ಕವಿತೆಗೆ ಹೊಸನುಡಿ: ಲೂಯಿಸ್ ಗ್ಲಿಕ್ ಕವಿತೆಗಳು


ಕಾವ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಅಮೆರಿಕಾದ ಕವಯತ್ರಿ ಲೂಯಿಸ್ ಗ್ಲಿಕ್ ಅವರ ಕವಿತೆಗಳನ್ನು ಕವಯತ್ರಿ ಜ.ನಾ. ತೇಜಶ್ರೀ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯ ಕುರಿತಾಗಿ ಹಿರಿಯ ಲೇಖಕ ಓ.ಎಲ್. ನಾಗಭೂಷಣಸ್ವಾಮಿ ಅವರು ಬರೆದ ಮುನ್ನುಡಿ ಇಲ್ಲಿದೆ.

ನಮ್ಮ ಕಾಲದ ಮುಖ್ಯ ಕವಿ ತೇಜಶ್ರೀ ಅವರ ಬರಹದ ಮೂಲಕ ಲೂಯಿಸ್ ಗ್ಲಿಕ್ ಬರೆದಿರುವ ಹದಿನೇಳು ಕವಿತೆಗಳು ಕನ್ನಡದ ರೂಪ ತಳೆದು ಇಲ್ಲಿ ಸಂಕಲನಗೊಂಡಿವೆ. ಈ ವರ್ಷದ ನೊಬೆಲ್ ಪ್ರಶಸ್ತಿ ಪಡೆದ ಗ್ಲಿಕ್ ಕವಿತೆ, ಕವಿತೆ ಬಗ್ಗೆ ಆಕೆಯ ನಿಲುವುಗಳನ್ನು ನೆನೆಯುತ್ತ ಕೆಲವು ಮಾತು ಹಂಚಿಕೊಳ್ಳುತ್ತಿದ್ದೇನೆ.

ಅಮೆರಿಕದ ಇನ್ನಿಬ್ಬರು ಪ್ರಸಿದ್ಧ ಕವಿಗಳಾದ ಎಮಿಲಿ ಡಿಕಿನ್ಸನ್, ಸಿಲ್ವಿಯಾ ಪ್ಲಾತ್ ರಿಗಿಂತ ತೀರ ಬೇರೆಯದೇ ಆದ ರಚನೆಯನ್ನು ಗ್ಲಿಕ್ ಕವಿತೆಯಲ್ಲಿ ಕಾಣುತ್ತೇವೆ. ಎಮಿಲಿ ಡಿಕಿನ್ಸನ್ ರಚನೆಗಳಲ್ಲಿ ಬೌದ್ಧಿಕತೆ ಸ್ವಲ್ಪ ಭಾರವಾಯಿತೇನೋ ಅನ್ನಿಸಬಹುದು, ಸಿಲ್ವಿಯಾ ಪ್ಲಾತ್ ರಚನೆಗಳಲ್ಲಿ ವೈಯಕ್ತಿಕ ಭಾವಲೋಕ, ಆತ್ಮನಿವೇದನೆಯ ಸಂಕಟ ಇವೇ ಹೆಚ್ಚು ಅನ್ನಿಸಬಹುದು. ಲೂಯಿಸ್ ಗ್ಲಿಕ್ ರಚನೆಯಲ್ಲಿ ಚಿಂತನೆ ಮತ್ತು ಭಾವನೆಗಳು ಅತಿಯಾಗದೆ ಗಮನವಿಟ್ಟು ಓದುವ ಮನಸನ್ನು ಆವರಿಸಿಕೊಳ್ಳುವ ಶಕ್ತಿ ಪಡೆದಿವೆ.

ಕೆಲವು ಗ್ಲಿಕ್ ಕವಿತೆ ಓದಿ, ಆಕೆ ಆಡಿರುವ ಕೆಲವು ಮಾತು ಗಮನಿಸಿ ಇಂಥದೊಂದು ಚಿತ್ರ ಮನಸಿನಲ್ಲಿ ಮೂಡಿತು. ಲೂಯಿಸ್ ಗ್ಲಿಕ್ ಆಪ್ತ ಕವಿ, ಆಪ್ತತೆಗೆ ಬಹಳ ಬೆಲೆ ಕೊಡುವ ಕವಿ. ‘ನಾನು ದಿನ ನಿತ್ಯದ ಬದುಕಿನ ಲಯವನ್ನು ಕಾಪಾಡಿಕೊಳ್ಳಲು ಬಯಸುವವಳು, ನನ್ನವರನ್ನು ಕಾಪಾಡಿಕೊಳ್ಳಲು ಬಯಸುವವಳು’, ಎಂಬ ಆಕೆಯ ಮಾತು ಗಮನ ಸೆಳೆಯಿತು. ಆರೇಳು ವರ್ಷದವಳಾಗಿದ್ದಾಗ ಗ್ಲಿಕ್ ಮನಸಿನೊಳಗೇ ಜಗತ್ತಿನ ಶ್ರೇಷ್ಠ ಕವಿತೆ ಯಾವುದು ಅನ್ನುವ ಸ್ಪರ್ಧೆ ನಡೆಸುತ್ತಿದ್ದಳಂತೆ. ಕೋಣೆಯಲ್ಲಿ ಒಬ್ಬಳೇ ಓಡಾಡುತ್ತ ಕವಿತೆಯನ್ನು ಹೇಳಿಕೊಳ್ಳುತ್ತ ಕೊನೆಗೆ ಬ್ಲೇಕ್ ಮತ್ತು ಫಾಸ್ಟರ್ ಅಂತಿಮ ಸುತ್ತಿಗೆ ಬಂದರು, ಬ್ಲೇಕ್ ಗೆದ್ದ ಅನ್ನುವ ಘಟನೆ ನೆನಪು ಮಾಡಿಕೊಳ್ಳುತ್ತಾಳೆ.

