‘ಕನ್ನಡಕುಲ’ ವೆಂಬುದು ಕೇವಲ ಕವಿಗಳ ಕಲ್ಪನೆ ಮಾತ್ರವಲ್ಲ-ಸಿದ್ಧಯ್ಯ ಪುರಾಣಿಕ

Date: 31-01-2020

Location: ಬೆಂಗಳೂರು


ಐಎಎಸ್ ಅಧಿಕಾರಿಯಾಗಿದ್ದ `ಕಾವ್ಯಾನಂದ’ ಖ್ಯಾತಿಯ ಡಾ. ಸಿದ್ದಯ್ಯ ಪುರಾಣಿಕ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದ್ಯಾಂಪುರದವರು. ಕಲಬುರಗಿಯಲ್ಲಿ ಜರುಗಿದ 58ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುರಾಣಿಕ ಅವರು ಮಾಡಿದ ಅಧ್ಯಕ್ಷೀಯ ಭಾಷಣದ ಆಯ್ದ ಭಾಗ  ಇಲ್ಲಿದೆ-

 

ಕನ್ನಡ ಹಿಂದಕ್ಕೆ ಹೋಗಿದೆ:

ಮೊದಲನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದ ಆರಂಭದಲ್ಲಿಯೇ-1915ರಷ್ಟು ಹಿಂದೆಯೇ- ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರೂ, ಆ ಕಾಲಕ್ಕೇ ಅರ್ಥಶಾಸ್ತ್ರ, ಲೇಖ್ಯಬೋಧಿನಿ, ವ್ಯವಹಾರ ದೀಪಿಕೆಯಂಥ ಉಪಯುಕ್ತ ಗ್ರಂಥಗಳನ್ನು ಕನ್ನಡಿಗರಿಗೆ ಕೊಟ್ಟವರೂ ಆದ ರಾಜಮಂತ್ರ ಪ್ರವೀಣ ಎಚ್.ವಿ. ನಂಜುಂಡಯ್ಯನವರು ಹೇಳಿದುದು ಹೀಗಿದೆ:  ಪತ್ರಗಳಲ್ಲಿಯೂ, ವಾಣಿಜ್ಯದಲ್ಲಿಯೂ ಬಳಕೆಯಲ್ಲಿರತಕ್ಕ ಭಾಷೆಯಾಗಿದೆ. ಈ ದೇಶದಲ್ಲಿ ಕನ್ನಡವನ್ನು ಮಾತೃಭಾಷೆಯಾಗಿ ಮನೆಯಲ್ಲಿ ಮಾತನಾಡದಿರುವ ಅನೇಕ ಜನಗಳು ಇರುವುದೂ ನಿಶ್ಚಯವೇ; ಆದರೆ ಅವೆಲ್ಲರೂ ಚಿಕ್ಕಂದಿನಿಂದಲೂ ದೇಶಭಾಷೆಯಾದ ಕನ್ನಡವನ್ನು ಕಲಿಯುವರು. ಪ್ರಾಯಶಃ ಮುಸಲ್ಮಾನರನ್ನು ಬಿಟ್ಟರೆ ಮಿಕ್ಕ ಜನರೆಲ್ಲರೂ ಕನ್ನಡವನ್ನೇ ಮೊದಲು ಕಲಿತು, ತಮ್ಮ ಬಂಧುಗಳಿಗೆ ಕ್ಷೇಮ ಸಮಾಚಾರದ ಕಾಗದಗಳನ್ನು ಬರೆಯುವಾಗಲೂ ತೆಲುಗು, ತಮಿಳುಗಳಿಗೆ ಬದಲಾಗಿ ಕನ್ನಡವನ್ನೇ ಬಳಸುವರು.”

1915ರಲ್ಲಿ ಇದ್ದ ಈ ಸುಸ್ಥಿತಿ ಕನ್ನಡಕ್ಕೆ ಈಗ ಇದೆಯೆಂದು-ಸಾಹಿತ್ಯ ಸೃಷ್ಟಿಯು ದೃಷ್ಟಿಯಿಂದಲ್ಲ, ಜನಬಳಕೆಯ ದೃಷ್ಟಿಯಿಂದ ಇದೆಯೆಂದು-ನಮ್ಮ ಸರಕಾರದ ಸೂತ್ರಧಾರಿಗಳು ಎದೆ ತಟ್ಟಿ ಹೇಳಬಲ್ಲರೆ? ಹೊಸಗನ್ನಡ ಸಾಹಿತ್ಯ ಸೃಷ್ಟಿ ಅದ್ಭುತವಾಗಿ ಆಗಿದೆ. ನಿಜ. ಅದರ ಬಗ್ಗೆ ಮುಂದೆ ಪ್ರಸ್ತಾಪಿಸುವೆನು. ಆದರೆ ಜನಬಳಕೆಯ ದೃಷ್ಟಿಯಿಂದ, ಕನ್ನಡ ರಾಜ್ಯೋದಯವಾಗಿ ಮೂರು ದಶಕಗಳು ಕಳೆದ ಮೇಲೂ, ಕನ್ನಡದ ತೇರು ೧೯೧೫ಕ್ಕೂ ಹಿಂದೇ ಹೋಗಿದೆಯೆಂಬುದು ಎಂತ ಲಜ್ಜಾಸ್ಪದವಾದ ವಿಷಯ.

ಕನ್ನಡ ಸಾಹಿತ್ಯ ಪರಿಷತ್ತು:

ಕನ್ನಡ ನಾಡು ಚರಗ ಚೆಲ್ಲಿದಂತೆ  ಚೆದುರಿ ಚೆಲ್ಲಾಪಿಲ್ಲಿಯಾಗಿದ್ದಾಗಲೂ ಕನ್ನಡಕುಲದ ಗಮನೀಯ ಕಲ್ಪನೆಯನ್ನು ವಿದ್ಯಾವರ್ಧಕ ಸಂಘದೊಡನೆ ಎಲ್ಲ ಭಾಗಗಳ ಕನ್ನಡಿಗರ ಮುಂದೆ ಮನೋಜ್ಞವಾಗಿ ಮಂಡಿಸಿ, ಕನ್ನಡಿಗರ ಸಾಂಸ್ಕೃತಿಕ ಏಕೀಕರಣಕ್ಕೆ ಬುನಾದಿಯನ್ನು ಹಾಕಿ, ಕನ್ನಡ ನುಡಿ ತಲೆ ಎತ್ತಲು, ಹೊಸಗನ್ನಡ ಸಾಹಿತ್ಯ ಹುಲುಸಾಗಿ ಬೆಳೆಯಲು ಕಳೆದ ಏಳು ದಶಕಗಳಿಂದಲೂ ಸಾಕಷ್ಟು ಶ್ರಮಿಸುತ್ತ ಬಂದಿರುವ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೂಲೋದ್ದೇಶಗಳಲ್ಲಿ ಕೆಲವು ಈಡೇರಿದ ಸಂತೃಪ್ತಿಯೊಡನೆ, ನಿರಂತರವಾಗಿ ಮುಂದುವರಿಯಬೇಕಾದ ಇನ್ನುಳಿದ ಉದ್ದೇಶಗಳನ್ನು ಮುಂದುವರಿಸಿಕೊಂಡು ನಡೆದಿದೆ, ಧನಬಲ ಜನಬಲಗಳನ್ನು ಗಳಿಸಿಕೊಳ್ಳುತ್ತ ನಡೆದಿದೆ, ಸಂತೋಷ.

ಪರಿಷತ್ತಿನ ಸಾಮರ್ಥ್ಯ ಹೆಚ್ಚಬೇಕು:

ಆದರೆ ವ್ಯಕ್ತಿ, ಸಂಘ, ಸಂಸ್ಥೆ, ನಾಡು, ರಾಷ್ಟ್ರಗಳ ಬೆಳವಣಿಗೆ, ಅರ್ಥಪೂರ್ಣ ಅಭಿವೃದ್ಧಿಗೆ ಜನಬಲ ಧನಬಲಗಳಷ್ಟೇ ಸಾಲವು; ಅವುಗಳೊಡನೆ ನೈತಿಕ ಬಲವೂ ಬೇಕೆಂಬುದು ಪರಿಷತ್ತಿನ ಭವಿತವ್ಯದ ಬಗ್ಗೆ ನಿಷ್ಪಕ್ಷಪಾತವಾಗಿ ಚಿಂತಿಸುವವರ ನ್ಯಾಯವಾದ ನಿಲುವಾಗಿದೆ. ಕನ್ನಡ ಸರಸ್ವತಿಯ ಈ ಪವಿತ್ರ ಮಂದಿರ ಪವಿತ್ರವಾಗಿಯೇ ಉಳಿಯಬೇಕೆಂಬುದು ಅವರ ಆಸೆ. ಈ ಆಸೆ ಈಡೇರಬೇಕು. ಪರಿಷತ್ತಿನ ಘನತೆ ಗೌರವಗಳಿಗೆ ಧಕ್ಕೆ ಬರದ ರೀತಿಯಲ್ಲಿ ಈಡೇರಬೇಕು. ಪದಾಧಿಕಾರಿಗಳು, ಪರಿಷತ್ತು ಒಂದೇ ಅಲ್ಲ. ಪದಾಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ, ಆದರೆ ಪರಿಷತ್ತು ಕೊನೆಯವರೆಗೆ ಉಳಿಯಬೇಕಾದುದು, ಉಳಿಯಬೇಕು. ನೈತಿಕ ನೆಲಗಟ್ಟಿನ ಮೇಲೆ ಪರಿಷತ್ತು ಪ್ರಚಂಡ ಶಕ್ತಿಯಾಗಿ ಬೆಳೆಯುವಂತೆ ಪರಿಷತ್ತಿನ ಪದಾಧಿಕಾರಿಗಳೂ ಸರ್ವಕನ್ನಡಿಗರೂ ಧ್ಯೇಯರತಿಯೊಡನೆ ದುಡಿಯಬೇಕು. ಅದರ ಅಂಗರಚನೆಯಲ್ಲಿ ಇನ್ನೂ ಮಾರ್ಪಾಟುಗಳು ಅಗತ್ಯವೆನಿಸಿದರೆ ಮುಕ್ತ, ಮನಸ್ಸಿನ ಚರ್ಚೆ ನಡೆಸಿ ತೀರ್ಮಾನಿಸಿಕೊಳ್ಳಬೇಕು. ಈ ಮಾರ್ಪಾಟುಗಳಲ್ಲಿ ಪರಿಷತ್ತಿನ ಚುನಾವಣಾಧಿಕಾರಿಗಳನ್ನು ಸರಕಾರವೇ ನೇಮಿಸಬೇಕೆಂಬುದು ಬಹಳ ಮುಖ್ಯವಾದುದು. ಪರಿಷತ್ತು ಪ್ರಜಾಸತ್ತಾತ್ಮಕ ಸಂಸ್ಥೆಯಾಗಿ ಉಳಿದೂ ಅದಕ್ಕೆ ಹೊರಗುಳಿವ ಹಿರಿಯ ಸಾಹಿತಿಗಳೆಲ್ಲರ ಸಲಹೆ ಸಿಕ್ಕುತ್ತಿರುವಂತೆ ಏರ್ಪಾಟು ಆಗಬೇಕು; ಎಲ್ಲ ಭಾಗಗಳ ಕನ್ನಡ ಸೇವಾಸಕ್ತರ ಸಕ್ರಿಯ ಸಹಕಾರ ಅದಕ್ಕೆ ದೊರೆಯುವ ಹಾಗೆ ವ್ಯವಸ್ಥೆಯಾಗಬೇಕು; ಜಿಲ್ಲಾ ಪರಿಷತ್ತುಗಳ ಶಕ್ತಿ, ಕಾರ್ಯ, ಕ್ಷಮತೆಗಳು ಹೆಚ್ಚಬೇಕು.

