ಕನಸಿನ ಹನಿಯೊಡೆಯುತಿದೆ...


ಹನಿ ಒಡೆಯುತ್ತಿದೆ ಕವನ ಸಂಕಲನದೊಳಗೆ ಕನಸಿನ ಹನಿಯಿದೆ. ಬದುಕಿನ ಆಯಾಮಗಳ ಪರಿಚಯಿಸುವ ಸಾಲುಗಳಿವೆ. ಹೆಣ್ಣೆಂಬ ಆರ್ದ್ರ ಜೀವ ಬದುಕಿನ ಪಯಣದಲ್ಲಿ ಹೊಂದಿಕೊಂಡು ಹೋಗುವ, ಸವೆಸುವ ಹಾದಿಗಳ ಪರಿಚಯ ಇದೆ. ಭರವಸೆ ತುಂಬುವ ಸಾಲುಗಳಿವೆ, ಕನಸುಗಳನ್ನೇ ತ್ಯಾಗ ಮಾಡಿದ ಅವೆಷ್ಟೋ ಜೀವಗಳ ನೋವು ಇಲ್ಲಿ ಭಾವವಾಗಿ ಮನಸ್ಸನ್ನು ಸ್ಪರ್ಶಿಸುವಂತಿದೆ ಎನ್ನುತ್ತಾರೆ ಬರಹಗಾರ್ತಿ ನಯನ ಬಜಕೂಡ್ಲು. ಅವರು ಜಯಲಕ್ಷ್ಮಿ ಪಾಟೀಲ್ ಅವರ ಹನಿಯೊಡೆಯುತಿದೆ ಕವನ ಸಂಕಲನದ ಕುರಿತು ಬರೆದ ಲೇಖನ ಇಲ್ಲಿದೆ. 

ಪುಸ್ತಕ :- ಹನಿಯೊಡೆಯುತಿದೆ
ಕವಯಿತ್ರಿ :- ಜಯಲಕ್ಷ್ಮಿ ಪಾಟೀಲ್
ಪ್ರಕಾಶಕರು :- ಅದಿತಿ ಪ್ರಕಾಶನ

ಕವನ ಸಂಕಲನದ ಕುರಿತಾಗಿ ಬರೆಯುವ ಮೊದಲು ಆಲ್ ರೌಂಡರ್ ಜಯಲಕ್ಷ್ಮಿ ಪಾಟೀಲ್ ಅವರ ಬಗ್ಗೆ ಒಂದೆರಡು ಮಾತು, ಸಾಲುಗಳು. ಇವರು ಸಾಹಿತಿಯಾಗಿ ಇತ್ತೀಚೆಗೆ ಪರಿಚಿತ, ಮೊದಲು ಇವರು ನನ್ನ ಜಗತ್ತಿಗೆ ಒಬ್ಬ ಅದ್ಬುತ ಕಿರುತೆರೆಯ ಕಲಾವಿದೆ ಹಾಗೂ ನಟಿಯಾಗಿ ಪರಿಚಿತರು (ವ್ಯಯಕ್ತಿಕವಾಗಿ ಯಾವ ಪರಿಚಯವೂ ಇಲ್ಲ). ಸಾಹಿತ್ಯದಲ್ಲೂ ಇವರದ್ದು ಎತ್ತಿದ ಕೈ ಅನ್ನುವುದು ಇತ್ತೀಚೆಗೆ ಫೇಸ್ ಬುಕ್ಕಲ್ಲಿ ಪರಿಚಯ ಆದ ನಂತರ ನಾನು ಅರಿತ ಸಂಗತಿ. ಜಯಲಕ್ಷ್ಮಿ ಅವರದ್ದು ನಾನು ಕಂಡಂತೆ ದಿಟ್ಟತನದಿಂದ ಕೂಡಿದ, ನೇರ ಮಾತು, ನಡತೆಯ ವ್ಯಕ್ತಿತ್ವ. ಹೆಣ್ಣುಮಕ್ಕಳ ಪ್ರತಿ ಇವರು ಹೊಂದಿರುವ ಆಸ್ಥೆ, ಅನುಕಂಪ, ಸಂವೇದನೆ, ಸ್ತ್ರೀಪರ ಕಾಳಜಿಗಳಿಂದ ಖಂಡಿತಾ ಇವರು ಮಹಿಳಾವಾದಿ ಅನ್ನುವ ಬಿರುದು ಹೊಂದಿರುತ್ತಾರೆ. ಆದರೆ ಸ್ತ್ರೀಯರ ಪರ ಇವರ ವಿಚಾರಧಾರೆಗಳು ವಾಸ್ತವದ ಚಿತ್ರಣ.

