ಕಥಾ ಪ್ರಕಾರ ಜನ ಮಾನಸದಲ್ಲಿ ಅತಿ ಹೆಚ್ಚು ಪ್ರಾಧಾನ್ಯತೆ ಪಡೆದಿದೆ


"ಕಾವ್ಯ ಒಂದೇ ಗುಕ್ಕಿಗೆ ಓದಿನ ತೃಪ್ತಿ ದಕ್ಕಿಸಿದರೆ, ಕಥೆ ಅಲ್ಲಲ್ಲಿ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಂಡು ಅಚ್ಚರಿ ಮೂಡಿಸಿ ಕುತೂಹಲವನ್ನು ಕಾಪಿಟ್ಟುಕೊಂಡು ಸಶಕ್ತ ಪಾತ್ರಗಳು ಮತ್ತು ಮನಸೆಳೆವ ಸಂಭಾಷಣೆಗಳ ಮೂಲಕ ಓದುಗರೆದೆ ಹೊಕ್ಕಿ ಅತಿ ದೀರ್ಘ ಕಾಲ ಮನದಬಿತ್ತಿಯಲಿ ಚಿತ್ರ ಕಾವ್ಯದಂತೆ ಅಚ್ಚಾಗುತ್ತವೆ. ಇಂತಹ ವಿಶಿಷ್ಟ ಪ್ರಕಾರ ಇಂದು ಬಹು ಜನ ಪ್ರೇರಿತ ಓದು ಮತ್ತು ಬರಹ ಮಾಡಿಸಿಕೊಂಡು ಎಗ್ಗಿಲ್ಲದೆ ನಿರಾತಂಕವಾಗಿ ಸಾಹಿತ್ಯದ ಸಾರೋಟನೇರಿ ದಾಪುಗಾಲು ಹಾಕುತ್ತಾ ಸಾಗುತ್ತಿದೆ," ಎನ್ನುತ್ತಾರೆ ಅನುಸೂಯ ಯತೀಶ್. ಅವರು ಆನಂದ ಎಸ್ ಗೊಬ್ಬಿ ಅವರ ‘ನಿರುದ್ಯೋಗಕ್ಕೆ ಹೆಣವಾದ ಅಪ್ಪ’ ಕೃತಿ ಕುರಿತು ಬರೆದ ವಿಮರ್ಶೆ.

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿರುವ ಸಾಹಿತ್ಯ ಪ್ರಕಾರವೆಂದರೆ ಕಥೆಗಳು. ಮಕ್ಕಳು, ಯುವ ಸಾಹಿತಿಗಳಿಂದ ಹಿಡಿದು ವಯೋ ವೃದ್ಧರವರೆಗೂ ಎಲ್ಲರನ್ನೂ ಕಾಡಿ ಬರೆಸಿಕೊಳ್ಳುವ ಸೆಳೆತವನ್ನು ಹೊಂದಿವೆ. ಬರಹಗಾರರು ತಮ್ಮ ಭಾವನೆಗಳನ್ನು, ಅನುಭವಗಳನ್ನು ಸುಲಭವಾಗಿ ಅಭಿವ್ಯಕ್ತ ಪಡಿಸಲು ಆಯ್ಕೆ ಮಾಡಿಕೊಳ್ಳುವ ಸರಳ ಮಾಧ್ಯಮವೆಂದರೆ ಕಥೆಗಳು. ಹಾಗೆಂದ ಮಾತ್ರಕ್ಕೆ ಕಥಾ ರಚನೆ ಸುಲಭ ಎಂದಲ್ಲ. ಪದ್ಯಗಳು ಓದುಗರನ್ನು ಸೆಳೆಯುವಷ್ಟು ತೀವ್ರವಾಗಿ ಗದ್ಯ ಆಕರ್ಷಿಸಲಾರದು ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಜೊತೆಗೆ ಕಾವ್ಯ ಎಲ್ಲಾ ಕಾಲದಲ್ಲೂ ಉಸಿರಾಡುವ ಒಂದು ಪ್ರಕಾರವಾಗಿದೆ. ಆದರೂ ಕಥಾ ಪ್ರಕಾರ ನಮ್ಮ ಜನಪದ ಪರಂಪರೆಯಿಂದಲೂ ಜನ ಮಾನಸದಲ್ಲಿ ಅತಿ ಹೆಚ್ಚು ಪ್ರಾಧಾನ್ಯತೆ ಪಡೆದಿದೆ. ಕಾವ್ಯ ಒಂದೇ ಗುಕ್ಕಿಗೆ ಓದಿನ ತೃಪ್ತಿ ದಕ್ಕಿಸಿದರೆ, ಕಥೆ ಅಲ್ಲಲ್ಲಿ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಂಡು ಅಚ್ಚರಿ ಮೂಡಿಸಿ ಕುತೂಹಲವನ್ನು ಕಾಪಿಟ್ಟುಕೊಂಡು ಸಶಕ್ತ ಪಾತ್ರಗಳು ಮತ್ತು ಮನಸೆಳೆವ ಸಂಭಾಷಣೆಗಳ ಮೂಲಕ ಓದುಗರೆದೆ ಹೊಕ್ಕಿ ಅತಿ ದೀರ್ಘ ಕಾಲ ಮನದಬಿತ್ತಿಯಲಿ ಚಿತ್ರ ಕಾವ್ಯದಂತೆ ಅಚ್ಚಾಗುತ್ತವೆ. ಇಂತಹ ವಿಶಿಷ್ಟ ಪ್ರಕಾರ ಇಂದು ಬಹು ಜನ ಪ್ರೇರಿತ ಓದು ಮತ್ತು ಬರಹ ಮಾಡಿಸಿಕೊಂಡು ಎಗ್ಗಿಲ್ಲದೆ ನಿರಾತಂಕವಾಗಿ ಸಾಹಿತ್ಯದ ಸಾರೋಟನೇರಿ ದಾಪುಗಾಲು ಹಾಕುತ್ತಾ ಸಾಗುತ್ತಿದೆ. ಬಹಳ ಮುಖ್ಯವಾಗಿ ಇಂದಿನ ಯುವ ಜನತೆ ಕಥಾ ರಚನೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಇದು ಹರ್ಷ ಹಾಗೂ ಹೆಮ್ಮೆಯ ಸಂಗತಿ. ಅಂತಹ ಯುವ ಕಥೆಗಾರರ ಪಟ್ಟಿಯಲ್ಲಿ ಸಾವಿರಾರು‌‌ ಕನಸುಗಳನ್ನು ಹೊತ್ತು ಬುದ್ಧ, ಬಸವ, ಅಂಬೇಡ್ಕರ್ ಸಾಗಿದ ದಾರಿಯನ್ನು ಪ್ರೀತಿಸುತ್ತಾ, ಸಾಮಾಜಿಕ ಅಸಮಾನತೆಯ ಕೂಗಿಗೆ ಸಾಂತ್ವನದ ದನಿಯಾಗಿ, ಸಮಾಜಮುಖಿ ಕಥೆಗಳ ಮೂಲಕ ಕಥಾಲೋಕ ಪ್ರವೇಶಿಸಿದ ಉತ್ಸಾಹಿ ಕಥೆಗಾರರಲ್ಲಿ ಆನಂದ್ ಎಸ್ ಗೊಬ್ಬಿ ಕೂಡ ಒಬ್ಬರು. 'ನಿರುದ್ಯೋಗಕ್ಕೆ ಹೆಣವಾದ ಅಪ್ಪ' ಎಂಬ ವಿಶಿಷ್ಟ ಕಥಾ ಸಂಕಲನದ ಮೂಲಕ ಕಥೆಗಾರರಾದವರು ಆನಂದ್ ಗುಬ್ಬಿ ಅವರು.

