ಕನ್ನಡ ಭಾಷಾಂತರ ಮತ್ತು ಪ್ರದೇಶಗಳು

Date: 07-11-2020

Location: ಬೆಂಗಳೂರು


’ನಾಡುನುಡಿಯ ಚರಿತ್ರೆಯನ್ನು ರೂಪಿಸುವಲ್ಲಿ ಭಾಷಾಂತರಗಳ ಪಾತ್ರ ಮಹತ್ವದ್ದು’ ಎನ್ನುವ ವಿಮರ್ಶಕಿ-ಲೇಖಕಿ ಆರ್‌. ತಾರಿಣಿ ಶುಭದಾಯಿನಿ ಅವರು ’ಕನ್ನಡದಲ್ಲಿ ನಡೆದ ಭಾಷಾಂತರಗಳು ಪ್ರಾದುರ್ಭಾವಕ್ಕೆ ಬರುತ್ತಿದ್ದ ನಾಡು ಮತ್ತು ಉಲಿಯ ಸ್ವರೂಪವನ್ನು ನಿರೀಕ್ಷಿಸಿದ ಪರಿಣಾಮವೇ ಹೊಸಗನ್ನಡದ ಉದಯಕ್ಕೆ ಪ್ರೇರಣೆಯಾಯಿತು’ ಎಂದು ವಿವರಿಸಿದ್ದಾರೆ.

ಭಾಷಾಂತರಗಳು ನಡೆಯುವುದು ಕೆಲವು ವಿಶಿಷ್ಟ ಸಂದರ್ಭಗಳಲ್ಲೆಂತೊ ಅಂತೆಯೇ ಅವು ನಿರ್ದಿಷ್ಟ ಪ್ರದೇಶಗಳಲ್ಲಿ ನಡೆಯುವುದು ಸಹ ಚಾರಿತ್ರಿಕವಾಗಿ ವಿಶಿಷ್ಟವೆನಿಸುವಂತದ್ದು. ಭಾಷಾಂತರಗಳು ನಡೆಯುವುದು ಎರಡು ಭಾಷಿಕ ಸಂಸ್ಕೃತಿಗಳು ಕೊಡುಕೊಳುವಿಕೆಯನ್ನು ಮಾಡಿಕೊಳ್ಳುವ ಸಂದರ್ಭದಲ್ಲಿ. ಇದಕ್ಕೆ ಚಾರಿತ್ರಿಕವಾದ ಹಿನ್ನೆಲೆಯೂ ಇರುತ್ತದೆ. ಹೊಸಗನ್ನಡದ ಸಂದರ್ಭದಲ್ಲಿ ಭಾಷಾಂತರ ನಡೆಯುವುದು ವಸಾಹತುಶಾಹಿ ಕಾಲದಲ್ಲಿ. ಕನ್ನಡದ ವಸಾಹತು ಆಡಳಿತದ ಚರಿತ್ರೆಯು ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ ಆರಂಭವಾಗುತ್ತದೆ. ಟಿಪ್ಪು ಮರಣಾ ನಂತರ ಬ್ರಿಟಿಷರು ಕೈಗೆತ್ತಿಕೊಂಡ ಮೈಸೂರು ಮತ್ತು ಕೊಡಗಿನ (ಕೆನರಾ ಪ್ರದೇಶಗಳನ್ನೂ ಸೇರಿದಂತೆ) ರಾಜಕಾರಣವು ಬ್ರಿಟಿಷ್ ಆಡಳಿತದ ಸ್ವರೂಪವನ್ನು ತೋರಿತು. ಆ ಹಿಂದಿನವರೆಗೂ ಮಿಷನರಿಗಳು ಕನ್ನಡ ನಾಡಿನ ಹಲವು ಭಾಗಗಳಲ್ಲಿ ನೆಲೆಗೊಂಡಿದ್ದರು. ಅವರ ಚಟುವಟಿಕೆಗಳು ಶೈಕ್ಷಣಿಕ ಹಾಗೂ ಮತಪ್ರಸಾರಗಳಿಗೆ ಸೀಮಿತವಾಗಿದ್ದರೂ ಅವರು ತಮ್ಮ ಉದ್ದೇಶಗಳಿಗಾಗಿ ಮಾಡಿದ ಕನ್ನಡ ಶೋಧನೆಯ ಕೆಲಸವು ಕನ್ನಡಿಗರಿಗೆ ಪಾಶ್ಚಾತ್ಯ ಮಾದರಿಯಲ್ಲಿ ಕನ್ನಡವನ್ನು ಸುವ್ಯವಸ್ಥಿತವಾಗಿ ಜೋಡಿಸಿಕೊಟ್ಟಿತ್ತು. ಕನ್ನಡಿಗರಿಗೆ ಪಾಶ್ಚಾತ್ಯ ಸಂಪರ್ಕವು ಶ್ರೀನಿವಾಸ ಹಾವನೂರರು ಗುರುತಿಸುವಂತೆ, ಆಡಳಿತ ವ್ಯವಹಾರ, ಮುದ್ರಣ ಯಂತ್ರ, ಕ್ರಿಸ್ತಮತ ಪ್ರಚಾರ, ಮತ್ತು ಹೊಸ ಶಿಕ್ಷಣ ಪದ್ಧತಿಯ ವಲಯಗಳಲ್ಲಿ ದಟ್ಟವಾಗಿರುವುದನ್ನು ಗಮನಿಸಬಹುದು. (ಹಾವನೂರ 2011:7)

ಕನ್ನಡ ನಾಡು ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದರಿಂದ ಭಾಷಾಂತರ ಚಟುವಟಿಕೆಗಳು ಸಹ ಪ್ರಾಂತೀಯವಾಗಿ ವಿವಿಧ ಸಮಾಜೊ-ರಾಜಕೀಯ ಪ್ರಭಾವಗಳಿಗೆ ಒಳಪಟ್ಟು ನಡೆದಿದ್ದವು ಎಂದು ಊಹಿಸಬಹುದು. ಮಂಗಳೂರು ಮತ್ತು ಬಳ್ಳಾರಿ ಪ್ರಾಂತ್ಯಗಳಲ್ಲಿ ಮಿಷನರಿ ಚಟುವಟಿಕೆಗಳು ಹೆಚ್ಚಿದ್ದರಿಂದ ಅದರೊಂದಿಗೆ ಭಾಷಾಂತರ ಚಟುವಟಿಕೆಗಳು ಹೆಚ್ಚಾಗಿದ್ದರಿಂದ ಈ ಭಾಗಗಳಲ್ಲಿ ಭಾಷಾಂತರದ ಪರಿಕಲ್ಪನೆಯು ಜನಸಾಮಾನ್ಯರಲ್ಲಿ ಸಂವಹನಗೊಂಡಿತ್ತು. ಪಾಶ್ಚಾತ್ಯ ಸಂಪರ್ಕಗಳಿದ್ದ ಈ ಭಾಗಗಳಲ್ಲಿ ’ಕೊಡು ಕೊಳುವಿಕೆ’ಯ ವಿನಿಮಯ ಪ್ರಕ್ರಿಯೆ ಸಾಮಾನ್ಯವಾಗಿತ್ತು. ಈ ನಿರ್ದಿಷ್ಟ ಜಾಗಗಳಲ್ಲಿ ನಡೆಯುತ್ತಿದ್ದ ಭಾಷಾಂತರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಕಾಲದ ಸಂಸ್ಕೃತಿ ಎನ್ನುವುದು ಚಾರಿತ್ರಿಕವಾಗಿ ಮತ್ತು ಭೌಗೋಳಿಕವಾಗಿ ಅನ್ವಯಿಸುವಂತದ್ದು. ಉದಾಹರಣೆಗೆ ಮದ್ರಾಸ್-ಮಂಗಳೂರು ಪ್ರಾಂತ್ಯಗಳು ಬ್ರಿಟಿಷ್ ಆಡಳಿತಕ್ಕೆ ನೇರ ಒಳಪಟ್ಟಿದ್ದರಿಂದ ಮಂಗಳೂರು ಸಾಹಿತ್ಯ ಚಟುವಟಿಕೆಗಳಲ್ಲಿ ಭಾಷಾಂತರದ ಸ್ವರೂಪ ಬೇರೆಯಾಗಿದೆ. ಮೈಸೂರು ಪ್ರಾಂತ್ಯದಲ್ಲಿ ಮಹಾರಾಜರ ಆಡಳಿತ ಇದ್ದ ಸ್ಥಳಗಳಲ್ಲಿ ಇಂಗ್ಲಿಷ್ ಶಿಕ್ಷಣ ರಾಜ್ಯಾಡಳಿತದ ಭಾಗವಾಗಿದ್ದರೂ ಅಲ್ಲಿ ಅಧಿಕಾರ ವಿವೇಚನೆ ವಸಾಹತುಶಾಹಿ+ರಾಜಾಡಳಿತ ಮತ್ತು ದೇಶೀ ಪರಿಸರ ಎಂಬ ಸಂಗತಿಗಳು ಸೇರಿಕೊಳ್ಳುತ್ತವೆ. ಕೆ.ವಿ.ನಾರಾಯಣ ಅವರು ಗಮನಿಸುವಂತೆ, ಕನ್ನಡ ಮಾತನಾಡುತ್ತಿದ್ದ ವಿವಿಧ ಪ್ರದೇಶಗಳಲ್ಲಿ ಇಂಗ್ಲಿಷಿನ ಪ್ರಭಾವ ಸಮಪ್ರಮಾಣದಲ್ಲಿ ಇರಲಿಲ್ಲ. ಅರಸರ ಆಳ್ವಿಕೆಯಲ್ಲಿದ್ದ ಪ್ರದೇಶದಲ್ಲಿ ಈ ಪ್ರಭಾವ ಅಧಿಕವಾಗಿದ್ದರೆ ನಿಜಾಮರ ಆಳ್ವಿಕೆಗೆ ಅಧೀನವಾಗಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅತ್ಯಂತ ಕನಿಷ್ಠ ಪ್ರಮಾಣದಲ್ಲಿತ್ತು. ಮುಂಬಯಿ ಆಳ್ವಿಕೆಯ ಕರ್ನಾಟಕ ಪ್ರದೇಶ ಮತ್ತು ಕರಾವಳಿಯ ಪ್ರದೇಶಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡಗಳ ಸಂಬಂಧ ಈ ಎರಡು ತುದಿಗಳ ನಡುವೆ ಇದ್ದಂತೆ ತೋರುತ್ತದೆ. (ನಾರಾಯಣ, 2005:13-4)

