ಕಥೆಗಳ ಜಾಯಮಾನ `ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು'


ದಿನೇಶ್‌ ಮಡಗಾಂವ್ಕರ್‌ ಅವರ ‘ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು’ ಕಥಾ ಸಂಕಲನದ ಕುರಿತು ಎಂ.ಎಸ್. ಶ್ರೀರಾಮ್‌ ಅವರು ಬರೆದ ಮುನ್ನುಡಿ ಇಲ್ಲಿದೆ. 

 

‘ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು...’ ಎಂಬ ಹೆಸರಿನಲ್ಲಿ ಎಂಟು ಕಥೆಗಳ ಗುಚ್ಛವನ್ನು ಪ್ರಕಟಿಸುತ್ತಿರುವ ದಿನೇಶ್ ಮಡಗಾಂವ್ಕರ್ ಅವರಿಗೆ ಪ್ರೀತಿಯ ಅಭಿನಂದನೆಗಳು. ಈಗ ಹಲವು ಪುಸ್ತಕಗಳಿಗೆ ಮುನ್ನುಡಿಕಾರನಾಗಿರುವ ಅನುಭವದಿಂದ ಆಗಾಗ, ಒಂದು ಪ್ರತಿಕ್ರಿಯೆಯ, ಒಂದು ಪ್ರವೇಶಿಕೆಯ ಮಹತ್ವವೇನು ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳುತ್ತೇನೆ. ಅದೇ ಕಾಲಕ್ಕೆ ನಾನೂ ನನ್ನ ಕಥೆಗಳಿಗೆ ನನಗೆ ಪ್ರಿಯರಾದ ಲೇಖಕರಿಂದ ಮುನ್ನುಡಿ ಬಯಸಿದ್ದಲ್ಲದೇ, ಬರೆಸಿದ್ದೂ ಉಂಟು. ಹೀಗೆ ಒಬ್ಬರ ಕೈಯನ್ನು ನಮ್ಮ ತಲೆಯಮೇಲೆ ಸೆಳೆದು ಸವರಿಸಿಕೊಳ್ಳುತ್ತಿರುವಾಗಲೇ ಮತ್ತೊಬ್ಬರ ತಲೆಯನ್ನು ಸವರಬೇಕಾದ ಪರಿಸ್ಥಿತಿಯೂ ನನಗೆ ಉಂಟಾಗಿರುವುದು ಇತ್ತೀಚೆಗೆ ಅಂಟಿರುವ “ಹಿರಿಯ” ಕಥೆಗಾರ ಎನ್ನುವ ಹಣೆಪಟ್ಟಿಯಿಂದಾಗಿರಬಹುದು. ಆದರೆ ಮುನ್ನುಡಿಕಾರರನ್ನು ಆಯ್ಕೆ ಮಾಡುವುದರಲ್ಲಿ ಯಾವುದಾದರೂ ಒಂದು ಕ್ರಮಬದ್ಧತೆಯಿದೆಯೇ – ಆ ಕ್ರಮಬದ್ಧತೆಯಿಂದಾಗಿ ಮುನ್ನುಡಿಗೂ ಒಂದು ಅರ್ಥ ಬರಬಹುದೇ. ಈ ಮೂಲಕವೂ ಒಬ್ಬರ ಕಥಾಲೋಕಕ್ಕೆ ಪ್ರವೇಶಿಸಬಹುದೇ ಎನ್ನುವುದು ಕುತೂಹಲದ ಪ್ರಶ್ನೆ.

