ಕಾರೇಹಣ್ಣಿನ ನಂತರ ಫೀ ಫೋ 


ಸಾಮಾನ್ಯವಾಗಿ ಪುಸ್ತಕ ಹೊರತರುವ ವಿಚಾರದಲ್ಲಿ ಮೊದಲನೆಯದು ಹೂವು ಎರಡನೆಯದು ಹೆಣಭಾರದ್ದಾಗಿರುತ್ತದೆ. ನನಗೂ ಹಾಗೆ ಅನಿಸುತ್ತಿತ್ತು. ಈಗ ಹಿನ್ನೋಟಕ್ಕೆ ಹೊರಳಿದಾಗ, ಫೀಫೋ ಮೊದಲ ಸಂಕಲನದ ಮುಕ್ಕಾಲು ಸಮಯದಲ್ಲಿ ಸಿದ್ಧವಾಗಿದೆ! ಎನ್ನುತ್ತಾರೆ ಲೇಖಕ ಮಧುಸೂದನ ವೈ ಎನ್. ಅವರು ತಮ್ಮ ಎರಡನೇ ಕಥಾ ಸಂಕಲನ ‘ಫೀ ಫೋ’ ದಲ್ಲಿ ಬರೆದ ಲೇಖಕನ ನುಡಿಗಳ ಜೊತೆ ಕಥೆಯೊಂದರ ಆಯ್ದ ಭಾಗ ಇಲ್ಲಿದೆ..

ಲೇಖಕ: ಮಧುಸೂದನ ವೈ ಎನ್
ಕೃತಿ: ಫೀ ಫೋ
ಪುಟಗಳು: 168
ಬೆಲೆ: 200
ಮುದ್ರಣ: 2021
ಪ್ರಕಾಶಕರು: ಬಹುರೂಪಿ

ಲೇಖಕರ ಮಾತು:

ಫೀಫೋ ಎಂಬುದು ಕಂಪ್ಯೂಟರ್ ಶಬ್ಧಕೋಶದಲ್ಲಿ ಬರುವ ಪದ. FIFO(first in first out), ಅಂದರೆ ಸರತಿಯಲ್ಲಿ ಮೊದಲು ನಿಂತದ್ದು ಮೊದಲು ಹೊರಗೆ ಬರುತ್ತದೆ ಎಂದರ್ಥ. ಇದಕ್ಕೆ ಪರ್ಯಾಯವಾಗಿ LIFO(Last in first out) ಎಂಬುದೂ ಇದೆ. ಅಂದರೆ ಒಂದರ ಮೇಲೊಂದು ಪೇರಿಸಿದ್ದ ರಾಶಿಯಲ್ಲಿ ಕೊನೆಗೆ ಸೇರಿಸಿದ್ದನ್ನಷ್ಟೆ ಮೊದಲು ಹೊರತೆಗೆಯಬಹುದು ಎಂದು.

ನಮ್ಮ ನೆನಪುಗಳು,ಅನುಭವಗಳು ಗಣಿಯಲ್ಲಿನ ಖನಿಜವಿದ್ದಂತೆ. ಆಯಾ ವಯಸಿಗೆ ತಕ್ಕಂತೆ ಮನಸಿನಲ್ಲಿ ಒಂದರ ಮೇಲೊಂದು ಪೇರಿಸಿಕೊಂಡಿರುತ್ತವೆ. ಈ ಖನಿಜವನ್ನು ಹೊರತೆಗೆಯಲು ಬೃಹತ್ತಾದ ಮನೋ ಶಿಖರವನ್ನು ಆಳ ಅಗೆಯಬೇಕು. ಯಾವ ದಿಕ್ಕಿನಿಂದ ಆರಂಭಿಸುವುದು? ಬರಹಗಾರರೆಲ್ಲರ ದೊಗೆಯುವ ಬಗೆಯಲ್ಲಿ ಗುರುತಿಸುವಂತಹ ಪ್ಯಾಟರ್ನ್‌ ಉಂಟೇ?

ಒಂದರ ಮೇಲೊಂದು ಪೇರಿಸುವಾಗ LIFO ಪ್ಯಾಟರ್ನ್‌ ಕಂಡುಬಂದರೂ ಬಗೆಯುವುದು ಮಾತ್ರ FIFO ಸ್ವರೂಪದ್ದಾಗಿರುತ್ತದೆ ಎಂದು ನನ್ನ ಸಧ್ಯದ ಗ್ರಹಿಕೆ. ಅಲ್ಲೊಂದು ಇಲ್ಲೊಂದು ಪವಾದವಿದ್ದಿರಬಹುದು, ಒಟ್ಟಾರೆ ಹೇಳುತ್ತಿರುವೆ. ಮತ್ತು ಇದು ಹೊಸ ಅವಿಷ್ಕಾರವೇನಲ್ಲ, ಈ ಹಿಂದೆ ಬಂದುಹೋಗಿರುವ ಸಾಹಿತ್ಯಿಕ ವಿಮರ್ಶೆಗಳು ಗುರುತಿಸಿರುವುದನ್ನು ಕಂಪ್ಯೂಟರಿನ ಭಾಷೆಯಲ್ಲಿ ಹೇಳಿದನಷ್ಟೆ. ಈ ಸಂಕಲನಕ್ಕೆ ಫೀಫೋ ಎಂದು ಹೆಸರಿಟ್ಟಿರುವ ಉದ್ದೇಶ ಇದು.