ಹೊಸಗಾಲದ ಕನ್ನಡ ಭಾಷಾಂತರಗಳನ್ನು ಮತಕ್ಕಾಗಿ, ಶಿಕ್ಷಣಕ್ಕಾಗಿ ಮಾಡತೊಡಗಿದ್ದು ಕರ್ನಾಟಕದಲ್ಲಿ ಬಂದು ನೆಲೆಸಿದ ಮಿಷನರಿಗಳು. ಕನ್ನಡದ ಆಧುನಿಕ ಇತಿಹಾಸದ ಪುಟಗಳಲ್ಲಿ ಮಿಷನರಿಗಳ ಪಾತ್ರವು ಮಹತ್ವಪೂರ್ಣವಾಗಿದೆ. ಕನ್ನಡದಲ್ಲಿ ಭಾಷಾಂತರವು ಮೊದಲುಗೊಂಡಿದ್ದು ಮಿಷನರಿ ಹಾಗು ಶೈಕ್ಷಣಿಕ ಚಟುವಟಿಕೆಗಳ ಭಾಗವಾಗಿ. ಮಿಷನರಿಗಳು ಧರ್ಮ ಪ್ರಸರಣದ ದೃಷ್ಟಿಯಿಂದ ಬೈಬಲ್ ಭಾಷಾಂತರಗಳನ್ನೂ ಧಾರ್ಮಿಕ ಪಠ್ಯಗಳನ್ನೂ ಭಾಷಾಂತರ ಮಾಡಲಾರಂಭಿಸಿದರು. ರೀಡ್ ಬೈಬಲ್ ಅನ್ನು ಪರಿಷ್ಕಾರ ಮಾಡಿ ಭಾಷಾಂತರ ಮಾಡಿದ್ದ. ಆದರೆ ಈ ನಡುವೆ ಈ ಮಿಷನರಿಗಳು ಧಾರ್ಮಿಕ ಪಠ್ಯಗಳಲ್ಲದೆ ಇತರೆ ಪಠ್ಯಗಳನ್ನು ಸಹ ಭಾಷಾಂತರ ಮಾಡಿದ್ದರು. ಗಾಡ್ ಫ್ರೇ ವೈಗ್ಲೆ ಇಂಗ್ಲಿಷ್ ಲೇಖಕ ಬನಿಯಾನ್ ಕೃತಿ- ’ಪಿಲಿಗ್ರಿಮ್ಸ್ ಪ್ರೊಗ್ರೆಸ್’ ಅನ್ನು ’ಯಾತ್ರಿಕನ ಸಂಚಾರ’ ಎಂಬುದಾಗಿ ಅನುವಾದಿಸಿದ್ದ. ಇದನ್ನು ಬಳ್ಳಾರಿ ಬಾಸೆಲ್ ಮಿಶನ್ನಿನವರೇ ಮುದ್ರಣ ಮಾಡಿದ್ದರು. ಪ್ರಾದೇಶಿಕ ಭಾಷೆಯನ್ನು ಕಲಿಯುವ ಮೂಲಕ ಸ್ಥಳೀಯರನ್ನು ಸೆಳೆಯಲು ಅನುಕೂಲ ಎನ್ನುವ ಧೋರಣೆಯಿಂದ ಆರಂಭಗೊಂಡ ಮಿಶನರಿ ಚಟುವಟಿಕೆಗಳ ವ್ಯಾಪ್ತಿ ಅವರಿಗರಿವಿಲ್ಲದೆ ಚಾರಿತ್ರಿಕವಾಗಿ ಹಿಗ್ಗತೊಡಗಿತು.

ಮಿಶನರಿಗಳು ಕನ್ನಡವನ್ನು ಹೊಸಗನ್ನಡದ ಲಿಪಿಯನ್ನಾಗಿಸಿ ಅದನ್ನು ಅಚ್ಚಿಗೆ ತಕ್ಕನಾದ ಭಾಷೆಯನ್ನಾಗಿ ಬಳಸಿದರು. 1917ರಲ್ಲಿ ಮುದ್ರಿತವಾದ ವಿಲಿಯಂ ಕ್ಯಾರಿಯ ’ಗ್ರಾಮರ್ ಆಫ್ ದ ಕರ್ನಾಟಕ ಲಾಂಗ್ವೇಜ್’ ಕಲ್ಕತ್ತಾದ ಸಿರಾಂಪುರ ಪ್ರೆಸ್ಸಿನಲ್ಲಿ ಮುದ್ರಿತವಾಗಿತ್ತು. ಆನಂತರ ಮುದ್ರಣವು ಮದ್ರಾಸಿನಲ್ಲಿ ಲಭ್ಯವಾಗತೊಡಗಿತು. ತದನಂತರ ಮಿಶನರಿಗಳು ತಾವೇ ಅಚ್ಚು ಹಾಕುವ ಕೆಲಸಕ್ಕೆ ತೊಡಗಿದರು. ಬಳ್ಳಾರಿಯಲ್ಲಿ ಹ್ಯಾಂಡ್ಸ್‌ನ ಪ್ರಯತ್ನವಾದ ನಂತರ ಬೆಂಗಳೂರಿನ ವೆಸ್ಲಿಯನ್ ಪ್ರೆಸ್ ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಆರಂಭವಾಯಿತು(1840). ಇಲ್ಲಿ ಮಕ್ಕಳ ಪಠ್ಯಪುಸ್ತಕಗಳು ಅಚ್ಚಾದವು. ಮಂಗಳೂರಿನಲ್ಲಿ ಕ್ಯಾಥೊಲಿಕರ ಒಡೆತನದಲ್ಲಿದ್ದ ಕೊಡಿಯಾಲ ಬೈಲ್‌ಪ್ರೆಸ್ ಕೂಡ ಹತ್ತೊಂಬತ್ತನೆಯ ಶತಮಾನದಲ್ಲಿ ಹೆಸರಾಗಿದ್ದ ಮುದ್ರಣಾಲಯವಾಗಿತ್ತು. ಈ ಎಲ್ಲ ಚಟುವಟಿಕೆಗಳು ಮಿಶನರಿ ಮತ್ತು ಬ್ರಿಟಿಷ್ ಅಧಿಕಾರಿಗಳ ಪ್ರಯತ್ನಬಲದಿಂದ ಆದವು. ಕನ್ನಡದ ಮಟ್ಟಿಗೆ, ಕನ್ನಡದ ಭಾಷಾಂತರಗಳ ಮಟ್ಟಿಗೆ ಮಿಶನರಿಗಳು ಈ ಬದಲಾವಣೆಯ ಕಾರ್ಯದ ಮುಂಚೂಣಿಯಲ್ಲಿದ್ದರು. ಈ ಭಾಷಾಂತರದ ಚಟುವಟಿಕೆಗಳು ಸಹಜವಾಗಿ ಮಿಷನರಿಗಳು ನೆಲೆಸಿದ್ದ ಕಾರ್ಯಕ್ಷೇತ್ರಗಳ ಪ್ರದೇಶಗಳಲ್ಲಿ ನಡೆಯುತ್ತಿದ್ದುದರಿಂದ ಅವು ಶೈಕ್ಷಣಿಕವಾಗಿ ಮುಂದುವರೆದವು. ಮುಂದೆ ಪಾಶ್ಚಾತ್ಯ ಶಿಕ್ಷಣದ ಪ್ರಭಾವದಿಂದ ಆಧುನಿಕತೆಯು ನಾಡಿನಲ್ಲಿ ಹರಡಲಾರಂಭಿಸಿತು.

