ಕನ್ನಡಿಗರ  ದುಸ್ಥಿತಿ: ಆತ್ಮಾವಲೋಕನಕ್ಕೆ ಆಹ್ವಾನಿಸುವ ‘ಸ್ವರ್ಗದೋಲೆಗಳು’


ಕನ್ನಡತನದ ಅಭಾವದೊಂದಿಗೆ ಕನ್ನಡದ ಶ್ರೇಷ್ಠ ಸಾಹಿತ್ಯವು ಅಧೋಗತಿಗೆ ತಲುಪುವ ಹೀನಾಯ ಸ್ಥಿತಿಯನ್ನು ಸುಮಾರು 75 ವರ್ಷಗಳ ಹಿಂದೆಯೇ ಊಹಿಸಿ, ‘ಕರ್ನಾಟಕದ ಜಾನಪದ ರತ್ನ’ ಸಿಂಪಿ ಲಿಂಗಣ್ಣಅವರು ಬರೆದ ‘ಸ್ವರ್ಗದೋಲೆಗಳು’ ಕೃತಿಯು, ಇಂದಿನ ಕರ್ನಾಟಕ- ಕನ್ನಡ- ಕನ್ನಡಿಗ- ಕನ್ನಡತನ’ ದುಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಕನ್ನಡಿಗರ ಸ್ವಾಭಿಮಾನ ಬಡಿದೆಬ್ಬಿಸಲು, ಸ್ವರ್ಗದಲ್ಲಿರುವ ಶ್ರೇಷ್ಠ ಕನ್ನಡ ಕವಿ-ಶರಣರ ಅಂತರಂಗದ ಕರೆಯಾಗಿ ಲೇಖಕರು ಬರೆದ ಓಲೆಗಳು ‘ಆತ್ಮಾವಲೋಕನ’ ಕ್ಕೆ ಆಹ್ವಾಸುತ್ತಿವೆ. ಈ ಕುರಿತು ಪತ್ರಕರ್ತ ವೆಂಕಟೇಶ ಮಾನು ಅವರು ವಿಶ್ಲೇಷಿಸಿದ್ದು ಹೀಗೆ;

ಪರಿಶುದ್ಧ ಮನಸ್ಸುಗಳ ಹಾರೈಕೆಗಳು ಅವರ ನಿಧನಾ ನಂತರವೂ ಜೀವಂತವಾಗಿರುತ್ತವೆ. ಮಾತ್ರವಲ್ಲ; ಆ ಹಾರೈಕೆಗಳು ಸಾಕಾರಗೊಳ್ಳಲು ಹಂಬಲಿಸುತ್ತವೆ. ಅವರ ಈ ಎಲ್ಲ ಆಶಯಗಳು, ಉದ್ದೇಶಗಳು ಹೇಗೆ ಶಾಶ್ವತವಾಗಿ ಜೀವಂತವಾಗಿರಿಸಬೇಕು ಎಂಬುದನ್ನು ಅವರು ತಮ್ಮ ಕೊನೆ ಉಸಿರು ಇರುವವರೆಗೂ ಬದುಕಿ ತೋರುತ್ತಾರೆ. ಅವರ ಸಾಹಿತ್ಯದಲ್ಲೂ ಬದುಕಿನ ಉದ್ದೇಶಗಳನ್ನೇ ಪ್ರತಿಪಾದಿಸಿರುತ್ತಾರೆ. ಭೌತಿಕವಾಗಿ ಬದುಕು ತನ್ನ ಅಸ್ತಿತ್ವ ಕಳೆದುಕೊಂಡ ನಂತರವೂ ತಾವು ಬರೆದ ಶ್ರೇಷ್ಠ ಸಾಹಿತ್ಯದ ಮೂಲಕ ಸಾರ್ವಜನಿಕರ ಬದುಕು ಉಸಿರಾಡಬೇಕು ಎಂಬುದು ಅವರು ಬಯಸುತ್ತಾರೆ.

