ಕಟ್ಟಿಗೆಯ ಆಟಿಕೆಗಳು ಲೋಹದ ಹಕ್ಕಿಯಾದ ಅಧ್ಯಾಯ

Date: 08-01-2021

Location: ಬೆಂಗಳೂರು


ಮೂಲತಃ ಉಡುಪಿ ಜಿಲ್ಲೆಯ ಮರವಂತೆಯವರಾದ ಯೋಗಿಂದ್ರ ಮರವಂತೆ ಇಂಗ್ಲೆಂಡ್‌ನ ಬ್ರಿಸ್ಟಲ್‌ ನಗರದಲ್ಲಿ ‘ಏರ್‌ ಬಸ್’ ವಿಮಾನ ಕಂಪನಿ’ಯಲ್ಲಿ ವಿಮಾನಶಾಸ್ತ್ರ ತಂತ್ರಜ್ಞರಾಗಿದ್ದಾರೆ. ವಿಮಾನಲೋಕದ ತಮ್ಮ ಅನುಭವಗಳನ್ನು, ವಿಸ್ಮಯಗಳನ್ನು ಸರಳವಾಗಿ ತಮ್ಮ ‘ಏರೋ ಪುರಾಣ’ ಅಂಕಣದಲ್ಲಿ ವಿವರಿಸಿದ್ದಾರೆ.

ಈ ಪುರಾತನ ಭೂಮಿಯ ಮೇಲಿನ ಅಸಂಖ್ಯ ಜೀವಿಗಳು, ಮತ್ತೆ ಆ ಜೀವಿಗಳ ಪ್ರೇರಣೆ ಪ್ರಭಾವದಲ್ಲಿ ರೂಪ ಆಕಾರ ಪಡೆದ ಅನೇಕ ಯಂತ್ರಗಳು ತಂತ್ರಗಳು, ಅದೊಂದು ಸುದೀರ್ಘ ಸಜೀವ ಪಟ್ಟಿ ಬಿಡಿ. ನಿತ್ಯವೂ ಬೆಳೆಯುತ್ತಲೇ ಇರುವಂತಹದ್ದು. ಆ ಪಟ್ಟಿಯಲ್ಲಿ ವಿಮಾನಗಳಂತೂ ತೀರಾ ತೀರಾ ಇತ್ತೀಚಿಗೆ ಸೇರಿಕೊಂಡವು. ಹೆದ್ದಾರಿ, ಬೀದಿ, ಹಳಿ, ನದಿ, ಸಮುದ್ರಗಳ ಹಂಗು ಇಲ್ಲದೇ ಆಕಾಶದಲ್ಲಿ ಸಾಗುವವು, ಎತ್ತರದಲ್ಲಿ ತೇಲುವವು, ಬೇಗ ಗುರಿ ಮುಟ್ಟುವವು ಎಂಬೆಲ್ಲ ಕಾರಣಗಳಿಗೆ ಅಚ್ಚರಿಯನ್ನೂ ಆಕರ್ಷಣೆಯನ್ನೂ ಆಹ್ವಾನಿಸುವ ವಿಮಾನಗಳ ಉಪಸ್ಥಿತಿ ಈ ಭೂಮಿ ಆಕಾಶಗಳಲ್ಲಿ ಬರೇ ಒಂದು ಶತಮಾನಕ್ಕಿಂತ ತುಸು ಹೆಚ್ಚಿನದು, ಅಷ್ಟೇ. ಇಲ್ಲಿ ಈಗಾಗಲೇ ಲಕ್ಷ ಕೋಟಿ ವರ್ಷಗಳಿಂದ ಅಸ್ತಿತ್ವದಲ್ಲಿರುವ ಹಕ್ಕಿಗಳು ಪ್ರಾಣಿಗಳಿಂದ ಬೆಳೆಯುವ, ಮಾಗುವ ಪಾಠ ಕಲಿಯಬೇಕಾಗಿರುವ ಎಳಸು ವಿಮಾನಗಳನ್ನು ಯಶಸ್ವಿಯಾಗಿ ಆಕಾಶದಲ್ಲಿಡಲು, ಸುರಕ್ಷಿತವಾಗಿ ಹಾರಿಸಿ ಇಳಿಸಲು