ಸಾಮಾನ್ಯವಾಗಿ ಮುನ್ನುಡಿಕಾರರನ್ನು ಆರಿಸಿಕೊಳ್ಳುವಾಗ ಉಪಯೋಗಿಸುವ ಮಾನದಂಡಗಳೇನು – ಮುನ್ನುಡಿ ಬರೆವವರ ಹೆಸರು ದೊಡ್ಡದಾಗಿದ್ದರೆ – ಒಂದು ಆಶೀರ್ವಚನದಂತಿರುತ್ತದೆ. ಹೀಗೆ ಹಿರಿಯರ ಗಮನವನ್ನು ಬಲವಂತವಾಗಿ ಸೆಳೆಯುವುದು ಒಂದು ಕ್ರಮ. ವಿಮರ್ಶಕರನ್ನು ಮುನ್ನುಡಿಕಾರರನ್ನಾಗಿ ಆರಿಸಿಕೊಂಡಾಗ ಆಗಬಹುದಾದ ಟೀಕಾ ಪ್ರಹಾರದ ಮೊನಚನ್ನು ಒಂದು ಬದಿಯಿಂದ ಕಡಿಮೆ ಮಾಡಿದಂತಾಗುತ್ತದೆ ಇದು ಎರಡನೆಯ ಕ್ರಮ. ನಮ್ಮ ಕಥನ ಕ್ರಮಕ್ಕೆ ತಕ್ಕಂತಹ ಮತ್ತೊಂದು ಮನಸ್ಸು ಸಿಕ್ಕಿದರೆ ಬರವಣಿಗೆಯನ್ನು ಬಿಡಿಸಿಡುವುದಕ್ಕೆ ಮತ್ತೊಂದು ದನಿ ಸೇರಿಸಿದಂತಾಗುತ್ತದೆ, ಇದು ಮೂರನೆಯ ಕ್ರಮ. ಯಾವುದೋ ಭಿನ್ನ ಸಂದರ್ಭದಲ್ಲಿ ಈ ಕಥಾಗುಚ್ಛವನ್ನು ಓದಿದ್ದರೆ, ಹೆಚ್ಚಿನ ಶ್ರಮವಿಲ್ಲದೆಯೇ ನಾಲ್ಕು ಹಿತವಚನ ಬರೆದುಕೊಡಬಹುದು ಎನ್ನುವುದು ನಾಲ್ಕನೆಯ ಕ್ರಮ. ಹೀಗೆ ಮುನ್ನುಡಿಕಾರರನ್ನು ಆಯ್ದುಕೊಳ್ಳುವುದಕ್ಕೂ ಹಲವು ಕಾರಣಗಳಿರಬಹುದು. ಒಟ್ಟಾರೆ ಮುನ್ನುಡಿ ಓದುಗರಿಗೆ ಏನೇ ಸಂದೇಶ ಕಳಿಸಿದರೂ ಲೇಖಕನ ಕಂಟ್ರೋಲ್ಡ್ ಸಂದೇಶ ಅದಾಗಿರುತ್ತದೆ. ಮುನ್ನುಡಿಕಾರನ ಆಯ್ಕೆಯಲ್ಲಿಯೇ ಬರವಣಿಕೆಯ ಓದಿಗೆ ಒಂದು ದಿಕ್ಕನ್ನು ಕೊಡುವ ಪ್ರಯತ್ನ ಬರಹಗಾರನದ್ದಾಗಿರುತ್ತದೆ. ಮುನ್ನುಡಿಗೆ ಆಹ್ವಾನದ ಭಿಡೆಯೂ ಇರುತ್ತದಾದ್ದರಿಂದ, ಅದರಲ್ಲಿ ಉತ್ತಮ ಅಂಶಗಳನ್ನು ಹೆಕ್ಕುವ ಗುಣಗಳಿರುತ್ತವೆ. ಆದರೆ ಓದುಗರು ಬುದ್ಧಿವಂತರು. ಮುನ್ನುಡಿಕಾರನ ಪಾತ್ರವನ್ನು ಡಿಸ್ಕೌಂಟ್ ಮಾಡಿಯೇ, ತಮ್ಮ ನೆಲೆಯಲ್ಲಿ ಕಥೆಗಳನ್ನು ಓದಿಕೊಳ್ಳುತ್ತಾರೆ.

ಈ ಹಿನ್ನೆಲೆಯನ್ನು ನಾನು ಇಷ್ಟು ಸುದೀರ್ಘವಾಗಿ ಬರೆಯಲು ಕಾರಣವಿದೆ. ದಿನೇಶ್ ನನ್ನನ್ನು ಮುನ್ನುಡಿಗಾಗಿ ಸಂಪರ್ಕಿಸಿದಾಗ ನಾನು ತೀರ್ಪುಗಾರನಾಗಿದ್ದ ಸಾಲಿನಲ್ಲಿ ಛಂದ ಬಹುಮಾನದ ಪಟ್ಟಿಯಲ್ಲಿ ಅವರ ಪುಸ್ತಕವಿತ್ತು – ಅದನ್ನು ನಾನು ಓದಿರುತ್ತೇನಾದ್ದರಿಂದ ನನಗೆ ಹೆಚ್ಚಿನ ಕೆಲಸ ಹಚ್ಚುತ್ತಿಲ್ಲ ಎನ್ನುವ ಪೀಠಿಕೆ ಹಾಕಿ ಕೇಳಿದರು. ಆದರೆ ಅದು ಅಷ್ಟು ಸರಳವಲ್ಲ ಎನ್ನುವುದು ಇಬ್ಬರಿಗೂ ಗೊತ್ತಿರುವ ಮಾತು. ಹಿಂದೆ ಓದಿದ್ದರ ನೆನಪಿನ ಮೇಲೆ ಏನನ್ನೂ ಬರೆಯುವುದು ಸಾಧ್ಯವಿಲ್ಲ. ಹೀಗಾಗಿ ಇದರಲ್ಲಿ ಹಿಂದಿನ ಓದಿನ ಜೊತೆಗೆ ನಾನು ಅವರ ಕಥೆಗಳನ್ನು ಮತ್ತೆ ಓದಬೇಕು ಎನ್ನುವ ಆಶಯವೂ ಅವರಲ್ಲಿದ್ದಿರಬಹುದು. ಈ ಕಥೆಗಳನ್ನು ಓದಿದಾಗ ನನಗೂ ಒಂದು ರೀತಿಯಿಂದ ಇವು ನನ್ನ ಜಾಯಮಾನದ ಕಥೆಗಳು ಎನ್ನಿಸಿತು. ಆದರೆ ಅವು ತುಂಬಾ ಭಿನ್ನವೆಂದೂ ಅನ್ನಿಸಿತು.

ನನ್ನ ಜಾಯಮಾನದ ಕಥೆಗಳು ಅಂದರೆ, ನಾನು ಆ ರೀತಿಯ ಕಥೆಗಳನ್ನು ಬರೆಯುತ್ತೇನೆಂದಲ್ಲ. ಆದರೆ ಕಥನ ಕ್ರಮದ ಬಗ್ಗೆ ಇರುವ ಆಸಕ್ತಿಯನ್ನು ಇವರ ಕಥೆಗಳು ಕೆರಳಿಸಿವೆ. ಇದಕ್ಕೆ ಉದಾಹರಣೆಯಾಗಿ ಈ ಗುಚ್ಛದಲ್ಲಿರುವ “ಪ್ರದ್ಯುಮ್ನನ ಪತ್ರಗಳು” ಎನ್ನುವ ಕಥೆಗೆ ದಿನೇಶ್ ಬಳಸಲು ಹೊರಟಿರುವ ಕಟ್ಟುವ ತಂತ್ರದಲ್ಲಿ ಒಬ್ಬ ವ್ಯಕ್ತಿಗೆ ಅವನ ಸುತ್ತಮುತ್ತಲಿನವರು ಬರೆದ ಕೈಬರಹದ ಪತ್ರಗಳಿಂದ ಒಂದು ವ್ಯಕ್ತಿತ್ವವನ್ನು ಕಲ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಕಥನ ಕಟ್ಟುವ ಕಲೆಯೂ ಇದೆ, ಅದು ಹೇಗೆ ಕಂಡರೆ (ಕೈ ಬರಹದಲ್ಲಿ, ತಪ್ಪು-ಚಿತ್ತುಗಳೊಂದಿಗೆ) ಅದರಿಂದಾಗಬಹುದಾದ ಪ್ರಭಾವದ ಬಗೆಗೂ ಅವರಿಗೆ ಒಂದು ಸಂವೇದನೆಯಿದೆ. ಇಲ್ಲಿ ಪ್ರದ್ಯುಮ್ನನ ಪಾತ್ರದ ವ್ಯಕ್ತಿತ್ವ ಕಟ್ಟುತ್ತಲೇ ಈ ಪ್ರಸ್ತುತಪಡಿಸುವಿಕೆಯ ಪ್ರಕ್ರಿಯೆಯಲ್ಲಿ ಪತ್ರ ಬರೆಯುತ್ತಿರುವವರ ವ್ಯಕ್ತಿತ್ವವೂ ಅರಳುತ್ತದೆ. ಇಷ್ಟರ ಮಟ್ಟಿಗೆ ಈ ತಂತ್ರವು ಫಲಕಾರಿಯಾದರೂ ಇದನ್ನು ಹಿಗ್ಗಿಸುವ ಸಾಧ್ಯತೆಯತ್ತ ದಿನೇಶ್ ಪ್ರಯತ್ನಿಸದೇ ಅಲ್ಪತೃಪ್ತರಾಗಿಬಿಡುತ್ತಾರೆ. ಇದೇ ಕಥೆಯನ್ನು ಬೇರೊಂದು ರೀತಿಯಲ್ಲಿ ಇನ್ನಷ್ಟು ಆಳವಾಗಿ ನೋಡಬಹುದೇ ಅನ್ನುವ ಶೋಧ ಅವರು ಮಾಡುವುದಿಲ್ಲ. ಹಾಗೂ ನಾವು ಬಳಸಬೇಕೆಂದು ಯೋಚಿಸುವ ಪರಿಕರಗಳು ನಮಗೆ ಸಿಕ್ಕದಿದ್ದರೆ ಏನಾಗಬಹುದು ಎನ್ನುವ ಕಾಳಜಿಯೂ ತಂತ್ರದ ಆಯ್ಕೆಯಲ್ಲಿರಬೇಕು. ಅದೇ ರೀತಿಯಲ್ಲಿ “ಶೂನ್ಯ” ಮತ್ತು “ವಿಪಶ್ಶನ” ಎನ್ನುವ ಕಥೆಗಳಲ್ಲೂ ಕಥೆಯ ಮೂಲ ಪಾತ್ರಗಳ ಸ್ವಗತದ ಮೂಲಕ – ಹೆಚ್ಚಿನ ಮಾತುಕತೆಯಿಲ್ಲದೇ – ಮನೋವ್ಯಾಪಾರದ ಪದರಗಳನ್ನು ಬಿಡಿಸುತ್ತಲೇ ಕಥೆಗಳನ್ನು ಕಟ್ಟುತ್ತಾರೆ – ಇದರಿಂದ ಪಾತ್ರಗಳು ಭಿನ್ನವಾಗಿ ಬೆಳೆಯುತ್ತಾ ಹೋಗುತ್ತವೆ. ಅಷ್ಟರ ಮಟ್ಟಿಗೆ ಈ ತಂತ್ರ ಫಲಕಾರಿಯಾದರೂ ಇದರಲ್ಲಿರುವ ಮಿತಿಗಳನ್ನು ಗಮನಿಸಬೇಕು.