ಪರಿಷತ್ತಿಗೆ ನೂರಾರು ಹೊಣೆಗಳು ಯಾಕೆಂದರೆ ಪರಿಷತ್ತು ಹೊರಬೇಕಾದ ಹೊಣೆಗಳು ಹೆಚ್ಚುತ್ತಿವೆ. ‘ಕನ್ನಡಕುಲ’ ವೆಂಬುದು ಕೇವಲ ಕವಿಗಳ ಕಲ್ಪನೆ ಮಾತ್ರವಲ್ಲ, ಅದು ನಮ್ಮ ಸಾಂಸ್ಕೃತಿಕ ಸತ್ಯವೆಂಬುದನ್ನು ಪರಿಷತ್ತು ಪ್ರತ್ಯಕ್ಷೀಕರಿಸಿ ತೋರಿಸಬೇಕಾಗಿದೆ; ಕನ್ನಡ ನಾಡಿನ ಗಡಿಹುದ್ದೆಗಳು ಎಚ್ಚತ್ತ ಕೆಚ್ಚೆದೆಯ ಕನ್ನಡಿಗರ ಕೋಟೆಯನ್ನು ಕಟ್ಟಬೇಕಾಗಿದೆ; ಗಡಿಯಾಚೆ ಕನ್ನಡಿಗರು, ಹೊರದೇಶಗಳಲ್ಲಿರುವ ಕನ್ನಡಿಗರು ತಮ್ಮ ಕನ್ನಡತನವನ್ನು ಉಳಿಸಿಕೊಳ್ಳುವುದು ಸಾಧ್ಯವಾಗುವಂತೆ ಅವರಿಗೆ ಶಕ್ಯವಿರುವ ಎಲ್ಲ ನೆರವನ್ನೂ ನೀಡಬೇಕಿದೆ; ಕನ್ನಡನಾಡಿನ ಹೊರಗೆ ಉಳಿದಿರುವ ಕಾಸರಗೋಡಿನಂಥ ಕನ್ನಡ ಭಾಗಗಳನ್ನು ಕನ್ನಡ ನಾಡಿಗೆ ಕೂಡಿಸಲು ಪ್ರಭಾವೀ ಪ್ರಯತ್ನಗಳನ್ನು ಮಾಡಬೇಕಿದೆ: ಬಹಳಷ್ಟು ಭರವಸೆಯನ್ನು ಹುಟ್ಟುಸಿರುವ ಕನ್ನಡ ಲೇಖಕಿಯರಿಗೆ ವಿಶೇಷ ಪ್ರೋತ್ಸಾಹವನ್ನು ನೀಡಬೇಕಿದೆ; ಮಕ್ಕಳ ಸಾಹಿತ್ಯ ಅಕಾಡೆಮಿ, ಮಕ್ಕಳ ಸಾಹಿತ್ಯ ಪರಿಷತ್ತು, ಗಮಕ ಕಲಾ ಪರಿಷತ್ತು, ಕನ್ನಡ ಇತಿಹಾಸ ಅಕಾಡೆಮಿಗಳು ಹುಟ್ಟಿರುವುದು ಹಿಗ್ಗಿನ ಸಂಗತಿ; ಅವುಗಳನ್ನು ಬೆಳೆಸಬೇಕಿದೆ; ಕನ್ನಡ ರಂಗಭೂಮಿಯ ಪುನರುಜ್ಜೀವನ ಪ್ರಯತ್ನ ಪ್ರಾರಂಭವಾಗಬೇಕಿದೆ; ಕನ್ನಡ ಪದವೀಧರರ, ಬೆರಳಚ್ಚುಗಾರರ, ಶೀಘ್ರಲಿಪಿಕಾರರ, ಪಂಡಿತ ವಿದ್ವಾನ್ ಪದವಿಗಳನ್ನು ಪಡೆದವರ, ಕನ್ನಡ ಜಾಣ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಉದ್ಯೋಗಾವಕಾಶಗಳ ವಿಸ್ತರಣೆಗಾಗಿ ಹೋರಾಟ ನಡೆಸಬೇಕಿದೆ. ಕನ್ನಡ ಸಂಗೀತ ಸಭೆಗಳನ್ನು ಜನಪ್ರಿಯಗೊಳಿಸಬೇಕಿದೆ; ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ, ವಿಚಾರ ಸಾಹಿತ್ಯ, ಶಾಸ್ತ್ರ ಸಾಹಿತ್ಯಗಳು ವೆಗ್ಗಳವಾಗಿ ಬೆಳೆಯುವಂತೆ ಉಳುಮೆ ಮಾಡಬೇಕಿದೆ; ಹೊಸಗನ್ನಡ ಸಾಹಿತ್ಯವು ನಮಗೆ ನೀಡಿರುವ ವಿವಿಧ ಪ್ರಕಾರಗಳ ಅತ್ಯುತ್ತಮ ಭಾಗಗಳ ಸಂಕಲನಗಳನ್ನು ಪ್ರಕಟಿಸಿ ಶ್ರೀಸಾಮಾನ್ಯರೂ ಕೊಳ್ಳಬಹುದಾದ ಬೆಲೆಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕಿದೆ; ವಾಚನಾಲಯಗಳ ಚಳುವಳಿಯನ್ನು ವ್ಯಾಪಕವಾಗಿ ನಡೆಸಬೇಕಿದೆ; ಮಹಾರಾಷ್ಟ್ರದಲ್ಲಿ ಜನಪ್ರಿಯವೂ ಬಹೂಪಯೋಗಿಯೂ ಆಗಿರುವ ‘ಗ್ರಂಥಾಲಿ’ ಆಂದೋಲನಕ್ಕೆ ಸಂವಾದಿಯಾದ ಸಾಹಿತ್ಯ ಪ್ರಕಟನ, ಸಾಹಿತ್ಯದಾನ ಅಭಿಯಾನವೊಂದನ್ನು ಪ್ರಾರಂಭಿಸಬೇಕಿದೆ. ಈ ಯಾದಿಯನ್ನು ವಿಸ್ತರಿಸುತ್ತಲೇ ಹೋಗಬಹುದು. ಪರಿಷತ್ತಿನ ಕಾರ್ಯಕ್ಷೇತ್ರ ಎಷ್ಟು ವಿಸ್ತಾರವಾಗುತ್ತ ನಡೆದಿದೆ, ಅದರ ಹೊಣೆಗಳು ಎಷ್ಟು ಹೆಚ್ಚಿವೆ ಎಂಬುದಕ್ಕೆ- ಸಂಕೇತ ಮಾತ್ರ ಈ ಯಾದಿ. ಇದನ್ನು ಅನುಲಕ್ಷಿಸಿ ಪರಿಷತ್ತಿನ ಶಕ್ತಿ ಸಂವರ್ಧನೆಗೆ, ಶೀಲ ಸಂವರ್ಧನೆಗೆ ಅದರ ಪದಾಧಿಕಾರಿಗಳೂ ಪ್ರಯತ್ನಿಸಬೇಕು. ಸರ್ವ ಕನ್ನಡಿಗರೂ ಸಹಕರಿಸಬೇಕು.

--

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...