'ನಿರುದ್ಯೋಗಕ್ಕೆ ಹೆಣವಾದ ಅಪ್ಪ' ಆನಂದ್ ಗುಬ್ಬಿ ಅವರ ಚೊಚ್ಚಲ ಕಥಾ ಸಂಕಲನವಾಗಿದೆ. ಭವಿಷ್ಯದ ಭರವಸೆಯ ಕತೆಗಾರರಾಗುವ ಎಲ್ಲಾ ಲಕ್ಷಣಗಳನ್ನು ತಮ್ಮ ಕಥೆಗಳ ಮೂಲಕ ಪ್ರಕಟಪಡಿಸಲು ಶ್ರಮಿಸಿದ್ದಾರೆ. ಅಮರೇಶ ನುಗಡೋಣಿ ಅವರ ''ದೇಸಿ ತನದ ಸಿಹಿ ಊರಣ' ಎಂಬ ಶೀರ್ಷಿಕೆಯಡಿಯಲ್ಲಿ ಮೂಡಿ ಬಂದ ಮುನ್ನುಡಿ ಹಾಗೂ ಯುವ ಕತೆಗಾರ ಹನುಮಂತ ಹಾಲಗೇರಿ ಅವರ ಬೆನ್ನುಡಿ ಪುಸ್ತಕದ ಆಶಯ, ಕಥಾವಸ್ತು, ಕತೆಗಾರರ ಕನಸು, ಭಾಷಾ ಹಿಡಿತ, ನಿರೂಪಣೆ ಸೇರಿದಂತೆ ಅನೇಕ ಮಹತ್ವದ ವಿಚಾರಗಳನ್ನು ಕುರಿತು ಸೂಕ್ಷ್ಮವಾಗಿ ಚರ್ಚಿಸುತ್ತವೆ. 'ದೇವಿ ಪುರ ಗ್ರಾಮ ಪಂಚಾಯಿತಿ', 'ಆಲದ ಮರ', 'ಗಿರಿಕನ್ಯೆ', 'ಹುಳಿ ಮೊಸರು'', 'ಒಂದು ಸಾವಿನ ಸುತ್ತಾ', 'ವ್ಯಕ್ತಿತ್ವದ ಒಳಸಾರ', 'ನಿರುದ್ಯೋಗಕ್ಕೆ ಹೆಣವಾದ ಅಪ್ಪ', 'ನಿಜ ಬದುಕಿನ ಪ್ರೀತಿ ಪಯಣ' ಸೇರಿದಂತೆ ಒಟ್ಟು ಎಂಟು ಕಥೆಗಳ ಗುಚ್ಛವಿದು.

ನೊಂದವರ ನೋವು ನೊಂದವರೇ ಬರೆದರೆ ಗಟ್ಟಿಯಾಗಿರುತ್ತದೆ ಎನ್ನುವ ಆನಂದ್ ಗೊಬ್ಬಿ ಅವರು ತಮ್ಮ ಮನಸ್ಸನ್ನು ಘಾಸಿಗೊಳಿಸಿದ ತನ್ನ ಪರಿಸರದ ಘಟನೆಗಳನ್ನು, ತಾನು ಜನರಿಂದ, ಈ ಸಮಾಜದಿಂದ ಅನುಭವಿಸಿದ ಅವಮಾನಗಳನ್ನು ಕಥೆಗೆ ಸಂದರ್ಭೋಚಿತವಾಗಿ ಬಳಸಿಕೊಂಡು, ವಾಸ್ತವ ಬದುಕಿನ ಕರಾಳ ಸತ್ಯಗಳನ್ನು ಕ್ರೂರ ಮನಸ್ಥಿತಿಯ ಜನರ ದರ್ಪ ದಬ್ಬಾಳಿಕೆಯನ್ನು ಎಳೆ ಎಳೆಯಾಗಿ ಕಣ್ಣಿಗೆ ಕಟ್ಟುವಂತೆ ಸಮಾಜದ ಪ್ರತಿಬಿಂಬವಾಗಿ ಚಿತ್ರಿಸಿದ್ದಾರೆ. ಇಲ್ಲಿ ಬಹಳ ಪ್ರಮುಖವಾಗಿ ಪರಿಗಣಿತವಾಗುವ ಅಂಶವೆಂದರೆ ಸಮಾಜದ ವಿವಿಧ ಸ್ಥಳಗಳಲ್ಲಿ ಕಂಡುಬರುವ ಅಸಮಾನತೆ, ಜಾತಿ ಪದ್ಧತಿಯ ಅತಿಯಾದ ಆರಾಧನೆ.

ಈ ಕಥಾ ಸಂಕಲನದ ಶೈಲಿ ಉತ್ತರ ಕರ್ನಾಟಕದ ಜವಾರಿ ಭಾಷೆಯ ಸೊಗಡನ್ನು ಗರ್ಭಿಕರಿಸಿಕೊಂಡಿದೆ. ಇದು ಕಥೆಗಾರರ ಎದೆಯ ಭಾಷೆಯಾಗಿ ಅತ್ಯಂತ ಸಶಕ್ತವಾಗಿ ಜೀವ ತಳೆದಿದೆ. ವಾಸ್ತವಿಕತೆಯನ್ನು ಕಥೆಯ ದ್ರವ್ಯವಾಗಿಸಿಕೊಂಡು ಹೇಳಿದ ಕಥೆಗಳು ಕಲ್ಪನಾ ಲೋಕದ ಅಪಾಯದಿಂದ ಪಾರಾಗಿದ್ದು ಸೃಜನಶೀಲತೆ ಹಾಗೂ ಅಭಿವ್ಯಕ್ತಿ, ರೂಪದ ದೃಷ್ಟಿಯಿಂದ ಉತ್ತಮ ಕಥೆಗಳ ಸಾಲಿನಲ್ಲಿ ನಿಲ್ಲುತ್ತವೆ. ಅನುಭವಗಳನ್ನಾ ಧರಿಸಿ ರಚಿಸಿದ ಕಥೆಗಳಾದ್ದರಿಂದ ಅದು ಕೇವಲ ವ್ಯಕ್ತಿಗತವಾಗದೆ, ಕಥೆಗಾರರ ವೈಯಕ್ತಿಕ ಬದುಕಿಗೆ ಮಾತ್ರ ಸೀಮಿತವಾಗದೆ, ಸಾರ್ವತ್ರಿಕವಾದ ನೋವುಗಳು, ಹತಾಶೆ, ಅಸಹಾಯಕತೆ, ಶೋಷಣೆ, ದರ್ಪ ದಬ್ಬಾಳಿಕೆಗಳನ್ನು ಸಂಕೇತಿಸುತ್ತವೆ. ಈ ಕಥೆಗಳು ಸುಲಲಿತವಾದ ನಿರೂಪಣಾ ಶೈಲಿಯ ಮೂಲಕ ಓದುಗನನ್ನ ಒಂದು ಪಾತ್ರವನ್ನಾಗಿಸಿ ಅವರಿಸಿಕೊಳ್ಳುತ್ತವೆ.

ಸಮಾಜದಲ್ಲಿನ ಅಸ್ಪೃಶ್ಯತಾ ಭಾವನೆ ದಲಿತ ವರ್ಗವನ್ನು ಸಾಮಾಜಿಕ ಸಮಾನತೆಯಿಂದ ದೂರವಿಟ್ಟು ಅಸಮಾನತೆ ಶೋಷಣೆಯ ಕೆಂಡದಂಡೆಗಳನ್ನು ನುಂಗಿಕೊಂಡು ಬೆಂದು ಬಸವಳಿದ ಜನಾಂಗದ ನೋವಿನ ಸ್ಪಷ್ಟ ಚಿತ್ರಣವನ್ನು ಹೃದಯ ಕರಗುವಂತೆ ಚಿತ್ರಿಸಿದ್ದಾರೆ. ಇಲ್ಲಿನ ಕಥೆಗಾರರು ಸಮುದಾಯದ ಪರವಾಗಿ ಸಾಮಾಜಿಕ ಸುಧಾರಣೆಯ ಕನಸು ಹೊತ್ತು ಸಮ ಸಮಾಜ ನಿರ್ಮಾಣಕ್ಕೆ ಹಂಬಲಿಸಿದ್ದಾರೆ. ಇಲ್ಲಿರುವ ದಲಿತ ವರ್ಗದ ಸಂವೇದನೆಗಳು ಸಂಭಾಷಣೆಗಳ ರೂಪದಲ್ಲಿ ಪ್ರಕಟವಾಗಿವೆ.