ಸಾಧ್ಯ ಆದದ್ದು ಬೇರೆ ಬೇರೆ ಕಾಲ ಸಂದರ್ಭಗಳಲ್ಲಿ ಆದ ಅನ್ವೇಷಣೆ ಆವಿಷ್ಕಾರಗಳಿಂದ, ಅನಾದಿ ಕಾಲದಿಂದ ಓಡಾಡಿಕೊಂಡಿದ್ದ ಸೂತ್ರ ಸಿದ್ಧಾಂತಗಳಿಂದ. ಯಶಸ್ವಿ ಆಕಾಶಯಾನ ಹೀಗೆ ಶುರು ಆಯಿತು ಎಂದು ಗುರುತಿಸಲ್ಪಡುವ ಮೊದಮೊದಲ ಹಾರಾಟಗಳಿಂದ ಇಂದಿನ ತನಕದ ಕಾಲದಲ್ಲಿ ವಿಮಾನಗಳು ಸಹಜವಾಗಿಯೇ ಹಲವು ಪರಿವರ್ತನೆಗಳನ್ನು ಕಂಡಿವೆ. ಬದಲಾವಣೆ ಹಾಗೂ ಪರಿಷ್ಕರಣೆಗಳು ಅನಿವಾರ್ಯವೂ ನಿರಂತರವೂ ಆಗಿರುವ ವಿಮಾನಗಳ ಮಟ್ಟಿಗೆ ಹುಟ್ಟಿನ ಮೊಟ್ಟಮೊದಲ ದಿನದಿಂದ ಇಂದಿನ ಈಗಿನ ತನಕದ ಯಾನದ ಪುನರಾವಲೋಕನ ಮಾಡಿದರೆ ಆ ಕಾಲದೊಳಗೆ ಹುದುಗಿರುವ ಸುಮಾರು ಎರಡು ದಶಕಗಳಷ್ಟು ಉದ್ದದ ಒಂದು ವಿಶೇಷ ಅಧ್ಯಾಯ ಗಮನ ಸೆಳೆಯುತ್ತದೆ.

ಎರಡು ಮಹಾಯುದ್ಧಗಳ ನಡುವಿನ ಈ ವರುಷಗಳನ್ನು ವಿಮಾನಯಾನದ ಸುವರ್ಣಕಾಲ ಎಂದೂ ಕರೆದವರಿದ್ದಾರೆ . ಅದು ಆಗಷ್ಟೇ ವಿಮಾನಗಳ ಹಾರಾಟದಲ್ಲಿ ದೊರಕುತ್ತಿದ್ದ ಸಫಲತೆಯ ನಶೆಯಲ್ಲಿ ಅಮೆರಿಕ ಹಾಗೂ ಯೂರೋಪ್ ಗಳು ವಿಮಾನ ಮತ್ತದರ ಯಾನವನ್ನು ಹೆಚ್ಚು ಪರಿಪೂರ್ಣವೂ ಸುಲಭವೂ ಸುರಕ್ಷಿತವೂ, ಸಾಧ್ಯವಾದಷ್ಟು ಮಿತವ್ಯಯಿಯೂ ಮಾಡುವುದು ಹೇಗೆ ಎನ್ನುವ ಚಿಂತನೆ ಪ್ರಯತ್ನಗಳಲ್ಲಿ ಮುಳುಗಿದ್ದ ಘಟ್ಟ, ವಿಮಾನಗಳ `ರೇಸ್' ಒಂದು ಕ್ರೀಡೆಯಾಗಿ ಜನಪ್ರಿಯತೆಯನ್ನು ಪಡೆಯುತ್ತಿದ್ದ ಸಮಯ, ಮತ್ತೆ ಇವೆಲ್ಲವೂ ಸೇರಿ ವಿಮಾನಗಳ ಬಳಕೆ ಸಾಧ್ಯತೆಗಳನ್ನು ಹೆಚ್ಚಿಸುತ್ತ ರೂಪಾಂತರಕ್ಕೆ ತೆರೆದುಕೊಳ್ಳುತ್ತಿದ್ದ ಕಾಲ. ವಿಮಾನಗಳ ಸಾಮರ್ಥ್ಯವನ್ನು