ಕಥೆಗಳು ಸಮಾಜಕ್ಕೆ ಕೊಡಬಹುದಾದ ಅಂಶಗಳೇನೆಂಬುದನ್ನು ನಿರೂಪಿಸಿರುವ ‘ನೀಲಕುರಿಂಜಿ’


'ಪೇಟೆ ಸಮುದ್ರದ ದಾರಿ ' ಓದಿದಾಗ ಮೊದಲು ಪ್ರಬಂಧದಂತೆ ತೋರಿತಾದರೂ ಕಥೆಯ ಓದು ಮುಗಿಯುವಷ್ಟರಲ್ಲಿ ಕಥಾಭಾವ ಮನಸ್ಸಿನಲ್ಲಿ ಕೂತುಬಿಡುತ್ತದೆ.ಈ ಕಥೆ ಕೇವಲ ಕಥೆಗಾರನದಲ್ಲ ಸೂಕ್ಷ್ಮ ಸಂವೇದನೆ ಇರುವ ಎಲ್ಲರ ಭಾವದ್ದು ಕೂಡ.ನಂತರದ ಕಥೆ 'ಜಾಲಗಾರ 'ದಲ್ಲಿ ನೈತಿಕತೆ ಅಂದ್ರೆ ಏನು ಎಂಬುದನ್ನು ಕಥೆಗಾರ ಕಥೆ ಮೂಲಕ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಎನ್ನುತ್ತಾರೆ ಲೇಖಕ ಕೊಟ್ರೇಶ್ ತಂಬ್ರಳ್ಳಿಅಮರಗೋಳ ಮಠ. ಕತೆಗಾರ ದಾದಾಪೀರ್ ಜೈಮನ್ ಅವರ ನೀಲಕುರುಂಜಿ ಕೃತಿಯ ಬಗ್ಗೆ ಅವರು ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..

ಕೃತಿ: ನೀಲಕುರಿಂಜಿ
ಕರ್ತೃ: ದಾದಾಪೀರ್ ಜೈಮನ್

ಪುಟ: 102
ಬೆಲೆ: 120
ಮುದ್ರಣ: 2021
ಪ್ರಕಾಶಕರು: ವೈಷ್ಣವಿ ಪ್ರಕಾಶನ

2021 ರಲ್ಲಿ ರಾಯಚೂರು ಜಿಲ್ಲೆಯ ಕೆ ಗುಡದಿನ್ನಿ ಊರಿನ ವೈಷ್ಣವಿ ಪ್ರಕಾಶನದಿಂದ ಪ್ರಕಟವಾದ ಈ ಕಥಾ ಸಂಕಲನ ದಾದಾಪೀರ್ ಜೈಮನ್ ರ ನೀಲಕುರಿಂಜಿ. ಹನ್ನೆರಡು ವರ್ಷಕ್ಕೊಮ್ಮೆ ಅರಳುವ ನೀಲಕುರಿಂಜಿ ಹೂವಿನಂತೆ ಈ ಸಂಕಲನದ ಕಥೆಗಳು ಅಪ್ಪಟ ಕಥೆಗಳಾಗಿವೆ.

ಒಟ್ಟು ಈ ಸಂಕಲನದಲ್ಲಿ ಹತ್ತು ಕಥೆಗಳು ಇವೆ. ಮೊನ್ನೆ ಈ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಮೊನ್ನೆಯ ಕಥಾ ಪ್ರಶಸ್ತಿ ಭರಾಟೆಯ ನಂತರ ಈ ಕೃತಿ ಬಗ್ಗೆ ಕುತೂಹಲ ಉಂಟಾಗಿ ತಿರುವಿದರೆ ಇನ್ನೂ ಕನ್ನಡ ಕಥಾಲೋಕಕ್ಕೆ ಭವಿಷ್ಯವಿದೆ ಎಂದು ಖಾತ್ರಿಯಾಯಿತು.ಈ ಕಥೆಗಾರ ಅಪ್ಪಟ ಮಣ್ಣಿನ ಮಗ.ತನ್ನ ಭಾಷೆ, ಬೆಳೆದು ಬಂದ ಸಂಸ್ಕೃತಿ, ವಾತಾವರಣ, ಮಣ್ಣಿನ ಗುಣವನ್ನೆಲ್ಲಾ ಬಸಿದು ಕಥೆಯಾಗಿಸಿದ್ದಾರೆ.ಈ ಕಥೆಗಳಲ್ಲಿ ನಿರೂಪಿಸಿದ ಭಾಷೆ ಸೆಳೆಯುತ್ತದೆ.ಕಥೆಗಳು ಸಮಾಜಕ್ಕೆ ಕೊಡಬಹುದಾದ ಅಂಶಗಳು ಏನು ಎಂಬುದನ್ನು ನಿರೂಪಿಸಿದ್ದಾರೆ.ಒಂದು ಕಥಾ ಪರಂಪರೆಯ ಜೀವಂತ ಲಕ್ಷಣಗಳು ಇವರ ಕಥೆಗಳಲ್ಲಿವೆ ಎಂದು ಯಾವ ಮುಲಾಜಿಲ್ಲದೆ ಹೇಳಬಹುದು ಎಂದು ಖಡಾಖಂಡಿತವಾಗಿ ಒಬ್ಬ ಸಾಮಾನ್ಯ ಓದುಗನಾಗಿ ನಾನು ಹೇಳಲು ಇಚ್ಛೆಪಡುತ್ತೇನೆ.