ಅಸ್ಪೃಶ್ಯತೆಯ ಆಚರಣೆ ಮನುಷ್ಯರ ಮಟ್ಟಿಗೆ ಸೀಮಿತವಾಗದೆ ಅದು ಮೂಕ ಪ್ರಾಣಿಗಳಿಗೂ ತಟ್ಟಿದ್ದು ಮಾತ್ರ ವಿಪರ್ಯಾಸ. ಅಂತಹ ಕ್ರೂರತೆಯ ಅನಾವರಣ ಮಾಡುವಲ್ಲಿ ಕೆಳಜಾತಿಯವರ ಹಸು ಎಂಬ ಘಟನೆ ಯೊಂದಿಗೆ ಬೆಸೆದ ಕಥೆ ನಿಜಕ್ಕೂ ಅಮಾನವೀಯತೆಯ ಪ್ರತೀಕವಾಗಿದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ದಲಿತ, ಬಂಡಾಯ ಕಾಲಘಟ್ಟದಲ್ಲಿ ಮೂಡುವ ಅನೇಕ ಕಥೆ ಕವನಗಳ ದಟ್ಟ ಚಿತ್ರಣವನ್ನು ಈ ಕಥೆ ತೆರೆದಿಡುತ್ತದೆ. ಈ ಕಥೆಗಳಲ್ಲಿ ಸೇರಿರುವ ಬೈಗುಳಗಳು ಗ್ರಾಮೀಣ ಪ್ರದೇಶದ ಪರಿಚಯ ಮಾಡಿಸುತ್ತವೆ. ಇಲ್ಲಿರುವ ಕಥಾ ವಸ್ತುಗಳನ್ನು ನೋಡಿದಾಗ ಕಥೆಗಾರ ತನ್ನೊಳಗಿನ ನೋವುಗಳನ್ನು ನುಂಗಲಾರದೆ ಅಕ್ಷರ ರೂಪದಲ್ಲಿ ಅವುಗಳನ್ನು ಹೊರಹಾಕಿದ್ದಾರೆ ಎನಿಸುತ್ತದೆ.

ಈ ಕಥಾ ಸಂಕಲನದ ಶೀರ್ಷಿಕೆ ಕಥೆ ನಿರುದ್ಯೋಗಕ್ಕೆ ಹೆಣವಾದ ಅಪ್ಪ ವಿಶಿಷ್ಟ ಕಥಾ ವಸ್ತುವನ್ನು ಹೊಂದಿದ್ದು, ಕಥಾ ಲೋಕದಲ್ಲಿ ಅಪರೂಪವಾಗಿದೆ ಎನ್ನಬಹುದು. ಕಥಾನಾಯಕ ಸಾಗರ್ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿದ್ದು ಇವರ ಮಗ ಮೂರ್ತಿ ತಂದೆಯ ಅನುಕಂಪದ ಉದ್ಯೋಗದ ಆಸೆಗೆ ಬಲಿಯಾಗಿ ತಂದೆಯನ್ನ ಕೊಲೆ ಮಾಡುವ ಸಂಚು ರೂಪಿಸುತ್ತಾನೆ. ಮಗ ಸೊಸೆಯ ಬಗ್ಗೆ ಪ್ರೀತಿಯ ವ್ಯಾಮೋಹದಿಂದ ಅವನೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಇಲ್ಲಿ ಸಾಗರ್ ಪ್ರಬುದ್ಧ ಜೀವಿಯಾಗಿದ್ದರೂ ಅವನು ಬರೆದ ಪತ್ರ ಬಾಲಿಷದಿಂದ ಕೂಡಿದೆ. "ಕ್ಷಮಿಸಿ ನನ್ನ ಸಾವಿಗೆ ಕಾರಣ ಉದ್ಯೋಗ. ನನ್ನ ಮರಣದ ನಂತರ ನನ್ನ ಕೆಲಸ ನನ್ನ ಹೊಟ್ಟೆಯಾಗ ಹುಟ್ಟಿದ ಮಗನಿಗೆ ನೀಡಿ". ಇಲ್ಲಿ ಕಥೆ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ನನ್ನ ಸಾವಿಗೆ ಕಾರಣ ಉದ್ಯೋಗ ಎಂಬ ಸಾಗರನ ಪತ್ರದ ಸಾಲು, ಇದು ಒತ್ತಾಯ ಪ್ರೇರಿತ ಆತ್ಮಹತ್ಯೆ ಎಂಬ ಸಂದೇಶ ನೀಡುತ್ತದೆ. ಆತ್ಮಹತ್ಯೆ ಮತ್ತು ಅದಕ್ಕೆ ಪ್ರಚೋದಿಸುವುದು ಎರಡು ಕಾನೂನುಬಾಹಿರವಿದ್ದಾಗ ಇನ್ನು ಮಗನಿಗೆ ತಂದೆಯ ಉದ್ಯೋಗ ನೀಡಲು ಅವಕಾಶವಿದೆಯೇ? ಇದನ್ನು ಸಾಗರ ಆಲೋಚಿಸದಷ್ಟು ಅಪ್ರಬುದ್ಧನಾಗಿ ಕಾಣಿಸಿಕೊಂಡಿದ್ದಾನೆ. ಈ ಪತ್ರ ಮಗನ ಸುತ್ತ ಕಾನೂನಿನ ಅನುಮಾನದ ಕಣ್ಣು ಸುತ್ತುವಂತಿದೆ. ನಿಯಮದಡಿಯಲ್ಲಿ ಕಥೆಯನ್ನು ಹಿಡಿಯುವಲ್ಲಿ ಕಥೆಗಾರ ಮತ್ತಷ್ಟು ಜಾಣ್ಮೆ ಮೆರೆಯುವ ಅಗತ್ಯವಿತ್ತು. ಮಗ ಸೊಸೆಯ ಮನಸ್ಥಿತಿ ಅರಿತ ಸಾಗರನ ತಳಮಳ ಸ್ನೇಹಿತ ಜಾರ್ಜ್ ಜೊತೆಗೆ ಮನದ ಬೇಗುದಿ ಹಂಚಿಕೊಳ್ಳಲಾಗದೆ ಬೆಂದು ಹೋದ ಅಸಹಾಯ ತಂದೆಯ ಪಾತ್ರ ಕರುಳು ಹಿಂಡುವಂತೆ ಚಿತ್ರಿತವಾಗಿದೆ.

ಲೆಕ್ಕಾಚಾರದ ಈ ಬದುಕಿನಲ್ಲಿ ಪ್ರೀತಿ ಪ್ರೇಮ ವಾತ್ಸಲ್ಯ ಎಂಬುದು ಮರೀಚಿಕೆಯಾಗಿದ್ದು, ಹಣ ಆಸ್ತಿಗಾಗಿ ಹೆತ್ತವರನ್ನು ಮಕ್ಕಳು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡುತ್ತಿರುವ ಹೃದಯ ವಿದ್ರಾವಕ ಘಟನೆಗಳು ನಮ್ಮ ಕೌಟುಂಬಿಕ ಬದುಕಿನಲ್ಲಿ ಉಂಟಾಗುತ್ತಿರುವ ಸ್ಥಿತ್ಯಂತರಗಳನ್ನು ತುಂಬಾ ಆದ್ರತಾ ಭಾವದಲ್ಲಿ ಕಥೆಗಾರರು ಕಟ್ಟಿಕೊಟ್ಟಿದ್ದಾರೆ. ಇಂಥ ಅನೇಕ ಘಟನೆಗಳು ತೆರೆ ಮರೆಯಲ್ಲಿ ಘಟಿಸುತ್ತಿದ್ದರೂ‌‌ ಅದನ್ನು ಕತೆಯಾಗಿಸಿದ್ದು ಅಪರೂಪ ಎನ್ನಬಹುದು. ಆ ದೃಷ್ಟಿಯಿಂದ ಕಥೆಗಾರ ಆನಂದ್ ಗೊಬ್ಬಿಯವರನ್ನ ಶ್ಲಾಘಿಸಲೇಬೇಕು. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಇಂದಿನ ಯುವ ಜನಾಂಗ ಇಂತಹ ಕ್ರೌರ್ಯ ಮೆರೆಯಲು ನಿರುದ್ಯೋಗ ಒಂದು ಕಾರಣ. ಇದಕ್ಕೆ ಪರಿಹಾರವೇನು? ಉದ್ಯೋಗ ಒದಗಿಸುವಲ್ಲಿ ವ್ಯವಸ್ಥೆಯ ಪಾತ್ರವೇನು? ಎಂಬುದನ್ನು ಕೂಡ ಈ ಕಥೆ ಮುನ್ನಲೆಗೆ ತಂದು ನಿರುದ್ಯೋಗ ನಿವಾರಣೆಗೆ ಆಗ್ರಹಿಸುತ್ತದೆ. ಇಲ್ಲಿ ಗ್ರಾಮೀಣ ಬದುಕಿನಲ್ಲಿ. ಹಾಸುಹೊಕ್ಕಾಗಿರುವ ಜಾತಿ ಪದ್ಧತಿ, ಆಚರಣೆ, ಅಸಮಾನತೆಯ ಶೋಷಣೆಗಳು, ಜಾತಿ ಆಧಾರಿತ ಶೋಷಣೆಯ ಮನಕಲಕುವ ದೃಶ್ಯ ಗಳ ಚಿತ್ರಣವನ್ನು ತುಂಬಾ ವಿಷಾದದಿಂದ ಚಿತ್ರಿಸಿದ್ದಾರೆ.

