ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಏಕೀಕರಣಕ್ಕಾಗಿ ಅಧಿಕಾರದ ಸದ್ಬಳಕೆ, ಮನು ಬಳಿಗಾರರ ಸಾಧನೆ: ಎಚ್ಚೆಸ್ವಿ 

Date: 13-09-2021

Location: ಶ್ರೀಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು


ಕನ್ನಡದ ಸಾಹಿತ್ಯಕ-ಸಾಂಸ್ಕೃತಿಕ ವಲಯದ ನೈಜ ಏಕೀಕರಣಕ್ಕಾಗಿ ತಮ್ಮ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡಿದ್ದು ಡಾ. ಮನು ಬಳಿಗಾರರ ಸಾಧನೆಯಾಗಿದೆ ಎಂದು ಹಿರಿಯ ಸಾಹಿತಿ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಗಮಿತ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಸೋಮವಾರ ಮಧ್ಯಾಹ್ನ ಆಯೋಜಿಸಿದ್ದ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಡಾ. ಮನು ಬಳಿಗಾರ ಅವರು ಕನ್ನಡ ಸಾಹಿತ್ಯ- ಸಂಸ್ಕೃತಿಯ ನೈಜ ಏಕೀಕರಣಕ್ಕೆ ಅವರು ವ್ಯಾಪಕ ಯೋಜನೆ-ಯೋಚನೆಗಳಿಂದ ಸಮಾವೇಶಗಳನ್ನು ಹಮ್ಮಿಕೊಂಡಿದ್ದು ಅವರ ಸಾಮರ್ಥ್ಯದ ಪ್ರತೀಕವಾಗಿದೆ. ಸಾಹಿತಿ-ಕಲಾವಿದರಲ್ಲಿ ಭೇದ ಮಾಡದೇ ಸರ್ವರನ್ನೂ ಸಮಾನವಾಗಿ ಕಂಡು ಅವಕಾಶಗಳನ್ನು ಸೃಷ್ಟಿಸಿದರು. ಪ್ರತಿಭಾ ಮನ್ನಣೆಯೇ ಅವರ ಸೇವೆಯ ಉದ್ದೇಶವಾಗಿದೆ. ಹೊರನಾಡಿನಲ್ಲೂ ಸಮ್ಮೇಳನ ಆಯೋಜಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಪ್ರಶಂಸಿಸಿದರು.

ಗಮನಾರ್ಹ ದೂರದೃಷ್ಟಿ: ಕನ್ನಡ ಸಾಹಿತ್ಯ-ಸಂಸ್ಕೃತಿಯ ಗೌರವ ಹೆಚ್ಚಿಸುವತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿ ರೂಪಿಸುವ ಮನು ಬಳಿಗಾರರ ಯೋಜನೆ ಹಾಗೂ ಯೋಚನೆಗಳ ದೂರದೃಷ್ಟಿಯು ಗಮನಾರ್ಹವಾದದ್ದು. ಲೇಖಕಿಯರ ಸಾಹಿತ್ಯ ಸಮ್ಮೇಳನ, ದಲಿತ ಸಾಹಿತ್ಯ ಸಮ್ಮೇಳನ ಸೇರಿದಂತೆ ಜಾತಿ-ಧರ್ಮ ಭೇದ ಎಣಿಸದೇ ರಾಜ್ಯದ ಎಲ್ಲಸಾಹಿತಿ-ಕಲಾವಿದರನ್ನು ಬರ ಮಾಡಿಕೊಳ್ಳಲು ತಮ್ಮ ಅಧಿಕಾರ ಬಳಸಿಕೊಂಡರು. ಆ ಅಧಿಕಾರದ ದುರ್ಬಳಕೆ ಮಾಡಿಲ್ಲ. ಕಾರ್ಯದ ಒತ್ತಡಗಳಿದ್ದರೂ ಸಂಯಮದಿಂದ ಅವುಗಳನ್ನು ಸಮರ್ಥವಾಗಿ ನಿರ್ವಹಿಸಿದ್ದು, ಅವರ ಸ್ಫೂರ್ತಿ ಹಾಗೂ ಅನುಕರಣೀಯ ವ್ಯಕ್ತಿತ್ವ ಎಂದು ಪ್ರಶಂಸಿಸಿದರು.

ಆಯ-ವ್ಯಯದ ಸಮತೋಲನ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದಲ್ಲಿದ್ದು, ಹಣದ ಆಯ-ವ್ಯಯಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದು ಡಾ. ಮನು ಬಳಿಗಾರ ವಿಶೇಷವೂ ಆಗಿದೆ ಎಂದು ಅಭಿಪ್ರಾಯಪಟ್ಟ ಮತ್ತೋರ್ವ ಅತಿಥಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ‘ಹಣವನ್ನು ನೀರಿನಂತೆ ಗಳಿಸಿ, ತೀರ್ಥದಂತೆ ಬಳಸಬೇಕು ’ ಎಂಬ ರಹಸ್ಯಾರ್ಥವು ಮನು ಬಳಿಗಾರರಿಗೆ ಅನ್ವಯಿಸುತ್ತದೆ. ಆದ್ದರಿಂದ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಬೃಹತ್ ಸಂಸ್ಥೆಯನ್ನು ನಿರ್ವಹಿಸಿಕೊಂಡು ಹೋಗಲು ಸಾಧ್ಯವಾಯಿತು. ಅವರ ಶ್ರಮವು ವೇಗ ಹಾಗೂ ಸಂಪೂರ್ಣತೆಯ ಗುಣಲಕ್ಷಣಗಳನ್ನು ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟರು.

