ಕನ್ನಡದ ಕೆಲಸ ಮಾಡಿದ ಭಾಷಾಂತರಗಳು

Date: 15-09-2021

Location: ಬೆಂಗಳೂರು


‘ಕನ್ನಡ ನಾಡು ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದುದರಿಂದ ರಾಜಕೀಯವಾಗಿ ನಾಡೆಂಬ ರಾಷ್ಟ್ರೀಯ ಭಾವ ಬರುವುದು ಕಠಿಣವೇ ಆಗಿತ್ತು. ಇಂತಹ ಸಂದರ್ಭದಲ್ಲಿ ಭಾಷಾಂತರಗಳು ಕನ್ನಡಿಗರನ್ನು ಒಂದು ಮಾಡುವ, ಕನ್ನಡದ ಬಗೆಗೆ ಅಭಿಮಾನ ಬೆಳೆಸುವ ಕೆಲಸವನ್ನು ಮಾಡಿದವು’ ಎನ್ನುತ್ತಾರೆ ಲೇಖಕಿ ತಾರಿಣಿ ಶುಭದಾಯಿನಿ. ಅವರು ತಮ್ಮ ಅಕ್ಷರಸಖ್ಯ ಅಂಕಣದಲ್ಲಿ ಕನ್ನಡದ ಕೆಲಸ ಮಾಡಿದ ಭಾಷಾಂತರಗಳ ಕುರಿತು ವಿಶ್ಲೇಷಿಸಿದ್ದಾರೆ. 

ಭಾರತದಾದ್ಯಂತ ವಸಾಹತುಶಾಹಿ ಆಡಳಿತ ನೆಲೆಗೊಳ್ಳುತ್ತಿದ್ದಂತೆ ಕನ್ನಡ ನಾಡು ತನ್ನದೇ ಆದ ರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯೆ ನೀಡಬೇಕಾಯಿತು. ಕನ್ನಡದ ವಸಾಹತು ಆಡಳಿತವು ಟಿಪ್ಪುವಿನ ಮರಣಾ ನಂತರ ಮೈಸೂರು ಹಸ್ತಾಂತರದ ಕಾಲದಿಂದ ಆರಂಭವಾಯಿತು. ಅಷ್ಟು ಹೊತ್ತಿಗೆ ಮಿಷನರಿಗಳು ಕನ್ನಡದ ನೆಲದಲ್ಲಿ ನೆಲೆಯೂರಿ ತಮ್ಮ ಮಿಷನರಿ ಚಟುವಟಿಕೆಗಳನ್ನು ಮಾಡುತ್ತಿದ್ದರು. ಅವರ ಚಟುವಟಿಕೆಗಳು ಮತ ಪ್ರಸರಣಕ್ಕೆ ಸೀಮಿತವಾಗಿದ್ದರೂ ಅವರು ತಮ್ಮ ಉದ್ದೇಶಗಳಿಗಾಗಿ ಮಾಡಿದ ಕನ್ನಡದ ಶೋಧನೆಯ ಕೆಲಸಗಳು ಕನ್ನಡ ನಾಡುನುಡಿ ಕಟ್ಟುವಿಕೆಗೆ ಪರೋಕ್ಷವಾಗಿ ಸಹಾಯ ಮಾಡಿದ್ದವು. ಶಿಕ್ಷಣ, ಮುದ್ರಣ, ಮತಪ್ರಸಾರಗಳಿಂದ ಕನ್ನಡದ ಸಮಾಜವು ಸಾಂಸ್ಕೃತಿಕವಾಗಿ ಹೊಸ ಅನುಭವ, ಸಂವೇದನೆಗಳಿಗೆ ತೆರೆದುಕೊಳ್ಳುತ್ತಿತ್ತು. ಆದರೆ ಕನ್ನಡವೆಂಬ ನಾಡು ಮತ್ತು ನುಡಿಗಳು ಮಾತ್ರ ಒಂದು ರಾಷ್ಟ್ರೀಯತೆಯ ಅಡಿಯಲ್ಲಿ ಬಂದಿರಲಿಲ್ಲ. ಕನ್ನಡ ನಾಡು ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹಂಚಿ ಹೋಗಿದ್ದುದರಿಂದ ರಾಜಕೀಯವಾಗಿ ನಾಡೆಂಬ ರಾಷ್ಟ್ರೀಯ ಭಾವ ಬರುವುದು ಕಠಿಣವೇ ಆಗಿತ್ತು. ಇಂತಹ ಸಂದರ್ಭದಲ್ಲಿ ಭಾಷಾಂತರಗಳು ಕನ್ನಡಿಗರನ್ನು ಒಂದು ಮಾಡುವ, ಕನ್ನಡದ ಬಗೆಗೆ ಅಭಿಮಾನ ಬೆಳೆಸುವ ಕೆಲಸವನ್ನು ಮಾಡಿದವು. ಈ ಕೆಲಸ ಪ್ರಜ್ಞಾಪೂರ್ವಕವಾಗಿ ಆಯಿತು ಎಂದೇ ಹೇಳುವಂತಿಲ್ಲ. ಆದರೆ ‘ಸಾಂಸ್ಕೃತಿಕ ವಿನಿಮಯ’ದ ಪ್ರಭಾವ, ಪ್ರೇರಣೆಗಳು ನಾಡುನುಡಿಯ ಕಲ್ಪನೆಯನ್ನು ಗಟ್ಟಿ ಮಾಡಿದವು. 

ವಸಾಹತುಕಾಲೀನ ಪಲ್ಲಟಗಳು ಅಖಿಲ ಭಾರತೀಯ ಪ್ರಕ್ರಿಯೆಯಾಗಿದ್ದವು. ದೇಶೀಸಮಾಜಗಳೆಂಬ ಚಹಾಕಪ್ಪಿನಲ್ಲಿ ಬಿರುಗಾಳಿಯೇ ಎದ್ದಂತಹ ಪ್ರಕ್ರಿಯೆಯಾಗಿ ಈ ಪ್ರಭಾವಗಳು ಕಂಡವು. ಭಾಷಾಂತರಗಳು ಈ ಚಲನೆಗಳನ್ನು ಕಟ್ಟಿಕೊಟ್ಟ ಬರವಣಿಗೆಯ ದಾಖಲೆಗಳಾಗಿ ಬಂದವು ಎನ್ನುವುದು ಗಮನಾರ್ಹ. ಅಖಿಲ ಭಾರತೀಯ ಬದಲಾವಣೆಗೆ ಪುಟ್ಟಕನ್ನಡಿಯಂತೆ ಇದ್ದ ಕನ್ನಡ ಸಮಾಜವು ಈ ಪಲ್ಲಟಗಳಿಗೆ ಪೂರಕವಾಗಿ ತನ್ನೊಳಗೆ ಇನ್ನೂ ಸೂಕ್ಷ್ಮವಾದ ಒಳಪಲ್ಲಟಗಳನ್ನು ಕಂಡಿತು. ಕನ್ನಡದ ಮಟ್ಟಿಗೆ ಭಾಷಾಂತರಗಳು ತಮ್ಮನ್ನು ತಾವು ನಿರ್ವಸಾಹತೀಕರಣಗೊಳಿಸಿಕೊಳ್ಳುವ ಪ್ರಕ್ರಿಯೆಗೆ ಇಂಬುಕೊಟ್ಟವು. ದೇಶಕಟ್ಟುವ ಪ್ರಕ್ರಿಯೆಗೆ ದೇಶಾದ್ಯಂತ ಆಂದೋಲನಗಳು ನಡೆಯುತ್ತಿದ್ದ ವೇಳೆಯಲ್ಲಿ ಕನ್ನಡ ಪ್ರದೇಶವು ಭಾರತ ದೇಶೀಯತೆಯನ್ನೂ ಕನ್ನಡ ದೇಶೀಯತೆಯನ್ನೂ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿತ್ತು. ಭಾರತ ಎನ್ನುವುದು ದೇಶವಾಗಿ ಭೌಗೋಳಿಕವಾಗಿ ಸಾಂಸ್ಕೃತಿಕವಾಗಿ ಕಲ್ಪಿತವಾಗುತ್ತಿರುವ ಸಂದರ್ಭದಲ್ಲಿಯೆ ಕನ್ನಡ ರಾಷ್ಟ್ರೀಯತೆಯೂ ಮೊಳೆಯುತ್ತಿದ್ದುದು ಕುವೆಂಪು ಅವರ ‘ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಎನ್ನುವ ಸಾಲುಗಳಲ್ಲಿ ವ್ಯಕ್ತವಾಗಿದೆ ಎನ್ನಬಹುದು. ಕನ್ನಡದ ‘ಕನ್ನಡೀಕರಣ’ವು ಒಂದು ಬಿಂಬರೂಪದ ಕ್ರಿಯೆಯೇ ಆಗಿತ್ತು. ಕನ್ನಡದ ಅಸ್ಮಿತೆಯನ್ನು ಕನ್ನಡ ದೇಶೀಯತೆಯನ್ನು ಸ್ಥಾಪಿಸಿಕೊಳ್ಳುವ ಹಾಗು ಕನ್ನಡದ ಉಲಿಯನ್ನು ಹೊಸಗಾಲಕ್ಕೆ ತಕ್ಕನಾಗಿ ರೂಪಿಸಿಕೊಳ್ಳುವ ಸವಾಲನ್ನು ಕನ್ನಡವು ಎದುರಿಸುತ್ತಿತ್ತು ಎನ್ನುವುದಕ್ಕೆ ಮೊದಲ ಬೀಡಿನ ಭಾಷಾಂತರಗಳು ದಾಖಲೆಯಾಗಿವೆ.