ವೃದ್ಧಿಸುವುದು, ಹಗುರಾಗಿಸುವುದು, ಹೆಚ್ಚು ಎತ್ತರದಲ್ಲಿ ತೇಲಿಸುವುದು ,ದೂರ ದೂರಕ್ಕೆ ಹಾರಿಸುವುದು, ವೇಗಾವಾಗಿ ಚಲಾಯಿಸುವುದರ ಬಗೆಗೆ ತೀವ್ರವಾಗಿ ಯೋಚಿಸಿ ಪ್ರವರ್ತಿಸಿದ ಸಮಯ. ಒಂದು ದೇಶ ಇನ್ನೊಂದು ದೇಶವನ್ನು ಹಿಂದಿಕ್ಕಲು, ಒಬ್ಬರಿನ್ನೊಬ್ಬರನ್ನು ಹಿಮ್ಮೆಟ್ಟಿಸಲು, ಮತ್ತೊಬ್ಬರ ಮಗದೊಬ್ಬರ ಮೇಲೆ ಮೇಲ್ಮೈ ಸಾಧಿಸಲು ಆಗಷ್ಟೇ ಬಳಕೆಗೆ ಬಂದಿದ್ದ ವಿಮಾನಗಳೆಂಬ ಕಟ್ಟಿಗೆಯ ಹಾರುವ ಆಟಿಕೆಗಳನ್ನೂ ಬಳಸಬಹುದು ಎಂದು ತಿಳಿಯುತ್ತಿದ್ದ ಕಾಲ. ಸುಮ್ಮನೆ ಖುಷಿಗಾಗಿ ಹಾರುವುದಕ್ಕೆ , ದೂರ ಪ್ರಯಾಣ ಮಾಡುವುದಕ್ಕೆ, ಸರಕುಗಳನ್ನು ಸಾಗಿಸುವುದಕ್ಕೆ , ವೇಗವಾಗಿ ಗುರಿ ತಲುಪುವುದಕ್ಕೆ ಆಮೇಲೆ ಯುದ್ಧಕ್ಕೆ, ಬೇರೆ ಬೇರೆ ವಿಧದ ವಿಮಾನಗಳನ್ನು ಪರಿಣಾಮಕಾರಿಯಾಗಿ ಬಳಸುವುದಕ್ಕೆ ತೊಡಗಿದ ಎರಡು ದಶಕಗಳು ಅವು. ಹಾಗಾಗಿಯೇ 1918ರಲ್ಲಿ ಮುಕ್ತಾಯ ಕಂಡ ಮೊದಲ ಮಹಾಯುದ್ಧ ಹಾಗು 1939ರಲ್ಲಿ ಶುರು ಆದ ಎರಡನೆಯ ಮಹಾಯುದ್ಧದ ಮಧ್ಯ ವಿಮಾನಯಾನ, ವೈಮಾನಿಕ ಜಗತ್ತು ದೈತ್ಯ ಹೆಜ್ಜೆಗಳನ್ನು ಇಡುತ್ತ ಹೊಸ ರೂಪವನ್ನು ಧರಿಸಿತು . ಮನುಷ್ಯರ ದಿನಚರಿಯನ್ನು ಸುಲಭಗೊಳಿಸುವ, ಮಹತ್ವಾಕಾಂಕ್ಷೆಯನ್ನು ತಣಿಸುವ ನಾಗರಿಕ ಯಾನದ ಸಾಧನವಾಗಿ ಕೆಲವೊಮ್ಮೆ ಹೆಮ್ಮೆ ಪಡುತ್ತ ಮತ್ತೆ ಕೆಲವೊಮ್ಮೆ ಸರಳ ಸುಂದರ ಬದುಕುಗಳನ್ನು ಸುಟ್ಟು ಧ್ವಂಸ ಮಾಡುವ ಶಕ್ತಿಸಂಚಯ ಮಾಡಿಕೊಳ್ಳುವ ಸೇನಾವಿಮಾನವಾಗಿ ತಲೆ ತಗ್ಗಿಸುತ್ತ ಅಪ್ರತಿಮ ಬೆಳವಣಿಗೆಯನ್ನು ಕಂಡಿತು.

