ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ

Date: 16-07-2024

Location: ಬೆಂಗಳೂರು


"ನರೇಂದ್ರ ಪೈ ಅವರು ಕೃತಿಯನ್ನು ವಿಶ್ಲೇಷಣೆ ಮಾಡುವಾಗ ತಮ್ಮದೇ ಚಿಂತನೆಯನ್ನು ವಿಸ್ತಾರವಾಗಿ ತಾತ್ವಿಕವಾಗಿ ಮಂಡಿಸುತ್ತಾರೆ. ಅವರ ಚಿಂತನೆಯು ಬದುಕಿನ್ನು ಶೋಧಿಸುವ ಸಂವೇದನೆಯನ್ನು ಹೊಂದಿದೆ. `ಎಲ್ಲ ಶ್ರೇಷ್ಠ ಲೇಖಕರು ಸಾಹಿತ್ಯದ ಪ್ರೇರಣೆಗಳ ಬಗ್ಗೆ ಮಾತನಾಡುವಾಗಲೆಲ್ಲ ಮನುಷ್ಯ ಎದುರಿಸುವ ಅಪಮಾನಗಳ ಬಗ್ಗೆ ಮಾತನಾಡಿದ್ದಾರೆ," ಎನ್ನುತ್ತಾರೆ ಹಳೆಮನೆ ರಾಜಶೇಖರ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ʻಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕʼ ಕುರಿತು ಬರೆದಿದ್ದಾರೆ.

ನರೇಂದ್ರ ಪೈ ಅವರು  ವಿಶ್ವದ ಅತ್ಯುತ್ತಮ ಪುಸ್ತಕಗಳೊಂದಿಗೆ ಬದುಕುವವರು. ಪುಸ್ತಕಗಳು ಕಟ್ಟಿಕೊಡುವ ಜಗತ್ತಿನೊಂದಿಗೆ ಸದಾ ಉಸಿರಾಡುವವರು. ಪುಸ್ತಕದೊಳಗಿನ ಮನುಷ್ಯ ಜಗತ್ತನ್ನು ಅರಿತುಕೊಳ್ಳುತ್ತಲೇ ವಾಸ್ತವದ ಮನುಷ್ಯ ಜಗತ್ತನ್ನು ಶೋಧಿಸುವವರು. ವಿಶ್ವದ ಸೃಜನಶೀಲ ಲೇಖಕರು ಬದುಕನ್ನು ಕುರಿತು  ಏನನ್ನು ಗಂಭೀರವಾಗಿ ಚಿಂತಿಸುತ್ತಾರೋ ಅದೇ ಚಿಂತನೆಯನ್ನು ತಮ್ಮ ವಿಮರ್ಶೆಯ ಮೂಲಕ ಕನ್ನಡದಲ್ಲಿ ಮಾಡುತ್ತಿರುವವರು. ತಾವು ಓದಿದ ವಿಶ್ವದ ಅತ್ಯುತ್ತಮ ಪುಸ್ತಕಗಳನ್ನು ಕನ್ನಡಕ್ಕೆ ದಾಟಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ವಿಶ್ವದ ಲೇಖಕರನ್ನು ಕನ್ನಡದ ಲೇಖಕರೊಂದಿಗೆ ತುಲನೆ ಮಾಡುತ್ತಾ ಒಂದು ಗಂಭೀರ ಚರ್ಚೆಯನ್ನು ಹುಟ್ಟು ಹಾಕುವವರು. ನಿರಂತರ ಓದಿನೊಂದಿಗೆ ಬದುಕುವ ಅವರು ಕೃತಿಯ ಒಳಗಿನ ಪ್ರತಿಯೊಂದು ಪಾತ್ರವನ್ನು ತಮ್ಮ ಭಾವಕೋಶದಲ್ಲಿ ಮರುಸೃಷ್ಟಿ ಮಾಡಿಕೊಂಡು ಓದಗರಿಗೆ ದಾಟಿಸುತ್ತಾರೆ. ಅವರು ಯಾವುದೇ ಸೈದ್ಧಾಂತಿಕ ಭಾರಗಳಿಗೆ  ಒಡ್ಡಿಕೊಳ್ಳದೆ  ನಿರಂತರ ಸಾಹಿತ್ಯವನ್ನೇ ಧ್ಯಾನಿಸುವವರು. ಪುಸ್ತಕ ಮತ್ತು ಬದುಕು ಅವರಿಗೆ ಬೇರೆ ಬೇರೆ ಅಲ್ಲ. 

ಸೃಜನಶೀಲ ಲೇಖಕ ಬದುಕಿನ ಹಲವು ಆಯಾಮಗಳನ್ನು ಹೇಗೆ ಶೋಧನೆಗೆ ಒಳಪಡಿಸಿ ಬದುಕಿನ ತತ್ವವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಾನೋ ಅದೇ ಪ್ರಯತ್ನವನ್ನು ತಮ್ಮ ವಿಮರ್ಶೆ ಮೂಲಕ ಮಾಡುತ್ತಿರುವವರು. ಕನ್ನಡ ನಾಡಿನ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬ ಲೇಖಕನನ್ನು ಸ್ಪರ್ಶಿಸಿ, ಅವರ ಅನನ್ಯತೆಯನ್ನು  ದರ್ಶನ ಮಾಡುತ್ತಲೇ ಬಂದಿದ್ದಾರೆ. ತಮ್ಮದೇ ಸ್ವಂತ ಬ್ಲಾಗ್ ಗಳನ್ನು ಸೃಷ್ಟಿಸಿ ಕನ್ನಡಕ್ಕೆ ಬಂದ ಹೊಸ ಪುಸ್ತಕಗಳ ಗಂಭೀರ ಚರ್ಚೆಯನ್ನು ಮಾಡಿದ್ದಾರೆ. ಜೊತೆಗೆ ವಿಶ್ವದಲ್ಲಿ ಪ್ರಕಟವಾದ ಪುಸ್ತಕಗಳನ್ನು ವಿಮರ್ಶೆಯ ತಾತ್ವಿಕತೆಯೊಂದಿಗೆ ಕನ್ನಡಕ್ಕೆ ಪರಿಚಯಿಸುವ ಕಾಯಕ ನಿರಂತರ ಮಾಡುತ್ತಿದ್ದಾರೆ.

