ಕನ್ನಡದಾಗ ದ್ವನಿವಿಗ್ನಾನ

Date: 08-04-2022

Location: ಬೆಂಗಳೂರು


'ಕನ್ನಡ ಮತ್ತು ಸಂಸ್ಕ್ರುತ ಈ ಬಾಶೆಗಳ ನಡುವಿನ ಉಚ್ಚರಣೆಯಲ್ಲಿನ ವ್ಯತ್ಯಾಸವನ್ನು ಅಶ್ಟು ಹಿಂದೆಯೆ ಗುರುತಿಸಿದ್ದು ಬಹು ಮುಕ್ಯವಾದ ವಿಚಾರ. ಈ ಬಿನ್ನತೆಯನ್ನು ಗುರುತಿಸಲು ಸಾದ್ಯವಾದದ್ದೆ ಅಂದಿಗೆ ಕನ್ನಡದಲ್ಲಿ ಆದ ಬವುದ್ದಿಕ ಬೆಳವಣಿಗೆ, ಬಾಶಾವಿಗ್ನಾನದ ಮತ್ತು ನೇರವಾಗಿ ದ್ವನಿವಿಗ್ನಾನದ ಬೆಳವಣಿಗೆ ಎಂದು ಓದಬಹುದು' ಎನ್ನುತ್ತಾರೆ ಲೇಖಕ, ಭಾಷಾ ವಿಶ್ಲೇಷಣಾಕಾರ ಡಾ.ಬಸವರಾಜ ಕೋಡಗುಂಟಿ ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ಕನ್ನಡದ ದ್ವನಿವಿಗ್ನಾನದ ಕುರಿತು ವಿಶ್ಲೇಷಿಸಿದ್ದಾರೆ.

ಸಂಸ್ಕ್ರುತದಲ್ಲಿ ಬೆಟ್ಟದೆತ್ತರಕ್ಕೆ ಬೆಳೆದಿದ್ದ ದ್ವನಿವಿಗ್ನಾನ ಸಹಜವಾಗಿ ಆ ಕಾಲದ ಹಲವು ಬಾಶೆಗಳಿಗೆ, ತಾತ್ವಿಕತೆಗಳಿಗೆ ಪ್ರಬಾವವನ್ನು ಬೀರಿತು. ಹಾಗೆ ಕನ್ನಡಕ್ಕೆ ಹರಿದು ಬಂದ ತಾತ್ವಿಕತೆಗಳು ಈ ಪ್ರಬಾವವನ್ನು ಒಳಗಿಳಿಸಿಕೊಂಡೆ ಬಂದಿದ್ದವು. ಹಲವು ಕಾರಣಕ್ಕೆ ಹೆಚ್ಚಿನ ಬವುದ್ದಿಕ ಚಟುವಟಿಕೆಗಳು ನಡೆದಿದ್ದ ಈ ನೆಲದಲ್ಲಿ ಸಹಜವಾಗಿಯೆ ದ್ವನಿಯ ಅವಲೋಕನೆ, ದ್ವನಿವಿಗ್ನಾನದ ತಿಳುವಳಿಕೆ, ಲಿಪಿಯ ಅಳವಡಿಕೆ ಇವೆಲ್ಲವೂ ಬೆಳೆದವು. ಹೀಗೆ ಈ ಸಿದ್ದಾಂತದ ಅನ್ವಯವನ್ನು ಕನ್ನಡದ ಮೇಲೆ ಮಾಡಲಾಯಿತು. ಆಗಲೆ, ಆವಾಗಲೆ ಕನ್ನಡದ ದ್ವನಿವಿಗ್ನಾನ ರೂಪುಗೊಂಡಿತು. ಕನ್ನಡ ಬಾಶೆಯಲ್ಲಿ ಉಚ್ಚಾರವಾಗುವ ದ್ವನಿಗಳು ಯಾವು, ಅವುಗಳ ಉಚ್ಚರಣೆಯ ಕ್ರಮ ಎಂತದು ಎಂಬುದನ್ನು ಸೂಕ್ಶ್ಮವಾಗಿ ಅಂದಿಗೆ ಕಂಡುಕೊಳ್ಳಲಾಯಿತು. ಆ ಕಾಲದ ಬರವಣಿಗೆಯ ಆದಾರ ಇಂದು ನಮಗೆ ಇಲ್ಲವಾದರೂ ಆ ಕಾಲದ ಬಳಕೆ, ಪ್ರಯೋಗ, ಕಾಲಾಂತರಕ್ಕೆ ಉಳಿದು ಬಂದ ಈ ನಿಲುವುಗಳು, ಆನಂತರದಲ್ಲಿ ಬಂದ ವ್ಯಾಕರಣದ ಬರಹಗಳು, ಮತ್ತು ಮುಕ್ಯವಾಗಿ ಕನ್ನಡದ ಬರಹ ಇವೆಲ್ಲವೂ ಆ ಕಾಲದಲ್ಲಿ ಆದ ಮಹತ್ವದ ಬೆಳವಣಿಗೆಗಳನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಪೂರಕವಾಗಿ ನಿಲ್ಲುತ್ತವೆ. ಈ ಇಡಿಯ ಬೆಳವಣಿಗೆಯನ್ನು ಕನ್ನಡ ದ್ವನಿವಿಗ್ನಾನದ ಬೆಳವಣಿಗೆ, ಕನ್ನಡ ಲಿಪಿ ಸಂಯೋಜನೆ, ಕನ್ನಡ ಬರಹದ ಬೆಳವಣಿಗೆ, ಕನ್ನಡದಲ್ಲಿ ಬವುದ್ದಿಕ ಚಟುವಟಿಕೆಗಳ ವ್ಯಾಪಕತೆ ಎಂದು ಮೊದಲಾಗಿ ಅರಿತುಕೊಳ್ಳಬಹುದು. ಇಲ್ಲಿ, ದ್ವನಿ, ಬಾಶೆ ಮತ್ತು ಲಿಪಿ ಸುತ್ತ ಈ ಬೆಳವಣಿಗೆಯ ಮಾತುಕತೆಯನ್ನು ಹರಡಿಸಿಕೊಳ್ಳಬಹುದು.