ಮುಕ್ತ ಮುಕ್ತ ಧಾರಾವಾಹಿಯಲ್ಲಿ ಇವರದ್ದೊಂದು ಪಾತ್ರ, ಮಂಗಳತ್ತೆ ಎನ್ನುವ ಪಾತ್ರ. ಈ ಪಾತ್ರದ ಮೂಲಕ ಇವರು ಬಹಳ ಮಂದಿಯ ಮನ ಗೆದ್ದಿದ್ದಾರೆ. ಈ ಧಾರಾವಾಹಿಯಲ್ಲಿ ಬರುವ ಒಂದು ಸನ್ನಿವೇಶ, ಸಂಭಾಷಣೆಯ ಸಾರ "ಅಮ್ಮ ಮಕ್ಕಳಿಗೆ ಸಾವಿರ ಮಾತುಗಳನ್ನು ಅನ್ನಬಹುದು. ಆದರೆ ಮಕ್ಕಳಾದವರು ಅವಳ ಮನಸ್ಸು, ಮಾತಿಗೆ ಬೆಲೆ ಇದೆ ಅನ್ನುವುದನ್ನು ತೋರಿಸಿಕೊಡುವ ಅಂತಕರಣವನ್ನು ಹೊಂದಿರಬೇಕು, ಹಾಗೂ ಸಂದರ್ಭ ಸಿಕ್ಕಾಗ ಈ ಭಾವವನ್ನು ತೋರ್ಪಡಿಸುವ ಮೂಲಕ ಅವಳಿಗೆ ಮನದಟ್ಟಾಗುವಂತೆ ಮಾಡಬೇಕು" ಅನ್ನೋ ಅರ್ಥ ಬರುವ ಒಂದು ಸನ್ನಿವೇಶ ಅದೇಕೋ ಇಷ್ಟು ವರ್ಷಗಳ ನಂತರವೂ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದೆ ಹಾಗೂ ನಮ್ಮ ಮನಸ್ಸಿನ ಮಾತುಗಳೇನೋ ಅನ್ನುವಷ್ಟು ಆಪ್ತ. ಇವೆಲ್ಲದರ ಹೊರತಾಗಿಯೂ ಜಯಲಕ್ಷ್ಮಿಯವರು ಸಕ್ರಿಯರಾಗಿ ಎಲ್ಲರೊಡನೆ ಕಲೆತು, ಬೆರೆತು ಎಲ್ಲರ ಜತೆಗೂಡಿ ನಡೆಸುವ ಕಾರ್ಯಕ್ರಮಗಳು, ಚಟುವಟಿಕೆಗಳು ಹಲವಾರು. ಈಗ ಬರಹದ ಮೂಲಕ ಇವರು ಸಾಹಿತ್ಯ ಪ್ರೇಮಿಗಳ ಮನಸ್ಸಿಗೆ ಹತ್ತಿರವಾಗುತ್ತಿದ್ದಾರೆ. ಅಷ್ಟೊಂದು ಅದ್ಭುತ ಪ್ರತಿಭೆಯಾಗಿದ್ದರೂ ನಿಗರ್ವಿ, ಸೀದಾಸಾದ ವ್ಯಕ್ತಿತ್ವ, ನೇರ, ದಿಟ್ಟ ಮಾತು, ವಾಸ್ತವವಾದಿ. ಇವರು ಬಾಚಿಕೊಂಡಿರುವ ಪ್ರಶಸ್ತಿಗಳು ಹಲವಾರು. ಇಷ್ಟೆಲ್ಲಾ ಅದ್ಬುತ ಸಂಗತಿಗಳ ನಡುವೆಯೂ ಇವರು ಬಹಳ ಸರಳ ಅನ್ನುವುದು ಇಷ್ಟವಾಗುವ ವಿಚಾರ. 

