ಕನ್ನಡ ಸಾಹಿತ್ಯ ಸಂಶೋಧನೆಯ ನಿನ್ನೆ-ಇಂದು-ನಾಳೆಗಳ ‘ಮಾರ್ಗಾನ್ವೇಷಣೆ’

Date: 26-07-2021

Location: ಬೆಂಗಳೂರು


ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ. ನಿತ್ಯಾನಂದ ಬಿ. ಶೆಟ್ಟಿಯವರು ಸಂಶೋಧನೆಯ ಇತಿಹಾಸ, ಸಂಶೋಧನೆಯಲ್ಲಿ ವಿಧಾನ (ಮೆಥಡ್) ಮತ್ತು ವಿಧಾನಕ್ರಮ (ಮೆಥಡಾಲಜಿ)ಕ್ಕಿರುವ ವ್ಯತ್ಯಾಸ, ತತ್ತ್ವ ಮತ್ತು ಸಿದ್ಧಾಂತಗಳೆಂದರೆ ಏನು?, ಸಂಶೋಧನೆಯಲ್ಲಿ ‘ಫಿಲಾಸಫಿ’ಯ ಮಹತ್ವ, ಸಾಹಿತ್ಯ ಸಂಶೋಧನೆಯ ರೀತಿ-ನೀತಿ, ಕನ್ನಡ ಸಾಹಿತ್ಯ ಸಂಶೋಧನೆಯ ನಿನ್ನೆ-ಇಂದು-ನಾಳೆಗಳ ಕುರಿತು ಬರೆದಿರುವ ಪುಸ್ತಕ ‘ಮಾರ್ಗಾನ್ವೇಷಣೆ’. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಸಾಹಿತ್ಯ ಸಂಶೋಧನೆಯ ಮುಖ್ಯ ಮಾದರಿಗಳನ್ನು ಮತ್ತು ಆ ದಾರಿಯ ಆಳ-ಅಗಲಗಳನ್ನು ವಿವರವಾಗಿ ಮತ್ತು ವಿಮರ್ಶಾತ್ಮಕವಾಗಿ ಚರ್ಚಿಸಿರುವ ಈ ಕೃತಿ ಆಗಸ್ಟ್ 07, 2021 ರಂದು ಲೋಕಾರ್ಪಣೆಗೊಳ್ಳಲಿದೆ. ‘ಸಂಶೋಧನಾಸಕ್ತ’ ಮತ್ತು ‘ಮಾರ್ಗದರ್ಶಕ’ ಎಂಬ ಎರಡು ಪಾತ್ರಗಳ ನಡುವೆ ನಡೆಯುವ ಸಂವಾದದ ಸ್ವರೂಪದಲ್ಲಿರುವ ಮುನ್ನೂರು ಪುಟಗಳ ಈ ಪುಸ್ತಕ ಗಹನವಾದ ಕಾದಂಬರಿಯೊಂದನ್ನು ಓದಿದ ಅನುಭವ ಕೊಡುತ್ತದೆ. ಅವರ 'ಲೋಕೋಕ್ತಿ' ಅಂಕಣದಲ್ಲಿ ‘ಮಾರ್ಗಾನ್ವೇಷಣೆ’ಯ ಒಂದು ಅಧ್ಯಾಯದ ಆಯ್ದ ಭಾಗ ನಿಮ್ಮ ಓದಿಗಾಗಿ.

ಸಂಶೋಧನಾಸಕ್ತ: ನೀವು ಬಹಳ ಬಲವಾಗಿ ಆಗ್ರಹಿಸುತ್ತಿರುವ ಸಾಹಿತ್ಯ ಸಂಶೋಧನೆಯ ಈ ಸಂಕರ ಮಾದರಿಯ ಹಿಂದೆ ಇಂಗ್ಲಿಷ್‍ನಲ್ಲಿ ಈಗ ನಡೆಯುತ್ತಿರುವ ಅಧ್ಯಯನದ ಮಾದರಿಗಳ ಪ್ರೇರಣೆ ಇದೆಯೆ?

ಮಾರ್ಗದರ್ಶಕ: ಸಾಹಿತ್ಯ-ಸಂಸ್ಕೃತಿ ಮತ್ತು ರಾಜಕಾರಣದ ಅಂತರ್ ಸಂಬಂಧಗಳನ್ನು ಚರ್ಚಿಸುವಂತಹ ಅಧ್ಯಯನಗಳು ಅಲ್ಲಿ ನಡೆಯುತ್ತಿವೆ. ಷೆಲ್ಡನ್ ಪೋಲಾಕ್ ಅವರ ದಿ ಲಾಂಗ್ವೇಜ್ ಆಫ್ ದ ಗಾಡ್ಸ್ ಇನ್ ದಿ ವರ್ಲ್ಡ್ ಆಫ್ ಮೆನ್ (2009) ಎಂಬ ಕೃತಿ ಸಾಹಿತ್ಯ-ಸಂಸ್ಕೃತಿ ಅಧ್ಯಯನಕಾರರಿಗೆ ಮಾರ್ಗದರ್ಶನ ಮಾಡುವಂತಹ ಕೃತಿ. ಅಂತೆಯೇ ಅವರದೇ ಎ ರಸ ರೀಡರ್ – ಕ್ಲಾಸಿಕಲ್ ಇಂಡಿಯನ್ ಎಸ್ತೆಟಿಕ್ಸ್ (2016) ಕೃತಿ 440 ಪುಟಗಳಲ್ಲಿ ಅತ್ಯಂತ ವಿಸ್ತಾರವಾಗಿ ಹರಡಿದ್ದು, ಕ್ರಿಸ್ತಪೂರ್ವ 4ನೇ ಶತಮಾನಕ್ಕಿಂತಲೂ ಹಿಂದಿನ ಕಾವ್ಯತತ್ತ್ವಗಳನ್ನು ಪರಿಶೀಲಿಸುತ್ತ, ಅರ್ಥಮಾಡಿಕೊಳ್ಳುತ್ತ ಬಂದಿರುವ ಬಹಳ ಪ್ರಮುಖವಾದ ಸಂಶೋಧನೆ. ಭಾರತದ ವೈವಿಧ್ಯಮಯವಾದ ಮತ್ತು ಬಹುರೂಪದಲ್ಲಿ ಹರಡಿರುವ ಪ್ರಾಚೀನ ಚಿಂತನೆಗಳ ಕುರಿತು ಮಾರ್ಗದರ್ಶನ ನೀಡುವಂತಹ ಹಾಗೂ ಭಾರತೀಯ ಜ್ಞಾನಮೀಮಾಂಸೆಯನ್ನು ಅರ್ಥ ಮಾಡಿಕೊಳ್ಳುವಂತಹ ಬಹಳ ದೊಡ್ಡ ಪ್ರಯತ್ನ ಇದು. ಇವೆರಡೂ ಕೃತಿಗಳೂ ಪಠ್ಯ ವಿಶ್ಲೇಷಣೆಯ ಮೂಲಕವೇ ಸಂಸ್ಕೃತಿ ಅಧ್ಯಯನದ ಕೆಲಸವನ್ನು ಮಾಡಿವೆ. ಇಂಥ ಕೆಲಸಗಳನ್ನು ಮಾಡಲು ಈಗಿಂದೀಗಲೇ ನಮಗೆ ಸಾಧ್ಯವಾಗದೇ ಹೋಗಬಹುದು. ಆದರೆ ಇಂಥವುಗಳನ್ನು ನಾವು ಅರ್ಥಪೂರ್ಣ ಮಾದರಿಯಾಗಿ ನಮ್ಮ ಮುಂದೆ ಇಟ್ಟುಕೊಳ್ಳಬೇಕು.