ಒಟ್ಟು ಬೆಳವಣಿಗೆಯನ್ನು ಗಮನಿಸಿದಾಗ ಸಂಸ್ಕ್ರುತ ಬಾಶೆಯ ದ್ವನಿಗಳನ್ನು ವಿವರಿಸಿರುವ ಬಗೆ, ಅವುಗಳನ್ನು ಪಾಲಿ ಬಾಶೆಗೆ ಲಿಪಿ ಹೊಂದಿಸುವಾಗ ಅಳವಡಿಸಿಕೊಂಡ ಕ್ರಮ ಮತ್ತು ಈ ಎರಡರ ನಡುವೆ ಕನ್ನಡ ಬಾಶೆಯ ದ್ವನಿಗಳನ್ನು ಅವಲೋಕಿಸಿದ ಕ್ರಮ ಹೀಗೆ ಮೂರು ಹಂತಗಳನ್ನು ಕಾಣಬಹುದು.

ಹಾಗಾದರೆ ಎರಡು ಬಾಶೆಗಳ ನಡುವಿನ ಉಚ್ಚರಣೆಯಲ್ಲಿನ ವ್ಯತ್ಯಾಸಗಳನ್ನು ಅಂದಿಗೆ ಗುರುತಿಸಲಾಗಿದೆ ಎಂಬುದು ಇದರಿಂದ ಸ್ಪಶ್ಟವಾಗುತ್ತದೆ. ಅಲ್ಲದೆ, ಸಾಮಾನ್ಯವಾಗಿ ಕನ್ನಡ ಪಾರಂಪರಿಕ ವ್ಯಾಕರಣವನ್ನು ಸಂಸ್ಕ್ರುತದ ಪಡಿನೆಳಲು ಎಂದು ಮೂದಲಿಸುವುದು ತಪ್ಪು ಎಂಬುದು ಗೊತ್ತಾಗುತ್ತದೆ. ಪಾರಂಪರಿಕ ವ್ಯಾಕರಣಗಳ ಬಗೆಗೆ ಮತ್ತೊಮ್ಮೆ ಬೇರೆಡೆ ಬರೆಯಬಹುದು. ದ್ವನಿ ಇಲ್ಲವೆ ಅಕ್ಶರಗಳ ವಿಚಾರದಲ್ಲಿ ಮುಕ್ಯವಾಗಿ ಸಂಸ್ಕ್ರುತವನ್ನು ಇದ್ದಕಿದ್ದ ಹಾಗೆ ಅನುಸರಿಸಲಾಗಿದೆ ಎಂಬ ಆರೋಪ ತಪ್ಪು. ಮಾಹೇಶ್ವರ ಸೂತ್ರಗಳು ಸಿದ್ದಾಂತವನ್ನು ಒದಗಿಸುತ್ತವೆ. ಈ ಸಿದ್ದಾಂತವನ್ನು ಬಳಸಿಕೊಂಡು ಕನ್ನಡದ ದ್ವನಿಗಳನ್ನು ಗುರುತಿಸಲಾಗಿದೆ. ಸಿದ್ದಾಂತಗಳು ಬಾಶಾತೀತವಾಗಿ ಬೆಳೆಯಬಲ್ಲವು ಇಲ್ಲವೆ ನಿಲ್ಲಬಲ್ಲವು.

ಹಲ್ಮಿಡಿ ಶಾಸನದ ಕಾಲವನ್ನು ಕ್ರಿಸ್ತಶಕ 450 ಎಂದು ಒಪ್ಪಿಕೊಂಡರೆ, ಅದಕ್ಕಿಂತಲೂ ತುಸು ಹಿಂದಿನ ಕನ್ನಡ ಲಿಪಿಯಲ್ಲಿ ಬರೆದ ಶಾಸನಗಳು ಇವೆ ಮತ್ತು ಆ ಶಾಸನಗಳನ್ನು ಅಸೋಕನ ಶಾಸನಗಳ ಲಿಪಿಗಿಂತ ಬಿನ್ನವಾದ ಲಿಪಿಯಲ್ಲಿ ಬರೆಯಲಾಗಿದೆ ಎಂದರೆ ಅಶ್ಟು ಹಿಂದೆ ಕನ್ನಡಕ್ಕೆ ಲಿಪಿಯೊಂದರ ಬಳಕೆ ಇದ್ದಿತು ಎಂಬುದು ಸ್ಪಶ್ಟವಾಗುತ್ತದೆ ಮಾತ್ರವಲ್ಲದೆ ಅದಕ್ಕಿಂತಲೂ ಹಿಂದೆಯೆ ಕನ್ನಡಕ್ಕೆ ಲಿಪಿಯ ಅಳವಡಿಕೆ ಆಗಿದ್ದಿತು ಎಂಬುದು ಸ್ಪಶ್ಟವಾಗುತ್ತದೆ. ಆನಂತರ, ಇನ್ನು ಕೆಲವು ಲಿಪಿಗಳ ಪ್ರಯೋಗ ಮೊದಲಾದವನ್ನು ಅವಲೋಕಿಸಿದಾಗ ಈ ಲಿಪಿ ಸಂಯೋಜನೆ ಹಲ್ಮಿಡಿ ಶಾಸನಕ್ಕಿಂತ ಕನಿಶ್ಟ ಮೂರ‍್ನಾಲ್ಕು ನೂರು ವರುಶಗಳಶ್ಟು ಹಿಂದೆಯೆ ಆಗಿರುವುದು ಎಂದೆನಿಸುತ್ತದೆ. ಅಂದರೆ ಕ್ರಿಸ್ತಶಕದ ಎಡಬಲಕ್ಕೆ ಕನ್ನಡಕ್ಕೆ ಲಿಪಿಯ ಸಂಯೋಜನೆ ಆಗಿದೆ. ಹಾಗಾದರೆ, ಪಾಲಿ ಬಾಶೆಗೆ ಅಸೋಕನ ಪ್ರಯತ್ನದ ಕಾರಣವಾಗಿ ಲಿಪಿಯ ಸಂಯೋಜನೆಯಾಗಿ ಒಂದೆರಡು ನೂರು ವರುಶಗಳಲ್ಲಿಯೆ ಸಹಜವಾಗಿ, ಅಂದರೆ ವಯಕ್ತಿಕ ಪ್ರಯತ್ನ, ಆಲೋಚನೆಯಲ್ಲದೆ, ಸಮಾಜದ, ಸಾಮೂಹಿಕದ ಆಲೋಚನೆ, ಅವಶ್ಯಕತೆ ಎನಿಸಿ ಕನ್ನಡದ ಲಿಪಿ ಬೆಳೆದಿರುವಂತಿದೆ.

ಕನ್ನಡದಲ್ಲಿನ ಮಹಾಪ್ರಾಣ ದ್ವನಿಗಳು ಮತ್ತು ಇನ್ನಿತರ ಕೆಲವು ದ್ವನಿಗಳ ಮೇಲಿನ ಚರ‍್ಚೆ, ಕೆಲವು ಲಿಪಿಗಳು ಕನ್ನಡಕ್ಕೆ ಲಿಪಿ ಅಳವಡಿಕೆ ಕಾಲದಿಂದಲೆ ಸಂಪೂರ‍್ಣವಾಗಿ ಕಾಣಿಸದೆ ಇರುವುದು, ಬಿಂದುವಿನಂತ ಕೆಲವು ಲಿಪಿಗಳು ಕಾಲಾಂತರದಲ್ಲಿ ಕನ್ನಡ ಲಿಪಿಗೆ ಸೇರಿಕೊಂಡಿರುವುದು ಇವೆಲ್ಲವೂ ಕನ್ನಡ ಲಿಪಿ ಅಳವಡಿಕೆ ಕಾಲವನ್ನು ಕ್ರಿಸ್ತಶಕದ ಎಡಬಲಕ್ಕೆ ತೆಗೆದುಕೊಂಡು ಹೋಗುತ್ತವೆ. ಕಲ್ಲಿನ ಮೇಲೆ ಸಹಜವಾಗಿ ಬರವಣಿಗೆ ಮಾಡುವಾಗ ಲಿಪಿ ರೂಪಗಳ ಬದಲಾವಣೆ ಆಗಿದ್ದು ಮಾತ್ರವೆ ಕನ್ನಡ ಲಿಪಿ, ಕನ್ನಡ ಲಿಪಿಯ ಬೆಳವಣಿಗೆ ಎಂದು ತಿಳಿದುಕೊಳ್ಳುವುದು ಅಶ್ಟು ಸರಿಯಾಗಲಿಕ್ಕಿಲ್ಲ. ಕನ್ನಡ ದ್ವನಿಗಳಿಗೆ ಪೂರಕವಾಗಿ ಲಿಪಿಯ ಅಳವಡಿಕೆ, ಬರಹದಲ್ಲಿ ರೂಡಿಗೆ ಬರುವುದು ಇವನ್ನು ಕನ್ನಡ ಲಿಪಿಯ ಬೆಳವಣಿಗೆ ಎಂದು ಕರೆಯಬಹುದು.