ಜಗತ್ತಿನ ಅತ್ಯುತ್ತಮ ಕಾದಂಬರಿಗಳು ಮತ್ತು ಲೇಖಕರು ಅವರ ಜೀವನಾಡಿಗಳೆ ಆಗಿದ್ದಾರೆ. ಅಂತಹ ಅನೇಕ ಕಾದಂಬರಿಗಳನ್ನು ಲೇಖಕರನ್ನು ಪರಿಚಯಿಸುವ, ಅವರ ಚಿಂತನೆಗಳನ್ನು ತಾತ್ವಿಕವಾಗಿ ಶೋಧಿಸುವ ಪ್ರಯತ್ನವನ್ನು ಸಾವಿರದ ಒಂದು ಪುಸ್ತಕ ಆಯ್ದ ವಿಮರ್ಶೆಗಳ  ಕೃತಿಯಲ್ಲಿ ಮಾಡಿದ್ದಾರೆ. ಅವರೇ ಹೇಳುವಂತೆ ಈ ಕೃತಿಯಲ್ಲಿ `ಕುಟ್ಟಿ. ಮಿಲನ್ ಕುಂದೇರಾ, ಇಕೊ ಉಂಬರ್ತೊ, ಓರಾನ್ ಪಮುಕ್, ಜೆನ್ನಿ ಎರ್ಪೆನ್‌ಬೆಕ್, ಓಲ್ಲಾ ತೊಗಾರ್ಝುಕ್, ಅದಾನಿಯಾ ಶಿಬಿ, ಯೋನ ಫಾಸೆ, ಜಿಯಾ ಹೈದರ್ ರಹಮಾನ್, ಹನೀಫ್ ಖುರೇಶಿಯವರಂಥ ಪ್ರಸಿದ್ಧ ಲೇಖಕರು, ನೊಬೆಲ್ ಪುರಸ್ಕೃತರ ಕೃತಿಗಳ ಕುರಿತ ಲೇಖನಗಳಿರುವಂತೆಯೇ ಭಾರತೀಯರಾದ ಅಂಜುಂ ಹಸನ್, ಸೈರಸ್ ಮಿಸ್ತ್ರಿ. ಗೀತಾಂಜಲಿ ಶ್ರೀ, ಅಜಿತನ್ ಕುರುಪ್, ಹರೀಶ್ ಎಸ್ ಕೃತಿಗಳ ಕುರಿತ ಲೇಖನಗಳೂ ಇವೆ. ಇಬ್ಬರು ಮೂವರನ್ನು ಹೊರತು ಪಡಿಸಿದರೆ ಎಲ್ಲರೂ ಸಮಕಾಲೀನರೇ, ಈಗಲೂ ಬರೆಯುತ್ತಿರುವವರೇ. ಆಸ್ಟ್ರೇಲಿಯಾ, ಬಾಂಗ್ಲಾ, ಪ್ಯಾಲಸ್ತೇನ್, ಟರ್ಕಿ, ಫ್ರಾನ್ಸ್, ಜರ್ಮನಿ ಮುಂತಾಗಿ ವಿವಿಧ ದೇಶಗಳ ಲೇಖಕರು ಇರುವಂತೆಯೇ ಈಶಾನ್ಯ ಭಾರತ, ಮಹರಾಷ್ಟ್ರ, ಕೇರಳದ ಲೇಖಕರು ಇಲ್ಲಿದ್ದಾರೆ. ಇವೆಲ್ಲ ವಿವರಗಳಿಗಿಂತ ಮುಖ್ಯವಾದದ್ದು ಇಲ್ಲಿ ಉಲ್ಲೇಖಗೊಂಡಿರುವ ಕೃತಿಗಳೆಲ್ಲವೂ ಪ್ರತಿಯೊಬ್ಬರೂ ಓದಲೇ ಬೇಕಾದಂಥವು, ಬದುಕನ್ನು ಶ್ರೀಮಂತಗೊಳಿಸುವಂಥವು, ಸಾರ್ಥಕಗೊಳಿಸುವಂಥವು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೇ ಈ ಪುಸ್ತಕಗಳ ಓದು ಸಾವಿರದ ಒಂದು ಪುಸ್ತಕಗಳ ಓದಿಗೆ ಸಮ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಲ್ಲೆ. ಹಾಗಾಗಿಯೇ ಇಂಥ ಅದ್ಭುತ ಕೃತಿಗಳ ಬಗ್ಗೆ ನಿಮ್ಮ ಗಮನ ಹರಿಯುವಂತೆ ಮಾಡುವ ಕಾರಣಕ್ಕೇ ಈ ನನ್ನ ಪುಸ್ತಕಕ್ಕೆ ಕೂಡ ಸಾವಿಲ್ಲದ ಅಮರತ್ವ ಪ್ರಾಪ್ತವಾಗುತ್ತದೆ ಎನ್ನುವ ವಿಶ್ವಾಸ ನನ್ನದು.’ ಈ ಕೃತಿಯಲ್ಲಿ ಭಾರತವೂ ಒಳಗೊಂಡಂತೆ ವಿಶ್ವದ ಶ್ರೇಷ್ಠ ಕೃತಿಗಳ ದರ್ಶನವನ್ನು ಕಾಣುತ್ತೇವೆ. ಈ ಎಲ್ಲಾ ಲೇಖಕರ ಸಮಗ್ರ ಕೃತಿಗಳನ್ನು ಇವರು ಆಳವಾಗಿ ಅಧ್ಯಯನ ಮಾಡಿದ್ದಾರೆ. ಈ ಲೇಖಕರ ಕೃತಿಗಳನ್ನು ತಾತ್ವಿಕವಾಗಿ ವಿಶ್ಲೇಷಿಸುವಾಗ ಆಯಾ ಲೇಖಕರ ಒಟ್ಟು ಬದುಕಿನ ಚಿಂತನೆಯನ್ನು ನಿಕಷಕ್ಕೆ ಒಡ್ಡುತ್ತಾರೆ. ಬದುಕಿನ ಜಿಜ್ಞಾಸೆಯನ್ನು ಕೃತಿಗಳೊಂದಿಗೆ ಮಾಡುತ್ತಾರೆ. ಆಧುನಿಕ ವಿದ್ಯಾಮಾನಗಳೊಂದಿಗೆ ಕೃತಿ ಸಂವೇದನೆಗೊಳ್ಳುವ ಬಗೆಯನ್ನು ವಿಶ್ಲೇಷಿಸುತ್ತಾರೆ.

ಹೀಗಾಗಿ, ಅವರ ಆಯ್ದ ವಿಮರ್ಶೆಗಳ ಸಂಕಲನ ಸಾವಿರದ ಒಂದು ಪುಸ್ತಕ ಕೃತಿಯು ಕನ್ನಡದಲ್ಲಿ ಅಪರೂಪದ ಬರಹಗಳನ್ನು ಒಳಗೊಂಡ ಕೃತಿ. ಈ ಕೃತಿಯು ಕೇವಲ ವಿಶ್ವದ ಅತ್ಯುತ್ತಮ ಕೃತಿಗಳ ಲೇಖಕರ ಪರಿಚಯವನ್ನು ಮಾತ್ರ ಮಾಡುವುದಿಲ್ಲ. ಆಯಾ ಲೇಖಕರ ಕೃತಿಗಳು ಬದುಕನ್ನು ಕುರಿತು ಗಂಭೀರವಾಗಿ ಚಿಂತನೆ ಮಾಡುವ ವಿಧಾನವನ್ನು ಮನಗಣಿಸುತ್ತಾರೆ. ಬದುಕಿನ ಪ್ರವಾಹಕ್ಕೆ ಎದುರಾಗುವ ಮನುಷ್ಯನ ಸಂಕೀರ್ಣ ಬಿಕ್ಕಟ್ಟಿನ ಸ್ಥಿತಿಗತಿಗಳನ್ನು  ಈ ಕೃತಿಗಳ ಜಗತ್ತಿನೊಂದಿಗೆ ಶೋಧಿಸುವ ಪ್ರಯತ್ನ ಮಾಡುತ್ತಾರೆ.  ಈ ಕೃತಿಯಲ್ಲಿ ಒಟ್ಟು 16 ವಿಮರ್ಶಾ  ಲೇಖನಗಳಿವೆ. ಇವುಗಳನ್ನು ವಿಮರ್ಶಾ ಲೇಖನಗಳು ಅನ್ನುವುದಕ್ಕಿಂತ ಮನುಷ್ಯನ ಬದುಕಿನ ಆಳದ ಚಿಂತನೆಗಳೇ ಎನ್ನಬೇಕು.  ಅವರು ಈ ಲೇಖನಗಳಲ್ಲಿ ಕೇವಲ ವಿಮರ್ಶೆಯನ್ನು ಮಾತ್ರ ಮಾಡುತ್ತಿಲ್ಲ. ಬದುಕಿನ ಒಳ ಸೂಕ್ಷ್ಮಗಳ  ಸಂಗತಿಗಳನ್ನು ನಿಕಶಕ್ಕೆ ಒಡ್ದುತ್ತಾರೆ.   ಜಗತ್ತಿನ ಬೇರೆ ಬೇರೆ ಲೇಖಕರ ಕೃತಿಗಳನ್ನು ಕೇಂದ್ರವಾಗಿಟ್ಟುಕೊಂಡು ಬದುಕನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬದುಕಿನ ಚೈತನ್ಯ ಮತ್ತು ಉತ್ಸಾಹ ಎಲ್ಲಿದೆ ಎಂಬ ಚಿಂತನೆ ಈ ಬರಹಗಳಲ್ಲಿ ಕಾಣುತ್ತೇವೆ. ಜಗತ್ತಿನ ಮನುಷ್ಯನ ಬದುಕು ಒಂದೇ ಬಗೆಯದು. ದೇಶ ಬಣ್ಣ ಪ್ರದೇಶ ಬೇರೆ ಬೇರೆ ಇರಬಹುದು. ಆದರೆ,  ಒಳ ಬೀಗುದಿಗಳು, ತುಡಿತಗಳು, ಸಂಘರ್ಷಗಳು, ಸಮಸ್ಯೆಗಳು ಒಂದೇ ಬಗೆಯು ಎಂಬುದನ್ನು ಇಲ್ಲಿಯ ಕೃತಿಗಳ ಮೂಲಕ ಕಾಣಿಸುತ್ತಾರೆ.