ಜೋನ್ ಆಫ್ ಆರ್ಕ್ ಥರ ದೇಶ ಕಾಪಾಡುವುದಾಗಲೀ, ಮೇರಿ ಕ್ಯೂರಿಯ ಹಾಗೆ ಸಂಶೋಧನೆ ಮಾಡಿ ಪ್ರಸಿದ್ಧಿ ಪಡೆಯುವುದಾಗಲೀ ನಮಗೆ ಸಾಧ್ಯವಿಲ್ಲ, ಏನಿದ್ದರೂ ಜಗತ್ತಿನ ಶ್ರೇಷ್ಠ ಕವಿತೆ ಬರೆಯಬೇಕು ಎಂದು ನಾನು, ನನ್ನ ಅಕ್ಕ ಅಂದುಕೊಳ್ಳುತ್ತಿದ್ದೆವು ಅನ್ನುತ್ತಾಳೆ ಗ್ಲಿಕ್. ನನ್ನನ್ನು ಕವಿತೆಯೊಳಗೆ ಆಡಲು ಬಿಡುವ, ಕವಿತೆಯಲ್ಲಿ ಮುಖ್ಯವಾದ ಪಾತ್ರವಹಿಸಲು ಅವಕಾಶ ಮಾಡಿಕೊಡುವ, ಗುಟ್ಟು ಹೇಳುವ, ಕಳ್ಳಾಟವಾಡುವ ಕವಿಗಳು ಇಷ್ಟವಾಗುತ್ತಿದ್ದರು. ನಾನು ಓದುತ್ತಿರುವ ಕವಿತೆ ನನಗಾಗಿಯೇ ನುಡಿದ ಮಾತು, ನನಗಾಗಿಯೇ ಇರುವ ಕವಿತೆ ಅನಿಸುವ ಭಾವ ಹುಟ್ಟಿ ನಾನು ಕವಿತೆಯ ‘ಆಯ್ಕೆಗೊಂಡ ಶ್ರೋತೃವಾಗಬೇಕು ಅನ್ನುವುದು ನನ್ನ ಆಸೆ’ ಅನ್ನುತ್ತಾಳೆ. ಗ್ಲಿಕ್ ತನಗೆ ಇಷ್ಟವಾಗುವ ಕವಿತೆಯ ಲಕ್ಷಣ ಹೇಳುತ್ತ ತನ್ನ ಕವಿತೆಯನ್ನು ಓದುಗರು ಹೇಗೆ ಗ್ರಹಿಸಬೇಕು ಅನ್ನುವುದನ್ನೂ ಹೇಳುತ್ತಿದ್ದಾಳೆ ಅನಿಸುತ್ತದೆ. ಗ್ಲಿಕ್, ಅಮೆರಿಕದ ರಾಷ್ಟ್ರಕವಿಯಾಗಿದ್ದರೂ ಕವಿಗೆ ‘ಸಾರ್ವಜನಿಕ ಮನ್ನಣೆ’, ಕವಿತೆಯ ಗುಣದ ಬಗ್ಗೆ ‘ಸಾಮೂಹಿಕ ತೀರ್ಮಾನ’ ಅಪಾಯಕಾರಿ ಯಾದದ್ದು…ಆಪ್ತ ಸಂವಾದದ ಅಭದ್ರತೆಯೇ ಕವಿತೆಯ ಮಹಾನ್ ಶಕ್ತಿ. ಕವಿಯ ಮಾತಿಗೆ ತುರ್ತನ್ನು, ಯಾಚನೆಗೆ ತೀವ್ರತೆಯನ್ನು ತಂದುಕೊಡುವುದು ಓದುಗನಿಗೆ ಇರುವ ಶಕ್ತಿ. ಇವೆರಡೂ ಕೂಡಿ ನನಗೆ ಪ್ರಿಯವಾದ ಕವಿಗಳಿಗೆ ನಾನು ಮಹಾ ಕವಿಗಳೆಂಬ ಖ್ಯಾತಿಯನ್ನು ನೀಡಿದರೆ ಅದು ಆಪ್ತತೆಯ ವಿಸ್ತರಣೆಯೇ ಹೊರತು ಉಲ್ಲಂಘನೆಯಲ್ಲ, ನನ್ನ ಮೆಚ್ಚಿನ ಕವಿಗಳು ಯಾರೂ ‘ಸ್ಟೇಡಿಯಂ ಕವಿಗಳಲ್ಲ,’ ಅನ್ನುತ್ತಾಳೆ. ‘ಖಚಿತತೆಯನ್ನು ಒರೆಸಿ ಹಾಕಿ, ಸಾಮಾನ್ಯೀಕರಣವನ್ನು ಸಂಭ್ರಮಿಸಿ, ಪ್ರಾಮಾಣಿಕ ಸತ್ಯಕ್ಕಿಂತ ಅರೆಬರೆ ನಿಜದ ಮಾತು ಮೆಚ್ಚಿ, ಭಾವದ ಉದ್ವಿಗ್ನ ಅನಾವರಣವನ್ನು ಗುಟ್ಟು ಬಯಲು ಮಾಡುವ ಕೆಲಸದ ಹಾಗೆ ತಿಳಿಯುವ ‘ಸಾರ್ವಜನಿಕ’ ದ ಬಗ್ಗೆ ವಿಶ್ವಾಸ ಇರದಂಥ ಮನೋಧರ್ಮ ಕವಿಗೆ ಬೇಕು,’ ಅನ್ನುವ ಗ್ಲಿಕ್‍ಳ ಮಾತು ಕನ್ನಡದ ಬಹಳಷ್ಟು ಯುವಕವಿಗಳು ಗಮನವಿಟ್ಟು ಕೇಳಬೇಕಾದಂಥವು. ಹಾಗೆಂದು ಕವಿಗೆ ಓದುಗರ ಅಪೇಕ್ಷೆ ಇಲ್ಲವೇ? ಖಂಡಿತ ಇರುತ್ತದೆ. ಅದು ದೇಶವಿಸ್ತಾರದ ಓದುಗ ಸಮುದಾಯದ ಅಪೇಕ್ಷೆಯಲ್ಲ, ಒಬ್ಬೊಬ್ಬರಾಗಿ ಬರುವ, ಬಂದು ಕವಿತೆಯೊಳಗೆ ಪಾಲ್ಗೊಳ್ಳುವ, ಹಾಗೆ ಕಾಲ ಕಾಲಕ್ಕೂ ಬರುತ್ತಲೇ ಇರುವ ಕಾಲವಿಸ್ತಾರದ ಓದುಗವರ್ಗದ ಆಸೆ ಕವಿಗೆ ಇರುತ್ತದೆ ಅನ್ನುತ್ತಾಳೆ. ಹಾಗಾಗಿ ಗ್ಲಿಕ್ ಆಪ್ತತೆಯ ಕವಿ ಎಂದು ಅನಿಸಿತು.