ಹೀಗೆ, ಕನ್ನಡದ್ದೆ ಆದ ಲಿಪಿ ಕಮ್ಮಿ ಎಂದರೂ ಎರಡು ಸಾವಿರ ವರುಶಗಳ ಹಿಂದೆ ರೂಪುಗೊಂಡಿದೆ. ಈ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಮುಕ್ಯವಾದ ಕೆಲವು ಪ್ರಕ್ರಮಗಳನ್ನು ಕಾಣಬಹುದು. 1) ಸಂಸ್ಕ್ರುತ ಬಾಶೆಯಲ್ಲಿ ಇದ್ದು ಕನ್ನಡದಲ್ಲಿ ಇಲ್ಲದ ದ್ವನಿಗಳನ್ನು ಗುರುತಿಸುವುದು ಮತ್ತು ಅವುಗಳ ಲಿಪಿಗಳನ್ನು ಕನ್ನಡ ಲಿಪಿಗೆ ಸೇರಿಸಿಕೊಳ್ಳದಿರುವುದು, ಮತ್ತು 2) ಸಂಸ್ಕ್ರುತ ಬಾಶೆಯ ಉಚ್ಚರಣೆಯಲ್ಲಿ ಇಲ್ಲದೆ ಕನ್ನಡ ಬಾಶೆಯಲ್ಲಿ ಇದ್ದ ದ್ವನಿಗಳನ್ನು ಗುರುತಿಸುವುದು ಮತ್ತು ಅವುಗಳಿಗೆ ಲಿಪಿಗಳನ್ನು ಬೆಳೆಸುವುದು. ಹೀಗೆ ಈ ಎರಡೂ ಕ್ರಮಗಳಲ್ಲಿ ಕೆಲವು ದ್ವನಿಗಳ ವಿಚಾರದಲ್ಲಿ ಬಹುತೇಕ ಕನ್ನಡ ವಿದ್ವತ್ತು ಒಂದು ದ್ವನಿಯಾಗಿದ್ದಂತೆ ಕಾಣಿಸುತ್ತದೆ. ಇಂತಾ ವಿಚಾರಗಳಲ್ಲಿ ಆ ದ್ವನಿಗಳು ಮತ್ತು ಅವುಗಳ ಲಿಪಿಗಳು ಯಾವುದೆ ಚರ‍್ಚೆಯಿಲ್ಲದೆ ಲಿಪಿಯಿಂದ ದೂರ ಉಳಿದಿವೆ ಇಲ್ಲವೆ ಲಿಪಿಗೆ ಸೇರಿಕೊಂಡಿವೆ. ಕೆಲವು ದ್ವನಿಗಳ ವಿಚಾರದಲ್ಲಿ ತುಸು ಚರ‍್ಚೆ ನಡೆದಿರುವಂತಿದೆ. ಇಂತಾ ದ್ವನಿಗಳು ಕನ್ನಡದಲ್ಲಿ ಬಳಕೆಗೆ ಬಂದಿವೆ, ಆದರೆ ಹಲವು ಗೊಂದಲಗಳೊಂದಿಗೆ ಬಳಕೆಯಾಗಿವೆ. ಇಂತಾ ದ್ವನಿಗಳ ವಿಚಾರದಲ್ಲಿ ದ್ವಂದ್ವ ನಿಲುವು ಕೂಡ ಕಾಣಿಸುತ್ತದೆ. ಈ ಪ್ರಕ್ರಮದಲ್ಲಿ ಕನ್ನಡ ವರ‍್ಣಮಾಲೆ ರೂಪುಗೊಂಡಿದೆ.

ಕನ್ನಡ ಮತ್ತು ಸಂಸ್ಕ್ರುತ ಈ ಬಾಶೆಗಳ ನಡುವಿನ ಉಚ್ಚರಣೆಯಲ್ಲಿನ ವ್ಯತ್ಯಾಸವನ್ನು ಅಶ್ಟು ಹಿಂದೆಯೆ ಗುರುತಿಸಿದ್ದು ಬಹು ಮುಕ್ಯವಾದ ವಿಚಾರ. ಈ ಬಿನ್ನತೆಯನ್ನು ಗುರುತಿಸಲು ಸಾದ್ಯವಾದದ್ದೆ ಅಂದಿಗೆ ಕನ್ನಡದಲ್ಲಿ ಆದ ಬವುದ್ದಿಕ ಬೆಳವಣಿಗೆ, ಬಾಶಾವಿಗ್ನಾನದ ಮತ್ತು ನೇರವಾಗಿ ದ್ವನಿವಿಗ್ನಾನದ ಬೆಳವಣಿಗೆ ಎಂದು ಓದಬಹುದು.

ಈ ಅಂಕಣದ ಹಿಂದಿನ ಬರೆಹ:
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...