ನನ್ನ ಜಾಯಮಾನದ ಕಥೆಗಳು ಎನ್ನುವದಕ್ಕೆ ಮತ್ತೊಂದು ಕಾರಣವೂ ಇದೆ. ದಿನೇಶ್ ಅವರ ಕಥೆಗಳು ಬೆಳೆದು ಕಡೆಗೆ ಒಂದು ಅನಿರೀಕ್ಷಿತ ತಿರುವನ್ನು ಪಡೆದು ನಿಂತುಬಿಡುತ್ತವೆ. ಇದು ಕಥನತಂತ್ರದ ಅತ್ಯಂತ ಹಳೆಯ ಹತಾರ. ಇದನ್ನು ಸಶಕ್ತವಾಗಿ ಉಪಯೋಗಿಸಬೇಕಾದರೆ ಅದರಲ್ಲಿ ಒಂದು ಕುತೂಹಲದ ಅಂಶವೂ ಇರಬೇಕು. ಅದನ್ನು ಕಟ್ಟುವ ಪರಿಯಲ್ಲಿ ಯಾವ ವಿವರಗಳನ್ನು ಯಾವಾಗ ನೀಡಬೇಕೆನ್ನುವ ಎಚ್ಚರಿಕೆಯೂ ಇರಬೇಕು. ಅದು ಇಲ್ಲದಿದ್ದಾಗ ಈ ತಂತ್ರವು ಒಂದು ಗಿಮಿಕ್ ಮಟ್ಟಕ್ಕೇ ಉಳಿದುಬಿಡುವ ಸಾಧ್ಯತೆಯಿದೆ. “ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು” ಅನ್ನುವ ಕಥೆಯಾಗಲೀ “ಮಾಯಾ” ಎನ್ನುವ ಕಥೆ ಅಚ್ಚುಕಟ್ಟಾದ ಕಥೆಗಳು. ಅದು ಒಂದು ಚೌಕಟ್ಟಿನಲ್ಲಿ ಸರಿಯಾಗಿ ಕುಳಿತುಕೊಳ್ಳತ್ತವೆ. ಆದರೆ ಅವು ಒಂದು ರೀತಿಯ ಪೂರ್ವನಿಯೋಜಿತ ಬದ್ಧತೆಗೆ ಬಲಿಪಶುವಾಗಿದೆ ಎಂದು ಅನ್ನಿಸುತ್ತದೆ. ಚೌಕಟ್ಟಿನ ಬರವಣಿಗೆಯ ಗುಣವೂ ಅಪಾಯವೂ ಇದೇ – ಚೌಕಟ್ಟಿನಲ್ಲಿ ಅದ್ಭುತ ಸಾಧನೆ ಮಾಡಿದರೂ ಸೀಮೋಲ್ಲಂಘನ ಮಾಡುವುದಿಲ್ಲ. ಕ್ರಿಕೆಟ್ಟಿನಲ್ಲಿ ಬೌಲಿಂಗಿಗೆ ಮೊದಲೇ ಶಾಟ್‍ಗೆ ಕಮಿಟ್ ಆಗುವ ರೀತಿಯಲ್ಲಿ ಇವುಗಳು ಒಮ್ಮೊಮ್ಮೆ ದಿನೇಶ್ ಅವರನ್ನು ಇಕ್ಕಟ್ಟಿನಲ್ಲಿ ಇರಿಸಿಬಿಡುತ್ತದೆ. ಬಹಳ ಹಿಂದೆ ತಿರುಮಲೇಶ್ ಹೇಳಿದ್ದರು –“ಬದ್ಧತೆ ಅನ್ನುವುದು ಬಂಧನ” – ಈ ಮಾತನ್ನು ದಿನೇಶ್ ನೆನಪಿನಲ್ಲಿರಿಸಿಕೊಳ್ಳಬೇಕು. “ಏಕ್ ಬಾರ್ ಕಮಿಟ್ ಹೋನೇಕೆ ಬಾದ್, ಮೈ ಅಪ್ನೆ ಆಪ್‍ಕೋ ಭೀ ನಹೀ ಸುಂತಾ” ಎನ್ನುವ ಜಾಯಮಾನ ಸಲ್ಮಾನ್ ಖಾನನಿಗೆ ಡಬಾಂಗ್‍ನಲ್ಲಿ ಹೊಂದಬಹುದು. ಆದರೆ ಸಾಹಿತ್ಯದಲ್ಲಿ ಇದು ಸೃಜನಾತ್ಮಕತೆಯನ್ನು ಕೊಡುವಂತಹ ನಿಲುವಲ್ಲ. ಈ ರೀತಿಯ ನಿರೂಪಣಾ ತಂತ್ರದ ಬದ್ಧತೆಗೆ ನಾನೂ ಅನೇಕ ಬಾರಿ ಒಳಗಾಗಿ ಹಿರಿಯರಿಂದ ಎಚ್ಚರಿಕೆ ಪಡೆದಿರುವುದರಿಂದ ನನ್ನದೇ ಜಾಯಮಾನದ ದಿನೇಶ್‍ಗೆ ಈ ಎಚ್ಚರಿಕೆಯನ್ನು ವರ್ಗಾಯಿಸುತ್ತಿದ್ದೇನೆ.

ಒಂದು ರೀತಿಯಿಂದ ಇದೇ ತಂತ್ರಕ್ಕೆ ಬಲಿಯಾಗುವ ಕಥೆಗಳು “ಶುದ್ಧಿ” ಮತ್ತು “ಓಂ ಭೂರ್ ಭುವಸ್ವಃ”. ಎರಡರಲ್ಲೂ ಅನಿರೀಕ್ಷಿತ (ಟ್ವಿಸ್ಟ್ ಇನ್ ದ ಟೇಲ್) ಅಂತ್ಯಗಳಿವೆ. ಎರಡರಲ್ಲೂ ಸಂಮಯದ ಕಥನದ ನಡುವೆ ಅಡಕವಾಗಿರುವ ವ್ಯಗ್ರತೆಯಿದೆ. ಹಾಗೂ ಸರಳವಾಗಿ ಓದಿದಾಗ ಕಥೆಯಿಂದ ಒಂದು ಸರಳ ಸಂದೇಶವೂ ಸಿಗುತ್ತದೆ. ಕಥನದಲ್ಲಿರುವ ಅಪಾಯ ಇದೇಯೇ. ಇದು ದಿನೇಶ್ ಅವರ ಆರಂಭದ ಕಥೆಗಳಾದ್ದರಿಂದ ಇದನ್ನು ನಾವು ನಜರಂದಾಜು ಮಾಡಬಹುದು. ಆದರೆ, ಇವೆರಡೂ ಲೇಖಕರ ಕಥನ ಕ್ರಮದಲ್ಲಿ ಬೆಳೆದ ಕಥೆಗಳಂತೆ ಕಾಣದೇ, ಒಂದು ಅಂತ್ಯವನ್ನು ಮೊದಲಿಗೇ ನಿರ್ಧರಿಸಿ ಅದನ್ನು ತಲುಪುವುದಕ್ಕೆ ಬೇಕಾದ ಹಿನ್ನೆಲೆಯ ತಯಾರಿಯನ್ನು ಮಾಡಿದಂತೆ ಭಾಸವಾಗುತ್ತದೆ. ಒಂದು ಅನಿರೀಕ್ಷಿತ ಅಂತ್ಯವೇ ತಂತ್ರವಾದಾಗಲೂ ಉತ್ತಮ ಕಥೆಗಳು ಬರಬಹುದು – ಆದರೆ ಆ ಕಥೆಗಳಲ್ಲಿನ ಸರಳತೆಯೇ ಅದರ ತೊಂದರೆಯೂ ಹೌದೆನ್ನುವುದನ್ನು ನಾವು ಓ. ಹೆನ್ರಿ ಕಥೆಗಳಲ್ಲಿ ಕಂಡುಕೊಂಡಿದ್ದೇವೆ. ಇದೂ ಬದ್ಧತೆಯ ಒಂದು ಅಪಾಯ. 

“ಓಂ ಭೂರ್....”, ವಿಚಿತ್ರವಾಗಿ ಮತ್ತು ವಿಲಕ್ಷಣವಾಗಿ ಅಸ್ಪೃಶ್ಯತೆಯ ಬಗ್ಗೆ ಮಾತಾಡುತ್ತದೆ. “ತೊಳೆದು ಸ್ವಚ್ಛ ಮಾಡೋಕ್ಕೆ ಪಾತ್ರೆ ಆದರೇನು, ದೇಹವಾದರೇನು” ಎನ್ನುವ ಗಹನವಾದ ಪ್ರಭಾವಶಾಲೀ ಮಾತುಗಳು ಆ ಕಥೆಯಲ್ಲಿ ಕಾಣಿಸುತ್ತವೆ. ಅತ್ಯದ್ಭುತವಾಗಬಹುದಾಗಿದ್ದ ಕಥೆಯಲ್ಲಿನ ಕೆಲವೇ ಪದಗಳು ಕಥೆಯ ಗಹನತೆಯನ್ನು ಇಳಿಸಿಬಿಡಬಹುದು ಎನ್ನುವುದಕ್ಕೆ ಈ ಕಥೆಯ ಅಂತ್ಯವನ್ನು ನಾವು ಚರ್ಚಿಸಬಹುದು. “ಒಮ್ಮೆಲೆ ಎಲ್ಲಿಂದಲೋ ಹಾರಿಬಂದ ಟಿಟ್ಟಿಭ ಟ್ಟಿಟ್ಟಿ ಟ್ಟೀ ಟ್ರೀಂಂಂ ಎಂದು ಕೂಗಿ ಹಾರಿಹೋಯ್ತು. ಅದನ್ನು ನೋಡಲು ತಲೆಎತ್ತಿದ ಸುಶೀಲೆಗೆ ಚಕ್ರ ಬಂದಂತಾಗಿ ವಾಂತಿ ಮಾಡಿಕೊಳ್ಳತೊಡಗಿದಳು.” ಅನ್ನುವ ಘಟ್ಟದಲ್ಲಿ ಅವರು ಕಥೆಗಳನ್ನು ಉಳಿಸಿದ್ದರೆ ಕಥೆಗೆ ಇನ್ನಷ್ಟು ವಜನು, ಹಲವು ಸಾಧ್ಯತೆಗಳು ಕಾಣಿಸಿಕೊಳ್ಳುತ್ತಿದ್ದುವು. ಆದರೆ ಅದರ ನಂತರ “ಹೊಟ್ಟೆಯಲ್ಲಿ ಜೀವವೊಂದು ಮಿಸುಕಿದಂತಾಗಿ ಕಾಲ ಕೆಳಗಿನ ಉರುಟುಕಲ್ಲು ಜಾರಿ ರಪ್ಪನೆ ಬೀಳುವಂತಾಗಿ ದಣಪೆಯನ್ನು ಹಿಡಿದುಕೊಂಡಳು” ಎನ್ನುವ ವಾಕ್ಯ ಸೇರಿದಾಗ ಸಾಧ್ಯತೆಗಳು ಸಂಕುಚಿತಗೊಂಡಂತಾಗಿ ಒಂದು ಪೂರ್ವನಿಯೋಜಿತ ಬದ್ಧತೆಗೆ ತಮ್ಮನ್ನು ಒಡ್ಡಿಕೊಳ್ಳುವುದಲ್ಲದೇ, ಓದುಗನನ್ನು ಎಳೆದು ಹೋಗುತ್ತಾರೆ.

ದಿನೇಶ್ ಕಥೆಗಳಲ್ಲಿ ಸೌಹಾರ್ದಪೂರ್ಣ ಸಮ-ಸಮಾಜವನ್ನು ಕಟ್ಟುವ ಯುವ ಆಶಾವಾದವಿದೆ. ಈ ಹಿನ್ನೆಲೆಯಲ್ಲಿ ಅವರ ನಾಲ್ಕು ಕಥೆಗಳನ್ನು ನಾವು ಗಮನಿಸಬೇಕು. “ಅಮ್ಮ ಎಲ್ಲಿದ್ದಾಳೆ?”, “ಗೆಂಡೆಹಳ್ಳಿ ರಾಮ...” ಹಿಂದು-ಮುಸ್ಲಿಂ ಸೌಹಾರ್ದವನ್ನು ಸೂಚ್ಯವಾಗಿ ಹೇಳುತ್ತವೆ. “ಶುದ್ಧಿ” ಕಥೆಯಲ್ಲಿ ಕಾವ್ಯನ್ಯಾಯವೂ ಸಂಪ್ರದಾಯವನ್ನು ಮುರಿದು ಮತ್ತೊಂದು ರೀತಿಯ ಸಮಾಜವನ್ನು ಕಾಣುವ ತುಡಿತ ಕಾಣಿಸುತ್ತದೆ.

ಈ ಕಥಾಸಂಕಲನದೊಂದಿಗೆ ದಿನೇಶ್ ನಮಗೆ ಹೊಸ ದನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರ ಮೊದಲ ಕೃತಿ. ಇದನ್ನು, ಪ್ರೀತಿಯಿಂದ ಸ್ವಾಗತಿಸೋಣ. ಯೌವ್ವನದಲ್ಲಿ ಜಗತ್ತು ನಮಗೆ ಬೈನರಿಯಲ್ಲಿ – ನ್ಯಾಯ-ಅನ್ಯಾಯ, ಮೇಲ್ಜಾತಿ-ಕೆಳಜಾತಿ, ಹಿಂದು-ಮುಸ್ಲಿಂ, ಶ್ರೀಮಂತ-ಬಡವ, ಗಂಡು-ಹೆಣ್ಣುಗಳಾಗಿ ಕಂಡು ಈ ಬೈನರಿಗಳ ಸಮತೋಲನವನ್ನು ಸಾಧಿಸುವ ತುಡಿತವಿರುತ್ತದೆ. ಹಾಗೆಯೇ ಕಥೆಯನ್ನು ಜನಮೆಚ್ಚುವಂತೆ ಕಟ್ಟಿಕೊಡಬೇಕೆನ್ನುವ ತುಡಿತವೂ ಇರುತ್ತದೆ. ಕಥನ ತಂತ್ರ ಮಾಗುತ್ತಾ ಬಂದಾಗ ಕಥೆಗಳು ತಾವಾಗಿಯೇ ಬೆಳೆಯುತ್ತವೆ. ಕಥನ ತಂತ್ರಗಳು ದಕ್ಕುತ್ತವೆ. ಅನುಭವ ಗಾಢವಾಗುತ್ತಾ ಬೈನರಿಗಳು ಬೈನರಿಗಳಾಗಿರದೇ ಸಂಕೀರ್ಣವಾಗಿ ಕಾಣಿಸುತ್ತವೆ. ಅನೇಕ ಬಾರಿ ನಾವು ಕಂಡುಹುಡುಕಿದ ಸಮಸ್ಯೆಗೆ ಸಮಾಧಾನ ಸಿಗುವುದಿಲ್ಲ, ಅದರ ಶೋಧದಲ್ಲಿಯೇ ಕಥನ ನಿಲ್ಲಬಹುದು. ಈ ಎಲ್ಲ ಸಾಧ್ಯತೆಗಳೂ ದಿನೇಶ್ ಅವರ ಮುಂದಿನ ಕಥೆಗಳಲ್ಲಿ ಬರಲಿ ಎಂದು ಆಶಿಸುತ್ತೇನೆ. ಅವರಿಗೆ ಕಥೆ ಹೇಳುವ ಕ್ರಮ ದಕ್ಕಿದೆ. ಉತ್ತಮ ಭಾಷೆಯೂ ಅವರ ಗುಣವಾಗಿದೆ. ಭಾಷೆಯನ್ನು ಆಸಕ್ತಿಕರವಾಗಿ ಉಪಯೋಗಿಸುವ ಪ್ರತಿಭೆಯೂ ಇದೆ. ಇನ್ನಷ್ಟು ಮಾಗಿದ ಕಥೆಗಳನ್ನು ದಿನೇಶ್ ಮುಂದೆ ಬರೆಯಬಹುದೆಂಬ ಭರವಸೆಯೂ ನನಗೆ ಕಾಣುತ್ತಿದೆ. ಅವರು ಅವರ ಬದ್ಧತೆಗಳಿಂದ ಮುಕ್ತರಾಗಿ ಇನ್ನೂ ಶಕ್ತ ಕಥೆಗಳನ್ನು ಬರೆಯುತ್ತಾರೆ ಎನ್ನುವ ಆಶಯದೊಂದಿಗೆ ನನ್ನ ಜಾಯಮಾನದ ಕಥೆಗಾರರಾದ ದಿನೇಶ್ ಅವರನ್ನು ನಾನು ಪ್ರೀತಿಯಿಂದ ಸ್ವಾಗತಿಸುತ್ತೇನೆ.


ಎಂ.ಎಸ್. ಶ್ರೀರಾಮ್

ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ (1962) ಎಂ.ಎಸ್. ಶ್ರೀರಾಮ್ ಅವರು ಶಿಕ್ಷಣ ಪಡೆದದ್ದು ಉಡುಪಿ, ಬೆಂಗಳೂರು, ಮೈಸೂರು ಮತ್ತು ಆನಂದ್ ದಲ್ಲಿ. ಹೈದರಾಬಾದ್ ನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿದ ಅವರು ನಂತರ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಂದ ಡಾಕ್ಟರೇಟ್ ಪಡೆದರು. ಆಮೇಲೆ ಆನಂದದ ಇನ್ಸ್ ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ ಮೆಂಟ್ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದ್ ನ ಬೇಸಿಕ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ, ಅಹಮದಾಬಾದಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಬೆಂಗಳೂರಿನ ಐಐಎಂನಲ್ಲಿ ಕೆಲಸ ಮಾಡುತ್ತಿದ್ದಾರೆ.

ಶ್ರೀರಾಮ್ ಅವರ ಮೊದಲ ಕಥಾ ಸಂಕಲನ ‘ಮಾಯಾದರ್ಪಣ’ಕ್ಕೆ ಮಾಸ್ತಿ ಕನ್ನಡ ಸೇವಾನಿಧಿ ಪ್ರಶಸ್ತಿ ದೊರೆತಿದೆ. ‘ಅವರವರ ಸತ್ಯ’, ‘ತೇಲ್ ಮಾಲಿಶ್’, ‘ಸಲ್ಮಾನ್ ಖಾನ್ ನ ಡಿಫಿಕಲ್ಟೀಸು’ ಕಥಾಸಂಕಲನ ಪ್ರಕಟಿಸಿದ್ದಾರೆ. ‘ಕನಸು ಕಟ್ಟುವ ಕಾಲ’, ‘ಶನಿವಾರ ಸಂತೆ’ ಅವರ ಪ್ರಬಂಧ ಸಂಕಲನಗಳು.


 

MORE FEATURES

ನಿತ್ಯ ಜೀವನದ‌ ಮಾರ್ಗದರ್ಶನಕ್ಕಾಗಿ ಓದಬೇಕಾದ ಕೃತಿ ‘ಇರುವುದೆಲ್ಲವ ಬಿಟ್ಟು’

19-04-2024 ಬೆಂಗಳೂರು

'ಗೆಲುವಿಗಿಂತ ಸೋಲನ್ನೆ ಹೆಚ್ಚು ಪ್ರೀತಿಸುವ ರೈಗಳು ಸೋಲು ನಮ್ಮನ್ನು ನಮ್ರರನ್ನಾಗಿ ಮಾಡಿದರೆ ಗೆಲುವು ನಮ್ಮನ್ನು ಅಹಂ...

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...