'ದೇವಿಪುರ ಗ್ರಾಮ ಪಂಚಾಯಿತಿ' ಸಂಕಲನದ ಪ್ರಥಮ ಕಥೆಯಾಗಿದೆ. ಇದು ರಾಜಕೀಯ ವ್ಯವಸ್ಥೆ ಮತ್ತು ರಾಜಕಾರಣಿಗಳ ತಂತ್ರ ಕುತಂತ್ರಗಳನ್ನು ಪಂಚಾಯಿತಿ ಮೂಲಕ ಪರಿಚಯಿಸುತ್ತದೆ. ಈ ಕಥೆಯಲ್ಲಿ ಕಥೆಗಾರರ ಪಾತ್ರಗಳು ಸೃಷ್ಟಿ ಅದ್ಬುತವಾಗಿದೆ. ಅಧಿಕಾರದ ದಬ್ಬಾಬಾಳಿಕೆ, ಮೌಡ್ಯ, ಸ್ವಾರ್ಥದ ಪ್ರತೀಕವಾಗಿ ಊರ ಗೌಡನ ಪಾತ್ರವನ್ನು, ನಿಸ್ವಾರ್ಥ ಮನೋಭಾವ ಸೇವಾ ಕೈಂಕರ್ಯ, ಸಾಮಾಜಿಕ ಕಳಕಳಿ, ವೈಚಾರಿಕತೆ ತಾರ್ಕಿಕ ಆಲೋಚನೆಗಳ ಪ್ರತಿನಿಧಿಯಾಗಿ ಶಾಲಾ ಮಾಸ್ತರರ ಪಾತ್ರ ಅತ್ಯಂತ ಪ್ರಭುದ್ಧವಾಗಿ ಮೂಡಿಬಂದಿವೆ.

ದೇವಿ ಪುರದಲ್ಲಿ ನಡೆದ ಎಲ್ಲ ಘಟನೆಗಳು ಗೌಡನ ಕಪಿಮುಷ್ಠಿಯಲ್ಲಿ ಸಿಲುಕಿ ನಲಗಿದರೆ ಶಾಲಾ-ಮಾಸ್ತರರು ಅವುಗಳಲ್ಲಿ ಊರಿನ ಜನರನ್ನು ಹೊರ ತಂದು ವಾಸ್ತವ ಪರಿಸ್ಥಿತಿಯನ್ನು ಜನತೆಗೆ ಅರ್ಥೈಸಲು ಶ್ರಮಿಸುತ್ತಾರೆ. ಸಂಪೂರ್ಣವಾಗಿ ಗೌಡ ತನ್ನ ಹಿಡಿತದಲ್ಲಿ ಎಲ್ಲರನ್ನೂ ಸಿಲುಕಿಸಿಕೊಂಡು ನಾಮಾವಸ್ಥೆಗೆ ತನ್ನ ಕಡೆಯ ವಿದ್ಯಾವಂತನನ್ನು ಪಂಚಾಯಿತಿ ಚೇರ್ಮನ್ ಮಾಡಿ ಸರ್ಕಾರಿ ಅನುದಾನದ ದುರ್ಬಳಕೆ ಮಾಡಿಕೊಂಡು ಊರಿಗೆ ಮೂಲಭೂತ ಸೌಕರ್ಯ ಒದಗಿಸದೆ ಕಾಲ ಕಳೆಯುತ್ತಾನೆ. ಇಡೀ ಊರೇ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತದೆ. ಗೌಡನಿಗೆ ಮೋಸವನ್ನು ಬಲೆಗೆ ಬಯಲಿಗೆಳೆದು ಜನರನ್ನ ಪ್ರಜ್ಞಾವಂತರನ್ನಾಗಿಸಲು ಶಾಲಾ ಮಾಸ್ತರರು ಮಾಡುವರ ಸಾಹಸ ಅತ್ಯಂತ ವಿವೇಚನ ಪೂರ್ಣವಾಗಿ ಮೂಡಿಬಂದಿದೆ. ಜನ ಹಾಗೂ ಜನಪ್ರತಿನಿಧಿಗಳು ವಿದ್ಯಾವಂತರಾಗದಿದ್ದರೆ, ತಮ್ಮ ಹಕ್ಕು ಮತ್ತು ಜವಾಬ್ದಾರಿಗಳನ್ನು ಅರಿಯಲು ಎಡವಿದರೇ ಆಡಳಿತ ಯಂತ್ರದ ದುರುಪಯೋಗ ಹೇಗೆಲ್ಲ ಆಗುತ್ತದೆ ಎಂಬುದನ್ನು ಓದುಗರಿಗೆ ಈ ಕಥೆ ತುಂಬ ವಿಶ್ಲೇಷಣಾತ್ಮಕವಾಗಿ ಮನದಟ್ಟು ಮಾಡಿಸುತ್ತದೆ.

ವಿಭಿನ್ನ ಆಯಾಮದಲ್ಲಿ ಮೂಡಿಬಂದ ಈ ಕಥಾ ಸಂಕಲನದ ಮತ್ತೊಂದು ಕಥೆ 'ಆಲದ ಮರ' ಇಲ್ಲಿ ಆಲದ ಮರ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಇದು ಭಾರತದ ನೆಲೆ ಮೂಲದ ಜಾತಿ ವ್ಯವಸ್ಥೆಯ ಆಳವಾದ ಬೇರುಗಳನ್ನು, ಆಲದ ಮರದ ಬೇರುಗಳಿಗೆ ಹೋಲಿಸಿದ ರೂಪಕದಲ್ಲಿ ಕಥೆಯ ತಲೆಬರಹವಾಗಿ ಆಲದ ಮರ ಕತೆ ಜೀವ ತಳೆದಿದೆ. ಸಾಮಾಜಿಕ ಬದುಕನ್ನು ಕಾಡುವ ಅದನ್ನು ಅತ್ಯಂತ ಖೇದ ಭಾವದಲ್ಲಿ ಓದುಗರ ಮುಂದೆ ಇಡುತ್ತಾರೆ. ಮಾನವ ಇಂದಿಗೂ ಕುಲಭೇದಗಳಿಗೆಂಬ ಜಾಢ್ಯಗಳಲ್ಲಿ ಬಂಧಿಯಾಗಿದ್ದಾನೆ ಎಂಬುದು ಬಹುತೇಕ ಕಥೆಗಳಲ್ಲಿ ಬರುವ ವಿಚಾರ. ಆದರೆ ಅದು ಪ್ರಾಣಿ ಸಂಕುಲಕ್ಕೂ ಜಾತಿ ಧರ್ಮದ ಲೇಬಲ್ ಅಂಟಿಸಿದ್ದು ಮಾತ್ರ ಅಮಾನವೀಯತೆ ಎಂಬಂಶ ಇಲ್ಲಿ ಚಿತ್ರತವಾಗಿದೆ.

ಜನ ಮೌಢ್ಯಗಳಿಗೆ ಬಲಿಯಾಗಿ ಮತಾಂಧರಾಗಿ ಎಷ್ಟೆಲ್ಲ ತಾಕಲಾಟಗಳನ್ನು ಎದುರಿಸುತ್ತಾರೆ ಎಂಬುದನ್ನು ಈ ಕಥೆ ಎಳೆ ಎಳೆಯಾಗಿ ವಿವರಿಸಿದೆ. ಹೊಲೆಯರ ಜಾತಿ ಎತ್ತು ತಂದು ಜಾತಿ ಕೆಡೆಸಿದ ಎನ್ನುವ ರಾಮಯ್ಯನ ಕುಲಸ್ತರು ಕೂಡ ಇಲ್ಲಿ ಅಸ್ಪೃಶ್ಯತೆ ಆಚರಣೆಯ ರೂವಾರಿಗಳಾಗಿ ಬಿಂಬಿತರಾಗಿದ್ದಾರೆ. ಈ ಮಧ್ಯೆ ಮಗನ ಅನಾರೋಗ್ಯಕ್ಕೂ ಮತ್ತದೇ ಮೂಢನಂಬಿಕೆಗೆ ದಾಸರಾಗಿ ಸಮಯ ಸಾಧಕರ ಬಲೆಗೆ ಬಿದ್ದು ಇದ್ದೊಬ್ಬ ಮಗನನ್ನು ಕಳೆದುಕೊಳ್ಳುವಲ್ಲಿಗೆ ಕಥೆ ಅಂತ್ಯ ಕಾಣುತ್ತದೆ.