ಈ ಕಾಲದಲ್ಲಿ ನಿಂತು ಗತಕಾಲದ ವಿಮಾನಗಳ ಗುರುತು ಮಾಡಿಕೊಳ್ಳಬೇಕಿದ್ದರೆ ಒಂದೋ ವೈಮಾನಿಕ ಸಂಗ್ರಹಾಲಯಗಳಿಗೆ ಭೇಟಿ ನೀಡಬೇಕು ಅಥವಾ ಹಾರಾಟದ ಇತಿಹಾಸದ ಪುಸ್ತಕಗಳನ್ನು ತೆರೆದು ಅವುಗಳೊಳಗಿನ ಕಪ್ಪುಬಿಳುಪು ಚಿತ್ರಗಳನ್ನು ನೋಡಬೇಕು. ಯುದ್ಧಗಳ ಜೊತೆಗೂ ವಿಮಾನಗಳ ಸಂಗಡವೂ ಗಾಢ ನಂಟನ್ನು ಹೊಂದಿದ ಬ್ರಿಟನ್ನಿನ ಊರೂರುಗಳಲ್ಲಿ ವಿಮಾನ ಹಾಗೂ ಹೆಲಿಕಾಪ್ಟರ್ಗಳ ಸಂಗ್ರಹಾಲಯಗಳು ಇವೆ , ನಗರಸಭೆಗಳು ನಡೆಸುವ ಪುಸ್ತಕಾಲಯಗಳಲ್ಲಿ ವಿಮಾನ ಚರಿತ್ರೆಯ ಭಾರದ ಪುಸ್ತಕಗಳಿಗೆ ಮೀಸಲಾದ ಅರೆ ಇದೆ. ತಮ್ಮ ದೇಶದಲ್ಲಿ ಜೀವ ಪಡೆದ ವಿಮಾನಗಳನ್ನು ಕೊಂಡಾಡುವ ಜನಸಾಮಾನ್ಯರು ಇಲ್ಲಿ ಎಲ್ಲೆಲ್ಲೂ ಸಿಗುತ್ತಾರೆ. ಕಟ್ಟಡಗಳು ಬೀದಿಗಳು ಅಂತಹ ಒಂದಾನೊಂದು ಕಾಲದ ವಿಮಾನಗಳ ಹೆಸರು ಹೊತ್ತು ಸ್ಮಾರಕವಾಗಿರುವ ದಾಖಲೆಗಳೂ ಇಲ್ಲಿ ಇವೆ . ಬೆರಳೆಣಿಕೆಯ ಪ್ರಯಾಣಿಕರನ್ನು ಕೂಡಿಸಿಕೊಂಡು ಸಣ್ಣ ತಿರುಗಾಟ ಮಾಡುವ ನಾಗರಿಕ ವಿಮಾನದ ಬಗೆಗೋ ಮಹಾಯುದ್ಧದಲ್ಲಿ ವಿರೋಧಿ ದೇಶದ ಮೇಲೆ ಬಾಂಬುಗಳನ್ನು ಸುರಿಸಿದ ಸೇನಾವಿಮಾನಗಳ ಕುರಿತೋ ಗಂಟೆಗಟ್ಟಲೆ ಮಾತನಾಡುವವರೂ ಇಲ್ಲಿದ್ದಾರೆ, ಯಾವುದೊ ಕಾಲದ ವಿಮಾನಗಳನ್ನು ತಮ್ಮ ಆತ್ಮೀಯ ಬಂಧುಗಳಂತೆ ಪರಿಚಯವನ್ನೂ ಮಾಡಿಸುತ್ತಾರೆ. ಪುರಾತನ ವಿಮಾನಗಳ ಜಾಡು ಹಿಡಿದು ಹೊರಟರೆ ಅವುಗಳ ಆಕಾರ ಗಾತ್ರ ದೇಹ ರೆಕ್ಕೆ ಬಾಲಗಳು ಈಗ ಹಾರಾಡಿಕೊಂಡಿರುವ ವಿಮಾನಗಳಿಗಿಂತ ಬಹಳ ಭಿನ್ನ ಎನ್ನುವುದು ತಿಳಿಯುತ್ತದೆ. ಅಂದಿನ ವಿಮಾನಗಳಲ್ಲಿ ಸಣ್ಣ ದೇಹ, ಒಂದರ ಮೇಲೊಂದರಂತೆ ಜೋಡಿಸಿದ ಎರಡು ಹಂತದ ರೆಕ್ಕೆಗಳು ,ಎಲ್ಲವೂ ಎಲ್ಲರ ಕಣ್ಣಿಗೆ ಕಾಣುವಂತಹ ತೆರೆದ ಜೋಡಣೆಗಳು,ಸುರಕ್ಷತೆಗೆಂದು ಹೆಲ್ಮೆಟ್ ಧರಿಸುತ್ತಿದ್ದ ಪೈಲಟ್ ಮತ್ತೆ ಕುಳಿತುಕೊಳ್ಳುವ ಜಾಗ ಯಾವುದೇ ಆವರಣ ಇಲ್ಲದೆ ಖುಲ್ಲಂ ಖುಲ್ಲಾ ಆಗಿರುವುದು ಗೊತ್ತಾಗುತ್ತದೆ. ಮತ್ತೆ ಆ ಕಾಲದಲ್ಲಿ ದೊಡ್ಡ ಸದ್ದಿನ ದಟ್ಟ ಹೊಗೆಯುಗುಳುವ ಎಂಜಿನ್ ಗಳಿದ್ದವು ,ನೆಲದ ಮೇಲೂ ಗಾಳಿಯಲ್ಲೂ ನಿಧಾನಗತಿಯ ಓಟ ಹಾರಾಟ ನಡೆಯುತ್ತಿತ್ತು ಎಂದೆಲ್ಲ ಪುಸ್ತಕಗಳೋ ಸಾಕ್ಷ್ಯಚಿತ್ರಗಳೋ ವಿವರಿಸುತ್ತವೆ.