ಕನ್ನಡ ನಾಡು ಉತ್ತರ ಮತ್ತು ಮೈಸೂರು ಪ್ರಾಂತಗಳಾಗಿ ಛೇದಗೊಂಡ ಸಮಯದಲ್ಲಿ ಕನ್ನಡದ ಪರಿಕಲ್ಪನೆಯನ್ನು ಅನ್ಯದೇಶೀಯ ಸಂಸರ್ಗದಿಂದ ಸ್ಪಷ್ಟಗೊಳಿಸಿದ್ದು ಶಿಕ್ಷಣ ಮತ್ತು ಮುದ್ರಣ ಕಾರ್ಯಗಳು. ಇವುಗಳನ್ನು ನಮಗೆ ಆಗುಮಾಡಿಕೊಟ್ಟಿದ್ದು ಮಿಷನರಿಗಳು ಹಾಗು ಬ್ರಿಟಿಷ್ ಅಧಿಕಾರಿಗಳು.

ಕನ್ನಡದ ಮಟ್ಟಿಗೆ ಕ್ರಾಂತಿಕಾರಕವಾದ ಬದಲಾವಣೆಗಳಾಗಿದ್ದು ಪಠ್ಯಪುಸ್ತಕಗಳ ಭಾಷಾಂತರಗಳಿಂದ. ಬಾಸೆಲ್ ಮಿಶನ್ ಅದಾಗಲೇ ತೆಗೆದಿದ್ದ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣದ ಜೊತೆಗೆ ದೇಶೀಯ ಭಾಷೆಗಳಲ್ಲಿ ಶಿಕ್ಷಣ ಕೊಡುವುದು ಆರಂಭವಾಗಿತ್ತು. ಆ ಸಮಯದಲ್ಲಿ ಕನ್ನಡ ಪಠ್ಯಗಳ ಒಂದನೇ ಪುಸ್ತಕ, ಎರಡನೇ ಪುಸ್ತಕ ಹೀಗೆ ಸರಣಿಗಳು ಬಂದವು. ಅದರೊಳಗೆ ಅನೇಕ ಅನುವಾದಿತ ಪಠ್ಯಗಳು ಸೇರಿಕೊಂಡಿದ್ದವು.  ಭಾಷಾಂತರಗಳ ಹಿಂದೆ ಕನ್ನಡ ಪಠ್ಯಪುಸ್ತಕಗಳ ಆಶಯವು ಪ್ರಮುಖವಾಗಿತ್ತು. ಮೊದಲ ಭಾಷಾಂತರ ಕೃತಿಗಳ ಪ್ರಕಟಣಾ ಮುನ್ನುಡಿಗಳಲ್ಲಿ ಅನೇಕ ಭಾಷಾಂತರಕಾರರು ಸ್ಕೂಲ್ ಇನ್‍ಸ್ಪೆಕ್ಟರ್ ಸೇರಿದಂತೆ ವಿದ್ಯಾ ಇಲಾಖೆಯ ಹಲವರಿಗೆ ಕೃತಜ್ಞತೆ ಹೇಳಿದ್ದಾರೆ. ಹಲವಾರು ಭಾಷಾಂತರಗಳು ಪಠ್ಯಪುಸ್ತಕಗಳಾಗಿದ್ದ ಕಾರಣಕ್ಕಾಗಿ ಭಾಷಾಂತರಕಾರರು ಕೃತಜ್ಞತೆ ಹೇಳುತ್ತಾ ಎರಡನೆಯ ಮೂರನೆಯ ಮುದ್ರಣಕ್ಕೆ ಸಿದ್ಧರಾಗಿರುವುದು ತಿಳಿಯುತ್ತದೆ (ಬಿ.ವೆಂಕಟಾಚಾರ್ಯರು ತಮ್ಮ ‘ಭ್ರಾಂತಿ ವಿಲಾಸ’ ಕೃತಿಯನ್ನು ವಿದ್ಯಾ ಇಲಾಖೆಯವರು ಓದತಕ್ಕ ಪುಸ್ತಕ ಎಂದು ಶಿಫಾರಸು ಮಾಡಿದ್ದರಿಂದ ತಾವು ಆ ಪುಸ್ತಕವನ್ನು ಮರುಮುದ್ರಿಸುತ್ತಿರುವುದಾಗಿ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ(ಭ್ರಾಂತಿ ವಿಲಾಸ,  1911, 2ನೇ ಮುದ್ರಣ)). ಎಸ್.ಜಿ.ನರಸಿಂಹಾಚಾರ್ಯರು ಕನ್ನಡದ ಮಕ್ಕಳಿಗಾಗಿ ‘ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್’ ಎಂಬ ಶಿಶುಪ್ರಾಸವನ್ನು ‘ಮಿನುಗು ಮಿನುಗೆಲೆ ನಕ್ಷತ್ರ’ ಎಂದು ಭಾಷಾಂತರಿಸಿದರು. ಪಂಜೆಯವರು ಬಿಡಿ ಬಿಡಿಯಾಗಿ ‘ಮರಳಿ ತಮ್ಮನ ಕರೆಯಪ್ಪಾ’, ‘ತೆಂಕಣ ಗಾಳಿಯಾಟ’ ತರದ ಶಿಶುಗೀತೆಗಳನ್ನು ಭಾಷಾಂತರಿಸಿದರು. ಅವು ಆ ಕಾಲದ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಿದ್ದವು. ಶಿಕ್ಷಕರಾಗಿದ್ದ ಪಂಜೆ ಮಂಗೇಶರಾಯರು ಪಠ್ಯ ಪುಸ್ತಕಗಳಿಗಾಗಿಯೇ ಭಾಷಾಂತರ ಮಾಡಿದ್ದನ್ನು ಇಲ್ಲಿ ನೆನೆಯಬಹುದು.   