ಇಲ್ಲಿ ಆನಂದ್ ಗುಬ್ಬಿ ಅವರ ವೈಚಾರಿಕ ಮನಸ್ಥಿತಿಯನ್ನು ನಾವು ಗುರುತಿಸಬಹುದು. ತನ್ನ ಸಮಾಜದ ಜನ ವಿವೇಕಹೀನರಾಗಿ ಮಾಡುವ ತೀರ್ಮಾನಗಳು ಇವರನ್ನು ಬಹುವಾಗಿ ಬಾಧಿಸಿವೆ. ಅದರಿಂದ ಕತೆಗಾರರು ಅವರನ್ನು ಹೊರ ತಂದು ಕಥೆಗಳ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ. ಜನರನ್ನು ಅಂಧಕಾರದಿಂದ ಪ್ರಜ್ಞಾಲೋಕಕ್ಕೆ ಕರೆದೊಯ್ಯಲು ಹಪಹಪಿಸುತ್ತಾರೆ.

'ಗಿರಿಕನ್ಯೆ' ಕಥೆ ನಮ್ಮ ಸಮಾಜದಲ್ಲಿ ಎಂದೂ ಬದಲಾಗದ ಹೆಣ್ಣಿನ ಸ್ಥಾನಮಾನಗಳನ್ನು ಕುರಿತು ಓದುಗರನ್ನು ಚಿಂತನೆಗಚ್ಚುತ್ತದೆ. ಇಲ್ಲಿ ಕಥೆಗಾರರು ಒಂಟಿ ಹೆಣ್ಣು ನಿಮ್ಮ ಸಮಾಜದಲ್ಲಿ ಬದುಕಲು ಬಿಡದೆ ಜನರ ನಡತೆಗೆ ಚಾಟಿ ಬೀಸಿದ್ದಾರೆ. ಹೆತ್ತವರು ಅತ್ತೆ ಎಲ್ಲರನ್ನೂ ಕಳೆದುಕೊಂಡ ಕಮಲಮ್ಮಳು ಮಿಲಿಟರಿ ಸೇವೆಯಲ್ಲಿ ತನ್ನ ಗಂಡನನ್ನು ಕಳೆದುಕೊಂಡು ಅವನ ಪ್ರೀತಿಯ ಕುಡಿಗೆ ಜನ್ಮ ನೀಡಿ ಲಕ್ಷ್ಮಿ ಎಂದು ಹೆಸರಿಟ್ಟು ಪೋಷಿಸುತ್ತಾಳೆ‌. ಈ ಕಥೆಯಲ್ಲಿ ಗಂಡನಿಲ್ಲದ ತಾಯಮ್ಮ ಈ ಕ್ರೂರ ಸಮಾಜದ ವಿಕೃತ ಮನಸ್ಸುಗಳ ಹಾವಳಿಯಿಂದ ರಕ್ಷಿಸಿಕೊಳ್ಳಲು ಎಷ್ಟೆಲ್ಲ ಪರದಾಟ ಪಡುತ್ತಾಳೆ ಎಂಬ ವಿಚಾರ ನಮ್ಮ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮೂಡಿಬಂದಿದೆ. ವಿಪರ್ಯಾಸವೆಂದರೆ ಅಸಹಾಯಕಳಾದ ಹೆಣ್ಣಿಗೆ ಗಂಡೊಂದು ನಿಷ್ಕಲ್ಮಶ ಮನಸ್ಸಿನ ನಿಸ್ವಾರ್ಥ ಸ್ನೇಹವನ್ನು ಸಂಕಟ ದುಃಖ ದುಮ್ಮಾನಗಳಿಗೆ ಹೆಗಲಾದರೆ ಅದನ್ನು ಸಹಿಸದ ಪುರುಷ ಸಮಾಜ ಕೆಡುಕು ಮಾಡುವ ಸನ್ನಿವೇಶ ಮನವನ್ನು ಅಗ್ನಿ ಪರ್ವತವಾಗಿಸುತ್ತದೆ. ಅದಷ್ಟೇ ಅಲ್ಲದೆ ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಮಾತಿಗೆ ಪೂರಕವಾಗಿ ಸ್ತ್ರೀಯರು ಅವಳ ಬೆನ್ನ ಹಿಂದೆ ಕತೆಗಳನ್ನು ಕಟ್ಟಿ ವಿಕೃತ ಆನಂದ ಅನುಭವಿಸುವ ಪರಿ ಹೆಣ್ಣಿಗೆ ನೈಜ ಶತ್ರುಗಳಾರು? ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ‌
ಈ ಕಥೆಯಲ್ಲಿನ ಮತ್ತೊಂದು ಪ್ರಮುಖ ಆಯಾಮವೆಂದರೆ ಹೆಣ್ಣಿನ ಲೈಂಗಿಕ ಶೋಷಣೆಯ ಅರಿವಿರುವ ಕಮಲಮ್ಮ ತನ್ನ ಮಗಳನ್ನು ತುಂಬಾ ಎಚ್ಚರಿಕೆಯಿಂದ ಕಾಪಾಡಿಕೊಳ್ಳಲು ಅವಳಿಗೆ ಹಾಕಿದ ಅತಿಯಾದ ಶಿಸ್ತಿನ ಚೌಕಟ್ಟು. ಪುರುಷರಿಂದ ಅಂತರ ಕಾಯ್ದುಕೊಳ್ಳಲು ಇದನ್ನು ಕಲಿಸಿದರೆ ಅವಳ ದಾಂಪತ್ಯ ಬದುಕಿಗೆ ಕುತ್ತಾಗಿ ಪರಿಣಮಿಸುತ್ತದೆ. ಗಂಡನ ಬಯಕೆಗಳನ್ನು ಈಡೇರಿಸದೆ ಅವನಿಂದ ದೂರ ಉಳಿದಿದ್ದರಿಂದ ತವರು ಮನೆ ಸೇರುತ್ತಾಳೆ ಮಗಳು. ಆಗ ಕಮಲಮ್ಮ ಎದೆಗುಂದದೆ ತಾನು ಮಾಡಿದ ತಪ್ಪನ್ನು ಸ್ನೇಹಿತನನಾದ ನಾಟಿ ವೈದ್ಯ ಶಿವಯ್ಯನ ಸಹಾಯದಿಂದ ಸರಿಪಡಿಸಿ ಅವಳ ದೈಹಿಕ ಆಸೆ ‌ಹೆಚ್ಚಿಸುವ ನಾಟಿ ಔಷಧಿ ನೀಡಿ ಅವಳಿಗೆ ಗಂಡನ ಪ್ರೀತಿ ಸಾಂಗತ್ಯ ಬಯಸುವಂತೆ ಮಾಡುವಲ್ಲಿಗೆ ಕಥೆ ಧನಾತ್ಮಕ ಮುಕ್ತಾಯ ಕಾಣುತ್ತದೆ. ಈ ಕಥೆಯಲ್ಲಿ ನಾಟಿ ವೈದ್ಯ ಶಿವಯ್ಯನ ಅಂತಃಕರಣ, ಹೆಣ್ಣು ಮಕ್ಕಳು ತನ್ನ ಮಕ್ಕಳ ಸುಂದರ ಭವಿಷ್ಯ ರೂಪಿಸಲು ವೀರ ವನಿತೆಯ ಆಗುವ ತಾಯಿಯ ಪಾತ್ರ ಮನೋಜ್ಞವಾಗಿ ಚಿತ್ರಿತವಾಗಿದೆ.

