ಕನ್ನಡದ ಹೊಸ ನೆಲೆಯ ಸಂಶೋಧಕ-ಮನು ದೇವದೇವನ್‌

Date: 08-11-2019

Location: ಬೆಂಗಳೂರು


ಮನು ದೇವದೇವನ್‌ ಬಹುಮುಖದ ಅಪ್ಪಟ ಕನ್ನಡ ಪ್ರತಿಭೆ. ಕನ್ನಡದಲ್ಲಿ ಕವಿತೆ ಮತ್ತು ಕಥೆಗಳನ್ನು ಬರೆಯುವ ಮೂಲಕ ತಮ್ಮ ಹುಡುಕಾಟವನ್ನು ಆರಂಭಿಸಿದ ಅವರು ಬಳಿಕ ದೇಶದ ವಿದ್ವತ್‌ ಜನಗಳ ಕಾಶಿ ಎಂದೇ ಪ್ರಸಿದ್ಧವಾದ ದೆಹಲಿಯ ಜವಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು.ಕರ್ನಾಟಕದ ಮಧ್ಯಯುಗದ ಸ್ಥಿತಿಗತಿಗಳ ಕುರಿತು ಡಾಕ್ಟರೇಟ್‌ ಪ್ರಬಂಧ ರಚಿಸಿದರು. ನಿಜವಾದ ಅರ್ಥದಲ್ಲಿ ಇದೊಂದು ಅಪೂರ್ವ ಪ್ರೌಢಪ್ರಬಂಧ.

ಸಮಾಜದ ಸಂಕೀರ್ಣತೆಗಳನ್ನು ನಿರುದ್ವಿಗ್ನವಾಗಿ ಅರಿತುಕೊಳ್ಳುವುದು ಮನು ಅವರಿಗೆ ಪ್ರಿಯವಾದ ವಿಷಯ. ಅದಕ್ಕಾಗಿ, ಇತಿಹಾಸ, ಸಾಹಿತ್ಯ (ಶಾಸನ, ಶಿಷ್ಟಸಾಹಿತ್ಯ, ಮೌಖಿಕ ಪರಂಪರೆಗಳು), ರಾಜಕೀಯ ಮತ್ತು ಸಮಾಜಶಾಸ್ತ್ರಗಳನ್ನು ಅವರು ಬಳಸುತ್ತಾರೆ. ಅಪರಿಮಿತ ಅಧ್ಯಯನ ಶ್ರಮ ಮತ್ತು ಅಪಾರ ತಾಳ್ಮೆಯನ್ನು ಬೇಡುವ ಈ ವಿಧಾನ ಅತ್ಯಂತ ಸೂಕ್ತವಾದರೂ ಜನಪ್ರಿಯ ಸಂಸ್ಕೃತಿಯಲ್ಲಿ ಮುಳುಗೇಳುತ್ತಿರುವ ನಮ್ಮಂಥ ಸಮಾಜಗಳಲ್ಲಿ ಅಪ್ರಿಯವಾದ ಮಾದರಿ. ಮಧ್ಯಯುಗದಲ್ಲಿ ಹೊಸದಾಗಿ ರೂಪುಗೊಂಡ ರಾಜಕೀಯ-ಸಾಮಾಜಿಕ-ಧಾರ್ಮಿಕ ಸಂರಚನೆಗಳ ಹಿನ್ನೆಲೆಯನ್ನು ಹೊಸ ನೆಲೆಯಲ್ಲಿ, ವರ್ಗವನ್ನು ಪ್ರಧಾನವಾಗಿರಿಸಿಕೊಂಡರೂ ಸಾಂಪ್ರದಾಯಿಕ ಮಾರ್ಕ್ಸ್‌ವಾದಿ ನಿಲುವಿಗಿಂತ ಪ್ರತ್ಯೇಕವಾಗಿ ಮನು ನೋಡಬಲ್ಲರು. ಕನ್ನಡದ ವಚನಗಳ ಸಂಘಟನೆಯ ಹಿಂದಿನ ರಾಜಕಾರಣವನ್ನು ಸೋದಾರಣವಾಗಿ ನಿರೂಪಿಸಬಲ್ಲರು.

