ಕತೆಗಾರ ಲಕ್ಷ್ಮಣ ಬಾದಾಮಿ ಅವರ ವಿಶೇಷ ಸಂದರ್ಶನ


ಲೇಖಕ ಲಕ್ಷ್ಮಣ ಬಾದಾಮಿ ಅವರ ‘ಒಂದು ಚಿಟಿಕೆ ಮಣ್ಣು’ ಕತಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ. ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಲಕ್ಷ್ಮಣ ಬಾದಾಮಿ ಅವರು ‘ಭವ’, ‘ಬೇರು ಮತ್ತು ಬೆವರು’, ‘ಒಂದು ಚಿಟಿಕೆ ಮಣ್ಣು’ ಕತಾಸಂಕಲನಗಳ ಮೂಲಕ ಕನ್ನಡ ಕತಾಲೋಕದಲ್ಲಿ ತಮ್ಮದೇ ಆದ ಅಸ್ಮಿತೆಯೊಂದನ್ನ ಕಟ್ಟಿಕೊಂಡಿದ್ದಾರೆ. ‘ಮನುಷ್ಯರು ಬೇಕಾಗಿದ್ದಾರೆ’ ಎಂಬ ಕವನ ಸಂಕಲನವನ್ನೂ ಪ್ರಕಟಿಸಿರುವ ಅವರು ಬರವಣಿಗೆಯಲ್ಲಿ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತೇನೆ ಎನ್ನುತ್ತಾರೆ. ಕಲೆ, ಸಾಹಿತ್ಯಿಕ ಒಡನಾಟದಲ್ಲಿ ತಮ್ಮನ್ನು ವಿಭಿನ್ನವಾಗಿ ರೂಪಿಸಿಕೊಂಡಿರುವ ಲಕ್ಷ್ಮಣ ಬಾದಾಮಿ ಅವರೊಂದಿಗೆ ‘ಬುಕ್ ಬ್ರಹ್ಮ’ ನಡೆಸಿದ ಕಿರು ಸಂದರ್ಶನ ಇಲ್ಲಿದೆ.

ಬುಕ್ ಬ್ರಹ್ಮ: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ನಿಮ್ಮ ಪ್ರತಿಕ್ರಿಯೆ?

ಲಕ್ಷ್ಮಣ ಬಾದಾಮಿ: ಈ ಬಹುಮಾನ ಬಂದಿದ್ದಕ್ಕೆ ಖುಷಿ ಆಗಿದೆ. ನಾನು ಈ ಬಹುಮಾನವನ್ನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಕೃತಿಗೆ ಬಹುಮಾನ ಬಂದಿರುವುದರ ನೆಪದಲ್ಲಿ ಇನ್ನೊಂದಷ್ಟು ಓದುಗರು ಸಿಕ್ಕಬಹುದು ಅಂದುಕೊಂಡಿದ್ದೇನೆ.

ಬುಕ್ ಬ್ರಹ್ಮ: ಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ

ಲಕ್ಷ್ಮಣ ಬಾದಾಮಿ: ಸಾಹಿತ್ಯ ಕ್ಷೇತ್ರವನ್ನು ನಾನು ಬೇಕೂಂತ ಆಯ್ಕೆ ಮಾಡಿಕೊಂಡು ಬಂದಿದ್ದಲ್ಲ. ಇದೊಂದು ಆಕಸ್ಮಿಕ ಅನ್ನಬಹುದು. ನಾನು ಮೂಲತಃ ಚಿತ್ರಕಲಾ ವಿದ್ಯಾರ್ಥಿ. ಅಲ್ಲಿ ಕಾಲೇಜಿನಲ್ಲಿ ನನ್ನೊಬ್ಬ ಗೆಳೆಯ ಬರೆಯುತ್ತಿದ್ದರಿಂದ ನಾನು ಬರೆಯಬೇಕು ಅಂತನ್ನಿಸಿ ಅಲ್ಲಿಂದ ಹಾಗೆಯೇ ಬರೆಯೋದಕ್ಕೆ ಶುರುಮಾಡಿಕೊಂಡೆ.