ಇಂದು ಪ್ರೀತಿ ಎಂಬುದು ಮರೀಚಿಕೆಯಾಗಿದೆ. ಲೆಕ್ಕಾಚಾರದ ಬದುಕಿನಲ್ಲಿ ನಾವು ನಮ್ಮ ನೆರೆಹೊರೆ ಸ್ನೇಹಿತರು ಕುಟುಂಬ ಬಂದು ಬಾಂಧವರ ಪ್ರೀತಿಯನ್ನ ಗುರುತಿಸಲಾರದಷ್ಟು ಜಡ್ಡು ಕಟ್ಟಿ ಹೋಗಿದ್ದೇವೆ. ನಮ್ಮ ಜೀವನದ ಹಾದಿಯಲ್ಲಿ ಪ್ರೀತಿಯನ್ನಂಚುವ ಮನಸ್ಸುಗಳಿವೆ. ಅದನ್ನು ಕಣ್ತೆರೆದು ನೋಡುವ ಹೃದಯವಂತಿಕೆ ಮತ್ತು ಸ್ವೀಕಾರದ ಮನಸ್ಸು ನಮ್ಮದಾಗಬೇಕೆಂಬ ಸಂದೇಶವನ್ನು ಹೊತ್ತು ತಂದ ಕಥೆ 'ನಿಜ ಬದುಕಿನ ಪ್ರೀತಿ ಪಯಣ' ಗಂಡ ಹೆಂಡತಿಯ ಭಾಂದವ್ಯ ಪ್ರೇಮಾರಾದನೆ ಹೇಗಿರಬೇಕೆಂಬ ನಿದರ್ಶನವಾಗಿ ಕಥಾನಾಯಕ ಚೆಲುವ ಹಾಗೂ ನಾಯಕಿ ಜಾನಕಿ ಪಾತ್ರವನ್ನು ಸೊಗಸಾಗಿ ಕಟ್ಟಿದ್ದಾರೆ.

'ವ್ಯಕ್ತಿತ್ವದ ಒಳಸಾರ' ಕಥೆಯು ಅನಕ್ಷರಸ್ಥರು ಮತ್ತು ಅಕ್ಷರಸ್ಥರಿಬ್ಬರ ನಡುವಿನ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. ಜೊತೆಗೆ ಶಿಕ್ಷಣ ಪಡೆದವರ ಕೌಟುಂಬಿಕ ಜವಾಬ್ದಾರಿ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ನೆನಪಿಸುತ್ತದೆ. ಊರಿನಲ್ಲಿದ್ದ ಬೇವಿನ ಮರದಡಿಯಲ್ಲಿ ಊರ ಹಿರಿಕರ ಲೋಕ ರೂಢಿ ಮಾತುಗಳ ಮೂಲಕ ಕಥೆ ಪ್ರವೇಶಿಕೆ ಪಡೆಯುತ್ತದೆ. ವಯಸ್ಕರೆಲ್ಲ ಹೊಟ್ಟೆಪಾಡಿನ ದುಡಿಮೆಗೆ ತೊಡಗಿದರೆ, ವಯಸ್ಸಾದ ಮುದಿ ಜೀವಗಳು ತಮ್ಮ ಪಾಲಿನ ಸಣ್ಣಪುಟ್ಟ ಚಾಕರಿಯನ್ನು ಮಾಡುವ ವಿಧಾನ ಗ್ರಾಮ್ಯ ಸೊಗಡಿನಲ್ಲಿ ಮೂಡಿಬಂದು ಜನಪದ ಗುಣಗಳನ್ನು ತರೇವಾರಿ ಬಣ್ಣಿಸುತ್ತದೆ.

ಇಲ್ಲಿ ಊರ ಉಸಾಬರಿ ಕುರಿತು ಬಿಸಿ ಚರ್ಚೆ ನಡೆಯುತ್ತಿದ್ದಾಗ ಹಿರಿಕರು ಮತ್ತು ಕಿರಿಕರು ಗೌರವ ಕೊಡಬೇಕೆಂಬ ಮಾತೊಂದು ನಿರೂಪಕನಿಂದ ಪ್ರಸ್ತಾಪವಾಗುತ್ತದೆ. ದೊಡ್ಡವರು ಯಾರು ಎಂಬ ಪ್ರಶ್ನೆಯೊಂದು ಮೂಡಿದಾಗ ಹಿರಿಕ ಸಾಬಣ್ಣ ಮಧ್ಯಪ್ರವೇಶಿಸಿ ದೊಡ್ಡೋರು ಸಣ್ಣವರಂತ ವ್ಯಕ್ತಿಯಿಂದ ಬರಲ್ಲ, ಹುಟ್ಟಿನಿಂದ ಬರಲ್ಲ ಅವರ ನಡವಳಿಕೆಯಿಂದ, ವ್ಯಕ್ತಿತ್ವದಿಂದ ಬರ್ತಾದ. ವ್ಯಕ್ತಿ ದೊಡ್ಡವನಲ್ಲ ವ್ಯಕ್ತಿತ್ವ ದೊಡ್ಡದೆಂಬ ಜೀವನ ಮೌಲ್ಯವನ್ನು ಬೋಧಿಸುತ್ತಾನೆ. ಅದಕ್ಕೆ ಪೂರಕವಾಗಿ ಬಿಳಿ ಬಟ್ಟೆ ತೊಟ್ಟು ಊರಿನ ಸಮಸ್ಯೆಗಳನ್ನು ಬಗೆಹರಿಸುವ ನಾಯಕನಿಗೆ ಸಿದ್ದ ಎಂಬ ವಿದ್ಯಾವಂತ ಮಗನಿದ್ದು ಅವನಿಗೆ ಹೆಣ್ಣು ಹುಡುಕಲು ಪಡಬಾರದ ಕಷ್ಟಪಟ್ಟು ಕೊನೆಗೆ 9ನೇ ತರಗತಿ ಓದುತ್ತಿದ್ದ ಹುಡುಗಿನ ಮುಂದೆ ಓದಿಸುವ ಕರಾರಿನ ಮೇಲೆ ಮಗನಿಗೆ ಮದುವೆ ಮಾಡಿಕೊಂಡು ಕೊಟ್ಟ ಮಾತು ಉಳಿಸಿಕೊಂಡನು. ಓದಿರುವ ಹುಡುಗಿಯನ ಲಗ್ನ ಆಗಲು ಬೇಸರಿದ ಸಿದ್ದ ಹೆಂಡತಿಯನ್ನು ಓದಿಸಲು ವಿರೋಧಿಸಿದರೂ ಮುಂದೆ ಅವಳ ಎಲ್ಲಾ ಆಸೆಗಳಿಗೆ ಬೆನ್ನೆಲುಬಾಗುತ್ತಾನೆ. ಇಲ್ಲಿ ಸಿದ್ದನ ಪಾತ್ರ ಹೆಮ್ಮೆ ಪಡುವಂತೆ ಚಿತ್ರಿತವಾಗಿದೆ. ಈ ಮಧ್ಯೆ ಒಂದು ಗಂಡು ಮಗುವನ್ನು ಕೂಡ ಶೀಲ‌ ಹಡೆದಾಗ ಸಿದ್ಧ ಮತ್ತು ಅವಳ ಮಾವನಿಗೆ ಇವಳ ಬಗ್ಗೆ ಮತ್ತಷ್ಟು ಪ್ರೀತಿ ಗೌರವ ಹೆಚ್ಚುತ್ತದೆ. ಇದನ್ನು ಬಳಸಿಕೊಂಡು ಒಂದು ಟ್ರಸ್ಟ್ ನ ಶಾಲೆಯಲ್ಲಿ ಪಾಠ ಮಾಡಲು ಹೋಗುತ್ತಾಳೆ. ಅಲ್ಲಿಂದ ಮುಂದೆ ಗಂಡ ಮಗು ಮಾವನನ್ನು ಮರೆತು ಶೇಖರನೊಂದಿಗೆ ಸ್ನೇಹ ಬೆಳೆಸಿಕೊಂಡು ಮನಸೋಯಿಚ್ಚೆ ನಡೆದುಕೊಳ್ಳುತ್ತಾಳೆ. ಶೇಖರನನ್ನು ನಂಬಿ ಮನೆ ತೊರೆದು ಬೆಂಗಳೂರಿಗೆ ಹೋಗಿ ಅಲ್ಲಿ ಅನ್ಯಾಯಕ್ಕೆ ಒಳಗಾಗುತ್ತಾಳೆ. ಬೀದಿ ಪಾಲಾಗುತ್ತಾಳೆ. ಸಿದ್ದ ಅವಳ ತಪ್ಪುಗಳನ್ನು ಕಣ್ಣಾರೆ ಕಂಡರೂ ಅವುಗಳನ್ನು ಕ್ಷಮಿಸಿ ಮತ್ತೆ ಮನೆಗೆ ಕರೆತಂದು ಅಪ್ಪ ಊರು ಸಮಾಜದ ತಿರಸ್ಕಾರವನ್ನು ಎದುರಿಸಿ ಅವಳಿಗೊಂದು ಬಾಳು ನೀಡುವ ಕಥೆ ಅತ್ಯಂತ ಮನೋಜ್ಞವಾಗಿ ನಿರೂಪಿತವಾಗಿದೆ.

ಇಲ್ಲಿ ಹೆಣ್ಣು ಪ್ರತಿ ಹೆಜ್ಜೆ ಇಡುವಾಗಲೂ ಯೋಚಿಸಬೇಕು, ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಬೇಕು. ಆವೇಶಕ್ಕೆ ಒಳಗಾಗಬಾರದು, ಒಳಿತು ಕೆಡಕುಗಳನ್ನ ಪರಾಮರ್ಶಿಸಬೇಕು ಎಂಬ ಸಂದೇಶವಿದ್ದರೆ, ಪುರುಷರು ಸಿದ್ದನಂತಹ ಮನಸ್ಥಿತಿಯನ್ನು ಹೊಂದಲು ಸಾಧ್ಯವಾಗುತ್ತದೆ ಎಂಬ ಸಂದೇಶವಿದೆ.

ಈ ಕಥೆಯಲ್ಲಿ ಊರಿನ ನಾಯಕನಿಗಿಂತ ಸಿದ್ಧ ಕಿರಿಯನಾದರೂ ತನ್ನ ಉತ್ತಮ ಆಲೋಚನೆ, ತಾಳ್ಮೆ, ಸಹನೆ, ಕ್ಷಮಾಗುಣ, ತೀರ್ಮಾನಿಸುವ ಗುಣಗಳಲ್ಲಿ ಪ್ರೌಢಿಮೆ ಮೆರೆದು ವ್ಯಕ್ತಿತ್ವದಲ್ಲಿ ಹಿರಿಯವನಾಗುತ್ತಾನೆ ಎಂಬ ಸಂದೇಶವನ್ನು ಕಥೆಗಾರರು ನೀಡಿದ್ದಾರೆ. ಇಲ್ಲಿ ವಿದ್ಯಾವಂತರಾದ ಶೀಲವ್ವ ತನಗೆ ನೀಡಿದ ಸ್ವಾತಂತ್ರ್ಯವನ್ನು, ಪ್ರೀತಿಯನ್ನು ದುರುಪಯೋಗಪಡಿಸಿಕೊಂಡಿದ್ದು ವಿಷಾದನೀಯ ಸಂಗತಿ. ಇಲ್ಲಿ ಅವಳಿಗೆ ತನ್ನ ನಡೆಯ ಬಗ್ಗೆ ಪಶ್ಚಾತ್ತಾಪ ಉಂಟಾಯಿತೇ ಎಂಬ ಪ್ರಶ್ನೆ ನಿಗೂಢವಾಗಿ ಉಳಿಯಿತು.

ಜಾನಪದ ಶೈಲಿಯಲ್ಲಿ ಮೂಡಿಬಂದ 'ಹುಳಿ ಮೊಸರು' ಈ ಕಥೆ ಗ್ರಾಮೀಣ ಬೈಗುಳಗಳ ಸರಮಾಲೆಯನ್ನು ಪರಿಚಯಿಸುತ್ತದೆ. ನಮ್ಮ ದಕ್ಷಿಣ ಕರ್ನಾಟಕದಲ್ಲಿ ಅತ್ಯಂತ ಅಸಹ್ಯ ಎನಿಸುವ ಬೈಗುಳಗಳ ಪ್ರಯೋಗ ಉತ್ತರ ಕರ್ನಾಟಕದಲ್ಲಿ ಸಹಜವೆನಿಸುತ್ತದೆ. ಈ ಕಥೆ ಕೌಟುಂಬಿಕ ವಾತಾವರಣ, ಕುಟುಂಬದ ಸದಸ್ಯರಲ್ಲಿ ಮೂಡುತ್ತಿರುವ ಸ್ವಾರ್ಥಗಳ ಗುಣಗಳನ್ನು ತೆರೆದಿಡುತ್ತದೆ. ಈ ಕಥೆಯಲ್ಲಿ ಬಲಿಷ್ಠ ದೇಹದಾರ್ಢ್ಯ ಹೊಂದಿದ ಸುಂದರ ಮೈಕಟ್ಟಿನ ಯುವಕ ಹಾಗೂ ಆಕರ್ಷಿತನಲ್ಲದ ಸಣಕಲು ದೇಹದ ಯುವಕನ ಪಾತ್ರಗಳ ಸುತ್ತ ಈ ಕಥೆ ಗಿರಕಿ ಹೊಡೆಯುತ್ತದೆ. ದೊಡ್ಡ ಮಗನ ಕುಟುಂಬ ತುಂಬಾ ಚೆನ್ನಾಗಿ ಮನೆ ಮಂದಿಗೆಲ್ಲ ಹೊಂದಿಕೊಂಡು ಬದುಕು ಕಟ್ಟಿಕೊಂಡರೆ, ಚಿಕ್ಕಮಲ್ಲ ತನ್ನ ದೈಹಿಕ ಹೀನತೆಯಿಂದ ಹೆಂಡತಿಯಿಂದ ತಿರಸ್ಕೃತನಾಗಿದ್ದು ಮಾತ್ರವಲ್ಲದೆ ಅವನ ಪ್ರಾಣಕ್ಕೆ ಹಂತಕಳಾಗಿ ಅವನ ಹೆಂಡತಿ ಶಾಂತಿ ಕಾಣಿಸಿಕೊಳ್ಳುತ್ತಾಳೆ. ಪ್ರೀತಿ ಕೇವಲ ದೈಹಿಕವೇ ಚಿಕ್ಕಮಲ್ಲನ್ನ ಪ್ರೀತಿಯು ದೈಹಿಕ ಬಯಕೆಗಳ ಮುಂದೆ ಸೋತಿತೇ? ಅರಿಷಡ್ವರ್ಗಗಳ ನಿಯಂತ್ರಣ ಕಷ್ಟವೆಂಬುದರ ಪ್ರತೀಕವಾಗಿ ಶಾಂತಿ ಕಾಣಿಸಿಕೊಂಡಳೆ? ಪಂಚಾಯಿತಿ ಕಟ್ಟೆಯಲ್ಲಿ ತನ್ನ ಇಷ್ಟವಿಲ್ಲದ ಗಂಡನ ಬಿಡುವ ನಿರ್ಧಾರ ಪ್ರಕಟಿಸಿದ್ದು ಸ್ತ್ರೀ ಸ್ವಾತಂತ್ರ್ಯದ ಪ್ರತಿಬಿಂಬವೇ? ಗಂಡಿನ ಕೊಲೆ ಮಾಡಿ ಪ್ರಿಯಕರನೊಂದಿಗೆ ಓಡಿ ಹೋಗುವ ಮಟ್ಟಿಗೆ ನಮ್ಮ ನೆಲದ ಹೆಣ್ಣು ಮಕ್ಕಳ ಸಂಸ್ಕಾರ ನಶಿಸಿತಾ? ಇಂಥ ಅನೇಕ ವಿಚಾರಗಳ ಚಿಂತನ ಮಂಥನ ನಡೆಸುತ್ತ ಅಂತಿಮವಾಗಿ ಓದುಗರ ತೀರ್ಮಾನಕ್ಕೆ ಕತೆಯನ್ನು ಬಿಡುತ್ತಾರೆ. ಇಲ್ಲಿ ಹೆತ್ತವರಿಗು ಪಾಠವಿದೆ ಹೆಣ್ಣು ಮಕ್ಕಳನ್ನು ಸೆರಗಿನಲ್ಲಿ ಕಟ್ಟಿಕೊಂಡ ಕೆಂಡವೆಂದು ಭಾವಿಸಿ ಮದುವೆ ಮಾಡಿ ಸಾಗ ಹಾಕುವ ಆತುರದಲ್ಲಿ ಇವಳ ಇಷ್ಟ ಕಷ್ಟಗಳನ್ನು ಪರಿಗಣಿಸದೆ ಬಲವಂತದ ಲಗ್ನ ಮಾಡಿದರೆ ಅದು ದುರಂತ ಅಂತ್ಯ ಕಾಣುತ್ತದೆ ಎಂಬ ಕಿವಿ ಮಾತಿದೆ.

'ಒಂದು ಸಾವಿನ ಸುತ್ತಾ' ಕತೆಯು ಆಧುನಿಕ ಯುಗದಲ್ಲಿ ಕುಟುಂಬಗಳಲ್ಲಿ ಉಂಟಾಗುವ ಸ್ಥಿತ್ಯಂತರಗಳನ್ನು ದಾಖಲಿಸುತ್ತದೆ. ಕುಟುಂಬಗಳಲ್ಲಿ ರಾರಾಜಿಸುತ್ತಿದ್ದ ಹೊಂದಾಣಿಕೆ ಪ್ರೀತಿ ಸಾಮರಸ್ಯ ಸಹಕಾರ ಗುಣಗಳು ಇಂದು ವೈಯಕ್ತಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಸ್ವಾರ್ಥದ ಗೂಡಾಗಿ ಪರಿಣಮಿಸಿವೆ. ಮಲ್ಲಪ್ಪ ಮತ್ತು ಭೀಮ ಅವರ ಅನ್ಯೋನ್ಯ ಪ್ರೀತಿಯ ಕುರುಹುಗಳಾದ ಎರಡು ಗಂಡು ಮಕ್ಕಳು ವಿಭಿನ್ನ ತೆರದಲ್ಲಿ ಹೆತ್ತವರನ್ನು ನಿರ್ಲಕ್ಷಿಸಿ ಬದುಕಿದ್ದರು. ದೊಡ್ಡ ಮಗ ಹೆಂಡತಿ ಬೆರಗಿನ ಮಾತಿನ ಮೋಡಿಗೆ ಮರಳಾಗಿ ಪರ ಊರಿನಲ್ಲಿದ್ದರೆ, ಕಿರಿಯ ಮಗ ಸೊಸೆ ನಾಮಕಾವಸ್ಥೆಗೆ ಜೊತೆಗಿದ್ದ ನಿತ್ಯ ಮಾನಸಿಕ ಕಿರುಕುಳ ನೀಡುತ್ತಿದ್ದರು. ಭೀಮವ್ವ ಸತ್ತಾಗ ಸೂತಕದ ಮನೆಯ ವಾತಾವರಣದ ಬಗ್ಗೆ ಕತೆಗಾರ ವರ್ಣನೆ ಕಣ್ಣಿಗೆ ಕಟ್ಟುವಂತೆ ಕಥನ ರೂಪದಲ್ಲಿ ದೃಶ್ಯ ಕಾವ್ಯದಂತೆ ಮನದಬಿತ್ತಿಯಲ್ಲಿ ಸುಳಿದು ಹೋಗುತ್ತದೆ.

ಬದುಕಿದ್ದಾಗ ಒಮ್ಮೆಯೂ ಹೆತ್ತವರನ್ನು ಪ್ರೀತಿ ಕಾಳಜಿ ಮಾಡದ ಮಕ್ಕಳು, ಸೊಸೆಯಂದಿರು ಸಂಸ್ಕಾರದ ಸಮಯದಲ್ಲಿ ಭೀಮವ್ವನ ಕೊರಳ ಚಿನ್ನದ ಸರಕಾಗಿ ಕಚ್ಚಾಡುವ ದೃಶ್ಯವು ಮನ ಕಲಕುತ್ತದೆ. ಹೆಂಡತಿಯ ಶವ ಸಂಸ್ಕಾರಕ್ಕೆ ಹಣವಿಲ್ಲದೆ ಪರಿತಪಿಸುವ ಮಲ್ಲಪ್ಪನ ಅಸಹಾಯಕತೆ, ದುಃಖ ಸಾಗರವನ್ನೇ ಹರಿಸುತ್ತದೆ. ಅಂತಿಮವಾಗಿ ಮಕ್ಕಳು ತಮ್ಮತಮ್ಮಲ್ಲೇ ಜಗಳವಾಡುತ್ತಿದ್ದರೆ ಅಪ್ಪ ಹೆಂಡತಿಯ ಸರವನ್ನು ಗೌಡನಲ್ಲಿ ಅಡವಿಟ್ಟು ಕ್ರಿಯಾದಿಗಳನ್ನು ಮುಗಿಸುವಲ್ಲಿ ಅವನ ಭಾರವಾದ ಹೃದಯದಲ್ಲಿ ಮಡುಗಟ್ಟಿದ ನೋವು ಓದುಗರ ಕಂಗಳಲ್ಲಿ ನೀರು ಹನಿಸುತ್ತದೆ. ಇಂತಹ ಮಕ್ಕಳಿಗಾಗಿ ತಂದೆ ತಾಯಿಗಳು ತಮ್ಮ ಜೀವನವನ್ನೆಲ್ಲ ತೆಯ್ಯುತ್ತಾರೆ. ಗ್ರಾಮೀಣ ವಾತಾವರಣದಲ್ಲಿ ನೆರೆಹೊರೆಯವರ ಆಸರೆ, ಸಾಂತ್ವನ ಆರೈಕೆ ಕಾಫಿ ಟೀ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡುವ ಕ್ರಮ ಹಾಗೂ ಅಲ್ಲಿ ನಡೆಯುವಂತಹ ಮಾತುಕತೆ, ಸಾಂತ್ವನ, ಸಂತಾಪಗಳು ಗ್ರಾಮಗಳಲ್ಲಿ ಸಹಕಾರ ಗುಣಗಳು ಇನ್ನೂ ಉಳಿದಿವೆ ಎಂಬ ಸುಳಿವು ನೀಡುತ್ತದೆ.

ಕಷ್ಟದ ಸಮಯದಲ್ಲಿ ಕೆಲವೊಬ್ಬರ ನಾಟಕಗಳು, ಅತಿರೇಕದ ವರ್ತನೆಗಳು, ಅವುಗಳನ್ನ ದಮನ ಮಾಡಿ ಪರಿಸ್ಥಿತಿಯನ್ನು ಶಾಂತ ಗೊಳಿಸುವ ನೆರೆಹೊರೆಯವರು ಊರ ಹಿರಿಕರ ಪಾತ್ರಗಳನ್ನು ತುಂಬಾ ಮನೋಜ್ಞವಾಗಿ ಚಿತ್ರಿಸಿದ್ದಾರೆ.

ಒಟ್ಟಿನಲ್ಲಿ ಯುವ ಕಥೆಗಾರ ಆನಂದ್ ಗೊಬ್ಬಿ ಭವಿಷ್ಯದ ಭರವಸೆಯ ಕಥೆಗಾರರಾಗಿ ''ನಿರುದ್ಯೋಗಕ್ಕೆ ಹೆಣವಾದ ಅಪ್ಪ' ಕಥಾ ಸಂಕಲನದ ಮೂಲಕ ಹೊರಹೊಮ್ಮಿದ್ದಾರೆ.

- ಅನುಸೂಯ ಯತೀಶ್

 

MORE FEATURES

'ಕೂಡಿಟ್ಟ ಹಣ ಎಲ್ಲಿ ಹೋಯಿತು?'

07-09-2024 ಬೆಂಗಳೂರು

“ಒಲವ ಧಾರೆ' ಕವನ ಸಂಕಲನದಲ್ಲಿರುವ ರಾಮಕೃಷ್ಣರವರ ಬಹುತೇಕ ಕವನಗಳಲ್ಲಿ ವ್ಯಕ್ತವಾಗುವ ಕವಿಯ ಅನುಭವಗಳು ನಮ್ಮ ಅ...

ಅಂತಃಕರಣ ಎಂದರೆ ಆಂತರಿಕ ಕಾರ್ಯಗಳು

07-09-2024 ಬೆಂಗಳೂರು

"ನನ್ನದೆ ಜೀವನದ ಹಲವಾರು ರೀತಿಯ ಭಾವನಾತ್ಮಕ ಪದ ಪುಂಜಗಳಿಗೆ ಈ ಹೊತ್ತಗೆಯ ಮೂಲಕ ಮುಕ್ತಿ ಅಥವಾ ಮೋಕ್ಷ(ನಿರ್ವಾಣ) ಇಂ...

ಕಾವ್ಯ ಪ್ರಕಾರದ ಮೂಲಕ ಸಶಕ್ತವಾಗಿ ಗುರುತಿಸಿಕೊಂಡವರು ಶೈಲಜಾ ಉಡಚಣ

07-09-2024 ಬೆಂಗಳೂರು

“ಶರಣರ ಪ್ರಭಾವದಲ್ಲಿ ಅರಳಿದ ಈ ಪ್ರತಿಭಾನ್ವಿತೆಯ ಬದುಕು – ಬರಹಕ್ಕೆ ಪೂರಕವಾಗಿದೆ. ಆ ಕಾರಣಕ್ಕಾಗಿ ಅವರ ಬರ...