ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು

Date: 05-04-2021

Location: ಬೆಂಗಳೂರು


ಪೌರಾಣಿಕ ಕೃತಿಗಳು, ವಚನ ಚಳವಳಿ, ಭಕ್ತಿ ಚಳವಳಿಗಳಿಂದ ಹಿಡಿದು ಈವರೆಗಿನ ಸಾಹಿತ್ಯಿಕ ಪಯಣದಲ್ಲಿ ದಾಖಲಾಗಿರುವ ಮಹಿಳಾ ಸಂವೇದನೆಗಳ ಜೊತೆಗೆ ಕನ್ನಡ ಚಿಂತನೆ ರೂಪುಗೊಂಡ ಬಗೆಯನ್ನು ಲೇಖಕಿ ಗೀತಾ ವಸಂತ ಅವರು ತಮ್ಮ ‘ತೆರೆದಷ್ಟೂ ಅರಿವು’ ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ .

ಕನ್ನಡ ಚಿಂತನೆಯೆಂಬುದು ಏಕಾಕೃತಿಯದಲ್ಲ. ಸಂಸ್ಕೃತಿಯ ಬಹುತ್ವ ಹಾಗೂ ಅದರ ಚಾರಿತ್ರಿಕ ನಡೆಗಳನ್ನು ಗಮನಿಸುತ್ತ ಹೋದರೆ ಕನ್ನಡ ಚಿಂತನೆಯ ಬಹುತ್ವದ ಆಯಾಮಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಹಾಗೆಯೇ ಮಹಿಳಾ ಸಂವೇದನೆಯೆಂಬುದೂ ಬಹುಸ್ವರೀಯವಾದುದು. ಒಂದು ನಿಶ್ಚಿತ ಆಕೃತಿಯಲ್ಲಿ ಅದನ್ನು ಕಟ್ಟಲು ಸಾಧ್ಯವಿಲ್ಲ. ಹೆಣ್ಣು ಎಂಬುದು ಜೈವಿಕ ಗುರುತಾದರೆ, ಮಹಿಳೆ ಎಂಬುದು ಸಮಾಜೋ ಸಾಂಸ್ಕೃತಿಕ ನಿರ್ಮಿತಿ. ಚರಿತ್ರೆಯಲ್ಲಿ ತೋರುವ ಹೆಣ್ಣು ಮಾದರಿಗಳು ನಿಜದ ಹೆಣ್ಣನ್ನು ಕಾಣಿಸುವಲ್ಲಿ ಇರುವ ಬಿಕ್ಕಟ್ಟುಗಳನ್ನು ಬಹು ದೀರ್ಘವಾಗಿ ಚರ್ಚಿಸಬೇಕಾಗುತ್ತದೆ. ಯಾಕೆಂದರೆ ಚರಿತ್ರೆಯನ್ನು ಪುರುಷ ಪ್ರಧಾನ ದೃಷ್ಟಿಕೋನದಿಂದ ಕಾಣಲಾಗಿದೆ. ಚರಿತ್ರೆಯಲ್ಲಿ ದಾಖಲಾರ್ಹವಾದುದು ಯಾವುದೆಂಬುದನ್ನು ನಿರ್ಧರಿಸುವಲ್ಲಿ ಈ ಲಿಂಗಪ್ರಜ್ಞೆಯು ಕೆಲಸಮಾಡುತ್ತದೆ. ಅದನ್ನು ಸ್ಥಿರೀಕರಿಸುವ ಭಾಷೆಯೂ ಸಹ ಹೆಣ್ಣಿನ ಬಿಂಬವೊಂದನ್ನು ಆಳವಾಗಿ ರೂಪಿಸಿಬಿಡುತ್ತದೆ. ಅಧಿಕಾರ ಕೇಂದ್ರಿತ ಚಿಂತನೆಗಳು ಕಟ್ಟುವ ಜ್ಞಾನದ ಸ್ವರೂಪವೂ ಸಹ ಹೆಣ್ಣನ್ನು ಅಂಚಿನ ನೆಲೆಯೊಂದರಲ್ಲಿ ನಿಲ್ಲಿಸಿಬಿಡುತ್ತವೆ. ಈ ಎಲ್ಲ ಸಂದರ್ಭಗಳ ಒಡಲಲ್ಲೇ ರೂಪುಗೊಂಡ ಮಹಿಳಾ ಸಂವೇದನೆಗಳ ಬಹುನೆಲೆಗಳನ್ನು ಪ್ರಸ್ತುತ ಸನ್ನಿವೇಶದಲ್ಲಿ ನಿಂತು ಅರಿಯುವುದು ನಿಜಕ್ಕೂ ಸವಾಲಿನ ಸಂಗತಿ.

ಕನ್ನಡ ಚಿಂತನೆಗಳ ಜಾಡುಹಿಡಿದು ನಡೆದರೆ ಕಾಣಿಸುವುದು ಧರ್ಮ ಪ್ರಭುತ್ವ ಹಾಗೂ ಭಾಷೆಯ ಸಂಬಂಧಗಳ ಬಹುವಿನ್ಯಾಸಗಳು. ಎಲ್ಲ ಅಧಿಕಾರ ರಚನೆಗಳು ಇದರ ಸುತ್ತಲೇ ಸುತ್ತುತ್ತವೆ. ಕುಟುಂಬದಿಂದಲೇ ಶುರುವಾಗುವ ಅಧಿಕಾರ ಸಂಬಂಧಗಳು ಸಮಾಜದ ಎಲ್ಲ ರಚನೆಗಳಲ್ಲೂ ತಲೆದೋರುತ್ತಹೋಗುತ್ತವೆ. ರಾಜಪ್ರಭುತ್ವದಿಂದ ಹಿಡಿದು ಇಂದಿನ ಬಂಡವಾಳಶಾಹಿ ಪ್ರಭುತ್ವದವರೆಗೂ ಅಧಿಕಾರ ರಚನೆಯ ಕಬಂಧ ಬಾಹುಗಳು ಚಾಚಿವೆ. ಈ ಎಲ್ಲ ರಚನೆಗಳಿಂದ ಬಿಡುಗಡೆ ಪಡೆಯಲು ಬಯಸುವ ವ್ಯಕ್ತಿಪ್ರಜ್ಞೆ ಹಾಗೂ ಸಮೂಹ ಪ್ರಜ್ಞೆಯ ಮೇಳಸ್ವರಗಳಾಗಿ ಕನ್ನಡ ಚಿಂತನೆಗಳು ಕೇಳಿಸುತ್ತವೆ. ಹತ್ತನೇ ಶತಮಾನದಲ್ಲಿ ಶೌರ್ಯದ ಪೌರುಷ ಪ್ರವೃತ್ತಿಯ ಆರಾಧನೆ ನೇರವಾಗಿ ಕಂಡುಬಂದರೆ ಧಾರ್ಮಿಕ ಬಲದ ಸ್ಥಾಪನೆಯು ಮೆಲುದನಿಯಲ್ಲಿ ಆರಂಭವಾಗಿ ತೀವ್ರ ಸ್ವರೂಪ ಪಡೆಯಿತು. ಇಂಥ ಪ್ರವೃತ್ತಿಯ ಕಾವ್ಯಗಳ ನಡುವೆಯೂ ‘ಸಾಲುಗಳ ನಡುವಿನ’ ಧ್ವನಿಯಾಗಿ ಅಂಚಿನ ಜಗತ್ತು ಮಾತಾಡುತ್ತಲೇ ಇತ್ತು. “ಕರ್ಣ ರಸಾಯನಮಲ್ತೆ ಭಾರತಂ” ಎಂದು ಪಂಪ ನುಡಿಯುವುದನ್ನೂ, “ಅರಸ ರಾಕ್ಷಸ, ಮಂತ್ರಿ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ” ಎಂದು ಶ್ರೀಸಾಮಾನ್ಯನ ಮೂಲಕ ಕುಮಾರವ್ಯಾಸ ಪ್ರಶ್ನಿಸುವುದನ್ನೂ, “ಪತಿಗಳೈವರು ಎನ್ನನು ಮಾರಿ ಧರ್ಮಸ್ಥಿತಿಯನು ಕೊಂಡರು” ಎಂದು ಹೇಳುವ ದ್ರೌಪದಿಯನ್ನೂ ನಾವು ನಮ್ಮ ಚಿಂತನೆಯ ಭಾಗವಾಗಿ ಸ್ವೀಕರಿಸಿಯೇ ಇದ್ದೇವೆ. ಭಿನ್ನ ಧ್ವನಿಗಳನ್ನು ಸೃಷ್ಟಿಸಲು ಹಾಗೂ ಆಲಿಸಲುಬೇಕಾದ ಸೂಕ್ಷ್ಮತೆ ಕನ್ನಡ ಚಿಂತನೆಗಳಿಗಿದೆ. ಅಧಿಕಾರ ರಚನೆಗಳನ್ನು ತನ್ನ ಆಳವಾದ ಅರಿವಿನ ಮೂಲಕ ನಿರಚಿಸಿದವನು ಅಲ್ಲಮ. ಅವನ ಬಯಲಾಗುವ ಪ್ರಕ್ರಿಯೆಯು ಧಾರ್ಮಿಕ ಪ್ರಭುತ್ವದೊಟ್ಟಿಗೆ ಎಲ್ಲ ಬಗೆಯ ಪ್ರಭುತ್ವಗಳು ರಚಿಸುವ ಪರಿಕಲ್ಪನೆಗಳನ್ನು ನಿರಚಿಸುತ್ತದೆ. ಭಾಷೆಗಿರುವ ಅರ್ಥದ ಪ್ರಭುತ್ವವನ್ನೂ ನಿರಾಕರಿಸುವ ಅವನ ವಚನಗಳು ಭಾಷೆಯನ್ನೇ ಬೆಡಗಿನ ನುಡಿಯಾಗಿ ಪರಿವರ್ತಿಸಿಕೊಂಡಿವೆ. ಜ್ಞಾನವು ಸ್ಥಾಪಿಸುವ ಅಧಿಕಾರವನ್ನು ಶರಣ ಚಳವಳಿಯು ನಿರಾಕರಿಸುತ್ತ ಅರಿವಿನ ಹೊಸಮಾದರಿಗಳಿಗೆ ಕಣ್ತೆರೆಸಿದೆ. ಹಾಗೆಯೇ ಭಕ್ತಿ ಚಳವಳಿಯೂ ಅಂತರಂಗದ ಪರಿವರ್ತನೆಯ ಶಕೆಯೊಂದನ್ನು ಆರಂಭಿಸಿತು. ಭಕ್ತ ಹಾಗೂ ಭಗವಂತನ ನೇರ ಸಂಬಂಧವು, ಕರಗುವ ಮೂಲಕ ಕಟ್ಟಿಕೊಂಡ ಅಸ್ತಿತ್ವವನ್ನೇ ನಿರಚಿಸುವ ಹೊಸದಾರಿಯನ್ನು ಎಲ್ಲರಿಗೂ ಮುಕ್ತವಾಗಿ ತೆರೆದಿಟ್ಟಿತು. ಈ ಆತ್ಮಶೋಧನೆಯ ಎಲ್ಲ ದಾರಿಗಳಲ್ಲೂ ಮಹಿಳಾ ಸಂವೇದನೆಯು ಚಲಿಸಿದೆ. ತನ್ನ ಅರಿವಿನ ಮೂಲಕ ದಾರಿಯನ್ನು ವಿಸ್ತರಿಸಿದೆ.

