಪಮಾನಿತನಾಗಬೇಕಾದ ಸಾಮಾಜಿಕ ವಾಸ್ತವವನ್ನು ಅಂಗುಲಂಗುಲವಾಗಿ ನಡೆದು ಅವನು ದಾಟಲೇಬೇಕಾಗಿತ್ತು. ಇದನ್ನು ಮೀರಲು ಅವನು ಮಾಧ್ವಮತದ ಪ್ರಾಬಲ್ಯ ಕಳಚಿ ಶ್ರೀವೈಷ್ಣವ ತತ್ವದೆಡೆ ಚಲಿಸುತ್ತಾನೆ. ರಾಮಾನುಜಾಚಾರ್ಯರ ಶ್ರೀವೈಷ್ಣವ ತತ್ವವು ತಳಸಮುದಾಯಗಳು ಭಕ್ತಿಯ ತೆಕ್ಕೆಗೆ ಬರಲು ಕಾಣವಾಯಿತು. ಭಕ್ತಿಯೆಂಬುದು ವೈಯಕ್ತಿಕ ಬಿಡುಗಡೆಯ ಮಾರ್ಗವಾದರೂ ಅದು ಚಳವಳಿ ರೂಪ ಪಡೆದಾಗ ಸಮುದಾಯ ಪ್ರಜ್ಞೆಯ ಭಾಗವೂ ಆಯಿತು. ನಾಯಕ, ಬೇಡ, ಗೊಲ್ಲ, ಬಣಜಿಗ, ಒಕ್ಕಲಿಗ ಮುಂತಾದ ವೃತ್ತಿ ಸಮುದಾಯಗಳು ಈ ಪಂಥದ ಪ್ರಭಾವಕ್ಕೊಳಗಾದರು. ದೇವರನ್ನು ಕರ್ಮಾಚರಣೆಗಳ ದೇವಾಲಯಗಳ ಭಿತ್ತಿಗಳಾಚೆ ಭಾವವಲಯಕ್ಕೆ ತಂದು ನಿಲ್ಲಿಸಿದ ಪವಾಡವೇ ಇಲ್ಲಿ ಸಂಭವಿಸಿತು. ದೇವರು ಸಖ, ಬಂಧು, ಪ್ರಿಯತಮ ಏನೆಲ್ಲವೂ ಆಗಿ ಸುಲಭ ಲಭ್ಯನಾದ. ದೈವದ ಮನುಷ್ಯೀಕರಣವು ಮತಧರ್ಮಗಳ ಚೌಕಟ್ಟು ಮೀರಲು ಸಾರ್ಧಯವಾಗಿಸಿತು. ಮನುಷ್ಯ ಚೈತನ್ಯವು ಇದನ್ನೆಲ್ಲ ಮೀರಿ ಮುಕ್ತವಾಗಲು ಅರ್ಹವೆಂಬ ನಿಜಅರಿವು ಕಣ್ತೆರೆಯಿತು.
ಮುಕುತರಾದರು ಎನ್ನ ನೂರೆಂಟು ಕುಲದವರು
ಮುಕುತಿ ಮಾರ್ಗಕೆ ಯೋಗ್ಯ ನಾನಾದೆನೋ
ಅಕಳಂಕ ಶ್ರೀಹರಿ ಭಕುತಿಗೆನ್ನಮನ ಬೆಳೆದು
ರುಕುಮಿಣಿಯರಸ ಕೈವಶವಾದನೆನಗೆ
ಕೃಷ್ಣನೇ ತನ್ನ ಕೈವಶವಾದನೆಂಬಲ್ಲಿ ಈ ನೂರೆಂಟು ಕುಲದ ಆತ್ಮವಿಶ್ವಾಸವೇ ಮಾತಾಡುವಂತೆ ತೋರುತ್ತದೆ. ಮನುಷ್ಯರನ್ನು ಅವರ ಸಾಮಾಜಿಕ ಸ್ತರಗಳಿಂದ ಮೇಲಕ್ಕೆತ್ತಿ ಆಧ್ಯಾತ್ಮಕ ನೆಲೆಯಲ್ಲಿ ಮುಕ್ತಿ ಯೋಗ್ಯರನ್ನಾಗಿಮಾಡುತ್ತದೆ.
ನೈತಿಕತೆಯ ಕುರಿತು ಕನಕನ ದೃಷ್ಟಿಕೋನವು ಚರ್ಚಾರ್ಹವಾಗಿದೆ. ನೈತಿಕತೆಯ ಕುರಿತು ಮಾತನಾಡುವಗ ಅದನ್ನು ವೈಯಕ್ತಿಕ ಶೀಲ ಹಾಗೂ ಸಾಮಾಜಿಕ ಶೀಲ ಎಂದು ಎರಡು ಸ್ತರಗಳಲ್ಲಿ ನೋಡಬಹುದು. ವ್ಯಕ್ತಿಯ ಅಂತರಂಗಕ್ಕೆ ಭಗವಂತನ ಭಾವಸ್ಪರ್ಷದ ಮೂಲಕ ಅಹಂ ನಿರಸನವಾಗಿ ಶುದ್ದಗೊಳ್ಳುವುದು ಅಂತರಂಗ ಶುದ್ದಿ. ಅಹಂ ನಿರಸನಗೊಳ್ಳುತ್ತಿರುವಂತೆಯೇ ಅದರ ಸುತ್ತ ಕಟ್ಟಿಕೊಂಡ ಪೂರ್ವಗ್ರಹಗಳೂ ನಿರಸನಗೊಳ್ಳುತ್ತ ಹೊಸ ಅರಿವು ಮೂಡುತ್ತದೆ. ಈ ಹೊಸ ಅರಿವು ನಮ್ಮ ಸಾಮಾಜಿಕ ನೀತಿ ಸಂಹಿತೆಯನ್ನೇ ಬದಲಿಸಬಲ್ಲದು. ಸರ್ವಸಮಭಾವ ಹಾಗೂ ಸಕಲ ಚರಾಚರಗಳಲ್ಲೂ ದೈವಿಕ ಚೈತನ್ಯವನ್ನು ಗುರುತಿಸುವ ಅಂತರ್‌ದೃಷ್ಟಿ ತೆರೆಯುವುದು. ಆಗ ಸಾಮಾಜಿಕ ಸಂಸ್ಥೆಗಳಾದ ಕುಟುಂಬ, ಸಮಾಜ, ಧರ್ಮ, ಆಡಳಿತ, ವ್ಯವಹಾರ ಜಗತ್ತುಗಳ ನಿಯಮಗಳು ಪ್ರಶ್ನಾರ್ಹವಾಗುತ್ತವೆ. ಸಂಕಲ್ಪ ಶಕ್ತಿಯಿದ್ದಲ್ಲಿ ಬದಲಾಗುತ್ತವೆ. ಬಸವಣ್ಣ ಪ್ರತಿಪಾದಿಸಿದ ಅಂತರಂಗ ಶುದ್ಧಿ ಹಾಗೂ ಬಹಿರಂಗ ಶುದ್ದಿಗಳು ಹೀಗೆಯೇ ವಿಕಾಸಗೊಂಡಿವೆ. ಬದಲಾವಣೆಯ ಹಿಂದೆ ವಿಚಾರಕ್ಕಿಂತ ವಿಕಾಸವಿರುವ ಭಕ್ತಿಯ ಮಾರ್ಗ ಕನಕನದು.
ತಾನು ಉಣ್ಣದ ಪರರಿಗಿಕ್ಕದ ಧನವಿದ್ಯಾತಕೆ
ಮಾನಹೀನನಾಗಿ ಬಾಳ್ವ ಮನುಜನ್ಯಾತಕೆ
ಜ್ಞಾನವಿಲ್ಲದೆ ನೂರುಕಾಲ ಬದುಕ್ಯಾತಕೆ
ಮಾನಿನಿಯ ತೊರೆದ ಮೇಲೆ ಭೋಗವ್ಯಾತಕೆ

ಮನುಷ್ಯನು ಗಳಿಸಿಕೊಂಡಿರುವ ‘ಮಾನ’ ಹಾಗೂ ‘ಜ್ಞಾನ’ ಗಳ ನೆರವಿನಿಂದ ಸರಿ ತಪ್ಪುಗಳ ಕಲ್ಪನೆ ಸಮುದಾಯದಲ್ಲಿ ಬೇರೂರುತ್ತದೆ. ಸಂಪತ್ತಿನ ಹಾಗೂ ಆಹಾರದ ಹಂಚಿಕೆಯಲ್ಲಿ ಸ್ವಾರ್ಥವನ್ನು ಮೀರುವ ದೃಷ್ಟಿಕೋನವನ್ನು ಕನಕರ ’ಸತ್ಯವಂತರ ಸಂಗವಿರಲು.., ಎಂಬ ಈ ಕೀರ್ತನೆಯು ಪ್ರತಿಪಾದಿಸುತ್ತದೆ. ಆದರೆ ಲೋಕರೂಢಿಯ ರಾಜಧರ್ಮ, ಸತಿಧರ್ಮ, ಪತಿಧರ್ಮಗಳನ್ನು ಕನಕ ಒಪ್ಪಿ ನಡೆಯಬೇಕೆನ್ನುತ್ತಾನೆ. ಕೆಲವು ಸಂದರ್ಭಗಳಲ್ಲಿ ಅಧಿಕಾರ ಸಂಬಂಧಗಳನ್ನು ಮೀರಿ ಯೋಚಿಸುವಲ್ಲಿ ಕನಕ ಮಿತಿಗೊಳ್ಳುತ್ತಾನೆಂದು ತೋರುತ್ತದೆ. ಆತ ಬಳಸುವ ’ಸನ್ನೆಯರಿತು ನಡೆವ ಸತಿ’ ಹಾಗೂ ’ಸೋತ ಹೆಣ್ನಿಗೆ ಓತು ನಡೆವ ಪತಿ, ಈ ಎರಡೂ ಪರಿಕಲ್ಪನೆಗನ್ನು ಬೆಸೆದಾಗ ಸಂಬಂಧದ ಪೂರ್ಣತೆಯೊಂದು ಸಿಗಬಹುದೆನಿಸುತ್ತದೆ. ಸತಿತ್ವ ಹಾಗೂ ಪತಿತ್ವದ ಸಿದ್ದ ಮಾನದಂಡಗಳಾಚೆ ಸೋತು ಗೆಲ್ಲುವ ಭಕ್ತಿಯ ಶರಣಾಗತಿ ಕಲಿಸಿದ ಭಾವವೇ ಕನಕನನ್ನು ಆಳುತ್ತದೆ.
ದಾಸಕೂಟದೊಳಗಿದ್ದೂ ಕ್ರಿಟಿಕಲ್ ಇನ್ಸೈಡರ್ ಆಗಿ ನೋಡಿಕೊಳ್ಳುವ ದೃಷ್ಟಿ ಕನಕನಲ್ಲಿ ಕಾಣುತ್ತದೆ. ಇದು ವ್ಯವಸ್ಥೆಯಾಗುವುದನ್ನು ಮೀರುವ ಒಳ ಎಚ್ಚರ. ’ಎಲ್ಲಾರು ಮಾಡುವದು ಹೊಟ್ಟೆಗಾಗಿ’ ಎಂಬ ಜನಪ್ರಿಯ ರಚನೆಯಲ್ಲೂ ಇದನ್ನು ಕಾಣಬಹುದು. ಬ್ರಾಹ್ಮಣರ ಸಂಗದೊಳಗಿದ್ದೂ ಬ್ರಾಹ್ಮಣ್ಯವನ್ನು ಒರೆಗೆ ಹಚ್ಚಿನೋಡುವ ಕನಕನ ಕೆಚ್ಚು ಅವನ ಅಂತರಂಗ ಶದ್ದಿ ಹಾಗೂ ಅರಿವುಗಳ ಫಲ. ಸಮಾಜದ ಜಾತಿ, ಕುಲ, ಕಸುಬು, ಧರ್ಮ, ಆಚರಣೆಗಳ ಬಹುತ್ವವು ವಾಸ್ತವ. ಈ ಭಿನ್ನ ಗುರುತುಗಳನ್ನು ಒಪ್ಪಿಕೊಂಡೂ ತನ್ನ ಗುರುತಿಗೆ ನಿಷ್ಠವಾಗಿರದ ಅಪ್ರಾಮಾಣಿಕತೆಯನ್ನು ಕನಕ ಟೀಕಿಸುತ್ತಾನೆ.
ತೀರ್ಥಪಿಡಿದವರೆಲ್ಲ ತಿರುನಾಮಧಾರಿಗಳೆ-ಜನ್ಮ
ಸಾರ್ಥಕವಿಲ್ಲದವರೆಲ್ಲ ಭಾಗವತರೆ ಎಂದು ಪ್ರಶ್ನಿಸುವ ಕನಕ ಸ್ವವಿಮರ್ಶೆ ಹಾಗೂ ಸಮಾಜ ವಿಮರ್ಶೆಯ ಚೌಕಟ್ಟೊಂದನ್ನು ರೂಪಿಸುತ್ತಾನೆ. ಮೂಗ್ಹಿಡಿದು ನೀರೊಳಗೆ ಮುಳುಗಿ, ನಿಗಮಾಗಮ ಪುರಾಣಗಳನ್ನೋದಿ ಪರಸ್ತ್ರೀಯರನ್ನು ಬಯಸುವ ಯೋಗಭ್ರಷ್ಟರು ಬ್ರಾಹ್ಮಣರೇ ಎಂದು ಪ್ರಶ್ನಿಸುತ್ತಾನೆ. ಲಿಂಗಾಂಗದೊಳಗಿನ ಚಿನ್ಮಯವ ತಿಳಿಯದೇ, ಜಂಗಮ ಸ್ಥಾವರದ ಹೊಲಬನರಿಯದೇ ಭಂಗಿಮುಕ್ಕಗಳೆಲ್ಲ ಲಿಂಗವಂತರೇ ಎಂದು ಪ್ರಶ್ನಿಸುತ್ತಾನೆ. ಪಟ್ಟೆ ನಾಮ ಬಳಿದು ನಾಮಜಪದ ಗುರುತರಿಯದ ವ್ಯವಹಾರಿಕ ವೈಷ್ಣವರನ್ನೂ ಗೇಲಿಮಾಡುತ್ತಾನೆ. ಅಲ್ಲಾ ಖುದಾ ಎಂಬುದರ ಅರ್ಥ ತಿಳಿಯದೇ ಪೊಳ್ಳು ಕೂಗನು ಕೂಗಿ ಬಾಯಾರುವ ಮುಸ್ಲಿಮರನ್ನೂ ಆತ ಖಂಡಿಸುತ್ತಾನೆ. ಆಚರಣೆಗಳಾಚೆ ಇರುವ ನಿಜ ನೆಲೆಯನ್ನು ಗುರುತಿಸುವ ಕನಕನ ದೃಷ್ಟಿ ಕರ್ಮಠ ವ್ಯವಸ್ಥೆಗಳನ್ನು ಅಲುಗಾಡಿಸುತ್ತದೆ.
ಮೋಹನ ತರಂಗಿಣಿ, ನಳಚರಿತ್ರೆ, ಯಂತಹ ಕಾವ್ಯಗಳಲ್ಲಿ ಜನಕಾವ್ಯದ ಪಲ್ಪನೆಗಳನ್ನು ಯಥಾವತ್ ಸ್ವೀಕರಿಸಿದ ಕನಕ ಸ್ಥಾಪಿತ ಸಾಮಾಜಿಕ ಮೌಲ್ಯಗ ಸಮರ್ಥಕನಂತೆಯೂ ಕಾಣುತ್ತಾನೆ.ಅವನ ’ನಳಚರಿತ್ರೆ’ ಪಾತಿವೃತ್ಯ ಹಾಗೂ ದಾಂಪತ್ಯ ನಿಷ್ಠೆಯ ಸುಖೋಷ್ಣ ಕಲ್ಪನೆಗಳನ್ನು ವಿಜೃಂಭಿಸುತ್ತದೆ. ವಿಧಿಲಿಖಿತ, ಕರ್ಮಫಲಗಳ ಹೆಸರಲ್ಲಿ ಅವು ಸಮರ್ಥನೆ ಪಡೆಯುತ್ತವೆ. ಅವನ ’ಮೋಹನ ತರಂಗಿಣಿ’ ಈ ಅರ್ಥದಲ್ಲಿ ಸ್ವಲ್ಪ ಭಿನ್ನವಾಗಿದೆ. ಶೃಂಗಾರದ ಉತ್ಕಟತೆಯಲ್ಲಿ ಅಧಿಕಾರ ಸಂಬಂಧಗಳು ಅಳಿಯುತ್ತವೆ. ಇಲ್ಲಿ ಕೃಷ್ಣ ಭಗವಂತ, ಪ್ರಭು ಎಲ್ಲವೂ ಹೌದು. ಆದರೆ ಇದೆಲ್ಲದರ ಆಳದಲ್ಲಿ ಆತ ಅಪ್ಪಟ ಮನುಷ್ಯ. ರಕ್ತ ಮಾಂಗಳ ವಾಸ್ತವಕ್ಕೆ ಮಿಡಿಯುವಾತ.