ಮಿಶನರಿಗಳು ಶಿಕ್ಷಣಕ್ಕೆ ನೀಡಿದ ಆದ್ಯತೆಯಿಂದಾಗಿ ಶಾಲೆಗಳು ಕರ್ನಾಟಕದಲ್ಲಿ ಆರಂಭಗೊಳ್ಳತೊಡಗಿದವು. ಅದುವರೆಗು ಇದ್ದ ಕನ್ನಡದ ಸಂದರ್ಭದಲ್ಲಿ ಶೈಕ್ಷಣಿಕ ಸಂದರ್ಭವನ್ನು ಗಮನಿಸಿದರೆ ದೇಶಿ ಶಿಕ್ಷಣ ಪದ್ಧತಿಯಲ್ಲಿನ ಪಠ್ಯಕ್ರಮವು ಬಾಯಿಪಾಠ, ಅಂದರೆ ಮೌಖಿಕ ಪ್ರಧಾನವಾಗಿತ್ತು. ಅಯ್ಯಗಳು ಹೇಳಿಕೊಡುತ್ತಿದ್ದ ಪಾಠದ ಮಠಗಳು, ಬಾಯಿ ಲೆಕ್ಕ ಮುಂತಾದವುಗಳು ರೂಢಿಯಲ್ಲಿದ್ದ ಪದ್ಧತಿಗಳು. ವಿದೇಶಿ ಪಠ್ಯಕ್ರಮದಲ್ಲಿ ಮಿಶನರಿ ಶಾಲಾ ಶಿಕ್ಷಣ ಕ್ರಮ ಹಾಗೂ ಸರ್ಕಾರಿ ಶಾಲೆಗಳ ಪಠ್ಯಕ್ರಮಗಳು ಕಲಿಸುತ್ತಿದ್ದುದು ವಿಜ್ಞಾನ, ದೇಶಿಭಾಷೆ, ಸಮಾಜ ವಿಜ್ಞಾನ, ಲೆಕ್ಕ ಇತ್ಯಾದಿಗಳು ಒಂದು ದೇಶೀ ಮಾದರಿಯನ್ನು ರೂಪಿಸಿದ್ದವು. ಆದರೆ ಮಿಶನರಿಗಳು ಬಂದ ಮೇಲೆ ಶೈಕ್ಷಣಿಕ ಸ್ವರೂಪ ಬದಲಾಗತೊಡಗಿತು. ಬಾಸೆಲ್ ಮಿಶನ್ ಸಂಸ್ಥೆಯು ಮಂಗಳೂರು, ಧಾರವಾಡ ಮತ್ತು ಬಳ್ಳಾರಿಗಳಲ್ಲಿ ಶಾಲೆಗಳನ್ನು ತೆಗೆಯಿತು. ಲಂಡನ್ ಮಿಷನರಿ ಸೊಸೈಟಿಯವರು ಬಳ್ಳಾರಿ ಮತ್ತು ಬೆಳಗಾವಿ ಪ್ರದೇಶಗಳನ್ನು ತಮ್ಮ ಕಾರ್ಯಕ್ಷೇತ್ರಗಳನ್ನಾಗಿ ಮಾಡಿಕೊಂಡಿದ್ದರು. ಆನಂತರ ಬಾಸೆಲ್ ಮಿಶನ್ನಿನವರು ಮಂಗಳೂರನ್ನು ತಮ್ಮ ಕೇಂದ್ರ ಸ್ಥಳವನ್ನಾಗಿ ಮಾಡಿಕೊಂಡಿದ್ದರು. ಇದೇ ಸಂಸ್ಥೆಯವರು ತಮ್ಮ ಶಾಖೆಯನ್ನು ಧಾರವಾಡದಲ್ಲಿಯೂ ತೆಗೆದರು. ಈ ಸ್ಥಳಗಳಲೆಲ್ಲ ಮಿಷನರಿಗಳು ಶಾಲೆಗಳನ್ನು ತೆರೆದರು. ಇಂಗ್ಲಿಷ್ ಶಾಲೆಗಳು ಆರಂಭಗೊಂಡಿದ್ದು ಇವರ ಕಾಲದಲ್ಲಿಯೇ. ನಂತರ ಇವರ ಕಾರ್ಯಕ್ಷೇತ್ರಗಳು ವಿಸ್ತರಣೆಯಾಗುತ್ತ ಸುತ್ತಮುತ್ತಲ ಪ್ರದೇಶಗಳಲೆಲ್ಲಾ ಹರಡಲಾರಂಭಿಸಿತು. ಅದರ ಭಾಗವಾಗಿ ಹುಬ್ಬಳ್ಳಿ, ಗದಗ, ಬಳ್ಳಾರಿ ಸುತ್ತಮುತ್ತ ಇರುವ ಪ್ರದೇಶಗಳಲ್ಲೆಲ್ಲ ಮಿಷನರಿ ಚಟುವಟಿಕೆಗಳು ಹಬ್ಬಿದವು. ಮಿಷನರಿ ಪಾದ್ರಿಗಳು ಆರಂಭಿಸಿದ ಶಾಲೆಗಳು ದೇಶಭಾಷೆಯಲ್ಲಿ ಶಿಕ್ಷಣವನ್ನು ಕೊಡುವಲ್ಲಿ ಆಸಕ್ತಿ ಹೊಂದಿದ್ದರಿಂದ ಶಾಲಾ ಪಠ್ಯಪುಸ್ತಕಗಳಿಗಾಗಿ ಒಂದು ಹಂತದಲ್ಲಿ ಸೂಕ್ತ ಪಠ್ಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಯಿತು. ಆ ಸಮಯದಲ್ಲಿ ಭಾಷಾಂತರಗಳು ಮುನ್ನೆಲೆಗೆ ಬಂದವು. ತದನಂತರ, ಭಾಷಾಂತರಗಳು ಶಿಕ್ಷಣವನ್ನು ರೂಪಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸಲಾರಂಭಿಸಿದವು. ಡೈಗ್ಲಾಸಿಯಾ ಮೊದಲೇ ರೂಢಿಯಿದ್ದ ಸ್ಥಳೀಯರಿಗೆ ಇಂಗ್ಲಿಷು ಇನ್ನೊಂದು ಭಾಷೆಯಾಗಿ ಪರಿಣಮಿಸಿತು. ಅದಕ್ಕೆ ಪೂರಕವಾಗಿ ಭಾಷಾಂತರಗಳು ನಡೆದವು. ರೆವೆರಂಡ್ ಕಿಟ್ಟೆಲ್ ಅವರು ಪಠ್ಯಪುಸ್ತಕ ಹಾಗು ಶಾಲಾಶಿಕ್ಷಣದ ಉದ್ದೇಶದಿಂದ ’ಇಂಗ್ಲೆಂಡ್ ದೇಶದ ಚರಿತವು’(1867), ’ಹಿಂದೂ ದೇಶದ ಚರಿತವು’(1866) ಎಂಬ ಪುಸ್ತಕಗಳನ್ನು ಭಾಷಾಂತರಿಸಿದ್ದಲ್ಲದೆ ’ಕನ್ನಡ ಪಾಠಗಳ ಮೂರನೆಯ ಪುಸ್ತಕವು(1870) ಎಂಬ ಭಾಷಾಂತರದಿಂದ ಕೂಡಿದ ಪಠ್ಯಪುಸ್ತಕವನ್ನು ರಚಿಸಿದ್ದರು.ಇವು ಗಮನಾರ್ಹವೆನಿಸುವ ಭಾಷಾಂತರ ಚಟುವಟಿಕೆಗಳು.

ರಾಜಕೀಯವಾಗಿ ಹತ್ತೊಂಬತ್ತನೇ ಶತಮಾನದ ಕರ್ನಾಟಕದ ನಕ್ಷೆಯು ಚದುರಿದ ಚಿತ್ರವಾಗಿತ್ತು. ಇನ್ನು ಇಲ್ಲಿ ನಡೆಯುತ್ತಿದ್ದ ಭಾಷಾಂತರ ಚಟುವಟಿಕೆಯನ್ನು ಒಂದು ನಕ್ಷೆಯ ರೂಪುರೇಷೆಯಲ್ಲಿ ಗುರುತಿಸಬಹುದಾದರೆ ಮೈಸೂರು ಪ್ರಾಂತ್ಯ, ಉತ್ತರ ಕರ್ನಾಟಕದ ಧಾರವಾಡ, ಬೆಳಗಾಂ ಸೀಮೆಗಳು, ಇತ್ತ ಕೆನರಾದಲ್ಲಿ ಕೆಲವು ಪ್ರದೇಶಗಳಲ್ಲಿ. ಕರ್ನಾಟಕವು ಏಕೀಕರಣದ ಪೂರ್ವದಲ್ಲಿ ಬ್ರಿಟಿಷ್ ಆಡಳಿತಕ್ಕನುಗುಣವಾಗಿ ಅನೇಕ ಪ್ರಾಂತ್ಯಗಳಾಗಿ ಬೇರೆ ಬೇರೆ ಆಡಳಿತ ಭಾಗಗಳಿಗೆ ಸೇರ್ಪಡೆಯಾಗಿದ್ದ ಕಾರಣ ಮದ್ರಾಸ್ ಪ್ರಾಂತ್ಯ, ಮುಂಬಯಿ ಪ್ರಾಂತ್ಯ, ಮೈಸೂರು ಪ್ರಾಂತ್ಯ ಎಂದು ಸ್ಥೂಲವಾಗಿ ವಿಭಜನೆ ನಡೆದು ಹೋಗಿತ್ತು. ಈ ಸ್ಥಳಗಳಲ್ಲಿ ಬ್ರಿಟಿಷ್ ಅಧಿಕಾರಿಗಳ ಓಡಾಟ, ಅದಕ್ಕೂ ಪೂರ್ವದಲ್ಲಿ ನಡೆದ ಮಿಶನರಿಗಳ ಕಾರ್ಯಗಳು ಭಾಷಾಂತರದ ಚಟುವಟಿಕೆಗಳಲ್ಲಿ ಸ್ಥಳೀಯರು ಆಸಕ್ತಿ ತಾಳಲು ಪ್ರೇರಕವಾಯಿತು. ಶ್ರೀನಿವಾಸ ಹಾವನೂರರು ಗುರುತಿಸಿರುವಂತೆ, ಹೊಸಗನ್ನಡ ಸಾಹಿತ್ಯೋದಯಕ್ಕೆ ಇತರೆ ಸ್ಥಳಗಳಲ್ಲಿ ಮಿಶನರಿ ಕಾರ್ಯ, ರಾಜರ ಆಸ್ಥಾನ ಮೊದಲಾದವುಗಳು ಪ್ರೇರಣೆಯಿತ್ತಿದ್ದರೆ ಮುಂಬಯಿ ಕರ್ನಾಟಕದಲ್ಲಿ ಹೊಸ ಶಿಕ್ಷಣವೇ ಅಂಥ ಪ್ರೇರಣೆಯನ್ನು ನೀಡಿತು(ಹಾವನೂರ, ೨೦೧೧: ೩೦೭).

ಪ್ರತಿ ಪ್ರದೇಶ/ಪ್ರಾಂತ್ಯದ ಭಾಷಾಂತರಗಳೂ ಕನ್ನಡದ ಭಾಷಾಂತರಗಳೇ ಆಗಿದ್ದರೂ ಪ್ರತಿ ಪ್ರಾಂತ್ಯದ ಭಾಷಾಂತರಗಳು ತಮ್ಮದೇ ಆದ ಉದ್ದೇಶಗಳಿಗಾಗಿ ಮಾಡಲ್ಪಟ್ಟವು. ಮೈಸೂರು ಪ್ರಾಂತ್ಯದಲ್ಲಿ ರಾಜಾಶ್ರಯವು ಸಂಸ್ಕೃತ ಭಾಷಾಂತರವನ್ನು ಪ್ರೋತ್ಸಾಹಿಸಿತು. ಆಸ್ಥಾನ ವಿದ್ವಾಂಸರೆಂಬ ವರ್ಗವು ಇಲ್ಲಿ ಪೋಷಿತವಾಗಿತ್ತು. ಈ ವರ್ಗವು ಸಮಾಜದ ಉನ್ನತ ಜಾತಿ/ವರ್ಗಗಳಿಗೆ ಸೇರಿದ್ದು, ಬಹುಭಾಷಿಕರಾಗಿ, ಪಂಡಿತ ಸ್ಥಾನವನ್ನು ಪಡೆದವರಾಗಿದ್ದರು. ಮೈಸೂರಿನ ಅರಸರ ಆಸ್ಥಾನದಲ್ಲಿ ಆಸ್ಥಾನ ಕವಿ/ನಾಟಕಕಾರರು ಎಂಬುದೇ ಒಂದು ವರ್ಗವಿತ್ತು. ಮುಖ್ಯವಾಗಿ ಇವರ ಒಲವು ಅಭಿಜಾತ ಭಾಷೆಯಾದ ಸಂಸ್ಕೃತವಾಗಿತ್ತು. ಈ ಕಾಲದಲ್ಲಿ ಬಂದ ಭಾಷಾಂತರಗಳು ಸಂಸ್ಕೃತ ಭಾಷಾಂತರಗಳಾಗಿದ್ದವು. ವಸಾಹತು ಶಿಕ್ಷಣದ ಗಾಳಿ ಮೈಸೂರಿನಲ್ಲಿ ಬೀಸಿದ್ದ ಪರಿಣಾಮ ಸಂಸ್ಕೃತದ ನಂತರದ ಸ್ಥಾನ ಇಂಗ್ಲಿಷಿನದಾಗಿತ್ತು. ಅರಸರ ಆಸ್ಥಾನದಲ್ಲಿದ್ದು ಪೋಷಿತರಾದ ಭಾಷಾಂತರಕಾರರೆಂದರೆ ನಂಜನಗೂಡು ಅನಂತ ನಾರಾಯಣ ಶಾಸ್ತ್ರಿ, ಬಸವಪ್ಪ ಶಾಸ್ತ್ರಿ, ನಂಜನಗೂಡು ಸುಬ್ಬಾಶಾಸ್ತ್ರಿ, ನರಹರಿ ಶಾಸ್ತ್ರಿ, ಸೋಸಲೆ ಅಯ್ಯಾಶಾಸ್ತ್ರಿ ಮುಂತಾದವರು ಪ್ರಮುಖರಾಗಿದ್ದವರು.