 ಕನ್ನಡದಲ್ಲಿ ಬರವಣಿಗೆ ಮಾಡುವ ಪ್ರತಿಯೊಬ್ಬ ಲೇಖಕರಿಗೂ, ಓದುಗರಿಗೂ ಈ ಕೃತಿಗಳು ಎಷ್ಟು ಮುಖ್ಯ ಎಂಬುದನ್ನು ಮನಸ್ಸಿಗಿಳಿಸುತ್ತಾರೆ. ಈ ಕೃತಿಗಳನ್ನು ಓದುವ ಪ್ರತಿಯೊಬ್ಬ ಮನುಷ್ಯನು ತನ್ನ ಬದುಕನ್ನು ಅವಲೋಕನ ಮಾಡಿಕೊಳ್ಳುವ  ಕಡೆಗೆ ಕೊಂಡೊಯ್ಯುತ್ತಾರೆ.

ಇಲ್ಲಿಯ ಲೇಖನಗಳ ತಲೆಬರಹಗಳನ್ನು ಗಮನಿಸಬೇಕು. ‘ತನ್ನ ಶಿಲುಬೆಯ ತಾನೇ’, `ಮನದಾಳದ ಬಿರುಕುಗಳ ಮಾತು’, `ಈ ನರಕದಿಂದ ಮುಕ್ತಿ ಇಲ್ಲವೇ’, `ಕಾಡರಿಸಿ ಹೊರಟು ಕವಿತೆಯೊಂದಿಗೆ’, ‘ಎಳೆಯ ಕಾದಂಬರಿಕಾರನೊಬ್ಬನ ನಿವೇದನೆ’, `ಅಂತರಂಗದಾ ಮೃದಂಗ’, `ಬೂದಿಯಾದ ಬದುಕು ಮತ್ತು ಮನುಷ್ಯತ್ವ’, `ಎಲ್ಲಿಂದಲೋ ಬಂದವರು’, `ಮನವೇ ನೀನಿಲ್ಲಿರು’, ‘ಹಾರದಿರು ಹೀಗೆ’, ‘ಈಗ ಈ ಕ್ಷಣ ಬಾ ಇಲ್ಲಿರು’, `ತಪ್ಪದೇ ಓದಬೇಕಾದ ಒಂದು ಆಧುನಿಕ ಮಹಾಪುರಾಣ’, `ಸಣ್ಣ ಸಂಗತಿ’, `ಅನಕ್ಷರ ಲೋಕದ ಕಾವ್ಯ’, `ಧಾರಿಣಿಗೆ ಅನ್ಯರೆಂಬವರಿಲ್ಲ’ `ಭಗವಂತನ ಭಾಷೆ ಮೌನ’, `ಕಣ್ಣ ಬೆಳಕಿನಲ್ಲಿ ಕಂಡಷ್ಟು’, `ಸಂಥಿಂಗ್ ಟು ಟೆಲ್ ಯು’,  ಈ ಬರಹಗಳು  ಕನ್ನಡಕ್ಕೆ ಹೊಸ ಸಂವೇದನೆಯನ್ನು ನೀಡುತ್ತವೆ. ಎಲ್ಲಾ ಬರಹಗಳು ಜಗತ್ತಿನ ಅತ್ಯುತ್ತಮ ಲೇಖಕರ ಕೃತಿಗಳನ್ನು ಕನ್ನಡ ಜಗತ್ತಿಗೆ ತಂದು ನಿಲ್ಲಿಸುತ್ತವೆ. ಈ ಕೃತಿಗಳನ್ನು ಕುರಿತು ವಿಮರ್ಶೆ ಮಾಡುವಾಗ ಕನ್ನಡದ ಅನೇಕ ಲೇಖಕರನ್ನು ಆ ಲೇಖಕರೊಂದಿಗೆ ಹೋಲಿಸುತ್ತಾ ಹೋಗುತ್ತಾರೆ. ಅವರ ಅಪಾರ ಓದು ಬೆರಗು ಮೂಡಿಸುತ್ತದೆ.