ತರುಣಿ ಲಕ್ಷ್ಮಿಯ ಕುಚವಿಡಿದ ಕೈಯಿಂದ ಸ
ತ್ಕರುಣ ವೀವುದು ಕೃಷ್ಣ ನಮಗೆ ..
ಎಂಬಲ್ಲಿ ಕೃಷ್ಣ ಇಂದ್ರಿಯ ಸಂವೇದನೆಯಿಂದ ತೃಪ್ತನಾಗುವ ಮನುಷ್ಯನಾಗಿ ಕಾಣುತ್ತಾನೆ. ಕಾಯುವ ದೇವನನ್ನು ಹತ್ತಿರಗೊಳಿಸುವ ಪ್ರಕ್ರಿಯೆಯಿದು.
ಕನಕ ಕೃಷ್ಣನನ್ನು ಪ್ರೇಮದ ಅಖಂಡತೆಗೆ ಪ್ರತಿಮೆಯಾಗಿಸಿದರೆ, ರಾಮನನ್ನು ಸಮತ್ವಕ್ಕೆ ನಿದರ್ಶನವಾಗಿ ಕಟ್ಟುತ್ತಾನೆ. ಅವನ ‘ರಾಮಧಾನ್ಯ ಚರಿತೆ’ ತನ್ನ ನಾಟಕೀಯತೆಯ ಮೂಲಕ ರೂಢಿಗತ ಲೋಕದೃಷ್ಟಿಯನ್ನು ಭಂಜಿಸುತ್ತದೆ. ಶ್ರೇಷ್ಠತೆಯ ಕಲ್ಪನೆಯನ್ನು ನಿರ್ಧರಿಸುವ ಮಾನದಂಡಗಳೇ ಪ್ರಶ್ನೆಗೊಳಗುತ್ತಾ ಅಕ್ಕಿ ರಾಗಿಗಳು ಸಮತ್ವದ ನೆಲೆಯಲ್ಲಿ ಒಂದಾಗುತ್ತವೆ. ಇಲ್ಲಿ ರಾಮ ಅಕ್ಕಿಯ ಅಹಂ ಅನ್ನು ಮಾತ್ರವಲ್ಲ, ರಾಗಿಯ ಅಹಂ ಅನ್ನೂ ಅಳೆಯುತ್ತಾನೆ. ತಮಾಷೆಯೆಂದರೆ ಅಕ್ಕಿ ರಾಗಿಗಳಿಗೆ ಇಲ್ಲಿ ಯಾವ ಸಮಸ್ಯೆಯೂ ಇಲ್ಲ!. ಸಮಸ್ಯೆ ಇರುವುದು ಅವುಗಳನ್ನು ಮುಖಾಮುಖಿಯಾಗಿಸುವ ದ್ವಂದ್ವದಲ್ಲಿ. ಸಮತ್ವದ ಅಂತರ್‌ದೃಷ್ಟಿಯು ಆಧ್ಯಾತ್ಮಿಕ ಅರಿವಿನ ಪೂರ್ಣತೆಯಿಂದ ಹೊಮ್ಮಿದಾಗ ಸಮಾಜದಲ್ಲಿ ಸಕಲಜೀವಪರ ದೃಷ್ಟಿ ತಂತಾನೇ ಮೂಡುತ್ತದೆ.