ರಂಗಭೂಮಿಯು ರಾಜರ ಆಸಕ್ತಿಯ ಕ್ಷೇತ್ರವಾಗಿದ್ದರಿಂದ ಮೈಸೂರಿನಲ್ಲಿ ’ಚಾಮರಾಜ ನಾಟಕ ಸಭಾ’(1881) ಪ್ರಾರಂಭವಾಗಿತ್ತು. ಇದಕ್ಕಾಗಿ ಎಂದು ಕೆಲವು ಭಾಷಾಂತರಗಳು ನಡೆದವು. ಆಸ್ಥಾನಿಕರಲ್ಲಿ ಪ್ರಮುಖವಾಗಿ ಮಾಡಿದ ಭಾಷಾಂತರಗಳಲ್ಲಿ ಬಸವಪ್ಪಶಾಸ್ತ್ರಿಗಳ ’ಕರ್ಣಾಟ ಶಾಕುನ್ತಲಾ ನಾಟಕ’, ’ ಸೋಸಲೆ ಅಯ್ಯಾಶಾಸ್ತ್ರಿಗಳ ’ಮೊನ್ನ-ವನ್ನ’ (ಮಾರಿಸ್ ಮ್ಯಾಟರ್‌ಲಿಂಕ್ ಅವರ ನಾಟಕದ ಅನುವಾದ), ’ಸೂತ್ರದ ಬೊಂಬೆ’ (ಇಬ್ಸನ್ನಿನ ’ಎ ಡಾಲ್ಸ್ ಹೌಸ್’), ’ವಿಕ್ರಮೋರ್ವಶೀಯ’, ರಾಮಶೇಷಶಾಸ್ತ್ರಿಗಳ ’ಮುದ್ರಾರಾಕ್ಷಸ ನಾಟಕಂ’, ಅನಂತ ನಾರಾಯಣಶಾಸ್ತ್ರಿಯವರ ’ಸತ್ಯವತೀ ಚರಿತ್ರೆ’, ಇತ್ಯಾದಿ. ಇವರ ಭಾಷಾಂತರಗಳಲ್ಲಿ ಸಂಸ್ಕೃತ ಭಾಷಾಂತರಗಳಲ್ಲದೆ ತೆಲುಗು, ಇಂಗ್ಲಿಷ್, ತಮಿಳು ಇತ್ಯಾದಿ ಇತರೆ ಭಾಷೆಗಳ ಭಾಷಾಂತರಗಳನ್ನೂ ಇವೆ. ಆದರೂ ಇವರ ಹೆಚ್ಚಿನ ಒಲವು ಅಭಿಜಾತ ಸಾಹಿತ್ಯದ ಕಡೆಗೆ ಇತ್ತು. ಒಟ್ಟಿನಲ್ಲಿ ಮೈಸೂರಿನಲ್ಲಿ ರಾಜರ ಪ್ರೋತ್ಸಾಹವು ರಂಗಭೂಮಿ ಮತ್ತು ಅಭಿಜಾತ ಸಾಹಿತ್ಯದ ಮಾದರಿಯನ್ನು ಬೆಳೆಸಿತು.

ಮೈಸೂರು ಪ್ರಾಂತ್ಯವು ರಾಜರ ಹಾಗೂ ವಸಾಹತು ಆಳ್ವಿಕೆಯಲ್ಲಿ ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದರಿಂದ ಭಾಷಾಂತರ ಚಟುವಟಿಕೆಗಳು ಆ ಆಧುನಿಕತೆಯ ಭಾಗವಾಗಿಯೇ ಬಂದಿತು ಎಂದು ಊಹಿಸಬಹುದು. ಭಾಷಾಂತರ ಚಟುವಟಿಕೆಗಳು ನಡೆಯುತ್ತಿದ್ದುದು ನಗರ ಕೇಂದ್ರಗಳಲ್ಲಿ. ಭಾಷಾಂತರ ಪುಸ್ತಕಗಳು ಪ್ರಕಟವಾದ ಸ್ಥಳಗಳನ್ನು ಕಣ್ಣು ಹಾಯಿಸಿದರೆ ಬಹುತೇಕ ಪುಸ್ತಕಗಳು ಮೈಸೂರು ಹಾಗೂ ಬೆಂಗಳೂರು ಸಿಟಿಗಳಲ್ಲಿ ಮುದ್ರಣಗೊಳ್ಳುತ್ತಿದ್ದವು.

ಆಧುನಿಕತೆ ಪ್ರವೇಶಿಸುತ್ತಿದ್ದ ಹತ್ತೊಂಬತ್ತನೇ ಶತಮಾನದ ಮೈಸೂರು ಪ್ರಾಂತ್ಯದಲ್ಲಿ ಆಧುನಿಕ ಶಿಕ್ಷಣ ಪಡೆದ ಪದವೀಧರರು, ಸರ್ಕಾರಿ ಕೆಲಸದಲ್ಲಿರುವ ಅಧಿಕಾರಿಗಳು ಕೆನೆಪದರವನ್ನು ನಿರ್ಮಾಣ ಮಾಡಿದ್ದರು. ಇದರಿಂದ ಮುದ್ರಣ, ಭಾಷಾಂತರದಂತಹ ಸಾಂಸ್ಕೃತಿಕ ವಿನಿಮಯದ ಕೆಲಸಗಳು ಉನ್ನತ ಮಟ್ಟದಲ್ಲಿ ನಡೆದವು. ಶ್ರೀಕಂಠೇಶಗೌಡ, ಆನಂದರಾವ್ ಮತ್ತಿತರರು ಸೇರಿ ಸ್ಥಾಪಿಸಿದ ಜಿ.ಟಿ.ಎ ಪ್ರೆಸ್ (ಗ್ರಾಜುಯೇಟ್ಸ್ ಟ್ರೇಡಿಂಗ್ ಅಸೊಸಿಯೇಷನ್ ಪ್ರೆಸ್) ಎಂಬ ಸಂಘವು ಸ್ವಂತ ಹಾಗೂ ಭಾಷಾಂತರ ಕೃತಿಗಳನ್ನು ಪ್ರಕಟಿಸತೊಡಗಿತು. ಇಂಗ್ಲಿಷಿನಿಂದ ಕ್ಲಾಸಿಕ್ಸ್ ಮಾಲಿಕೆಯಲ್ಲಿ ಭಾಷಾಂತರ ಕೃತಿಗಳು ಹೆಚ್ಚಾಗಿ ಬಂದವು. ಮೈಸೂರು ಸಂಸ್ಥಾನದಲ್ಲಿ ಅಧಿಕಾರಿಯಾಗಿದ್ದ ಶಾಮರಾಯರು ’ಕರ್ನಾಟಕ ಗ್ರಂಥಮಾಲೆ’ ಎನ್ನುವ ಪ್ರಕಟಣಾ ಸಂಸ್ಥೆಯನ್ನು ಸ್ಥಾಪಿಸಿದುದಾಗಿ ತಿಳಿದು ಬರುತ್ತದೆ. ಅದೇ ರೀತಿ ಎಸ್.ಜಿ.ನರಸಿಂಹಾಚಾರ್ಯರು ಮತ್ತು ರಾಮಾನುಜಯ್ಯಂಗಾರರು ಸೇರಿ ಸ್ಥಾಪಿಸಿದ ’ಕರ್ನಾಟಕ ಕಾವ್ಯಮಂಜರಿ’ ಮಾಲೆಯು ಮೈಸೂರು ಸೀಮೆಯಲ್ಲಷ್ಟೆ ಅಲ್ಲದೆ ಮದ್ರಾಸು ಸೀಮೆಯಲ್ಲಿಯೂ ಹೆಸರಾಗಿದ್ದಿತು. ಅಲ್ಲಿಂದ ಪ್ರಕಟವಾದ ಪುಸ್ತಕಗಳು ’ಮೇಲ್ದರ್ಜೆಯ ಕನ್ನಡ ಪರೀಕ್ಷೆಗಳಿಗೆ ಪಠ್ಯಗಳಾಗಿ ಆಯ್ಕೆಯಾಗುತ್ತಿದ್ದವು’ ಎಂದು ಶ್ರೀನಿವಾಸ ಹಾವನೂರರು ಗುರುತಿಸುತ್ತಾರೆ (ಹಾವನೂರ, 2011:88). ಆಗ ಭಾಷಾಂತರಿಸಲ್ಪಡುತ್ತಿದ್ದ ಪುಸ್ತಕಗಳು ಪ್ರಚಲಿತವಿದ್ದ ಸಾಹಿತ್ಯ ಪತ್ರಿಕೆಗಳಲ್ಲಿ ಅಚ್ಚಾಗುತ್ತಿದ್ದು ಓದುಗರನ್ನು ತಲುಪುವ ಯತ್ನ ಮಾಡುತ್ತಿದ್ದವು. ಅವುಗಳಲ್ಲಿ ಮುಖ್ಯವಾಗಿ ’ವಿದ್ಯಾದಾಯಿನಿ’, ’ವಾಗ್ಭೂಷಣ’ ಪತ್ರಿಕೆಗಳು ಮುಖ್ಯವಾದವು. ಅನೇಕ ಭಾಷಾಂತರ ಕೃತಿಗಳ ಮುನ್ನುಡಿಗಳಲ್ಲಿ ಅನುವಾದಕರು ತಮ್ಮ ಕೃತಿಗಳು ಪತ್ರಿಕೆಗಳಲ್ಲಿ ಪ್ರಕಟವಾದ ಮಾಹಿತಿಗಳನ್ನು ನೀಡಿದ್ದಾರೆ. ಇದರಿಂದ ಭಾಷಾಂತರದ ಕಾರ್ಯಕ್ಕೆ ಪತ್ರಿಕೆಗಳು ಸಹ ಪೂರಕವಾಗಿದ್ದವು ಎಂದು ಊಹಿಸಬಹುದು.

