ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ

Date: 02-08-2020

Location: ಬೆಂಗಳೂರು


ಬರಹಗಾರ/ರ್ತಿ ಮೊದಲು ಆರಂಭಿಸುವುದೇ ತಮ್ಮನ್ನು ತಾವು ನೋಡಿಕೊಳ್ಳಲು ಹಾಗೂ ಪ್ರಕಟಿಸಲು ಎನ್ನುವ ಕವಿ-ವಿಮರ್ಶಕಿ ಡಾ. ಗೀತಾ ವಸಂತ ಅವರು ಲೇಖಕ/ಕಿಯರ ಮೊದಲ ಕೃತಿಗಳ ಬಗ್ಗೆ ಈ ಸರಣಿಯಲ್ಲಿ ಬರೆಯಲಿದ್ದಾರೆ. ಕಾರ್ನಾಡರ ಮೊದಲ ನಾಟಕ ಯಯಾತಿ ಅಸ್ತಿತ್ವದ ಮೂಲಪ್ರಶ್ನೆಯನ್ನ ಕಾವ್ಯಾತ್ಮಕ ತೀವ್ರತೆಯಲ್ಲಿ ಕಟ್ಟಿದೆ ಎನ್ನುವ ಅವರು ಪುರಾಣದ ಕತೆಯನ್ನು ಆಧುನಿಕನ ಸಂಕಟವಾಗಿಸುವ ನಾಟಕ ’ಯಯಾತಿ’. ಮನುಷ್ಯ ಸಹಜವಾದ ಕಾಮವಾಂಛೆ ಹಾಗೂ ಮೃತ್ಯುವನ್ನು ಗೆಲ್ಲಬೇಕೆಂಬ ಅನಾದಿ ಹಂಬಲ ಹಾಗೂ ಪುರುವಿನ ಪಾತ್ರದ ಮೂಲಕ ಆಧುನಿಕನ ಅಪೂರ್ಣತೆಯ ತಳಮಳಗಳ ಚಿತ್ರಿಸಲಾಗಿದೆ ಎಂದು ವಿವರಿಸಿದ್ದಾರೆ.

ಯಯಾತಿ ಗಿರೀಶ್ ಕಾರ್ನಾಡರ ಮೊದಲ ನಾಟಕ. ಅದು ಕಾರ್ನಾಡರ ಮೂಲ ಜಿಜ್ಞಾಸೆಯ ಹಂದರವನ್ನು ಕಟ್ಟಿಕೊಡುವ ನಾಟಕವೂ ಹೌದು. ಸತ್ಯ ಎಂದರೇನು ಎಂಬ ಬೌದ್ಧಿಕ ಹುಡುಕಾಟವೇ ನಮ್ಮ ಫಿಲಾಸಫಿಗಳ ಮೂಲ. ಅದೇ ಧರ್ಮದ ತಳಪಾಯ. ಸ್ಥಿರವಾದ ಸತ್ಯವೆಂಬುದು ಇದೆಯಾ? ಅಥವಾ ಅದು ಬರೀ ನಮ್ಮ ನೋಟದ ಮಿತಿಯಾ? ನೋಟವು ಕಾಣ್ಕೆಯಾಗುವುದು ಹೇಗೆ? ಸತ್ಯವನ್ನು ಸ್ಪರ್ಷಿಸುವ ಘಳಿಗೆ ಅದೆಷ್ಟು ಸ್ಫೋಟಕವಾಗಿರಬಹುದು? ಇಂಥ ಹಲವುಭಾವಗಳನ್ನು ಆಳವಾಗಿ ಮೀಟುತ್ತದೆ ಈ ನಾಟಕ. ಸತ್ಯದ ಹುಡುಕಾಟ ಹಾಗೂ ಅಸಿತ್ವದ ಹುಡುಕಾಟಗಳು ಒಂದೇ ಆಗುವ ನೆಲೆಯಲ್ಲಿ ಚಲಿಸುವ ಈ ಕಥನ ರಾಗದ್ವೇಷಗಳ ಸಿಕ್ಕಿನಲ್ಲಿ ಸಿಲುಕಿದ ಮನುಷ್ಯನ ಅಸ್ತಿತ್ವದ ಬಿಂಬಗಳನ್ನು ಹಲವು ಪಾತ್ರಗಳ ಮೂಲಕ ಕಟ್ಟಿಕೊಡುತ್ತದೆ. ಬದುಕಿನ ಮೂಲಭೂತ ಚಾಲಕ ಶಕ್ತಿಗಳಾದ ಕಾಮ ಮತ್ತು ಅಧಿಕಾರ ಕೇಂದ್ರಗಳ ಸುತ್ತಲೂ ಹೆಣೆಯಲ್ಪಟ್ಟ ಈ ನಾಟಕ ಅದರಿಂದ ಸ್ವಾತಂತ್ರ್ಯ ಪಡೆಯಬಯಸುವ ಇಚ್ಛಾಶಕ್ತಿಯನ್ನು ಪ್ರಕಟಿಸುವ ಪಾತ್ರಗಳನ್ನೂ ಸೃಷ್ಟಿಸಿದೆ. ಮನುಷ್ಯನ ಅಸ್ತಿತ್ವ ಎಲ್ಲಿದೆ? ಅದು ದೇಹದಲ್ಲಿದೆಯೇ, ಸ್ಮೃತಿಕೋಶಗಳಲ್ಲಿದೆಯೇ, ತಾನೇ ಕಟ್ಟಿಕೊಂಡ ವ್ಯವಸ್ಥೆಯ ವಿನ್ಯಾಸಗಳಲ್ಲಿ ಸಿಲುಕಿದೆಯೇ ಎಂಬ ಹಲವು ಪ್ರಶ್ನೆಗಳು ಇಲ್ಲಿ ಏಳುತ್ತವೆ. ಆದರೆ ಇದ್ಯಾವುದಕ್ಕೂ ಸಿದ್ಧ ಉತ್ತರಗಳಿಲ್ಲ. ಉತ್ತರ ಕಂಡುಕೊಳ್ಳಬೇಕಾದವರು ನಾವೇ. “ಇದೆಲ್ಲದರ ಅರ್ಥವೇನು ದೇವರೇ..” ಎಂಬ ಪ್ರಶ್ನೆಯೊಂದಿಗೇ ಕೊನೆಯಾಗುವ ನಾಟಕ ನಮ್ಮ ಅನುಭವಗಳ ಮೂಲಕವೇ ಅದನ್ನು ಶೋಧಿಸಲು ಬಿಟ್ಟುಬಿಡುತ್ತದೆ.