ಈ ಸಂಕಲನದಲ್ಲಿ ಸೇರಿರದ ಎರಡು ಕವಿತೆಗಳ ಪುಟ್ಟ ಭಾಗ ಹೀಗಿವೆ ನೋಡಿ:
ದೇಹದ ರೇಖಾ ಚಿತ್ರ ಬರೆಯಿತು ಹೆಣ್ಣು ಮಗು
ಕೈಲಾದಷ್ಟು ಬರೆಯಿತು. ಹೊರ ರೇಖೆಯ ಒಳಗಿದ್ದುದೆಲ್ಲ ಬಿಳಿಯ ಖಾಲಿ
ಗೊತ್ತಿರುವುದನ್ನೆಲ್ಲ ಅಲ್ಲಿ
ಆಸರೆ ಇರದ ಗೆರೆಗಳೊಳಗಿನ ಬಯಲೊಳಗೆ
ತುಂಬಿಡಲಾರಳು. ಗೊತ್ತು ಅವಳಿಗೆ
ಈ ಚಿತ್ರದಲ್ಲಿ ಜೀವವಿಲ್ಲವೆಂದು…

ಇದು ‘ಭಾವಚಿತ್ರ’ [ಪೋರ್ಟ್ರೇಟ್] ಎಂಬ ಹೆಸರಿನ ಕವಿತೆಯ ಕೆಲವು ಸಾಲು. ಹೆಣ್ಣುತನದ ಬಗ್ಗೆ ಏನೆಲ್ಲ ಯೋಚನೆಯ ಅಲೆಗಳನ್ನು ಎಬ್ಬಿಸುತ್ತದೆ! ‘ಮಾಗಿದ ಅಂಜೂರ’ [ರೈಪ್ ಪೀಚ್] ಹೆಸರಿನ ಬಲು ದೀರ್ಘ ಕವಿತೆಯಲ್ಲಿ ಹೆಣ್ಣಿನ ಮಧ್ಯವಯಸ್ಸನ್ನು ಲೂಯಿಸ್ ಗ್ಲೀಕ್ ಹೀಗೆ ಚಿತ್ರಿಸಿರುವುದು ಕಾಣುತ್ತದೆ:

ಸೆಣಬಿನ ಬುಟ್ಟಿಯಲ್ಲೊಂದು ಅಂಜೂರವಿತ್ತು.
ಪಕ್ಕದಲ್ಲಿ ಹಣ್ಣಿನ ಬೋಗುಣಿಯಿತ್ತು.
ಐವತ್ತು ವರ್ಷ
ಬೇಕಾಯಿತು ಬಾಗಿಲಿನಿಂದ ಟೇಬಲ್ಲಿಗೆ ಹೋಗುವುದಕ್ಕೆ

ಹೀಗೆ ರೂಪಕವೇ ಆತ್ಮವಾಗಿ ಬರೆದ ಕವಿಯನ್ನು ‘ವ್ಯಕ್ತಿಯ ಬದುಕಿನಲ್ಲೇ ವಿಶ್ವವನ್ನು ಕಾಣಿಸುವಂತೆ ಮಾಡಿದ ಕವಿ,’ ಆಡಂಬರದ ಅಲಂಕಾರವಿರದ ಚೆಲುವು ತುಂಬಿದ ರಚನೆಗಳನ್ನು ಮಾಡಿದ ಕವಿ ಎಂದು ನೊಬೆಲ್ ಪ್ರಶಸ್ತಿ ವಾಚನ ಕೊಂಡಾಡುತ್ತದೆ.