ಹತ್ತೊಂಬತ್ತನೇ ಶತಮಾನದ ಕೊನೆಯ ಹೊತ್ತಿಗೆ ಮೈಸೂರು ಪ್ರಾಂತ್ಯದಲ್ಲಿ ಬಂದ ಭಾಷಾಂತರಗಳಲ್ಲಿ ಹೆಚ್ಚಿನವು ಷೇಕ್ಸ್‌ಪಿಯರ್ ಕೃತಿಗಳೇ ಆಗಿದ್ದವು. ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯ ಬೆಳವಣಿಗೆಗಳು ಇದಕ್ಕೆ ಪೂರಕವಾಗಿರಬಹುದು. ಚಾಮರಾಜ ಅರಸರು ಮೈಸೂರಿನಲ್ಲಿ ’ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ’(1881)ವನ್ನು ಪ್ರಾರಂಭ ಮಾಡಿದ್ದರು. ವೃತ್ತಿ ರಂಗಭೂಮಿಗಳು, ಜಾನಪದ ಮತ್ತು ಅಭಿಜಾತ ನಾಟಕಗಳು ಸಹ ಪ್ರಚಲಿತವಿದ್ದವು. ಹವ್ಯಾಸಿಯಾಗಿದ್ದ ಶ್ರೀಕಂಠೇಶಗೌಡರು ರಂಗಭೂಮಿಯನ್ನು ಗಮನದಲ್ಲಿಟ್ಟುಕೊಂಡೇ ಭಾಷಾಂತರ ಮಾಡಿರುವುದು ಕಂಡುಬರುತ್ತದೆ. ಇದೇ ಸಮಯದಲ್ಲಿ ವರದಾಚಾರ್ಯರ ನಾಟಕ ಕಂಪೆನಿಯಾದ ’ರತ್ನಾವಳಿ ನಾಟಕ ಸಭಾ’ ಚಾಲನೆಯಲ್ಲಿತ್ತು. ಇದು ಮೈಸೂರು ಸೀಮೆಯಲ್ಲಿ ಆಡಿಸಲೆಂದೇ ನಾಟಕ ಸಾಹಿತ್ಯವನ್ನು ಸ್ವಂತ ರಚನೆ ಹಾಗು ಭಾಷಾಂತರಗಳಿಂದ ಪಡೆದುಕೊಳ್ಳುತ್ತಿತ್ತು ಎನ್ನಲಾಗಿದೆ. ಹೀಗೆ ರಂಗಭೂಮಿಯು ಅಭಿಜಾತ, ಹವ್ಯಾಸಿ ಮಾದರಿಗಳಲ್ಲಿ ಮೈಸೂರು ಪ್ರಾಂತ್ಯದಲ್ಲಿ ಪ್ರಚಲಿತವಿದ್ದುದರಿಂದ ನಾಟಕಗಳ ಭಾಷಾಂತರಗಳು ನಡೆದವು ಎಂದು ಊಹಿಸಬಹುದು.

ಈ ಅವಧಿಯಲ್ಲಿ ಷೇಕ್ಸ್‌ಪಿಯರ್ ಜನಪ್ರಿಯ ನಾಟಕಗಳು ಕನ್ನಡಕ್ಕೆ ರೂಪಾಂತರಗೊಂಡು ಈ ಪ್ರಾಂತ್ಯದಲ್ಲಿ ಬಂದವು. ಮರ್ಚೆಂಟ್ ಆಫ್ ವೆನಿಸ್-’ಪಾಂಚಾಲೀ ಪರಿಣಯ’ (ಆನಂದರಾವ್), ರೊಮಿಯೊ ಜೂಲಿಯೆಟ್-’ರಾಮವರ್ಮ ಲೀಲಾವತಿ’ (ಆನಂದರಾವ್), ಸಿಂಬಲೈನ್-’ಜಯಸಿಂಹರಾಜ ಚರಿತೆ', ’ಒಥೆಲೊ-’ಶೂರಸೇನ ಚರಿತ್ರೆ’ (ಬಸವಪ್ಪ ಶಾಸ್ತ್ರಿ), ಮ್ಯಾಕ್‌ಬೆತ್-ಪ್ರತಾಪರುದ್ರದೇವ (ಶ್ರೀಕಂಠೇಶಗೌಡ), ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್ -’ಪ್ರಮೀಳಾರ್ಜುನೀಯಂ’ (ಶ್ರೀಕಂಠೇಶಗೌಡ), ಟು ಜೆಂಟಲ್‌ಮ್ಯಾನ್ ಆಫ್ ವೆರೋನಾ-’ಕುಸುಮಾಕರ’ (ಎ.ಆರ್.ಅಣ್ಣಾಜಿರಾವ್), ಕಿಂಗ್ ಲಿಯರ್-’ಹೇಮಚಂದ್ರರಾಜ ವಿಲಾಸ’, ಸಿಂಬಲೈನ್-’ಜಯಸಿಂಹ’ (ಎಂ.ಎಸ್.ಪುಟ್ಟಣ್ಣ). ಷೇಕ್ಸ್‌ಪಿಯರ್ ಭಾಷಾಂತರಗಳು ಅಖಿಲ ಭಾರತೀಯ ಪ್ರಕ್ರಿಯೆಯಾಗಿದ್ದಂತೆ ಅದು ಈ ಭಾಗದಲ್ಲಿಯೂ ಕಾಣಿಸಿಕೊಂಡಿತು ಎನ್ನಬಹುದು. ಷೇಕ್ಸ್‌ಪಿಯರ್ ನಾಟಕಗಳಿಗೆ ಹೋಲಿಸಿದರೆ ಇತರೆ ಪಾಶ್ಚಾತ್ಯ ನಾಟಕಕಾರರ ನಾಟಕಗಳ ಅನುವಾದ ವಿರಳವೆನ್ನಿಸುವಷ್ಟು ಇವೆ.

ಭಾರತದಲ್ಲಿ ರಾಷ್ಟ್ರೀಯತೆಯ ಭಾವನೆಯೊಂದಿಗೆ ಹೊಸ ಬಗೆಯ ಗದ್ಯದ ರುಚಿಯು ಬೆಳೆದ ಕಾರಣ ಕಾದಂಬರಿ ಪ್ರಕಾರವು ಪ್ರಚಲಿತವಾಯಿತು. ದೇಶೀಯ ಓದುಗಳಲ್ಲಿಯೂ ಕಾದಂಬರಿ ಪ್ರಕಾರ ಜನಪ್ರಿಯವಾಗುತ್ತ ಬಂದಿತ್ತು. ಹೊಸದಾಗಿ ಮೈದಳೆಯುತ್ತಿದ್ದ ಮಧ್ಯಮವರ್ಗದ ಓದುವ ಅಭಿರುಚಿಗೆ ನೀರೆರೆಯುವಂತೆ ಹಳೆ ಮೈಸೂರು ಪ್ರಾಂತ್ಯದ ಭಾಷಾಂತರಕಾರರು ಕಾದಂಬರಿಗಳನ್ನು ಭಾಷಾಂತರಿಸತೊಡಗಿದರು. ಅವರಲ್ಲಿ ಎಸ್.ಜಿ.ನರಸಿಂಹಾಚಾರ್ಯ, ಕೃಷ್ಣಸ್ವಾಮಿ ಅಯ್ಯಂಗಾರ್, ಶ್ರೀಕಂಠೇಶಗೌಡ, ಅಣ್ಣಾಜಿರಾವ್, ಬಾಪು ಸುಬ್ಬರಾವ್ ಮುಂತಾದವರು ಹೆಸರಾಗಿದ್ದವರು. ಎಲ್ಲರಿಗಿಂತ ಕೈ ಮಿಗಿಲಾಗಿ ಬಿ. ವೆಂಕಟಾಚಾರ್ಯರು ಬಂಗಾಳಿ ಕಾದಂಬರಿಗಳನ್ನು ಮೇಲಿಂದ ಮೇಲೆ ಭಾಷಾಂತರಿಸಿದ್ದರು. ಕಾದಂಬರಿಯಲ್ಲದೆ ದೊಡ್ಡವರು ಚಿಕ್ಕವರು ಇಬ್ಬರೂ ಓದಿ ಆನಂದಿಸಬಹುದಾದ ’ಅರೇಬಿಯನ್ ನೈಟ್ಸ್’, ’ಈಸೋಪನ ನೀತಿ ಕತೆಗಳು’, ’ಯವನಯಾಮಿನೀ ಕತೆ’ ಇತ್ಯಾದಿ ಮನರಂಜನಾತ್ಮಕವಾದ ಕತೆಗಳು ಸಹ ಭಾಷಾಂತರದ ದೃಷ್ಟಿಯಿಂದ ಮುಂದಿದ್ದವು. ಗದ್ಯ ಕೃತಿಗಳ ಪ್ರವಾಹದಲ್ಲಿ ಪದ್ಯದ ಭಾಷಾಂತರಗಳು ಹಿನ್ನೆಲೆಗೆ ಸರಿದಂತೆ ತೋರುತ್ತದೆ. ಇಪ್ಪತ್ತನೇ ಶತಮಾನದ ಮೊದಲೆರಡು ದಶಕಗಳು ಸರಿದಂತೆ ಮತ್ತೆ ಕಾವ್ಯದ ಅಭಿರುಚಿ ಪ್ರಾರಂಭವಾಯಿತೆನ್ನಬಹುದು. ಆನಂತರವೇ ಪೂರ್ಣ ಪ್ರಮಾಣದ ಕಾವ್ಯಾನುವಾದಗಳು ಸಂಗ್ರಹ ರೂಪದಲ್ಲಿ ಬರಲಾರಂಭಿಸಿದವು ಎನ್ನಬಹದು. ಶ್ರೀಕಂಠಯ್ಯನವರು ಭಾಷಾಂತರಿಸಿದ ’ಇಂಗ್ಲಿಷ್ ಗೀತಗಳು’ ನವೋದಯಕ್ಕೆ ಮುನ್ನುಡಿಯನ್ನು ಹಾಕಿಕೊಟ್ಟಿತು. ನಂತರದ ಕಾವ್ಯಾನುವಾದಗಳಲ್ಲಿ ಗಮನಾರ್ಹ ಕೃತಿಯೆಂದರೆ ಡಿವಿಜಿ ಅನುವಾದಿಸಿದ ’ಉಮರನ ಒಸಗೆ’. (1930)