ಬದುಕು ಎಂದ ಮೇಲೆ ಇಲ್ಲಿ ತೊಟ್ಟು ಸಾಗುವ ಬಗೆ ಬಗೆಯ ಮುಖವಾಡಗಳು ಹಲವಾರು. ಬದುಕಿನ ರಂಗಮಂಚದಲ್ಲಿ ಕ್ಷಣಕ್ಕೊಂದು ಪಾತ್ರ ಅನಿವಾರ್ಯ. ಇವೆಲ್ಲದರಿಂದ ಹೊರಬಂದು ತನ್ನತನದಿಂದ ಕೂಡಿದ ಅಸಲಿ ವ್ಯಕ್ತಿತ್ವವನ್ನು ಕಾಣುವ ಹಂಬಲ ವ್ಯಕ್ತ ಪಡಿಸುವ, ತುಡಿತವನ್ನು ಹೊಂದಿದ, ನಿಜವಾದ ಮುಖವನ್ನು ನೋಡಿಕೊಳ್ಳುವ ಅಸಲಿಯತ್ತನ್ನು ಕಾಣಲು ಹಾತೊರೆಯುವ ಮನವನ್ನು ಅನಾವರಣಗೊಳಿಸುವ ಕವನ "ನಿರ್ವಾಣ". ಇಲ್ಲಿ ಅನಿವಾರ್ಯ ಪರಿಸ್ಥಿತಿಗೆ ತಲೆಬಾಗಿದ್ದೇನೆಂಬ ಭಾವವಿದೆ, ವಾತ್ಸಲ್ಯದ ಶರಧಿಯಲ್ಲಿ ಕಳೆದು ಹೋಗಬೇಕೆಂಬ ಬಯಕೆ ಇದೆ. ಪ್ರತಿಯೊಬ್ಬರ ಬಳಿ ಬೇರೆ ಬೇರೆ ಮುಖವಾಡಗಳನ್ನು ತೊಡಲೇ ಬೇಕಾಗುತ್ತದೆ ಅನ್ನುವ ಅನಿವಾರ್ಯತೆ ವ್ಯಕ್ತವಾಗಿದೆ.

ದೇಶದ ಸ್ವಾತಂತ್ರ್ಯಕ್ಕೋಸ್ಕರ ಜೀವತೆತ್ತ ಬಾಪುವಿನ ಬಳಿ ಮಾಡಲ್ಪಟ್ಟ ಒಂದು ನಿವೇದನೆ. ಅತ್ಯಾಚಾರ, ಅನಾಚಾರ, ದ್ವೇಷ, ಅಸೂಯೆ, ಮೋಸ, ವಂಚನೆಗಳಲ್ಲೇ ಕಳೆದುಹೋಗುತ್ತಿರುವ ಮಂದಿ ಸ್ವಾತಂತ್ರ್ಯದ ಅರ್ಥವನ್ನೇ ಮರೆತು ಮತ್ತೆ ಅದನ್ನು ಹರಾಜಿಗಿಡಲು ಹೊರಟಿದ್ದಾರೆ ಅನ್ನೋದು ಒಂದು ಭಾವ. ನೋವು ತುಂಬಿದ ಸಾಲುಗಳು.

ಕವಿತೆಗಳೆಂದರೆ ಬರಿಯ ಸಾಲುಗಳಲ್ಲ. ಅದು ಮನದ ಅಭಿವ್ಯಕ್ತಿ, ಕವಿಯ ಮನಸ್ಸಿಗೆ ಹಿಡಿದ ಕನ್ನಡಿ, ಎಷ್ಟೇ ಕಾಲ್ಪನಿಕ ವೆಂದರೂ ನೈಜಭಾವ, ನೋವು, ಸಂತಸ, ನಲಿವುಗಳು ಇಲ್ಲಿ ಸ್ಪಷ್ಟವಾಗಿ ಅಕ್ಷರ ರೂಪದಲ್ಲಿ ಮೂಡಿರುತ್ತವೆ. ನನ್ನನ್ನೂ ಪೂರ್ತಿಯಾಗಿ ಆವರಿಸಿರುವ, ಬಹಳವಾಗಿ ಸೆಳೆದ ಒಂದು ಕವಿತೆ "ನಿರಾಕರಿಸದಿರಿ ದೊರೆ". ಬಹಳ ಚಂದದ ಭಾವಗಳಲ್ಲಿ ವ್ಯಕ್ತವಾಗಿವೆ. ಪ್ರೀತಿ, ಔದಾರ್ಯ, ಮಮತೆ, ವಾತ್ಸಲ್ಯದ ಮಹತ್ವ ಮತ್ತು ದಯವಿಟ್ಟು ಅದನ್ನು ಪರಸ್ಪರ ಹಂಚಿಕೊಳ್ಳಬೇಕು ಅನ್ನುವ ಸಂದೇಶವನ್ನು ನೀಡುತ್ತಾರೆ ಇಲ್ಲಿ ಕವಯಿತ್ರಿ.

ದೇವಿ ದೇವತೆಯರ ಹೆಸರಲ್ಲಿ, ಆರಾಧಿಸುವ ನೆಪದಲ್ಲಿ, ಹೊಗಳಿ ಹೊನ್ನ ಶೂಲಕ್ಕೇರಿಸಿ ಈ ಜಗತ್ತು ಹೆಣ್ಣನ್ನು ನಾನಾ ಬಗೆಯಲ್ಲಿ ಬಂಧಿಯಾಗಿಸಿದ್ದೆ ಹೆಚ್ಚು. ಹೆಣ್ಣು ಸಹನಾಮೂರ್ತಿ ಅನ್ನುವ ಪಟ್ಟ ಕಟ್ಟುತ್ತಲೇ ಹೇಗೆ ಸರ್ವನಾಶದತ್ತ ತಳ್ಳುತ್ತಾರೆ ಮಂದಿ, ಈ ಎಲ್ಲ ಬಂಧನಗಳಿಂದ ಹೊರಬಂದು ನೀನಾಗಿ ಬದುಕು ಹೆಣ್ಣೆ ಅನ್ನುವ ಸಂದೇಶವನ್ನು ನೀಡುವ ಒಂದು ಕವನವಿದೆ.

ಎಲ್ಲವೂ ಯಂತ್ರಮಯವಾಗಿರುವ ಯಾಂತ್ರಿಕ ಬದುಕಿನೆಡೆಗೆ ಒಂದು ನೋಟ. ಬದಲಾದ ಕಾಲಘಟ್ಟದಲ್ಲಿ ಇದು ಅನಿವಾರ್ಯ. ಯಂತ್ರಗಳ ಜೊತೆಗೆ ಮನಸ್ಸು, ಹೃದಯ, ಮನುಷ್ಯನ ನಡೆ ನುಡಿಗಳು ಯಾಂತ್ರಿಕವಾಗುತ್ತಿರುವುದು ವಿಷಾದನೀಯ. ಇವತ್ತು ಬದುಕು ಎಷ್ಟೊಂದು ಕೃತಕವಾಗಿದೆಯೆಂದರೆ ಸಂಜೆಯ ಹರಟೆಯ ಕಟ್ಟೆಗಳಿಲ್ಲ, ನೀರು ತರುವ ನೆಪದಲ್ಲಿ ಮುಕ್ತವಾಗಿ ಮಾತನಾಡಿ ಮನಸ್ಸಿನ ದುಗುಡಗಳನ್ನು ಹೊರಹಾಕಲು ಸಹಕಾರಿಯಾಗುವ ಊರ ಬಾವಿಗಳು ಇಲ್ಲ, ಪರಿಣಾಮ ಮಾನವರ ಬದುಕು ರೋಬೋಟ್ ಗಳಂತೆ ಆಗಿದೆ ಅನ್ನೋದನ್ನ ಸ್ಪಷ್ಟವಾಗಿ ಅನಾವರಣಗೊಳಿಸುವ ಕವನ "ಚಾಚುತ್ತಿವೆ ಕೈಗಳು".

ಇವತ್ತು ಹಾಲು ಹಾಲಾಹಲ, ನೀರು ಕಲ್ಮಶ, ಗಾಳಿ ಕಲುಷಿತಗೊಳ್ಳಲು ಯಾರು ಕಾರಣರು ಅನ್ನುವ ಪ್ರಶ್ನೆ. ಈ ಪ್ರಶ್ನೆ ಓದುಗರನ್ನು ಎಲ್ಲವನ್ನು ಅವಲೋಕಿಸುವ ಅತ್ತ ತಳ್ಳುತ್ತದೆ ಚಿಂತನೆಗೆ ಹಚ್ಚುತ್ತದೆ.

ಎರಡು ವಿಭಿನ್ನ ಭಾವಗಳನ್ನು ಒಂದೇ ಕವನದೊಳಗೆ ಹಿಡಿದಿಟ್ಟ ಕವಿತೆ "ತೋಚುತ್ತಿಲ್ಲ".

ಮನಸ್ಸು ವಿಶಾಲ ಸಾಗರ. ಅಲ್ಲಿ ಹುಟ್ಟಿಕೊಳ್ಳುವ ವಿಚಾರಧಾರೆಗಳ ಅಲೆಗಳು ಹಲವಾರು. ಅವನ್ನೆಲ್ಲ ಬರಹ ರೂಪಕ್ಕೆ ತರಲು ಅನುಮಾನಿಸುವ, ಹಿಂಜರಿಯುವ ಮನಸ್ಸಿನ ತಾಕಲಾಟ ಅಕ್ಷರ ರೂಪಕ್ಕೆ ಬಂದ ಕವನ "ಬರಹ ಚಿತ್ತಾರದ ಕೌದಿ". ಬರಹ ಮನಸ್ಸಿನ ತಲ್ಲಣ, ತುಡಿತ, ತವಕ, ನೋವು, ನಲಿವುಗಳನ್ನೆಲ್ಲವನ್ನು ಹೊರಹಾಕಲು ಇರುವ ಒಂದು ಅದ್ಬುತ ದಿವ್ಯ ಔಷಧವೇ ಸರಿ. ಮನಸ್ಸಿನ ಬೇಗುದಿ ಬರಹ ರೂಪಕ್ಕೆ ಇಳಿದಾಗ ನಿರಾಳವಾಗುತ್ತದೆ, ನೆಮ್ಮದಿಯನ್ನು ಹೊಂದುತ್ತದೆ ಅನ್ನೋದು ಸ್ವತಃ ನನ್ನ ಅನುಭವವೂ ಹೌದು.

ಒಂದು ಸಸಿಯನ್ನು ನೆಟ್ಟು ಕಳೆಗಳನ್ನು ಎಲ್ಲಾ ತೆಗೆದು ಪೊರೆಯುವ ರೀತಿಯೊಂದಿಗೆ ಬದುಕನ್ನು ಹಸನಗೊಳಿಸುವ ರೀತಿಯ ತುಲನೆ. ಬದುಕಿಗೂ ಪ್ರಕೃತಿಗೂ ಅವಿನಾಭಾವ ನಂಟಿದೆ. ಪ್ರಕೃತಿ ನಮಗೆ ಹೇಳುವ, ತೋರಿಸಿಕೊಡುವ ಒಂದೊಂದು ಪಾಠ ದೊಳಗೂ ಸುಂದರ ಬದುಕಿನ ಸೂತ್ರ ಅಡಗಿದೆ. ಅದನ್ನು ಅರಿತು ಬಾಳಲ್ಲಿ ಅಳವಡಿಸಿಕೊಂಡು ಜೀವನವನ್ನು ಸುಂದರವಾಗಿಸಿಕೊಳ್ಳುವುದು ನಮ್ಮ ಕೈಯಲ್ಲಿ ಇದೆ.

ಹೆಣ್ಣನ್ನು ಈ ಜಗತ್ತು ತನ್ನ ಸ್ವಾರ್ಥಕ್ಕೆ ವಿಧವಿಧವಾಗಿ ಪರಿಪರಿಯಾಗಿ ಬಳಸಿಕೊಳ್ಳುವ ರೀತಿ ಅನಾವರಣಗೊಂಡಿದ್ದು "ಮಾಯೆ" ಅನ್ನುವ ಕವಿತೆಯಲ್ಲಿ. ಬೇಕೆಂದಾಗ ಹೊಗಳಿ ಎತ್ತರದಲ್ಲಿ ಇರಿಸುತ್ತಾರೆ ಬೇಡವೆನಿಸಿದಾಗ ಜರಿದು, ತುಳಿದು, ಅವಳ ನಾಶಕ್ಕೆ ಮುನ್ನುಡಿ ಹಾಡುತ್ತಾರೆ. ಬಹುಶಃ ಹೆಣ್ಣೆಂಬ ಜೀವ ಯಾವುದೇ ನೋವಿಲ್ಲದೆ, ಹಂಗಿಲ್ಲದೆ, ಬಾಳಿ ಬದುಕಿದ ಉದಾಹರಣೆ ಇಲ್ಲಿ ಇತಿಹಾಸದಲ್ಲೇ ಇಲ್ಲವೇನೋ. ಪ್ರತಿಯೊಬ್ಬ ಹೆಣ್ಣು ಒಂದಿಲ್ಲೊಂದು ರೀತಿಯಲ್ಲಿ ದೌರ್ಜನ್ಯ ,ನಿರ್ಲಕ್ಷ್ಯಕ್ಕೆ ಒಳಗಾಗಿಯೆ ಇರುತ್ತಾಳೆ.

ಕೇವಲ ಹೆಣ್ಣು ಮಕ್ಕಳ ಕುರಿತಾಗಿ, ಅವರ ಬವಣೆ ತೊಳಲಾಟದ ಕುರಿತಾಗಿ ಕವಯಿತ್ರಿ ಇಲ್ಲಿ ಕವನಗಳನ್ನು ರಚಿಸಿದ್ದಾರೆ ಅಂದುಕೊಂಡರೆ ಅದು ತಪ್ಪು ಕಲ್ಪನೆ. ಜಗವನ್ನೇ ಬೆಳಗುವ ಸೂರ್ಯನ ಕುರಿತಾಗಿ ನಮಗಿಲ್ಲಿ ಕಾಣಸಿಗುವ ಸಾಲುಗಳು, ಒಂದರಿಂದ ಒಂದು ಚಂದ. ಮುಸ್ಸಂಜೆಯ ಬಣ್ಣದ ವರ್ಣನೆ ಓದುಗರ ಮನಸ್ಸನ್ನು ತಂಗಾಳಿಯಂತೆ ಸ್ಪರ್ಶಿಸುತ್ತದೆ ಇಲ್ಲಿ.