ಅಂತಹ ವಿಮಾನ ಪ್ರಕಾರಕ್ಕೆ "ಬೈ ಪ್ಲೇನ್" (BiPlane) ಎನ್ನುವ ಹೆಸರು .ಅವುಗಳ ರಚನೆಯ ವಸ್ತುವಾಗಿ ಬಹಳ ಕಠಿಣವಲ್ಲದ ಆದರೆ ಸುಲಭದಲ್ಲಿ ಲಭ್ಯ ಇರುವ, ಕೆತ್ತಲು,ಕತ್ತರಿಸಲು ಜೋಡಿಸಲು ಒದಗುವ ಮರ , ಮರದ ಅಥವಾ ಕಟ್ಟಿಗೆಯ ದೇಹದ ಹಂದರದ ಮೇಲೆ ರೇಷ್ಮೆ ಅಲ್ಲದಿದ್ದರೆ ಇನ್ಯಾವುದೋ ಬಗೆಯ ಬಟ್ಟೆಯ ಹಾಸು , ಆಮೇಲೆ ಲೋಹದ ದಾರದ ಬಿಗಿಬಂಧನದಲ್ಲಿರುವ ಜೋಡಣೆಗಳು ಇರುತ್ತಿದ್ದುದು ತಿಳಿಯುತ್ತದೆ . ಗಾಳಿಯ ತೀವ್ರ ಒತ್ತಡವನ್ನು ತಾಳಿಕೊಳ್ಳಬಲ್ಲ ಎರಡು ಸ್ಥರಗಳ ರೆಕ್ಕೆಗಳ ಸಹಾಯದಿಂದ ಕಡಿಮೆ ನೂಕುವ ಶಕ್ತಿಯ ಸಾಮಾನ್ಯ ಎಂಜಿನ್ ಗಳಿದ್ದರೂ ನಿಧಾನ ಗತಿಯಲ್ಲಿ ಓಡಿ ಹಾರಿ ಅಗತ್ಯವಾದ ಏರುವಿಕೆಯನ್ನು (Lift ) ಪಡೆಯಬಲ್ಲ ಸಾಮರ್ಥ್ಯ ಅಂತಹ ವಿಮಾನಗಳಿಗಿತ್ತು . ಮರ ಹಾಗೂ ಬಟ್ಟೆಗಳನ್ನು ಅಗತ್ಯಕ್ಕೆ ಬೇಕಾದಂತೆ ಬಳಸಿಕೊಳ್ಳುವ ತಾಂತ್ರಿಕ ನೈಪುಣ್ಯ ಆ ಕಾಲದ ಜನರಿಗೆ ಕರಗತವಾಗಿದ್ದರಿಂದ ವಿಮಾನ ನಿರ್ಮಾಣದ ಪ್ರಮುಖ ವಸ್ತುಗಳಾಗಿ ಅವು ಸಹಜ ಆಯ್ಕೆಯಾಗಿದ್ದವು .

ಆದರೆ ಮೊದಲ ಮಹಾಯುದ್ಧದ ನಂತರದ ಕಾಲದಲ್ಲಿ ಪ್ರಚಲಿತವಾದ "ವಿಮಾನಗಳ ರೇಸ್ " ಜಗತ್ತಿನ ಬೇರೆ ಬೇರೆ ಭಾಗಗಲ್ಲಿ ಕ್ರೀಡೆಯ ರೂಪ ಪಡೆದದ್ದು ವಿಮಾನಗಳು ಹೆಚ್ಚು ವೇಗವಾಗಿ ಸಾಗುವುದರ ಬಗೆಗೆ ,ಇಂಧನ ಉಳಿತಾಯದ ಬಗೆಗೆ, ವಿಮಾನಗಳ ಬಾಳಿಕೆಯ ಬಗೆಗೆ ಯೋಚಿಸುವಂತೆ ಮಾಡಿತು, ಪರ್ಯಾಯ ವಸ್ತುಗಳನ್ನು ವಿಮಾನ ನಿರ್ಮಾಣದಲ್ಲಿ ಬಳಸುವ ಕುರಿತು ಪ್ರೇರೇಪಿಸಿತು .ಮೊದಲ ಮಹಾಯುದ್ಧದಲ್ಲಿ ಯುದ್ಧ ವಿಮಾನಗಳನ್ನು ಚಲಾಯಿಸಿದ ಅನುಭವಿ ಪೈಲಟ್ಗಳು ವಿಹಾರ,ಪರಿವೀಕ್ಷಣೆ,ಭದ್ರತೆ,ರೇಸ್ಗಳಿಗಾಗಿ ವಿಮಾನಗಳನ್ನು ಬಳಸಬಹುದೆಂದು ತೋರಿಸಿಕೊಟ್ಟರು. ಆಕಾಶದಲ್ಲಿ ಆಟಿಕೆಯಂತೆ ಹಾರಿ ಇಳಿಯುವ, ಅಕ್ಕ ಪಕ್ಕದ ವಿಮಾನಗಳ ಜೊತೆ ವೇಗವಾಗಿ ಸಾಗುವ, ಪಂದ್ಯದಲ್ಲಿ ಭಾಗಿಯಾಗುವ ಹೊಣೆ ಹೊತ್ತ ವಿಮಾನಗಳು "ಬಾನಿನ ಓಟ"ವನ್ನು ಗೆಲ್ಲಲು ತಮ್ಮ ವಿನ್ಯಾಸವನ್ನು ಬದಲಿಸಿಕೊಳ್ಳುವುದು ಅಗತ್ಯವಾಯಿತು. ವಿಮಾನವೇ ಒಂದು ಸಾಗಾಟದ ಪ್ರಯಾಣದ ಮಾಧ್ಯಮವಾಗಬಹುದು ಎಂದೂ ಕೆಲವು ಉದ್ಯಮಶೀಲರಿಗೆ ಕಾಣಲಾರಂಭಿಸಿತು. ಸಂದರ್ಭ ಹಾಗೂ ಪರಿಸ್ಥಿತಿಗಳ ಒತ್ತಡದಲ್ಲಿ " ಬೈ ಪ್ಲೇನ್" ಗಳು ನೇಪಥ್ಯಕ್ಕೆ ಸರಿದು "ಮೊನೊ ಪ್ಲೇನ್" ನಮೂನೆಗಳು ವಿನ್ಯಾಸಗೊಂಡವು ಪ್ರಯೋಗಕ್ಕೆ ಬಂದವು ."ಮೊನೊ ಪ್ಲೇನ್" ಎಂದರೆ ದೇಹದ ಎಡಬಲಕ್ಕೆ ಜೋಡಣೆ ಆಗಿರುವ ಒಂದೇ ಸ್ಥರದ ಉದ್ದ ರೆಕ್ಕೆಗಳಿರುವ ವಿಮಾನ. ಮರದ ಪಟ್ಟಿ ,ಹಲಗೆ, ಬಟ್ಟೆಯ ಹಾಸುಗಳನ್ನು ಬಳಸುತ್ತಿದ್ದ ಕಾರಣಕ್ಕೆ ಅಲ್ಪ ಆಯುಷಿಯಾಗಿದ್ದ "ಬೈ ಪ್ಲೇನ್"ಗಳು ದೀರ್ಘ ಬಾಳಿಕೆಯ ಲೋಹನಿರ್ಮಿತ "ಮೊನೊ ಪ್ಲೇನ್" ಗಳಿಗೆ ಎಡೆ ಮಾಡಿಕೊಟ್ಟವು . ಲೋಹದ ಪೆಡಸು ಹಂದರ, ಮತ್ತೆ ಆ ಹಂದರಕ್ಕೆ ಗಾಳಿಯ ಒತ್ತಡವನ್ನು