ಹಾಗೆಯೇ ಕಲ್ಚರಲ್ ಆಂಥ್ರೊಪಾಲಜಿಸ್ಟ್ ಮತ್ತು ಈ ಕಾಲದ ಅತ್ಯಂತ ಪ್ರಸಿದ್ಧ ಇಂಡಾಲಜಿಸ್ಟ್ ಕೂಡ ಆಗಿರುವ ಡೇವಿಡ್ ಡೀನ್ ಶುಲ್‍ಮನ್‍ರವರು ಮಾಡಿದಂತಹ ಕೆಲಸಗಳನ್ನೂ ನಾವೂ ಗಮನಿಸಬೇಕು. ಪಠ್ಯಗಳನ್ನು ಮೂಲಾಧಾರವಾಗಿ ಇಟ್ಟುಕೊಂಡು ವ್ಯಕ್ತವಾದ ಕಲ್ಚರಲ್ ರೆಫರೆನ್ಸ್ ತಾರದೆ, ಪೊಲಿಟಿಕಲ್ ರೆಫರೆನ್ಸ್ ತಾರದೆ ಅವೆಲ್ಲವನ್ನೂ ಬಿಟ್ಟು ಶುಲ್‍ಮನ್ ಪೂರ್ಣಪ್ರಮಾಣದ ಪಠ್ಯ ವಿಶ್ಲೇಷಣೆಯನ್ನು ಮಾಡುತ್ತಾರೆ ಅವರು. ಅದರ ಅರ್ಥ ಶುಲ್‍ಮನ್ ಅವರಿಗೆ ಈ ಕಲ್ಚರಲ್ ಮತ್ತು ಪೊಲಿಟಿಕಲ್ ಆಟಗಳ ಪರಿಚಯ ಇಲ್ಲ ಎಂದು ಅಲ್ಲ. ತನ್ನ ಇಸ್ರೇಲ್ ದೇಶದಲ್ಲಿ ಕವಿಯೂ, ಯುದ್ಧವಿರೋಧಿಯೂ, ಶಾಂತಿ ಪ್ರತಿಪಾದಕನೂ ಆಗಿ ಕೆಲಸ ಮಾಡುತ್ತಿರುವ ಅವರು ಸ್ವತಃ ಓರ್ವ ಆಕ್ಟಿವಿಸ್ಟ್ ಮತ್ತು ಪ್ರಾಧ್ಯಾಪಕ. ಪಠ್ಯ ವಿಶ್ಲೇಷಣೆಯ ಮೂಲಕವೇ ಅವರು ಸಂಸ್ಕೃತಿ ಅಧ್ಯಯನ ನಡೆಸುತ್ತಾರೆ ಮತ್ತು ಎಲ್ಲ ಬಗೆಯ ರಾಜಕೀಯ-ಸಾಮಾಜಿಕ ಚಿಂತನೆಗಳನ್ನು ಪಠ್ಯ ವಿಶ್ಲೇಷಣೆಯ ಮೂಲಕವೇ ಮಾಡುತ್ತಿದ್ದಾರೆ. ಆ ತರಹದ ಸಾಧ್ಯತೆಯನ್ನು ನಾವು ಇವತ್ತು ಕನ್ನಡದಲ್ಲಿ ಹುಟ್ಟುಹಾಕಬೇಕು.

ಪಠ್ಯವಿಶ್ಲೇಷಣೆಯನ್ನು ಕೇಂದ್ರವಾಗಿರಿಸಿಕೊಂಡು ಅದರ ಸುತ್ತ ಪಠ್ಯದ ಸಾಂಸ್ಕೃತಿಕ ಜೀವನಚರಿತ್ರೆಯನ್ನು ಅನಾವರಣಗೊಳಿಸುವ ಸಂಶೋಧನೆಯ ವಿಧಾನಕ್ರಮವನ್ನು ಷೆಲ್ಡನ್ ಪೊಲಾಕ್, ಡೇವಿಡ್ ಡೀನ್ ಶುಲ್‍ಮನ್, ಮತ್ತು ಯೀಗಲ್ ಬ್ರೊನ್ನರ್ ಮೊದಲಾದವರ ಕೆಲಸಗಳು ತೋರಿಸಿಕೊಡುತ್ತಿವೆ. ಇದಕ್ಕೆ 2010ರಲ್ಲಿ ಕೊಲಂಬಿಯ ಯೂನಿವರ್ಸಿಟಿ ಪ್ರಕಟಿಸಿರುವ ಯೀಗಲ್ ಬ್ರೊನ್ನರ್ ಅವರ ಎಕ್ಸ್ ಟ್ರೀಮ್ ಪೊಯೆಟ್ರಿಯಂತಹ ಪುಸ್ತಕಗಳನ್ನು ನಿದರ್ಶನಗಳಾಗಿ ಕೊಡಬಹುದಾಗಿದೆ. ಕನ್ನಡದಲ್ಲಿ ಮನು ವಿ ದೇವದೇವನ್ ಅವರು ಆಧುನಿಕಪೂರ್ವ ಕನ್ನಡದ ಪಠ್ಯಗಳನ್ನು ವಿಶ್ಲೇಷಿಸುತ್ತ ಪೃಥ್ವಿಯಲ್ಲೊದಗಿದ ಘಟವು – ಕರ್ನಾಟಕದ ನಿನ್ನೆಗಳು (2006) ಎಂಬ ಒಂದು ಪುಸ್ತಕವನ್ನು ಬರೆದರು. ವಿಷಾದದ ಸಂಗತಿಯೆಂದರೆ ಕನ್ನಡದಲ್ಲಿ ಅದರ ಬಗ್ಗೆ ಚರ್ಚೆ ಬಿಡಿ, ಒಂದೇ ಒಂದು ಪರಿಚಯಾತ್ಮಕವಾದ ಲೇಖನವೂ ಬರಲಿಲ್ಲ.

ಇದೇ ಪುಸ್ತಕದ ಮುಂದುವರಿದ ಭಾಗವೋ ಎಂಬಂತೆ ಎ ಪ್ರಿ ಹಿಸ್ಟರಿ ಆಫ್ ಹಿಂದೂಯಿಸಮ್ (2016) ಎಂಬ ಪುಸ್ತಕವನ್ನು ಮನು ವಿ ದೇವದೇವನ್ ಬರೆದರು. ಅಭಿಜಾತ ಸಾಹಿತ್ಯ ಪಠ್ಯಗಳು, ಧಾರ್ಮಿಕ ಸಾಹಿತ್ಯದ ಪಠ್ಯಗಳು, ಶಾಸನ, ಕೈಫಿಯತ್ತು ಮೊದಲಾದವುಗಳ ಮೂಲಕ 11ನೇ ಶತಮಾನದಿಂದ 19ನೇ ಶತಮಾನದವರೆಗಿನ ದಕ್ಷಿಣ ಏಷಿಯಾದ ಇತಿಹಾಸದಲ್ಲಿ ‘ಹಿಂದೂಯಿಸಮ್’ ರೂಪುಗೊಂಡ ಬಗೆಯನ್ನು ಅಧ್ಯಯನ ಮಾಡಿರುವ ಪುಸ್ತಕ ಅದು. ಇಂತಹ ಪುಸ್ತಕಗಳು ಕರ್ನಾಟಕದ ಮತ್ತು ಕನ್ನಡದ ಸಂಶೋಧನೆಗೆ ಬಹಳ ದೊಡ್ಡ ಪ್ರಮಾಣದಲ್ಲಿ ನೆರವಾಗಬಲ್ಲವು. ಇನ್ನೂ ಒಂದು ಸೂಕ್ಷ್ಮ ಗಮನಿಸಿ. ಮನು 2006ರಲ್ಲಿ ಒಂದು ಪುಸ್ತಕ ಪ್ರಕಟಿಸಿದ ಬಳಿಕ 10 ವರ್ಷ ಅಧ್ಯಯನ ಮಾಡಿ ಇನ್ನೊಂದು ಪುಸ್ತಕ ಬರೆದರು. ಎರಡು ಪುಸ್ತಕಗಳ ನಡುವಿನ ಈ ಕಾಲದ ಅಂತರವನ್ನೂ ನಾವು ಗಮನದಲ್ಲಿಟ್ಟುಕೊಳ್ಳಬೇಕು. ಅಧ್ಯಯನ, ಚಿಂತನೆ, ಬರವಣಿಗೆ ಇವು ಎಲ್ಲವೂ ಬಹಳಬಹಳ ನಿಧಾನವಾಗಿ ನಡೆಯಬೇಕಾದ ಕೆಲಸಗಳು.

ಇಲ್ಲಿ ಪ್ರಸ್ತಾವಿಸಿದ ಮನು ವಿ. ದೇವದೇವನ್ ಇತಿಹಾಸ ಸಂಶೋಧಕ. ಉಳಿದ ವಿದ್ವಾಂಸರು ಇಂಡಾಲಜಿಸ್ಟ್ ಗಳು. ಇತಿಹಾಸ ಸಂಸ್ಕೃತಿ ಅಧ್ಯಯನಕ್ಕೆ ತೊಡಗಿರುವ ಸಂಶೋಧನಾರ್ಥಿಗೆ, ಓರ್ವ ಇಂಡಾಲಜಿಸ್ಟ್ ಗೆ ಸಾಹಿತ್ಯ ಕೃತಿಯೂ ಒಂದು ಆಕರ. ಹಾಗೆಯೇ ಶಾಸನ ಮತ್ತು ಕೈಫಿಯತ್ತುಗಳೂ ಆಕರ ಸಾಮಗ್ರಿಗಳು. ಸಂಸ್ಕೃತಿ ಅಧ್ಯಯನಕಾರನಿಗೆ ದೇಹಕ್ಕೆ ಸಿಂಪಡಿಸುವ ಸುಗಂಧ ದ್ರವ್ಯದ ಜಾಹೀರಾತೂ ಒಂದು ಆಕರ. ಕುವೆಂಪು ಅವರ ಶೂದ್ರ ತಪಸ್ವಿಯೂ ಆತನ ಅಧ್ಯಯನಕ್ಕೆ ಒಂದು ಆಕರ. ಹಾಗೆಯೇ ನಮ್ಮ ರಾಜಕಾರಣಿಗಳ ಚುನಾವಣಾ ಭಾಷಣವೂ ಒಂದು ಆಕರ ಪಠ್ಯ.

ನಾವು ಸಾಹಿತ್ಯ ಅಧ್ಯಯನ ವಿಭಾಗದವರು ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ ಅಥವಾ ತಪ್ಪಿಸಿಕೊಳ್ಳುವುದು ಬೇಡವೇ? ಜಾಹೀರಾತು ಮತ್ತು ನಾಟಕ ಇವೆರಡೂ ಕೂಡ ಪಠ್ಯಗಳೇ ಎಂದು ಹೇಳಿದರೆ ಆಕ್ಷೇಪವೇನಿಲ್ಲ. ಅದು ಒಂದು ರೀತಿಯ ಓದು ಅಥವಾ ತಿಳಿವಳಿಕೆ. ಆದರೆ ಅಷ್ಟೇ ಆದರೆ ಸಾಹಿತ್ಯ ವಿಭಾಗ ಆಗ ಸಾಹಿತ್ಯ ವಿಭಾಗ ಆಗಿ ಉಳಿಯೋದಿಲ್ಲ. ಪಠ್ಯವನ್ನು ಪಠ್ಯವಾಗಿ ನೋಡುವ ಕಲೆಯೇ ಹೊರಟುಹೋಗಿದೆ ನಮ್ಮ ವಿಭಾಗಗಳಲ್ಲಿ. ಪದ್ಯವನ್ನು ಕನಿಷ್ಟ ಪಕ್ಷ ಓದುವಾಗಲಾದರೂ ಒಂದು ಪದ್ಯವಾಗಿ ಓದಬೇಕೋ ಬೇಡವೋ? ಕುವೆಂಪು ಅವರ ಶೂದ್ರ ತಪಸ್ವಿ ನಾಟಕ ಬಹಳ ಮುಖ್ಯವಾದ ನಾಟಕ. ಅದರಲ್ಲಿ ಎರಡು ಮಾತಿಲ್ಲ. ಆದರೆ ಅದರ ಪಠ್ಯ ವಿಶ್ಲೇಷಣೆ ನಡೆಸುವಾಗ ಅಥವಾ ಸಂಶೋಧನೆ ಮಾಡುವಾಗ ಅದನ್ನು ಯಾಕೆ ಬರೆದಿದ್ದಾರೆ ಎಂಬ ಪ್ರಶ್ನೆಯ ಜೊತೆಗೆ ಅದರಲ್ಲಿ ಏನನ್ನು ಬರೆದಿದ್ದಾರೆ ಮತ್ತು ಹೇಗೆ ಬರೆದಿದ್ದಾರೆ ಎಂಬ ಪ್ರಶ್ನೆಯನ್ನು ಕೇಳುವುದು ಕೂಡ ಅಷ್ಟೇ ಮುಖ್ಯ. ಈ ಎಲ್ಲ ಪ್ರಶ್ನೆಗಳನ್ನು ಅಖಂಡವಾಗಿ ನಿರ್ವಹಿಸುವುದು ಸಾಹಿತ್ಯ ಸಂಶೋಧನೆಯ ಮುಂದಿನ ದಾರಿಯಾಗಿ ರೂಪುಗೊಂಡರೆ ಸ್ಥಗಿತಗೊಂಡ ಕನ್ನಡದ ಸಂಶೋಧನ ಸಂಸ್ಕೃತಿ ಮತ್ತೆ ನಳನಳಿಸಬಹುದು.

ಸಂ: ಸಂಶೋಧನ ಸಂಸ್ಕೃತಿ ಇಲ್ಲದಿರುವ ಪರಿಸ್ಥಿತಿಗೂ ಉನ್ನತ ಶಿಕ್ಷಣ ಎದುರಿಸುತ್ತಿರುವ ಬಿಕ್ಕಟ್ಟಿಗೂ ಸಂಬಂಧ ಇದೆಯೇ?
ಮಾ: ನಮ್ಮ ಚರ್ಚೆಯನ್ನು ಇನ್ನಷ್ಟು ಆಳವಾಗಿ ವಿಸ್ತರಿಸುವ ಪ್ರಶ್ನೆ ಇದು. ಸಂಶೋಧನೆ, ಸಂಶೋಧನ ಸಂಸ್ಕೃತಿ, ಉನ್ನತ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಂಸ್ಥೆ ಇವು ನಾಲ್ಕೂ ಪರಸ್ಪರ ಹೆಣೆದುಕೊಂಡಿರುವ ವಿದ್ಯಮಾನಗಳಾಗಿರುವುದರಿಂದ ನಾವು ಇಲ್ಲಿ ಇದನ್ನು ಮುಕ್ತವಾಗಿ ಚರ್ಚಿಸಬಹುದು.

ನಿಮ್ಮ ಪ್ರಶ್ನೆ ‘ಸಂಶೋಧನ ಸಂಸ್ಕೃತಿ ಇಲ್ಲದಿರುವ ಪರಿಸ್ಥಿತಿಗೂ ಉನ್ನತ ಶಿಕ್ಷಣ ಎದುರಿಸುತ್ತಿರುವ ಬಿಕ್ಕಟ್ಟಿಗೂ ಸಂಬಂಧ ಇದೆಯೇ’ ಎಂದಲ್ಲವೇ. ಇದಕ್ಕೆ ನನ್ನ ಉತ್ತರ ಹೌದು. ಇದನ್ನು ಕೊಂಚ ವಿವರಿಸೋಣ. ನಾವು ಉನ್ನತ ಶಿಕ್ಷಣವನ್ನು ಸಂಪೂರ್ಣವಾಗಿ ಸ್ವಾಯತ್ತಗೊಳಿಸಿ, ಅತ್ಯಂತ ಉತ್ತುಂಗ ಸ್ಥಿತಿಯ ಶೈಕ್ಷಣಿಕ ಸ್ವಾತಂತ್ರ್ಯವನ್ನು ಒದಗಿಸಿದಲ್ಲಿ ಮಾತ್ರ ಸಂಶೋಧನ ಸಂಸ್ಕೃತಿ ರೂಪುಗೊಳ್ಳಲು ಸಾಧ್ಯ. ಎಲ್ಲಿ ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಮುಕ್ತ ಚಿಂತನೆಯ ರಾಜಕೀಯ ಸಂಸ್ಕೃತಿ ಇರುತ್ತದೋ ಅಲ್ಲಿ ಸಂಶೋಧನೆಯ ಸಂಸ್ಕೃತಿಯೂ ನಳನಳಿಸುತ್ತಿರುತ್ತದೆ. ಸಂಶೋಧನೆ ಹಣಕ್ಕಾಗಿ/ಶಿಷ್ಯವೇತನಕ್ಕಾಗಿ ಮಾಡುವ ಒಂದು ಕೆಲಸ ಅಲ್ಲ. ಆದರೆ ನಮ್ಮ ದೇಶದ ಸಾಮಾಜಿಕ ಪರಿಸ್ಥಿತಿ ಹೇಗಿದೆಯೆಂದರೆ ಶಿಷ್ಯವೇತನ (ಸ್ಕಾಲರ್‍ಶಿಪ್) ಸಿಗುತ್ತೆ, ಏನೋ ಸ್ವಲ್ಪ ಖರ್ಚಿಗೆ ದುಡ್ಡು ಸಿಗುತ್ತದೆ ಅಂತ ನಮ್ಮಲ್ಲಿ ಸಂಶೋಧನೆಗೆ ಸೇರುವ ಪರಿಸ್ಥಿತಿ ಇದೆ. ಅದು ಸಂಶೋಧನಾರ್ಥಿಗಳ ಸಮಸ್ಯೆ ಅಲ್ಲ. ನಮ್ಮ ದೇಶದ ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ಸಮಸ್ಯೆ. ಹೊಟ್ಟೆಪಾಡು ಮುಖ್ಯವಾಗಿ, ಅದರ ಬಾಲಂಗೋಚಿಯಾಗಿ ಸಂಶೋಧನೆ ನಡೆಯುವಲ್ಲಿ ಸಂಶೋಧನ ಸಂಸ್ಕೃತಿ ಹುಟ್ಟಲು ಸಾಧ್ಯವಿಲ್ಲ. ಅಪವಾದಗಳಿರಬಹುದು. ಆ ಮಾತು ಬೇರೆ.

ನೋಡಿ, ಒಂದು ಉದಾಹರಣೆ ಕೊಡುತ್ತೇನೆ. ಕ್ರಿಕೆಟ್, ಫುಟ್‍ಬಾಲ್, ಬ್ಯಾಡ್‍ಮಿಂಟನ್ ಮುಂತಾದುವುಗಳಂತೆ ಕಬಡ್ಡಿ ಆಟವನ್ನು ಒಂದು ವೃತ್ತಿಯಾಗಿ ಆಡುವುದು ಕೂಡ ಜನಪ್ರಿಯವಾಗುತ್ತಿರುವ ಈ ಸಂದರ್ಭದಲ್ಲಿ ಒಬ್ಬ ನಿರ್ದಿಷ್ಟ ಕಬಡ್ಡಿ ಆಟಗಾರನನ್ನು ನಾವು ‘ರೈಡರ್’ ಅಂತಲೇ ಗುರುತಿಸ್ತೀವಿ. ಇನ್ನೊಬ್ಬನನ್ನು ‘ಕ್ಯಾಚರ್’ ಅಂತ ಗುರುತಿಸ್ತೀವಿ. ಅದು ಆತನ ಕಾಲ್ಚಳಕ, ಕೈಚಳಕದ ಮೂಲಕ ಆತನಿಗೆ ಸಿಕ್ಕಿರುವ ವಿಶೇಷ ಅಸ್ಮಿತೆ ಮತ್ತು ಮಾನ್ಯತೆ. ಒಂದು ಕಬಡ್ಡಿ ಆಟದಲ್ಲಿರುವ ಇಂತಹ ಒಂದು ಅಸ್ಮಿತೆ ನಮ್ಮ ಬೌದ್ಧಿಕ ವಲಯದಲ್ಲಿದೆಯೇ? ಕನ್ನಡದ ಬೌದ್ಧಿಕ ವಲಯದಲ್ಲಿರುವ ಅದರಲ್ಲೂ ವಿಶ್ವವಿದ್ಯಾನಿಲಯದಲ್ಲಿರುವ ಎಷ್ಟು ಜನರನ್ನು ನಾವು ಈ ಮಾದರಿಯ ಅಸ್ಮಿತೆ ಹೊಂದಿರುವ ಸಂಶೋಧಕರೆಂದು ಗುರುತಿಸಲು ಸಾಧ್ಯ? ಕನ್ನಡದ ಶ್ರೇಷ್ಠ ಸಂಶೋಧನೆಗಳೆಂದು ನಾವು ಹಿರೀಕರ ಹಲವು ಕೃತಿಗಳನ್ನು ಉದಾಹರಣೆಯಾಗಿ ಕೊಡುತ್ತೇವೆಯೇ ಹೊರತು ಸರೀಕರ ಕೆಲವು ಕೃತಿಗಳನ್ನು ಹೆಸರಿಸುವುದೂ ನಮಗೆ ಯಾಕೆ ಕಷ್ಟಸಾಧ್ಯವಾಗಿಬಿಟ್ಟಿದೆ? ಯಾಕೆಂದರೆ ನಮ್ಮಲ್ಲಿ ಹೆಚ್ಚಿನವರು ‘ಸಂಶೋಧಕ’, ಎಂಬ ಅಸ್ಮಿತೆಯನ್ನು ಅಥವಾ ಇಂತಹ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಪಡೆದಿರುವ ವಿದ್ವಾಂಸ ಎಂಬ ಅಸ್ಮಿತೆಯನ್ನು ಪಡೆದುಕೊಂಡೇ ಇಲ್ಲ. ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿ-ಜಾನಪದ ಕ್ಷೇತ್ರಗಳಲ್ಲಿ ಎಷ್ಟು ಜನ ಪಿಎಚ್.