ಕೊನೆಗೂ ಕನಕನ ಲೋಕದೃಷ್ಟಿಯನ್ನು ವರ್ತಮಾನದಲ್ಲಿ ಅರ್ಥಮಾಡಿಕೊಳ್ಳುವ ತುರ್ತು ನಮ್ಮದು. ನೋಟದ ನಿಜವನ್ನು ’ಕಾಣುವುದು’ ಬಲು ಸೂಕ್ಷ್ಮ ಸಂಗತಿ. ಸಿದ್ಧಾಂತಗಳ ಹತಾರುಗಳು ಇಂದು ನಮ್ಮ ಲೋಕದೃಷ್ಟಿಯನ್ನು ರೂಪಿಸುತ್ತಿವೆ. ಹಾಗೂ ಗತವನ್ನು ಅರಿಯುವ, ವಿಷ್ಲೇಶಿಸುವ ಮಾನದಂಡಗಳನ್ನೂ ರೂಪಿಸುತ್ತಿವೆ. ಮಾರ್ಕ್ಸವಾದ, ಅಂಬೇಡ್ಕರ್ ವಾದ, ಲೋಹಿಯಾವಾದ, ಗಾಂಧಿವಾದ, ಸ್ತ್ರೀವಾದ ವಸಾಹತೋತ್ತರ, ಆಧುನಿಕೋತ್ತರ.. ಹೀಗೆ ನಮ್ಮ ಲೋಕ ಮೀಮಾಂಸೆಯ ನೆಲೆಗಳು ಸೀಳಾಗಿವೆ. ಕನಕನನ್ನು ವೈದಿಕ-ಅವೈದಿಕ, ಬ್ರಾಹ್ಮಣ-ಶೂದ್ರ ಎಂಬ ವಾದಗಳಲ್ಲಿ ಬೇಕಾದಂತೆ ಹಿಡಿದಿಡುವ ಪ್ರಯತ್ನಗಳಾಗಿವೆ. ಕನಕ ಆಧ್ಯಾಮಿಕ ಪ್ರಜ್ಞೆಯಿಂದ ವಿಕಾಸವಾದವನೋ? ರಾಜಕೀಯ ಪ್ರಜ್ಞೆಯಿಂದ ವಿಕಾಸವಾದವನೋ? ಎಂಬ ವಿವೇಚನೆ ನಮಗೆ ಬೇಡವಾಗಿದೆ. ಜಾತಿ ಧೃವೀಕರಣದ ಇಂದಿನ ಸಾಂದರ್ಭಿಕ ರಾಜಕಾರಣವು ಕನಕನನ್ನು ಜಾತಿ ’ಐಕಾನ್’ ಆಗಿ ಪ್ರತಿಷ್ಠಾಪಿಸಿಕೊಂಡಿದೆ. ಇದು ಅವನನ್ನು ತಿರುನಾಮದಿಂದ ರಕ್ಷಿಸಿ ಕಂಬಳಿ ಹೊದೆಸುವ ರಾಜಕೀಯ ಚಲನೆ. ಈ ಎರಡೂ ಸಂಕೇತಗಳು ಅವನ್ನು ಅವನಾಗಿ ನೋಡಲು ಬಿಡುವುದಿಲ್ಲ. ಇದು ಆತ್ಮಯಾವ ಕುಲ? ಜೀವ ಯಾವ ಕುಲ? ಎಂದವನನ್ನು ಮತ್ತೆ ಗೂಟಕ್ಕೆ ಕಟ್ಟುವ ಪ್ರಕ್ರಿಯೆ. ಎಲ್ಲ ಬಗೆಯ ಪ್ರಭುತ್ವಗಳನ್ನು ನಿರಚಿಸಲು ಹೊರಟ ಸಂತರನ್ನು ನಮಗೆ ಬೇಕಾದಂತೆ ಅರ್ಥೈಸಿಕೊಳ್ಳುವುದೂ ಅರ್ಥದ ಪ್ರಭುತ್ವವೇ. ಅಲ್ಲಮ ಅರಿವಿನ ಉರಿಯಲ್ಲಿ ಎಲ್ಲವನ್ನೂ ದಹಿಸಿ ಬಯಲಾದರೆ, ಕನಕ ಅರಿವಿನ ದ್ವಂದ್ವದಲ್ಲಿ ತಲ್ಲಣಿಸುತ್ತಲೇ ಹೊಸ ಲೋಕದೃಷ್ಟಿಯನ್ನು ಮೂಡಿಸುತ್ತಾನೆ.

ಇದನ್ನು ಓದಿ:

ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ

ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ

ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ

ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...