ಬಯಕೆ, ಹಸಿವು, ಆಘಾತ, ಬದುಕಿ ಉಳಿಯುವುದು, ವ್ಯಾಖ್ಯಾನ, ಆತ್ಮಕಥನ, ನಿಸರ್ಗ, ಆಧ್ಯಾತ್ಮಿಕ ಸಾಕ್ಷಿ ಇವು ಗ್ಲಿಕ್ ಕಾವ್ಯದ ಮುಖ್ಯ ಆಶಯಗಳೆಂದು ವಿಮರ್ಶಕರು ಗುರುತಿಸಿದ್ದಾರೆ. ಭಿನ್ನ ದೃಷ್ಟಿಕೋನಗಳ ಪರಿಶೀಲನೆ, ಇಂದ್ರಿಯಾನುಭವ ಮೂಡಿಸುವ ತತ್‍ಕ್ಷಣದ ಒತ್ತಡ, ಆಗುತ್ತಿರುವ ಅನುಭವದಿಂದ ಹಿಂಜರಿಯುವ ಆಸೆ, ತನ್ನತನವನ್ನು ಸ್ಥಾಪಿಸುವ ಬಯಕೆ, ಯಾವ ಭ್ರಮೆಯೂ ಇಲ್ಲದೆ ಸತ್ಯವನ್ನು ನೋಡುವ ಧೈರ್ಯ, ಇವೆಲ್ಲ ಗ್ಲಿಕ್ ಕಾವ್ಯಲೋಕದಲ್ಲಿವೆ. ಗ್ಲಿಕ್ ಮುಖ್ಯವಾಗಿ ಭಾವಗೀತೆಯ ಕವಿಯಾದರೂ ಆಕೆಯ ಒಟ್ಟು ರಚನೆಗಳಲ್ಲಿ ಬಗೆ ಬಗೆಯ ಲೇಖನ ಶೈಲಿಗಳು ನಮಗೆ ಎದುರಾಗುತ್ತವೆ. ಈ ಬಗೆಬಗೆಯ ಶೈಲಿಗಳಿಗೂ, ಗ್ಲಿಕ್ ಕವಿತೆಯ ವೈವಿಧ್ಯಮಯ ನಿರೂಪಕ ವ್ಯಕ್ತಿತ್ವಗಳಿಗೂ ಸಂಬಂಧ ಇರುವ ಹಾಗೆ ಕಾಣುತ್ತದೆ. ನಿವೇದನೆ, ಸಂಭಾಷಣೆ, ವರ್ಣನೆ, ರೂಪಕಾತ್ಮಕತೆ, ಇವುಗಳಿಗೂ ಆತ್ಮಕಥನದಿಂದ ಹಿಡಿದು ಮಹಾಕಾವ್ಯದ, ಪುರಾಣಗಳ ಪಾತ್ರಗಳ ಮಾದರಿಯ ಮೂಲಕ ಸ್ವಂತ ಬದುಕನ್ನು ನೋಡಿಕೊಳ್ಳುವ ನಿರೂಪಣೆಗಳವರೆಗೆ ಗ್ಲಿಕ್ ಕವಿತೆಗಳಲ್ಲಿ ನಿದರ್ಶನಗಳು ದೊರೆಯುತ್ತವೆ. ಲೂಯಿಸ್ ಗ್ಲಿಕ್‍ಳ ಯೆಹೂದಿ ಹಿನ್ನೆಲೆ, ಹದಿ ಹರೆಯದಲ್ಲಿ ಆಕೆ ಅನುಭವಿಸಿದ ಮಾನಸಿಕ ಅಸ್ವಸ್ಥತೆಗಳೂ, ಪರಿಣಾಮವೂ ಅವಳ ಬರವಣಿಗೆಯ ಮೇಲೆ ಆಗಿದೆ. ಆಕೆಯ ಕವಿತೆಗಳಲ್ಲಿ ಬರುವ ನಿರೂಪಕ ವ್ಯಕ್ತಿತ್ವಗಳೂ ಹಲವಾರು. ಇಂಥ ಕವಿತೆಯ ಅನುವಾದ ಬಲು ದೊಡ್ಡ ಸವಾಲು.

ಮುಖ್ಯ ಕವಿಯೊಬ್ಬರು ಇನ್ನೊಂದು ಭಾಷೆಯ ಮುಖ್ಯ ಕವಿಯನ್ನು ಅನುವಾದಿಸಿದಾಗ ಕವಿ-ಓದುಗರ ಮೇಲೆ ಆಗುವ ಪರಿಣಾಮಗಳು ಬೇರೆ ಬೇರೆಯೇ ಅಗಿರುತ್ತವೆ ಅನಿಸುತ್ತದೆ. ಅನ್ಯ ಭಾಷೆಯ ಕವಿಯ ನುಡಿಬದಲು ಮಾಡುವ ಕೆಲಸ ಅನುವಾದದಲ್ಲಿ ತೊಡಗುವ ಕವಿಯ ಸ್ವಂತ ಉಕ್ತಿ ವಿಧಾನದ ಮೇಲೆ ಸೂಕ್ಷ್ಮವಾದ ಪರಿಣಾಮ ಬೀರಿ ಹೊಸ ನುಡಿ ಬಗೆಯ ಸೃಷ್ಟಿಗೆ ಕಾರಣವಾಗಬಹುದು. ಅನುವಾದವನ್ನು ಗಮನವಿಟ್ಟು ಓದುವವರಿಗೆ ಅದುವರೆಗೆ ಪರಿಚಿತವಾಗಿರದ ನೋಟದ ಕೋನ, ಮಾತಿನ ಜೋಡಣೆಯ ವಿಧಾನ, ಕಾವ್ಯ ಭಾಷೆಯ ಹೊಸ ಸಾಧ್ಯತೆಗಳು ಹೊಳೆಯುತ್ತವೆ.

ನಾನು ಯಾವ ಕವಿತೆಯನ್ನು ಅನುವಾದ ಮಾಡಿದರೂ ನಾನಾಗಿದ್ದರೆ ಅದನ್ನು ಹೇಗೆ ಬರೆಯುತ್ತಿದ್ದೆನೋ ಹಾಗೇ ಅನುವಾದ ಮಾಡುತ್ತೇನೆ- ಎಂದು ರಾಮಚಂದ್ರಶರ್ಮರು ಒಮ್ಮೆ ಹೇಳಿದ್ದರು. ಅವರ ಅನುವಾದದಲ್ಲಿ ಎಲ್ಲ ದೇಶದ, ಎಲ್ಲ ಭಾಷೆಯ ಕವಿಗಳೂ ಶರ್ಮರ ಹಾಗೇ ಬರೆದಿದ್ದಾರೆ ಅನಿಸುತ್ತದೆ. ತೇಜಶ್ರೀ ಅನುವಾದದಲ್ಲಿ ಬೇರೆಯ ದಾರಿ ಹಿಡಿದಿದ್ದಾರೆ. ಅವರು ಮಾಡಿರುವ ಪಾಬ್ಲೊ ನೆರೂಡನ ಅನುವಾದಕ್ಕೂ, ಈ ಸಂಕಲನದಲ್ಲಿರುವ ಅನುವಾದಕ್ಕೂ ಎಷ್ಟು ವ್ಯತ್ಯಾಸವಿದೆ ಅನ್ನುವುದನ್ನ ಓದುಗರೇ ಗಮನಿಸಬಹುದು. ನಾವು ಬೇರೆ ಬೇರೆಯೇ ಕವಿಗಳನ್ನ ಓದುತ್ತಿದ್ದೇವೆ ಅನ್ನುವುದು ಅನುವಾದದಲ್ಲೂ ತಿಳಿಯುವ ಹಾಗಿದೆ. ತೇಜಶ್ರೀ ಅಷ್ಟರ ಮಟ್ಟಿಗೆ ತಮ್ಮ ಅನುವಾದ ಭಾಷೆಯನ್ನು ಹಟತೊಟ್ಟು ಬೇರೆಯಾಗಿಸಿಕೊಂಡಿದ್ದಾರೆ.