-ಇದು, ಜನ್ಮ-ಪುನರ್ಜನ್ಮ, ಸಾವಿನ ನಂತರ ಮುಂದೇನು?....ಇಂತಹ ವಿಷಯಗಳನ್ನು ಒಳಗೊಂಡ ಬರಹವಿದಲ್ಲ; ಸತ್ಯವಂತರ ನೀನು ಸತ್ತರೆಂದೆನಬೇಡ’ ಎಂಬ ಸರ್ವಜ್ಞನ ಮಾತೂ ಇದನ್ನೇ ಹೇಳುತ್ತದೆ. ಜಗತ್ತಿನ ಯಾವುದೇ ದೇಶದ ಶ್ರೇಷ್ಠ ಸಾಹಿತ್ಯಕ್ಕೆ ಸರಿಗಟ್ಟುವ ಕನ್ನಡ ಸಾಹಿತ್ಯದ ಸಿರಿವಂತಿಕೆಯು ತನ್ನ ಘನತೆಯನ್ನು ಕಳೆದುಕೊಳ್ಳಬಾರದು. ಕರ್ನಾಟಕ-ಕನ್ನಡ-ಕನ್ನಡಿಗ ಈ ಎಚ್ಚರಿಕೆಯನ್ನು ಸದಾ ಹೊಂದಿರಬೇಕು. ಶ್ರೀಮಂತ ಇತಿಹಾಸದ ಅರಿವಿಲ್ಲದ ದರಿದ್ರರಂತೆ ಅಭಿಮಾನಗೇಡಿಗಳಾಗಬಾರದು ಎಂಬ ಎಚ್ಚರಿಕೆ ನೀಡುವುದೂ ಸಹ ಈ ಪರಿಶುದ್ಧ ಮನಸ್ಸುಗಳ ಕನ್ನಡ ಸಾಹಿತ್ಯ ಶ್ರೇಷ್ಠರ ಆಶಯವೂ ಆಗಿದೆ.

ಈ ಹಿನ್ನೆಲೆಯಲ್ಲಿ, ಪಂಪ-ಹರಿಹರ-ರಾಘವಾಂಕ, ಚೆನ್ನಬಸವಣ್ಣ, ಬಸವಣ್ಣ, ಅಕ್ಕ ಮಹಾದೇವಿ, ಸಿದ್ಧರಾಮ, ಶಾಂತಕವಿ ಇಂತಹವರ ಪೈಕಿ ಒಬ್ಬರೂ ಈ ಭೂಮಿಯ ಮೇಲಿಲ್ಲ. ತಮ್ಮ ಸಾಹಿತ್ಯ ಸಾಧನೆಗೆ ಕನ್ನಡವನ್ನು ಉಸಿರಾಡಿದವರು. ತಮ್ಮಂತೆ ಕನ್ನಡದ ಮುಂದಿನ ಪೀಳಿಗೆಯೂ ಕನ್ನಡತನವನ್ನು ಬಿಟ್ಟುಕೊಡಬಾರದು ಎಂದು ಆಶಿಸಿದವರು. ಕನ್ನಡ ಸಾಹಿತ್ಯ ಶ್ರೀಮಂತಿಕೆಯ ವೃದ್ಧಿಗೆ ಅವರು ನೀಡಿದ ಕೊಡುಗೆ ಹಾಗೂ ಅವರ ಹಾರೈಕೆಗಳನ್ನು ಸಾಕಾರಗೊಳಿಸುವ ಗುರುತರ ಹೊಣೆಗಾರಿಕೆ ಇವತ್ತಿನ ಕರ್ನಾಟಕ-ಕನ್ನಡ-ಕನ್ನಡಿಗರ ಮೇಲೆ ಇದೆ. ಆದರೆ., ಇವರ ಸಾಹಿತ್ಯ -ಆಶಯಗಳಿಗೆ ವಿರುದ್ಧವಾಗಿ ವರ್ತಿಸುವ ಇಂದಿನ ಕನ್ನಡಿಗರ ನಡೆಯನ್ನು ಎಚ್ಚರಿಸಲೆಂದು 75 ವರ್ಷಗಳ ಹಿಂದೆ ಜಾನಪದೀಯ ಶ್ರೇಷ್ಠ ಸಾಹಿತಿ ಸಿಂಪಿ ಲಿಂಗಣ್ಣ ‘ಸ್ವರ್ಗದೋಲೆಗಳು’ ಕೃತಿಯನ್ನು ರಚಿಸಿದ್ದು, ಈ ಕೃತಿಯು ಕನ್ನಡಿಗರನ್ನು ಆತ್ಮಾವಲೋಕನಕ್ಕೆ ಆಹ್ವಾನಿಸುವಂತಿದೆ.