ಬುಕ್ ಬ್ರಹ್ಮ: ಸಾಹಿತ್ಯಿಕ ಪಯಣದಲ್ಲಿ ನೀವು ಹೆಮ್ಮೆ ಪಡುವ ವಿಚಾರ ಯಾವುದು

ಲಕ್ಷ್ಮಣ ಬಾದಾಮಿ: ಸಧ್ಯದ ಈ ಕ್ಷಣವೇ ಹೆಮ್ಮೆ ಪಡುವಂಥದ್ದು ಅಂತ ನಾನು ಅಂದುಕೊಂಡಿನಿ. ಯಾಕೆಂದರೆ ನಾನು ಸಂಪೂರ್ಣವಾಗಿ ನಾನ್ ಅಕೆಡಮಿಕ್ ವಲಯದಿಂದ ಬಂದವನು. ಅದರಲ್ಲೂ ಒಬ್ಬ ಚಿತ್ರಕಲಾ ಶಿಕ್ಷಕನನ್ನು ನೋಡುವ ದೃಷ್ಟಿಕೋನ, ಸಮಾಜದ್ದು ಮತ್ತು ಶಿಕ್ಷಣ ವ್ಯವಸ್ಥೆಯದು ಈ ಆಧುನಿಕ ಕಾಲಘಟ್ಟದಲ್ಲಿಯೂ ಬದಲಾಗಿಲ್ಲ. ಇಂಥ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕನೊಬ್ಬನಿಗೆ ಸಾಹಿತ್ಯ ಅಕಾಡೆಮಿ ಬಹಮಾನವು ಬಂದಿರುವುದು ಒಂದು ರೀತಿಯಲ್ಲಿ ಹೆಮ್ಮೆ ಅನಿಸ್ತಿದೆ.

ಬುಕ್ ಬ್ರಹ್ಮ: ಯಾವ ಲೇಖಕರ ಕೃತಿಗಳು ನಿಮ್ಮನ್ನು ಹೆಚ್ಚು ಪ್ರೇರೇಪಿಸುತ್ತವೆ ಅಥವಾ ಕಾಡುತ್ತವೆ.

ಲಕ್ಷ್ಮಣ ಬಾದಾಮಿ: ಒಬ್ಬೊಬ್ಬ ಲೇಖಕರ ಕೃತಿಗಳು ಒಂದೊಂದು ಕಾರಣಕ್ಕೆ ನನಗೆ ಪ್ರೇರೇಪಣೆ ನೀಡಿವೆ. ಭಾಷೆಯ ಕಾರಣಕ್ಕೆ ಕುಂವೀ, ತಾತ್ವಿಕತೆಯ ಕಾರಣಕ್ಕೆ ನುಗಡೋಣಿ, ಅನುಭವದ ಕಾರಣಕ್ಕೆ ಬಾಳಾಸಾಹೇಬ ಲೋಕಾಪುರ, ವೈವಿಧ್ಯಮಯ ವಸ್ತುಗಳ ಕಾರಣಕ್ಕೆ ಸಮಕಾಲೀನ ಅನೇಕ ಹೊಸ ಕತೆಗಾರರ ಕೃತಿಗಳು ಸಹ ನನಗೆ ಪ್ರೇರಣೆಯನ್ನು ನೀಡುತ್ತಿವೆ.

ಬುಕ್ ಬ್ರಹ್ಮ: ಇದನ್ನು ನಾನು ಬರೆಯಬೇಕಿತ್ತು ಎನಿಸುವಂತಹ ಕೃತಿ ಯಾವುದು?

ಲಕ್ಷ್ಮಣ ಬಾದಾಮಿ: ನಾನು ಇದನ್ನು ಬರೆಯಬೇಕಿತ್ತು ಅಂಥ ತೀವ್ರವಾಗಿ ನನಗೆ ಯಾವಾಗಲೂ ಅನ್ನಿಸಿಲ್ಲ. ಹಾಗನ್ನಿಸಬೇಕು ಅಂದರೆ ನನ್ನ ಪ್ರಕಾರ- ನನ್ನ ಅಥವಾ ನನ್ನಂಥದೆ ಅನುಭವ ಲೋಕವನ್ನು ಹೋಲುವುಂತದ್ದನ್ನು ಇನ್ನೊಬ್ಬ ಲೇಖಕ ಸಮರ್ಪಕವಾಗಿ ನಿರ್ವಹಿಸದಿರುವುದು ಕಂಡಾಗ ಹಾಗನಿಸುತ್ತದೆ.

ಬುಕ್ ಬ್ರಹ್ಮ: ನಿಮ್ಮ ಸಾಹಿತ್ಯಿಕ ಬದುಕಿನ ಮೂಲ ಧ್ಯೇಯವೇನು?

ಲಕ್ಷ್ಮಣ ಬಾದಾಮಿ: ನನ್ನ ಅನುಭವಗಳನ್ನು ಹಂಚಿಕೊಳ್ಳುವುದು.

ಬುಕ್ ಬ್ರಹ್ಮ: ಸಾಹಿತ್ಯದಿಂದ ನಿಮ್ಮ ಬದುಕಿನಲ್ಲಾದ ಮಹತ್ವದ ಬದಲಾವಣೆಗಳೇನು

ಲಕ್ಷ್ಮಣ ಬಾದಾಮಿ: ನಾನೇ ಸಾಕಷ್ಟು ಬದಲಾಗಿದ್ದೇನೆ..!! ಸಾಹಿತ್ಯ ಲೋಕಕ್ಕೆ ನಾನು ಪ್ರವೇಶಿಸದೇ ಹೋಗಿದ್ದರೆ ನಾನು ಹಳ್ಳಿಯ ಮುಗ್ಧ ಹುಡುಗನಾಗಿ, ಅಂಜುಬುರಕನಾಗಿ ಇದ್ದು ಬಿಡುತ್ತಿದ್ದೆನೇನೋ.. ಸಾಹಿತ್ಯ ನನಗೆ ಸಾಕಷ್ಟು ಸಾತ್ವಿಕ ಧೈರ್ಯವನ್ನು ಕೊಟ್ಟಿದೆ. ಬದುಕನ್ನು ನೋಡುವ ಹೊಸ ದೃಷ್ಟಿಕೋನ ಕಲಿಸಿದೆ.

ಬುಕ್ ಬ್ರಹ್ಮ: ನಿಮ್ಮ ಬದುಕಿನಲ್ಲಿ ಬರವಣಿಗೆಯ ಪಾತ್ರ ?

ಲಕ್ಷ್ಮಣ ಬಾದಾಮಿ: ಒಂದು ದೊಡ್ಡ Identity ಯನ್ನು ನನಗೆ ತಂದುಕೊಟ್ಟಿದೆ ಅನ್ನಬಹುದು.

ವಿವಿಧ ಸಂದರ್ಭಗಳಲ್ಲಿ ಲಕ್ಷ್ಮಣ ಬಾದಾಮಿ ಅವರ ಚಿತ್ರಗಳು:

ಗುಲಬರ್ಗಾ ವಿಶ್ವವಿದ್ಯಾನಿಲಯದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಾಗ ಚಿನ್ನದ ಪದಕ ನೀಡುತ್ತಿರುವ ಹಿರಿಯ ಸಾಹಿತಿ ಡಾ. ಅರವಿಂದ ಮಾಲಗಿತ್ತಿ ಮತ್ತು ಕುಲಪತಿಗಳು ಮತ್ತಿತರರು

ತರಗತಿಯಲ್ಲಿ ಆಳೆತ್ತರದ ಬೇಂದ್ರೆ ಚಿತ್ರ ಬರೆದು ಪಾಠದಲ್ಲಿ ನಿರತನಾಗಿರುವುದು

ಕವಿಗಳಾದ ಆರಿಫ ರಾಜಾ, ಅರುಣಾ ನರೇಂದ್ರ, ಕೃಷ್ಣ ದೇವಾಂಗಮಠ, ಟಿ.ಎಸ್.ಗೊರವರ ಮುಂತಾದವರ ಜತೆ ಕವಿಗೋಷ್ಠಿಯೊಂದರಲ್ಲಿ

ಒಂದು ಚಿಟಿಕೆ ಮಣ್ಣು ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಲಕ್ಷ್ಮಣ ಬಾದಾಮಿಯವರ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

MORE FEATURES

'ಪ್ರೇಮಾಯತನ' ಒಲವ ಕವಿತೆಗಳ ಹೂಗುಚ್ಛವಾಗಿದೆ

24-04-2024 ಬೆಂಗಳೂರು

"ಇತ್ತೀಚಿನ ದಿನಗಳಲ್ಲಿ ನಮ್ಮ ಯುವಜನತೆ 'ಪ್ರೀತಿ' ಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗುತಿದ್ದಾರೆ. ಪ್...

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...