ಡಿ. ಪದವಿ ಪಡೆದಿದ್ದಾರೆ ಮತ್ತು ಪಿಎಚ್.ಡಿ. ಪದವಿ ದೊರಕಿದ ನಂತರ ಅವರಲ್ಲಿ ಎಷ್ಟು ಮಂದಿ ಸಂಶೋಧನೆ ಮುಂದುವರಿಸಿದ್ದಾರೆ. ಎಂಬುದರ ಬಗ್ಗೆ ಒಂದು ಸಣ್ಣ ಮಟ್ಟದ ಸರ್ವೇ ನಡೆಸಿದರೂ ಸಂಶೋಧನ ಸಂಸ್ಕೃತಿಗೆ ಬಂದಿರುವ ಬಿಕ್ಕಟ್ಟಿನ ಅರಿವಾಗುತ್ತದೆ. ಹಿರಿಯ ವಿದ್ವಾಂಸರನ್ನು ಹೊರತುಪಡಿಸಿ ಈಗಿನ ಯುವ ಸಂಶೋಧಕರನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಇಂದಿಗೂ ನಮ್ಮಲ್ಲಿ ಒಬ್ಬ ಕುವೆಂಪು ಸ್ಕಾಲರ್, ಒಬ್ಬ ಬೇಂದ್ರೆ ಸ್ಕಾಲರ್, ಒಬ್ಬ ಕೆವಿಎನ್ ಸ್ಕಾಲರ್ ಇಲ್ಲ. ಇದು ನಿಜವಾದ ಬಿಕ್ಕಟ್ಟು.

ಈ ಅಂಕಣದ ಹಿಂದಿನ ಬರೆಹಗಳು:
ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ: ಭಾಗ-4

ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ : ಭಾಗ- 3
ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ : ಭಾಗ- 2
ಜಾತಿ ಸಮಾಜ-ನಾಗರಿಕ ಸಮಾಜ-ರಾಜಕೀಯ ಸಮಾಜ : ಭಾಗ- 1
‘ಸ್ವತಂತ್ರ ಭಾರತ’ ಎಂಬ ಇತ್ಯರ್ಥವಾಗದ ವಿದ್ಯಮಾನ
ಕೃಷ್ಣಮೂರ್ತಿ ಹನೂರರ ಕಾಲಯಾತ್ರೆ–ಬೃಹತ್ ಕಾದಂಬರಿಯೊಂದರ ಮೊದಲ ಪುಟಗಳು
ಅನೇಕಲವ್ಯ – 3
ಅನೇಕಲವ್ಯ-2
ಅನೇಕಲವ್ಯ-1
‘ಇಂದಿರಾಬಾಯಿ’ ಯ ರಾಜಕೀಯ ಓದು

 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...