ಈ ಸಂಕಲನದಲ್ಲಿರುವ ಹದಿನೇಳು ಕವಿತೆಗಳು ಗ್ಲಿಕ್‍ಳ ಕಾವ್ಯ ವೈವಿಧ್ಯವನ್ನು ಸೂಚಿಸುತ್ತವೆ. ಇಲ್ಲಿನ ಮೊದಲ ಮತ್ತು ಕೊನೆಯ ರಚನೆಗಳಾದ ‘ಮೊದಲು ಹುಟ್ಟಿದ್ದು’ ಮತ್ತು ‘ಎರೆಹುಳು’ ಕವಿತೆಗಳು ಹುಟ್ಟು, ಸಾವು, ಮರುಹುಟ್ಟುಗಳನ್ನು ಸೂಚಿಸುತ್ತ ಈ ಸಂಕಲನಕ್ಕೆ ಚೌಕಟ್ಟು ಒದಗಿಸುವ ಹಾಗಿವೆ. ಹುಟ್ಟು ಸಾವುಗಳ ನಡುವೆ ‘ಮರುಳ ಕನಸು’ ಎಂಬ ಭ್ರಮಾಲೋಕ, ಹಣ್ಣಲ್ಲದಿದ್ದರೂ ಹಣ್ಣಿನ ವಾಸನೆ ಹೊತ್ತ ಹೂ ಪೊದೆ ‘ಮಾಕ್ ಆರೆಂಜ್‍’ನ ರೂಪಕದ ಮೂಲಕ ಮೈಗಳ ಕೂಟ ಹೆಣ್ಣಿಗೆ ತರುವ ಹತಾಶೆಯನ್ನು ನುಡಿಯುವ ಕವಿತೆ, ಸಂತೋಷವೇ ಅಪರಾಧವಾದೀತೆಂಬ ಅಂಜಿಕೆಯ ‘ನಿವೇದನೆ’, ತೀರಿಕೊಂಡ ಸೋದರಿಯ ನೆನಪಿನ ‘ಕಳೆದು ಹೋದ ಪ್ರೀತಿ’, ಮಾತು ಮತ್ತು ಅದನ್ನು ಲೋಕ ಗ್ರಹಿಸುವ ರೀತಿಯನ್ನು ಚಿತ್ರಿಸುವ ‘ಅಪನಂಬಿಕೆಯ ಮಾತುಗಾರ’, ತಂದೆಯ ಸಾವನ್ನು ಹಿಡಿದಿಡುವ ‘ಕನ್ನಡಿ ಬಿಂಬ’, ಜ್ಞಾತ ಮತ್ತು ಅಜ್ಞಾತದ ಜಿಜ್ಞಾಸೆ ಇರುವ ‘ನೀಲಿ ಕಾಡುಹೂ’, ಗ್ರೀಕ್ ಪುರಾಣದ ಪಾತ್ರಗಳ ಸ್ಮರಣೆಯಲ್ಲಿ ಬದುಕನ್ನು ನೋಡುವ ‘ಟೆಲೆಮ್ಯಾಕಸನ ನಿರ್ಲಿಪ್ತ ನಿಲುವು’, ‘ಸರ್ಸಿಯ ಶಕ್ತಿ’, ‘ಸರ್ಸಿಯ ದುಃಖ’, ಅಧೋಲೋಕದ ದ್ವಾರದ ಹೆಸರು ಹೊತ್ತ ‘ಅವೆರ್ನೊ’ ಸಂಕಲನದಲ್ಲಿರುವ ಋತು ವರ್ಣನೆಯ ಕವಿತೆ, ಗದ್ಯ-ಪದ್ಯ ಸಂಯೋಜನೆ ಇರುವ ‘ಹೊಸ ಬದುಕು’, ನ್ಯಾಯ ನೀತಿ ಕರುಣೆಗಳನ್ನು ಪರಿಶೀಲಿಸುವ ಸಾಮತಿಯಂಥ ‘ಮೃಗದ ದೃಷ್ಟಾಂತ’, ಗಂಡು ಮತ್ತು ಹೆಣ್ಣುಗಳ ಸಂಬಂಧವನ್ನು ಬೇರೆಯ ಬೆಳಕಿನಲ್ಲಿ ಹೊಳೆಯಿಸುವ ‘ಹಂಸಗಳ ದೃಷ್ಟಾಂತ ಕಥೆ’, ಇವೆಲ್ಲ ಇವೆ.

ಗ್ಲಿಕ್ ಕವಿತೆಗಳನ್ನು ಅಧ್ಯಯನ ಮಾಡಿರುವ ಡೇನಿಯಲ್ ಮಾರಿಸ್, ‘ಗ್ಲಿಕ್, ಬಿಡಿಬಿಡಿಯಾಗಿ ಓದುವುದಕ್ಕಿಂತ ಸಂಕಲನದ ಸಂದರ್ಭದಲ್ಲಿರಿಸಿ ಓದುವುದು ಒಳ್ಳೆಯದು, ಆಗ ಒಂದು ಸಂಕಲನದ ಕವಿತೆಗಳಲ್ಲಿ ಕಾಣುವ ಮುಕ್ತ ನುಡಿ, ಸಂಭಾಷಣೆ, ಹಲವು ಕವಿತೆಗಳು ಸೇರಿ ಏರ್ಪಡುವ ಕಥನದ ಆಯಾಮ ಇವೆಲ್ಲ ಮನಸನ್ನು ಮುಟ್ಟುತ್ತವೆ,’ ಎನ್ನುತ್ತಾನೆ. ಈ ಕಾರಣಕ್ಕೇ ತೇಜಶ್ರೀ ಒಂದೊಂದು ಸಂಕಲನದ ಎರಡು ಮೂರು ರಚನೆಗಳನ್ನು ಒಟ್ಟಿಗೆ ಜೋಡಿಸಿರುವಂತೆ ತೋರುತ್ತದೆ.

ಇಲ್ಲಿನ ಕೆಲವು ರಚನೆಗಳನ್ನು ಕನ್ನಡ ಓದುಗರು ಸುಲಭವಾಗಿ ಒಳಗೊಳ್ಳಬಹುದು. ಉದಾಹರಣೆಗೆ, ‘ಅಪನಂಬಿಕೆಯ ಮಾತುಗಾರ’ ಶಬ್ದ ಸೂತಕದ ಕಲ್ಪನೆಯನ್ನು ಮನಸಿಗೆ ತಂದೀತು; ಕವಿಗಳನ್ನು ಮತ್ತು ಸೂಕ್ಷ್ಮ ಓದುಗರನ್ನು ಕಾಡುವ ಹೇಳಲಾಗದ ಅನುಭವ ಮತ್ತು ಹೇಳಬೇಕಾದ ಒತ್ತಡದ ಪ್ರಶ್ನೆಯ ಇನ್ನೊಂದು ರೂಪವೆನಿಸೀತು, ತಂದೆಯ ಸಾವನ್ನು ಕುರಿತ ‘ಕನ್ನಡಿ ಬಿಂಬ’ ತೇಜಶ್ರೀಯವರದೇ ಕ್ಯಾಪ್ಟನ್ ಕವಿತೆಗಳು ಸಂಕಲನದ ರಚನೆಯಾಗಬಹುದು ಅನಿಸೀತು, ಇನ್ನು ಕೆಲವು ಪೂರಾ ಬೇರೆಯ ಸಂಸ್ಕೃತಿಯ ರೂಪಕಗಳನ್ನು ಬಳಸುವಂಥವು. ಉದಾಹರಣೆಗೆ ‘ಮಾಕ್ ಆರೆಂಜ್’ ಅಥವ ಹಣ್ಣಿನ ಪರಿಮಳವಿರುವ ಹೂವಿನ ರೂಪಕ, ಹೆಣ್ಣು ಗಂಡಿನ ಕೂಟದಲ್ಲಿ ಹೆಣ್ಣಿನ ಅನುಭವಕ್ಕೆ ಬರುವ ಹತಾಶೆಗೂ ತೋರಿಕೆಯ ಸಂತೋಷಕ್ಕೂ ಇರುವ ಸಾದೃಶ್ಯವನ್ನು ಬುದ್ಧಿಪೂರ್ವಕವಾಗಿ ಭಾವಿಸಬೇಕಾದೀತು. ‘ಅಕ್ಟೊಬರ್’’ ಕವಿತೆ ಹರಿಹರನು ಮಾಡುವ ಋತುವರ್ಣನೆಗಳಿಗಿಂತ, ಕನ್ನಡದ ಹಲವು ಕವಿಗಳು ಚಿತ್ರಿಸುವ ಋತುವರ್ಣನೆಯ ಚಿತ್ರಗಳಿಗಿಂತ ಎಷ್ಟು ಭಿನ್ನ ಅನ್ನಿಸೀತು. ಇನ್ನು ಗ್ರೀಕ್ ಪುರಾಣಗಳ ಪರಿಚಯವಿರದಿದ್ದರೆ ಕವಿ ಹೇಳಬಯಸಿರುವ ಸಂಗತಿ ಮನಸಿಗೆ ಇಳಿಯುವುದಕ್ಕೆ ಓದುಗರು ಸ್ವಲ್ಪ ಶ್ರಮ ಪಡಬೇಕು. ಪಶ್ಚಿಮದಲ್ಲೂ ಪುರಾಣದ ತಿಳಿವಳಿಕೆ ಇರುವ ಓದುಗರ ಸಂಖ್ಯೆ ಕಡಮೆ ಅನ್ನುತ್ತಾರೆ, ಅದು ಬೇರೆಯದೇ ವಿಷಯ. ಅನ್ಯ ಸಂಸ್ಕೃತಿಯ ಸಾಮುದಾಯಿಕ ಸ್ಮರಣೆಗಳನ್ನು ಹೊತ್ತ ಕವಿತೆಗಳ ಅನುವಾದ ಅಸಾಧ್ಯವೆನಿಸುವಷ್ಟು ಕಷ್ಟವಾಗುವುದು ಈ ಕಾರಣಕ್ಕೇನೇ. ನೆರೂಡನ ಅತ್ಯುತ್ತಮ ಕವಿತೆ ಎಂದು ವಿಮರ್ಶಕರು ಕೊಂಡಾಡುವ ಮಾಚುಪಿಚ್ಚು ಸರಣಿಯನ್ನು ಕನ್ನಡದಲ್ಲಿ ಗ್ರಹಿಸುವುದು ಸಾಮುದಾಯಕ ಸ್ಮೃತಿಗಳ ಅಭಾವದಿಂದಲೇ ಕಷ್ಟವಾಗುತ್ತದೆ.

ತೇಜಶ್ರೀಯವರ ಈ ಅನುವಾದ ಇಂಗ್ಲಿಷ್ ಭಾಷೆಯಲ್ಲಿ ಬರೆದಿರುವ ಗ್ಲಿಕ್ ಕವಿತೆಗಳನ್ನು ಸಾಧ್ಯವಾದ ಮಟ್ಟಿಗೂ ಅದೇ ಧಾಟಿ, ಅದೇ ನುಡಿಬಳಕೆಯನ್ನು ಅನುಸರಿಸುತ್ತ ಕನ್ನಡಿಸುವ ಪ್ರಯತ್ನವಾಗಿದೆ. ಕವಿತೆಗೆ ಹೊಸನುಡಿಯನ್ನು ಹುಡುಕುವಾಗ ಇಂಥ ಪ್ರಯತ್ನ ಅಗತ್ಯವೂ ಆಗುತ್ತದೆ. ಬಿಎಂಶ್ರೀಯವರು ‘ಇಂಗ್ಲಿಷ್ ಗೀತಗಳು’ ಅನುವಾದಿಸುವಾಗ ಬಗೆಬಗೆಯ ಕನ್ನಡ ಮಟ್ಟುಗಳನ್ನು, ಪರಿಷ್ಕೃತ ಛಂದೋರೂಪಗಳನ್ನು ಬಳಸಿದರಲ್ಲ ಹಾಗೆ ಇಂಥ ಪ್ರಯತ್ನ ಈಚಿನ ದಿನಗಳಲ್ಲಿ ಹೆಚ್. ಎಸ್. ರಾಘವೇಂದ್ರರಾವ್ ಅವರ ರಿಲ್ಕ್ ಕವಿತೆಗಳ ಅನುವಾದ ‘ಮಂಜಿನ ಶಿವಾಲಯಕ್ಕೆ’ ಸಂಕಲನದಲ್ಲೂ, ತೇಜಶ್ರೀ ಅವರ ಈ ಸಂಕಲನದಲ್ಲೂ ನಡೆದಿರುವಂತೆ ಅನಿಸುತ್ತದೆ. ಇಲ್ಲಿನ ಕೆಲವು ಕವಿತೆಗಳನ್ನು ಇನ್ನೂ ಬೇರೆ ಥರ ಹೇಳಬಹುದಿತ್ತು ಎಂದು ಓದುಗರಿಗೆ ಅನಿಸಬಹುದು. ಅದು ಅನುವಾದದ ಯಶಸ್ಸು. ಯಾಕೆಂದರೆ ಅನುವಾದ ಎಂದೂ ಅಪೂರ್ಣವೇ. ಓದುಗರ ಪಾಲ್ಗೊಳ್ಳುವಿಕೆ ಇರದೆ, ದುಂಬಿಯ ಮುಖಸ್ಪರ್ಶವಿರದ ಹೂವಿನ ಹಾಗೆ ಕವಿತೆಯೇ ಅಪೂರ್ಣವಾಗಿ ಉಳಿಯುತ್ತದೆ. ಹಾಗಿರುವಾಗ ಅಪೂರ್ಣತೆಯ ಭಾವವನ್ನು ಸೂಚಿಸಿ ಮತ್ತೊಂದು ನುಡಿಪ್ರಯೋಗಕ್ಕೆ ಪ್ರಚೋದಿಸುವ ಅನುವಾದವೂ ಯಶಸ್ವಿಯೇ ಸರಿ. ಕವಿತೆ ಬರೆಯುವುದು ಕೂಡ ಉಕ್ತಿ ರೂಪ ತಾಳಲು ಒಲ್ಲದ ಸಂಗತಿಯನ್ನು ಉಕ್ತಿಗೆ ಒಗ್ಗಿಸುವ ಹಾಗೆ ಒಗ್ಗಿಸಿ, ಅಪೂರ್ಣತೆಯ ಭಾವವನ್ನು ಅನುಭವಿಸುವ ಕೆಲಸ. ಅನುವಾದವೆನ್ನುವುದು ಮನಸ್ಸು ಗ್ರಹಿಸಿದ್ದನ್ನು ಇನ್ನೊಂದು ಭಾಷೆಯಲ್ಲಿ ಹೇಳಲು ಸಾಧ್ಯವಿರುವ ಹಲವು ಬಗೆಗಳಲ್ಲಿ ಒಂದನ್ನು ಮಾತ್ರ ಆಯ್ದುಕೊಂಡು ಅಪೂರ್ಣತೆಯ ಭಾವವನ್ನು ಇಮ್ಮಡಿಯಾಗಿ ಅನುಭವಿಸುವ ಸಂಕಟ. ಪರಿಪೂರ್ಣತೆ ಅನ್ನುವುದು ಕವಿತೆಗೆ ಹೇಗೋ ಅನುವಾದಕ್ಕೂ ಹಾಗೇ ಅಸಾಧ್ಯವೇ ಸರಿ.

ತೇಜಶ್ರೀ ಅನುವಾದದ ಓದು ಕನ್ನಡದ ಕವಿಗಳಿಗೂ ಓದುಗರಿಗೂ ಕಾವ್ಯಾನುಭವದ ಅಪೂರ್ಣತೆಯನ್ನು ತುಂಬಿಕೊಳ್ಳುವ ಉತ್ಸಾಹವನ್ನೂ ಸಂತೋಷವನ್ನೂ ತರಲಿ ಎಂದು ಹಾರೈಸುತ್ತೇನೆ.

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

'ಅವಳ ಹೆಜ್ಜೆ ಗುರುತು' ನನ್ನ ಪ್ರಾಮಾಣಿಕ ಪ್ರಯತ್ನವಷ್ಟೇ : ಸೌಮ್ಯ ಕಾಶಿ

19-04-2024 ಬೆಂಗಳೂರು

‘ಕತೆ ಹೀಗೆಯೇ ಇರಬೇಕು, ಹೀಗೇ ಬರೆಯಬೇಕು, ಹೀಗೆ ಬರೆದರೇ ಚಂದ ಎಂಬ ಲೆಕ್ಕಾಚಾರಗಳಿನ್ನೂ ನನ್ನ ತಲೆಗೆ ಹತ್ತಿಲ್ಲ. ಆ...