ದೇವಾಲಯಗಳ ನಿರ್ಮಾಣದ ಹಿಂದಿನ ಸಂಕೀರ್ಣ ರಾಜಕಾರಣ, ಸಿದ್ಧ ಮತ್ತು ದಾಸ ಪರಂಪರೆಯ ನಿಜದ ನೆಲೆಗಳು, ಶೈವ-ವೈಷ್ಣ-ಜೈನ ಮತ್ತು ಇಸ್ಲಾಂ ಧರ್ಮಗಳು ಸೃಷ್ಟಿಸಿದ ಹೊಸಬಗೆಯ ಸಂವಾದ ಪರಂಪರೆ; ವಿಜಯನಗರ ಪ್ರಾಜೆಕ್ಟ್‌ ಮನು ನಿರೂಪಿಸಿದ ಬಹಳ ಅಪರೂಪದ ಒಳನೋಟಗಳಾಗಿವೆ. ಇಂಥ ಸ್ವೋಪಜ್ಞತೆಯುಳ್ಳ ಸಂಶೋಧನೆಗಳು ಕನ್ನಡದಲ್ಲಿ ವಿರಳ. ಅದೂ ಹೊಸ ತಲೆಮಾರಿನ ಲೇಖಕರು ಇಂಥ ವಿಷಯಗಳನ್ನು ಯೋಚಿಸಲು ಕೂಡ ಆರದಷ್ಟು ವ್ಯವಸ್ಥೆ ಜಡವೂ, ಭ್ರಷ್ಟವೂ ಆಗಿದೆ. ಆನಂದತೀರ್ಥ, ಸಾಯಣ, ಬಂದೇನವಾಜ್‌, ಕೊಡೇಕಲ್‌, ಫಕೀರಪ್ಪ, ಶಿಶುನಾಳ. . . ಹಲ ಬಗೆಯ ಪ್ರಜ್ಞಾನೆಲೆಗಳನ್ನು ಒಂದು ವಿಶಾಲವಾದ ಚೌಕಟ್ಟಿನಲ್ಲಿ ಪ್ರಗತಿಪರರು (ಅಥವ ಮಾರ್ಕ್ಸ್‌ವಾದಿ) ಚಿಂತಕರು ನೋಡುವುದನ್ನು ಬಿಡಿ, ದ್ವೈತ ಸಿದ್ಧಾಂತ ಮತ್ತು ದಾಸ ಸಾಹಿತ್ಯವನ್ನು ಓದುವುದು ಕೂಡ ಮೈಲಿಗೆ ಎಂದು ತಿಳಿದುಕೊಂಡವರೆ ಹೆಚ್ಚು ನಮ್ಮಲ್ಲಿ ಹೆಚ್ಚು. ಆದರೆ, ಮನು ನಿರ್ಭಯವಾಗಿ ಇಂಥ ಕೆಲಸ ಮಾಡಬಲ್ಲರು.

ಅವರ ಕ್ಷೇತ್ರಕಾರ್ಯಗಳು ಅವರನ್ನು ಬರಿಗಾಲಿನಲ್ಲಿ ಉಡುಪಿಯಿಂದ ಟಿಬೇಟಿನವರೆಗೂ ನಡೆದಾಡಿಸಿವೆ. ವಚನ ಚಳವಳಿ, ಕಲ್ಯಾಣಕ್ರಾಂತಿ, ಸಾಮಾಜಿಕ ಕ್ರಾಂತಿ ಇತ್ಯಾದಿಗಳ ಪ್ರಯೋಜನಕಾರಿ ಸಿದ್ಧಾಂತದ ಭ್ರಮೆಯಲ್ಲಿರುವವರಿಗೆ ಕಲ್ಯಾಣ ಚಾಲುಕ್ಯರನ್ನು; ಬಿಜ್ಜಳನ ಹತ್ಯೆಯ ಹಿನ್ನೆಲೆಯನ್ನು ಹೊಸ ಅರ್ಥದಲ್ಲಿ ಮನು ವಿಶ್ಲೇಷಿಸಿರುವುದು ಕಣ್ತೆರೆಸಬಲ್ಲುದು! ಒಂದು ಬಗೆಯ ಪ್ರಯೋಜನಕಾರಿ ಮತ್ತು ಜನಪ್ರಿಯ ಸಂಸ್ಕೃತಿಯ ಮರಣಾಸನ್ನ ಜಾಡ್ಯದಿಂದ ನರಳುವ ಇಂತಹ ಸಂಶೋಧನೆಗೆ ನಾಂದಿ ಹಾಡಿದವರು ಕನ್ನಡದಲ್ಲಿ ಮಹಾಮಹಿಮರು ಎಂದು ಹೊಗಳಿಸಿಕೊಳ್ಳುವ ಪಂಡಿತರುಗಳು. ವಿಜಯನಗರ ಪ್ರಾಜೆಕ್ಟ್‌‌ ಮತ್ತು ಕೊಡೇಕಲ್‌ರಂಥ ಸಂಕೀರ್ಣ ವ್ಯಕ್ತಿತ್ವಗಳು ರೂಪಿಸಿದ ನಗರೀಕರಣ ಹಾಗೂ ವೀರಶೈವ ಧರ್ಮವು ನಿಧಾನಕ್ಕೆ ವಣಿಜರ ರಕ್ಷಣೆಯ ಅಸ್ತ್ರವಾಗಿ ಬದಲಾದುದನ್ನು ಮನು ಅವರಷ್ಟು ಚೆನ್ನಾಗಿ ನಿರೂಪಿಸುವುದು ಕಷ್ಟಸಾಧ್ಯ!

ಅವರ ಕೃತಿಗಳನ್ನು ಓದಿದಾಗ ಅನ್ನಿಸುವ ಇನ್ನೊಂದು ಅಂಶವೆಂದರೆ, ಸಿದ್ಧ ಪರಂಪರೆಗೆ ಸ್ಥಳೀಯ ಅಸ್ಮಿತೆಯೇ ಘನವಾದುದಾಗಿತ್ತು. ಮತ್ತು ದಾಸ ಸಿದ್ಧಾಂತಕ್ಕೆ ವೇದಾಂತ ಸಾರ್ವತ್ರಿಕತೆಯೇ ಮುಖ್ಯವಾದುದಾಗಿತ್ತು, ಎಂಬುದಾಗಿದೆ. ಅಷ್ಟರಮಟ್ಟಿಗೆ ದಾಸ ಪರಂಪರೆ ನಿಃಸ್ವಾರ್ಥವಾಗಿದೆ. ಹಾಗೆಂದು, ಸಿದ್ಧ ಪರಂಪರೆ ಸ್ವಾರ್ಥಿಯೆಂದಲ್ಲ. ಬದಲಿಗೆ ಅದು ಲೋಕನ್ಯಾಯಪರತೆಯನ್ನು ವಿಭಿನ್ನ ರೀತಿಯಲ್ಲಿ ಗ್ರಹಿಸಿತು, ಅಷ್ಟೇ!

ಮನು ಅವರ ಬಹಳಷ್ಟು ವಿಚಾರಗಳು ಸಂಶೋಧನಾಕ್ಷೇತ್ರದಲ್ಲಿ ಮೊದಲಬಾರಿಗೆ ಪ್ರಸ್ತಾಪನೆಗೊಳ್ಳುತ್ತಿರುವಂಥವು. ಇದೊಂದು ಮಹತ್ವದ ಸಾಧನೆ. ಮೊದಲೇ ಹೇಳಿದಂತೆ ಇವು ಹೊಮ್ಮಿರುವುದು ಅವರ ಲೋಕನ್ಯಾಯಪರ ದೃಷ್ಟಿ ಅಥವ ಕುಲಮತ ನಿರಪೇಕ್ಷಿತ ಅನುಸಂಧಾನ. ಇದು ಮನು ಅವರಿಗೆ ಸಾಧ್ಯವೇಕೆಂದರೆ ಅವರಲ್ಲಿರುವ ಮುಕ್ತತೆ ಮತ್ತು ಪರಿಶ್ರಮದ ಸತತ ಅಧ್ಯಯನ, ಚರಿತ್ರೆ ಮತ್ತು ಸಮಾಜಕ್ಕೆ ಅಪ್ರಿಯವಾದ ಪ್ರಶ್ನೆಗಳಿಗೆ ಸಮಾಧಾನ ಹುಡುಕುವ ಅವರ ಅಸಲಿ ಕಸುಬುಗಳಾಗಿವೆ.

ಸ್ವಜನ ಪಕ್ಷಪಾತ, ಜಾತಿ ರಾಜಕಾರಣ, ಬೌದ್ಧಿಕ ಭ್ರಷ್ಟತೆ, ನಿರ್ಲಜ್ಜತೆ ಮತ್ತು ನೈತಿಕತೆ-ಸನ್ನಡತೆಗಳ ದಿವಾಳಿತನ ಇಂದಿನ ಸಮಾಜದ ಬಹು ಪ್ರತಿಷ್ಠಿತ ವಿಷಯಗಳಾಗಿವೆ. ಇಂತಹ ಕಲುಷಿತ ಪರಿಸರದಲ್ಲಿ ಮನು ದೇವದೇವನ್‌ರಿಗೆ ಇನ್ಫೋಸಿಸ್‌ ೨೦೧೯ರ ಪ್ರಾಜ್ಞ ಪುರಸ್ಕಾರ ದೊರಕುತ್ತಿರುವುದು ಕೊಂಚ ನೆಮ್ಮದಿಯನ್ನು ನೀಡುವಂತಿದೆ.

-ಕೇಶವ ಮಳಗಿ

 

MORE NEWS

ರಾಜ್ಯ ಮಟ್ಟದ ಫೀನಿಕ್ಸ್ ಕಥಾಸ್ಪರ್ಧ...

26-05-2020 ಮೈಸೂರು

ಮೈಸೂರಿನ ಫೀನಿಕ್ಸ್ ಬುಕ್ ಹೌಸ್ ಏರ್ಪಡಸಿದ್ದ ರಾಜ್ಯ ಮಟ್ಟದ ಫೀನಿಕ್ಸ್ ಕಥಾಸ್ಪರ್ಧೆ- 2020ರ ಫಲಿತಾಂಶ ಪ್ರಕಟವಾಗಿದ್ದು ಬ...

ಯುಟ್ಯೂಬ್: ಕನ್ನಡ ಸಾಹಿತಿಗಳ ಸಂದರ್...

23-05-2020 ಬೆಂಗಳೂರು

ಬೆಂಗಳೂರು ಆಕಾಶವಾಣಿ ಕೇಂದ್ರವು ಕನ್ನಡ ಸಾಹಿತಿಗಳ ಹಲವು  ಮಹತ್ವದ ಹಾಗೂ ಮೌಲಿಕ ವಿಚಾರ ಒಳಗೊಂಡಿರುವ ಸಂದರ್ಶನಗಳ ಧ್...

ವೈಫ್ ಆಫ್ ಪೋಯಟ್ ಅಲ್ಲ, ಲೈಫ್ ಆಫ್ ...

23-05-2020 ಧಾರವಾಡ

ಇತ್ತಿಚೆಗೆ ನಮ್ಮನ್ನಗಲಿದ ಲೇಖಕಿ, ಸಾಹಿತಿ ಶಾಂತಾದೇವಿ ಅವರಿಗೆ ಕವಿ ರಾಜಕುಮಾರ‌ ಮಡಿವಾಳರ‌ ಒಂದು ನೆನಪ...

Comments

Magazine
With us

Top News
Exclusive
Top Events