ಹೆಣ್ಣುತನದ ಪ್ರಶ್ನೆಯನ್ನು ಲಿಂಗಾವಸ್ಥೆಯ ಸ್ವರೂಪವನ್ನೇ ಕದಲಿಸುವ ಮೂಲಕ ಕೇಳುವ ಮೊದಲ ಧ್ವನಿಗಳನ್ನು ವಚನಕಾರರಲ್ಲಿ ಕಾಣುತ್ತೇವೆ. ಆಧ್ಯಾತ್ಮವೆಂಬುದು ಆತ್ಯಂತಿಕ ಅರಿವಿನ ಹುಡುಕಾಟವಾಗಿ ವಚನಕಾರರಿಗೆ ಕಂಡಿರುವುದರಿಂದ ಅವರು ಇದುವರೆಗೂ ಸ್ಥಾಪಿತಗೊಂಡ ಅರಿವನ್ನು ನಿರಚಿಸುವ ಕಾರ್ಯವನ್ನು ಭಾಷೆಯ ಮೂಲಕವೂ ಮಾಡಿದರು. ವಿಸ್ಮೃತಿಯ ತಳದಲ್ಲಿ ಹೂತಿರುವ ಮೂಲಸ್ವರೂಪದ ಶೋಧವು ಎಲ್ಲ ಅನುಭಾವಿಗಳ, ದಾರ್ಶನಿಕ ಪಂಥಗಳ ಹಂಬಲವೂ ಹೌದು. ಭಿನ್ನ ಮಾರ್ಗಗಳ ಮೂಲಕ ನಡೆದ ಈ ಹುಡುಕಾಟವೇ ಅಧಿಕಾರ ರಚನೆಯಾಚೆಗಿನ ಪರ್ಯಾಯ ಅರಿವಿನ ಮಾರ್ಗಗಳ ಮೂಲಸ್ರೋತವೂ ಹೌದು. ಇಂಥ ಅರಿವಿನ ಪರಂಪರೆಯ ಮೂಲಕ ತಮ್ಮನ್ನು ಕಟ್ಟಿಕೊಂಡ ವಚನಕಾರ್ತಿಯರು ಮಹಿಳಾ ಸಂವೇದನೆಗೆ ಆಳ ಮತ್ತು ವಿಸ್ತಾರಗಳನ್ನು ದೊರಕಿಸಿಕೊಟ್ಟರು. ಹೆಣ್ಣು ದೇಹಕ್ಕಿರುವ ಫಲವಂತಿಕೆಯ ಸ್ವರೂಪವನ್ನು ಮಾಯೆ ಎಂದು ಅರ್ಥೈಸುತ್ತ ಬಂದ ಪಿತೃಮೂಲೀಯ ಜ್ಞಾನವ್ಯವಸ್ಥೆಯು ಅದರ ಕುರಿತು ನಿಗೂಢ ಭಯವನ್ನು ಇಟ್ಟುಕೊಂಡೇ ಬಂದಿದೆ. ಈ ಮಾಯೆಯನ್ನು ನಿರಾಕರಿಸಿ ಗೆದ್ದರಷ್ಟೇ ಸಾಧಕನಾಗುವುದು ಸಾಧ್ಯವೆಂಬ ಭ್ರಮೆಯಲ್ಲಿ ಅದು ಸ್ಥಿತವಾಗಿದೆ. ಆದರೆ ಮಾಯೆಯಿರುವುದು ಮನಸ್ಸಿನಲ್ಲೇ ಹೊರತೂ ಹೆಣ್ತನದಲ್ಲಲ್ಲ ಎನ್ನುತ್ತಾನೆ ಅಲ್ಲಮ.

ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ

ಪ್ರಜ್ಞೆಯ ತಳದಲ್ಲಿ ಹೆಣ್ಣು ಗಂಡು ಎರಡೂ ಆಗಿರದ ಸ್ವ ಸ್ವರೂಪವೊಂದನ್ನು ವಚನಕಾರರು ಶೋಧಿಸಹೊರಡುತ್ತಾರೆ. ಈ ಅರಿವಿಗೆ ಮೊಲೆ, ಮುಡಿಗಳ ಹಂಗಿಲ್ಲ. ಕಾಣುವ ರೂಪದ ಹಿಂದಿನ ನಿರಾಕಾರ ಪ್ರಜ್ಞೆ ಅವರ ಗುರಿ. ಜೇಡರ ದಾಸಿಮಯ್ಯನ ವಚನದಲ್ಲಿ ಇದನ್ನು ಕಾಣುತ್ತೇವೆ. ಮೊಲೆಮೂಡಿ ಬರುವುದೂ, ಮೀಸೆಕಾಸೆ ಬರುವುದೂ ಪ್ರಕೃತಿಧರ್ಮ. ಅದನ್ನು ಆಧರಿಸಿ ಕಟ್ಟಿಕೊಳ್ಳುವ ತರತಮ ಪ್ರಜ್ಞೆಯ ಬದುಕು ಸಹಜ ಪ್ರಕೃತಿಗೆ ವಿರುದ್ಧವಾದುದು. ಒಳಗಿನ ಚೈತನ್ಯಕ್ಕೆ ಜೈವಿಕತೆಯ ಹಂಗಿಲ್ಲವೆಂಬ ಈ ಅರಿವು ದೇಹವೇ ಬಂಧನವೆಂಬ ಸ್ಥಿತಿಯಲ್ಲಿದ್ದ ಹೆಣ್ಣಿಗೆ ದೊರೆತ ಬಹುದೊಡ್ಡ ಬಿಡುಗಡೆ. ಇದು ಭೌತಿಕ ಬಿಡುಗಡೆಯೂ ಹೌದು, ಬೌದ್ಧಿಕ ಬಿಡುಗಡೆಯೂ ಹೌದು. ಗೊಗ್ಗವ್ವೆ ಪ್ರತಿಪಾದಿಸುವಂತೆ ಹೆಣ್ಣು- ಗಂಡೆಂಬ ಉಭಯದ ಜ್ಞಾನ ಗಂಡೂ ಅಲ್ಲ, ಹೆಣ್ಣೂ ಅಲ್ಲ. ಅರಿವು ಇಂಥ ಪೂರ್ವಗ್ರಹೀತಗಳಿಂದ ಮುಕ್ತವಾಗಿ ಉಳಿದಾಗಲೇ ಕೃತಕ ಬಂಧಗಳು ಕಳಚಿಬೀಳುತ್ತವೆ. ಇಂಥ ಮುಕ್ತ ದೃಷ್ಟಿಕೋನವು ಮಾತ್ರ ಮಹಿಳೆಯರ ಅಸ್ಮಿತೆಯ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳಲು ಶಕ್ತವಾಗುತ್ತದೆ. ಕೊನೆಗೂ ವಚನಾನುಭವವು ಅರ್ಥದ ಪ್ರಭುತ್ವವನ್ನು ಸ್ಥಿರೀಕರಿಸುವ ರಚನೆಯಲ್ಲದ ಕಾರಣ ಅದು ತನ್ನ ಜಂಗಮ ಸ್ವರೂಪವನ್ನು ಕಾಪಿಟ್ಟುಕೊಂಡಿದೆ. ಅನೇಕ ಮಹಿಳೆಯರು ತಮ್ಮನ್ನು ಶೋಧಿಸಿಕೊಳ್ಳುತ್ತ ಹರಿಯಲು ಇದು ಕಾರಣವಾಯಿತು. ಇಲ್ಲಿ ಅಕ್ಕಮಹಾದೇವಿಯ ಆತ್ಮಶೋಧದ ತೀವ್ರ ಮಾದರಿ ಒಂದಾದರೆ ಶ್ರಮದ ಮೂಲಕವೇ ತಮ್ಮನ್ನು ಕಟ್ಟಿಕೊಂಡ ತಳವರ್ಗದ ವಚನಕಾರ್ತಿಯರ ಮಾದರಿ ಇನ್ನೊಂದು. ಹಾಗೆಯೇ ಮದುವೆಯೆಂಬ ವ್ಯವಸ್ಥೆಯನ್ನು ಮಿತಿಯೆಂದು ನಿರಾಕರಿಸಿ ಅಕ್ಕ ಒಂದುಮಾದರಿಯಾಗಿ ಕಂಡರೆ, ಮಡದಿಯಾಗಿದ್ದೂ ತನ್ನ ಸ್ವಾಯತ್ತ ನಿಲುವುಗಳನ್ನು ಉಳಿಸಿಕೊಂಡ ನೀಲಮ್ಮನದು ಒಂದು ಮಾದರಿ.

ಜೈವಿಕ ಸತ್ಯಗಳನ್ನು ಅರಿವಿನ ನೆಲೆಯಲ್ಲಿ ನಿರಾಕರಿಸಿದರೂ ಅನುಭವದ ನೆಲೆಯಲ್ಲಿ ನಿರಾಕರಿಸಲಾಗದು. ಇಂಥ ದ್ವಂದ್ವಗಳನ್ನು ಮೀರಬೇಕಾದರೆ ಅನುಭವದ ಕೆಂಡವನ್ನು ಹಾಯಲೇಬೇಕು. ಅಕ್ಕಮಹಾದೇವಿಯ ಅಭಿವ್ಯಕ್ತಿಯಲ್ಲಿ ಇಂಥ ಸಂಕಟಗಳ ತೀವ್ರಾಭಿವ್ಯಕ್ತಿಯನ್ನು ಕಾಣುತ್ತೇವೆ. ಅವಳು ದೇಹಾನುಭವವನ್ನು ನಿರಾಕರಿಸದೇ ಆ ಮೂಲಕವೇ ಯೌಗಿಕ ಐಕ್ಯವನ್ನು ಪ್ರತಿಪಾದಿಸುತ್ತಾಳೆ. ದೇಹ ಮತ್ತು ಚೈತನ್ಯವನ್ನು ದ್ವಂದ್ವ ನೆಲೆಯಲ್ಲಿ ನಿಲ್ಲಿಸದೇ ಒಂದಾಗಿ ಕಟ್ಟುತ್ತಾಳೆ. ಅವಳ ವಚನಗಳುದ್ದಕ್ಕೂ ಕಂಡುಬರುವ ಕೂಟದ ಪ್ರತಿಮೆಗಳು ವಿಶೇಷವಾಗಿವೆ. “ ಹಾದರವನಾಡುವೆನು ಹರನ ಕೂಡೆ” ಎನ್ನುವಲ್ಲಿ ಲೋಕದ ಸಂಬಂಧಗಳ ನೈತಿಕ ಚೌಕಟ್ಟುಗಳು ಹಿಗ್ಗುತ್ತಾ ಬಯಲಾಗಿಹೋಗುವುದು ಕಾಣಿಸುತ್ತದೆ. ಅಕ್ಕ ಕಟ್ಟುವ ದೈಹಿಕ ಮಿಲನದ ಪ್ರತಿಮೆಯು ಏಕಕಾಲಕ್ಕೆ ಮೂಲಾಧಾರದ ಶಕ್ತಿ ಪ್ರವಾಹವು ಸಹಸ್ರಾರದ ಶಿವನನ್ನು ಸೇರುವ ಮಹಾಮಿಲನದ ತಾಂತ್ರಿಕ ಪರಿಭಾಷೆಯೂ ಹೌದು. ಸೂಳೆ-ಪತಿವ್ರತೆ ಎಂಬ ಕಪ್ಪು ಬಿಳುಪಿನ ಗ್ರಹಿಕೆಯಾಚೆ ಹೆಣ್ಣುದೇಹವನ್ನೂ ಅದರ ಚೈತನ್ಯವನ್ನೂ ದಾಟಿಸುವ ಅರಿವಿನ ಶಕ್ತಿ ಅಕ್ಕಮಹಾದೇವಿಯದು.

ಫಲ ಒಳಗೆ ಪಕ್ವವಾಗಿಯಲ್ಲದೆ
ಹೊರಗಳ ಸಿಪ್ಪೆ ಒಪ್ಪಗೆಡದು
ಕಾಮನ ಮುದ್ರೆಯ ಕಂಡು ನಿಮಗೆ
ನೋವಾದೀತೆಂದು ಆ ಭಯದಿಂದ ಮುಚ್ಚಿದೆ