ಈ ಸಂಕಲನ ತೆರೆದು ಮೊದಲ ಕಥೆ 'ಪೇಟೆ ಸಮುದ್ರದ ದಾರಿ ' ಓದಿದಾಗ ಮೊದಲು ಪ್ರಬಂಧದಂತೆ ತೋರಿತಾದರೂ ಕಥೆಯ ಓದು ಮುಗಿಯುವಷ್ಟರಲ್ಲಿ ಕಥಾಭಾವ ಮನಸ್ಸಿನಲ್ಲಿ ಕೂತುಬಿಡುತ್ತದೆ.ಈ ಕಥೆ ಕೇವಲ ಕಥೆಗಾರನದಲ್ಲ ಸೂಕ್ಷ್ಮ ಸಂವೇದನೆ ಇರುವ ಎಲ್ಲರ ಭಾವದ್ದು ಕೂಡ.ನಂತರದ ಕಥೆ 'ಜಾಲಗಾರ 'ದಲ್ಲಿ ನೈತಿಕತೆ ಅಂದ್ರೆ ಏನು ಎಂಬುದನ್ನು ಕಥೆಗಾರ ಕಥೆ ಮೂಲಕ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

ಈ ಕಥೆಗಾರನ ಅದ್ಭುತ ಪ್ರತಿಭೆಯನ್ನು ನೀವು 'ತೇರು'ಕಥೆಯಲ್ಲಿ ಕಾಣಬಹುದು. ಕಥೆಯಲ್ಲಿನ ಭಾಷೆ, ತನ್ನ ಸುತ್ತಲಿನ ಪರಿಸರವನ್ನು ಕಟ್ಟಿಕೊಡುವ ರೀತಿಗೆ ಮನಸೋಲುತ್ತದೆ.ಅಲ್ಪಸಂಖ್ಯಾತರಾದ ಜನಗಳ ಭಾವ, ಹಿಂದುಳಿದ ಜನರ ಬದುಕು, ಸಾಮಾಜಿಕ ಪರಿಸ್ಥಿತಿಯನ್ನು ಯಾವ ಲೋಪವಿಲ್ಲದೆ, ಪೂರ್ವಾಗ್ರಹಗಳಿಲ್ಲದೆ ನಿರೂಪಿಸಿದ್ದಾರೆ.ಸಮಾಜ ಬದುಕುವ ರೀತಿಯನ್ನು ಎಷ್ಟು ಚೆಂದಗೆ ಕಥೆ ಮಾಡಿದ್ದಾರೆಂದರೆ ಆ ಪರಿಸರದಲ್ಲಿ ಬೆಳೆದ/ನೋಡಿದ ನನ್ನ ಮನಸ್ಸು, ಕಥೆಗಾರನಿಗಿರಬೇಕಾದ ಸೂಕ್ಷ್ಮತೆ ಬಗ್ಗೆ ತಿಳುವಳಿಕೆ ಉಂಟಾಯಿತು ಮತ್ತು ನೈಜ ತೆಯ ದರ್ಶನ ಕೂಡ.

ಆವರಣ ಕಥೆಯಲ್ಲಿ ಮಂಗಳಮುಖಿ ಪುರುಷನ ಬಗ್ಗೆಯ ಕಥೆ ಓದಿ ಕಣ್ಣು ತೇವವಾಯಿತು.ಹಾಗೆಯೇ ‘ತೀರದ ಒಲವಿನ ಒಂಟಿ ಹಾಡು’ ಕಥೆಯಲ್ಲಿ ಒಬ್ಬ gay ನ ತಲ್ಲಣಗಳು ಹೇಗಿರಬಹುದೆಂದು ಮನದಟ್ಟಾಗುತ್ತದೆ.ನಿಜವಾಗಿಯೂ ಈ ಕಥೆ ಮನೋವೈಜ್ಞಾನಿಕ ನೆಲೆಯಲ್ಲಿ ಚಿತ್ರಿತವಾಗಿದೆ.

ಈ ಸಂಕಲನದ ಶೀರ್ಷಿಕೆ ಯ ಕುರಿತ ಕಥೆ ನೀಲಕುರಿಂಜಿ ಅಂತೂ ಅಪ್ಪಟ ಬಂಗಾರ.ಕಥೆಯೆಂದರೆ ಏನು ಎಂದು ಮನದಟ್ಟಾಗುತ್ತದೆ. ಈ ಕಥೆ ಓದಿದಾಕ್ಷಣ ಆ ಕಥಾ ಪರಿಸರ ಮನಸ್ಸನ್ನು ತುಂಬಿಕೊಳ್ಳುತ್ತದೆ ಜೊತೆಗೆ ಪಾತ್ರಗಳು ಕೂಡ.

ಕೊನೆ ಮಳೆಯ ಕಥೆಯಂತೂ ಓದಿ ಭಾವುಕನಾದೆ.ಎರಡು ಹೆಣ್ಣುಗಳ ಭಿನ್ನ ಚಿತ್ರಣ, ಬಡತನದ ಬೇಗೆ ದಟ್ಟವಾಗಿ ಆವರಿಸುತ್ತದೆ.ಹೆಣ್ಣು ಬದುಕನ್ನು ಕಟ್ಟಿಕೊಳ್ಳುವ ನೈಜ ಚಿತ್ರಣ ಇಲ್ಲಿದೆ. ಈ ಸಂಕಲನದ ಕೊನೆಯ ಕಥೆ ಕೂಡ ಹೆಣ್ಣೊಬ್ಬಳ ದಿಟ್ಟತನದ್ದೇ.

ಈ ಎಲ್ಲಾ ಕಥೆಗಳಲ್ಲಿ ಅತಿರೇಕಗಳು ನನ್ನ ಗಮನಕ್ಕೆ ಬಂದಿಲ್ಲ. ನೈಜ ಸಾಮಾಜಿಕ ಚಿತ್ರ ಕಥೆಗಳಾಗಿವೆ.ಯಾವುದೇ ಪೂರ್ವಾಗ್ರಹ ಇಲ್ಲ.ಹಳ್ಳಿ ಮತ್ತು ಪಟ್ಟಣದ ಕಥೆ ಎಂಬ ವರ್ಗೀಕರಣ ಇಲ್ಲ.ಈ ಎಲ್ಲಾ ಅಂಶಗಳು ಈ ಸಂಕಲನವನ್ನು ಗೆಲ್ಲಿಸಿವೆ. ಕೇವಲ ಸಂಕಲನವನ್ನಲ್ಲ ಓದುಗನ ಹೃದಯವನ್ನು ಕೂಡ.ಈ ರೀತಿಯ ಕಥೆಗಳು ಕನ್ನಡದಲ್ಲಿ ಮುಂದುವರಿದರೆ ಹಿಂದಿನವರು ಬೆಳೆಸಿದ ಕಥಾ ಪರಂಪರೆಗೆ ಕೊಡುಗೆಯನ್ನು ಕೊಟ್ಟಂತಾಗುತ್ತದೆ ಎಂದು ಒಬ್ಬ ಓದುಗವಾಗಿ ನಾನು ಭಾವಿಸಿದ್ದೇನೆ.

- ಕೊಟ್ರೇಶ್ ತಂಬ್ರಳ್ಳಿಅಮರಗೋಳ ಮಠ

ಕೊಟ್ರೇಶ್ ಅರಸೀಕೆರೆ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ..

MORE FEATURES

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...

'ಮರ ಬರೆದ ರಂಗೋಲಿಯ ರಂಗಿನೋಕುಳಿ'

18-04-2024 ಬೆಂಗಳೂರು

'ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವ...