ಕಸ್ತೂರ್ ಬಾ ವರ್ಸಸ್ ಗಾಂಧಿ : ಒಳತೋಟಿಗಳ ಮುಖಾಮುಖಿ

Date: 03-05-2021

Location: ಬೆಂಗಳೂರು


‘ಬಾ ಅವರ ಹೊರತಾಗಿ ಮೋಹನದಾಸ ಮಹಾತ್ಮನಾಗುವುದು ಸಾಧ್ಯವಿರಲಿಲ್ಲ’ ಈ ಮಾತನ್ನೇ ಮೂಲವಾಗಿ ಗ್ರಹಿಸಿ ರಚಿತವಾಗಿರುವ ಮಹತ್ವದ ಕೃತಿ ‘ಕಸ್ತೂರ್ ಬಾ vs ಗಾಂಧಿ’. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಈ ಕೃತಿಯ ಕುರಿತು ಲೇಖಕಿ ಗೀತಾ ವಸಂತ ತಮ್ಮ ‘ತೆರದಷ್ಟೂ ಅರಿವು’ ಅಂಕಣದಲ್ಲಿ ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ. ತಪ್ಪದೇ ಓದಿ.

ಎರಡು ವ್ಯಕ್ತಿತ್ವಗಳು ಮುಖಾಮುಖಿಯಾಗುವ ಮೂಲಕ ಹೊಸದೊಂದು ಅರಿವು ರೂಪುಗೊಳ್ಳುತ್ತ ಹೋಗುವ ಪ್ರಕ್ರಿಯೆಯನ್ನು ಬರಗೂರು ರಾಮಚಂದ್ರಪ್ಪನವರ ಕಾದಂಬರಿ ‘ಕಸ್ತೂರ್ ಬಾ ವರ್ಸಸ್ ಗಾಂಧಿ’ ಹೃದ್ಯವಾಗಿ ಕಟ್ಟಿಕೊಡುತ್ತದೆ. ಸತ್ಯಾನ್ವೇಷಣೆಗೆ ತಮ್ಮನ್ನೇ ಸಮರ್ಪಿಸಿಕೊಂಡ ಗಾಂಧಿ ಹಾಗೂ ಬದುಕಿನ ಕಟುವಾಸ್ತವಗಳನ್ನು ದಿಟ್ಟವಾಗಿ ಎದುರಿಸುತ್ತ ತಮ್ಮ ಅರಿವನ್ನು ವಿಸ್ತರಿಸಿಕೊಂಡ ಕಸ್ತೂರ್, ಇಬ್ಬರೂ ಕಾದಂಬರಿಯಲ್ಲಿ ಜೊತೆಜೊತೆಯಾಗಿ ಹೆಜ್ಜೆಹಾಕುತ್ತಾರೆ. ಇಲ್ಲಿ ಕಸ್ತೂರ್ ಬಾ ಗಂಡನ ನೆರಳಲ್ಲ. ಪ್ರಖರ ವ್ಯಕ್ತಿತ್ವವಿರುವ ಹೆಣ್ಣು. ತನ್ನ ನಿಲುವುಗಳನ್ನು ಖಚಿತವಾಗಿ ಪ್ರತಿಪಾದಿಸುವಲ್ಲಿ ಕಾಣುವ ಆಕೆಯ ಸ್ವತಂತ್ರ ವ್ಯಕ್ತಿತ್ವ ಹಾಗೂ ತನ್ನ ನಿಲುವುಗಳು ತಪ್ಪೆಂದು ಅರಿವಾದ ಸಂದರ್ಭದಲ್ಲಿ ಅದನ್ನು ಬದಲಿಸಿಕೊಂಡು ಬೆಳೆಯುವ ಅವಳ ನಿಸ್ಪ್ರಹತೆ ದೊಡ್ಡದು. ವ್ಯಕ್ತಿತ್ವವನ್ನು ಕಡೆದು ಪುನರ್ ರಚಿಸಿಕೊಳ್ಳುವ ಸಂಕಟಕರ ಕ್ರಿಯೆಯಲ್ಲಿ ಸದಾ ಅನ್ವೇಷಣೆಯ ಮಾರ್ಗದಲ್ಲಿ ನಡೆದವರು ಗಾಂಧಿ. ಅವರು ಸದಾ ದ್ವಂದ್ವಗಳಲ್ಲಿ ಉರಿದು ರೂಪುಗೊಂಡ ಅಶಾಂತ ಸಂತ. ತಮ್ಮ ಆದರ್ಶಗಳ ಪಾಲನೆಯನ್ನು ಕಠಿಣ ವ್ರತದಂತೆ ಕೈಗೊಂಡ ಹಠವಾದಿ. ಎಲ್ಲರನ್ನೂ ಸಮತ್ವದಲ್ಲಿ ಕಾಯುವ ತಂದೆಯಂಥ ಗಾಂಧಿ, ತಾಯಿ ಮಮತೆಯ ಆರ್ದೃತೆಯ ಸೆಲೆಯನ್ನು ಸದಾ ಮುಚ್ಚಿಟ್ಟುಕೊಂಡವರು.

ತಾಯಿಯಾಗಿ ಕಸ್ತೂರ್ ಅನುಭವಿಸಿದ ತಳಮಳಗಳನ್ನು ಅರಿತೂ ಅದನ್ನು ಮೀರುವ ದಾರಿಗಳನ್ನು ತೋರಿದವರು ಗಾಂಧಿ. ತಾಯ್ತನವನ್ನು ಒಂದು ವಿಶ್ವಾತ್ಮಕ ಭಾವವಾಗಿ ಎಲ್ಲರಿಗೂ ವಿಸ್ತರಿಸಬೇಕೆಂಬ ಆದರ್ಶವನ್ನು ಕಸ್ತೂರ್ ಬಾ ಅವರಿಂದ ನಿರೀಕ್ಷಿಸಿದರು. ಸ್ವಂತದ ಸಂಸಾರವನ್ನು ವಿಶ್ವಕುಟುಂಬವಾಗಿ ವಿಸ್ತರಿಸುವ ಕಲ್ಪನೆಯನ್ನು ತಮ್ಮ ಆಶ್ರಮ ಜೀವನದಲ್ಲಿ ಅವರು ರೂಢಿಸುತ್ತ ಹೋದರು. ಸಂಪ್ರದಾಯಿಕ ಕೌಟುಂಬಿಕ ವಾತಾವರಣದಲ್ಲಿ ಬೆಳೆದ ಕಸ್ತೂರ್ ಅವರಿಗೆ ಗಾಂಧಿಯವರ ನಿಲುವುಗಳನ್ನು ಅರಗಿಸಿಕೊಳ್ಳುವುದು ಎಷ್ಟೋ ಸಂದರ್ಭಗಳಲ್ಲಿ ಕಷ್ಟವಾಯಿತು. ಆಧುನಿಕ ವಿದ್ಯಾಭ್ಯಾಸದ ಹೊರತಾಗಿಯೂ ತಮ್ಮ ಅಂತಃಸತ್ವ ಹಾಗೂ ಧಾರಣಶಕ್ತಿಯ ಬಲದಿಂದ ಸ್ವತಃ ಗಾಂಧಿಯವರ ವ್ಯಕ್ತಿತ್ವವನ್ನೂ ಪ್ರಭಾವಿಸುವಂತೆ ಬೆಳೆದ ಕಸ್ತೂರ್ ತಮ್ಮ ಕೊನೆಯ ದಿನಗಳಲ್ಲಿ ಮಹಾತ್ಮರೆನಿಸಿಕೊಂಡವರ ಆತ್ಮಸಾಕ್ಷಿಯನ್ನೆಚ್ಚರಿಸುವಂತೆ ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದರು. ಈ ಕಾದಂಬರಿಯ ವಿಶೇಷತೆ ಇರುವುದೇ ಇಲ್ಲಿ. ಕಸ್ತೂರ್ ಬಾ ಕಣ್ಣಲ್ಲಿ ಗಾಂಧಿಯವರು ನಿಚ್ಚಳವಾಗುತ್ತ ಹಾಗೆಯೇ ಗಾಂಧಿಯವರ ಕಣ್ಣಲ್ಲಿ ಕಸ್ತೂರ್ ಸ್ಪಷ್ಟಗೊಳ್ಳುತ್ತ ಹೋಗುತ್ತಾರೆ. ಈ ಪರಸ್ಪರ ಕೊಡುಕೊಳ್ಳುವಿಕೆಯಲ್ಲಿ ಮಾತ್ರ ಇಬ್ಬರೂ ಪೂರ್ಣಗೊಳ್ಳುವ ದಾಂಪತ್ಯ ಕಥನವಾಗಿಯೂ ಇದು ಅರ್ಥಪೂರ್ಣವಾಗಿದೆ.