ಕಾಲ ದೇಶಗಳು ಬದಲಾದರೂ ಅದೇ ಮೂಲಪ್ರಶ್ನೆಗಳನ್ನು ಇಂದಿಗೂ ಕೇಳಿಕೊಳ್ಳುತ್ತಿದ್ದೇವೆ. ಏಕೆಂದರೆ ವ್ಯವಸ್ಥೆ ಬದಲಾಗಬಹುದು, ಅದನ್ನು ಗ್ರಹಿಸುವ ಮಾನದಂಡಗಳು ಬದಲಾಗಬಹುದು, ಆದರೆ ಮನುಷ್ಯ ಮನುಷ್ಯನೇ. ನಾಟಕದ ಸೂತ್ರಧಾರ ಹೇಳುವಂತೆ ಇದು ಗತ ಸಮಯದ ಪ್ರತಿಧ್ವನಿಗಳನ್ನು ವರ್ತಮಾನದ ಕಿವಿಗಳಿಂದ ಕೇಳಬೇಕಾದ ನಾಟಕ. ನಮ್ಮ ವರ್ತಮಾನದಲ್ಲಿ ಕಾಡುತ್ತಿರುವ ಪ್ರಶ್ನೆಗಳಿಗೆ ನಾವು ಭೂತದಲ್ಲಿ ಉತ್ತರ ಹುಡುಕುವುದು ಕಾಲದಿಂದ ಕಾಲಕ್ಕೆ ಚಲಿಸುವ ಮನುಷ್ಯ ಪ್ರವೃತ್ತಿಗಳ ಅದೇ ಎಳೆಯನ್ನು ಹಿಡಿದುಕೊಂಡು. ಪೌರಾಣಿಕ ಕಥನದ ಅಜ್ಞಾತ ಪುಟವೊಂದನ್ನು ವರ್ತಮಾನದ ಬೆಳಕಲ್ಲಿ ತೆರೆದಾಗ ಮೌಲ್ಯಗಳ ಸಂಘ಼ರ್ಷವುಂಟಾಗುವುದು ಸಹಜ. ಚಿಂತನಾಕ್ರಮದಲ್ಲಾದ ಹೊಸದೊಂದು ವಿಕಾಸ ಹೊಸಪ್ರಶ್ನೆಗಳೊಂದಿಗೆ ಎದುರುಬದರಾಗುತ್ತ ಕರ್ಷಣೆಯೊಂದನ್ನು ಮೂಡಿಸುವುದು ಇಲ್ಲಿ ನಾಟಕೀಯತೆಯನ್ನು ತೀವ್ರಗೊಳಿಸುತ್ತದೆ. ಮಹಾಭಾರತದ ಆದಿಪರ್ವದಲ್ಲಿ ಬರುವ ಕಥೆಯೊಂದು ಆಧುನಿಕ ಸಂದರ್ಭದ ಒಳತೋಟಿಗಳನ್ನು ಅಭಿವ್ಯಕ್ತಿಸಲು ಶಕ್ತವಾಗುವಂತೆ ಮರುನಿರೂಪಿಸುವಲ್ಲಿ ಕಾರ್ನಾಡರ ಸೃಜನಶೀಲತೆಯಿದೆ. ಕಾಮವಾಂಛೆ ಹಾಗೂ ಮೃತ್ಯುವನ್ನು ಗೆಲ್ಲಬೇಕೆಂಬ ಅನಾದಿ ಹಂಬಲಗಳ ಬುನಾದಿ ನಾಟಕಕ್ಕಿದ್ದರೂ ಪುರುವಿನ ಪಾತ್ರವನ್ನು ಮೂಲಕ್ಕಿಂತ ಭಿನ್ನವಾಗಿ ಕಟ್ಟುವ ಮೂಲಕ ಆಧುನಿಕ ಮನುಷ್ಯನೊಬ್ಬನ ಅಪೂರ್ಣತೆಯ ತಳಮಳಗಳನ್ನು ಇಲ್ಲಿ ಚಿತ್ರಿಸಲಾಗಿದೆ. ನಾಟಕದ ಮುನ್ನುಡಿಯಲ್ಲಿ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು ಹೇಳುವಂತೆ “ಯಯಾತಿಯ ತಾತ್ವಿಕತೆ ಪುರುವಿನ ಪಾತ್ರಕಲ್ಪನೆಯಲ್ಲಡಗಿದೆ. ಪುರು ಆಧುನಿಕ ಕಾಲದ ಅನಾಥ ಪ್ರಜ್ಞೆಯ ಏಕಾಕಿತನದ ಸಂಕೇತವಾಗಿದ್ದಾನೆ. ಪುರು ಎದುರಿಸಬೇಕಾದ ಜೀವಿತದ ಸಮಸ್ಯೆ ಈ ನಾಟಕದ ಜೀವಾಳವಾಗಿದೆ.” ಪುರು ಎದುರಿಸುವ ಸಮಸ್ಯೆ ಅಸ್ಮಿತೆಯದು. ಪರಂಪರೆ ಕಟ್ಟಿಕೊಟ್ಟ ಬಾಳನ್ನು ಆತ ಪ್ರಶ್ನಾತೀತವಾಗಿ ಬದುಕಲಾರ. ಅವನದೇ ದ್ವಂದ್ವಗಳನ್ನು ಮೀರಲೂ ಆರ. ಅವನ ಹುಡುಕಾಟವೇ ನಾಟಕ ಕೇಂದ್ರ.

ನಾಟಕದ ಸೂತ್ರಧಾರನ ಮಾತುಗಳು ನಾಟಕವನ್ನು ನೋಡುವ ದೃಷ್ಟಿಕೋನವೊಂದನ್ನು ಕಟ್ಟಿಕೊಡುತ್ತವೆ. ಸತ್ಯವೆಂಬುದು ದೃಷ್ಟಿಯಫಲ ಎನ್ನುತ್ತಾನೆ ಆತ. ಈ ಸತ್ಯವು ಕಾಲಬಧ್ಧವೋ ಕಾಲಾತೀತವೋ, ಸ್ಥಿರವೋ ಚಲನಶೀಲವೋ ಎಂಬ ಜಿಜ್ಞಾಸೆ ಅವನ ಮಾತುಗಳಿಂದ ಏಳುತ್ತದೆ. ಅದನ್ನು ಆತ ಕಾವ್ಯಾತ್ಮಕವಾಗಿ ಕಟ್ಟಿಕೊಡುತ್ತಾನೆ. “ನಾವೆಲ್ಲ ಒಂದು ದಡದ ಮೇಲೆ ಕುಳಿತು ನದೀತಳದ ವಿಶ್ವವನ್ನು ಕಾಣುವ ಸ್ವಪ್ನಜೀವಿಗಳಂತೆ. ನದಿಪ್ರವಾಹದಲ್ಲಿ ಆಗುವ ವಕ್ರೀಭವನ ಪರಾವರ್ತನೆಗಳೆಲ್ಲ ನಮ್ಮ ದೃಷ್ಠಿಯ ಫಲ.” ನಿಜವನ್ನು ಕಾಣಲು ನಮ್ಮ ಇಂದ್ರಿಯಗಳೇ ನಮಗೆ ಚೌಕಟ್ಟು. ಇರುವುದನ್ನು ಕಾಣಲಾಗದ ನಾವು ನಮ್ಮ ಅನುಭವಕ್ಕೆ ದಕ್ಕಿದ್ದನ್ನಷ್ಟೇ ನಮ್ಮ ಪಾಲಿನ ಸತ್ಯವಾಗಿ ಸ್ವೀಕರಿಸುತ್ತೇವೆ. ಅದರಲ್ಲೇ ನೆಮ್ಮದಿ ಕಾಣುತ್ತೇವೆ. ಈ ಕಣ್ಕಟ್ಟಿನಾಚೆಗಿನ ಬದುಕಿಗೆ ಹಾಯುವ ದೃಷ್ಟಿ ನಮಗಿಲ್ಲ. ನಾವು ಏನು ನೋಡುತ್ತೇವೋ ಅದರಲ್ಲಿ ನಮ್ಮ ಪ್ರತಿಬಿಂಬವನ್ನೇ ಕಾಣುತ್ತೇವೆ. ಈ ನಾಟಕದ ಮುಖ್ಯ ಪಾತ್ರಗಳಾದ ಯಯಾತಿ, ದೇವಯಾನಿ, ಶರ್ಮಿಷ್ಠೆ, ಪುರು, ಚಿತ್ರಲೇಖೆಯರಲ್ಲಿ ಅಂಥ ಬಿಂಬಗಳು ಸರಿದುಹೋಗುತ್ತವೆ. ದಾಸಿ ಸ್ವರ್ಣಲತೆ ಹಾಗೂ ಬದುಕಿಗೆ ವಿಮುಖನಾದ ಅವಳ ಹೆಸರೇ ಇಲ್ಲದ ಗಂಡ, ರಾಜ್ಯದ ಅಸಂಖ್ಯ ಪ್ರಜೆಗಳು ಎಲ್ಲರೂ ಅಂತರಂಗದ ಹುಡುಕಾಟಕ್ಕೆ ಭಿತ್ತಿಗಳಾಗುತ್ತಾರೆ.

ದೇವಯಾನಿ ಹಾಗೂ ಶರ್ಮಿ಼ಷ್ಠೆಯರ ಪ್ರೀತಿ-ದ್ವೇಷಗಳ ದ್ವಂದ್ವಾತ್ಮಕ ಸಂಬಂಧದ ಮೂಲಕ ನಾಟಕ ತೆರೆದುಕೊಳ್ಲುತ್ತದೆ. ಆರ್ಯ- ರಾಕ್ಷಸ ಎಂಬ ಸಾಸಂಸ್ಕೃತಿಕ ಸಂಘರ್ಷದ ಎಳೆಯೂ ಇಲ್ಲಿ ಸೇರಿದೆ. ಶರ್ಮಿಷ್ಠೆ ರಾಕ್ಷಸ ರಾಜಕನ್ಯೆ. ದೇವಯಾನಿ ಅವರ ಆಸ್ಥಾನದಲಿದ್ದ ಬ್ರಾಹಣ ಶುಕ್ರಾಚಾರ್ಯರ ಪುತ್ರಿ. ಅನ್ಯೋನ್ಯ ಗೆಳೆತನದಲ್ಲಿ ಯಾವ ತರತಮವನ್ನೂ ಅರಿಯದೇ ಇದ್ದವಳು ಶರ್ಮಿ಼ಷ್ಠೆ. ನಿಷ್ಕಲ್ಮಷವಾಗಿ ಪ್ರಿತಿಸುವ ತೀವ್ರಾನುಭೂತಿಯುಳ್ಳ ಶರ್ಮಿಷ್ಠೆಯು ದೇವಯಾನಿಯ ದ್ವೇಷದ ಒಂದು ಮಾತಿನಿಂದ ಕನಲಿಹೋಗುತ್ತಾಳೆ. ಒಮ್ಮೆ ಹೊಳೆಯಲ್ಲಿ ಈಜುತ್ತ ಬಂದ ಗೆಳತಿಯರು ದಡದಲ್ಲಿ ಕೂದಲುಹರವಿ ಕಣ್ಮುಚ್ಚಿ ಮಲಗಿರುತಾರೆ. ಈ ಕ್ಷಣದಲ್ಲಿ ಅವರಿಬ್ಬರ ಮನಸುಗಳೂ ಒಂದೇ ಆಗಿದೆಯೆಂದೆನಿಸುತ್ತದೆ. ಆದರೆ ಏಕಾಏಕಿ ದೇವಯಾನಿ ಅವರ ಕುಪ್ಪಸಗಳು ಅದಲುಬದಲಾಗಿರುವುದನ್ನು ಗಮನಕ್ಕೆ ತರುತ್ತಾಳೆ. ಅಂಥ ತನ್ಮಯ ಕ್ಷಣವನ್ನು ಕಲಕಿದ್ದಕ್ಕಾಗಿ ಶರ್ಮಿಷ್ಠೆ ತನ್ನ ಅಸಹನೆ ವ್ಯಕ್ತಪಡಿಸಿದಾಗ, ಅಹಂ ಘಾಸಿಗೊಂಡ ದೇವಯಾನಿ “ಏಕೆ ಆರ್ಯಸ್ತ್ರೀಯ ಕುಪ್ಪಸ ತೊಟ್ಟೊಡನೆ ಆರ್ಯಸ್ತ್ರೀಯಾಗುವ ಕನಸು ಬಿತ್ತೇ? ಹಸಿದ ನಾಯಿಗೆ ಚಂದ್ರ ರೊಟ್ಟಿಯಾದ ಹಾಗೆ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾಳೆ. ಈ ಮಾತಿಗೆ ಶರ್ಮಿಷ್ಠೆಯ ವಿಶ್ವ ಕುಸಿದು ಬಿತ್ತು. ಅವರಿಬ್ಬರನ್ನು ಒಡೆದ ಕುಲದ ಪ್ರಶ್ನೆಗೆ ಆಕೆಯ ಅಂತರಂಗ ಭಗ್ನಗೊಳ್ಳುತ್ತದೆ. ಆ ಬಾವಾವೇಶವನ್ನು ನಿಗ್ರಹಿಸಿಕೊಳ್ಳಲಾಗದೇ ಆಕೆ ದೇವಯಾನಿಯನ್ನು ಬಾವಿಗೆ ತಳ್ಳಿ ತಾನೂ ದುಃಖಿಸುತ್ತ ಕುಳಿತುಕೊಳ್ಳುತ್ತಾಳೆ. ಈ ಘಟನೆಯಲ್ಲಿಯೇ ನಾಟಕದ ಬೀಜಾಂಕುರವಾಗಿದೆ. ಮುಂದೆ ನಡೆಯುವುದೆಲ್ಲ ಇವರಿಬ್ಬರ ಪ್ರತೀಕಾರದ ಆಟ. ವಿಚಿತ್ರ ಸನ್ನಿವೇಷವೊಂದರಲ್ಲಿ ಯಯಾತಿಯನ್ನು ವರಿಸಿದ ದೇವಯಾನಿ ಶರ್ಮಿಷ್ಠೆಯನ್ನು ದಾಸಿಯಾಗಿ ಮಾಡಿಕೊಳ್ಳುವ ಮೂಲಕ ಅವಳ ಸೋಲಿನಲ್ಲಿ ಸಮಾಧಾನ ಕಾಣಲು ಹವಣಿಸುತ್ತಾಳೆ. ಈ ಭಾವನೆಗಳ ಚದುರಂಗದಾಟದಲ್ಲಿ ತಮಗರಿವಿಲ್ಲದೇ ಇಡೀ ಅರಮನೆ ಹಾಗೂ ರಾಜ್ಯದ ಪ್ರಜೆಗಳು ದಾಳಗಳಾಗುತ್ತಾರೆ. ಮುಂದೆ ನಡೆಯುವ ಘಟನೆಗಳೆಲ್ಲ ಈ ಆಟದ ಮುಂದುವರೆದ ಭಾಗವಾಗಿ ತೋರುತ್ತದೆ. ಅಧಿಕಾರದ ಮಹತ್ವಾಕಾಂಕ್ಷೆಯ ಮುಂದೆ ಮಸಕಾಗುವ ಮನುಷ್ಯತ್ವದ ಕುರಿತು ತಾತ್ವಿಕ ಪ್ರಶ್ನೆಯನ್ನು ನಾಟಕ ಎತ್ತುತ್ತದೆ. ದೇವಯಾನಿಗೆ ರಾಣಿಯ ಪಟ್ಟದಂತೆಯೇ ತಂದೆಯ ಸಂಜೀವಿನಿ ವಿದ್ಯೆಯೂ ಶಕ್ತಿರಾಜಕಾರಣದ ಮೂಲವೆಂಬುದನ್ನು ಶರ್ಮಿಷ್ಠೆ ಗುರುತಿಸುತ್ತಾಳೆ. ಆದರೆ ಶರ್ಮಿಷ್ಠೆ ಸೋಲುವವಳಲ್ಲ. ದೇವಯಾನಿಯ ಮನದ ಸುಪ್ತ ಮೂಲೆಗಳಲ್ಲಿ ಬಚ್ಚಿಟ್ಟ ಸತ್ಯಗಳನ್ನು ಎತ್ತಿತೋರುವ ಮೂಲಕ ಆಕೆ ವಿಜಯಿಯಾಗುತ್ತಾಳೆ. ಸತ್ಯಕ್ಕೆ ಭಯಪಡದವರಾರು? ಬೆತ್ತಲಾಗುವ ಭಯವನ್ನು ಗೆಲ್ಲಲು ತೊಡುವ ಕವಚಗಳನ್ನು ಒಂದೊಂದೇ ಕಳಚುವ ಅವಳ ನೈತಿಕ ಶಕ್ತಿಗೆ ಕೊನೆಯಲ್ಲಿ ಯಯಾತಿಯೇ ಸೋಲುತ್ತಾನೆ. ಭೋಗದಲ್ಲಿ ಮುಳುಗಿಹೋದ ಯಯಾತಿಯ ಕಣ್ಕಟ್ಟನ್ನೂ ಅವಳೇ ಕಳಚುತ್ತಾಳೆ. ಅವಳ ಮಾತಿನ ಮೊನಚಿನ ಹಿಂದಿರುವ ಸತ್ಯದ ಆಳವನ್ನು ನಾಟಕ ಧ್ವನಿಪೂರ್ಣವಾಗಿ ಕಟ್ಟಿಕೊಟ್ಟಿದೆ.

ನಾಟಕವು ಅಸ್ತಿತ್ವದ ಅಮೂರ್ತ ಪ್ರಶ್ನೆಗಳನ್ನೆತ್ತುವುದು ಯಯಾತಿ ಹಾಗೂ ಪುರುವಿನ ಮುಖಾಂತರ. ಈ ತಂದೆ ಹಾಗೂ ಮಗನ ಮೂಲಕ ಎರಡು ತಲೆಮಾರುಗಳು ಹಾಗೂ ಎರಡು ಭಿನ್ನ ಮನೋಭಾವಗಳು ಮುಖಾಮುಖಿಯಾಗುತ್ತವೆ. ಯಯಾತಿಯು ಕ್ಷತ್ರಿಯ ಸಹಜವೆಂದು ಭಾವಿಸುವ ಪರಾಕ್ರಮ, ಯುದ್ದದಾಹ, ಸ್ತ್ರೀ ವ್ಯಾಮೋಹಗಳಲ್ಲಿ ನಿರತ. ಅಧಿಕಾರ ಮನೋಭಾವ ಅವನಿಗೆ ಅತ್ಯಂತ ಸಹಜ. ಅವನಲ್ಲಿ ಸ್ವಂತಕ್ಕೆ ಕೇಳಿಕೊಳ್ಳಲು ಯಾವ ಪ್ರಶ್ನೆಗಳೂ ಇಲ್ಲ. ತನ್ನ ಪೂರ್ವಜರು ಸವೆಸಿದ ಹಾದಿಯಲ್ಲೇ ನಡೆವ ಆತನಿಗೆ ತನ್ನ ಗಮ್ಯದ ಬಗ್ಗೆ ಹೆಮ್ಮೆ. ಆದರೆ ಪುರುವಿಗೆ ಇದೆಲ್ಲವೂ ಅಸಂಗತವಾಗಿ ತೋರುತ್ತದೆ. ಕ್ಷತ್ರಿಯನಾದವ ವೀರನಾಗಿರಲೇಬೇಕು, ಶಸ್ತ್ರಪ್ರಯೋಗ ಕೌಶಲ ಅವನಿಗೆ ರಕ್ತಗತವಾದುದೆಂಬ ಕಲ್ಪನೆಗಳಿಗೆ ಅವನು ಅತೀತ. ತನ್ನ ಮೇಲೆ ಹೇರುವ ವಂಶಗೌರವದ ಭಾರವನ್ನು ಕಳಚಿಕೊಳ್ಳಲು ಬಯಸುವ ಆತ ತನ್ನನ್ನು ಮನುಷ್ಯ ಮಾತ್ರದವನಾಗಿ ಕಾಣಲು ಬಯಸುತ್ತಾನೆ. ತನ್ನ ಸುತ್ತಲ ಲೋಕ ಆಗ್ರಹಿಸುವ ಪೌರುಷದ ಕಲ್ಪನೆಯನ್ನು ಸದಾ ನಿರಾಕರಿಸುವ ಆತ ಕಳೆದುಕೊಂಡ ತಾಯಿಯ ನೆನಪಲ್ಲಿ ಕಣ್ಣೀರಾಗುವ ಭಾವುಕ. ತಾಯಿಯೊಂದಿಗಿನ ಬಾಲ್ಯದ ಅಸ್ಪಷ್ಟ ಸ್ಮೃತಿಗಳಲ್ಲೇ ಆತ ತನ್ನ ಅಸ್ತಿತ್ವವನ್ನು ಹುಡುಕುತ್ತಾನೆ. ಅವನ ತಾಯಿಯ ಹುಡುಕಾಟವು ಮೂಲದೊಂದಿಗೆ, ಸತ್ಯದೊಂದಿಗೆ ಸಾತತ್ಯ ಬಯಸುವ ಅವನ ಪ್ರಜ್ಞೆಯನ್ನು ರೂಪಕಾತ್ಮಕವಾಗಿಯೂ ಹೇಳುತ್ತಿರುವಂತೆ ತೋರುತ್ತದೆ. ಸಿದ್ದಮಾನದಂಡಗಳಿಗೆ ಹೇಡಿಯಾಗಿ ತೋರುವ ಪುರುವಿನ ನಿಜವಾದ ಅಂತಃಶಕ್ತಿ ಯಾರಿಗೂ ತೋರದೇ ಹೋಗುವುದೇ ನಿಜವಾದ ದುರಂತ. ಲೋಕದ ಕಣ್ಣಲ್ಲಿ, ಪ್ರಜೆಗಳ ಕಣ್ಣಲ್ಲಿ ತನ್ನನ್ನು ಪರಾಕ್ರಮಿಯಾಗಿ ನೋಡಿಕೊಂಡ ಯಯಾತಿ ಮಹಾರಾಜ, ತಾನು ಕಟ್ಟಿಕೊಂಡ ಭ್ರಮೆಗಳೆಲ್ಲ ಬಯಲಾದಾಗ ದುರ್ಬಲನಾಗುತ್ತಾನೆ. ಶುಕ್ರಾಚಾರ್ಯರ ಶಾಪದಿಂದಾಗಿ ಒಂದೇದಿನದಲ್ಲಿ ಮುಪ್ಪು ಆವರಿಸಲಿದೆಯೆಂದು ತಿಳಿದಾಗ ಹತಾಶನಾಗುತ್ತಾನೆ. ಉಃಶಾಪಕ್ಕಾಗಿ ಅಂಗಲಾಚುತ್ತಾನೆ. ಯಾರಾದರೂ ತನ್ನ ಮುಪ್ಪನ್ನು ಸ್ವೀಕರಿಸಿದರೆ ಮತ್ತೆ ತಾರುಣ್ಯ ಪಡೆಯಬಹುದೆಂಬ ಉಃಶಾಪ ದೊರೆತಾಗ ಸಂಭ್ರಮಿಸುತ್ತಾನೆ. ಪ್ರಜೆಗಳ ಕಣ್ಣಲ್ಲಿ ಮಹಾನ್ ಆಗಿದ್ದೇನೆಂದು ಭಾವಿಸಿದ ಅವನ ಭ್ರಮೆಯಳಿಯುವುದೇ ಈ ಸಂದರ್ಭದಲ್ಲಿ. ಯಾರೊಬ್ಬರೂ ಅವನ ಶಾಪವನ್ನು ಸ್ವೀಕರಿಸಲು ಮುಂದೆಬರುವುದಿಲ್ಲ. ತನಗೆ ಅಧಿಕಾರದಿಂದ ಸಿಗುತ್ತಿದ್ದ ಗೌರವ, ವಿಧೇಯತೆ ಎಲ್ಲವೂ ಸುಳ್ಳೆಂದು ತಿಳಿದಾಗ ಆತ ಒಂಟಿಯಾಗುತ್ತಾನೆ. ಒಂದು ಹಿಡಿ ಆಯುಷ್ಯಕ್ಕಾಗಿ ಅಂಗಲಾಚುತ್ತಾನೆ. ತ್ಯಾಗದ ಹೆಸರಿನಲ್ಲಿ ತನ್ನ ಅಧೀನದಲ್ಲಿರುವ ಯಾರನ್ನಾದರೂ ಬಲಿಹಾಕುವುದು ಸಲೀಸೆಂದು ತಿಳಿದ ಯಯಾತಿ ಹುಸಿ ಆದರ್ಶಗಳ ಬಲೆನೇಯುವ ಬೇಟೆಗಾರ. ಆದರೆ ಅದಕ್ಕೆ ಮಗನಾದ ಪುರುವೇ ಬಲಿಯಾಗಬೇಕಾದ ಸನ್ನಿವೇಷ ನಿರ್ಮಾಣವಾಗುವುದು ಅವನ ಬದುಕಿನ ವ್ಯಂಗ್ಯ. ತಾನು ವಜ್ರದಂತೆ ಕಾಪಿಟ್ಟ ಕ್ಷಣಗಳು ಅಂಗೈಯಲ್ಲಿ ಒಮ್ಮಗೇ ಸ್ಫೋಟಗೊಳ್ಳುವುದನ್ನು, ಹಲವು ಸ್ತ್ರೀಯರ ಜೊತೆ ಸುಖಿಸಿದ ಮಂಚದ ಮೇಲೆ ಕಾಲವು ಉಲ್ಕೆಯಂತೆ ಸರಿದು ಹೋಗಿ ಬಿಡುವುದನ್ನು ಊಹಿಸಿಯೇ ಆತ ಭ್ರಮಿತನಂತಾಗುತ್ತಾನೆ. ಆದರೆ, ತನಗೆ ಆಯುಷ್ಯ ಬೇಕಿರುವುದು ಭೋಗಕ್ಕಲ್ಲ ಕರ್ತವ್ಯನಿರ್ವಹಣೆಗೆ ಎಂದು ಎಲ್ಲರನ್ನೂ ನಂಬಿಸಲೆತ್ನಿಸುತ್ತಾನೆ. ನಿಜಕ್ಕೂ ತನಗೆ ಬೇಕಾಗಿರುವುದೇನು? ಎಂದು ಎಂದೂ ಆತ್ಮಸಾಕ್ಷಿಯ ಜೊತೆ ಸಂಭಾಷಿಸಿರದ ಯಯಾತಿ, ಸಾವಿನ ಸಮ್ಮುಖದಲ್ಲಿ ಅಧೀರನಾಗುತ್ತಾನೆ. ಉ:ಶಾಪವನ್ನು ಸ್ವೀಕರಿಸಲು ಸ್ವತಃ ಮಗನಾದ ಪುರುವೇ ಸಿದ್ದನಾದಾಗ ದಿಗ್ಭ್ರಮಿತನಾಗುತ್ತಾನೆ. ಇಲ್ಲಿ ಯಯಾತಿ ಹೇಡಿಯಾಗಿ ಪುರು ಧೀರನಾಗಿ ತೋರುತ್ತಾನೆ.

ಸತ್ಯವೆಂಬ ಕತ್ತಿಯಲುಗಿನ ಮೇಲೆ ನಡೆಯುವ ಮನುಜರ ಪಾಡುಗಳನ್ನು ನಾಟಕ ಕಟ್ಟಿಕೊಡುವ ಬಗೆ ಸಂಕೀರ್ಣವಾಗಿದೆ. ಎಲ್ಲ ಪಾತ್ರಗಳೂ ಅದನ್ನು ತಮ್ಮ ಶಕ್ತ್ಯಾನುಸಾರ ನಿಭಾಯಿಸುತ್ತವೆ. ಮನುಷ್ಯತ್ವದ ಬೇರೆಬೇರೆ ಬಿಂಬಗಳನ್ನು ನಾಟಕ ತೋರಿಸುತ್ತ ಹೋಗುತ್ತದೆ. ನಾಟಕದಲ್ಲಿ ಶರ್ಮಿಷ್ಠೆ ಯಯಾತಿಗೆ ಕೇಳುವ ಮಾತೊಂದಿದೆ. “ಮನುಷ್ಯ ಅಚ್ಚಿನಲ್ಲಿ ಸುರಿದು ತೆಗೆದ ಮೇಣದ ಬೊಂಬೆಯೇನು?” ಮನುಷ್ಯತ್ವವೆಂಬುದೊಂದು ಸಿದ್ಧಮಾದರಿಯಲ್ಲ. ಮನುಷ್ಯನ ಅಸ್ತಿತ್ವ ಅವನ ಮನುಷ್ಯತ್ವದಲ್ಲಿಲ್ಲ, ಅದರ ಅಭಾವದಲ್ಲಿದೆಯೆಂಬ ಮಾತು ಅಸಂಗತವಾಗಿ ಕಂಡರೂ ಸತ್ಯ. ಮನುಷ್ಯನಾಗುವುದೇ ಬೇರೆ, ಮನುಷ್ಯ ಇರುವುದೇ ಬೇರೆ. ಇಂಥ ಹೊಳಹುಗಳು ಶರ್ಮಿಷ್ಟೆಯ ಪಾತ್ರವನ್ನು ಉಜ್ವಲವಾಗಿಸಿದೆ. ಕಹಿಸತ್ಯಗಳನ್ನು ದಿಟ್ಟವಾಗಿ ಧರಿಸುವ ಶರ್ಮಿಷ್ಠೆಯ ಪ್ರಬುದ್ಧತೆ ನಾಟಕದಲ್ಲಿ ವಿಕಾಸವಾಗುತ್ತಹೋಗಿದೆ. ಶರ್ಮಿಷ್ಠೆ ಕಾಣಿಸುವ ಸತ್ಯಗಳು ಯಯಾತಿಯನ್ನು ಇನ್ನಿಲ್ಲದಂತೆ ಕಾಡುತ್ತ ಅವನ ಪರಿವರ್ತನೆಗೂ ಕಾರಣವಾಗುತ್ತವೆ. ತನ್ನ ರೂಪಿನಿಂದ, ಮಾತಿನಿಂದ ಎಲ್ಲ ಹೆಣ್ಣುಗಳನ್ನು ವಶಪಡಿಸಿಕೊಳ್ಳುತ್ತಿದ್ದ ಯಯಾತಿಯು ಶರ್ಮಿಷ್ಠೆಗೆ ಶರಣಾಗಿದ್ದು ಅವಳ ಮಾತಿನಲ್ಲಡಗಿದ ಸತ್ಯದಿಂದಾಗಿ. ಸುಳ್ಳಿನ ಆಕರ್ಷಣೆಗಿಂತ ಸತ್ಯದ ಆಕರ್ಷಣೆ ದೊಡ್ಡದು. ಸದಾ ಭೋಗದ ರುಚಿಯಲ್ಲಿ ತತ್ಪರನಾಗಿದ್ದ ಯಯಾತಿ, ಶರ್ಮಿಷ್ಠೆಯ ಸಂಗದಲ್ಲಿ ಪ್ರೇಮವನ್ನು ಅನುಭವಿಸಿದಾಗ ಮಗುವಿನಂತಾಗುತ್ತಾನೆ. ಅವಳನ್ನು ಅವಳ ಸ್ವಸ್ಥಾನಕ್ಕೆ ಹಿಂದಿರುಗಿಸಲೊಪ್ಪದೇ ಹಠಹಿಡಿಯುತ್ತಾನೆ. ಇನ್ನು ಯುವರಾಜ ಪುರುವಂತೂ ಸತ್ಯದ ಬೆಂಕಿಗೆ ಆತುಕೊಂಡ ಪತಂಗದಂತೆ ತೋರುತ್ತಾನೆ. ಸತ್ಯದೊಂದಿಗೆ ಪ್ರಯೋಗಕ್ಕಿಳಿಯುತ್ತಾನೆ. ಮೈಸುಟ್ಟುಕೊಳ್ಳುತ್ತಾನೆ. ಅವನ ಒಳತೋಟಿಗಳು ಮಂದ್ರ ಮಧ್ಯಮ ತಾರಕದ ಆಲಾಪಗಳಂತೆ ನಾಟಕದುದ್ದಕ್ಕೂ ನಿನದಿಸುತ್ತಾ ಓದುಗರನ್ನು ಹೊಸ ಎಚ್ಚರಕ್ಕೆ ಸಜ್ಜುಗೊಳಿಸುತ್ತವೆ.

ನಾಟಕದಲ್ಲಿ ಬರುವ ಚಿತ್ರಲೇಖೆಯ ಪಾತ್ರ ಸತ್ಯವನ್ನು ಸ್ಫೋಟಿಸುವಂಥ ಪಾತ್ರ. ಪುರುವಿನ ನವವಧುವಾದ ಅವಳು ಯಯಾತಿ ಹಾಗೂ ಪುರು ಇಬ್ಬರಿಗೂ ಅರಿಯಲಾಗದ ಗುಟ್ಟು. ಅವಳ ಪಾತ್ರ ಮೂಲ ಕಥಾನಕದಲ್ಲಿಲ್ಲ. ಅದು ಕಾರ್ನಾಡರ ಸೃಷ್ಟಿ. ಆಧುನಿಕ ಹೆಣ್ಣೊಬ್ಬಳ ಅಸ್ಮಿತೆಯ ಪ್ರಶ್ನೆಗಳನ್ನು,ಸ್ವಾತಂತ್ರ್ಯದ ಆಗ್ರಹವನ್ನು ಆ ಪಾತ್ರ ಮಾಡುತ್ತದೆ. ಮದುವೆ, ಪಾತಿವ್ರತ್ಯ ಮೊದಲಾದ ಮೌಲ್ಯಗಳನ್ನು ಹಿಂದೆಂದೂ ಪ್ರಶ್ನಿಸಿರದ ರೀತಿಯಲ್ಲವಳು ಪ್ರಶ್ನಿಸುತ್ತಾಳೆ. ಗಂಡನನ್ನು ಎಂತಹುದೇ ಸ್ಥಿತಿಯಲ್ಲಿ ಹಿಂಬಾಲಿಸುವುದು ಸತಿಧರ್ಮ ಎಂಬ ಉಪದೇಶವನ್ನು ಅವಳು ವ್ಯಂಗ್ಯವಾಗಿ ತಿರಸ್ಕರಿಸುತ್ತಾಳೆ. ಅಕಾಲ ಮುಪ್ಪಿಗೀಡಾದ ಗಂಡನನ್ನು ಸ್ವೀಕರಿಸಲು ಭಾವನಾತ್ಮಕವಾಗಿ ಅವಳಿಗೆ ಸಾಧ್ಯವಾಗುವುದೇ ಇಲ್ಲ. ತಾನು ಬಯಸಿದ್ದು ತರುಣನನ್ನು ಆದ್ದರಿಂದ ಆತ ತರುಣನಾಗಿ ಬರುವವರೆಗೂ ತನ್ನ ಅಂತಃಪುರದಲ್ಲಿ ಪ್ರವೇಶವಿಲ್ಲವೆಂದು ಅವಳು ದಿಟ್ಟವಾಗಿ ನುಡಿಯುತ್ತಾಳೆ. ತನ್ನತನವನ್ನು, ತನ್ನ ಆಯ್ಕೆಯ ಬದುಕನ್ನು ಕಸಿದುಕೊಳ್ಳುವ ನೀತಿಯ ಮಾನದಂಡಗಳನ್ನವಳು ಪ್ರಶ್ನಿಸುತ್ತಾಳೆ. “ನಿಮ್ಮಸೊಸೆ ವಿದ್ಯಾಭ್ಯಾಸ ಮಾಡಿರಬೇಕು ಗೃಹಕೃತ್ಯದಲ್ಲಿ ನುರಿತವಳೂ ಆಗಿರಬೇಕು ಎಂದೇ ಅಲ್ಲವೇ? ನಾನು ಅಸ್ತ್ರವಿದ್ಯೆ ಬೇರೆ ಕಲಿತಿದ್ದೆ. ಇಂಥ ವಿದ್ಯೆಯ ಪುತ್ಥಳಿಯನ್ನು ಮನೆಗೆ ತಂದು ಅವಳಿಗೆ ಸನಾತನ ಶೃಂಖಲೆಯನ್ನು ತೊಡಿಸುವ ಹವ್ಯಾಸವೇ?” ಎಂದು ದಿಟ್ಟವಾಗಿ ಯಯಾತಿಯನ್ನು ಪ್ರಶ್ನಿಸುತ್ತಾಳೆ. ತನ್ನ ಗಂಡನ ಯೌವ್ವನಕ್ಕಂಟಿದ ಎಲ್ಲವನ್ನೂ ಸ್ವೀಕರಿಸುವಂತೆ ಸವಾಲು ಹಾಕುತ್ತಾಳೆ. ಇದರಿಂದ ಅಪ್ರತಿಭನಾದ ಯಯಾತಿ ನೀಚ ವ್ಯಭಿಚಾರಕ್ಕೆ ಆಮಂತ್ರಣ ಕೊಡುತ್ತಿರುವೆಯಾ? ಎಂದು ಪ್ರಶ್ನಿಸುತ್ತಾನೆ. ನೀತಿಯ ಕುರಿತು ಅವಳು ನೀಡುವ ವಿವರಣೆಯನ್ನು ಅವನಿಗೆ ಅರಗಿಸಿಕೊಳ್ಳಲಾಗುವುದಿಲ್ಲ. “ನೀತಿಯೆಂದರೆ ಸಾಮಾನ್ಯ ಜನತೆ ತನ್ನ ರಕ್ಷಣೆಗಾಗಿ ಕಟ್ಟಿಕೊಂಡ ಬಂಧನ. ಹುಟ್ಟಿದ ಮಕ್ಕಳು