“ಹೇಳಬೇಕಾದ ಕತೆಗಳು ಆವಿಯಾಗಿ ಯಾವುದೋ ಮೂಲೆಯಿಂದ ನಮಗೆ ಗೊತ್ತಿಲ್ಲದ ಕತೆಗಳು, ಕತೆಗಳು ಅಲ್ಲ ಎನ್ನಬಹುದಾದವುಗಳು ಹೊರ ಮೂಡುವುವು. ಒಮ್ಮೊಮ್ಮೆ ಮರೆಯಾದ ಕತೆಗಳೇ ನಿಜವಾದ ಕತೆಗಳು ಎಂದು ಎನ್ನಿಸುತ್ತದೆ,” ಎನ್ನುತ್ತಾರೆ ಎಚ್.ಆರ್. ರಮೇಶ. ಅವರು ತಮ್ಮ ‘ಯಾಬ್ಲಿ’ ಕೃತಿಗೆ ಬರೆದಿರುವ ಲೇಖಕರ ಮಾತು ನಿಮ್ಮ ಓದಿಗಾಗಿ.
ಬದುಕಿನ ಅನೇಕ ಸಂಗತಿ ಮತ್ತು ಅನುಭವಗಳಿಗೆ ಮುಖಾಮುಖಿಯಾಗಿ ಅದನ್ನೆಲ್ಲ ಕತೆಯಲ್ಲಿ ಹಿಡಿದಿಡುವುದು ಅಸಾಧ್ಯದ ಮಾತು. ಹಿಡಿದಿಡಲು ಪ್ರಯತ್ನಪಟ್ಟರೂ ಸಿಕ್ಕುವುದು ಒಂದು ಚುಕ್ಕಿಯಷ್ಟು ಮಾತ್ರ. ಆ ಅಷ್ಟಾದರೂ ಕತೆಯಲ್ಲಿ / ಕಲೆಯಲ್ಲಿ ಯಥಾವತ್ತಾಗಿ ಮೂಡುವುದಾ, ನೋ ವೇ! ವಾಸ್ತವವೆನ್ನುವುದು ಯಾವ ಕಾರಣಕ್ಕೂ ಭಾಷೆಯಲ್ಲಿ ಇದ್ದ ಹಾಗೆ ಮೂಡುವುದೇ ಇಲ್ಲ. ಅದು ಬೇರೆ ಬಗೆಯಲ್ಲೇ ಇರುತ್ತದೆ. ಏನನ್ನೋ ಹೇಳಲು ಹೋಗಿ ಮತ್ತೊಂದನ್ನು ಹೇಳುವುದು. ಇದು ಅಚ್ಚರಿ. ಹೇಳಬೇಕಾದ ಕತೆಗಳು ಆವಿಯಾಗಿ ಯಾವುದೋ ಮೂಲೆಯಿಂದ ನಮಗೆ ಗೊತ್ತಿಲ್ಲದ ಕತೆಗಳು, ಕತೆಗಳು ಅಲ್ಲ ಎನ್ನಬಹುದಾದವುಗಳು ಹೊರ ಮೂಡುವುವು. ಒಮ್ಮೊಮ್ಮೆ ಮರೆಯಾದ ಕತೆಗಳೇ ನಿಜವಾದ ಕತೆಗಳು ಎಂದು ಎನ್ನಿಸುತ್ತದೆ. ಕತೆಯ ಹಾದಿ ಅನಂತ. ಅದು ಕ್ರಮಿಸುವಾಗ ಲೋಕಜ್ಞಾನ, ನಮ್ಮ ಸಂವೇದನೆ, ಕಲ್ಪನೆಗಳನ್ನು ಸೇರಿಕೊಳ್ಳುತ್ತವೆ. ಇದು ವಾಸ್ತವ. ಹಾಗಾಗಿ ಕತೆಗಿಂತ ವಾಸ್ತವವಿಲ್ಲ; ವಾಸ್ತವಕ್ಕಿಂತ ಕತೆಯಿಲ್ಲ!