ಇಬ್ಬರೂ ಪೂರ್ಣಗೊಳ್ಳುವ ಈ ಪ್ರಕ್ರಿಯೆಯಲ್ಲಿ ಸಂಘರ್ಷ, ವೈರುಧ್ಯಗಳಿವೆ. ಆದರೆ ಇದು ವಿನಾಶಕಾರಿ ಸ್ವರೂಪದ್ದಲ್ಲ. ವೈರುಧ್ಯಗಳು ಎದುರಾಗುವ ಮೂಲಕ ಬೇಯುವುದು ಬದುಕಿನ ಅನಿವಾರ್ಯ ಅಂಗ. ಆ ಮೂಲಕ ಪರಸ್ಪರರು ಅರ್ಥವಾಗುತ್ತ ಕೊನೆಯಲ್ಲಿ ವೈರುಧ್ಯಗಳೇ ಉರಿದು ಅವರು ಒಂದಾಗುತ್ತಾರೆ. ಹಾಗಾಗಿ, ಇದು ಸೃಷ್ಟಿಶೀಲ ಮುಖಾಮುಖಿ. ಯಾಕೆಂದರೆ ಅವರಿಬ್ಬರ ನಡುವಿನ ಅಚಲವಾದ ಪ್ರೀತಿ ಹಾಗೂ ವಿಶ್ವಾಸಗಳು ಅವರನ್ನು ಸಿಡಿದುಹೋಗದಂತೆ ಬೆಸೆದಿದ್ದವು. ಕಾದಂಬರಿಯ ಆರಂಭದಲ್ಲಿ ಲೇಖಕರು ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿಯ ಮಾತನ್ನು ಉಲ್ಲೇಖಿಸುತ್ತಾರೆ. “ ಬಾ ಅವರ ಹೊರತಾಗಿ ಮೋಹನದಾಸ ಮಹಾತ್ಮನಾಗುವುದು ಸಾಧ್ಯವಿರಲಿಲ್ಲ”. ಇದೇ ಮಾತನ್ನು ಬಾ ಅವರಿಗೂ ಅನ್ವಯಿಸಬಹುದು. ಒಬ್ಬರನೊಬ್ಬರು ಉದ್ದೀಪಿಸುತ್ತ ಬಲಿತ ಸಾಂಗತ್ಯದ ಸೂಕ್ಷ್ಮ ಚಹರೆಗಳನ್ನು ಬರಗೂರರು ಇಲ್ಲಿ ಬೆಳಗಿದ್ದಾರೆ.

ಕಾದಂಬರಿಗಿರುವ ಬಹು ಆಯಾಮಗಳನ್ನು ಗ್ರಹಿಸುತ್ತ ಹೋದಂತೆ ಚಾರಿತ್ರಿಕ ಸನ್ನಿವೇಶಗಳ ಮೂಲಕ ರೂಪುಗೊಂಡ ಗಾಂಧಿಯನ್ನು ಅದು ತೋರಿಸುತ್ತದೆ. ದಕ್ಷಿಣ ಆಫ್ರಿಕದಲ್ಲಿ ಹೋರಾಟಗಾರನಾಗಿ ಬೆಳೆದ ಗಾಂಧಿ, ನಂತರ ಭಾರತದ ಸ್ವಾತಂತ್ರ್ಯ ಹೋರಾಟ ಹಾಗೂ ಸಮಾಜ ಸುಧಾರಣ ಚಳವಳಿಗಳ ಭಾಗವಾಗಿ ಅದಕ್ಕೊಂದು ನೈತಿಕ ಸ್ವರೂಪ ಕೊಟ್ಟ ಕಥನವು ಇಲ್ಲಿ ಅಂತರ್ಗತವಾಗಿದೆ. ಗಾಂಧೀಜಿಯ ರಾಜಕೀಯ ನಿಲುವುಗಳು ರೂಪುಗೊಳ್ಳುವಲ್ಲಿ ಎದುರಾದ ಸೂಕ್ಷ್ಮ ಪ್ರಶ್ನೆಗಳ ಕಾವನ್ನು ಕಾದಂಬರಿ ಕಾಪಿಟ್ಟುಕೊಂಡಿದೆ. ಒಬ್ಬ ತತ್ವಜ್ಞಾನಿಯಾಗಿ ಗಾಂಧಿಯ ವಿಕಾಸವನ್ನು ಅದು ದರ್ಶಿಸುತ್ತದೆ. ಗಾಂಧಿ ಹಾಗೂ ಅಂಬೇಡ್ಕರ್ ಅವರ ಮುಖಾಮುಖಿಯ ಚಾರಿತ್ರಿಕ ಕ್ಷಣಗಳನ್ನು ಕಾದಂಬರಿಯಲ್ಲಿ ಮರುಸೃಷ್ಟಿಸುವ ಮೂಲಕ ಲೇಖಕರು ಧರ್ಮ, ಜಾತಿವ್ಯವಸ್ಥೆ ಹಾಗೂ ಅಸ್ಪ್ರಶ್ಯತೆ ಗಳನ್ನು ಗ್ರಹಿಸುವ ನೋಟಕ್ರಮದ ಸಿಕ್ಕುಗಳನ್ನು ಬಿಡಿಸುತ್ತಾರೆ. ಅವರಿಬ್ಬರ ನಡುವಿನ ಮಾತುಕತೆ ಸಮಾಜದ ದಮನಿತ ಸಮುದಾಯದ ನೋವು ಹಾಗೂ ತಲ್ಲಣಗಳನ್ನು ಗಾಂಧಿ ಹೆಚ್ಚು ಸೂಕ್ಷ್ಮವಾಗಿ ಅರ್ಥಮಡಿಕೊಳ್ಳುವಂತೆ ಮಾಡುತ್ತದೆ. ಆ ಮೂಲಕ ಅವರನ್ನು ಬದಲಿಸುತ್ತದೆ.

ಗಾಂಧಿ ಹಾಗೂ ಕಸ್ತೂರ್ ಅವರ ನಡುವೆ ಇದ್ದದ್ದು ವಿಚಾರದ ವಿರೋಧವೇ ಹೊರತೂ ವ್ಯಕ್ತಿ ವಿರೋಧವಲ್ಲ ಎಂದು ಲೇಖಕರು ಸರಿಯಾಗೇ ಗುರುತಿಸುವಂತೆ, ಅದರ ಹೊರತಾಗಿ ಪರಸ್ಪರರ ಬಗೆಗೆ ಅವರು ಗೌರವಾದರಗಳನ್ನು ಹೊಂದಿದ್ದರೆಂದು ಕಥನವು ತನ್ನ ಒಳನೋಟದಲ್ಲಿ ಕಾಣಿಸುತ್ತದೆ. ‘ಮುಖಾಮುಖಿ, ಅನುಸಂಧಾನ, ಅನುಬಂಧ- ಇವು ಗಾಂಧಿ ಹಾಗೂ ಕಸ್ತೂರ್ ಅವರ ವ್ಯಕ್ತಿತ್ವದ ಅಸಾಧಾರಣ ಪ್ರಕ್ರಿಯಾರೂಪಗಳು’ ಎನ್ನುವ ಲೇಖಕರು ಅವರಿಬ್ಬರ ವ್ಯಕ್ತಿತ್ವವೂ ಚಲನಶೀಲವಾಗಿತ್ತೆಂಬುದನ್ನು ಕಥನಕ್ರಿಯೆಯ ಮೂಲಕವೇ ತೋರಿಸುತ್ತಾರೆ. ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಅರಿವನ್ನು ವಿಸ್ತರಿಸಿಕೊಳ್ಳುತ್ತ, ಮುಖಾಮುಖಿಯನ್ನು ಅನುಬಂಧದ ನೆಲೆಗೇರಿಸುವಲ್ಲಿ ಕಾದಂಬರಿಯು ಯಶಸ್ವಿಯಾಗಿದೆ.

ಗಾಂಧಿ ಹಾಗೂ ಕಸ್ತೂರ್ ನಡುವಿನ ಸಾಂಗತ್ಯವನ್ನು ಬಾಲ್ಯದಿಂದ ಮೊದಲುಗೊಂಡು ಚಿತೆಯವರೆಗೂ ನಿರೂಪಿಸಿದ ಕಥನವು, ಗಂಡು ಹೆಣ್ಣಿನ ನಡುವಿನ ಬಾಂಧವ್ಯದ ಸೂಕ್ಷ್ಮ ಎಳೆಗಳನ್ನು ಹೆಣೆಯುತ್ತ ಹೋಗಿದೆ. ಬದುಕಿನ ಬವಣೆಗಳಲ್ಲಿ, ಎದುರಾಗುವ ಅಗ್ನಿದಿವ್ಯಗಳಲ್ಲಿ, ಧರ್ಮಸಂಕಟದ ಸನ್ನಿವೇಶಗಳಲ್ಲಿ ತೊಡಕಾಗುವ ಈ ಎಳೆಗಳನ್ನು ತಾಳ್ಮೆಯಿಂದ ಬಿಡಿಸಿಕೊಳ್ಳುತ್ತಾ ಮಾಗುವ ಪರಿಯನ್ನು ಈ ಪಯಣ ತೆರೆದಿಟ್ಟಿದೆ. ಬೇಂದ್ರೆ ಹೇಳುವಂತೆ ‘ಈ ಸಖ್ಯದ ಆಖ್ಯಾನ ಕಟು ಮಧುರ’ವೇ ಸರಿ. ಮಧುರ ಭಾವಗಳ ಮರೆಯಲ್ಲಿಯೇ ಅವಿತ ಮಹಾಮೌನವೊಂದು ಧುತ್ತನೇ ಎದೆಯನ್ನು ಆವರಿಸುವಂಥ ಕಂದಕವೊಂದನ್ನು ಗೊತ್ತಿಲ್ಲದೇ ಉಂಟುಮಾಡುತ್ತದೆ. ಅದರೆ ಭಾವದ ಸೇತುವೆ ಸದಾ ಅವರನ್ನು ಬೆಸೆಯುತ್ತಲೇ ಒಂದುಗೂಡಿಸುತ್ತದೆ. ಇಂತಹ ಸನ್ನಿವೇಶಗಳನ್ನು ಸೃಷ್ಟಿಸುವಾಗಲೆಲ್ಲ ಕಥನಕ್ಕೆ ಭಾವಗೀತೆಯ ಗುಣ ಬಂದುಬಿಡುತ್ತದೆ. ವಿಚಾರ ಮಾತ್ರದಿಂದ ವಿವರಿಸಲಾಗದ ಭಾವದ ಸೂಕ್ಷ್ಮ ಪಲಕುಗಳನ್ನು ಕಾವ್ಯದ ಮೂಲಕ ನಿವೇದಿಸುವುದು ಈ ಕಾದಂಬರಿಯ ಸಹಜ ಲಯವೂ ಹೌದು, ಕಥನ ತಂತ್ರವೂ ಹೌದು. ಬಾಲ್ಯದ ಹುಡುಗಾಟದಲ್ಲಿ ಮದುವೆಯ ಆಟವಾಡಿದ್ದ ಮೋಹನದಾಸ ಹಾಗೂ ಕಸ್ತೂರ್ ಇಬ್ಬರೂ ನಿಜಬದುಕಿನಲ್ಲೂ ಸತಿಪತಿಗಳಾಗುತ್ತಾರೆ. ರೂಢಿಗತವಾದ ಅಧಿಕಾರ ಸಂಬಂಧವೊಂದು ಅರಿವಿಲ್ಲದೇ ಅವರ ನಡುವೆ ಹೆಡೆಯಾಡುತ್ತದೆ. ಗಂಡಾಳಿಕೆಯ ಸಮಾಜದ ಭಾಗವಾಗಿ ಬೆಳೆದ ಗಾಂಧಿಗೆ ತಮ್ಮ ‘ಪುರುಷ ಅಹಂ’ ತಪ್ಪು ಎಂಬುದು ಅರಿವಾಗಲು ಸಂಗಾತಿ ಕಸ್ತೂರ್ ಕಾರಣವಾಗುತ್ತಾರೆ.

ರೆಕ್ಕೆಯಿದ್ದರೂ ಹಕ್ಕಿ ಹಾರಬಾರದೇ?
ನಾಲಗೆಯಿದ್ದರೂ ಹೆಣ್ಣು ನುಡಿಯಬಾರದೇ?
ಜಡರೂಢಿ ಬೇಲಿಯ ಬಂಧಿ!
ಬಂದೀತೇ ಬಿಡುಗಡೆಯ ನಾಂದಿ?

ಲಿಂಗಸೂಕ್ಷ್ಮತೆಯ ಅನೇಕ ಪ್ರಶ್ನೆಗಳನ್ನು ಲೇಖಕರು ಕಾದಂಬರಿಯುದ್ದಕ್ಕೂ ಕೇಳುತ್ತಲೇ ಹೋಗಿದ್ದಾರೆ. ಆ ನೆಲೆಯಿಂದ ಇದು ಸ್ತ್ರೀ ಸಂವೇದನೆಯ ಕಾದಂಬರಿ. ತನ್ನ ಅಹಂ ಕಳಚಿಕೊಳ್ಳುತ್ತಲೇ ಮಾಗುವ ಗಂಡಿನಲ್ಲಿ ಅಂತಃಕರಣದ ಸೆಲೆಯನ್ನು ತೋಡುವ ಹೆಣ್ಣು ತಾನು ಗೆಲ್ಲುತ್ತಲೇ ತನ್ನ ಪುರುಷನನ್ನೂ ಗೆಲ್ಲಿಸುವ ಪರಿ ಇಲ್ಲಿ ಅಚ್ಚರಿ. ‘ರೇಗುವುದು ಅನಂತರ ಬಾಗುವುದು’ ಮುಂಗೋಪಿಯಾಗಿದ್ದ ತರುಣಗಾಂಧಿಯನ್ನು ಕಸ್ತೂರ್ ಕಣ್ಣಲ್ಲಿ ಹೀಗೆ ಕಾಣಿಸುತ್ತಾರೆ. ಅವರ ದಾಂಪತ್ಯದ ಹಸಿಬಿಸಿ ಘಳಿಗೆಗಳನ್ನು ಚಿತ್ರಿಸುವ ಕಾದಂಬರಿ ಮಹಾತ್ಮನೆನಿಸಿಕೊಂಡವನ ‘ಮನುಷ್ಯಮಾತ್ರ’ ಮುಖವನ್ನು ತೋರಿಸುತ್ತದೆ. ಅವಮಾನ, ಅನುಮಾನ, ಮುನಿಸುಗಳಲ್ಲಿ ಅವರಿಬ್ಬರೂ ದೂರಾಗದೇ ಅವೆಲ್ಲ ಒಬ್ಬರನೊಬ್ಬರು ಇನ್ನಷ್ಟು ಅರಿಯಲು ನಿಮಿತ್ತಗಳಾಗುತ್ತವೆ.