ನರೇಂದ್ರ ಪೈ ಅವರು ಕೃತಿಯನ್ನು ವಿಶ್ಲೇಷಣೆ ಮಾಡುವಾಗ ತಮ್ಮದೇ ಚಿಂತನೆಯನ್ನು ವಿಸ್ತಾರವಾಗಿ ತಾತ್ವಿಕವಾಗಿ ಮಂಡಿಸುತ್ತಾರೆ. ಅವರ ಚಿಂತನೆಯು ಬದುಕಿನ್ನು ಶೋಧಿಸುವ ಸಂವೇದನೆಯನ್ನು ಹೊಂದಿದೆ. `ಎಲ್ಲ ಶ್ರೇಷ್ಠ ಲೇಖಕರು ಸಾಹಿತ್ಯದ ಪ್ರೇರಣೆಗಳ ಬಗ್ಗೆ ಮಾತನಾಡುವಾಗಲೆಲ್ಲ ಮನುಷ್ಯ ಎದುರಿಸುವ ಅಪಮಾನಗಳ ಬಗ್ಗೆ ಮಾತನಾಡಿದ್ದಾರೆ. ಅದು ಜಾತಿಯ ಹಿನ್ನೆಲೆಯಲ್ಲಿ, ಹೆತ್ತವರ ಆರ್ಥಿಕ, ಸಾಂಸಾರಿಕ, ಸಾಮಾಜಿಕ ಸ್ಥಾನಮಾನದ ಕುರಿತ, ದೈಹಿಕ ಊನಗಳ ಕುರಿತ ಹಿನ್ನಲೆಯಲ್ಲಿ ಅಪಮಾನವೋ ಇನ್ನೊಂದೋ, ಅದು ಅಮಾನವೀಯವೆಂಬುದಂತೂ ಖಚಿತ. ಮನುಷ್ಯ ಜೀವಿ ಮೂಲಭೂತವಾಗಿ ತಾನು ಹುಟ್ಟುವಾಗ ಇದ್ದ ಪರಿಸರ ತನ್ನನ್ನು ಸ್ವೀಕರಿಸಬೇಕು. ನಿರಾಕರಿಸದೆ, ತಿರಸ್ಕರಿಸದೆ ಸಹಿಸಬೇಕೆಂದು ತೀವ್ರವಾಗಿ ಬಯಸುತ್ತದೆ. ಇದನ್ನು ಪುಟ್ಟ ಮಗು ತನ್ನ ತರಗತಿಯಲ್ಲಿ ಮೊದಲ ದಿನ, ಪ್ರಬುದ್ದ ವ್ಯಕ್ತಿ ತನ್ನ ಕೆಲಸದ ಕಚೇರಿಯಲ್ಲಿ ನೌಕರಿಯ ಆರಂಭಿಕ ದಿನಗಳಲ್ಲಿ, ಮುಂದೆ ಸಮಾಜದಲ್ಲಿಯೂ ನಾವು ನೀವೆಲ್ಲ ಬಯಸುವ ಸ್ಥಿತಿ. ಕೊನೆಗೆ ಒಂದು ಸೋಶಿಯಲ್ ವೆಬ್ ಸೈಟಿನಲ್ಲಿ, ತನ್ನ ಬ್ಲಾಗಿನ ವಿಷಯದಲ್ಲಿ ನಾವು ಇದನ್ನೇ ಬಯಸುತ್ತೇವೆ, ಮೌನವಾಗಿ ನಿಮ್ಮನ್ನು ಬೇಡುತ್ತೇವೆ. Disgrace ಕಾದಂಬರಿಯ ಲ್ಯೂರಿಯನ್ನು ನೀವು ಒಪ್ಪುತ್ತೀರೋ ಬಿಡುತ್ತೀರೋ ಎಂಬ ಪ್ರಶ್ನೆ ಬೇರೆ. ಅದು ನಾವು ಈ ಬದುಕಿನಲ್ಲಿ ಒಪ್ಪಿಕೊಂಡ, ಆಚರಿಸುತ್ತಿರುವ ಮೌಲ್ಯಗಳನ್ನು ಅವಲಂಬಿಸಿದೆ. ಇನ್ನು ಕೆಲವೊಮ್ಮೆ ಇತರರು ಹೀಗಿರಬೇಕು, ನಾವು ಹಾಗೆಯೇ ಇರಬೇಕೆಂದೇನಿಲ್ಲ, (ನಿಜಕ್ಕೂ ಹೇಗಿದ್ದೇವೆಂಬುದು ನಿಮಗೆ ತಿಳಿಯದಿರುವ ತನಕ) ಎಂದು ಇರಿಸಿಕೊಂಡ ಮೌಲ್ಯಗಳನ್ನು ಅವಲಂಬಿಸಿದರೂ ಆಶ್ಚರ್ಯವಿಲ್ಲ.’ (ಪು. 10)

ಕೃತಿ ಕಟ್ಟಿಕೊಡುವ ಜಗತ್ತನ್ನು ಓದುಗನಿಗೆ ದಾಟಿಸುತ್ತಲೇ ಪ್ರಸ್ತುತ ಬದುಕಿನೊಂದಿಗೆ ಹೊಂದಿದ ನಂಟಿನ ಕ್ರಮವನ್ನು ಅರ್ಥಮಾಡಿಸುವ ಪ್ರಯತ್ನ ಮಾಡುತ್ತಾರೆ. `ಮುಖ್ಯವಾಗಿ ಗಮನಿಸಬೇಕಾದ್ದೆಂದರೆ, ಈ ವಿಭಿನ್ನ ಜಗತ್ತುಗಳಲ್ಲಿ ನಾವು ನಿತ್ಯವೂ ಮುಖಾಮುಖಿಯಾಗುವ ಜನರು, ಸನ್ನಿವೇಶಗಳು, ಸಮಸ್ಯೆ, ಸವಾಲುಗಳು ಆಯಾ ಜಗತ್ತಿನ ಸೀಮೆಯೊಳಗೇ ಒಡ್ಡುವ ಸಂಘರ್ಷ, ನಾಗಳ ಭಿನ್ನಾಭಿಪ್ರಾಯ, ವಿಘಟನೆಗಳು ಒಂದು ಸ್ತರದ್ದಾದರೆ ಇನ್ನೊಂದು ಹೆಚ್ಚು ಸಂಕೀರ್ಣವಾದ, ಸಂಕ್ಲಿಷ್ಟವಾದ ಸ್ತರದ್ದು. ಈ ವಿಭಿನ್ನ ಜಗತ್ತುಗಳು ಕೂಡಾ ಕೆಲವೊಮ್ಮೆ ಎಲ್ಲೋ ಒಂದು ಕಡೆ ಒಂದರ ಜೊತೆ ಒಂದು ವ್ಯವಹರಿಸುವ, ಮುಖಮುಖಿಯಾಗುವ, ಕೊಟ್ಟು-ಪಡೆಯುವ ಸನ್ನಿವೇಶಗಳು ನಿರ್ಮಾಣವಾಗುತ್ತವಲ್ಲ. ಸ್ವಲ್ಪ ಸರಳೀಕೃತ ಉದಾಹರಣೆಗಳನ್ನು ಕೊಡುವುದಾದರೆ, ಆಫೀಸಿನಲ್ಲಿರುವಾಗ ಬರುವ ಹೆಂಡತಿಯ ಫೋನು ನಿಮ್ಮ ಗಮನಕ್ಕೆ ತರುವ ಕುಟುಂಬಕ್ಕೆ ಸಂಬಂಧಪಟ್ಟ ಯಾವುದೋ ಒಂದು ಗಂಭೀರ ಸಮಸ್ಯೆ. ಮನೆಯಲ್ಲಿ ಯಾವುದೋ ಸಾಂಸಾರಿಕ ಜಗತ್ತಿನ ವಿದ್ಯಮಾನದಲ್ಲಿ ಗರ್ಕರಾಗಿರುವಾಗ (ಅದು ದೇವರ ಪೂಜೆಯೋ, ಅಪ್ಪನ ಅಪರಕ್ರಿಯೆಯೋ, ಟಾಯ್ಲೆಟ್ ತೊಳೆಯುವುದೋ ಆಗಿರಬಹುದು!) ಬಂದು ಬಿಡುವ ಆಫೀಸ್ ಕೆಲಸಕ್ಕೆ ಸಂಬಂಧಪಟ್ಟ ವಿಚಾರದ ಚರ್ಚೆಗೆ ತೊಡಗುವ ಫೋನ್ ಕಾಲ್ ಅಥವಾ ಮನೆಬಾಗಿಲಿಗೇ ಬರುವ ಸಹೋದ್ಯೋಗಿ. ಆಫೀಸಿನಲ್ಲಿ ವಿಪರೀತ ಕೆಲಸದ ಒತ್ತಡದಲ್ಲಿರುವಾಗ ಇದ್ದಕ್ಕಿದ್ದಂತೆ ತೊಡಗುವ ಟೀವಿ ಸೀರಿಯಲ್ ಕುರಿತ ಅಥವಾ ಡಿಸ್ಕೊಂಟ್ ಸೇಲ್ ಕುರಿತ, ಎಲ್ಲೋ ಯಾರನ್ನೋ ಯಾರೋ ಇಟ್ಟುಕೊಂಡಿರುವುದರ ಕುರಿತ ಏರು ಧ್ವನಿಯ ಚರ್ಚೆ. ಮನೆಯಲ್ಲಿ ಏನೋ ರಾದ್ಧಾಂತ ನಡೆಯುತ್ತಿರುವಾಗ ಬರುವ ನೀವು ತುಂಬ ಗೌರವಿಸುವ ವ್ಯಕ್ತಿಯೊಬ್ಬರ ಫೋನು ಅಥವಾ ನಿಮ್ಮ ಪ್ರೇಯಸಿಯ ಫೋನು! ನಿಮ್ಮ ಕತೆ ಸ್ವೀಕೃತವಾಗಿರುವ ಬಗ್ಗೆ ಬರುವ ಸಂಪಾದಕರ ಪತ್ರ. (ಪು. 21) ಈ ರೀತಿಯ ಅನೇಕ ವಿಚಾರಗಳನ್ನು ಪ್ರತಿ ಕೃತಿ ವಿಶ್ಲೇಷಣೆಯಲ್ಲಿ ಕಾಣುತ್ತೇವೆ.