ಮೈಸೂರು ಪ್ರಾಂತ್ಯದ ಭಾಷಾಂತರ ಚಟುವಟಿಕೆಗಳು ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ರೂಪುಗೊಳ್ಳುತ್ತಿದ್ದರೆ ಉತ್ತರ ಕರ್ನಾಟಕದಲ್ಲಿ ಮೈಸೂರಿನಂತೆ ದೇಶೀ ಪ್ರಭುತ್ವದ ಆಡಳಿತ ಇರದೆ ಮುಂಬೈ ಪ್ರಾಂತ್ಯದ ಬ್ರಿಟಿಷ್ ಆಡಳಿತಶಾಹಿಯ ಹಿನ್ನೆಲೆಯಲ್ಲಿ ಭಾಷಾಂತರಗಳು ನಡೆಯಲಾರಂಭಿಸಿದ್ದವು. ಮುಖ್ಯವಾಗಿ ಶಿಕ್ಷಣದ ಉದ್ದೇಶಗಳಿಂದ ಕನ್ನಡ ಭಾಷೆಯು ಮುನ್ನೆಲೆಗೆ ಬರಲಾರಂಭಿಸಿತ್ತು. ಉತ್ತರ ಕರ್ನಾಟಕದಲ್ಲಿ ಬ್ರಿಟಿಷ್ ಅಧಿಕಾರಿಗಳು ನೀಡಿದ ಉತ್ತೇಜನದಿಂದ ಕನ್ನಡದಲ್ಲಿ ಶಿಕ್ಷಣ ಆರಂಭಗೊಂಡಿತು. ಬಹಳಷ್ಟು ಬ್ರಿಟಿಷ್ ಅಧಿಕಾರಿಗಳು ಕನ್ನಡದ ಪ್ರಾಂತ್ಯದವರು ಮರಾಠಿಯಲ್ಲಿ ಕಲಿಯುತ್ತಿರುವುದಕ್ಕೆ ಖೇದವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅದಕ್ಕಾಗಿ ಕೆಲವು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ರಸೆಲ್ ಆ ಶ್ರೇಣಿಯಲ್ಲಿ ಮೊದಲ ಹೆಸರು. ಕನ್ನಡಿಗರೇ ಆದ ಡ್ಯೆಪುಟಿ ಚನ್ನಬಸಪ್ಪ ಕನ್ನಡ ಶಾಲಾ ಶಿಕ್ಷಣಕ್ಕೆ ಆದ್ಯತೆ ನೀಡಿ ಪ್ರಚಾರ ಮಾಡಲಾರಂಭಿಸಿದರು. ಈ ಭಾಗದಲ್ಲಿ ಶಾಲಾ ಶಿಕ್ಷಣವೇ ಭಾಷಾಂತರಕ್ಕೆ ಪ್ರೇರಣೆಯಾಗಿತ್ತು. ಡ್ಯೆಪುಟಿ ಚನ್ನಬಸಪ್ಪನವರು ’ನಗದವರನ್ನು ನಗಿಸುವ ಕಥೆ’ (ಕಾಮಿಡಿ ಆಫ್ ಎರರ್‍ಸ್) ಹಾಗು ಮ್ಯಾಕ್‌ಬೆತ್ ಎಂಬ ಷೇಕ್ಸ್‌ಪಿಯರ್‌ನ ಎರಡು ನಾಟಕಗಳನ್ನು ಭಾಷಾಂತರಿಸಿದ್ದರು. ’ನಗದವರನ್ನು ನಗಿಸುವ ಕಥೆ’ (ಕನ್ನಡದ ಮೊಟ್ಟಮೊದಲ ಭಾಷಾಂತರ ಇರಬೇಕೆಂದು ಊಹಿಸಲಾಗಿದೆ. ಕೃತಿಯು ಸದ್ಯ ಲಭ್ಯವಿಲ್ಲದ ಕಾರಣ ಅದರ ಗುಣಮಟ್ಟ, ವಸ್ತು ವಿಷಯ ನಿರ್ವಹಣೆಗಳನ್ನು ಮಾಪನ ಮಾಡಲು ಆಗಿಲ್ಲ ಎಂಬುದು ಸಾಹಿತ್ಯ ಚರಿತ್ರೆಕಾರರ ಅಭಿಮತ). ಟ್ರೇನಿಂಗ್ ಶಾಲಾ ಶಿಕ್ಷಕರಾಗಿದ್ದ ವೆಂಕಟರಂಗೋ ಕಟ್ಟಿ ಅವರು ಮರಾಠಿಯಿಂದ ಭಾಷಾಂತರಗಳನ್ನು ಮಾಡಿದರು. ವೆಂಕಟೇಶ ತಿರಕೋ ಕುಲಕರ್ಣಿಯವರು (ಗಳಗನಾಥ) ಸಹ ಮರಾಠಿಯಿಂದ ಭಾಷಾಂತರಗಳನ್ನು ಮಾಡಿದರು. ಗಳಗನಾಥರದು ಪೂರ್ಣಪ್ರಮಾಣದ ಭಾಷಾಂತರವಲ್ಲ. ಅವು ಕನ್ನಡಿಸುವ ಹೊತ್ತಿಗೆ ರೂಪಾಂತರ, ಕಥಾಂತರ ಇತ್ಯಾದಿ ರೂಪಗಳನ್ನು ಪಡೆದುಕೊಳ್ಳುತ್ತಿದ್ದವು. ಕೆಲವೊಮ್ಮೆ ಪ್ರೇರಕ ಪಠ್ಯಗಳಾಗಿ ಮಾತ್ರ ಉಳಿಯುತ್ತಿದ್ದವು. ಧಾರವಾಡದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದ ಧೋಂಡೋ ನರಸಿಂಹ ಮುಳಬಾಗಿಲು ಅವರು ಸಂಸ್ಕೃತ ನಾಟಕಗಳಾದ ’ಮಾಲವಿಕಾಗ್ನಿಮಿತ್ರ’, ’ಮೃಚ್ಛಕಟಿಕ’ಗಳನ್ನು ಭಾಷಾಂತರಿಸಿದ್ದರು. ಹೀಗೆ ಶಾಲಾ ಶಿಕ್ಷಕರೂ ಶಿಕ್ಷಣ ಅಧಿಕಾರಿಗಳೂ ಭಾಷಾಂತರದ ಕಾರ್ಯಕ್ಕೆ ಚಾಲನೆ ನೀಡಿದ್ದರಿಂದ ಭಾಷಾಂತರ ಸಾಹಿತ್ಯದ ಒಂದು ಧಾರೆ ಅಲ್ಲಿ ಪ್ರವಹಿಸಲು ಆರಂಭಗೊಂಡಿತು.

ಉತ್ತರ ಕರ್ನಾಟಕದ ಭಾಷಾಂತರಗಳ ಹಿಂದೆ ಕನ್ನಡ ನಾಡಿನ ಏಕೀಕರಣದ ಹಾಗೂ ಕನ್ನಡ ನುಡಿಯನ್ನು ಮರುಸ್ಥಾಪಿಸಿಕೊಳ್ಳುವ ಒತ್ತಡವಿರುವುದು ಕಾಣುತ್ತದೆ. ಪ್ರಾಯಶ: ಈ ಕಾರಣದಿಂದ ಭಾಷಾಂತರಗಳು ಕನ್ನಡ ರಾಷ್ಟ್ರೀಯತೆಯನ್ನು ವ್ಯಕ್ತ ಪಡಿಸುವ ಸಾಧನಗಳು ಆಗಿ ಪರಿಣಮಿಸಿದವು. ಶಾಂತಕವಿಗಳು ಹೇಳಿದರೆನ್ನಲಾದ ಪದ್ಯವು ಕನ್ನಡ ನುಡಿಯನ್ನು ಶ್ರೀಮಂತಗೊಳಿಸಿ ಆ ಮೂಲಕ ನಾಡನ್ನು ಕಟ್ಟಿಕೊಳ್ಳುವ ಆಂತರ್ಯವನ್ನು ವ್ಯಕ್ತಪಡಿಸುತ್ತದೆ. ಆ ಪದ್ಯ ಹೀಗಿದೆ:

ಎಲ್ಲಿರುವುದಭಿಮಾನ? ಕನ್ನಡಿಗರು! ಹೇಳಿ
ಸುಳ್ಳೆ ಬಡಬಡಿಸುವ ಸಭೆಗಳಲ್ಲಿ/
ಗುರುಪರಿಶ್ರಮ ದಿನಾಂಗ್ಲೇಯ ಭಾಷೆಯ ಕಲಿತು
ಧರಿಸಿ ಪದವಿಗಳನುಪಜೀವಿಸುವಿರೇ
ಹೊರತು ತದ್ಭಾಷೆಯುದ್ಗ್ತಂಥಗಳ ಕನ್ನಡದಿ
ಪರಿವರ್ತನೆಗೊಳಿಸಲಿಲ್ಲಾ