ಗಾಂಧಿಯೂ ಮೌನ; ಕಸ್ತೂರ್ ಮೌನ
ಖಾಲಿ ಹುತ್ತದ ಒಳಗೆ ಗಾಳಿ ಸದ್ದು
ಮಾತಿಗಿಂತ ಯಾತನೆ ಈ ಮೌನ
ಮಾತು ಹವಣಿಸಿದೆ ಬರಲು ಕದ್ದು!

ಎಷ್ಟೋಸಲ ಮಾತಿಗಿಂತ ಮೌನದಲ್ಲೇ ಗೆದ್ದವರು ಕಸ್ತೂರ್. ಅವರು ಬದುಕಿನ ಪಯಣದಲ್ಲಿ ಸಾಧಿಸಿದ ಸಮಚಿತ್ತ ಈ ಮೌನದ ಹಿಂದೆ ಇತ್ತು. ಇದು ನಿರ್ಭಾವವಲ್ಲ. ಅಂಟಿಯೂ ಅಂಟದಂತೆ ಇದ್ದು ಮಾನಸಿಕ ದೂರದಿಂದ ಬದುಕನ್ನು ನೋಡುವ ಪ್ರಜ್ಞೆಯಿದು. ಅವರ ಈ ನಿರ್ಲಿಪ್ತತೆ ಜಡತೆಯಲ್ಲ, ಹೇಡಿತನವಲ್ಲ. ಅದು ನಿರ್ಮಲ ಅಂತಃಕರಣದಿಂದ ಮೂಡಿದ್ದು. ಘಟಿಸಿದ ಕಹಿಯನ್ನು ಹಿಂದೆಸರಿಸಿ ಮತ್ತೆ ಹೊಸ ಚೈತನ್ಯದಿಂದ ಮುನ್ನಡೆವ ಸ್ಥಿತಿಯದು. ಮುಂದೆ ಪತಿ ಬ್ಯಾರಿಸ್ಟರ್ ಆಗಲು, ದಕ್ಷಿಣ ಆಫ್ರಿಕದಲ್ಲಿ ಅವರ ಹೋರಾಟ ಹಾಗೂ ನಾಯಕತ್ವದ ಹೊಸಶಕೆಯೊಂದು ಆರಂಭವಾಗಲು ಬಾ ಅವರ ಬೆಂಬಲವಿದ್ದೇ ಇರುತ್ತದೆ. ಹಾಗೆಂದು, ಸದಾ ಮೌನ ಸಮ್ಮತಿಯಿತ್ತವರಲ್ಲ ಕಸ್ತೂರ್. ಆ ಮೌನ ಕೆಲವೊಮ್ಮೆ ಪ್ರತಿರೋಧದ ಪ್ರತೀಕವೂ ಹೌದು. ‘’ಮೌನಕ್ಕೆ ಅದೆಷ್ಟು ಮಾತಿನ ಮಜಲು!” ಎಂದು ಲೇಖಕರು ಉದ್ಘರಿಸುತ್ತಾರೆ. ಈ ಮಾತು ಮೌನಗಳ ನೆರಳು ಬೆಳಕಿನಲ್ಲಿ, ಸಾಲುಗಳ ನಡುವಿನ ಮಿಂಚಿನಲ್ಲಿ, ಕವಿತೆ ಸಾಲುಗಳ ಧ್ವನಿಪೂರ್ಣ ಭಾವಸ್ಫುರಣದಲ್ಲಿ ಕತೆಗೊಂದು ಭಾವುಕ ಆವರಣವನ್ನು ಲೇಖಕರು ಸೃಷ್ಟಿಸುತ್ತಾರೆ.

ಕಸ್ತೂರ್ ತೊಟ್ಟಿಲು ತೂಗುತ್ತಿದ್ದರು
ಪಿಳಿಪಿಳಿ ಕಣ್ಣುಗಳ ಗಿಣಿ ಮನ
ಚಂದ ತುಂಬಿದ ಮೌನವನ
ಮಾತಾಡದೆಯೂ ಅದೆಷ್ಟು ಮಾತು!
ಮಾತೆಗೆ ಮಾತ್ರ ತಿಳಿಯುವ ಮಾತು

ತಾಯಿಯಾಗಿ ಕಸ್ತೂರ್ ಅನುಭವಿಸಿದ ಸುಖಕ್ಕಿಂತ ಸಂಕಟಗಳ ಪಾಲೇ ಹಿರಿದು. ಹರಿಲಾಲ, ರಾಮದಾಸ, ಮಣ ಲಾಲ.. ಈ ಮಕ್ಕಳ ಪಾಲನೆಯಲ್ಲಿ ಮುಳುಗಿಹೋಗದೆ ಗಾಂಧಿಯವರ ಹೋರಾಟದ ಬದುಕಿನ ಭಾಗವಾಗಬೇಕಾದ ಅನಿವಾರ್ಯತೆ ಅವರ ಮುಂದಿತ್ತು. ಗಾಂಧಿಯ ಬಾಹ್ಯ ಹೋರಾಟ ಮಾತ್ರವಲ್ಲ ಅವರ ಅಂತರಂಗದ ಹೋರಾಟ ಹಾಗೂ ಹೊಯ್ದಾಟಗಳ ಪರಿಣಾಮವನ್ನೂ ಅವರು ಅನುಭವಿಸಬೇಕಿತ್ತು. ಗಾಂಧಿಯವರ ಮಾತಿಗೆ ಇರುತ್ತಿದ್ದುದು ಸದಾ ಆಜ್ಞೆಯ ಸ್ವರೂಪ. ಸೇವೆ ಹಾಗೂ ಸಮತೆಯ ಮೌಲ್ಯವನ್ನು ತನ್ನದಾಗಿಸಿಕೊಳ್ಳ ಹೊರಟ ಗಾಂಧಿ, ಅಸ್ಪ್ರಷ್ಯರ ಮಲಮೂತ್ರ ಸ್ವಚ್ಛಗೊಳಿಸುವಂತೆ ಕಸ್ತೂರ್ ಬಾ ಅವರನ್ನು ಒತ್ತಾಯಿಸುತ್ತಾರೆ. ಗಾಂಧಿಯ ಸರ್ವಾಧಿಕಾರದ ಧ್ವನಿಗೆ ಬಾ ಕೂಡ ಕೆರಳುತ್ತಾರೆ. ಸರ್ವಸಮಭಾವ ಹಾಗೂ ಅಂತಃಕರಣದಿಂದ ಹೊಮ್ಮಬೇಕಾದ ಸೇವಾಭಾವವನ್ನು ಗಂಡನೆಂಬ ಅಧಿಕಾರದಿಂದ ಹೇರಲು ಹೋಗಿ ಗಾಂಧಿ ಸೋಲುತ್ತಾರೆ. ಪತ್ನಿಯನ್ನು ಮನೆಯಿಂದ ಹೊರಗಟ್ಟುವ ಮುಂಗೋಪ ತೋರುತ್ತಾರೆ. ಆಗ ಕಸ್ತೂರ್ ಹೇಳುವ ಮಾತು “ನೀವು ಸಂಸಾರದ ಸರ್ವಾಧಿಕಾರಿ”. ಈ ಮಾತು ಗಾಂಧಿಯನ್ನು ನಾಟಿ ಅವರನ್ನು ಬದಲಿಸುತ್ತದೆ. ಯಾವ ಸರ್ವಾಧಿಕಾರದ ವಿರುದ್ಧ ತಾನು ಹೋರಾಟ ಕಟ್ಟುತ್ತಿದ್ದೇನೆಯೋ ಅದೇ ಸರ್ವಾಧಿಕಾರ ತನ್ನಲ್ಲೂ ಹೆಡೆಯಾಡುತ್ತಿರುವುದನ್ನು ಅರಿತು ಅವರು ಕ್ಷಮೆ ಯಾಚಿಸುತ್ತಾರೆ. ಸಮಚಿತ್ತದ ಮಾತುಕತೆಯಲ್ಲಿ ಕಸ್ತೂರ್ ಕೂಡ ತಮ್ಮ ಜಾತಿಭಾವನೆ ಕಳಚಿಕೊಂಡು ಶುದ್ಧರಾಗುತ್ತಾರೆ. ಸಮಾಜ ಬದಲಾವಣೆಯ ಹೋರಾಟದಲ್ಲಿ ಭೌತಿಕವಾಗಿಯೂ ತಾತ್ವಿಕವಾಗಿಯೂ ಪತಿಯ ಜೊತೆ ಹೆಗಲೆಣೆಯಾಗುತ್ತಾರೆ. ಹಿಂದೆ ಗಾಂಧಿ ಲಂಡನ್ನಿಗೆ ಹೋಗುವ ಸಮಯದಲ್ಲಿ ಸಮುದ್ರಯಾನ ಮಾಡಿದರೆ ಬಹಿಷ್ಕಾರ ಹಾಕುವುದಾಗಿ ಪಂಡಿತರು ಬೆದರಿಕೆಯೊಡ್ಡಿದ್ದಾಗಲೂ ಕಸ್ತೂರ್ ನಿಲುವು ಖಚಿತವಾಗಿತ್ತು. “ನಾನು ಸಂಪ್ರದಾಯಸ್ಥಳೇ ನಿಜ, ಆದರೆ ಇಂಥ ಶಾಸ್ತ್ರಕ್ಕೆಲ್ಲ ಸೊಪ್ ಹಾಕಲ್ಲ”. ಕಸ್ತೂರ್ ಅವರ ವ್ಯಕ್ತಿತ್ವ ಸಂಪ್ರದಾಯಿಕತೆಯನ್ನು ಉಳಿಸಿಕೊಂಡೂ ಜೀವಪರವಾದುದನ್ನು ಅಂಗೀಕರಿಸುವ ಚಲನಶೀಲ ವ್ಯಕ್ತಿತ್ವ. ಅಸ್ಪ್ರಶ್ಯರ ವಿಷಯದಲ್ಲೂ ಶಾಸ್ತ್ರಗಳ ಪೂರ್ವಗ್ರಹವನ್ನು ಮೀರಲು ಅವರ ತಾಯಿ ಹೃದಯಕ್ಕೆ ಸಾಧ್ಯವಾಗುತ್ತದೆ. ಅದು ಪಿತೃಸತ್ತೆಯ ಸರ್ವಾಧಿಕಾರ ಕಳಚಿಕೊಳ್ಳವ ಪರಿವರ್ತನೆಯ ಕುಲುಮೆಯಲ್ಲಿ ಗಾಂಧಿಯನ್ನು ಬೇಯಿಸುತ್ತದೆ. “ನೀವ್ ಹಾಗೇ ಬಾಪು ಸಿಟ್ಟಾಗ್ತೀರಿ, ನಿಮ್ಮನ್ ನೀವೇ ಸುಟ್ಕೊಳ್ತೀರಿ, ಬೆಂಕೀಲೇ ಬೆಳಕಾಗ್ತೀರಿ” ಇದು ಪತಿಯ ಕುರಿತ ಪತ್ನಿಯ ಅರ್ಥೈಸುವಿಕೆ. ತಾಯಿಮನದ ಇಂಥ ಅರಿವು, ಸಂಯಮಗಳೇ ಸಂಬಂಧವನ್ನು ಕಾಪಿಡುತ್ತವೆ.

ಆದರೆ ಮಕ್ಕಳ ವಿಷಯದಲ್ಲಿ ಮಹಾತ್ಮ ಎಡವಿದರೇ? ಮಗ ಹರಿಲಾಲನ ಬದುಕು ದಿಕ್ಕುತಪ್ಪಿದ ಹಾಯಿದೋಣಿಯಂತೆ ಹೊಯ್ದಾಡಿದಾಗ ತಾಯಿ ಮನಕ್ಕಾದ ಸಂಕಟ ಭಾಷಾತೀತವಾದುದು. ಮಕ್ಕಳ ಶಿಕ್ಷಣ, ಮದುವೆಯಂಥ ಖಾಸಗಿ ವಿಷಯಗಳಲ್ಲೂ ಗಾಂಧಿಯವರು ಕಠಿಣ ಆದರ್ಶಗಳನ್ನು ಹೇರಹೊರಟರು. ಅವರ ಸತ್ಯಾನ್ವೇಷಣೆಯ ಪರೀಕ್ಷೆ ಹರಿಲಾಲನಲ್ಲಿ ಸದಾ ಕ್ಷೋಭೆಯನ್ನುಂಟು ಮಾಡುತ್ತಿತ್ತು. ತಂದೆಯಿಂದ ಬೇರ್ಪಟ್ಟು ತನ್ನನ್ನು ತಾನುಕಂಡುಕೊಳ್ಳಬೇಕೆಂಬ ಅವನ ತಳಮಳವನ್ನು ಗಾಂಧಿ ಅರ್ಥಮಾಡಿಕೊಳ್ಳದೇ ಹೋದರು ಎನಿಸುತ್ತದೆ. ತಮ್ಮ ದೇಹ ಮನಸ್ಸು ಆತ್ಮಗಳನ್ನು ತಮಗೆ ಬೇಕಾದಂತೆ ಪಳಗಿಸಿಕೊಳ್ಳಲು ಹೊರಟ ಗಾಂಧಿ ಹಾಗೂ ಸಹಜರೂಢಿಯಂತೆ ಬದುಕಲು ಬಯಸುವ ಹರಿಲಾಲ ಇಬ್ಬರೂ ತಾತ್ವಿಕ ಸಂಘರ್ಷದಲ್ಲಿ ತೊಡಗುತ್ತಾರೆ. ರಾಷ್ಟ್ರಪಿತನೆನಿಸಿಕೊಂಡ ಗಾಂಧಿ ತನ್ನ ಮಗನಿಗೆ ತಂದೆಯಾಗಿ ನ್ಯಾಯಕೊಡಲಿಲ್ಲ ಎಂಬ ಭಾವ ಹಲವು ಸಂದರ್ಭಗಳಲ್ಲಿ ಸರಿದುಹೋಗುತ್ತದೆ. ‘ನೀವು ಎಷ್ಟೆಂದರೂ ಮಹಾತ್ಮರು ನಾನು ಹುಲುಮಾನವ’ ಎಂದು ಗಾಂಧಿಯವರಿಂದ ಬೇರ್ಪಟ್ಟು ಆತ ಹೊರಟೇಹೋಗುತ್ತಾನೆ. ಅವನ ಮಾತಿನ ವ್ಯಂಗ್ಯ ಆಳವಾದ ನೋವಿನಿಂದ ಕೂಡಿದ್ದು. ಗಾಂಧಿಯ ಹಠದಿಂದ ಹರಿಲಾಲನ ಬದುಕು ಹರಿದು ಚೂರುಚೂರಾಯಿತೇ? ಹಾಗಂತ ಲೇಖಕರು ಎಲ್ಲಿಯೂ ಹೇಳುವುದಿಲ್ಲ. ಆದರೆ ಹರಿಲಾಲನೊಳಗಿದ್ದ ಬೆಂಕಿಯನ್ನು ಬರಹ ಕಾಣಿಸುತ್ತದೆ. ಗಾಂಧಿಯವರಗಿದ್ದ ಧಾರಣಶಕ್ತಿ ಹರಿಲಾಲನಿಗಿರಲಿಲ್ಲ. ಅವನನ್ನು ಕಾಡಿದ ಅನಾಥ ಪ್ರಜ್ಞೆಗೆ ಉತ್ತರವೇ ಇರಲಿಲ್ಲ. ಇದರ ನಡುವೆ ನಲುಗಿಹೋಗಿದ್ದು ಮಾತ್ರ ತಾಯಿಕಸ್ತೂರ್.

ಗಾಂಧಿ ಅಂತರಂಗದ ಅಗ್ನಿ!
ಹರಿ ಬಹಿರಂಗದ ಬೆಂಕಿ!
ಇಬ್ಬರ ನಡುವೆ ತಾನು ಏನು
ಸುಡುವ ಬಡ ಮಡುಲು!

ಬ್ರಹ್ಮಚರ್ಯ ಪಾಲಿಸುವಂತೆ ಆಗ್ರಹಿಸಿದ ಗಾಂಧಿಗೆ, ಉಪದೇಶ ಕೊಡುವುದು ಸುಲಭ ಅದನ್ನು ನೀವೇ ಪಾಲಿಸಿ ಎಂದು ಹರಿಲಾಲನೇನೋ ಹೊರಟುಹೋಗುತ್ತಾನೆ. ಇತ್ತ ಗಾಂಧಿ ಬ್ರಹ್ಮಚರ್ಯದ ಪ್ರಯೋಗಕ್ಕಿಳಿಯುತ್ತಾರೆ. ದಾಂಪತ್ಯದಲ್ಲಿ ಪತಿಪತ್ನಿಯರಿಬ್ಬರೂ ಸಹಭಾಗಿಗಳಾಗಿರುವಾಗ ಗಾಂಧಿ ತೆಗೆದುಕೊಳ್ಳವ ಈ ಏಕಮುಖ ತೀರ್ಮಾನವನ್ನು “ ನಿಮ್ಮ ಪ್ರಯೋಗಕ್ಕೆ ನಾನೇ ಬಲಿಪಶು ಆಗ್ಬೇಕ?”ಎಂದು ಬಾ ಪ್ರಶ್ನಿಸುತ್ತಾರೆ. “ಇದು ನನ್ನ ಮೇಲಿನ ಪ್ರಯೋಗವೂ ಹೌದಲ್ವ?” ಎಂಬುದು ಅದಕ್ಕೆ ಗಾಂಧಿಯ ಉತ್ತರ. “ ಅವತ್ತಿನಿಂದ ನನ್ನ ಬದುಕು ವಿರಹವಿಲ್ಲದ ಬರಹ” ಇದು ಕಸ್ತೂರ್ ಬಾ ಸ್ವಗತ. ಕಸ್ತೂರ್ ಬಾ ಬದುಕಿನ ಅನೇಕ ಹಂತಗಳು ಗಾಂಧಿ ನಿರ್ದೇಶಿಸಿದಂತೆ ಸಾಗಬೇಕಾಯಿತು. ಅವರ ತಳಮಳಗಳು ಕಾಲದ ತೆಕ್ಕೆಯಲ್ಲಿ ಹಾಗೆಯೇ ಉಳಿದುಹೋದವು. ಗಾಂಧಿಯೊಂದಿಗೆ ಹೊರಗಿನ ರಾಜಕೀಯ ಸ್ವರೂಪದ ಹೋರಾಟಗಳಲ್ಲೂ ಭಾಗಿಯಾದ ಅವರು ಒಳಗಿನ ಮಾನಸಿಕ ಹೋರಾಟದಲ್ಲೂ ತೊಡಗಬೇಕಿತ್ತು. ಭಾವಕೋಶವು ಘಾಸಿಯಾದರೂ ತೋರದಂತೆ ತಮ್ಮ ತಾವೇ ಸಂತೈಸಿಕೊಳ್ಳಬೇಕಿತ್ತು. ಸಮಾಜ ಹಾಗೂ ಸಂಸಾರಗಳ ನಡುವೆ ಅವರ ಹೊಯ್ದಾಟವಿತ್ತು. ಸಾಮಾಜಿಕ ನೈತಿಕತೆಯಿರುವಂತೆ ಸಂಸಾರಕ್ಕೂ ಅದರದೇ ನೈತಿಕ ಬದ್ಧತೆಯಿರುತ್ತದೆಯಲ್ಲವೇ? ಎಂದು ಅವರು ಪ್ರಶ್ನೆಯಾಗುತ್ತಾರೆ. ‘ಸಂಸಾರವೆಂದರೆ ಸ್ವಾರ್ಥ’ ಎಂದು ಮಹಾತ್ಮನೆನಿಸಿಕೊಂಡ ಗಂಡು ಯೋಚಿಸುವ ರೀತಿ ತಾಯ್ತನದ ಅಂತರಂಗಕ್ಕೆ ಸಹ್ಯವಾಗುವುದಿಲ್ಲ. ಅಂತರಂಗ ಬಹಿರಂಗಗಳೆರಡರಲ್ಲೂ ಗಂಡನನ್ನು ಅನುಸರಿಸಿ ನಡೆಯಬೇಕಾದ ಭಾರತೀಯ ಹೆಣ್ಣಿನ ಒಳಮನದ ತುಮುಲಗಳನ್ನು ಕಾಣಿಸುವ ಕಸ್ತೂರ್ ಪಾತ್ರ ಆಳವಾಗಿ ಕಾಡುತ್ತದೆ. ಸತಿಧರ್ಮ, ತಾಯಿಧರ್ಮ, ರಾಷ್ಷ್ರಧರ್ಮ, ಸಾಮಾಜಿಕ ನ್ಯಾಯಬದ್ಧತೆ ಇವೆಲ್ಲವುಗಳ ನಡುವೆ ತನ್ನನ್ನು ಕಳೆದುಕೊಳ್ಳದೇ ಶೋಧಿಕೊಂಡವರು ಕಸ್ತೂರ್. ಎಲ್ಲವನ್ನೂ ಒಳಗೊಂಡು ಹಿಗ್ಗುತ್ತಹೋದ ಅವರ ವ್ಯಕ್ತಿತ್ವ ಕಾದಂಬರಿಯಲ್ಲಿ ತನ್ನ ಗಾಢ ಬಿಂಬವನ್ನು ಮೂಡಿಸಿದೆ. ‘ಸಬಕೋ ಸನ್ಮತಿ ದೇ ಭಗವಾನ್’ ಎನ್ನುತ್ತಲೇ ಅವರ ಉಸಿರು ಕೊನೆಯಾದದ್ದು ಅದಕ್ಕೊಂದು ನಿದರ್ಶನ.