ಮನದಾಳದ ಬಿರುಕುಗಳ ಮಾತು... (Lunatic in my Head by Anjum Hasan) ಈ ಕೃತಿಯ ಕುರಿತು ಬರೆಯುವಾಗ ಅವರ ವಿಶ್ಲೇಷಣೆಯ ವಿಧಾನವನ್ನು ಗಮನಿಸಬೇಕು `ಅಸ್ವಸ್ಥಗೊಳಿಸಬಲ್ಲ ತೀವ್ರವಾದ ಸಂವೇದನೆಗಳನ್ನು ಸ್ಪರ್ಶಿಸುವ ಕಾದಂಬರಿ ಅಂಜುಂ ಹಸನ್ ರ Lunatic in my Head ಆರಂಭದಿಂದ ಕೊನೆಯ ತನಕ ಹಾಯುವುದು ಬಿರುಕುಗಳ ಮೂಲಕ. ಭೂಕಂಪದ ಬಳಿಕ ಊರೆಲ್ಲ ಭೂಮಿಯನ್ನು ಸಿಗಿದಿಟ್ಟಂತೆ ಕಾಣುವಾಗ ಬಿರುಕು ಬಿಟ್ಟ ನೆಲದ ಮೇಲೆ ನಡೆಯುವ ಅನುಭವವಿದು. ಆದರೆ ಬಿರುಕುಗಳು ಇನ್ನೊಂದು ದಿಕ್ಕಿನಿಂದ ನಿರ್ದಿಷ್ಟ ಭೂಭಾಗವನ್ನು, ಮನುಷ್ಯರನ್ನು ಒಂದಾಗಿ ವಿಂಗಡಿಸುವ ಮೂಲಕ ಇನ್ನೇನನ್ನೊ ಜೋಡಿಸುತ್ತ ಇರುತ್ತವೆ ಎನ್ನುವುದು ಕೂಡಾ ಸುಳ್ಳಲ್ಲ! ಕಾದಂಬರಿ ಈ ಪ್ರಜ್ಞೆಯನ್ನು ದುಡಿಸಿಕೊಂಡಿದೆ. ಆದರೆ ಎಲ್ಲ ಪ್ರಯತ್ನಗಳಾಚೆ, ಎಲ್ಲ ವಿಘಟನೆಯ, ವಿಚ್ಛಿದ್ರದ ವಿಕೇಂದ್ರಿಕರಣ ಪ್ರಕ್ರಿಯೆಯ ಆಳದಲ್ಲಿ ಅಂತರ್ಗತವಾದ ಸಂತುಲನ ಒಂದಿದೆ, ಸಂಬಂಧದ ತಂತು ಒಂದಿದೆ, ಅಗಮ್ಯ-ಅಗೋಚರ ಭಾವವಲಯವೊಂದು ಅಲ್ಲಿಯೂ ಮಿಡಿಯುತ್ತಿರುತ್ತದೆ ಎನ್ನುವ ನಂಬುಗೆಯನ್ನು ಮೀರಿ ಕಣ್ಣಿಗೆ ಹೊಡೆದು ಕಾಣುವುದು ಸಂಘರ್ಷಗಳೇ, ವಿಮುಖತೆಯೇ. ಆದರೆ ಈ ವಿಘಟನೆ, ವಿಮುಖತೆ ಮತ್ತು ಸಂಘರ್ಷದ ಮೂಲಕ ನಾವು ಬದುಕನ್ನು ತಿಳಿಯುವುದು, ಮನುಷ್ಯನನ್ನು ಅರಿಯುವುದು, ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಕಾದಂಬರಿಯ ಓದಿನ ಮೂಲ ಆಶಯ. ಕೊನೆಗೂ ಎಲ್ಲ ವಿಮರ್ಶೆಯ ಆಚೆ, ಒಂದು ಸಾಹಿತ್ಯ ಕೃತಿ ನಮ್ಮ ಬದುಕಿಗೆ ಏನನ್ನು ಕೊಡುತ್ತಿದೆ. ನಮ್ಮ ಬದುಕನ್ನು ಅದು ಹೇಗೆ ಸಂಪನ್ನಗೊಳಿಸುತ್ತಿದೆ ಎನ್ನುವ ಅಂಶವಲ್ಲವೇ ಮುಖ್ಯ?