ಹನಿ ಒಡೆಯುತ್ತಿದೆ ಕವನ ಸಂಕಲನದೊಳಗೆ ಕನಸಿನ ಹನಿಯಿದೆ, ಬದುಕಿನ ಆಯಾಮಗಳ ಪರಿಚಯಿಸುವ ಸಾಲುಗಳಿವೆ, ಹೆಣ್ಣೆಂಬ ಆರ್ದ್ರ ಜೀವ ಬದುಕಿನ ಪಯಣದಲ್ಲಿ ಹೊಂದಿಕೊಂಡು ಹೋಗುವ, ಸವೆಸುವ ಹಾದಿಗಳ ಪರಿಚಯ ಇದೆ, ಭರವಸೆ ತುಂಬುವ ಸಾಲುಗಳಿವೆ, ಕನಸುಗಳನ್ನೇ ತ್ಯಾಗ ಮಾಡಿದ ಅವೆಷ್ಟೋ ಜೀವಗಳ ನೋವು ಇಲ್ಲಿ ಭಾವವಾಗಿ ಮನಸ್ಸನ್ನು ಸ್ಪರ್ಶಿಸುವಂತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಗಿಡ, ಮರ, ನದಿ, ತೊರೆ ಪ್ರಕೃತಿಯೊಳಗೆಯೆ ಬದುಕು ಮಿಳಿತವಾಗಿದೆ ಅನ್ನುವ ಸತ್ಯ ಅನಾವರಣಗೊಂಡಿದೆ. ಒಟ್ಟಿನಲ್ಲಿ ಹನಿಯೊಡೆಯುತ್ತಿದೆ ಕವನ ಸಂಕಲನದ ಪ್ರತಿಯೊಂದು ಕವನವೂ ಬಹಳ ಅರ್ಥಪೂರ್ಣವಾಗಿ ಇದ್ದು ಮನಸ್ಸಿಗೆ ಹಿಡಿಸಿದವು. 

ಈ ಕವನ ಸಂಕಲನದ ಹೊರತಾಗಿ ಜಯಲಕ್ಷ್ಮಿಯವರಿಂದ ಸಾಹಿತ್ಯ ಕ್ಷೇತ್ರಕ್ಕೆ ದೊರೆತ ಸೇವೆ "ಬೇಬಿ" ಅನ್ನುವ ಅನುವಾದಿತ ನಾಟಕ. ಇದರ ಮೂಲ ಮರಾಠಿ ಭಾಷೆಯಲ್ಲಿದೆ. ಮುಕ್ಕು ಚಿಕ್ಕಿಯ ಕಾಳು ಕಾದಂಬರಿ ಹಾಗೂ ಇವರ ವಿಶೇಷ ಸಂಪಾದಕತ್ವದಲ್ಲಿ ಬಿಡುಗಡೆಗೊಂಡ ಒಂದು ವಿಶೇಷ ಕೃತಿ "ಹೇಳತೇವ ಕೇಳ". ಇದು ವಿಶೇಷ ಯಾಕೆಂದರೆ ಇದರಲ್ಲಿ ಹಲವಾರು ಮಹಿಳೆ ಹಾಗೂ ಪುರುಷರ ಬರಹಗಳಿವೆ. ಅನೇಕ ಮಂದಿಯ ಅಂತರಂಗದ ಧ್ವನಿಗೆ ಇಲ್ಲಿ ಅಕ್ಷರ ರೂಪ ದೊರೆತು ಸಾಹಿತ್ಯ ಪ್ರೇಮಿಗಳನ್ನು ತಲುಪುವಂತೆ ಆಗಿದೆ. ಪಾದರಸದಂತೆ ಚುರುಕಾಗದ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಿರುವ ಜಯಲಕ್ಷ್ಮಿ ಪಾಟೀಲ್ ಅವರನ್ನು ಯಾರೇ ಆದರೂ ಹೇಗೆ ಅಭಿಮಾನಿಸದೆ, ಗೌರವಿಸದೆ ಇರಲು ಸಾಧ್ಯ?.

- ನಯನ ಬಜಕೂಡ್ಲು

ಜಯಲಕ್ಷ್ಮಿ ಪಾಟೀಲ್ ಅವರ ಲೇಖಕ ಪರಿಚಯ...

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...