ಗೌರವ ಸ್ವೀಕಾರ ಅರ್ಹತೆ ಇದೆಯೇ? ಕನ್ನಡಿಗರು ಶ್ರೀಮಂತ ಇತಿಹಾಸ ಹೊಂದಿದ್ದು, ‘ಕುರಿತೋದೆದೆಯಂ ಕಾವ್ಯ ಪರಿಣಿತ ಮತಿಗಳ್’ ಎಂದು ಗೌರವಭರಿತ ಭಾವದಿಂದ ಕನ್ನಡಿಗರನ್ನುಓಲೆ ಬರೆಯುವ ಮೂಲಕ ತಮ್ಮ ಸಭ್ಯ ನಡತೆಯ ಶ್ರೀಮಂತ ಸಂಸ್ಕೃತಿಯನ್ನು ತೋರಿದ್ದು ಹೀಗೆ; ‘ಅಣ್ಮುಕುಲದ ಕನ್ನಡಿಗರೇ (ಪಂಪ), ಪಂಪಾಪತಿಯ ಪ್ರತಿನಿಧಿ ಸ್ವರೂಪರಾದ ಕನ್ನಡಿಗರೇ (ಹರಿಹರ), ಕನ್ನಡ ನಾಡಿನ ಉದಯೋನ್ಮುಖ ತರುಣರೇ (ರಾಘವಾಂಕ), ಶ್ರೀ ಯದುಶೈಲದೊಡೆಯನ ಒಡವೆಯೆನಿಸಿದ ಕನ್ನಡಿಗರೇ (ಚಿಕದೇವರಾಜ), ಕನ್ನಡದ ಸಿಡಿಲಾಳುಗಳೇ (ಕುಮಾರವ್ಯಾಸ), ಕವಿಚೂತಸ್ವರೂಪರಾದ ಕನ್ನಡಿಗರೇ (ಲಕ್ಷ್ಮೀಶ), ಕನ್ನಡ ನಾಡಿನ ಕಪಿಲಸಿದ್ಧ ಮಲ್ಲಿಕಾರ್ಜುನನ ಮಕ್ಕಳೇ (ಸಿದ್ಧರಾಮ), ಕೂಡಲ ಚೆನ್ನ ಸಂಗಮನ ಕನ್ನಡಿಗರೇ (ಚೆನ್ನ ಬಸವಣ್ಣ), ಕನ್ನಡದ ತಂದೆಗಳಿರಾ (ಹೊನ್ನಮ್ಮ), ಕನ್ನಡ ನಾಡಿನ ನಿರಂಜನಸಿದ್ಧ ಸ್ವರೂಪೆರಾದ ಕನ್ನಡಿಗರೇ (ರತ್ನಾಕರ ವರ್ಣಿ), ನನ್ನ ನೆಚ್ಚಿನ ಕನ್ನಡಿಗರೇ (ಸರ್ವಜ್ಞ), ನನ್ನ ನೆಚ್ಚಿನ ಹೊಸಗಾಲದ ಕನ್ನಡಿಗರೇ (ಮುದ್ದಣ್ಣ), ಕನ್ನಡ ರಾಜ್ಯಲಕ್ಷ್ಮಿ, ಭುವನೇಶ್ವರಿಯ ಅಕ್ಕರೆಯ ಮಕ್ಕಳೇ (ಶಾಂತಕವಿ), ಗುಹೇಶ್ವರ ಲಿಂಗ ಸ್ವರೂಪಿ ಕನ್ನಡಿಗರೇ (ಅಲ್ಲಮಪ್ರಭು), ನನ್ನ ಭಕ್ತ ಬಾಂಧವರೇ (ಬಸವಣ್ಣ), ಅಣ್ಣಂದಿರಾ (ಅಕ್ಕ ಮಹಾದೇವಿ), ನನ್ನ ಕನ್ನಡ ಕುವರರೇ (ವಿದ್ಯಾರಣ್ಯ), ಕನ್ನಡ ನಾಡಿನ ಹರ-ಮುರಹರ ಸಂತಾನರೇ (ಕನಕ), ನನ್ನ ದೇಶಬಾಂಧವರೇ (ಟಿಪ್ಪು), ಕನ್ನಡದ ಮರಿಸಿಂಹಗಳಿರಾ (ಚೆನ್ನಮ್ಮರಾಣಿ) ಹೀಗೆ ಸಂಬೋಧಿಸಿ ಓಲೆಗಳನ್ನು ಬರೆದಿದ್ದು, ಇಂದು ಕನ್ನಡಿಗರು, ಈ ಗೌರವವನ್ನು ಸ್ವೀಕರಿಸುವ ಅರ್ಹತೆ ಉಳಿಸಿಕೊಂಡಿದ್ದಾರೆಯೇ?