ಶಾಂತಕವಿಗಳ ಈ ಮಾತು ಭಾಷಾಭಿಮಾನದ ದ್ಯೋತಕವೂ ಹೌದು ಅದರ ಜೊತೆಗೆ ಆಂಗ್ಲಭಾಷೆಯ ಕೃತಿಗಳನ್ನು ಕನ್ನಡಿಸಿ ಕನ್ನಡವನ್ನು ಉದ್ಧಾರ ಮಾಡಿಕೊಳ್ಳಬೇಕೆನ್ನುವ ಭಾವನೆ ಭಾಷಾಂತರಗಳು ನುಡಿಯನ್ನು ಶ್ರೀಮಂತಗೊಳಿಸುತ್ತವೆ ಎನ್ನುವ ಅರಿವು ಎದ್ದು ಕಾಣುತ್ತದೆ. ಇದೇ ಮಾತನ್ನು ಮುಂದೆ ಬಿ.ಎಂ.ಶ್ರೀ ತಮ್ಮ ಐತಿಹಾಸಿಕ ಭಾಷಣವಾದ ’ಕನ್ನಡ ಮಾತು ತಲೆಯೆತ್ತುವ ಬಗೆ’ಯಲ್ಲಿ ಬಲವಾಗಿ ಪ್ರತಿಪಾದಿಸುತ್ತಾರೆ. ಹುಬ್ಬಳ್ಳಿಯ ಗುಂಡೋಕೃಷ್ಣ ಚುರಮರಿಯವರು ತಮ್ಮ ಷೇಕ್ಸ್‌ಪಿಯರ್ ಅನುವಾದವಾದ ’ರಾಘವೇಂದ್ರರಾವ್’(1885) ನಾಟಕದ ಮುಂದೆ ತಾನು ಕನ್ನಡ ಭಾಷೆಯ ಉತ್ಕರ್ಷಕ್ಕಾಗಿ ಮನೋರಂಜಕವಾದ ಈ ಕಥೆಯನ್ನು ಆಯ್ದುಕೊಂಡೆನೆಂದೂ ಭಾಷಾಭಿಮಾನಕ್ಕಾಗಿ ಓದುವುದಕ್ಕಾಗಿ ಉಂಟು ಮಾಡಿದ್ದೇನೆ ಎಂದು ಹೇಳಿರುವುದನ್ನು ಹಾವನೂರರು ಉಲ್ಲೇಖಿಸಿದ್ದಾರೆ(ಹಾವನೂರ, ೨೦೧೧: ೩೨೪). ಹೀಗೆ ಉತ್ತರ ಕರ್ನಾಟಕದ ಕಡೆಯಿಂದ ಬಂದ ಭಾಷಾಂತರಗಳ ಹಿಂದಿನ ಆಶಯ, ಗುರಿ ಅಭಿರುಚಿ ನಿರ್ಮಾಣಕ್ಕಿಂತ ಮಿಗಿಲಾಗಿ ಕನ್ನಡ ನುಡಿಯನ್ನು ಕಟ್ಟಿಕೊಳ್ಳುವುದಕ್ಕೆ ನಡೆಸಿದ ಪ್ರಯತ್ನಗಳಿಗೆ ಪೂರಕ ಕ್ರಿಯೆ ಎಂದು ಭಾವಿಸಬಹುದು.

ಉತ್ತರ ಕರ್ನಾಟಕದಲ್ಲಿನ ಭಾಷಾಂತರಗಳು ಸಂಸ್ಕೃತ, ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಿಂದ ನಡೆಯುತ್ತಿದ್ದವು. ಮರಾಠಿ ಮತ್ತು ಕನ್ನಡಗಳ ದ್ವಿಭಾಷಿಕರಾಗಿದ್ದ ಈ ಪ್ರಾಂತ್ಯದ ಜನರು ಮರಾಠಿಯಿಂದ ಕನ್ನಡಕ್ಕೆ, ಕನ್ನಡದಿಂದ ಮರಾಠಿಗೆ ಸಮಾನವಾಗಿ ಭಾಷಾಂತರಗಳನ್ನು ಮಾಡಿದ್ದರಲ್ಲಿ ಆಶ್ಚರ್ಯವಿಲ್ಲ. ಇಂಗ್ಲಿಷಿನಿಂದ ಷೇಕ್ಸ್‌ಪಿಯರ್ ನಾಟಕಗಳು ಇಲ್ಲಿಯೂ ಪ್ರಚಲಿತವಾಗಿದ್ದವು. ಡೆಪ್ಯುಟಿ ಚನ್ನಬಸಪ್ಪನವರು ಮೊದಲ ಬಾರಿಗೆ ಎಂದು ಹೇಳುವ ಷೇಕ್ಸ್‌ಪಿಯರ್‌ನ ’ಕಾಮಿಡಿ ಆಫ್ ಎರರ್‍ಸ್’ದ ಭಾಷಾಂತರ ’ನಗದವರನ್ನು ನಗಿಸುವ ಕಥೆ’(1871) ಎಂದು ಮಾಡಿದ್ದರು. ಗುಂಡೋ ಕೃಷ್ಣ ಚುರಮರಿ ಷೇಕ್ಸ್‌ಪಿಯರನ ಒಥೆಲೊ ನಾಟಕವನ್ನು ’ರಾಘವೇಂದ್ರರಾವ್’ ಎಂದು ಭಾಷಾಂತರಿಸಿದ್ದಾರೆ. ಗ.ಹು.ಹೊನ್ನಾಪುರಮಠ ಅವರ ’ಗಯ್ಯಾಳಿಯನು ಸಾಧು ಮಾಡುವಿಕೆ’(ಮರಾಠಿ ಮೂಲಕ), ಕೆರೂರು ವಾಸುದೇವಾಚಾರ್ಯರ ’ಸುರತ ನಗರದ ಶ್ರೇಷ್ಠಿ’, ’ವಸಂತಯಾಮಿನೀ ಸ್ವಪ್ನ ಚಮತ್ಕಾರ ನಾಟಕವು’, ರಮೇಶ ಲಲಿತಾ’, ರಂಗಾಚಾರ್ಯ ಮುದ್ಗಲ್ ಅವರ ’ಮಂಜುಘೋಷ’ ನಾಟಕಗಳು ಷೇಕ್ಸ್‌ಪಿಯರ್ ನಾಟಕಗಳ ಭಾಷಾಂತರಗಳೇ. ಇತರೆ ನಾಟಕಕಾರರ ಭಾಷಾಂತರಗಳು ವಿರಳವಾಗಿ ದೊರೆಯುತ್ತವೆ. ಕೆರೂರರೇ ಗೋಲ್ಡ್‌ಸ್ಮಿತ್‌ನ ’ಷಿ ಸ್ಟೂಪ್ಸ್ ಟು ಕಾಂಕರ್’ ನಾಟಕವನ್ನು ’ಪತಿ ವಶೀಕರಣ’ ಎಂಬುದಾಗಿ ಭಾಷಾಂತರ ಮಾಡಿದ್ದಾರೆ. ಆದರೆ ಒಟ್ಟಾರೆ ದೃಷ್ಟಿಯಿಂದ ಕನ್ನಡ ಭಾಷಾಂತರಕಾರರ ಆಯ್ಕೆ ಸೀಮಿತಗೊಂಡಿದೆ ಎಂದೇ ಹೇಳಬಹುದು. ಚುರಮರಿ ಶೇಷಗಿರಿರಾಯರ ’ಮೃಚ್ಛಕಟಿಕ’, ’ಶಾಕುನ್ತಲಾ ನಾಟಕ’, ಧೋಂಡೊ ನರಸಿಂಹ ಮುಳಬಾಗಿಲು ಅವರ ’ಮಾಲವಿಕಾಗ್ನಿಮಿತ್ರ’, ’ಮೃಚ್ಛಕಟಿಕ’ ನಾಟಕಗಳು ಸಂಸ್ಕೃತ ನಾಟಕಗಳ ಭಾಷಾಂತರಗಳಾಗಿದ್ದು ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿ ಈ ಕುರಿತು ಸಮಾನಾಂತರವಾದ ಆಸಕ್ತಿಯನ್ನು ಕಾಣಬಹುದು. ಸಾಮಾನ್ಯವಾಗಿ ಬಸವಪ್ಪಶಾಸ್ತ್ರಿಗಳ ’ಕರ್ಣಾಟ ಶಾಕುಂತಲಾ ನಾಟಕ’ ಹಾಗು ಚುರಮರಿಯವರ ’ಶಾಕುನ್ತಲಾ ನಾಟಕ’-ಈ ಎರಡನ್ನೂ ಹೋಲಿಸಿ ನೋಡುವ ಪ್ರವೃತ್ತಿ ಇದೆ. ಈ ಬಗ್ಗೆ ಕನ್ನಡದಲ್ಲಿ ವಿಮರ್ಶೆ ಈಗಾಗಲೇ ಬಂದಿದೆ. ಉತ್ತರ ದಕ್ಷಿಣ ಶೈಲಿಯ ಎರಡು ಪ್ರಸ್ತುತಿಗಳನ್ನು ಈ ಎರಡು ಭಾಷಾಂತರಗಳಲ್ಲಿ ಕಾಣಬಹುದು. ಆದರೆ ಬಹುತೇಕ ಭಾಷಾಂತರಗಳ ಆಯ್ಕೆ, ಅಭಿರುಚಿಯ ದೃಷ್ಟಿಯಿಂದ ಉತ್ತರ-ದಕ್ಷಿಣಗಳೆರಡೂ ಒಂದೇ ಪ್ರವೃತ್ತಿಯನ್ನು ವ್ಯಕ್ತಪಡಿಸುತ್ತವೆ ಎನ್ನುವುದು ಗಮನಾರ್ಹ.

ಅಖಿಲ ಕರ್ನಾಟಕದ ಭಾಷಾಂತರ ಚಟುವಟಿಕೆಗಳಿಗೆ ಇರುವ ಸಮಾನ ಆಸಕ್ತಿ ಧೋರಣೆಗಳು ಕೆನರಾ ಪ್ರಾಂತ್ಯದಲ್ಲಿಯೂ ಕಾಣುತ್ತವೆ. ಮಿಶನರಿ, ಇಂಗ್ಲಿಷ್ ಶಿಕ್ಷಣ, ಸ್ವಾತಂತ್ರ್ಯ ಚಳವಳಿಗಳೇ ಇಲ್ಲಿಯೂ ಪ್ರೇರಣೆಯ ಅಂಶಗಳಾಗಿವೆ. ಮಿಶನರಿಗಳು ಮಂಗಳೂರಿನಲ್ಲಿ ಪ್ರವೇಶ ಮಾಡಿ ಕನ್ನಡದ ಕೆಲಸಗಳನ್ನು ಮಾಡತೊಡಗಿದ್ದರು. ಮಿಶನರಿ ಆಸಕ್ತಿಗಳಿದ್ದ ಶಾಲಾಶಿಕ್ಷಣ ಪಠ್ಯಪುಸ್ತಕ ನಿರ್ಮಾಣ, ಕನ್ನಡ ವ್ಯಾಕರಣ, ಸಂಪಾದನೆಗಳಂತಹ ಕೆಲಸಗಳಲ್ಲಿ ಕರಾವಳಿ ಕನ್ನಡ ಜನರಿಗೆ ಆಸಕ್ತಿ ಬೆಳೆಯಿತು. ಮುಖ್ಯವಾಗಿ ಭಾಷಾಂತರ ಚಟುವಟಿಕೆಯು ಮಿಶನರಿ ಪ್ರಭಾವದಿಂದಲೇ ಆರಂಭಗೊಂಡಿತೆನ್ನಬಹುದು. ಮತಪ್ರಚಾರ ಸಾಹಿತ್ಯ ಬಿಟ್ಟು ಶಾಲಾಶಿಕ್ಷಣದ ದೃಷ್ಟಿಯಿಂದ ಗಮನಿಸಿದರೆ ಮಿಶನರಿಗಳು ಆರಂಭಿಸಿದ ಕನ್ನಡ ಪಠ್ಯಪುಸ್ತಕಗಳ ತಯಾರಿಕೆಯ ಕಾರ್ಯದಲ್ಲಿ ಸ್ಥಳೀಯರು ಪಾಲ್ಗೊಂಡಿರುವುದು ತಿಳಿದು ಬರುತ್ತದೆ. ಪಂಜೆ ಮಂಗೇಶರಾಯರು ’ತೆಂಕಣ ಗಾಳಿಯಾಟ’, ’ಕಡೆಕುಂಜಿ’, ’ಅಣ್ಣನ ವಿಲಾಪ’ ಎಂಬ ಕವನಗಳನ್ನು ಶಾಲಾ ಪಠ್ಯಪುಸ್ತಕಗಳಿಗಾಗಿ ಭಾಷಾಂತರ ಮಾಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಕೆನರಾ ಪ್ರಾಂತ್ಯವು ಮದರಾಸು ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿದ್ದರಿಂದ ಅದಕ್ಕೆ ಮದರಾಸಿನ ನಂಟು ಸಿಕ್ಕಿತು. ಇದರಿಂದ ಕರಾವಳಿ ಭಾಗದ ಅನೇಕರು ಮದರಾಸಿನಲ್ಲಿ ವಿದ್ಯಾಭ್ಯಾಸ ಮಾಡಲೆಂದು ಹೋಗುವ ಹವ್ಯಾಸವೂ ಬೆಳೆದಿತ್ತು. ಹೀಗೆ ಬ್ರಿಟಿಷ್ ವಿದ್ಯಾಭ್ಯಾಸಕ್ಕೆ ತೆರೆದುಕೊಂಡಿದ್ದರಿಂದ ಭಾಷಾಂತರ ಚಟುವಟಿಕೆಗಳಿಗೆ ಇಲ್ಲಿ ಚಾಲನೆ ಸಿಕ್ಕಿತು.