ಮಹಾಪೂರದಲ್ಲಿ ಹರಿಯುವ ಗಿಡಗಂಟಿಗಳಂತೆ ದಿಕ್ಕಿಲ್ಲದೆ, ಬೇರಿಲ್ಲದೆ ತೇಲಿಹೋಗಬಾರದೆಂದು ಹೂಡಿದ ಉಪಾಯ ಯೋಜನೆ! ನಾವು ಅಸಾಮಾನ್ಯರಾಗಬೇಕು ಹಿಂದಿನವರ ನೀತಿಯ ಸರಪಳಿಗಳನ್ನು ನಾವೇಕೆ ಧರಿಸಬೇಕು?” ಎಂದು ತರ್ಕಿಸುವ ಮೂಲಕ ಅಸಾಮಾನ್ಯಳಾಗು ಎಂದು ತನಗೆ ಬೋಧಿಸಿದ ಯಯಾತಿಯ ಬಾಯ್ಮುಚ್ಚಿಸುತ್ತಾಳೆ. ತನ್ನ ಆಲೋಚನೆಯಲ್ಲಿೆ ಅವಳು ತನ್ನ ಕಾಲಕ್ಕಿಂತ ಮುಂದಿದ್ದಾಳೆ. ಆದರೆ ಅವಳ ಪ್ರಶ್ನೆಗಳೆಲ್ಲ ಅವಳ ಸಾವಿನಲ್ಲಿ ಸ್ಥಬ್ದವಾಗುತ್ತವೆ. ಅವಳ ಸಾವು ಎಲ್ಲರ ಕಣ್ತೆರೆಸುತ್ತದೆ.

ಸಾವನ್ನು ಗೆಲ್ಲಬೇಕೆಂಬ ಮನುಷ್ಯನ ಅನಾದಿ ಹಂಬಲವನ್ನು, ಭೋಗದ ತುತ್ತತುದಿಯಲ್ಲೇ ಕಾದು ಕುಳಿತ ವಿನಾಶವನ್ನು, ಅಧಿಕಾರದಿಂದ ಎಲ್ಲವನ್ನೂ ಮಣಿಸಬಹುದೆಂಬ ಭ್ರಮೆಯನ್ನು, ಸತ್ಯ ಹಾಗೂ ನೀತಿಯ ಕುರಿತಾದ ಜಿಜ್ಞಾಸೆಯನ್ನು, ಅಸ್ತಿತ್ವದ ಕುರಿತಾದ ಸೂಕ್ಷ್ಮ ಪ್ರಶ್ನೆಗಳನ್ನು ಪುರಾಣ ಮಹಾಕಾವ್ಯಾದಿಗಳಲ್ಲೂ ಕಾಣುತ್ತೇವೆ. ಅಮೃತಕ್ಕಾಗಿ ಹೊಡೆದಾಡುವ ದೇವ ದಾನವರ ಕತೆಯಿಂದಲೇ ನಮ್ಮ ಪುರಾಣಗಳು ಅಂಕುರಿಸಿವೆ. ಚತುರ್ವಿಧ ಪುರುಷಾರ್ಥಗಳೆನಿಸಿದ ಧರ್ಮ,ಅರ್ಥ,ಕಾಮ, ಮೋಕ್ಷಗಳ ಹಾದಿಯನ್ನು ಹುಡುಕುವ ಕೆಲಸವನ್ನೇ ಮಹಾಕಾವ್ಯಗಳು ಮಾಡಿವೆ. ಅವುಗಳೊಂದಿಗೆ ಮುಖಾಮುಖಿಯಾಗುವ ಪಾತ್ರ ಪ್ರಪಂಚವನ್ನು ಆಧುನಿಕ ಸಂದರ್ಭದಲ್ಲಿ ಮರುನಿರೂಪಿಸುವಾಗ ಕಾರ್ನಾಡರ ಆಲೋಚನೆಗಳ ಹೊಸ ಬಿಂಬವೂ ಇಲ್ಲಿ ಸಂಗಮಿಸಿದೆ. ಆರಂಭದಲ್ಲಿ ಆ ಸೂಚನೆಯನ್ನು ಸೂತ್ರಧಾರ ರೂಪಕಾತ್ಮಕವಾಗಿ ಕಟ್ಟಿಕೊಟ್ಟಿದ್ದಾನೆ. ಚಕಿತಗೊಳಿಸುವ ತರ್ಕದ ನಡಿಗೆ ಹಾಗೂ ಭಾವತೀವೃತೆಗಳೆರಡೂ ಸಂಗಮಿಸುವ ಬಗೆಯಲ್ಲಿ ನಾಟಕ ಉತ್ಕಟವಾದ ಅನುಭವನ್ನು ನೀಡುತ್ತದೆ. ನಾಟಕದ ಭಾಷೆಗಿರುವ ಕಾವ್ಯಾತ್ಮಕ ಸಾಧ್ಯತೆ ನಮ್ಮನ್ನು ಬೆರಗುಗೊಳಿಸುತ್ತಾ ನಮ್ಮದೇ ಸ್ವರಗಳನ್ನು ಅಲ್ಲಿ ಕೇಳುವಂತೆ ಮಾಡುತ್ತದೆ. ಕಾರ್ನಾಡರ ಸೃಜನಶೀಲತೆಯ ಗುಟ್ಟೇ ಅದು.

**

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...