ಸಾಮಾನ್ಯವಾಗಿ ಪುಸ್ತಕ ಹೊರತರುವ ವಿಚಾರದಲ್ಲಿ ಮೊದಲನೆಯದು ಹೂವು ಎರಡನೆಯದು ಹೆಣಭಾರದ್ದಾಗಿರುತ್ತದೆ. ನನಗೂ ಹಾಗೆ ಅನಿಸುತ್ತಿತ್ತು. ಈಗ ಹಿನ್ನೋಟಕ್ಕೆ ಹೊರಳಿದಾಗ, ಫೀಫೋ ಮೊದಲ ಸಂಕಲನದ ಮುಕ್ಕಾಲು ಸಮಯದಲ್ಲಿ ಸಿದ್ಧವಾಗಿದೆ! ಈ ನಡುವೆ ಏನೆಲ್ಲ ಜರುಗಿದೆ ಎಷ್ಟೆಲ್ಲ ನೀರು ಹರಿದಿದೆ…ಕಲಿಗಾಲ ಹೋಗಿ ಕೋವಿಡ್‌ ಕಾಲ ಬಂದಿದೆ. ಅದೂ ಹೋಗುತ್ತಿದೆ..

ನಾಲ್ಕಾರು ವರುಷಗಳಲ್ಲಿ ನನ್ನ ಬಹುತೇಕ ಕತೆಗಳು ಪ್ರಕಟಗೊಂಡಿರುವುದು ಕನ್ನಡಪ್ರಭದಲ್ಲಿ ಎಂದು ಈಗ ಹೊಳೆಯುತ್ತಿದ್ದೆ. ಸಂಪಾದಕರಾದ ಜೋಗಿ ಸರ್‌ ಪರಿಚಯವಾಗಿದ್ದು ತೀರ ಇತ್ತೀಚೆಗೆ, ಕೆಲವಾರು ತಿಂಗಳುಗಳ ಹಿಂದೆ. ಹೊಸಬರನ್ನು ಪ್ರಾಮಾಣಿಕವಾಗಿ ಪ್ರೋತ್ಸಾಹಿಸುವ ಅವರಿಗೆ ಧನ್ಯವಾದಗಳು.

ಈ ಸಂಕಲನಕ್ಕೆಂದು ನಾ ಮೊದಲು ಭೇಟಿ ಮಾಡಿದ ಪ್ರಕಾಶಕರು ಜಿ ಎನ್‌ ಮೋಹನ್‌ ಸರ್. ಅತ್ಯಂತ ಪ್ರೀತಿಯಿಂದ ಪ್ರಕಟಿಸುತ್ತಿದ್ದಾರೆ, ಅವರಿಗೆ ಧನ್ಯವಾದಗಳು.

ಕುವೆಂಪು ಒಂದು ಕಡೆ ಹೇಳುತ್ತಾರೆ, ಬರಹಗಾರ ತನ್ನ ಸೃಷ್ಟಿಯನ್ನು ತಾನೇ ಹತ್ತು ಸಾವಿರ ಸಲ ಓದುವಂತಿರಬೇಕು ಎಂದು. ನಾ ನೂರು ಸಲ ಓದಿರಬಹುದು. ಆದರೆ ಇನ್ನೊಬ್ಬರು ಅದನ್ನು ಮಾಡಬಯಸುವಾಗ ಹಿಂಜರಿಯುತ್ತೇನೆ. ಇಲ್ಲಿನ ಕತೆಗಳನ್ನು ಎರಡು ಮೂರು ಬಾರಿ ಓದಿ ಸಲಹೆ ನೀಡಿರುವ ತುಂಬ ಆಪ್ತ ಸ್ನೇಹಿತರು ಇದ್ದಾರೆ. ಅವರೆಲ್ಲರಿಗೂ ಚಿರರುಣಿಯಾಗಿರುವೆನು.

ಕನ್ನಡ ಸಾಹಿತ್ಯಿಕ ಕುಟುಂಬ ಹೊಸಬರನ್ನು ಆನಂದದಿಂದ ಬರಮಾಡಿಕೊಳ್ಳುತ್ತ ಒಂದು ಬಗೆಯ ಮಾನಸಿಕ ಆಶ್ರಯ ಒದಗಿಸುತ್ತದೆ. ಏನೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಹೊಟ್ಟೆಗೆ ಹಾಕಿಕೊಳ್ಳುತ್ತದೆ. ಈ ನಾಲ್ಕಾರು ವರುಷಗಳಲ್ಲಿ ಭೇಟಿಯಾಗಿರುವ ಸ್ನೇಹಿತರಾಗಿರರುವ ನೀವೆಲ್ಲರೂ ಮನದ ಪರದೆಯ ಮೇಲೆ ಹಾದುಹೋಗುತ್ತಿದ್ದೀರಿ.

ಎರಡನೆಯ ಪುಸ್ತಕದೊಂದಿಗೆ ವಿಶ್ವಾಸ ಹೆಚ್ಚಿದೆ, ಇನ್ನಷ್ಟು ಭರವಸೆ ತುಂಬುವುದಕ್ಕಾಗಿ ಓದಿ ಪ್ರಾಮಾಣಿಕ ಅನಿಸಿಕೆ ತಿಳಿಸಿ. ನಿಮಗೆ ಧನ್ಯವಾದಗಳು.

ಕೃತಿಯ ಆಯ್ದ ಭಾಗ: `ಒಂದು ಅಸಹ್ಯ ಕತೆ'

ನೀವು: ನಿಮ್ಮನ್ನು ನೀವು ಎನ್ನದೆ ಏನೆಂದು ಕರೆಯಬೇಕೊ ತಿಳಿಯದು, ಮೊನ್ನೆ ನೀವು ನನ್ನನ್ನು ಭೇಟಿ ಮಾಡಿದಿರಿ, ತಲೆ ನೇವರಿಸಿದಿರಿ. ಕೆನ್ನ ಗಿಂಡಿ ಹೋದಿರಿ, ಯಾಕೆ ಹಾಗೆ ಮಾಡಿದಿರಿ? ಎಷ್ಟು ಕಷ್ಟ ಗೊತ್ತ. ಅಂದು ಫಿಲ್ಕ್ ಫೆಸ್ಟಿವಲ್ ನಲ್ಲಿ ಕ್ಯೂನಲ್ಲಿ ನಿಂತಾಗ, ನನಗೆ ಅದು ನೀವೆ ಎಂದು ತಿಳಿದಿತ್ತು. ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಂತಾಯಿತು. ನನ್ನ ಇಷ್ಟದ ಸಿನಿಮಾ, ಬಿಟ್ಟು ಓಡುವಂತೆಯೂ ಇಲ್ಲ. ಹಾಗಾಗಿ ಸಾಲು ಒಳಹೋಗುವವರೆಗೆ ನಿಮಗೆ ವಿರುದ್ಧ ತಿರುಗಿ ನಿಂತು ಬಿಟ್ಟೆ. ನನ್ನನ್ನು ಹಾಗೆಲ್ಲ ನೇರ ಭೇಟಿ ಮಾಡಕೂಡದು. ನನಗೆ ಇಷ್ಟವಾಗದು, ನನಗೆ ನೀವಂದರೆ ಇಷ್ಟ, ಆ ಇಷ್ಟ ಹಾಳಾಗಕೂಡದು. ಅದಕ್ಕಾಗಿ ಏನೆಲ್ಲ ಮಾಡಿದ್ದೇನೆ ಗೊತ್ತ.

ನನಗೆ ಎಲ್ಲ ಗೊತ್ತಾಗುತ್ತದೆ. ತೀರ ದಡ್ಡನಲ್ಲ. ಅಂದು ಥಿಯೇಟರಿನಲ್ಲಿ ನಿಮ್ಮ ಕಣ್ಣುಗಳು ಯಾರನ್ನೆಲ್ಲ ಸಂಧಿಸುತ್ತಿದ್ದವು. ಅವನು: ಗಡ್ಡಧಾರಿ, ಬಾಚಿರದ ಕರಡಿ ತಲೆ; ಅವನೊಂದಿಗೆ, ಮತ್ತೊಬ್ಬ ಕನ್ನಡಕದವನು; ಕೆನ್ನೆ ಊದಿಕೊಂಡಿವೆ. ಹೊಟ್ಟೆ ಮುಂದೆ ಬಂದಿದೆ. ಅವನು ಹೋದಲ್ಲೆಲ್ಲ ನೀವು ಹಿಂಬಾಲಿಸುತ್ತಿದ್ದಿರಿ. ಮತ್ತೊಬ್ಬ ಮುದುಕ; ಈಗಾಗಲೇ ಸೀನಿಯರ್ ಸಿಟಿಜನ್ ಸೌಲಭ್ಯಗಳನ್ನು ಪಡೆಯುತ್ತಿದ್ದಾನೆ. ಅವನ ಹುಡುಕಾಟಕ್ಕೂ ಸ್ಪಂದಿಸುವಿರಿ.

ಮಧುಸೂದನ ವೈ ಎನ್ ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

ಫೀ ಫೋ ಕೃತಿಯ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...