ಕರ್ನಾಟಕ ಅಂದ್ರೆ ನಾವು ಕಂಡದ್ದು ಅಷ್ಟೆನಾ?


ವಿಶ್ವ ಪರ್ಯಟನೆಯನ್ನೇ ವೃತ್ತಿಯಾಗಿಸಿಕೊಂಡವರು ಫೀಲ್ಮ್‌ ಮೇಕರ್‌ ಅಮೋಘವರ್ಷ. ‘ವೈಲ್ಡ್‌ ಕರ್ನಾಟಕ  ರಾಷ್ಟ್ರಗೀತೆ’ ಎಂಬ ವಿಭಿನ್ನ ಪರಿಕಲ್ಪನೆಯ ಮೂಲಕ ಕರ್ನಾಟಕ ಜೀವವೈವಿಧ್ಯವನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ಸದ್ದು ಮಾಡುತ್ತಿರುವ ‘ವೈಲ್ಡ್‌ ಕರ್ನಾಟಕ’ ಚಲನಚಿತ್ರ ರಚಿಸಿದ ತಂಡದಲ್ಲಿ ಅಮೋಘವರ್ಷ ಕೂಡ ಪ್ರಮುಖರು. 

 

ನವಿಲು ನಾಟ್ಯ, ಕತ್ತು ಕುಣಿಸುವ ಗೂಬೆ ವೈಯ್ಯಾರ, ಸ್ವಚ್ಛಂದವಾಗಿ ಓಡಾಡುವ ಜಿಂಕೆ, ಖುಷಿಯಿಂದಿರುವ ಮೊಲ, ನರಿ, ಆನೆ… ಹೀಗೆ ನಾವು ಕಾಣದ ಕರ್ನಾಟಕದ ಜೀವವೈವಿಧ್ಯದ ಸೊಬಗನ್ನು ಕ್ಯಾಮೆರಾ ಕಣ್ಗಳಲ್ಲಿ ಸೆರೆಹಿಡಿದು, ಇಡೀ ಜಗತ್ತಿಗೆ ಪರಿಚಯಿಸುವ ಕ್ರಿಯೆಯಲ್ಲಿ ತೊಡಗಿದ್ದಾರೆ -ಅಮೋಘವರ್ಷ. 

ಗಿಜಿಗುಟ್ಟುವ ರಸ್ತೆಗಳು, ಮುಗಿಲೆತ್ತರದ ಕಟ್ಟಡಗಳು, ಜನರು, ಅಲ್ಲಲ್ಲಿ ಕಾಣಿಸುವ ಮರಗಳು… ಇನ್ನು ನಗರ ಬಿಟ್ಟು ಗ್ರಾಮೀಣ ಜೀವನದ ಕಡೆ ಮುಖ ಮಾಡಿದರೆ ಹೊಲ ಗದ್ದೆಗಳು, ಜಾನುವಾರು, ಪಕ್ಷಿಗಳು, ಪ್ರಾಣಿಗಳು... ಇದು ನಾವು ನೋಡುತ್ತಿರುವ ಕರ್ನಾಟಕ. ಕರ್ನಾಟಕ ಅಂದ್ರೆ ಇಷ್ಟೆನಾ? ಖಂಡಿತ ಅಲ್ಲ.

 

ಡಿಸ್ಕವರಿ ಚಾನೆಲ್‌ ಪ್ರಾಯೋಜಿಸಿರುವ ‘ವೈಲ್ಡ್‌ ಕರ್ನಾಟಕ’ದ ಪ್ರೊಮೊದಲ್ಲಿಯ  ಹಚ್ಚ ಹಸಿರಿನಿಂದ ಕಂಗೊಳಿಸುವ ಪಶ್ಚಿಮ ಘಟ್ಟದ ಕಾಡು, ನದಿ, ತೊರೆ, ಜಲಪಾತಗಳು, ಮೈನವಿರೇಳಿಸುವ ವನ್ಯಜೀವಿಗಳು, ಎಂದೂ ಕಂಡಿರದ ವನ್ಯಜೀವಿಗಳ ವೈಶಿಷ್ಟ್ಯಗಳನ್ನು ಸೆರೆ ಹಿಡಿದವರಲ್ಲಿ ಅಮೋಘವರ್ಷ ಕೂಡ ಒಬ್ಬರು. 

ಬಾಲ್ಯದಿಂದಲ್ಲೇ ತೀವ್ರವಾಗಿ ಕಾಡಿನ ಪರಿಸರದೊಂದಿಗೆ ಒಡನಾಟ ಬೆಸೆದುಕೊಂಡಿದ್ದ ಅವರು, ವಿದ್ಯಾಭ್ಯಾಸ ನಂತರ ಎರಡು ವರ್ಷ ಅಮೆಜಾನ್‌ ಸಾಫ್ಟ್‌ವೇರ್‌ ಕಂಪನಿಯಲ್ಲಿ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿದರು. ಕಂಪ್ಯೂಟರ್‌ ಮುಂದೆ ಕೀ ಬೋರ್ಡ್‌ ಕುಟ್ಟುವ ಕೆಲಸ ಬೇಸರ ಎನಿಸಿದ್ದರಿಂದ ಸಾಫ್ಟ್‌ವೇರ್‌ ವೃತ್ತಿಗೆ ಪೂರ್ಣವಿರಾಮವಿಟ್ಟು ಫೋಟೋಗ್ರಫಿಯನ್ನೇ ವೃತ್ತಿಯಾಗಿಸಿಕೊಂಡವರು. 

ಶಿವರಾಮ ಕಾರಂತರ ಅದ್ಭುತ ಜಗತ್ತು ಕೃತಿಯಲ್ಲಿ ಅವರು ನೀಡಿದ್ದ ಮಳೆಕಾಡಿದ ಚಿತ್ರಣ ನನ್ನನ್ನು ತುಂಬಾ ಸೆಳೆಯಿತು. ಹೀಗೆ ಸಾಹಿತ್ಯವೇ ನನ್ನನ್ನು ಪರ್ಯಟನೆಯತ್ತಾ ಸೆಳೆಯಿತು

‘ಅಂದು ತಾವು ಚಿಕ್ಕವರಿರುವಾಗ ಟಿವಿ ನೋಡುವ ಹವ್ಯಾಸವು ಇರಲಿಲ್ಲ. ಪುಸ್ತಕವೇ ಪ್ರಪಂಚವಾಗಿತ್ತು. ಇಡೀ ಕುಟುಂಬವು ಸಾಹಿತ್ಯದೊಂದಿಗೆ ಬೆಸೆದುಕೊಂಡಿತ್ತಾದ್ದರಿಂದ ಓದು ನೆಚ್ಚಿನ ವಿಷಯವಾಗಿತ್ತು. ಶಿವರಾಮ ಕಾರಂತರ ಅದ್ಭುತ ಜಗತ್ತು ಕೃತಿಯಲ್ಲಿ ಅವರು ನೀಡಿದ್ದ ಮಳೆಕಾಡಿದ ಚಿತ್ರಣ ನನ್ನನ್ನು ತುಂಬಾ ಸೆಳೆಯಿತು. ಹೀಗೆ ಸಾಹಿತ್ಯವೇ ನನ್ನನ್ನು ಪರ್ಯಟನೆಯತ್ತಾ ಸೆಳೆಯಿತು ಎಂದರೆ ತಪ್ಪೇನಿಲ್ಲ’ ಎನ್ನುತ್ತಾರೆ ಅವರು.  

ನಮ್ಮ ನಾಡು-ನುಡಿ-ದೇಶ-ವಿಶ್ವದ ಜೀವವೈವಿಧ್ಯತೆ, ಸಂಸ್ಕೃತಿ-ವೈವಿಧ್ಯತೆ ಅರಿಯಬೇಕೆಂಬ ಕುತೂಹಲ ಅವರನ್ನು ಒಂದೆಡೆ ನಿಲ್ಲಗೊಡದೆ ವಿಶ್ವದಾದ್ಯಂತ ಪರ್ಯಟನೆ ಮಾಡಲು ಪ್ರೇರೇಪಿಸಿತು. ಈ ಸುತ್ತಾಟದೊಂದಿಗೆ ಬಳುವಳಿಯಾಗಿ ಬಂದದ್ದು ಫೋಟೊಗ್ರಫಿ. ಈವರೆಗೂ ಸುಮಾರು ಐದು ಖಂಡಗಳಲ್ಲಿ ಪ್ರವಾಸ ಮಾಡುತ್ತಲೇ ನಮ್ಮ ಕರ್ನಾಟಕದ ವನ ಸಂಪನ್ಮೂಲ, ವನ್ಯ ಸಂಪತ್ತನ್ನು ಜಗತ್ತಿಗೆ ಪರಿಚಯಿಸುತ್ತ ಬಂದರು. ಮುಂದೆ ಇದೇ ತುಡಿತ ‘ವೈಲ್ಡ್‌ ಕರ್ನಾಟಕ’ ರಾಷ್ಟ್ರಗೀತೆ’ ರಚನೆಗೆ ನಾಂದಿಯಾಯಿತು. 