ಮೊನ್ನೆ ವಿಷ್ಣು ಮತ್ತು ಅವನ ಸ್ನೇಹಿತರ ಜೊತೆ ಕುಶಾಲನಗರದ ಹೋಟೆಲೊಂದರಲ್ಲಿ ಕಾಫಿಯನ್ನು ಕುಡಿಯುತ್ತ ಕುಳಿತಿದ್ದಾಗ ಹೀಗೆ ಒಂದು ಮಾತು ಬಂತು, ಅದು- ‘ಥಾಟ್’ ಮೊದಲೋ ಅಥವಾ ‘ಭಾಷೆ’ ಮೊದಲೋ ಎಂದು. ಅಲ್ಲಿಯ ಒಬ್ಬರು ಥಾಟ್ ಮೊದಲು, ನಂತರ ಭಾಷೆ ಎಂದರು. ಅವರ ವಾದ ಹೇಗಿತ್ತೆಂದರೆ ಮನಸ್ಸಿಗೆ ಏನಾದರೂ ಅನ್ನಿಸಿದ ಮೇಲೆಯೇ ಭಾಷೆ ಅದನ್ನು ಅಭಿವ್ಯಕ್ತಿಸುವುದು ಎಂಬುದಾಗಿತ್ತು. ನಾನು ಈ ವರ್ಗೀಕರಣವೇ ಸರಿಯಿಲ್ಲ. ಒಂದನ್ನು ಫಸ್ಟ್ ಎಂದೋ ಮತ್ತು ಮತ್ತೊಂದನ್ನು ಸೆಕೆಂಡ್ ಎಂದೋ ಯಾಕೆ ಶ್ರೇಣೀಕರಿಸಿ ಹೇಳಬೇಕು, ಭಾಷೆ ಎನ್ನುವುದು ಆಡುವ ನುಡಿಯೇ ಆಗಬೇಕೆಂದೇನು ಇಲ್ಲವಲ್ಲ, ಅನ್ನಿಸುವುದೇ ಭಾಷೆಯಲ್ಲವೇ, ಹೀಗಿರುವಾಗ ಯಾವುದು ಮೊದಲು ಯಾವುದು ನಂತರದ್ದು ಎಂದು ಹೇಳುವುದು ಎಂದೆ. ಅದು ಮತ್ತೆ ಎಲ್ಲೆಲ್ಲಿಗೋ ಹೋಯಿತು. ಒಂದಂತು ನಿಜ. ಕತೆಗಾರರಿಗೆ ಭಾಷೆಯೇ ಪ್ರಾಣ. ಅದರೊಳಗೇ ಲೋಕ ಸಾಕಾರಗೊಳ್ಳಬೇಕು ಮತ್ತು ಅದನ್ನು ಕಾಣಿಸಬೇಕು. ಲೋಕವನ್ನೇ ಕಾಣಿಸುವುದು ಎನ್ನುವ ಮಾತು ಸ್ವಲ್ಪ ದಾ ದ ಮಾತು! ವಿವೇಕ ಶಾನಭಾಗ ಅವರು ಸಹ ಇಲ್ಲಿಯ ಕತೆಗಳನ್ನು ಓದಿ, ಒಂದು ದಿನ ಫೋನಿನಲ್ಲಿ ಇದೇ ಅರ್ಥ ಬರುವಂತಹದ್ದನ್ನು ಹೇಳುತ್ತಿದ್ದರು. ಭಾಷೆಯಲ್ಲಿಯೇ ಎಲ್ಲವೂ ಆಗಬೇಕು, ಎಂತಹ ಘನ ಅನುಭವವಿದ್ದರೂ, ಉತ್ಕೃ ಷ್ಟವಾದ ಕಲ್ಪನೆಯಿದ್ದರೂ ಭಾಷೆಯಲ್ಲಿಯೇ ‘ಆಗ’ಗೊಳ್ಳ ಬೇಕಲ್ಲ!
ಇಲ್ಲಿಯ ಕತೆಗಳನ್ನು ಸುಮಾರು ಹದಿನೇಳರಿಂದ ಹದಿನೆಂಟು ವರ್ಷಗಳ ಅವಧಿ ಯಲ್ಲಿ ಬರೆದಿದ್ದೇನೆ. ತುಂಬಾ ಇತ್ತೀಚಿನದ್ದು ಎಂದರೆ ‘ಸಶೇಷ’ ಎನ್ನುವ ಕತೆ. ಆರಂಭದ್ದು ಎನ್ನಬಹುದಾದ ಕತೆ ‘ಅಲೆಗಳು’. ನನ್ನ ಸಂವೇದನೆಯ ಒಂದು ಭಾಗವೇ ಆಗಿರುವ ಚಿತ್ರದುರ್ಗಕ್ಕೆ ಈ ಕೃತಿಯನ್ನು ಅರ್ಪಿಸುತ್ತಿರುವೆ. ಇಲ್ಲಿಯ ಕತೆಗಳನ್ನು ಓದಿ ನಿಮಗೆ ಖುಷಿಯಾದರೆ ಅದಕ್ಕಿಂತ ಸಂತೋಷ ಮತ್ತೇನಿದೆ. ಇದು ನನ್ನ ಮೊದಲ ಸಂಕಲನವಾಗಿರುವುದರಿಂದ ಎಕ್ಸೈಟ್ ಮೆಂಟ್, ಕುತೂಹಲ, ತಳಮಳ ಇದೆ.
"ತೆರೆದ ಮನಸ್ಸಿನ ಪುಟಗಳು 25 ಕಥೆಗಳುಳ್ಳ ಕಥಾ ಸಂಕಲನ. ಇದರಲ್ಲಿನ ಕಥೆಗಳಲ್ಲಿ ಕೆಲವು ಕಾಲ್ಪನಿಕವಾದರೆ, ಮತ್ತೆ ಕೆ...
"ಬೋಳಶೆಟ್ಟರ ಬದುಕಿನ ಅಪರೂಪದ ಪ್ರಸಂಗಗಳು ಅಧ್ಯಾಯದಲ್ಲಿ ಮಾನವೀಯತೆಯ ಪ್ರತಿರೂಪ ಕಾಣುತ್ತೇವೆ. ಶಿಕ್ಷಕರು ಕಂಡ ಸಂಸ್...
"ಈ ಕಾದಂಬರಿ ದಕ್ಷಿಣ ಕನ್ನಡ ಅಥವಾ ಕರಾವಳಿಯ ದಟ್ಟ ಜೀವನಾನುಭವಗಳ ಮೂಲಕ ಮತ್ತು ಬದುಕಿನ ರೀತಿಗಳ ಮೂಲಕ ಓದುಗರನ್ನು ಸ...
©2023 Book Brahma Private Limited.