ಎನ್ನುವಲ್ಲಿ ಮಿತಿಯಿರುವುದು ದೇಹದಲ್ಲ, ಅದನ್ನು ಪರಿಭಾವಿಸುವ ನೋಟದಲ್ಲಿ ಎಂಬುದನ್ನು ಅಕ್ಕ ಕಾಣಿಸುತ್ತಾಳೆ. ಒಳಗಿನ ಪಕ್ವತೆಯನ್ನು ಫಲದ ಹೊರಮೈಯೂ ಕಾಣಿಸುತ್ತದೆ. ಆದರೆ ಕಾಣುವ ನೋಟವು ಮಿತಿಗೊಳ್ಳದಿದ್ದಾಗ ಮಾತ್ರ ಅರಿವಾಗುತ್ತದೆ. ಹೆಣ್ಣು ದೇಹದ ಬೆತ್ತಲು ಅವಳನ್ನು ಎರಡನೆಯ ದರ್ಜೆಯವಳನ್ನಾಗಿ ಮಾಡುವುದಿಲ್ಲ. ಅದನ್ನು ಪರಿಭಾವಿಸುವ ರೀತಿ ಅದನ್ನು ಮಾಡುತ್ತದೆ. ದೇಹವು ಸೂತಕವಾಗುವುದು ಕಣ್ಣಿನಲ್ಲಿ, ಬುದ್ದಿ ಮನಸ್ಸುಗಳಲ್ಲಿಯೇ ಹೊರತೂ ದೇಹದಿಂದಾಗಿಯಲ್ಲ. ಮೂತ್ರ ಒಸರುವ ನಾಳವಾದ ಯೋನಿಯು ಕಾಮದ ಗೂಡಾಗಿ ಕಾಣುವುದು ಅದನ್ನು ಭೋಗವಸ್ತುವಾಗಿ ಬಯಸುವ ಇಂದ್ರಿಯಗಳಿಗೇ ಹೊರತೂ ಕಾಮವಳಿದ ಅಕ್ಕನಿಗಲ್ಲ. ಬಾಹ್ಯ ಜಗತ್ತು ಪರಿಪರಿಯಾಗಿ ಪ್ರಶ್ನಿಸಿದಾಗ, ಸಂದೇಹಿಸಿದಾಗ ಅಕ್ಕ ಕೊಡುವ ದಿಟ್ಟ ಉತ್ತರವಿದು. ಕೊನೆಯಲ್ಲಿ “ಎನ್ನ ಕಾಯ ಮಣ್ಣು ಜೀವ ಬಯಲು” ಎಂಬ ಪರಿಪಕ್ವತೆಯಲ್ಲಿ ನಿಲ್ಲುವ ಅಕ್ಕ ಕನ್ನಡ ಚಿಂತನಾ ಪರಂಪರೆಯನ್ನು ನಿಸ್ಸಂಶಯವಾಗಿ ಹಿಗ್ಗಿಸಿದ್ದಾಳೆ.

ಸತಿಪತಿ ಭಾವದಲ್ಲಿ ಅರಳಿದ ಚೈತನ್ಯಕ್ಕೆ ಅನೇಕ ಶರಣೆಯರು ಉದಾಹರಣೆಯಾಗಿ ನಿಲ್ಲುತ್ತಾರೆ. ಇವರೆಲ್ಲ ‘ವಿಚಾರ ಪತ್ನಿಯರು’. ಈ ಸಖ್ಯದಲ್ಲಿ ಸಮಭಾವ ಸಿದ್ದಿಸಿಕೊಂಡವರು. “ಮಡದಿಯೆಂಬ ಶಬ್ಧ ನಿಶ್ಯಬ್ಧವಾದಡೆ ನಾನೀಗ ನಿಜಸುಖಿ ಬಸವಾ” ಎನ್ನುತ್ತಾಳೆ ಬಸವಣ್ಣನ ಮಡದಿ ನೀಲಮ್ಮ. ಇಲ್ಲಿ ನಿಶ್ಯಬ್ದವಾಗಬೇಕಿರುವುದು ಅಧೀನತೆಯ ಅಧಿಕಾರ ಸಂಬಂಧವೇ ಹೊರತೂ ಜೀವ ಸಂಬಂಧವಲ್ಲ.

ಹಂದೆಯಲ್ಲ ನಾನು
ಹರುಷದ ಧೈರ್ಯವುಳ್ಳ ಹೆಣ್ಣು ನಾನು
ಕಾಮವನಳಿದವಳಾನಾದ ಕಾರಣ
ಬಸವನ ಹಂಗೆನಗಿಲ್ಲವಯ್ಯ
ಭ್ರಮೆಯಡಗಿ ಕಲೆ ನಷ್ಟವಾಗಿ ಮುಖವರತು
ಮನ ವಿಚಾರ ಕಂಡೆನಯ್ಯ ಸಂಗಯ್ಯ

ಸಮಾನ ಪಾತಳಿಯಲ್ಲಿ ಬೆರೆತ ಜೀವಗಳು ವಿಕಾಸಮುಖಿಯಾಗುವ ಚಲನೆಯಿದು. ಪ್ರಖರ ಎಚ್ಚರದಿಂದ ಬದುಕುವ ವಿಚಾರಪ್ರಜ್ಞೆಯು ಭ್ರಮೆಗಳಿಂದ ಬಿಡುಗಡೆ ನೀಡುತ್ತದೆ. ಕಾಮ ಸಂಬಂಧವನ್ನೂ ಮೀರಿದ ಜೀವ ಸಖ್ಯ ಸಾಧ್ಯವಾದಾಗ ತಾನು ಬಸವನಿಗೂ, ಬಸವ ತನಗೂ ಶಿಶುವಾಗುವುದು ಸಾಧ್ಯವಾಗುತ್ತದೆ ಎಂಬುದು ಅವಳ ಕಾಣ್ಕೆ. ಇಲ್ಲಿ ಸಂಸಾರದ ನಿರಾಕರಣೆಯಿಲ್ಲ. ಬದಲಿಗೆ ಪುನಾರಚನೆಯ ಹಂಬಲ ಹಾಗೂ ಧೈರ್ಯವಿದೆ.

ಎನ್ನ ಕಣ್ಣೊಳಗಣ ಕಟ್ಟಿಗೆಯ ನಾನೆ ಮುರಿಯಬೇಕು
ಎನ್ನ ಕಾಲೊಳಗಣ ಮುಳ್ಳ ನಾನೆ ತೆಗೆಯಬೇಕು
ಎನ್ನ ಅಂಗದಲಿಪ್ಪ ಅಹಂಕಾರ ನಾನೆ ಸುಡಬೇಕು
ಎನ್ನ ಮನದಲಿಪ್ಪ ಮಾಯಾಪ್ರಪಂಚವ ನಾನೆ ಕಳೆಯಬೇಕು
ಅಮುಗೇಶ್ವರ ಲಿಂಗವ ನಾನೆ ಅರಿಯಬೇಕು

ಅಮುಗೆಯ ರಾಯಮ್ಮನ ವಚನದ ಈ ಆತ್ಮವಿಶ್ವಾಸ ಅರಿವಿನಿಂದ ಹುಟ್ಟಿದ್ದು. ನಿರ್ಭಯವಾದ ಮಹಿಳಾ ಸಂವೇದನೆಯೊಂದನ್ನು ಕಟ್ಟಿಕೊಟ್ಟ ವಚನ ಚಳವಳಿಯು ಕನ್ನಡ ಮಹಿಳೆಯರ ಅರಿವಿನ ನಿರ್ಮಿತಿಯಲ್ಲಿ ಮೈಲುಗಲ್ಲಾಗಿದೆ. ಅರಿವನ್ನು ಬದುಕುವುದು ಕಡುಕಷ್ಟ. ಅಲ್ಲಿ ಒಂಟಿತನ ಕಟ್ಟಿಟ್ಟ ಬುತ್ತಿ. ಪ್ರವಾಹದ ವಿರುದ್ಧ ಈಸುವ ಧೈರ್ಯ ಹಾಗೂ ಬಲವನ್ನು ಸ್ವಯಂ ಆರ್ಜಿಸಿಕೊಳ್ಳಬೇಕಾಗುತ್ತದೆ. ಇಂಥ ಹೋರಾಟದ ಮನೋಭಾವಕ್ಕೆ ಕೂಡ ಹನ್ನೆರಡನೆಯ ಶತಮಾನವು ಭಿತ್ತಿಯಾಗಿದೆ. ಸತ್ಯಕ್ಕ, ಮುಕ್ತಾಯಕ್ಕ, ಆಯ್ದಕ್ಕಿ ಲಕ್ಕಮ್ಮ, ಅಮುಗೆಯ ರಾಯಮ್ಮ, ಸೂಳೆ ಸಂಕವ್ವೆ, ಕದಿರ ರೆಮ್ಮವ್ವೆ ಮುಂತಾದವರ ವಚನಗಳು ಕಟ್ಟಿದ ಸಂಕಥನವು ಇಂದಿಗೂ ಮುಂದುವರೆಯುತ್ತಿದೆ. ಕಾಯಕನಿಷ್ಠೆಯನ್ನು ಆಧ್ಯಾತ್ಮದ ನೆಲೆಗೇರಿಸಿದ ಹಾಗೂ ಶ್ರಮಶಕ್ತಿಯನ್ನು ವ್ಯಕ್ತಿತ್ವದ ಶಕ್ತಿಯಾಗಿಸಿಕೊಂಡ ಇವರ ಅರಿವು ವಿಶಿಷ್ಟವಾದುದು.

ಮುಂದಿನ ಶತಮಾನಗಳಲ್ಲಿ ಭಕ್ತಿ ಚಳವಳಿಯು ರೂಪಿಸಿದ ಪ್ರಜ್ಞೆಯು ಮಹಿಳೆಯರಿಗೆ ಬಿಡುಗಡೆಯ ದಾರಿಗಳನ್ನು ಕಾಣಿಸಿತು. ಭಕ್ತಿ ಕೂಡ ಸುಪ್ತ ಬಂಡಾಯವೇ. ಭಕ್ತಿಯಲ್ಲಿ ಅಧಿಕಾರ ರಚನೆಗಳು ನಿರಸನಗೊಳ್ಳತ್ತವೆ. ಅದಕ್ಕೂ ಮಿಗಿಲಾಗಿ ಅಹಂ ನಿರಸನವು ಭ್ರಮೆಗಳನ್ನೆಲ್ಲ ಕರಗಿಸಿ ನಿಜದ ನಿಲುವನ್ನು ಕಾಣಿಸುತ್ತದೆ. ಭಕ್ತಿಯೆಂದರೆ ಹೆಣ್ಣಾಗುವುದು. ಅಂದರೆ ತಾಯ್ತನಕ್ಕಿರುವ ಪಕ್ವತೆಯನ್ನು, ಪ್ರೇಮದಲ್ಲಿರುವ ವಿಕಾಸವನ್ನು ಅನುಭವಿಸುವುದು. ಮಹತ್ತಿಗೆ ಅರ್ಪಿಸಿಕೊಳ್ಳವಲ್ಲಿ ಅಹಂನ ಮೊಟ್ಟೆಯೊಡೆದುಕೊಳ್ಳುವುದು. ಭಕ್ತಿ ಎಂಬ ಅಂತರಂಗ ಪರಿವರ್ತನೆ ಹಾಗೂ ಪರಿಮಾರ್ಜನೆಯ ದಾರಿ ಸ್ತ್ರೀಮನಕ್ಕೆ ಹತ್ತಿರವಾಗಿ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ. ತಮ್ಮ ವಿವೇಕಪೂರ್ಣ ದೃಷ್ಟಿಯಲ್ಲಿ ಜಗತ್ತನ್ನು ಮೀಯಿಸಿದ ಹಿರಿಮೆ ಎಷ್ಟೋ ಹೆಸರಿಲ್ಲದ ಸಂತ ಕವಯತ್ರಿಯರದು. ಹರಪನಹಳ್ಳಿ ಭೀಮವ್ವನ ‘ಇಂದುವದನೆ ಪಾರ್ವತಿಯೆ’ ಎಂಬ ರಚನೆಯಲ್ಲಿ ಪಾರ್ವತಿಯು ಶಿವನ ಅಹಮ್ಮಿನ ಕೊಂಬು ಮುರಿಯುವ ಸನ್ನಿವೇಶವನ್ನು ಇಲ್ಲಿ ಉದಾಹರಿಸಬಹುದು. ಜನಪದ ಹೆಣ್ಣುವಿವೇಕವು ಭಕ್ತಿಯೊಡನೆ ಬೆರೆತ ಚಿಂತನಕ್ರಮವೊಂದು ಹೀಗೆ ಹುಟ್ಟಿತು. ಆಧುನಿಕ ಸಂದರ್ಭದಲ್ಲಿ ವೈದೇಹಿಯವರ ‘ಶಿವನ ಮೀಸುವ ಹಾಡು’ ಎಂಬ ಪದ್ಯದಲ್ಲಿಯೂ ಇಂಥ ‘ಸ್ತ್ರೀ ಸಮಯ’ ವು ಹೊಳೆಯುತ್ತದೆ. ಹೆಣ್ಣಿನ ಪೊರೆಯುವ ಶಕ್ತಿ ‘ಆರ್ದೃಗರ್ವ’ ವಾಗಿ ತೋರುತ್ತದೆ. ಸ್ತ್ರೀತ್ವಕ್ಕೆ ಸ್ವಾಯತ್ತ ನೆಲೆಯೊಂದನ್ನು ಕಲ್ಪಿಸುವ ಈ ಭಾವವು ಹೆಣ್ಣನ್ನು ಗಂಡಿನ ಸಮಾನವಾಗಿ ಭಾವಿಸದೇ ಭಾವ ಪರಿಪಕ್ವ ಉನ್ನತಿಕೆಯ ನೆಲೆಯಲ್ಲಿ ನಿಲ್ಲಿಸುತ್ತದೆ. ಅವಳ ಅಂತಃಸತ್ವವನ್ನೂ ಅನನ್ಯತೆಯನ್ನೂ ಎತ್ತಿ ಹಿಡಿಯುತ್ತದೆ.

ಆಧುನಿಕ ಸಂದರ್ಭಕ್ಕೆ ಬಂದರೆ ಸ್ವಾತಂತ್ರ್ಯ ಹೋರಾಟ, ಸುಧಾರಣಾವಾದಿ ಚಳವಳಿಗಳು, ಆಧುನಿಕ ಶಿಕ್ಷಣವು ಪರಿಚಯಿಸಿದ ಪ್ರಜಾಪ್ರಭುತ್ವದ ಮೌಲ್ಯಗಳು ಮಹಿಳೆಯರ ಆಲೋಚನಾ ಕ್ರಮವನ್ನು ರೂಪಿಸಿದವು. ಗಾಂಧಿ, ಅಂಬೇಡ್ಕರ್, ಲೋಹಿಯಾ ಚಿಂತನೆಗಳಲ್ಲೂ ಈ ಹೊಸ ಮಹಿಳೆಯ ಆವಿರ್ಭಾವವಾಯಿತು. ಸಾರ್ವಜನಿಕ ಬದುಕಿನಲ್ಲಿ ಅವರ ಪ್ರವೇಶ ಸಾಧ್ಯವಾಯಿತು. ಸಂವಿಧಾನಾತ್ಮಕವಾದ ಪರಿಹಾರಗಳು, ಹಕ್ಕುಗಳು ಅವರನ್ನು ಸಮಾನ ನೆಲೆಯಲ್ಲಿ ಸ್ಥಾಪಿಸುವ ಕಾರ್ಯ ಮಾಡಿದವು. ಇಂಥ ಜಾಗೃತಿಯನ್ನು ನವೋದಯ ಸಾಹಿತ್ಯದ ಭಾಗವಾಗಿ ಬಂದ ಮಹಿಳೆಯರ ಚಿಂತನೆಗಳಲ್ಲಿ ಕಾಣುತ್ತೇವೆ. ನಂಜನಗೂಡು ತಿರುಮಲಾಂಬಾ, ಆರ್. ಕಲ್ಯಾಣಮ್ಮ, ಸರಸ್ವತಿಬಾಯಿ ರಾಜವಾಡೆ, ಶ್ಯಾಮಲಾ ಬೆಳಗಾಂವಕರ್, ಕೊಡಗಿನ ಗೌರಮ್ಮ ಮುಂತಾದವರಲ್ಲಿ ಮೂಡಿದ ಆತ್ಮಘನತೆಯ ಎಳೆಗಳನ್ನು ಜೋಡಿಸಿ ನೋಡಿದಾಗ ಚಿಂತನಕ್ರಮವೊಂದು ಮೂಡುತ್ತದೆ. ಮಹಿಳೆಯರ ನ್ಯಾಯಯುತ ಬದುಕಿಗಾಗಿ ದನಿಯೆತ್ತುವ ರಾಜಕೀಯ ಪ್ರಜ್ಞೆಯ ಹುಟ್ಟನ್ನೂ ಇಲ್ಲಿ ಕಾಣಬಹುದು. ಮಹಿಳೆಯರಿಗಾಗಿಯೇ ಪ್ರತ್ಯೇಕ ಪತ್ರಿಕೆಯನ್ನು ಆರಂಭಿಸಿದ ಇವರು ‘ಮಹಿಳೆ’ ಎಂಬ ಸಾಮೂಹಿಕ ಸ್ವರವೊಂದನ್ನು ಬಲಗೊಳಿಸಿದರು. ಸಮಾಜದ ಕಟ್ಟುವಿಕೆಯಲ್ಲಿ ತಮ್ಮ ಹಾಜರಾತಿಯೂ ಇದೆ ಎಂಬುದನ್ನು ದಿಟ್ಟವಾಗಿಯೇ ಮನವರಿಕೆ ಮಾಡಿಸಿದರು. ತ್ರಿವೇಣಿ, ಅನುಪಮಾ ನಿರಂಜನರು ತಮ್ಮ ಕಥನಗಳಲ್ಲಿ ಹೊಸ ಶಿಕ್ಷಿತ, ಉದ್ಯೋಗಸ್ಥ ಹೆಣ್ಣಿನ ಮಾದರಿಯನ್ನು ಕಟ್ಟಿದರು. ಕುಟುಂಬ ಹಾಗೂ ಸಮಾಜಗಳ ಸಾಂಪ್ರದಾಯಿಕ ಮನಸ್ಥಿತಿ ಬದಲಾಗದೇ ಹೆಣ್ಣಿನ ಅರಿವಿನಲ್ಲಿ ಮಾತ್ರ ಬದಲಾವಣೆಯಾದಾಗ ವಾಸ್ತವಿಕ ಬದುಕಿನಲ್ಲಿ ನಲುಗುವ ಅವಳ ಚಿತ್ರಗಳನ್ನು 50-60 ರ ದಶಕಗಳ ಬರಹಗಳಲ್ಲಿ ಕಾಣುತ್ತೇವೆ. ಮೌಲ್ಯಗಳ ತಾಕಲಾಟ, ಬಿಡುಗಡೆಗಾಗಿ ಹೋರಾಟ ಇಂದಿಗೂ ಕೊನೆಗೊಂಡಿಲ್ಲ. ಹೆಣ್ಣಿನ ಅಸ್ಮಿತೆಯ ಮೂಲ ಪ್ರಶ್ನೆಗಳನ್ನು ಸುತ್ತಲಿನ ಸಮಾಜೋ-ಸಾಂಸ್ಕ್ರತಿಕ ನೆಲೆಯಲ್ಲಿಟ್ಟು ನೋಡುವ ಜ್ಞಾನಕ್ರಮವನ್ನು ಎಪ್ಪತ್ತರ ದಶಕದಲ್ಲಿ ಬಂದ ಸ್ತ್ರೀವಾದಿ ಆಲೋಚನಾ ಕ್ರಮಗಳು ಕಟ್ಟಿಕೊಟ್ಟವು.

ವೈಯಕ್ತಿಕವಾದದ್ದೂ ರಾಜಕೀಯವೇ ಎಂಬ ತಿಳಿವು ಮೂಡಿದ್ದು ಇಲ್ಲಿಯೇ. ಹೆಣ್ಣಿನ ವ್ಯಕ್ತಿಗತ ಸಂಕಟಗಳ ಬೇರು ಇರುವುದು ವ್ಯವಸ್ಥೆಯಲ್ಲಿ ಹಾಗೂ ವ್ಯವಸ್ಥೆಯನ್ನು ನಿರ್ದೇಶಿಸುವ ಜ್ಞಾನಮಾದರಿಗಳಲ್ಲಿ ಎಂಬ ತಿಳಿವು ಸ್ತ್ರೀವಾದಿ ಚಿಂತನಕ್ರಮವನ್ನು ವಿಸ್ತರಿಸಿತು. ಹೆಣ್ಣಿನ ಅರಿವಿನಲ್ಲಿ ಚರಿತ್ರೆ, ಸಂಸ್ಕೃತಿ ಹಾಗೂ ಸಮಾಜಗಳನ್ನು ಹೊಸದಾಗಿ ಕಾಣುವ ದೃಷ್ಟಿಕೋನವೊಂದು ಮೂಡತೊಡಗಿತು. ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ ಹೆಣ್ತನದ ಮಾದರಿಗಳನ್ನು ಕದಲಿಸದೇ ವಾಸ್ತವದ ಹೊಸ ಮಾದರಿಯನ್ನು ಕಟ್ಟಲಾಗದು ಎಂಬ ತಿಳಿವು ಕನ್ನಡದ ಲೇಖಕಿಯರನ್ನು ಪುರಾಣ ಹಾಗೂ ಮಹಾಕಾವ್ಯಗಳ ಪರಂಪರೆಯೊಟ್ಟಿಗೆ ಸಂಭಾಷಿಸುವಂತೆ ಮಾಡಿತು. ಹೆಣ್ತನದ ಸಿದ್ದಮಾದರಿಗಳನ್ನು ಸ್ಥಾಪಿಸಿ ಅದನ್ನು ಮೀರಿ ಹೋಗದಂತೆ ಅಮೂರ್ತವಾಗಿ ಕಟ್ಟಿಹಾಕುವ ಸಾಂಸ್ಕೃತಿಕ ಸ್ಟೀರಿಯೋಟೈಪ್‍ಗಳನ್ನು ಮೀರಲು ಸೃಜನಶೀಲ ಸಾಹಿತ್ಯದ ಮೂಲಕ ಮಹಿಳಾಪ್ರಜ್ಞೆಯೊಂದು ಎಂದಿನಿಂದಲೂ ಕೆಲಸ ಮಾಡುತ್ತಲೇ ಇದೆ. ಸೀತೆ, ದ್ರೌಪದಿ, ಅಹಲ್ಯೆ, ಶಕುಂತಲೆ, ರೇಣುಕೆಯರ ಪಾತ್ರಗಳನ್ನು ಮುರಿದು ಕಟ್ಟುವ ಮೂಲಕ ಈ ಪ್ರತಿರೋಧ ವ್ಯಕ್ತವಾಯಿತು. ಎಚ್.ವಿ.ಸಾವಿತ್ರಮ್ಮ ತಮ್ಮ ವಿಮುಕ್ತಿ ಹಾಗೂ ಸೀತೆ ರಾಮ ರಾವಣ ಎಂಬ ಕಥನಗಳಲ್ಲಿ ಪುರಾಣದ ಪುನರ್ ಸೃಷ್ಟಿಮಾಡಿದರು. ಆ ಪಾತ್ರಗಳ ಮೌನಕ್ಕೆ ಮಾತುಕೊಟ್ಟರು. ಪಿತೃಪ್ರಧಾನ ಚಿಂತನೆ ಕಟ್ಟಿದ ಆ ಕಥನಗಳನ್ನು ಹೆಣ್ಣು ದೃಷ್ಟಿಕೋನದಲ್ಲಿ ಮತ್ತೆ ಕಟ್ಟಿದರು. ವೀಣಾ ಶಾಂತೇಶ್ವರ, ವೈದೇಹಿಯವರಂಥ ಪ್ರತಿಭಾವಂತ ಕತೆಗಾರ್ತಿಯರು ಸದ್ಯದ ಹೆಣ್ಣಿನ ಮನಸ್ಸಿನ ಆಳದ ಮರ್ಮರಗಳಿಗೆ ದನಿಯಾದರು. ಅದುಮಿಟ್ಟ ಸ್ತ್ರೀಲೋಕವೊಂದು ಛಿಲ್ಲನೆ ಚಿಮ್ಮಿಬಂತು. ರೂಪಿತ ಹೆಣ್ಣು ಹಿಂದೆ ಸರಿದು ಹೆಣ್ಣಿನ ದೇಹ ಮನಸ್ಸುಗಳ ಸುಪ್ತಸ್ವರಗಳು ಜೀವ ತಳೆದವು. ಅವಳ ಅನನ್ಯ ಅನುಭವಗಳ ಲೋಕ ಸೃಷ್ಟಿಯಾಯಿತು. ಮಹಿಳೆಯ ಅನುಭವಗಳನ್ನು ಹಾಗೂ ಅದರ ಮೂಲಕ ಹೊಮ್ಮುವ ಜ್ಞಾನವನ್ನೂ ಕೀಳಾಗಿ ಕಾಣುವ ದೃಷ್ಟಿಕೋನಕ್ಕೆ ಪ್ರತಿಯಾಗಿ ಆತ್ಮಘನತೆಯಿಂದ ಮಾತಾಡುವ ಧ್ವನಿಗಳು ಹೆಚ್ಚಾಗುತ್ತಲೇ ಹೋದದ್ದು ಚಾರಿತ್ರಿಕ ಬೆಳವಣಿಗೆ. ಇದನ್ನು ಸೃಜನಶೀಲ ಬರಹಗಾರ್ತಿಯರು, ಮಹಿಳಾ ತಾತ್ವಿಕತೆಯನ್ನು ಕಟ್ಟುತ್ತಿರುವ ಸ್ತ್ರೀವಾದಿ ಚಿಂತಕಿಯರು ಹಾಗೂ ಮಹಿಳಾ ಹೋರಾಟಗಳನ್ನು ಕಟ್ಟುತ್ತಿರುವ ಚಳವಳಿಗಾರ್ತಿಯರೆಲ್ಲ ಸಾಧ್ಯವಾಗಿಸಿದರು. ಇದೊಂದು ಬಹುಮುಖೀ ಚಿಂತನೆ ಹಾಗೂ ಭಾವನೆಗಳು ಒಟ್ಟಾಗಿದ್ದರ ಫಲ. ವಿಜಯಾ ದಬ್ಬೆ, ಬಿ.ಎನ್. ಸುಮಿತ್ರಾಬಾಯಿ, ಎನ್.ಗಾಯತ್ರಿ, ಆರ್.ಇಂದಿರಾ, ತೇಜಸ್ವಿನಿ ಹಾಗೂ ಸೀಮಂತಿನಿ ನಿರಂಜನ, ಎಚ್.ಎಸ್. ಶ್ರೀಮತಿ, ಎಂ.ಎಸ್.ಆಶಾದೇವಿ ಮುಂತಾದವರು ಬಹುನೆಲೆಗಳಿಂದ ಮಹಿಳಾ ಚಿಂತನೆಗೆ ಕಸುವು ತುಂಬುತ್ತಿದ್ದಾರೆ.

ಕನ್ನಡ ಮಹಿಳಾ ಚಿಂತನೆಯ ಆಕೃತಿಯನ್ನು ನಿರ್ಮಿಸುವಲ್ಲಿ ಸ್ತ್ರೀವಾದಿ ಚಿಂತನಕ್ರಮದ ಕೊಡುಗೆ ಮಹತ್ವದ್ದು. ಆದರೆ ಸ್ತ್ರೀವಾದವೆಂಬುದು ಜಾಗತಿಕವಾಗಿ ಎಲ್ಲೆಡೆಯೂ ಅನ್ವಯಿಸಬಲ್ಲ ಸಿದ್ದಸೂತ್ರವಲ್ಲ ಎಂಬ ತಿಳಿವು ದೇಸಿ ತಿಳಿವನ್ನು ಅದಕ್ಕೆ ಕಸಿಕಟ್ಟಿತು. ಪ್ರತೀ ಸಂಸ್ಕೃತಿಯಲ್ಲೂ ಆಳದಲ್ಲಿ ಇರಬಹುದಾದ ಸ್ತ್ರೀಮೂಲ ತಿಳಿವಳಿಕೆಯೊಂದನ್ನು ಶೋಧಿಸುವ ಪ್ರಯತ್ನವನ್ನು ಹಲವರು ಮಾಡಿದರು. ಸ್ತ್ರೀತ್ವದ ಸ್ವಾಯತ್ತ ಶಕ್ತಿಯ ನೆಲೆಗಳನ್ನು ನೆಲಮೂಲ ಸಂಸ್ಕೃತಿಯ ಧಾರೆಗಳಲ್ಲಿ ಕಾಣುವ ಹಾಗೂ ಕಟ್ಟುವ ಚಿಂತನೆಯಿದು. ಗಾಯತ್ರಿ ನಾವಡ ಅವರು ತಮ್ಮ ‘ವಿರಚನೆಯಲ್ಲಿ’ ಸಿರಿಪಾಡ್ದನದಂತಹ ಜನಪದ ಕಾವ್ಯದ ಮೂಲಕ ಈ ಸ್ವಾಯತ್ತನೆಲೆಯನ್ನು ಕಾಣಿಸಿದರು. ಮಲೆಮಾದೇಶ್ವರ ಕಾವ್ಯದ ಸಂಕಮ್ಮ ಹಾಗೂ ಸಿರಿಪಾಡ್ದನದ ಸಿರಿಯರು ಪಾತಿವೃತ್ಯದ ಮಾದರಿಗಳನ್ನು ನಿರಾಕರಿಸಿ ತಮ್ಮ ದೇಹ ಮನಸ್ಸುಗಳ ಸ್ವಾಯತ್ತ ಚೈತನ್ಯವನ್ನು ಉಳಿಸಿಕೊಳ್ಳುವ ಬಗೆಯಿಂದಾಗಿ ಗಮನಾರ್ಹರು. ಸಂಸ್ಕೃತೀಕರಣದ ಸೋಂಕು ತಾಕದ ಈ ಮೂಲನೆಲೆಗಳ ಶೋಧ ಕನ್ನಡ ಚಿಂತನೆಗೆ ಹೊಸದಾರಿಗಳನ್ನು ತೆರೆದಿಟ್ಟಿದೆ. ಸಾಂಖ್ಯ ದರ್ಶನ ಹಾಗೂ ಶಾಕ್ತಪರಂಪರೆಗಳ ದಾರ್ಶನಿಕ ಹಾಗೂ ಸಾಮಾಜಿಕ ನೆಲೆಯ ಅಧ್ಯಯನಗಳು ಸ್ತ್ರೀಮೂಲ ಅರಿವಿನ ಆದಿಮ ನೆಲೆಗಳನ್ನು ಕಾಣಿಸಿದವು. ಸಂಸ್ಕೃತಿಯ ಮೂಲಮಾತೃಕೆಗಳಲ್ಲಿ ಫಲವಂತಿಕೆಯ ಶಕ್ತಿಯನ್ನು ಪರಮಶಕ್ತಿಯಾಗಿ ಆರಾಧಿಸುವ ಬಗೆ ಸ್ತ್ರೀತ್ವದ ಅರಿವಿಗೆ ನೀಡಿದ ಸ್ವಾಯತ್ತ ಪ್ರಭೆ ಹಾಗೂ ದಾರ್ಶನಿಕ ಆಯಾಮಗಳು ಬಹುಮುಖ್ಯವಾದವು. ಡಿ.ಆರ್. ನಾಗರಾಜ್, ಕೆ.ಜಿ.ನಾಗರಾಜಪ್ಪ, ರಹಮತ್ ತರಿಕೆರೆ ಮುಂತಾದವರು ಈ ನೆಲೆಯಲ್ಲಿ ಮಾಡಿರುವ ಅಧ್ಯಯನಗಳು ಸ್ತ್ರೀತ್ವದ ಮೀಮಾಂಸೆಯೊಂದನ್ನು ನಿರ್ಮಿಸಲು ಮೂಲಧಾತುಗಳನ್ನು ಒದಗಿಸಬಲ್ಲವು. ಎಂ.ಎಸ್. ಆಶಾದೇವಿಯವರು ವಚನಕಾರ್ತಿಯರ ಮರು ಅಧ್ಯಯನದ ಮೂಲಕ ಕಟ್ಟುತ್ತಿರುವ ಸ್ತ್ರೀಮೀಮಾಂಸೆಯು ಲೋಕ ಮೀಮಾಂಸೆಯೂ ಹೌದು.