ಅಂತರಂಗ ಶುದ್ಧಿ: ಅಭಿನಂದನಾ ಗೌರವಕ್ಕೆ ಸ್ಪಂದಿಸಿದ ನಾಡೋಜ ಡಾ. ಮನು ಬಳಿಗಾರ್, ಅಂತರಂಗ ಶುದ್ಧಿಯನ್ನು ಕಾಯ್ದುಕೊಂಡು ಬಂದಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆ ಮಾಡಲು ಸಾಧ್ಯವಾಗಿದೆ. ತಮ್ಮೂರು ಶಿಗ್ಲಿಯ ಪರಿಸರ, ಪಾಲಕರ ಸಂಸ್ಕಾರ, ಶಿಕ್ಷಕರ ಬೋಧನೆಯು ಆಶೀರ್ವಾದ ರೂಪದಲ್ಲಿ ತಮ್ಮನ್ನು ಕಾಯ್ದಿದೆ ಎಂದು ಅಭಿಪ್ರಾಯಪಟ್ಟ ಅವರು, ಮಾಡಬೇಕಿರುವ ಕನ್ನಡದ ಕೆಲಸ ಬಹಳ ಇದ್ದು, ಸಂಕಲ್ಪ ತೊಡಬೇಕು ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಸಮಾರಂಭದ ಅಧ್ಯಕ್ಷತೆವಹಿಸಿ ‘ನಾಡೋಜ ಡಾ. ಮನು ಬಳಿಗಾರರು ಉತ್ತಮ ಆಡಳಿತಗಾರರೆಂದು ಸಾಬೀತು ಮಾಡಿದ್ದಾರೆ’ ಎಂದು ಪ್ರಶಂಸಿಸಿದರು.

ಲೇಖಕಿ ಡಾ. ವಸುಂಧರಾ ಭೂಪತಿ, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ರಂಗಕರ್ಮಿ ರಾಮಕೃಷ್ಣಯ್ಯ, ಅಭಿನವ ಪ್ರಕಾಶನದ ನ. ರವಿಕುಮಾರ, ಕವಿ ಮುನಾಫ್ ಸೇರಿದಂತೆ ಇತರೆ ಗಣ್ಯರು ಡಾ. ಮನು ಬಳಿಗಾರರ ಸೇವೆಯನ್ನು ಪ್ರಶಂಸಿಸಿದರು. ಶೇಖರಗೌಡ ಮಾಲೀಪಾಟೀಲ, ಬೈರಮಂಗಲ ರಾಮೇಗೌಡ ಸೇರಿದಂತೆ ಇತರೆ ಸಾಹಿತ್ಯಕ ಗಣ್ಯರು ಪಾಲ್ಗೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಗೌರವ ಸಲಹೆಗಾರ ಹಾಗೂ ಪತ್ರಕರ್ತ ಪದ್ಮರಾಜ ದಂಡಾವತಿ ಸ್ವಾಗತಿಸಿ, ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ವ್ಯವಸ್ಥಾಪಕರು ಶಿವಣ್ಣ ವಂದಿಸಿದರು.

MORE NEWS

ಡಾ.ಸಿದ್ದಣ್ಣ ಉತ್ನಾಳ ಪುಸ್ತಕ ಪ್ರಶ...

23-09-2021 ಬೆಂಗಳೂರು

ವಿಜಯಪುರದ ಕನ್ನಡ ಪುಸ್ತಕ ಪರಿಷತ್ತಿನ ಅಡಿಯಲ್ಲಿ ಕರ್ನಾಟಕ ಸರ್ಕಾರದ ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಪುರಸ...

ರಾಧಾದೇವಿ ಅವರ ಕಾದಂಬರಿ ಕುರಿತ ’ಸೆ...

23-09-2021 ಧಾರವಾಡ

ಲೇಖಕಿ ಹೆಚ್. ಜಿ. ರಾಧಾದೇವಿ ವ್ಯಕ್ತಿತ್ವ ಬರಹ ಅಭಿಮಾನಿ ಬಳಗವು ರಾಧಾದೇವಿ ಅವರ ಕಾದಂಬರಿಯ ಕುರಿತು ಇತ್ತೀಚೆಗೆ ಹಮ್ಮಿಕೊ...

ಕನಕದಾಸ ಅಧ್ಯಯನ ಕೇಂದ್ರಕ್ಕೆ ಅಧಿಕಾ...

22-09-2021 ಬೆಂಗಳೂರು

ಬೆಂಗಳೂರು: ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಕಾರ್ಯಾನುಷ್ಠಾನ ಮಂಡಳಿಗೆ ಅಧಿಕಾರೇತರ ನಾಮ...