ಷೇಕ್ಸ್‌ಪಿಯರ್ ಕೃತಿಯ ಭಾಷಾಂತರ ಮಾಡುವ ಪ್ರವೃತ್ತಿಯು ಕೆನರಾ ಪ್ರಾಂತ್ಯದಲ್ಲಿಯೂ ಇತ್ತು. ವೆಂಕಟಾದ್ರಿ ಶಾಮರಾಯ ಎನ್ನುವವರು ಷೇಕ್ಸ್‌ಪಿಯರ್‌ನ ’ಆಸ್ ಯೂ ಲೈಕ್ ಇಟ್’ ಕೃತಿಯನ್ನು ’ಕಮಲಾವತೀ ಪರಿಣಯ’ ಎಂದು ಭಾಷಾಂತರ ಮಾಡಿದ್ದಾರೆ. ಇಪ್ಪತ್ತನೇ ಶತಮಾನದ ಹೊತ್ತಿಗೆ ಬಂದ ಎಂ.ಎನ್.ಕಾಮತ್ ರವೀಂದ್ರನಾಥ ಠಾಗೂರ್ ಅವರ ’ಅಂಚೆಮನೆ’(1924)ಯನ್ನು ಭಾಷಾಂತರಿಸಿದ್ದಾರೆ. ಜೊತೆಗೆ ಕಿರ್ಲೋಸ್ಕರ್ ಅವರ ಮರಾಠಿ ಕೃತಿ ’ಅರ್ಜುನನ ಚಾತಿರ್ಮಾಸ’ವನ್ನು (1929) ಭಾಷಾಂತರ ಮಾಡಿದ್ದಾರೆ. ಮಂಗೇಶರಾಯ ಉಳ್ಳಾಲ ಅವರು ಇಬ್ಸನ್ ಹಾಗು ಅಲೆಕ್ಸಾಂಡರ್ ಡ್ಯೂಮಾ ಅವರ ಕೃತಿಗಳನ್ನು ಕನ್ನಡಿಸಿದ್ದಾರೆ. ಸ್ವಾತಂತ್ರ ಚಳವಳಿಯ ಪ್ರಭಾವಕ್ಕೆ ತೆರೆದುಕೊಂಡ ಭಾಷಾಂತರಕಾರರಾದ ಗೋವಿಂದರಾವ್ ಉಡುಪಿ’ ನನ್ನ ಆರಂಭದ ಜೀವನ’, ’ಸ್ವದೇಶಿ ಸಮಾಜ’, ’ಸ್ವದೇಶಿ’ ಮುಂತಾದ ಕೃತಿಗಳನ್ನು ಭಾಷಾಂತರಿಸಿದ್ದಾರೆ. ಒಟ್ಟಿನಲ್ಲಿ ಕೆನರಾ ಪ್ರಾಂತ್ಯವು ಶೈಕ್ಷಣಿಕ ಅಗತ್ಯ ಹಾಗೂ ಸ್ವಾತಂತ್ರ್ಯ ಚಳವಳಿಗಳೆಂಬ ಮುಖ್ಯವಾಹಿನಿಗಳ ಪ್ರಭಾವದಿಂದ ಭಾಷಾಂತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿತೆನ್ನಬಹುದು.

ಅಖಿಲ ಭಾರತೀಯ ಭಾಷಾಂತರ ಸಂವೇದನೆಗಳಾದ ರಾಷ್ಟ್ರೀಯತೆ, ಹಿಂದುತ್ವ, ಇಂಗ್ಲಿಷ್ ಕಲಿಕೆಯ ಸಾಧಕ ಬಾಧಕಗಳು ಇತ್ಯಾದಿ, ಕನ್ನಡದ ಎಲ್ಲ ಪ್ರಾಂತ್ಯಗಳ ಭಾಷಾಂತರಕಾರರಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಪ್ರತಿ ಪ್ರಾಂತ್ಯದ ಭಾಷಾಂತರ ಗ್ರಹಿಕೆ ಬೇರೆ ಬೇರೆ ಉದ್ದೇಶಗಳಿಂದ ಪ್ರೇರೇಪಿಸಲ್ಪಟ್ಟಿತ್ತು ಎನ್ನುವುದು ಇವುಗಳ ಅಧ್ಯಯನಗಳಲ್ಲಿ ತಿಳಿಯುತ್ತದೆ. ರಾಜಾಶ್ರಯವಿದ್ದ ಮೈಸೂರು ಪ್ರಾಂತ್ಯ ಒಂದೆಡೆ ಭಾಷಾಂತರವನ್ನು ಶಿಷ್ಟತೆಯ ಕಡೆಗೆ ಒಯ್ದರೆ, ಉತ್ತರ ಕರ್ನಾಟಕದ ಭಾಷಾಂತರಗಳು ಕನ್ನಡ ನಾಡು ನುಡಿಯ ಅಸ್ತಿತ್ವಕ್ಕಾಗಿ ಭಾಷಾಂತರಗಳ ಮೊರೆಹೊಕ್ಕಂತೆ ಕಾಣುತ್ತದೆ.

ಕರ್ನಾಟಕವು ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳೆಲ್ಲದರಲ್ಲಿ ಭಾಷಾಂತರ ಚಟುವಟಿಕೆಗಳು ನಡೆಯುತ್ತಿದ್ದವು ಎನ್ನುವುದು ವಿದಿತ. ಈ ಭಾಷಾಂತರಗಳು ಸ್ವಾತಂತ್ರ್ಯ ಚಳವಳಿಗೆ ಪೂರಕವಾಗಿ ಹೊರಳಿ ದೇಶ ಕಟ್ಟಿಕೊಳ್ಳುವ ಹೊತ್ತಿನಲ್ಲಿಯೇ ತಂತಮ್ಮ ನಾಡುನುಡಿಗಳನ್ನು ಪುನಾ ಕಟ್ಟಿಕೊಳ್ಳಬೇಕಾದ ಪ್ರಾದೇಶಿಕ ರಾಷ್ಟ್ರೀಯತೆಯ ಒತ್ತಡವನ್ನು ಅನುಭವಿಸುತ್ತಿದ್ದವು. ಭಾಷಾಂತರಗಳಿಗೆ ಪ್ರೇರಣೆ ನೀಡಿದ್ದು ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ನಾಡುನುಡಿಯನ್ನು ಕಟ್ಟಿಕೊಳ್ಳುವ ತುಡಿತ. ಹೊಸಗಾಲದ ಒತ್ತಡ ತಂದೊಡ್ಡಿದ ನಾಡುನುಡಿಯ ಪುನಾರಚನೆಯ ಸವಾಲನ್ನು ಭಾಷಾಂತರಗಳ ಮೂಲಕ ಪರಿಹರಿಸಿಕೊಳ್ಳಬಹುದೆಂಬ ನಂಬಿಕೆ ಬೆಳೆದಿದ್ದನ್ನು ಕನ್ನಡ ಭಾಷಾಂತರಗಳ ಆರಂಭ ಹಂತದಲ್ಲಿ ನೋಡಬಹುದು. ನಾಡುನುಡಿಯ ಚರಿತ್ರೆಯನ್ನು ರೂಪಿಸುವಲ್ಲಿ ಭಾಷಾಂತರಗಳ ಪಾತ್ರ ಮಹತ್ವದ್ದಾಗಿದೆ. ಕನ್ನಡದಲ್ಲಿ ನಡೆದ ಭಾಷಾಂತರಗಳು ಪ್ರಾದುರ್ಭಾವಕ್ಕೆ ಬರುತ್ತಿದ್ದ ನಾಡು ಮತ್ತು ಉಲಿಯ ಸ್ವರೂಪವನ್ನು ನಿರೀಕ್ಷಿಸಿದ ಪರಿಣಾಮವೇ ಹೊಸಗನ್ನಡದ ಉದಯಕ್ಕೆ ಪ್ರೇರಣೆಯಾಯಿತು.


(ಆಕರಗಳು: ರಾಜೇಂದ್ರ ಚೆನ್ನಿ. ವಸಾಹತುಶಾಹಿ ಸಂದರ್ಭದಲ್ಲಿ ಭಾಷಾಂತರ. ಅಸಮಗ್ರ. ಚೆನ್ನಪಟ್ಟಣ ಅಂಚೆ: ಪಲ್ಲವ ಪ್ರಕಾಶನ, 2010 ಮತ್ತು ಶ್ರೀನಿವಾಸ ಹಾವನೂರ. ಹೊಸಗನ್ನಡದ ಅರುಣೋದಯ. ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ, 2013ನೇ ಮುದ್ರಣ)

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...