ಈ ವಿಘಟನೆ, ಘಟಸ್ಫೋಟ, ವಿಚ್ಛಿದ್ರ ಪ್ರಮುಖವಾಗಿ ಎರಡು ಸ್ತರದಲ್ಲಿ ನಡೆಯುತ್ತದೆ. ನಾವು ನಮ್ಮ ಬದುಕಿನ ದೈನಂದಿನವನ್ನೇ ಗಮನಿಸಿದರೆ ನಾವು ವಿಭಿನ್ನವಾದ ಜಗತ್ತುಗಳಲ್ಲಿ ಸಂಚರಿಸುತ್ತಾ ಇರುತ್ತೇವೆ. ನಮ್ಮ ಮನೆ, ತಾಯಿ, ತಂದೆ, ಒಡಹುಟ್ಟಿದವರು, ಹೆಂಡತಿ, ಮಕ್ಕಳು ಈ ಎಲ್ಲರಿಗೆ ಸೇರಿದ ಒಂದು ತಕ್ಷಣದ ಸಂಬಂಧಗಳ ಕುಟುಂಬ ಜಗತ್ತುಗಳಲ್ಲಿ ಒಂದು. ಆದರೆ ಈ ಜಗತ್ತಿನ ಒಳಗೊಳಗೇ ಸಂಘರ್ಷಗಳಿರುತ್ತವೆ. ಅತ್ತೆ-ಸೊಸೆ, ಗಂಡ-ಹೆಂಡತಿ, ಮೈದುನ-ನಾದಿನಿ ಎಂದೆಲ್ಲ ಎಷ್ಟೋ ಕಡೆ ಹಳಸಿರುತ್ತದೆ. ಹೊಂದಾಣಿಕೆಯೇ ಹೊರೆಯಾಗಿ ಸಂಘರ್ಷ ನಿತ್ಯದ ಅನುಪಾತವೇ ಆಗಿಬಿಟ್ಟಿರುತ್ತದೆ. ಈ ಅನುಪಾತವನ್ನು ಯಾರ ಮನಸ್ಸು ಹೇಗೆ ಗ್ರಹಿಸುತ್ತದೆ, ಸ್ಪಂದಿಸುತ್ತದೆ ಎನ್ನುವುದು ಬೇರೆ ಉದ್ಯೋಗ, ವೃತ್ತಿ, ಹೊಟ್ಟೆಪಾಡು, ವ್ಯಾಪಾರಗಳಿಗೆ ಸಂಬಂಧಿಸಿದ ಇನ್ನೊಂದೇ ಜಗತ್ತು ನಮಗಿರುತ್ತದೆ. ಇಲ್ಲಿಯೂ ಸಹೋದ್ಯೋಗಿಗಳು, ಸ್ಪರ್ಧಿಗಳು, ಸಂಬಳ, ಇಂಕ್ರಿಮೆಂಟು, ಪ್ರಮೋಶನ್ನು ಇತ್ಯಾದಿ ಹೋಲಿಕೆಗಳು ತಂದೊಡ್ಡುವ ದ್ವೇಷ, ಅಸೂಯೆ, ಈರ್ಷ್ಯ, ಹಾವೇಣಿಯಾಟದ ಜಿದ್ದಾಟಗಳು ಉಂಟು ಮಾಡುವ ಗ್ರೂಪಿಸಂ, ಸಣ್ಣತನ ಇರುವಂಥದ್ದೇ. ಇವುಗಳನ್ನು ಮನಸ್ಸು-ಮನುಷ್ಯ ಹೇಗೆ ಸ್ವೀಕರಿಸುತ್ತಾನೆ, ಹೇಗೆ ಪ್ರತಿಸ್ಪಂದಿಸುತ್ತಾನೆ, ಹೇಗೆ ತನ್ನತನವನ್ನು ಕಾಪಾಡಿಕೊಳ್ಳುತ್ತಾನೆ ಎನ್ನುವಲ್ಲಿನ ಸಂಘರ್ಷ ಕೂಡಾ ಮಹತ್ವದ್ದೇ.ಇನ್ನು ನಮ್ಮ ನಮ್ಮ ಹವ್ಯಾಸ, ಪ್ರವೃತ್ತಿ, ಸ್ವಂತದ ಖುಶಿಗೆ ಸಂಬಂಧಪಟ್ಟ ಒಂದು ಜಗತ್ತು ಕೂಡಾ ನಮಗಿರುತ್ತದೆ. ಅದು ಸಾಹಿತ್ಯ ಸಂಗೀತ, ಚಿತ್ರಕಲೆ, ಕ್ರೀಡೆ, ನೃತ್ಯ, ನಾಟಕ, ಸಿನೆಮಾ, ಗಾರ್ಡನಿಂಗ್, ಅಡುಗೆ, ರಾಜಕೀಯ ಯಾವುದೇ ಆಗಿದ್ದರೂ ಇವತ್ತಿನ ಸ್ಪರ್ಧಾತ್ಮಕ ಜಗತ್ತಿನ ಎಲ್ಲಾ ಹುಳುಕುಗಳು ಅಲ್ಲಿಯೂ ಹರಿದಾಡುತ್ತಲೇ ಇರುತ್ತವೆ. ಪ್ರಶಸ್ತಿ, ಗೌರವ, ಮನ್ನಣೆ, ಸನ್ಮಾನ, ದುಡ್ಡು, ಪೋಷಣೆಗಳಿಗೆ ಸಂಬಂಧಪಟ್ಟಂತೆ ಕಾಲೆಳೆಯುವುದು, ಎತ್ತಿಕೂರಿಸುವುದು ಎಲ್ಲ ಇದ್ದೇ ಇರುತ್ತವೆ. ಇದು ಕಲೆ ಮತ್ತು ರಾಜಕೀಯ, ಕಲೆ ಮತ್ತು ಜಾತಿ/ಧರ್ಮ, ಕಲೆ ಮತ್ತು ಪ್ರಚಾರ, ಕಲೆ ಮತ್ತು ವಶೀಲಿ, ಕಲೆ ಮತ್ತು ನಿಮ್ಮ ನಿಮ್ಮ ಧಂ - ಧಾಂಧೂಂಗಳಿಗೆ ಸಂಬಂಧಪಟ್ಟಂತೆ ಹವ್ಯಾಸ, ಪ್ರವೃತ್ತಿಗಳು ಬೆಳಗಬೇಕಾದ ಅಥವಾ ಕೊಳೆಯ ಬೇಕಾದ ದಿನಗಳಾದ್ದರಿಂದ ಈ ಜಗತ್ತು ಕೂಡ ಒಡ್ಡುವ ಸಂಘರ್ಷಗಳಿಗೇನೂ ಕೊರತೆಯಿಲ್ಲ. (ಪು. 19-20)

ಆಂಗ್ಲ ಭಾಷೆಯಲ್ಲಿರುವ ಕೃತಿಗಳನ್ನು ಕನ್ನಡ ಭಾಷೆಯಲ್ಲಿ ಸಂಕ್ಷಿಪ್ತವಾಗಿ ಕಟ್ಟಿಕೊಡುವುದು ಪರಿಚಯಿಸುವುದು ಬಹಳ ಪರಿಶ್ರಮದ ಕಾರ್ಯ. ಅದನ್ನು ಪೈಯವರು ವ್ರತದಂತೆ ಮಾಡಿದ್ದಾರೆ. ವಿಸ್ತಾರವಾದ ಕೃತಿಗಳ ಪ್ರತಿ ಪುಟವನ್ನು ತಾವೇ ಬರೆದಷ್ಟೂ ಸಂತಸಗೊಳ್ಳುತ್ತಾ ಆಸ್ವಾದಿಸುವ ಅವರ ಮನೋಭಾವ ಬೆರಗುಮೂಡಿಸುತ್ತದೆ. ಅಷ್ಟೊಂದು ತದಾತ್ಮತೆಯನ್ನು ಕೃತಿಯೊಂದಿಗೆ ಹೊಂದುತ್ತಾರೆ. `ಇವತ್ತಿನ ಮನುಷ್ಯ ನಿಜಕ್ಕೂ ಸ್ಮಶಾನದಲ್ಲಿ ಕುಳಿತು ತನ್ನಾಳದಲ್ಲಿ ಯಾವುದೋ ಒಂದು ಅಂತ್ಯವಿಲ್ಲದ ಅಳಲು, ತಳಮಳ ಹೊಯ್ದಾಡುತ್ತಿರುವುದನ್ನು ಕಂಡು ವಿಹ್ವಲಗೊಂಡಂತಿರುವುದು ಈ ಕಾರಣಕ್ಕೆ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಪ್ರತಿಯೊಂದಕ್ಕೂ ನಾವು ಕೂಡ ಜವಾಬ್ದಾರಿ. ಈ ಜಗತ್ತಿನ ಯಾವುದೋ ಒಂದು ಮೂಲೆಯಲ್ಲೆಲ್ಲೂ ಈ ಕ್ಷಣ ನಡೆಯುತ್ತಿರುವ ಯಾವುದೋ ಒಂದು ಪುಟ್ಟ ಸಂಗತಿಗೆ ಕೂಡ ಇಲ್ಲಿ ಕುಳಿತ ನನ್ನ ಅಸ್ತಿತ್ವದ ಋಣವಿದೆ. ಮತ್ತು ಈ ಅಸ್ತಿತ್ವ ಎನ್ನುವುದರ ಬಗ್ಗೆ ಹೇಳಿಯಾಗಿದೆ. (ಪು. 111) ಎಂದು ವಾಸ್ತವದ ದರ್ಶನವನ್ನು ಮಾಡಿಸುತ್ತಾರೆ.

ದೇಹ ಒಂದು ಮಾಧ್ಯಮ. ಬದುಕು ಒಂದು ಯಾತ್ರೆ. ಜನನ, ಶೈಶವ, ಬಾಲ್ಯ, ತಾರುಣ್ಯ, ಯೌವನ, ಪ್ರೌಢ, ನಡುವಯಸ್ಸು, ಪ್ರಬುದ್ಧ, ಇಳಿವಯಸ್ಸು, ವೃದ್ಧಾಪ್ಯ, ಮರಣದ ವರೆಗಿನ ಪಯಣಕ್ಕೆ ದೇಹವೇ ವಾಹನ. ದೇಹ ಮತ್ತು ಮನಸ್ಸು, ದೇಹ ಮತ್ತು ಆತ್ಮ, ದೇಹದ ವಿಲೇವಾರಿ - ಇವೆಲ್ಲ ಸಂಕೀರ್ಣ ಸಮಸ್ಯೆಗಳು ನಮಗೆ. ಕೆಲವರ ದೇಹಗಳನ್ನು ಸತ್ತ ಮೇಲೂ ಕೆಡದಂತೆ ಕಾಪಿಡುವ ಕ್ರಮ ಕಾಣುತ್ತೇವೆ. ಭ್ರೂಣಗಳನ್ನು, ಪೂರ್ತಿ ಬೆಳೆಯದ, ಬೆಳೆದು ಬೇಡವೆನ್ನಿಸಿ ತೆಗೆದ, ಎರಡು ತಲೆಗಳ, ಎರಡು ದೇಹ ಒಂದೇ ತಲೆಯ, ಚಿತ್ರವಿಚಿತ್ರವಾದ ಭ್ರೂಣಗಳು. ಇವನ್ನೆಲ್ಲ ಪ್ರಿಸರ್ವ್ ಮಾಡಿಡಲಾದ ಒಂದು ಲ್ಯಾಬಿನಲ್ಲಿ ಅಥವಾ ಮ್ಯೂಸಿಯಮ್ಮಿನಲ್ಲಿ ಸುತ್ತು ಹೊಡೆಯುತ್ತಾ ಮನುಷ್ಯ ಜೀವನ, ಈ ಬದುಕು, ಉಸಿರೇ ಭಾರವಾಗಿರುವ ಈ ದೇಹ, ಪ್ರಿಸರ್ವೇಟಿವ್ ದ್ರಾವಣಗಳಲ್ಲಿ ತೇಲುತ್ತಿರುವ ದೇಹದ ಅಸ್ತಿತ್ವ - ದೇಹವಾಗಿ ಅಥವಾ ಆತ್ಮವಾಗಿ ಏನು ಎಂದೆಲ್ಲ ಯೋಚಿಸುತ್ತಾ…

ಅಪಘಾತದಲ್ಲಿ ಕತ್ತರಿಸಿ ತೆಗೆಯಲಾದ ಕೈ, ಕಾಲು, ಬೆರಳು ಎಲ್ಲದರ ಮೇಲೂ ಒಂದು ಅವಿನಾಭಾವ ಅನುಬಂಧ ಇರುವುದಿಲ್ಲವೆ? ಕಳಚಿ ಬಿದ್ದ ಹಲ್ಲಿನೊಂದಿಗೇ ಇರುವಾಗ !

ಅನುಬಂಧ ಯಾವುದರೊಂದಿಗೆ? ಶೇಷ ಶರೀರದೊಂದಿಗಾ, ಮನಸ್ಸಿನೊಂದಿಗಾ, ಆತ್ಮಕ್ಕಾ?

ಕತ್ತರಿಸಿ ತೆಗೆಯಲಾದ ದೇಹದ ಭಾಗಗಳು ಮತ್ತು ಆ ಭಾಗ ಲುಪ್ತವಾದ ದೇಹದೊಂದಿಗೆ ಬದುಕು ಮುಂದುವರಿಸಿದ ವ್ಯಕ್ತಿಯ ದೇಹದ ಭಾಗಗಳು ಹೊಂದಿರುವ ಪರಸ್ಪರ ದೈಹಿಕವಾದ, ಭೌತಿಕವಾದ ಒಂದು ಸಂಬಂಧ. ಮಾನಸಿಕವಾದ ಸಂಬಂಧ. ನಿದ್ದೆಯಲ್ಲಿ, ಮಂಪರಿನಲ್ಲಿ ಆ ಭಾಗವನ್ನು ಮನಸ್ಸು ಇದೆಯೆಂದೇ ನಂಬಿ ವರ್ತಿಸುವುದಂತೆ. ಸತ್ತ ಮೇಲೂ ಹಾಗೆಯೇ ಭಾವಿಸುವುದೆ? ಆತ್ಮದ ಪರಿಕಲ್ಪನೆಯಲ್ಲಿ ಅಡಿಗರು ಪರಿಪೂರ್ಣ ದೇಹ ಮತ್ತು ವೈಕಲ್ಯಕ್ಕೊಳಗಾದ ದೇಹದ ಹೊಂದಿಕೆಯಾಗುವುದು ಹೇಗೆ? Absence (ಗೈರು) ಕೂಡಾ ಬರು ಸಂಬಂಧದ ತಂತುವಿನೊಂದಿಗೆ ತೇಲುತ್ತಿರುವುದಿಲ್ಲವೆ? ಸುಡುವ ಹೂಳುವ ಕಾಲ ಬಂದಾಗ ಪ್ರಿಸರ್ವೇಟಿವ್ ದ್ರಾವಣದಲ್ಲೇ ಉಳಿದು ಬ ಈ ಭಾಗಗಳು ಧಾರ್ಮಿಕ ಒಡ್ಡುವ ಸವಾಲು, ಸಂಘರ್ಷ. ವಿಧಿವಿಧಾನಗಳಿಗೆ, ನಂಬುಗೆಗಳಿಗೆ ಇಲ್ಲ

ದೇಹ - ಮನಸ್ಸು - ಆತ್ಮಗಳ 'ಸಂಪೂರ್ಣ'ತ್ವದ ಸಂಬರದಲ್ಲಿ ವಿದಾಯದ ಹೀಗೆಲ್ಲ ಮಾಡಿದರೆ ಊನವುಂಟಾಗದೇ? ಮಣ್ಣಲ್ಲಿ ಹೂತು (ಬೀಜ ನೆಟ್ಟಂತ ಬಿಟ್ಟ, ಮನ ಎಂದರು ಬೇಂದ್ರೆ) (ಮಣ್ಣು ಸೇರಿತು ಬೀಜ ಎನ್ನುತ್ತಾರೆ ನುಗಡೋಣಿ) ಅಥವಾ ಬೆಂಕಿಯಲ್ಲಿ ಸುಟ್ಟು ಅಥವಾ ಪಕ್ಷಿಗಳಿಗೆ ಆಹಾರವಾಗಿ ಪಂಚಭೂತಗಳೊಂದಿಗೆ ಲೀನವಾಗಬೇಕಾದ ದೇಹವೊಂದು ಇಲ್ಲದೆ ಆತ ಪ್ರಸವವೆ ಚಿತ್ರಗುಪ್ತನ ಎದುರು ಪಂಚನಾಮೆಗೆ ಹಾಜರಾಗುವುದಾದರೂ ಹೇಗೆ? ಕ್ರಿಶ್ಚಿಯನ್ನರಲ್ಲೂ ಇಂಥದ್ದಕ್ಕೆ ಸಂವಾದಿಯಾದ ಕಲ್ಪನೆ, ನಂಬುಗೆಗಳಿವೆ.