ಮತ್ತೆ ಸೃಜನಶೀಲ ಸಾಹಿತ್ಯವನ್ನು ಹೊಡಮರಳಿ ನೋಡಿದರೆ, ಗೀತಾ ನಾಗಭೂಷಣ ತಮ್ಮ ಕಥನದಲ್ಲಿ ಕಟ್ಟಿದ ದಲಿತ ಮಹಿಳಾ ಲೋಕದ ಚೈತನ್ಯವು ಹುಸಿ ಸಂಸ್ಕೃತೀಕರಣದ ಎದುರು ತಾಯ್ತನದ ಪ್ರಾಕೃತಿಕ ನೆಲೆಯ ಕಸುವನ್ನು ಎದುರಿಗಿಟ್ಟು ನೋಡುವಂತಹುದು. ರಾಜಕೀಯ ಸರಿತನದ ಆಚೆಗೂ ಶಕ್ತಿಯ ಭಿನ್ನಸಾಧ್ಯತೆಗಳನ್ನು ಸೂಚಿಸುವಂತಹುದು. ಸರಸ್ವತಿಯವರೂ ಇಂತಹ ನೋಟಗಳನ್ನು ಕನ್ನಡ ಚಿಂತನೆಗೆ ನೀಡುವ ಮೂಲಕ ಅದನ್ನು ವಿಸ್ತರಿಸುತ್ತಿದ್ದಾರೆ. ಕವಯತ್ರಿ ಲಲಿತಾ ಸಿದ್ದಬಸವಯ್ಯ ತಮ್ಮ ಕಾವ್ಯದಲ್ಲಿ ಹೆಣ್ಣು ಅರಿವನ್ನು ಕಟ್ಟುತ್ತಿರುವ ಬಗೆ ಇನ್ನೊಂದು ನೆಲೆಯನ್ನು ಮಹಿಳಾ ಚಿಂತನೆಗಳಿಗೆ ಒದಗಿಸುತ್ತಿದೆ. ಹೆಣ್ಣು ದೇಹದಲ್ಲೇ ಇರುವ ಹೆಣ್ಣು ಅರಿವನ್ನು ಅಭೇದವಾಗಿ ಕಾಣುತ್ತ ಈ ವಿಶಿಷ್ಟ ಜ್ಞಾನವನ್ನು ಕಾವ್ಯಾತ್ಮಕ ಸಾಧ್ಯತೆಯಲ್ಲಿ ಅವರು ಕಂಡರಿಸಿದ್ದಾರೆ. “ನೀವು ಹೆಣ್ಣನ್ನು ಅಳೆಯುವ ಮಾನದಂಡಗಳೇ ಕುಬ್ಜವಾಗಿದ್ದರೆ ನಾವೇನು ಮಾಡುವುದು? “ ಎಂದು ಒಂದೆಡೆ ಪ್ರತಿಭಾ ನಂದಕುಮಾರ್ ಪ್ರಶ್ನಿಸುತ್ತಾರೆ. ಅವಳ ಅಸೀಮವಾದ ಚೈತನ್ಯವು ಮುಕ್ತ ಪ್ರಜ್ಞೆಯಲ್ಲಿ ಹಿಗ್ಗುತ್ತಿರುವುದಕ್ಕೆ ಇಂಥ ಮಾತುಗಳೇ ಸಾಕ್ಷಿ. ಯಾವುದನ್ನು ಹೆಣ್ಣಿನ ಮಿತಿಯೆಂದು ಭಾವಿಸಲಾಗಿತ್ತೋ ಅದನ್ನೇ ಅವಳ ಶಕ್ತಿಕೇಂದ್ರವಾಗಿ ನಿಲ್ಲಿಸುವ ಮೂಲಕ ಹೊಸ ಲೋಕ ಮೀಮಾಂಸೆಯೊಂದು ಹೀಗೆ ರೂಪುಗೊಳ್ಳುತ್ತಿದೆ.

ಮಹಿಳಾ ಚಿಂತನೆಗಳು ಬರಿಯ ಚಿಂತನೆಗಳಾಗಿ ಉಳಿಯದೆ ಅವರ ಬದುಕನ್ನು ಬದಲಿಸುವ ಅರಿವಿನ ಪ್ರೇರಣೆಗಳಾಗಬೇಕಾದರೆ ರಾಜಕೀಯ ಹಕ್ಕೊತ್ತಾಯದ ನೆಲೆ ಹಾಗೂ ಅರಿವಿವ ಸ್ವಾಯತ್ತ ನೆಲೆ ಎರಡೂ ಬೆರೆಯಬೇಕಾದದ್ದು ಅನಿವಾರ್ಯ. ವಚನಕಾರ್ತಿಯರಲ್ಲಿ ಮೂಡಿದ ಈ ಎಚ್ಚರ ಅಲ್ಲಲ್ಲಿ ಮಸಕಾಗುತ್ತ ಮತ್ತೆಮತ್ತೆ ಬೆಳಕಾಗುತ್ತ ಇಂದಿಗೂ ತನ್ನನ್ನು ವಿಸ್ತರಿಸಿಕೊಳ್ಳುತ್ತಲೇ ಇರುವುದು ಕನ್ನಡ ಚಿಂತನೆಯ ಜಂಗಮತ್ವವನ್ನೂ ಸೂಚಿಸುತ್ತದೆ. ಹದಿಬದೆಯ ಧರ್ಮವನ್ನು ಪ್ರತಿಪಾದಿಸುತ್ತಲೇ ಹೆಣ್ಣಿನ ಅಸ್ಮಿತೆಯ ಕುರಿತೂ ಎಚ್ಚರವಹಿಸಿದ ಹೊನ್ನಮ್ಮ, ಸುಧಾರಣಾವಾದಿ ದೃಷ್ಟಿಕೋನದ ಒಡಲಿಂದಲೇ ಹೆಣ್ಣಿನ ಹೊಸಪಾತ್ರಗಳನ್ನು ಪ್ರತಿಪಾದಿಸಿದ ನವೋದಯದ ಆರಂಭಕಾಲದ ಧ್ವನಿಗಳು ಎಲ್ಲವೂ ಮಹಿಳಾ ಚಿಂತನೆಗೆ ಅಸ್ತಿಭಾರವನ್ನು ಹಾಕಿವೆ. ಇಂದು ಆಧುನಿಕೋತ್ತರ ಕಾಲಘಟ್ಟದಲ್ಲಿ ಮೂಡಿದ ಬಹುಸ್ವರಗಳು ಹೆಣ್ಣಿನ ಒಡಲಿಂದಲೇ ಸೃಷ್ಟಿಯಾಗುವ ಹೊಸ ಜ್ಞಾನಮೀಮಾಂಸೆ ಹಾಗೂ ಬದುಕಿನ ಮೀಮಾಂಸೆಯನ್ನು ಕಟ್ಟುತ್ತಿವೆ.

ಈ ಅಂಕಣದ ಹಿಂದಿನ ಬರೆಹಗಳು:

ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...

ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ

ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ

ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ

ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ

ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ

ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ

ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

"ನಿಶ್ಯಬ್ಧ ಜಾತ್ರೆ" ಎಂದೆನಿಸುವ ವಿ...

17-10-2021 ಬೆಂಗಳೂರು

‘ಭಾರತ ದೇಶದಲ್ಲಿ ಜನಸಾಮಾನ್ಯರು ಕ್ಯಾಲೆಂಡರ್ ನ ವಾರಗಳು ಮತ್ತು ದಿನಾಂಕವನ್ನು ಅನುಸರಿಸಿ ಕೆಲಸ ಮತ್ತು ಜೀವನವನ್ನು...

ಬಿಡುಗಡೆಯ ಹಾದಿಯ ಪಿಸುಮಾತು It's O...

15-10-2021 ಬೆಂಗಳೂರು

‘ಬದುಕಿನ ತಿರುವುಗಳಿಗೆ ನಾವು ಹೇಗೆ ಪ್ರತಿಸ್ಪಂದಿಸುತ್ತೇವೆ ಎನ್ನುವುದು ಬಹುತೇಕ ಸಂದರ್ಭಗಳಲ್ಲಿ ನಿರ್ಧರಿಸಲ್ಪಡುವ...

ಮಹಿಳೆಯರ ಹಕ್ಕುಗಳು ಮತ್ತು ಸಂವಿಧಾನ...

15-10-2021 ಬೆಂಗಳೂರು

‘ಇಂದು ಮಹಿಳಾ ಹಕ್ಕುಗಳ ಗುರುತಿಸುವಿಕೆಗೆ ಮೂಲ ಶಕ್ತಿ ಎಂದೇ ಹೇಳಬಹುದಾದ ಅನುಚ್ಛೇದ 15 (3)[ii] ರ ಚರ್ಚೆ ಸೋಜಿಗ ...