ಕವಿಯ ನೆನೆದು


ಅಗಲಿದ ಚೇತನ, ಹಿರಿಯ ಕವಿ ಡಾ.ಸಿದ್ಧಲಿಂಗಯ್ಯ ಅವರಿಗೆ ಹಿರಿಯ ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ ಅವರು ಸಲ್ಲಿಸಿದ ಕಾವ್ಯನಮನ. ‘ಕವಿಯ ನೆನೆದು’ ಕವಿತೆ ನಿಮ್ಮ ಓದಿಗಾಗಿ 

ಹೀಗೆ ಒಬ್ಬೊಬ್ಬರಾಗಿ ಸಾಲುಗಟ್ಟಿ ಹೋಗಿಬಿಟ್ಟರೆ 
ಯಾರಿಗೆ ದೂರಲಿ? ಏನೆಂದು ಹೇಳಲಿ? 
ಕಣ್ಣನೀರು ಬತ್ತಿಹೋಗಿವೆ ಕವಿಗಳೇ..

ಮೊನ್ನೆ ಚುಟುಕುದನಿ ಜರಗನಹಳ್ಳಿ
ನಿನ್ನೆ ಕಥೆಗಾರ ಯೋಗಪ್ಪನವರ್ 
ಅದಕ್ಕೂ ಮುನ್ನ ರಂಗ ಕರ್ಮಿ 

ಇಂದು ಬಂದಿದೆ ಸುದ್ದಿ ಕವಿಗಳು ಇನ್ನಿಲ್ಲ
ಕುಂತ ಕಡೆಯೇ ಸಂತೆಗದ್ದಲ ಸ್ತಬ್ದವಾಗಿದೆ
ಇಕ್ಕರ್ಲಾ ಒದೀರ್ಲಾ ಇವರ ಚಮ್ಡ ಎಬ್ಬುರ್ಲಾ
ಎಂದು ಅಬ್ಬರಿಸುತ್ತಾ ಹೊಟ್ಟೆಯ ಸಿಟ್ಟಿಗೆ ಗುಡುಗಿದೆ

ಸಪ್ಪಲಾಗಿದ್ದ ಮಾತಿಗೆ ಸಾವಿರದ ಶಕ್ತಿಕೊಟ್ಟೆ
ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು

ನೀನು ಬರೆದ ಅಕ್ಷರಕ್ಕ ಕೊರಳೆತ್ತಿದ ದನಿಗಳು
ದಸಂಸವೋ ಬಂಡಾಯವೋ ಹರಿಯ ಬಿಟ್ಟೆ

ಹಾದಿಯಲ್ಲಿ ಬೀದಿಯಲ್ಲಿ ಹಟ್ಟಿಯಲ್ಲಿ ಹಾಡಿಯಲ್ಲಿ 
ಗುಡುಗಿದವು ಬಡವರ ಗುಡಿಸಲುಗಳು
ಎದ್ದು ಬಂದರು ಅಲ್ಲೇ ಕುಂತವರು ಎಲ್ಲರೂ 

ನೀನು ಹೇಳಿದೆ ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ 
ಸುಳಿದಾಡಬೇಡವೆಂದು. ಮರದೊಳಗಣ ಮಂದಾಗ್ನಿ
ಬೇರು ಕಾಂಡ ಚಿಗುರು ಒಗರು ಹೂವಾಯಿತು
ಹಣ್ಣಾಯಿತು:ಮಾರುಕಟ್ಟೆಯಲ್ಲಿ ದಲ್ಲಾಳಿ ಪ್ರಭುತ್ವ

ಬೆಳೆದ ರೈತ ಫಸಲು ಮರೆತ 
ಹಂಗಿನರಗಿನ ಮನೆಗೆ ಹೊರಟ 
ಬಂಗದ ಕೂಳು ಕುಂಬಳಿಯವರ 
ನೆನಪಿನ ಕಣ್ಣು ಕಿವಿ ಬಾಯಿ ಕಳಕೊಂಡ

ಕವಿ ಸತ್ತು ಕಾಲವಾಯಿತು ಅಂದು ಕೊಂಡವರ 
ಮಾತನಣಕಿಸಿ ತೋರಿದೆ ಬಡವರ ನಗುವಿನ ಶಕ್ತಿ
ಊರೆಲ್ಲ ನಗುವಾಗ ಮೊಗುಮ್ಮಾಗಿ ನೋಡಿದೆ 
ಸಂತೆಯೊಳಗೆ ಬೆತ್ತಲಾದ ಅಕ್ಕನಾದೆ ಅರಿವಾದೆ

ದಕ್ಕಿಸಿಕೊಳ್ಳಲಾರದವರಿಗೆ ದಕ್ಕದ ಮುನಿಯಾದೆ
ಬಿಕ್ಕೆಯ ಮಾತನಾಡುತ್ತಲೇ ನೀರನಿರ್ವಾಣಿಯಾದೆ
ತಲೆಗೆ ಕಿರೀಟ ತೊಟ್ಟರೂ ಬೈರಾಗಿಯ ಬಟ್ಟೆ ನೆನೆದೆ 
ಎಡ ಬಲಗಳ ಗೋಂದಳಿಯಲಿ ಮೈಗೆ ಸವರಿದೆ ಎಣ್ಣೆ

ಬೈದವರ ಬಲಕ್ಕೆ ಬಂದೆ ಹೊಯ್ದವರ ಎಡಕ್ಕೆ ನಿಂದೆ
ಅವರು ಇವರು ಎವರಿಗೂ ಬೇಕೇ ಬೇಕಾದೆ 
ಇವ ನಮ್ಮವ ಎನ್ನುವವರ ಮನೆಯ ಮಗನಾದೆ
ಈಗ ಎಲ್ಲರನ್ನು ಸಂತೆಯಲ್ಲೇ ಬಿಟ್ಟು ದೂರ ಹೋದೆ 






 

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...