ಗಾಂಧಿ ತಮ್ಮ ಬದುಕನ್ನೇ ಪ್ರಯೋಗಶಾಲೆಯಾಗಿಸಿಕೊಂಡವರು. ತಪ್ಪುಗಳನ್ನು ಅರಿತು ಬದಲಾಗುತ್ತ ನಡೆವ ಅವರ ನಡೆಯಿಂದಾಗಿಯೇ ಅವರು ನಮಗೆ ಮಾದರಿಯಾಗುತ್ತಾರೆ. ಧರ್ಮ ಹಾಗೂ ತತ್ವಜ್ಞಾನದ ಕುರಿತು ಅವರ ಗಾಢ ಒಲವು, ಸತ್ಯನ್ವೇಷಣೆಯ ಒಳತಿಳಿವುಗಳು ಅವರನ್ನು ಇಡೀ ಜಗತ್ತು ತಿರುಗಿ ನೋಡುವಂತೆ ಮಾಡಿವೆ. ಅವರು ಸತ್ಯ, ಅಹಿಂಸೆ, ಅಪರಿಗ್ರಹ, ನಿಸ್ವಾರ್ಥ ನಿರ್ಮೋಹಗಳ ಸಾಧನೆಯ ದಾರಿಯಲ್ಲಿ ತಳಮಳಗಳ ಅಗ್ನಿಕುಂಡವನ್ನು ಹಾಯುತ್ತಲೇ ಹೋದವರು. “ಸಮಾಜದ ಜವಾಬ್ದಾರಿಯಲ್ಲಿ ಸಂಸಾರದ ಜವಾಬ್ದಾರಿ ಮರೆತವನೆಂದು” ಹರಿಲಾಲನಿಗನಿಸಿದರೆ, ಜಾತಿ ಹಾಗೂ ವರ್ಣವ್ಯವಸ್ಥೆಯನ್ನು ಒಂದುಹಂತದಲ್ಲಿ ಒಪ್ಪಿಕೊಂಡಿದ್ದ ಗಾಂಧಿಗೆ ಅಸ್ಪ್ರಶ್ಯರ ನಿಜ ನೋವು ಅರ್ಥವಾಗದೆಂದು ಅಂಬೇಡ್ಕರ್ ಅವರಿಗೆ ಅನಿಸಿತು. ಎರಡೂ ಸಂದರ್ಭದಲ್ಲಿ ನಿಸ್ಪ್ರಹ ತಂದೆಯಾಗಿ ಗಾಂಧಿ ಅವರನ್ನು ಎದುರಿಸಬೇಕಾಗುತ್ತದೆ. ಇದೊಂದು ಬಗೆಯಲ್ಲಿ ವಿಶ್ವಕುಟುಂಬಿಯ ಕಷ್ಟ. ತರತಮಕ್ಕೊಳಗಾದ ಮಕ್ಕಳನ್ನು ಎದೆಗಪ್ಪಿಕೊಳ್ಳವ ಅವರ ತಾಯ್ತನವೂ ಕಥನದ ಒಳಬೆಸುಗೆಯಲ್ಲಿ ಸೇರಿಹೋಗಿದೆ. “ಅಸ್ಪ್ರಶ್ಯತೆ ಉಳುದ್ರೆ ಹಿಂದೂ ಧರ್ಮ ಉಳಿಯಲ್ಲ: ಹಿಂದೂಧರ್ಮ ಉಳೀಬೇಕಾದ್ರೆ ಅಸ್ಪ್ರಶ್ಯತೆ ಅಳೀಬೇಕು” ಎಂಬುದು ಅವರ ಖಚಿತ ನಿಲುವಾಗಿತ್ತು. ಅವರ ಅಂತರಂಗಸಾಧನೆ ಈ ಎಲ್ಲ ಕೇಡುಗಳನ್ನು ಕಳಚಿಕೊಳ್ಳವತ್ತಲೇ ಇತ್ತು. ಅಂಬೇಡ್ಕರ್ ಅವರೊಂದಿಗಿನ ಅವರ ತಾತ್ವಿಕ ಮುಖಾಮುಖಿ ಜಾತಿಪದ್ದತಿಯ ಕುರಿತ ಅವರ ನಿಲುವನ್ನು ಬದಲಾಯಿಸುತ್ತದೆ. ಗಾಂಧಿ ಆಳವಾದ ಪಾಪಪ್ರಜ್ಞೆಯಿಂದವರು ಬೆತ್ತಲಾದರು ಹಾಗೂ ಪಡೆದುಕೊಂಡ ಆತ್ಮವಿಶ್ವಾಸದಿಂದ ಅಂಬೇಡ್ಕರ್ ಸೂಟುಧಾರಿಯಾದವರು! ಇದು ಚಾರಿತ್ರಿಕ ಅನಿವಾರ್ಯತೆಯಾಗಿತ್ತೆಂಬುದನ್ನು ಕಾದಂಬರಿಯು ಧ್ವನಿಸುತ್ತದೆ.

ಅಂಬೇಡ್ಕರ್ ಹಾಗೂ ಗಾಂಧಿ ಮುಖಾಮುಖಿಯ ಭಾಗ ಕಾದಂಬರಿಯು ವೈಚಾರಿಕ ನಿಲುವುಗಳನ್ನು ಮುಖಾಮುಖಿಯಾಗಿಸುವ ಭಾಗವೂ ಹೌದು. ಅಲ್ಲಿ ಸಾಕ್ಷಿಪ್ರಜ್ಞೆಯ ಹಾಗೆ ಕಸ್ತೂರ್ ಅವರ ಉಪಸ್ಥಿತಿಯನ್ನೂ ತರುವ ಮೂಲಕ ಬಾ ಅವರ ವ್ಯಕ್ತಿತ್ವವನ್ನು ಲೇಖಕರು ಇನ್ನಷ್ಟು ಬೆಳಗಿಸುತ್ತಾರೆ. ಮುನಿಸಿಕೊಂಡು ಮನೆತೊರೆದು ಹೊರಟಮಗನನ್ನು ತಡೆವ ತಂದೆಯಂತೆ, ಕೆಲವೊಮ್ಮೆ ಅಸಹಾಯಕ ತಾಯಿಯಂತೆ ಗಾಂಧಿ ಅಂಬೇಡ್ಕರ್ ಅವರನ್ನು ಸಂತೈಸುತ್ತಾರೆ. ಹಿಂದೂ ಆಗಿಸಾಯಲಾರೆ ಅಂದಿದ್ದರು ಅಂಬೇಡ್ಕರ್. ಆದರೆ ದೋಷವಿರುವುದು ಧರ್ಮದಲ್ಲಲ್ಲ, ಧರ್ಮವನ್ನು ಗುತ್ತಿಗೆ ಪಡೆದ ಜಡ ಸಂಪ್ರದಾಯವಾದದಲ್ಲಿ ಎಂಬುದು ಗಾಂಧಿಮತ. ತನ್ನ ಅರ್ಥದ ಹಿಂದೂಧರ್ಮ ಅಸ್ಪ್ರಸ್ಯತೆಯ ವಿರೋಧಿ; ಅನ್ಯಧರ್ಮಗಳ ವಿರೋಧಿ ಅಲ್ಲ” ಎಂಬುದು ಅವರ ತಿಳಿವು. ಧರ್ಮದ ಆಂತರ್ಯ ಶೋಧಿಸುವ ಗಾಂಧಿ ಹಾಗೂ ಸುಡುವಾಸ್ತವದ ತಾರತಮ್ಯಗಳಿಗೆ ಕಿಡಿಯಾಗುವ ಅಂಬೇಡ್ಕರ್ ಇಬ್ಬರನ್ನೂ ಪೂರ್ವಗ್ರಹವಿಲ್ಲದೇ ಅರಿಯುವ ಸನ್ನಿವೇಶ ನಿರ್ಮಾಣ ಕಾದಂಬರಿಯನ್ನು ಸಮತೋಲನದಲ್ಲಿ ಮುನ್ನಡೆಸಿದೆ.

ಕಾದಂಬರಿಯು ಜೀವಂತಗೊಳ್ಳವುದು ಮೊದಲೇ ಹೇಳಿದಂತೆ ಭಿನ್ನತೆಗಳನ್ನು ಜೀರ್ಣಿಸಿಕೊಂಡು ಮುನ್ನಡೆವ ಸೃಷ್ಟಿಶೀಲತೆಯಲ್ಲಿ. ಗಂಡು-ಹೆಣ್ಣು ಎಂಬ ಜೈವಿಕ ಭಿನ್ನತೆ, ಗಂಡ ಹೆಂಡಿರ ನಡುವಿನ ದೃಷ್ಟಿಕೋನದ ಭಿನ್ನತೆ, ಭಿನ್ನ ಜಾತಿ ಹಾಗೂ ಸಾಂಸ್ಕೃತಿಕ ಪರಿಸರದಲ್ಲಿ ಮೂಡಿದ ಅನುಭವಗಳ ಭಿನ್ನತೆ, ನೈತಿಕ ನಿಲುವುಗಳನ್ನು ರೂಪಿಸುವ ಭಿನ್ನ ಅಳತೆಗೋಲುಗಳು ಕಾದಂಬರಿಯಲ್ಲಿ ಪ್ರಕ್ಷುಬ್ದತೆಯನ್ನು ಸೃಷ್ಟಿಸುತ್ತವೆ ನಿಜ. ಆದರೆ ಅರಿವಿನ ಒರೆಗಲ್ಲಿನಲ್ಲಿ ಎಲ್ಲರನ್ನೂ ಒಂದುಮಾಡಲು ಕಾದಂಬರಿಕಾರರ ಪ್ರಜ್ಞೆ ತುಡಿಯುತ್ತದೆ. ಗಾಂಧಿ ವರ್ಸಸ್ ಕಸ್ತೂರ್ ಎಂಬುದು ಇದಕ್ಕೊಂದು ಸಂಕೇತವಾಗಿಯೂ ತೋರುತ್ತದೆ. ಗಂಡಿನ ಲೋಕಗ್ರಹಿಕೆ ಹಾಗೂ ಹೆಣ್ಣಿನ ಲೋಕಗ್ರಹಿಕೆಗಳೇ ಬೇರೆ. ಅವೆರಡೂ ವಿರುದ್ಧವಾಗದೇ ಪೂರಕವಾಗಿ ಒಂದಾದಾಗ ಪೂರ್ಣ ಅರಿವು ಸಿದ್ದಿಸುತ್ತದೆ. ಕಸ್ತೂರ್ ಬಾ ಶಿಕ್ಷಣ ಪಡೆಯದಿದ್ದರೂ ಅವಳ ಜ್ಞಾನ ಕಡಿಮೆಯದಲ್ಲ ಎಂದು ಗುರುತಿಸುವ ಮಾತನ್ನು ಒಂದೆಡೆ ಗಾಂಧಿ ಆಡುತ್ತಾರೆ. ಬಾ ಶಿಕ್ಷಣ ಪಡೆಯದಿರುವುದು ಕೊರತೆಯೆಂದು ಭಾವಿಸಿದ್ದ ಗಾಂಧಿ ‘ಕಸ್ತೂರ್ ಬಾ ನಿಜ ಶಿಕ್ಷಣದ ಮಾದರಿ’ ಎಂದು ಬರೆಯುವುದು ಅವರ ಚಿಂತನೆಯಲ್ಲಾದ ವಿಕಾಸ. ಇಂಥ ಅನೇಕ ತಾತ್ವಿಕ ಒಳನೋಟಗಳು ಕಥನದ ಜೊತೆಜೊತೆಯೇ ಸಾಗುತ್ತವೆ. ಇಬ್ಬರೂ ಪರಸ್ಪರರ ಚಿಂತನೆಗಳಿಂದ, ಸಾನಿಧ್ಯದಿಂದ ಬೆಳೆದರು ಎಂಬುದು ಧನಾತ್ಮಕ ಅಂಶ. “ ನಾವಿಬ್ಬರೂ ಒರೆಗಲ್ಲು ಇದ್ದಹಾಗೆ. ಒರೆಗಲ್ಲುಗಳು ಎದುರುಬದುರಾಗೋದರಲ್ಲೂ ವ್ಯಕ್ತಿತ್ವ ಬೆಳೆಯುತ್ತೆ. ಎದುರಾಗ್ತಾನೇ ಒಂದಾಗೋದು ಸಾಧ್ಯವಾಗುತ್ತೆ.” ಗಾಂಧಿ ಕಸ್ತೂರ್ ಬಾಗೆ ಹೇಳುವ ಈ ಮಾತು ಕಾದಂಬರಿಯ ತಾತ್ವಿಕತೆಯೂ ಹೌದು.

ಕಸ್ತೂರ್ ಬಾ vs ಗಾಂಧಿ ಪುಸ್ತಕದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಈ ಅಂಕಣದ ಹಿಂದಿನ ಬರೆಹಗಳು:

ಕನ್ನಡ ಚಿಂತನೆಯ ಸ್ವರೂಪ ಹಾಗೂ ಮಹಿಳಾ ಸಂವೇದನೆಗಳು

ಸಾಹಿತ್ಯ ಸರಸ್ವತಿ ಬದುಕಿನ ‘ಮುಂತಾದ ಕೆಲ ಪುಟಗಳು’...

ಹೋದವರು ಹಿಂದಿರುಗಿ ಬರಲು ಹಾದಿಗಳಿಲ್ಲ

ನಿಗೂಢ ಮನುಷ್ಯರು: ತೇಜಸ್ವಿಯವರ ವಿಶ್ವರೂಪ ದರ್ಶನ

ಕನಕನ ಕಿಂಡಿಯಲ್ಲಿ ಮೂಡಿದ ಲೋಕದೃಷ್ಟಿ

ವಿಶ್ವಮೈತ್ರಿಯ ಅನುಭೂತಿ : ಬೇಂದ್ರೆ ಕಾವ್ಯ

ಕಾರ್ನಾಡರ ಯಯಾತಿ- ಕಾಲನದಿಯ ತಳದಲ್ಲಿ ಅಸ್ತಿತ್ವದ ಬಿಂಬಗಳ ಹುಡುಕಾಟ

ಹರಿವ ನದಿಯಂಥ ಅರಿವು : ಚಂದ್ರಿಕಾರ ಚಿಟ್ಟಿ

ಕಾಲುದಾರಿಯ ಕವಿಯ ಅ_ರಾಜಕೀಯ ಕಾವ್ಯ

MORE NEWS

ನಾದದ ಇಂಪು ಅಡುಗೆಯ ಕಂಪು- ರಾಗ ಎನ್...

12-05-2021 ಬೆಂಗಳೂರು

ಖ್ಯಾತ ಗಾಯಕಿ, ಲೇಖಕಿ ಹಾಗೂ ಕಿರಾನಾ ಘರಾನೆಯ ಗಾಯಕಿ ಶೀಲಾ ಧರ್ ಅವರ ಆತ್ಮಕಥೆ ‘ರಾಗ ಎನ್ ಜೋಶ್’. ಒಬ್ಬ ವ್...

ಗದ್ದಲದ ಲೋಕದಲ್ಲಿ ಒಳಗಿನ ಪಿಸುಮಾತು...

11-05-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...

ರವೀಂದ್ರನಾಥ ಟ್ಯಾಗೋರರ ಪ್ರಭಾವದಲ್ಲ...

07-05-2021 ಬೆಂಗಳೂರು

ಗುರುದೇವ ರವೀಂದ್ರನಾಥ ಟ್ಯಾಗೋರರ ಸಾಧನಾ ಎಂಬ ಅದ್ಭುತ ಪ್ರಬಂಧಗಳ ಸಂಕಲನ ಮತ್ತು ಕೆಲವು ಕವಿತೆಗಳ ಅಚ್ಚಳಿಯದ ಪ್ರಭಾವದಲ್ಲಿ...