ಕನ್ನಡ ಸಂಸ್ಕೃತಿಯ ಮೌಲ್ಯಗಳ ನೆನಪಿಸಿದ ಪರಿ: ಜೀವನಕ್ಕೆ ಪೌರುಷ ಸುಧೆಯನ್ನು ಕುಡಿಸುವ ಸಾಹಿತ್ಯ ಬೇಕು. ಅಂತಹ ಸಾಹಿತ್ಯದ ನಿರ್ಮಾಣ ಬೇಕಿದೆ (ಪಂಪ), ಜೀವನವು ಹಿರಿದಾಗದಿದ್ದರೆ ಸಾಹಿತ್ಯವು ಹಿರಿದಾಗದು (ಹರಿಹರ), ಯಾವುದೇ ಭಾಷೆ ಓದಿ, ಅನುಕರಿಸಿ, ಅನುಸರಿಸಿ, ಆದರೆ, ಕನ್ನಡದ ಕೆಚ್ಚಿನಿಂದ ಕನ್ನಡದ ಉಸಿರಲ್ಲಿ ಸಾರಬೇಕು (ರಾಘವಾಂಕ), ಜೀವನ ಕೃಷಿ ಮಾಡಿರಿ; ಅದೇ ದಿವ್ಯ ಕರ್ಮ. ಅಂತಹ ಜೀವನವು ಕನ್ನಡಿಗರಿಗೆ ಬೇಕಾಗಿದೆ (ಕುಮಾರ ವ್ಯಾಸ), ಚಿತ್ತ ಸಮತೆ ಕನ್ನಡಿಗರಲ್ಲಿ ಕಾಣಿಸಿಕೊಂಡ ದಿನವೇ ಕನ್ನಡಿಗರ ಕತ್ತಲೆಯ ರಾತ್ರಿ ಕಳೆದು ಹಗಲು ಕಾಣಿಸಿಕೊಳ್ಳುವುದು (ಸಿದ್ಧರಾಮ), ಮಹಾಕಾವ್ಯಗಳನ್ನು ರಚಿಸಿ, ಕನ್ನಡ ಕುಲವನ್ನು ಹೊಸ ತಳಹದಿಯ ಮೇಲೆ ಕಟ್ಟಬೇಕು (ಲಕ್ಷ್ಮೀಶ), 12ನೇ ಶತಮಾನದ ಶರಣರ ಆಂದೋಲನದಿಂದ ಉಂಟಾದ ವಿಫುಲ ಆಸ್ತಿಯು ಕನ್ನಡಿಗರಿಗೆ ಸೇರಿದ್ದು, ಅದೇ ಮುಂದಿನ ದಾರಿಗೆ ಸೊಗಸಾದ ಬುತ್ತಿ (ಚೆನ್ನಬಸವಣ್ಣ), ಕನ್ನಡ ವಿರಾಟ ಪುರುಷನ ಅರ್ಧ ಶರೀರವು ಮಹಿಳೆಯದ್ದು (ಹೊನ್ನಮ್ಮ), ಹದಿನೆಂಟೇಕೆ, ನೂರೆಂಟು ಜಾತಿಗಳಿರಲಿ, ಕನ್ನಡಿಗರಿಗೆ ಇರುವುದು ಒಂದೇ ಕುಲ-ಅದು ಕನ್ನಡ ಕುಲ (ಸರ್ವಜ್ಞ), ಕನ್ನಡಿಗರೇ, ಮೇವು ಹಾಕಿ ಮುಗದಾಣ ಹಿಡಿದಂತೆ ಉತ್ತಮ ಸಾಹಿತಿಗಳನ್ನು ಸಾಯ ಹೊಡೆಯಬೇಡಿರಯ್ಯ (ಮುದ್ದಣ್ಣ), ಕರ್ನಾಟಕವು ನಿನ್ನ ವಸ್ತು, ಅದು ಆತ್ಮಸ್ಫೂರ್ತಿಯ ತೇಜ. ಅದು ಕಂಡವನ ಮೊಗದಲ್ಲಿ ಕಳೆ, ಧೃತಿ ಮನದಲ್ಲಿ, ಬಲ ಮೈಯ್ಯಲ್ಲಿ (ಶಾಂತಕವಿ), ಶರಣರ ಕಾಲವನ್ನು, ಕಲ್ಯಾಣದ ಸಮೃದ್ಧಿಯನ್ನು ಮತ್ತೊಮ್ಮೆ ನೋಡಬೇಕಿದೆ. ಆಗಲೇ, ಕನ್ನಡ ನಾಡಿನ ಪುನರುದ್ಧಾರದ ಮಂತ್ರ (ಅಲ್ಲಮಪ್ರಭು), ಕನ್ನಡಿಗರ ಮನಸ್ಸು ಒಡೆದು ಸಾವಿರಾರು ತುಣುಕುಗಳಾಗಿವೆ. ಕನ್ನಡಕ್ಕೆ ಹೃದಯವಿಲ್ಲವಾಗಿ ಉಚ್ಛ ಭಾವನೆಗೆ ಸ್ಥಳ ಸಿಗಲೊಲ್ಲದು (ಬಸವಣ್ಣ), ಕನ್ನಡಿಗರೆಲ್ಲರೂ ಒಂದಾಗಿ ಕನ್ನಡ ಕಟ್ಟಲೆಳಸುವವರಿಗೆಲ್ಲ ಒಂದೇ ಕುಲವಿರಬೇಕು (ಅಕ್ಕಮಹಾದೇವಿ), ಕನ್ನಡ ಕುಲದ ಅರಿವು ಕನ್ನಡಿಗರಿಗೆ ಆಗಬೇಕು (ವಿದ್ಯಾರಣ್ಯ), ನಾನು ಹೇಳಿಕೇಳಿ ಬೇಡ, ಬೇಡ ಎಂದರೂ ಬಿಡುವವನಲ್ಲ; ನನ್ನ ಮುಂಡಿಗೆ ಕೇಳಿಸಿಯೇ ಬಿಡಬೇಕೆಂದವನು (ಕನಕ) ಕನ್ನಡಿಗರೇ ನನ್ನ ಮೇಲೆ ವಿಶ್ವಾಸವಿಡಿರಿ.ನಾನು ಜಾತ್ಯಂಧನಲ್ಲ (ಟಿಪ್ಪು), ಕನ್ನಡ ಕುವರರು ಧ್ಯೇಯವಾದಿಗಳಾಗಲಿ; ಆಗಲೇ ನಾಡಿನ ಉನ್ನತದ ದಿಸೆಯು ನಿಚ್ಚಳವಾಗುವುದು (ಚೆನ್ನಮ್ಮ ರಾಣಿ) .

ಶ್ರೀಮಂತ ಇತಿಹಾಸ ಮರೆತು, ಅದಕ್ಕಾಗಿ ಶ್ರಮಿಸಿದ ವೀರ-ಶೂರ-ಧೀರರ ಮರೆತು, ಅವರ ಸಾಹಿತ್ಯ ಕಡೆಗಣಿಸಿ, ಮನಬಂದಂತೆ ವರ್ತಿಸುವ ಇಂದಿನ ಕನ್ನಡಿಗರಿಗೆ ಈ ಓಲೆಗಳನ್ನು ಬರೆದು‘ಕನ್ನಡಿಗತನ’ ಬಿಟ್ಟುಕೊಡದಂತೆ ಎಚ್ಚರಿಸಿದ್ದಾರೆ. ಕನ್ನಡ ಸಂಸ್ಕೃತಿ-ಸಾಹಿತ್ಯದ ಘನತೆಯನ್ನು ನೆನಪಿಸಿದ್ದು, ಅದನ್ನು ಉಳಿಸಿ-ಬೆಳೆಸಿಕೊಂಡು ಹೋಗುವತ್ತ ಕನ್ನಡಿಗರ ಹೊಣೆಗಾರಿಕೆಯನ್ನು ಪದೇ ಪದೆ ಈ ಓಲೆಗಳ ಮೂಲಕ ಲೇಖಕರು ಎಚ್ಚರಿಸಿದ್ದಾರೆ.