ಉತ್ತರ ಕರ್ನಾಟಕದಲ್ಲಿ ಕನ್ನಡದ ಏಕೀಕರಣದ ಕಲ್ಪನೆ ಮೊಳೆಯುತ್ತಿದ್ದ ಸಮಯದಲ್ಲಿ ಒದಗಿಬಂದ ಶಿಕ್ಷಣ ಹಾಗು ಜಾಗೃತಿಗಳು ಭಾಷಾಂತರಗಳನ್ನು ಮಾಡುವಂತೆ ಅಲ್ಲಿನ ಜನರನ್ನು ಆಗ್ರಹಿಸಿತು. ಮೊದಲನೆಯದಾಗಿ ಉತ್ತರ ಕರ್ನಾಟಕದ ಬಹುಭಾಗವು ಮರಾಠಿ ಪ್ರಭಾವಕ್ಕೊಳಗಾಗಿ ಕನ್ನಡವೆಂಬ ಭಾಷೆಯನ್ನು ದೂರವಿರಿಸಬೇಕಾಗಿತ್ತು. ಶಿಕ್ಷಣದ ಹಂತದಲ್ಲಿ ಈ ದುರ್ಗತಿಯನ್ನು ಕಂಡ ಬ್ರಿಟಿಷ್ ಅಧಿಕಾರಿಗಳೇ ಕನ್ನಡದ ಮಕ್ಕಳು ಮರಾಠಿಯಲ್ಲಿ ಕಲಿಯುತ್ತಿದ್ದುದಕ್ಕೆ ಖೇದವನ್ನು ವ್ಯಕ್ತಪಡಿಸಿ ಕನ್ನಡದಲ್ಲಿ ಶಿಕ್ಷಣ ನೀಡಬೇಕೆಂದು ಕೆಲವು ಕ್ರಮಗಳನ್ನು ತೆಗೆದುಕೊಂಡರು. ಇದರ ಪರಿಣಾಮ ಶಾಲಾ ಪಠ್ಯಪುಸ್ತಕಗಳು ಕನ್ನಡದಲ್ಲಿ ಬರೆಯಬೇಕಾದುದು. ಇದಕ್ಕೆ ಆಕರಗಳಾಗಿ ಭಾಷಾಂತರ ಪಠ್ಯಗಳು ಬಂದವು. ಉತ್ತರ ಕರ್ನಾಟಕದಲ್ಲಿ ಆಗ ಶಿಕ್ಷಣದ ಅರಿವಿನ ಜೊತೆಗೆ ಭಾಷಾಂತರಗಳನ್ನು ಸಮಸಮನಾಗಿ ಮಾಡಿಕೊಂಡು ಬಂದಿದ್ದು ಆಗಿನ ಶಾಲಾಶಿಕ್ಷಕರು! ಇದರಲ್ಲಿ ಮುಂಚೂಣಿಯ ಹೆಸರು ಎಂದರೆ ಡೆಪ್ಯುಟಿ ಚನ್ನಬಸಪ್ಪನವರದು. ತಮ್ಮ ಸೇವೆಯ ಭಾಗವಾಗಿ ಭಾಷಾಂತರವನ್ನು ಅವರು ಮಾಡಿದ್ದರು. ಡೆಪ್ಯುಟಿ ಚನ್ನಬಸಪ್ಪನವರು ‘ನಗದವರನ್ನು ನಗಿಸುವ ಕಥೆ’(ಕಾಮಿಡಿ ಆಫ್ ಎರರ್ಸ್) ಹಾಗು ಮ್ಯಾಕ್‍ಬೆತ್ ಎಂಬ ಷೇಕ್ಸ್ ಸ್ಪಿಯರ್‍ನ ಎರಡು ನಾಟಕಗಳನ್ನು ಭಾಷಾಂತರಿಸಿದ್ದರು. ‘ನಗದವರನ್ನು ನಗಿಸುವ ಕಥೆ’ (ಕನ್ನಡದ ಮೊಟ್ಟಮೊದಲ ಭಾಷಾಂತರ ಇರಬೇಕೆಂದು ಊಹಿಸಲಾಗಿದೆ. ಕೃತಿಯು ಸದ್ಯ ಲಭ್ಯವಿಲ್ಲದ ಕಾರಣ ಅದರ ಗುಣಮಟ್ಟ, ವಸ್ತು ವಿಷಯ ನಿರ್ವಹಣೆಗಳನ್ನು ಮಾಪನ ಮಾಡಲು ಆಗಿಲ್ಲ ಎಂಬುದು ಸಾಹಿತ್ಯ ಚರಿತ್ರೆಕಾರರ ಅಭಿಮತ). ಟ್ರೈನಿಂಗ್ ಶಾಲಾಶಿಕ್ಷಕರಾಗಿದ್ದ ವೆಂಕಟರಂಗೋ ಕಟ್ಟಿ ಅವರು ಮರಾಠಿಯಿಂದ ಭಾಷಾಂತರಗಳನ್ನು ಮಾಡಿದ್ದರು. ಇವರ ‘ಅರೇಬಿಯನ್ ನೈಟ್ಸ್’ ಕಥೆ ಕನ್ನಡದ ಸುಂದರ ಅನುವಾದಗಳಲ್ಲಿ ಒಂದೆಂದು ಅದಾಗಲೇ ಹೆಸರಾಗಿತ್ತು. ವೆಂಕಟೇಶ ತಿರಕೋ ಕುಲಕರ್ಣಿಯವರು (ಗಳಗನಾಥ) ಸಹ ಮರಾಠಿಯಿಂದ ಭಾಷಾಂತರಗಳನ್ನು ಮಾಡಿದರು. ಗಳಗನಾಥರದು ಪೂರ್ಣಪ್ರಮಾಣದ ಭಾಷಾಂತರವಲ್ಲ. ಅವು ಕನ್ನಡಿಸುವ ಹೊತ್ತಿಗೆ ರೂಪಾಂತರ, ಕಥಾಂತರ ಇತ್ಯಾದಿ ರೂಪಗಳನ್ನು ಪಡೆದುಕೊಳ್ಳುತ್ತಿದ್ದವು. ಆದರೂ ಅನುವಾದಗಳ ಮೂಲಕ ಜನರನ್ನು ತಲುಪುವ ಹೊಸ ವಿಧಾನವನ್ನು ಕಂಡುಕೊಂಡ ಅವರ ಪ್ರಯತ್ನಗಳು ಕನ್ನಡ ಕಟ್ಟುವ ಪ್ರಯತ್ನಗಳೇ. ಧಾರವಾಡದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದ ಧೋಂಡೋ ನರಸಿಂಹ ಮುಳಬಾಗಿಲು ಅವರು ಸಂಸ್ಕೃತ ನಾಟಕಗಳಾದ ‘ಮಾಲವಿಕಾಗ್ನಿಮಿತ್ರ’, ‘ಮೃಚ್ಛಕಟಿಕ’ಗಳನ್ನು ಭಾಷಾಂತರಿಸಿದ್ದರು. ಉಪಾಧ್ಯಾಯರಾಗಿದ್ದ ಶಾಂತಕವಿಗಳು ಕನ್ನಡ ರಚನೆಗಳ ಜೊತೆಗೆ ಬಾಣಕವಿಯ ಪಾರ್ವತೀಪರಿಣಯ, ಕಾಳಿದಾಸನ ‘ಮೇಘದೂತ’, ‘ಶಾಕುಂತಲ’(ಶಕುಂತಲೋತ್ಪತ್ತಿ), ‘ಋತುಸಂಹಾರ’ಗಳ ಅನುವಾದ, ಶೂದ್ರಕನ ‘ಮೃಚ್ಛಕಟಿಕ’ದ ಅನುವಾದಗಳನ್ನು ಮಾಡಿ ನಾಟಕ ಸಾಹಿತ್ಯವನ್ನು ಬೆಳೆಸಿದರು. ಇದರ ಜೊತೆಗೆ ಸಂಸ್ಕೃತದ ಜಯದೇವ ಕವಿಯ ‘ಗೀತಗೋವಿಂದ’ವನ್ನು ಆಧರಿಸಿ ‘ವಿರಹತರಂಗ’ ಎಂಬ ಕೃತಿಯನ್ನು ರಚಿಸಿದ್ದರು.  ಕನ್ನಡದಲ್ಲಿ ಗ್ರಂಥಗಳು ಹೆಚ್ಚಾಗಬೇಕು, ಅನ್ಯಭಾಷೆಗಳಲ್ಲಿ ಇದ್ದ ಉತ್ತಮ ಕೃತಿಗಳನ್ನು ಕನ್ನಡಕ್ಕೆ ತರಬೇಕು ಎಲ್ಲೆಲ್ಲಿಯೂ ಕನ್ನಡದ ಪ್ರಚಾರವಾಗಬೇಕು ಎನ್ನುವುದು ಶಾಂತಕವಿಗಳ ಬಯಕೆಯಾಗಿತ್ತು. ಹಾಗಾಗಿ ಅವರು ಅನುವಾದಕ್ಕೆ ಒತ್ತು ನೀಡಿದ್ದರು. ಧಾರವಾಡದ ಹೆಣ್ಣುಮಕ್ಕಳ ಶಾಲೆಯಲ್ಲಿ ಶಿಕ್ಷಕರಾಗಿದ್ದ ತ.ನಾ.ಅಮ್ಮಿನಭಾವಿ ಅವರು ‘ಮುರಾರಿರಾವ್’ ಎಂಬ ಪತ್ತೇದಾರಿ ಕಾದಂಬರಿಯನ್ನು ಅನುವಾದ ಮಾಡಿದ್ದರು. ಹೀಗೆ ಶಾಲಾ ಶಿಕ್ಷಕರೂ ಶಿಕ್ಷಣ ಅಧಿಕಾರಿಗಳೂ ಭಾಷಾಂತರದ ಕಾರ್ಯಕ್ಕೆ ಚಾಲನೆ ನೀಡಿದ್ದರಿಂದ ಭಾಷಾಂತರ ಸಾಹಿತ್ಯದ ಒಂದು ಧಾರೆ ಅಲ್ಲಿ ಪ್ರವಹಿಸಲು ಆರಂಭಗೊಂಡಿತು.

ಶಿಕ್ಷಣದ ಫಲವಾಗಿ ಕಛೇರಿಗಳಲ್ಲಿ ಕೆಲಸ ಮಾಡುತ್ತಿದ್ದವರೂ ಸಹ ಭಾಷಾಂತರದ ಕಾರ್ಯದಲ್ಲಿ ತೊಡಗಿದ್ದರು. ಇವರ ಉದ್ದೇಶವಾದರೂ ಕನ್ನಡವನ್ನು ಬೆಳೆಸುವುದೇ ಆಗಿತ್ತು. ಧಾರವಾಡದ ಟ್ರೈನಿಂಗ್ ಕಾಲೇಜಿನಲ್ಲಿಯೇ ಗುಮಾಸ್ತರಾಗಿದ್ದ ಜೀವಾಜಿ ವಿಷ್ಣು ಗೋಠೆ(1874-?) ‘ಮಾತೃಪ್ರೇಮ’, ‘ಹ್ಯಾಮ್ಲೆಟ್ ನಾಟಕ’, ‘ಸಂಸಾರ ಕರ್ತವ್ಯ’ ಎಂಬ ಅನುವಾದಗಳನ್ನು ಕೊಟ್ಟಿದ್ದರು. ಸರ್ಕಾರಿ ಸೇವೆಯಲ್ಲಿದ್ದ ಶೇಷಗಿರಿ ಚುರಮರಿ ಹಾಗು ಅವರ ಸಂಬಂಧಿ ಗುಂಡೋಕೃಷ್ಣ ಚುರಮರಿ(1885) ಅವರು ಕ್ರಮವಾಗಿ ‘ಶಾಕುಂತಲ ನಾಟಕವು’ ಹಾಗು ‘ರಾಘವೇಂದ್ರರಾವ್’ ಎಂಬ ಅನುವಾದಿತ ಕೃತಿಗಳನ್ನು ನೀಡಿದ್ದಾರೆ. ನರಿರಾವ್ ಕನಮಡಿ(1857-1928) ಕಾಳಿದಾಸನ ‘ಋತುಸಂಹಾರ’, ‘ಮೇಘದೂತ’ ಕೃತಿಗಳನ್ನು ಅನುವಾದಿಸಿದ್ದಾರೆ. ಹೀಗೆ ಉತ್ತರ ಕರ್ನಾಟಕದಲ್ಲಿ ಅನುವಾದಗಳ ಫಸಲು ಗಮನಾರ್ಹವಾಗಿತ್ತು. ಇವು ನಡೆದಿದ್ದು ಕನ್ನಡ ಭಾಷೆಯ ಅಭಿವೃದ್ಧಿ. ಜನಜೀವನದಲ್ಲೊಂತೊ ಹಾಗೆಯೇ ಸಾಹಿತ್ಯದಲ್ಲಿಯೂ ಕನ್ನಡವು ನೆಲೆಗೊಳ್ಳಬೇಕು; ಕನ್ನಡ ಭಾಷೆಯ ಸುಧಾರಣೆಯಾಗಬೇಕು ಎನ್ನುವ ಉದ್ದೇಶದಿಂದ.

ಮೈಸೂರು ಪ್ರಾಂತ್ಯದಲ್ಲಿ ಬ್ರಿಟಿಷ್ ಆಡಳಿತದ ಸಂಪರ್ಕಕ್ಕೆ ಬಂದ ಇಂಗ್ಲಿಷ್ ಶಿಕ್ಷಿತರು ಹಾಗು ಸರ್ಕಾರಿ ಹುದ್ದೆಯಲ್ಲಿರುವವರು ಭಾಷಾಂತರದೆಡೆಗೆ ಆಕರ್ಷಿತರಾದರು. ಅಲ್ಲಿನ ಸಾಹಿತ್ಯವನ್ನೋ ಜ್ಞಾನವನ್ನೋ ಇಲ್ಲಿಗೆ ಪರಿಚಯಿಸಬೇಕೆನ್ನುವ, ಆಸ್ವಾದಿಸಬೇಕೆನ್ನುವ ಮನೋಭಾವ ಬೆಳೆದಿದ್ದರಿಂದ ಭಾಷಾಂತರವು ಒಂದು ಕ್ರಿಯಾಶೀಲ ಚಟುವಟಿಕೆಯಾಗಿ ಕಂಡು ಬಂದಿತು. ಆದುದರಿಂದ ಹತ್ತೊಂಬತ್ತನೆಯ ಶತಮಾನದಲ್ಲಿ ಸರ್ಕಾರಿ ನೌಕರಿಯನ್ನು ಹಿಡಿದವರು, ವಕೀಲರು ಭಾಷಾಂತರ ಕ್ಷೇತ್ರದಲ್ಲಿ ಕೆಲಸ ಮಾಡಿರುವುದು ಆಕಸ್ಮಿಕವೇನೂ ಅಲ್ಲ ಎನ್ನಬಹುದು. ಮೈಸೂರು ಪ್ರಾಂತ್ಯದಲ್ಲಿ ಸರ್ಕಾರಿ ಕೆಲಸದಲ್ಲಿದ್ದು ಭಾಷಾಂತರದಲ್ಲಿ ತೊಡಗಿದ ಮಹನೀಯರೆಂದರೆ ರಾಮಾನುಜಯ್ಯಂಗಾರರು, ಬಿ.ವೆಂಕಟಾಚಾರ್ಯರು, ಎಂ.ಎಸ್.ಪುಟ್ಟಣ್ಣ, ಎ.ಆನಂದರಾಯರು, ಎ.ಆರ್.ಅಣ್ಣಾಜಿರಾವ್, ಸುಬ್ಬರಾಯರು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನೂ ಈ ಸಾಲಿಗೆ ಮುಂದೆ ಸೇರಿಸಬಹುದು. ಶ್ರೀನಿವಾಸ ಅಯ್ಯಂಗಾರ್ ಅವರು ವಿದ್ಯಾ ಇಲಾಖೆಯಲ್ಲಿ ಕೆಲಸ ಮಾಡಿದವರು.

ಉತ್ತರ ಕರ್ನಾಟಕದ ಭಾಷಾಂತರಗಳ ಹಿಂದೆ ಕನ್ನಡ ನಾಡಿನ ಏಕೀಕರಣದ ಹಾಗು ಕನ್ನಡ ನುಡಿಯನ್ನು ಮರುಸ್ಥಾಪಿಸಿಕೊಳ್ಳುವ ಒತ್ತಡವಿರುವುದು ಕಾಣುತ್ತದೆ. ಉತ್ತರ ಕರ್ನಾಟಕದಲ್ಲಿ ಕನ್ನಡ ಮಾತು ಮತ್ತು ಪ್ರದೇಶಗಳೆರಡೂ ಸಮಾನವಾಗಿ ರಾಷ್ಟ್ರೀಯತೆಯ ಸಮಸ್ಯೆಯನ್ನು ಎದುರಿಸುತ್ತಿದ್ದವು. ಪ್ರಾಯಶ: ಈ ಕಾರಣದಿಂದ ಭಾಷಾಂತರಗಳು ಕನ್ನಡ ರಾಷ್ಟ್ರೀಯತೆಯನ್ನು ವ್ಯಕ್ತ ಪಡಿಸುವ ಸಾಧನಗಳು ಆಗಿ ಪರಿಣಮಿಸಿದವು. ಶಾಂತಕವಿಗಳು ಹೇಳಿದರೆನ್ನಲಾದ ‘ಗುರುಪರಿಶ್ರಮದಿನಾಂಗ್ಲೇಯ ಭಾಷೆಯ ಕಲಿತು ಧರಿಸಿ ಪದವಿಗಳನ್ನುಪಜೀವಿಸುವರೇ ಹೊರತು ತದ್ಭಾಷೆಯುದ್ಗ್ರಂಥಗಳ ಕನ್ನಡದಿ ಪರಿವರ್ತಿಸಲಿಲ್ಲಾ’ (ಶ್ರೀನಿವಾಸ ಹಾವನೂರ, ಪು.328)ಎನ್ನುವ ಮಾತು ಭಾಷಾಭಿಮಾನದ ದ್ಯೋತಕವೂ ಹೌದು ಅದರ ಜೊತೆಗೆ ಆಂಗ್ಲಭಾಷೆಯ ಕೃತಿಗಳನ್ನು ಕನ್ನಡಿಸಿ ಕನ್ನಡವನ್ನು ಉದ್ಧಾರ ಮಾಡಿಕೊಳ್ಳಬೇಕೆನ್ನುವ ಭಾವನೆ ಭಾಷಾಂತರಗಳು ನುಡಿಯನ್ನು ಶ್ರೀಮಂತಗೊಳಿಸುತ್ತವೆ ಎನ್ನುವ ಅರಿವು ಎದ್ದು ಕಾಣುತ್ತದೆ. ಇದೇ ಮಾತನ್ನು ಮುಂದೆ ಬಿ.ಎಂ.ಶ್ರೀ ತಮ್ಮ ಐತಿಹಾಸಿಕ ಭಾಷಣವಾದ ‘ಕನ್ನಡ ಮಾತು ತಲೆಯೆತ್ತುವ ಬಗೆ’ಯಲ್ಲಿ ಬಲವಾಗಿ ಪ್ರತಿಪಾದಿಸುತ್ತಾರೆ. ‘“ಇಂಗ್ಲಿಷರ ಕಾವ್ಯಮಾಲೆ ಪರಮೋತ್ಕೃಷ್ಟವಾದದ್ದು; ಗ್ರೀಕ್,ಲ್ಯಾಟಿನ್, ಜರ್ಮನ್, ಫ್ರೆಂಚ್, ಸಂಸ್ಕೃತ ಮುಂತಾದ ಭಾಷೆಗಳಿಂದ ಸಾರವನ್ನು ಹೀರಿ ಪುಷ್ಟಿಯಾದುದು. ಇದರ ಗುಣವನ್ನು ಕಲಿತು, ಇದರ ಐಶ್ವರ್ಯದಲ್ಲಿ ಭಾಗಿಗಳಾಗಿ, ಬೇಕಾದ ರೀತಿಯಲ್ಲಿ ಭಾಷಾಂತರಗಳಿಂದ ಕನ್ನಡ ಬೊಕ್ಕಸವನ್ನು ತುಂಬಿ ಬಿಟ್ಟರೆ, ಮುಂದೆ ಸ್ವದೇಶ ಮಾರ್ಗವೂ ವಿದೇಶ ಮಾರ್ಗವೂ ಕಲೆತು ಒಂದಾಗಿ, ಎರಡರಲ್ಲಿಯೂ ಒಗ್ಗದವು ವಕ್ರವಾದವು ಬಿಟ್ಟು ಹೋಗಿ, ಅತ್ಯುತ್ತಮವಾದ ಕಾವ್ಯಮಾಲೆ ನಮ್ಮಲ್ಲೂ ನಿಲ್ಲುವುದಕ್ಕೆ ಸಂದೇಹ ತೋರುವುದಿಲ್ಲ’(ವಿದ್ಯಾವರ್ಧಕ ಸಂಘ ಪ್ರಕಟಣೆ, ಧಾರವಾಡ, ಪು.23). ಹುಬ್ಬಳ್ಳಿಯ ಗುಂಡೋಕೃಷ್ಣ ಚುರಮರಿಯವರು ತಮ್ಮ ಷೇಕ್ಸ್ ಸ್ಪಿಯರ್ ಅನುವಾದವಾದ ‘ರಾಘವೇಂದ್ರರಾವ್’(1885) ನಾಟಕದ ಮುಂದೆ ತಾನು ಕನ್ನಡ ಭಾಷೆಯ ಉತ್ಕರ್ಷಕ್ಕಾಗಿ ಮನೋರಂಜಕವಾದ ಈ ಕಥೆಯನ್ನು ಆಯ್ದುಕೊಂಡೆನೆಂದೂ ಭಾಷಾಭಿಮಾನಕ್ಕಾಗಿ ಓದುವುದಕ್ಕಾಗಿ ಉಂಟು ಮಾಡಿದ್ದೇನೆ ಎಂದು ಹೇಳಿರುವುದನ್ನು ಹಾವನೂರರು ಉಲ್ಲೇಖಿಸಿದ್ದಾರೆ. ಗುಂಡೋ ಕೃಷ್ಣ ಚುರಮರಿಯವರು ತಾವು ಮಾಡಿದ ‘ಒಥೆಲೊ’(ರಾಘವೇಂದ್ರರಾವ್) ಭಾಷಾಂತರವು ಕನ್ನಡದ ಮೇಲಿನ ಅಭಿಮಾನದಿಂದ ಮಾಡಿದುದು ಎಂದೂ “ಕನ್ನಡ ಭಾಷೆಯು ಉತ್ಕರ್ಷಕ್ಕೆ ಬರುವುದಕ್ಕೆ ಬೇಕಾಗಿರುವ ಸಾಧನಗಳಲ್ಲಿ ಮನೋರಂಜಕ ಕಥೆಗಳ ಪುಸ್ತಕಗಳನ್ನು ಬರೆಯುವುದು ಮೊದಲಿನ ಉಪಾಯವೆಂದು ತೋರುತ್ತದೆ. ಇದೇ ಗ್ರಹಿಕೆಯಿಂದ ನಾನು ಈ ಕಥೆಯನ್ನು ಬರೆದಿದ್ದೇನೆ.. ..” ಎಂದು ವಿವರಿಸಿದ್ದಾರೆ(ಶ್ರೀನಿವಾಸ ಹಾವನೂರ, ಪು.324). ಹೀಗೆ ಉತ್ತರ ಕರ್ನಾಟಕದ ಕಡೆಯಿಂದ ಬಂದ ಭಾಷಾಂತರಗಳ ಹಿಂದಿನ ಆಶಯ, ಗುರಿ ಅಭಿರುಚಿ ನಿರ್ಮಾಣಕ್ಕಿಂತ ಮಿಗಿಲಾಗಿ ಕನ್ನಡ ನುಡಿಯನ್ನು ಕಟ್ಟಿಕೊಳ್ಳುವುದಕ್ಕೆ ನಡೆಸಿದ ಪ್ರಯತ್ನಗಳಿಗೆ ಪೂರಕ ಕ್ರಿಯೆ ಎಂದು ಭಾವಿಸಬಹುದು.

ಕನ್ನಡ ರಾಷ್ಟ್ರೀಯತೆಯ ಸಂದರ್ಭದಲ್ಲಿಯೇ ಹಳೆ ಮೈಸೂರು ಪ್ರಾಂತ್ಯದಲ್ಲಿ ಪ್ರಭಾವಶಾಲಿಯಾಗಿದ್ದ ಮೈಸೂರು ಅರಸರು ಮತ್ತು ದಿವಾನರುಗಳನ್ನು ರಾಜಕಾರಣದ ವ್ಯಾಪ್ತಿಗೆ ಬರುವುದನ್ನು ಗಮನಿಸಬಹುದು. ಮೈಸೂರಸರು ನಾಡಿನ ಏಳಿಗೆಯ ಬಗೆಗೆ ತಳೆದ ಧೋರಣೆಗಳು ಮೆಚ್ಚುಗೆಗೆ ಪಾತ್ರವಾಗಿದ್ದವು. ಆದರೆ ಅದು ಮೈಸೂರು ಸಂಸ್ಥಾನಕ್ಕೆ ಸೀಮಿತವಾಗಿತ್ತು. ಹರಿದು ಹಂಚಿ ಹೋಗಿದ್ದ ಕನ್ನಡ ನಾಡಿಗೆ ತನ್ನದೇ  ರಾಷ್ಟ್ರೀಯತೆಯೇ ಸಮಸ್ಯೆಯಾಗಿತ್ತು. ವಸಾಹತು ಪ್ರದೇಶಗಳಾದ ಉತ್ತರ ಕರ್ನಾಟಕ, ಕೆನರಾ, ಬಳ್ಳಾರಿ ಪ್ರದೇಶಗಳಲ್ಲಿ ರಾಷ್ಟ್ರೀಯತಾ ಚಳವಳಿಗಳ ಅರಿವು ಉಂಟಾಗಿತ್ತು. ಆದರೆ ಹಳೆಮೈಸೂರು ಪ್ರಾಂತ್ಯದ ಭಾಗವು ತನ್ನ ರಾಷ್ಟ್ರೀಯತೆಯನ್ನು ಪ್ರಭುತ್ವದೊಂದಿಗೇ ಗುರುತಿಸಿಕೊಳ್ಳಲು ಬಯಸುತ್ತಿತ್ತು. ಈ ಭಾಗದಿಂದ ಬಂದ ಪ್ರಮುಖ ಭಾಷಾಂತರಕಾರರಾದ ಬಿ.ಎಂ.ಶ್ರೀ ಅವರು ‘ಆಳೌ ಬೀರತನೇ’ ಎನ್ನುವ ಪದ್ಯವನ್ನು ಅನುವಾದ ಮಾಡುತ್ತಾರೆ ಹಾಗೆಯೇ ಮೈಸೂರು ಒಡೆಯರ ಹೆಸರಲ್ಲಿ ಪ್ರಗಾಥವನ್ನು ಬರೆಯುತ್ತಾರೆ. ಶ್ರೀಯವರು ಕನ್ನಡ ರಾಷ್ಟ್ರೀಯತೆಯನ್ನು ಕಲ್ಪಿಸುವುದು ಸಾಂಸ್ಕೃತಿಕವಾಗಿ. ಆದುದರಿಂದಲೇ ಭಾಷಿಕ ನೆಲೆಗಟ್ಟಿನಲ್ಲಿ ಆರಂಭವಾಗುವ ಶ್ರೀಚಿಂತನವು ಕನ್ನಡವನ್ನು ಒಂದು ‘ಮಾತಾಗಿ’ ಕಲ್ಪಿಸಿಕೊಂಡು ಅದು ಹೊಸ ಭಾಷಿಕ ಪರಿಸರಗಳಲ್ಲಿ ತಲೆಯೆತ್ತುವ ಬಗೆಯನ್ನು ವಿವೇಚಿಸಿತು. 

ಹಳೆಮೈಸೂರು ಭಾಗದಲ್ಲಿ ಪ್ರಮುಖ ಭಾಷಾಂತರಕಾರರಾದ ವೆಂಕಟಾಚಾರ್ಯರು ತಮ್ಮ ಅನುವಾದ ಗ್ರಂಥಗಳ ಮುನ್ನುಡಿಗಳಲ್ಲಿ ಕನ್ನಡ ಎಂಬ ಭಾಷೆಯ ಬೆಳವಣಿಗೆಗೆ ಏನು ಬೇಕು ಎಂಬುದರ ಬಗ್ಗೆ ಆನುಷಂಗಿಕವಾಗಿ ಚರ್ಚಿಸಿದ್ದಾರೆ. ‘ದುರ್ಗೇಶ ನಂದಿನಿ’(1885)ಗೆ ಬರೆದ ವಿಜ್ಞಾಪನೆಯಲ್ಲಿ ವೆಂಕಟಾಚಾರ್ಯರು ತಮ್ಮ ನಾಡಿನ ವಾಚನಾಭಿರುಚಿಯ ಕೊರತೆಯ ಬಗೆಗೆ ಮತ್ತು ಆ ಮೂಲಕ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳು ಹಿಂದುಳಿದಿರುವುದರ ಬಗೆಗೆ ಸುದೀರ್ಘವಾಗಿ ಬರೆದಿದ್ದಾರೆ. ಬಂಕಿಮಚಂದ್ರರ ಔನ್ನತ್ಯಕ್ಕೆ ಕಾರಣ ವಂಗಭಾಷೆಯು ಇಂಗ್ಲಿಷ್ ಭಾಷೆಯೊಂದಿಗೆ ಏರ್ಪಡಿಸಿಕೊಂಡ ಸಂಬಂಧ. ವೆಂಕಟಾಚಾರ್ಯರನ್ನು ಉಲ್ಲೇಖಿಸುವುದಾದರೆ, “ಆ ಉನ್ನತಿಗೆ ಪ್ರಧಾನ ಕಾರಣವು ಇಂಗ್ಲೀಷು ಸಾಹಿತ್ಯವಾಗಿದೆ. ನಮ್ಮೀ ಕರ್ಣಾಟ ದೇಶದಲ್ಲಿ ಇಂಗ್ಲೀಷು ಭಾಷೆಯ ಪ್ರಾಚುರ್ಯವು ಕಡಿಮೆಯಾಗಿಲ್ಲದಿದ್ದರೂ ದೇಶಭಾಷೆಯು ಮಾತ್ರ ಹಿಂದೂಸ್ಥಾನದ ಇತರ ದೇಶಗಳಂತೆ ಕಾಲಾನುಗುಣ್ಯವಾದ ವೃದ್ಧಿಯನ್ನು ಹೊಂದದಿರುವುದು ಕೇವಲ ವಿಷಾದಕ್ಕೆ ಕಾರಣವಾಗಿದೆ. ..(ದುರ್ಗೇಶ ನಂದಿನಿ, ಪು.x). ಶ್ರೀಯವರು ತಮ್ಮ ಐತಿಹಾಸಿಕ ಭಾಷಣ, ‘ಮಾತು ತಲೆಯೆತ್ತುವ ಬಗೆ’ಯಲ್ಲಿ ಕನ್ನಡ ನುಡಿಯನ್ನು ಹೇಗೆ ಎತ್ತುವಂತೆ ಮಾಡಬಹುದು ಎನ್ನುವ ಅನೇಕ ಉಪಾಯಗಳನ್ನು ನೀಡುತ್ತಾರೆ. 

ಅದೇ ಸಂದರ್ಭದಲ್ಲಿ ಭಾರತೀಯ ಭಾಷೆಗಳಾದ ಬಂಗಾಳಿ ಮತ್ತು ಮರಾಠಿ ಇವು ಬೀರಿದ ಪ್ರಭಾವವು ಕೊಡುಕೊಳುವಿಕೆಯನ್ನು ಮೀರಿ ಕನ್ನಡ ರಾಷ್ಟ್ರೀಯತೆಯನ್ನು ನಿರೂಪಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಬಂಗಾಳಿ ಮತ್ತು ಮರಾಠೀ ಭಾಷೆಗಳು ಪಾಶ್ಚಾತ್ಯ ಸಂಪರ್ಕದಿಂದ ಬಹುಬೇಗ ಮುದ್ರಣ ಮತ್ತಿತರ ಆಧುನಿಕ ಪ್ರಸರಣ ಸೌಲಭ್ಯಗಳನ್ನು ಹೊಂದಿದ್ದರಿಂದ ಹಾಗು ಅಲ್ಲಿನ ಜ್ಞಾನಗಳನ್ನು ಪಡೆದುಕೊಳ್ಳುವ ಮಾರ್ಗಗಳನ್ನು ಕಂಡುಕೊಂಡಿದ್ದರಿಂದ ಅವು ಇತರೆ ಭಾರತೀಯ ಭಾಷೆಗಳ ಮೇಲೆ ಬೀರಿದ ಪ್ರಭಾವವು ಅಧಿಕಾರದ ಇನ್ನೊಂದು ಸ್ವರೂಪವನ್ನು ತೋರುತ್ತದೆ. ಈ ಎರಡು ಭಾಷೆಗಳಿಂದ ಭಾಷಾಂತರ ಮಾಡುವ ಸಂದರ್ಭದಲ್ಲಿ ಕನ್ನಡದ ಭಾಷಾಂತರಕಾರರು ಹೊಂದಿರುವ ಧೋರಣೆಗಳನ್ನು ಗಮನಿಸಬೇಕು. ವಿಫುಲವಾಗಿ ಬಂಗಾಳಿಯಿಂದ ಕನ್ನಡಕ್ಕೆ ಭಾಷಾಂತರ ಮಾಡಿದ ವೆಂಕಟಾಚಾರ್ಯರಂತಹ ಭಾಷಾಂತರಕಾರರು ಬಂಗಾಳಿ ಭಾಷೆಯನ್ನು ಮಾದರಿಯನ್ನಾಗಿರಿಸಿಕೊಳ್ಳುತ್ತಾರೆ. ಅಲ್ಲಿ ಇರುವ ಅನೇಕ ಸಾಹಿತ್ಯ ಪ್ರಕಾರಗಳನ್ನು ಕನ್ನಡಕ್ಕೆ ಪರಿಚಯಿಸುವ ಮೂಲಕ ಕನ್ನಡವನ್ನು ಅಪ್ಡೇಟ್ ಮಾಡಿಕೊಳ್ಳಬೇಕೆನ್ನುವ ಅಭಿಪ್ರಾಯವನ್ನು ಎತ್ತಿ ಹಿಡಿಯುತ್ತಾರೆ. 

ಇತ್ತಕಡೆ ಮರಾಠಿಯಿಂದ ಕನ್ನಡಕ್ಕೆ ಭಾಷಾಂತರ ಮಾಡುವ ಗಳಗನಾಥರು ತಾವು ಮಾಡುವ ಭಾಷಾಂತರಗಳನ್ನು ನೇರವಾಗಿ ಭಾಷಾಂತರಗಳೆಂದು ಕರೆದುಕೊಳ್ಳುವುದಿಲ್ಲ. ಅವುಗಳನ್ನು ರೂಪಾಂತರಗಳು, ಮರುನಿರೂಪಣೆಗಳು ಇತ್ಯಾದಿಯಾಗಿ ಕರೆದಿದ್ದಾರೆ. ಮೂಲ ಲೇಖಕರ ಸ್ಮರಣೆಯನ್ನು ಗಳಗನಾಥರು ಮಾಡುತ್ತಾರೆ; ಮೂಲ ಲೇಖಕರ ಕಾದಂಬರಿ ಚೌಕಟ್ಟನ್ನು ಅನುಸರಿಸುತ್ತಾರೆ. ಇಷ್ಟಾದರೂ ಅವರು ತಮ್ಮದು ಸ್ವತಂತ್ರ ಕೃತಿಯೆನ್ನುವ ಅಭಿಪ್ರಾಯದಲ್ಲಿಯೇ ಬೆಳೆಸುತ್ತಾರೆ. ತಾವು ಬರೆಯುತ್ತಿರುವುದು ಕನ್ನಡಿಗರಿಗೆ; ಕನ್ನಡ ದೇಶೀಯತೆಯಲ್ಲಿ ಭಾರತೀಯತೆಯು ಮೂಡಬೇಕೆನ್ನುವ ಧೋರಣೆಯಿಂದ ಅವರು ಐತಿಹಾಸಿಕ ಕಾದಂಬರಿಗಳನ್ನು ಎತ್ತಿಕೊಳ್ಳುತ್ತಾರೆ. ಆರಾಧನಾ ಮನೋಭಾವ ಇಲ್ಲಿಲ್ಲ. ಗಳಗನಾಥರು ತಮ್ಮ ‘ಹೊಸತಿಲು’ವಿನಲ್ಲಿ ಬರೆದುಕೊಂಡಂತೆ, “ನನ್ನ ಆಯುಷ್ಯದಲ್ಲಿ ನಾನು ಕೈ.ವಾ. ಆಪಟೆಯವರ ‘ಕಮಲ ಕುಮಾರಿ’ ಎಂಬ ಒಂದು ಕಾದಂಬರಿಯ ಹೊರತು ಯಾವ ಕಾದಂಬರಿಯನ್ನೂ ಅಕ್ಷರಶ: ಭಾಷಾಂತರ ಮಾಡಿರುವುದಿಲ್ಲ. ಬೇಕಾದವರ ಕಾದಂಬರಿಯಿರಲಿ, ನಾನು ಹಾಗು ನನ್ನ ಕನ್ನಡಿಗರು, ಎಂಬ ಜೋಡನ್ನು ಮರೆಯದೆ ನಾನು ಕಾದಂಬರಿಯನ್ನು ಬೇಕಾದಲ್ಲಿ ಹಿಗ್ಗಿಸಿರುವೆನು. ಬೇಡಾದಲ್ಲಿ ಕುಗ್ಗಿಸಿರುವೆನು, ಬೇಕಾದಲ್ಲಿ ಹೊಸ ವಿಷಯವನ್ನು ಸೇರಿಸಿರುವೆನು, ಬೇಡಾದಲ್ಲಿ ಇದ್ದ ವಿಷಯವನ್ನೂ ತೆಗೆದು ಹಾಕಿರುವೆನು. ಈ ಕಾದಂಬರಿಯೇ ನನ್ನ ಕೈಗೊಂಬೆಯಲ್ಲದೆ, ನಾನು ಕಾದಂಬರಿಯ ಕೈಗೊಂಬೆಯಾಗಿರುವುದಿಲ್ಲ”(ಪು.14, ಗಳಗನಾಥ ಸಮಗ್ರ ಸಾಹಿತ್ಯ).

ಭಾಷಾಂತರದ ಮೊದಲ ಹಂತ ಮುಗಿದಂತೆ ಇಂಗ್ಲಿಷಿನಿಂದ ಬರುವ ಸಾಹಿತ್ಯ ಪಠ್ಯಗಳು ಶೈಕ್ಷಣಿಕ ಹಾಗು ನಾಟಕ ರಂಗಗಳಿಗೆ ಸೀಮಿತಗೊಳ್ಳತೊಡಗಿದಂತೆ ತೋರುತ್ತದೆ. ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿ ಇತರೆ ಭಾರತೀಯ ಭಾಷೆಗಳಲ್ಲಿ ಬರುತ್ತಿದ್ದ ಕಾದಂಬರಿ ಹಾಗು ಗದ್ಯಸಾಹಿತ್ಯವು ಕನ್ನಡಕ್ಕೆ ಭಾಷಾಂತರಗೊಳ್ಳತೊಡಗಿದವು. ಸುಧಾರಣಾವಾದಿ ಪುನರುತ್ಥಾನವಾದಿ ಸಾಹಿತ್ಯ ಪಠ್ಯಗಳು ಆದ್ಯತೆಯಿಂದ ಕನ್ನಡದಲ್ಲಿ ಭಾಷಾಂತರಗೊಳ್ಳತೊಡಗಿದ್ದನ್ನು ಕಾಣಬಹುದು. ಕನ್ನಡದ ಜಾಯಮಾನಕ್ಕೆ ಒಗ್ಗಿಸುವ ಮೂಲಕ ಕನ್ನಡದ್ದೇ ಒಂದು ರಾಷ್ಟ್ರೀಯತೆಯನ್ನು ಕಾಣುವ ಕಣ್ನೋಟ ಒಂದು ಕಡೆ ಇದ್ದರೆ, ಕನ್ನಡ ರಾಷ್ಟ್ರೀಯತೆಯನ್ನು ಹಿಗ್ಗಿಸಿ ನೋಡುವ ಅಭಿಮಾನದ ಸಂಗತಿಯೂ ಮೊದಲ ಹಂತದ ಕನ್ನಡದ ಭಾಷಾಂತರಗಳು ಮಾಡಿದವು. ರಾಜೇಂದ್ರ ಚೆನ್ನಿಯವರು ಗುರುತಿಸುವಂತೆ, “ಅನ್ಯದೇಶೀಯ ಆಳ್ವಿಕೆಯ ವಿರುದ್ಧ ಹುಟ್ಟಿಕೊಂಡ ರಾಷ್ಟ್ರೀಯತೆಯ ಪರಿಕಲ್ಪನೆ ದೇಶೀಯ ಸಂಸ್ಕೃತಿಯ ವೈಭವೀಕರಣಕ್ಕೆ ಈಡು ಮಾಡಿತು”( ರಾಜೇಂದ್ರ ಚೆನ್ನಿ, 390).  

ಕರ್ನಾಟಕವು ಹರಿದು ಹಂಚಿ ಹೋಗಿದ್ದ ಪ್ರಾಂತ್ಯಗಳೆಲ್ಲದರಲ್ಲಿಯೂ ಭಾಷಾಂತರ ಚಟುವಟಿಕೆಗಳು ನಡೆಯುತ್ತಿದ್ದವು ಎನ್ನುವುದು ವಿದಿತ. ರಾಜಾಶ್ರಯವಿದ್ದ ಮೈಸೂರು ಪ್ರಾಂತ್ಯ ಒಂದೆಡೆ ಭಾಷಾಂತರವನ್ನು ಶಿಷ್ಟತೆಯ ಕಡೆಗೆ ಒಯ್ದರೆ, ಉತ್ತರ ಕರ್ನಾಟಕದ ಭಾಷಾಂತರಗಳು ಕನ್ನಡ ನಾಡು ನುಡಿಯ ಅಸ್ತಿತ್ವಕ್ಕಾಗಿ ಭಾಷಾಂತರಗಳ ಮೊರೆಹೊಕ್ಕಂತೆ ಕಾಣುತ್ತದೆ. 

ಆಕರ ಪುಸ್ತಕಗಳು    
ಕಲ್ಬುರ್ಗಿ,ಎಂ.ಎಂ(ಸಂ) (2014) ಗಳಗನಾಥ ಸಮಗ್ರ ಸಾಹಿತ್ಯ. ಧಾರವಾಡ: ಮನೋಹರ ಗ್ರಂಥಮಾಲೆ
ಗುಂಡೋ ಕೃಷ್ಣ ಚುರಮರಿ(1885) ರಾಘವೇಂದ್ರರಾವ್. ಚುರಮರಿ: ? 
ಧಾರವಾಡಕರ, ರಾ.ಯ.(2013) ಹೊಸಗನ್ನಡ ಸಾಹಿತ್ಯದ ಉದಯಕಾಲ. ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು  
ರಾಜೇಂದ್ರ ಚೆನ್ನಿ (2011) ಆಯ್ದ ವಿಮರ್ಶಾ ಲೇಖನಗಳು. ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ವೆಂಕಟಾಚಾರ್ಯ, ಬಿ (1911) ಭ್ರಾಂತಿವಿಲಾಸ. ಬೆಂಗಳೂರು: ನರಸಿಂಹರಾಜಾಒಡೆಯರ್ ಬಹಾದ್ದೂರ್ ಅವರ ಗ್ರಂಥಾವಳಿ ಎರಡನೇ ಮುದ್ರಣ
ವೆಂಕಟಾಚಾರ್ಯ, ಬಿ (1930) ದುರ್ಗೇಶ ನಂದಿನಿ. ಬೆಂಗಳೂರು: ಬೆಂಗಳೂರು ಪ್ರಿಂಟಿಂಗ್ & ಪಬ್ಲಿಷಿಂಗ್ ಕಂಪನಿ. ನಾಲ್ಕನೇ ಮುದ್ರಣ
ಶ್ರೀನಿವಾಸ ಹಾವನೂರು (2011) ಹೊಸಗನ್ನಡದ ಅರುಣೋದಯ. ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ. ಮೂರನೇ ಮುದ್ರಣ

ಈ ಅಂಕಣದ ಹಿಂದಿನ ಬರೆಹಗಳು:
ಟಾಲ್‍ಸ್ಟಾಯ್ ಎಂಬ ಬೂರ್ಜ್ವಾ ವೃಕ್ಷದ ನೆರಳು- (ಟಾಲ್‍ಸ್ಟಾಯ್ ಕನ್ನಡಾನುವಾದಗಳು)
ಕನ್ನಡ ಬೌದ್ಧಸಾಹಿತ್ಯದ ಭಾಷಾಂತರಗಳ ಸ್ವರೂಪ ಹಾಗೂ ರಾಜರತ್ನಂ ಭಾಷಾಂತರಗಳು
ಶ್ರದ್ಧೆಯ ಬೆಸೆವ ಭಾಷಾಂತರ
ಎಂ.ಎಲ್.ಶ್ರೀಕಂಠೇಶಗೌಡರೆಂಬ ಅನುವಾದಕ

ಬೇಂದ್ರೆ ಅನುವಾದಗಳ ಅನುಸಂಧಾನ
ಕನ್ನಡ ಭಾಷಾಂತರ ಮತ್ತು ಪ್ರದೇಶಗಳು
‘ಕನ್ನಡ ಶಾಕುಂತಲ’ಗಳು: ಒಂದು ವಿಶ್ಲೇಷಣೆ
ಕನ್ನಡ ಭಾಷಾಂತರ ಮತ್ತು ಪ್ರದೇಶಗಳು
ಗಾಂಧಿ, ಅನುವಾದ ಮತ್ತು ಕನ್ನಡಾನುವಾದದೊಳಗೆ ಗಾಂಧಿ
ಇಂಗ್ಲಿಷ್ ಗೀತಗಳ ಪಯಣ
ಷೇಕ್ಸ್‌ಪಿಯರ್‌ ಮೊದಲ ಅನುವಾದಗಳು: ಕನ್ನಡಕ್ಕೆ ಹೊಲಿದುಕೊಂಡ ದಿರಿಸುಗಳು
ಸ್ತ್ರೀ ಮಲಯಾಳ ಹಾಗೂ ಸ್ತ್ರೀ ವಿವೇಕದ ಕಥನಗಳು





 

                            

 


 

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...