 

 

ಕಾಮನಬಿಲ್ಲಿನಗಾಡು
ನಾನಾ ಬಳುಕಿನ ಹಾಡು
ಹಲವಿದ್ದರೂ ಒಲವೊಂದೆ ಎನ್ನುವ
ನಮ್ಮೊಲವಿನ ಕರುನಾಡು

ಜಯಹೇ ಕನ್ನಡ ತಾಯೇ…
ಜಯಹೇ ಕನ್ನಡ ತಾಯೇ…

ಎಚ್.ಎಸ್. ವೆಂಕಟೇಶಮೂರ್ತಿ ಅವರ ಸಾಹಿತ್ಯ ಹಾಗೂ ಎಂ.ಡಿ. ಪಲ್ಲವಿ ಹಾಗೂ ವಿಜಯ್‌ ಪ್ರಕಾಶ್‌ ಹಾಡಿರುವ ಈ ಸುಮಧುರ ಹಾಡು ಇದರೊಂದಿಗೆ ಹಚ್ಚ ಹಸಿರಿನಿಂದ ಕಂಗೊಳಿಸುವ ಪಶ್ಚಿಮ ಘಟ್ಟದ ಕಾಡು, ನದಿ, ಖಗ-ಮೃಗ, ತೊರೆ, ಜಲಪಾತಗಳು, ಮೈನವಿರೇಳಿಸುವ ವನ್ಯಜೀವಿಗಳು, ಎಂದೂ ಕಂಡಿರದ ವನ್ಯಜೀವಿಗಳ ವೈಶಿಷ್ಠ್ಯತೆಗಳ ಫೋಟೊಗಳು ನೋಡುಗರ ಕಣ್ಮನ ಸೆಳೆಯುತ್ತದೆ!

‘ವೈಲ್ಡ್‌ ಕರ್ನಾಟಕ ರಾಷ್ಟ್ರಗೀತೆ’ ಎಂತಲೇ ಹೆಸರಾಗಿರುವ ಈ ಗೀತೆ ಪರಿಕಲ್ಪನೆ ರೂವಾರಿ ಹಾಗೂ ಈ ಗೀತೆಯಲ್ಲಿ ಕರ್ನಾಟಕ ವನ್ಯಜೀವಿ ಸಂಪತ್ತನ್ನು ಕ್ಯಾಮೆರಾ ಕಣ್ಗಳಲ್ಲಿ ಸೆರೆಹಿಡಿದವರು ಅಮೋಘವರ್ಷ.  

ಕರ್ನಾಟಕ ವನ್ಯಸಂಪತ್ತಿನ ಕುರಿತು ಆಳವಾದ ಅಧ್ಯಯನ ಹಾಗೂ ಅದನ್ನು ಜನರಿಗೆ ವಿವರಿಸುವ ಆಲೋಚನೆಯಲ್ಲಿ ತೊಡಗಿರುವ ಅಮೋಘವರ್ಷ, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಜೀವವೈವಿಧ್ಯ ಸಂಪತ್ತಿನ ಕುರಿತು ಸಿನಿಮಾ ಮಾಡುವ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಕರ್ನಾಟಕ ಜೀವವೈವಿಧ್ಯದ ಕುರಿತು ತಿಳಿಯಲು ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ: ಅಮೋಘವರ್ಷ

 

 

 

 

 

 

 

 

 

 

 

 

 

 

 

MORE FEATURES

ಬುದ್ಧ ಅರಳಲಿ ಎಲ್ಲರಲಿ...

02-07-2020 ಬೆಂಗಳೂರು

ಚಿಂತಕ ಎಸ್. ನಟರಾಜ ಬೂದಾಳು ಅವರು ಬೌದ್ಧ ತಾತ್ವಿಕತೆಯ ಪ್ರಮುಖ ಪರಿಕಲ್ಪನೆಯಾದ ಮಧ್ಯಮಮಾರ್ಗದ ಸರಳ ನಿರೂಪಣೆ  ಇರುವ...

ಕೃಷ್ಣಾನಂದ ಕಾಮತ್‌ ಅವರ ಕ್ಯಾಮೆರಾ ...

02-07-2020 ಬೆಂಗಳೂರು

ಕೀಟ ವಿಜ್ಞಾನಿಯಾಗಿದ್ದರೂ ಕ್ಯಾಮೆರಾ ಕಣ್ಣಿನಿಂದ ಜಗತ್ತಿನ ವಿಸ್ಮಯಗಳನ್ನುಸೆರೆ ಹಿಡಿಯುವ ಹವ್ಯಾಸದ ಕೃಷ್ಣಾನಂದ ಕಾಮತ್ ಅವ...

ಕೊರೊನಾ ಕಾಲದಲ್ಲಿ ’ಸಾಹಿತ್ಯ ಅಲ್ಲಿ...

30-06-2020 ಬೆಂಗಳೂರು

ಕನ್ನಡೇತರ ಭಾರತೀಯ ಭಾಷೆಗಳಲ್ಲಿ ಹಾಗೂ ಜಗತ್ತಿನ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಸಾಹಿತ್ಯ- ಪುಸ್ತಕ ಸಂಬಂಧಿಸಿದ ಮಾಹಿತಿ...

Comments

ಸ್ಪರ್ಧೆಯ ಕತೆಗಳು
ಸ್ಪರ್ಧೆಯ ಕವಿತೆಗಳು
Magazine
With us

Top News
Exclusive
Top Events