ನಿಭಾಯಿಸಬಲ್ಲ ಸ್ವಲ್ಪ ಮೆದುವಾದ ಬಾಗಿಸಬಲ್ಲ ಗುಣಗಳನ್ನು ಹೊಂದಿದ ಲೋಹದ ತೆಳು ಹಾಳೆಗಳ ಮುಚ್ಚುಗೆಗಳನ್ನು ಬಳಸಲಾಯಿತು . ಎತ್ತರದಲ್ಲಿ ವೇಗವಾಗಿ ಹಾರುವ ವಿಮಾನಗಳು ಅನುಭವಿಸುವ ವಾಯುವಿನ ಒತ್ತಡವನ್ನು ನಿಭಾಯಿಸಲು ಲೋಹದ ಬಳಕೆ ಹೆಚ್ಚು ಸೂಕ್ತವೂ ಆಗಿತ್ತು. ವಿಮಾನಗಳಲ್ಲಿ ಇಂದಿಗೂ ವ್ಯಾಪಕ ಉಪಯೋಗ ಕಾಣುವ ಅಲ್ಯೂಮಿನಿಯಂ ಆಧಾರಿತ ಮಿಶ್ರಲೋಹಗಳ (Alloy) ಉಪಯೋಗ ಆರಂಭಗೊಂಡದ್ದೂ ಆ ಕಾಲದಲ್ಲೇ .

ಒಂದೇ ಸ್ಥರದ ರೆಕ್ಕೆಗಳು ಇರುವುದು , ರೆಕ್ಕೆಯ ಮೇಲಿನ ಸರಾಗ ಗಾಳಿಯ ಹರಿವಿಗೆ ಅನುಕೂಲವಾಗುವ ಆಕಾರವನ್ನು ಬಗ್ಗಿಸಿ ಬಾಗಿಸಿ ಎಳೆದು ತೀಡಿ ಲೋಹದ ರೆಕ್ಕೆಗೆ ನೀಡಲು ಸಾಧ್ಯ ಆಗುವುದು, ಚಲಿಸುವ ವಿಮಾನಕ್ಕೆ ಗಾಳಿ ಒಡ್ಡುವ ನಿರೋಧಕತೆಯನ್ನು ತಗ್ಗುವಂತೆ ಮಾಡಿತು , ಹಾಗಾಗಿ, ಕಟ್ಟಿಗೆಯ "ಬೈ ಪ್ಲೇನ್" ಮಾದರಿಗಳಿಗೆ ಹೋಲಿಸಿದರೆ ಕಡಿಮೆ ಇಂಧನ ಖರ್ಚಾಗುವಂತಾಗಿ ವಿಮಾನಗಳ ನಿರ್ವಹಣಾ ವೆಚ್ಚ ಕಡಿಮೆ ಆಯಿತು . ವಿಮಾನದ ಏರುವಿಕೆಗೆ ಸುಲಭವಾಗಬಲ್ಲ ಜೊತೆಗೆ ಯಾನಕ್ಕೆ ಸಮತೋಲನ ಸ್ಥಿರತೆ ಒದಗಿಸುವ ಸಾಮರ್ಥ್ಯ ಮರ ಹಾಗೂ ಬಟ್ಟೆಗಳಿಂದ ನಿರ್ಮಿತವಾದ "ಬೈ ಪ್ಲೇನ್" ಗಳಿಗೆ ಇದ್ದಿದ್ದರೂ ಲೋಹದ "ಮೊನೊ ಪ್ಲೇನ್" ಗಳು ವೇಗ ,ದೂರ ಸಂಚಾರ ಸಾಮರ್ಥ್ಯ, ಬಾಳಿಕೆ, ಕಡಿಮೆ ಇಂಧನ ವ್ಯಯಗಳ ಕಾರಣಕ್ಕೆ ಸ್ವೀಕಾರಾರ್ಹವೂ ಜನಪ್ರಿಯವೂ ಆದವು .ಹಾಗಂತ ಲೋಹದ ಬಳಕೆಯ ಕಾರಣಕ್ಕೇ ತುಕ್ಕು ಹಿಡಿಯುವಿಕೆ (corrosion), ಲೋಹದ ಸುಸ್ತು (metallic fatigue )ಗಳಂತಹ ಹೊಸ ಸವಾಲುಗಳು ಎದುರಾದರೂ, ಅಂತಹ ಸಮಸ್ಯೆಗಳ ಜೊತೆಗೆ ಬದುಕುವುದನ್ನು ವಿಮಾನಲೋಕ ಕಲಿತಿದೆ, ಆ ಸವಾಲು ಕಲಿಕೆಗಳ ಬಗ್ಗೆ ಮುಂದೆ ಬರೆಯುತ್ತೇನೆ .

ಹೀಗೆ ವಿಮಾನದ ಬಳಕೆ ಉದ್ದೇಶಗಳಿಗೆ ಹೊಂದಿಕೊಂಡು ವಸ್ತು ಹಾಗೂ ವಿನ್ಯಾಸಗಳ ಮಹತ್ವದ ಬದಲಾವಣೆಗಳು ಎರಡು ಮಹಾಯುದ್ಧಗಳ ನಡುವಿನ ಅವಧಿಯಲ್ಲಿ ಜರುಗಿದವು . ಅದೇ ಸಮಯದಲ್ಲಿ ಎಂಜಿನ್ ಗಳ ಶಕ್ತಿ ಸಾಮರ್ಥ್ಯಗಳಲ್ಲಿಯೂ ಪರಿವರ್ತನೆಗಳು ಆದವು. "ಜೆಟ್ ಎಂಜಿನ್" ಗಳ ವಿನ್ಯಾಸ ಪರೀಕ್ಷೆಗಳು ಮೊದಲೇ ಶುರು ಆಗಿದ್ದರೂ ಎರಡನೆಯ ಮಹಾಯುದ್ಧ ಆರಂಭವಾಗುವ ಹೊತ್ತ್ತಿಗೆ "ಜೆಟ್ ಎಂಜಿನ್" ನಾಗರಿಕ ವಿಮಾನಲೋಕದ ಭಾಗವೂ ಆಯಿತು . ಇಂದಿಗೂ , ದೂರ ಸಾಗಬಲ್ಲ ನಾಗರಿಕ ವಿಮಾನಗಳಲ್ಲಿ , ತೆವಳಿ ಉರುಳಿ ದಾಳಿ ಮಾಡಬಲ್ಲ ಯುದ್ಧ ವಿಮಾನಗಳಲ್ಲಿ ಜೆಟ್ ಎಂಜಿನ್ ಗಳ ಪಾತ್ರ ಮಹತ್ವದ್ದು. ವಿಮಾನಗಳ ರಚನೆಯ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾದ ಎಂಜಿನ್ ಗಳ ವಿಸ್ಮಯ ಲೋಕದ ಒಳಗೆ ಇನ್ನೊಂದು ಸಂದರ್ಭದಲ್ಲಿ ಸುತ್ತಾಡಿ ಬರಬಹುದು. ಸದ್ಯಕ್ಕೆ ವಿಮಾನದ ದೇಹ ರೆಕ್ಕೆಗಳ ಆಯಾ ಆಕಾರ ತಯಾರಿಕೆಯಲ್ಲಿ ಬಳಸುವ ವಸ್ತುವಿನ ಆಯ್ಕೆಗಳಲ್ಲಿ ಆದ ಬದಲಾವಣೆಗಳ ಜೊತೆಗೆ ಎಂಜಿನ್ ತಂತ್ರಜ್ಞಾನವೂ ಸೇರಿ ವಿಮಾನಯಾನದ ಸುವರ್ಣ ಕಾಲದಲ್ಲಿ ಹೊಸ ಹಕ್ಕಿಯನ್ನು ಹಾರಿಬಿಟ್ಟ ಅಧ್ಯಾಯವನ್ನು ಮುಗಿಸಬಹುದು . ಮತ್ತೆ ಕಟ್ಟಿಗೆ ತುಂಡುಗಳ ಜೋಡಣೆಯ ವಿಮಾನಗಳು ವೇಗ, ಇಂಧನ ಬಳಕೆ ,ಬಾಳಿಕೆ, ಸ್ಥಿರತೆ ,ಸುರಕ್ಷತೆಗಳ ನೆಪದಲ್ಲಿ ಮಾರ್ಪಾಟಾಗಿ ಲೋಹದ ಹಕ್ಕಿಯಾದುದನ್ನು ಸ್ವಾಗತಿಸಬಹುದು.

(ಚಿತ್ರಗಳು - ವಿವಿಧ ಅಂತರ್ಜಾಲ ಪುಟಗಳಿಂದ)

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...