ಇಡಿಯಾದ ವಾಹನವಿಲ್ಲದೇ ಪಯಣ ಪರಿಪೂರ್ಣವಾಗುವುದೆ?

ಇಡೀ ದೇಹವನ್ನು ಪ್ರದರ್ಶನಕ್ಕೆ ಸಜ್ಜುಗೊಳಿಸಿ ಶಾಶ್ವತವಾಗಿ ಉಳಿಸಿಕೊಂಡ ಪ್ರಸಂಗಗಳಿವೆಯಲ್ಲ. ಅಪರಕ್ರಿಯೆಯಿಂದ ವಂಚಿತವಾದ ಅವುಗಳ ಆತ್ಮಗಳು, ಅಂಥದ್ದು ಇದ್ದರೆ, ಅವು ಅತಂತ್ರಗೊಳ್ಳುತ್ತವೆಯೆ? ಅವುಗಳಿಗೆ ಶಾಸ್ತ್ರಗಳು ಹೇಳುವ ಮುಕ್ತಿ ಇಲ್ಲವೆ? ಕುಟುಂಬಸ್ಥರು ತಮ್ಮ ಪೂರ್ವಜರ ಈ ದೇಹಗಳನ್ನು ನಮಗೆ ಮರಳಿಸಿ ಎಂದು ಹಕ್ಕು ಮಂಡಿಸಬಹುದೆ?

ದೇಹದಾನ, ನೇತ್ರದಾನ, ಕಿಡ್ನಿದಾನ - ಎಲ್ಲದರ ವಿಚಾರ ಹೇಗೆ ಹಾಗಾದರೆ? ಈ ದೇಹದ ಮೇಲಿನಹಕ್ಕು ನಮಗೇ ಸೇರಿದೆ ಎನ್ನುವುದು ಖಾತ್ರಿಯೆ? ಈ ದೇಹವನ್ನು ನಮಗೆ ಹೇಗೆ ಸರಿಯೆನ್ನಿಸುತ್ತದೆಯೋ ಹಾಗೆ ವಿಲೇವಾರಿ ಮಾಡುವ ಅಧಿಕಾರ ನಮಗಿದೆಯಾ? ವಾಹನ ಮಾರಿಕೊಂಡು ಕೂತರೆ ಪಯಣ ಸಾಗುವುದು ಹೇಗೆ, ಗುರಿ ಮುಟ್ಟುವುದು ಹೇಗೆ, ಯಾವಾಗ? ಪೆಟ್ರೋಲು ಮುಗಿಯಿತು ಅಂತ ವಾಹನ ಪರಿತ್ಯಜಿಸಲು ಬರುವುದೆ?’ (ಪು. 113-14)

ಈ ರೀತಿಯ ಬದುಕಿನ ಜಿಜ್ಞಾಸೆಯನ್ನು ಪುಸ್ತಕದುದ್ದಕ್ಕೂ ಕಾಣುತ್ತೇವೆ. ಈ ಬರಹಗಳು ಜಗತ್ತಿನ ಕೃತಿಯನ್ನು ಮಾತ್ರ ಕನ್ನಡಕ್ಕೇ ದಾಟಿಸುವುದಿಲ್ಲ. ಕೃತಿಗಳು ಬದುಕನ್ನು ಹೇಗೆ ರೂಪಿಸುತ್ತವೆ ಎಂಬ ಗಾಢ ಚಿಂತನೆಯನ್ನು ಮಾಡುತ್ತವೆ. ಈ ಕೃತಿಗಳ ಪರಿಮಳವನ್ನು ನಾಡಿಗೆ ಪೂಸಿಸಿದ್ದಾರೆ. ಇದರಿಂದ ಪ್ರೇರಣೆ ಪಡೆದುಕೊಂಡು ಕನ್ನಡ ಕಥನ ಹೊಸ ಮಾದರಿಗಳನ್ನು ಹುಟ್ಟು ಹಾಕಿದರೆ ಇವರ ಈ ಶ್ರಮದಾಯಕ ವಿಮರ್ಶೆ ಸಾರ್ಥಕವಾಗುತ್ತದೆ. ಇಡೀ ಕೃತಿಯ ಆಶಯವೂ ಇದಾಗಿದೆ. ಇವರ ವಿಮರ್ಶೆಯೂ ಪರಿಭಾಷೆಗಳಿಂದ ಭಾರವಾಗುವುದಿಲ್ಲ. ಕಥನದಂತೆ ಓದಿಸಿಕೊಂಡು ಹೋಗುತ್ತದೆ. ಇದೊಂದು ವಿಮರ್ಶೆಯ ಹೊಸ ಮಾದರಿ ಆಗಿದೆ.

- ಹಳೆಮನೆ ರಾಜಶೇಖರ
ಕನ್ನಡ ವಿಭಾಗ
ಶ್ರಿ ಧ. ಮಂ. ಕಾಲೇಜು(ಸ್ವಾಯತ್ತ), ಉಜಿರೆ
9008528112

ಈ ಅಂಕಣದ ಹಿಂದಿನ ಬರಹಗಳು:
ಆದಿಪುರಾಣ – ವೈಭೋಗ ಮತ್ತು ವೈರಾಗ್ಯದ ತಾತ್ವಿಕತೆ
ನಳ ಚರಿತ್ರೆ : ಪ್ರೇಮದ ಅವಿಷ್ಕಾರ
ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ
ಧರ್ಮಾಧಿಕಾರದ ಆಶಯಗಳು

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ
ಘಾಂದ್ರುಕ್ ಕಾದಂಬರಿ: ಜೀವನ ಮುಕ್ತಿಯ ಶೋಧ
ಧನಿಯರ ಸತ್ಯನಾರಾಯಣ ಕತೆಃ ಕಾಲಮಾನದ ಶೋಷಣೆಯ ಸ್ವರೂಪ
ಸಾಲಗುಂದಿ ಗುರುಪೀರಾ ಖಾದರಿ ತತ್ವಪದಗಳಲ್ಲಿ ಬದುಕಿನ ಚಿಂತನೆ
ಇದ್ದೂ ಇಲ್ಲದ್ದೂಃ ಪರಂಪರೆಯ ಸಾತತ್ಯ ಹಾಗೂ ದೇವರ ಬಿಕ್ಕಟ್ಟಿನ ಕಥನ
ಕಾಂತಾವರ ಕನ್ನಡ ಸಂಘದ ಕನ್ನಡ ಕಾಯಕ
`ಹೆಣ್ತನದ’ ಕತೆಗಳು
ಡಾ. ಪೂವಪ್ಪ ಕಣಿಯೂರು ಸಂಶೋಧನೆಗಳು: ಜಾನಪದೀಯ ಬಹು ಪ್ರಮಾಣಗಳ ಆಖ್ಯಾನ
ಡಾ. ಮಲ್ಲಿಕಾ ಘಂಟಿ ಕಾವ್ಯ: ಪುರುಷ ಪ್ರಮಾಣಗಳ ಭಂಜನ
ಡಾ. ಚೇತನ ಸೋಮೇಶ್ವರ ಕವಿತೆ `ಹೊಸ ನುಡಿಗಟ್ಟಿನ ಲಯಗಳು'
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು

 

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...