ಸಿಂಪಿ ಲಿಂಗಣ್ಣನವರ ಕನ್ನಡ ಕಳಕಳಿ, ಸಾಹಿತ್ಯ ಅಭಿಮಾನ : 1982ರಲ್ಲೇ, ಆರನೇ ಆವೃತ್ತಿಯಾಗಿ ಈ ಕೃತಿಯನ್ನು(ಪುಟ: 132) ಕರ್ನಾಟಕ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದೆ. 1956ರಲ್ಲಿ, ಈ ಕೃತಿಗೆ ಮುಂಬೈ ಸರ್ಕಾರ ಬಹುಮಾನ ನೀಡಿ ತನ್ನ ಗೌರವವನ್ನು ಹೆಚ್ಚಿಸಿಕೊಂಡಿತ್ತು. 75 ವರ್ಷಗಳ ಹಿಂದೆ, ಕನ್ನಡ ನಾಡು, ಕನ್ನಡತನ, ಕನ್ನಡ ಸಾಹಿತ್ಯದ ಅಧೋಗತಿಯನ್ನು ಲೇಖಕರು ಊಹಿಸಿದ್ದು ಗಮನಾರ್ಹ. ಶ್ರೇಷ್ಠ ಸಾಹಿತ್ಯ ರಚಿಸಿದ ಎಲ್ಲ ಕವಿ-ಶರಣರಿಗೆ ಮಾಡುತ್ತಿರುವ ಅಪಮಾನ ಎಂದು ಅಂತರಂಗದ ದುಃಖಕ್ಕೆ ಮಿಡಿದು, ಸ್ವರ್ಗದಲ್ಲಿರುವ ಎಲ್ಲ ಕವಿ-ಶರಣರ ಮೂಲಕವೇ ಕನ್ನಡಿಗರಿಗೆ, ಕನ್ನಡದ ಶ್ರೀಮಂತ ಇತಿಹಾಸವನ್ನು ನೆನಪಿಸಿ, ಅದನ್ನು ಉಳಿಸಿಕೊಂಡು ಹೋಗುವ ಗುರುತರ ಹೊಣೆಗಾರಿಕೆಯನ್ನು ಎಚ್ಚರಿಸಿದ್ದಾರೆ. ಪ್ರತಿ ಓಲೆಯಲ್ಲಿ ಆಯಾ ಕವಿ-ಶರಣರ ಸಾಹಿತ್ಯಕ ಸಾಧನೆಯೊಂದಿಗೆ ಅವರ ಆಶಯಗಳು ಕನ್ನಡಿಗರ ಆಶಯಗಳಾಗಬೇಕು ಎಂದೂ ಲೇಖಕರು ಬಯಸಿದ್ದಾರೆ. ಇಂತಹ ಮನೋಧರ್ಮವು ಲೇಖಕರ ಕನ್ನಡ ಕಳಕಳಿ ಹಾಗೂ ಸಾಹಿತ್ಯದ ಅಭಿಮಾನದ ದ್ಯೋತಕವಾಗಿದೆ. ಈ ಸ್ವರ್ಗದೋಲೆಗಳ ಆಶಯಗಳ ಪೈಕಿ ಒಂದಾದರೂ ಸಾಕಾರಗೊಳಿಸಿದ್ದೇವೆಯೇ, ಎನ್ನುವುದು ಪ್ರಶ್ನೆ.

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ

19-04-2024 ಬೆಂಗಳೂರು

‘ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ...