ಕಾವ್ಯ ರಚನೆಯು ಬಲವಂತದ ಕ್ರಿಯೆಯಲ್ಲ; ಸಹಜ ಪ್ರಕ್ರಿಯೆ: ಬೈರಮಂಗಲ ರಾಮೇಗೌಡ

Date: 01-08-2021

Location: ರಾಮನಗರ


ಕಾವ್ಯ ರಚನೆಯು ಬಲವಂತದ ಪ್ರಕ್ರಿಯೆಯಲ್ಲ; ಅದು ಸಹಜವಾಗಿ ಮೂಡುವಂತಹದ್ದು ಎಂದು ಸಾಹಿತಿ ಬೈರಮಂಗಲ ರಾಮೇಗೌಡ ಅವರು ಅಭಿಪ್ರಾಯಪಟ್ಟರು.

ನಗರದ ಎಂ.ಹೆಚ್.ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಭಾವನಾ ಪ್ರಕಾಶನವು ಭಾನುವಾರ ಆಯೋಜಿಸಿದ್ದ ಕವಿ ಪೂರ್ಣಚಂದ್ರ ಅವರ ‘ಚಂದ್ರೋದಯ’ ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಗೀತಗಾಯನ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕವಿಯಾದವನು ಮೊದಲು ಕಾವ್ಯ ರಚಿಸಲು ಸಿದ್ಧತೆ ಮಾಡಿಕೊಳ್ಯಬೇಕು. ಮೊದಮೊದಲ ಕವಿತೆಗಳು ಅರ್ಥ, ಶೈಲಿ ಹೀಗೆ ಯಾವುದೋ ದೃಷ್ಟಿಯಿಂದ ನಿರಾಶೆ ಮೂಡುತ್ತದೆ. ಆದರೂ, ಪ್ರಯತ್ನ ಬಿಡುವಂತಿಲ್ಲ. ಕಾವ್ಯವನ್ನು ಬಲವಂತವಾಗಿ ಬರೆಯುವ ಪ್ರಯತ್ನ ಮಾಡಬಾರದು. ಸಹಜವಾಗಿಯೇ ಮೂಡಿ ಬರಬೇಕು ಎಂದು ಹೇಳಿದರು.

ಕಾವ್ಯವನ್ನು ಪ್ರಕಟಿಸಲು ಕೆಚ್ಚೆದೆಬೇಕು. ಯಾವುದೇ ಪ್ರಕಾಶಕರು ಕಾವ್ಯವನ್ನು ಪ್ರಕಟಿಸಲು ಮುಂದೆ ಬರುವುದಿಲ್ಲ. ಓದುಗರು ಕೂಡ ಕಾವ್ಯವನ್ನು ಕೊಂಡು ಓದುವುದಿಲ್ಲ ಗದ್ಯ ಸಾಹಿತ್ಯವಾದರೇ ಓದುಗರಿಗೆ ಅನುಕೂಲ ಎಂದು ಭಾವಿಸುತ್ತಾರೆ. ಕಾವ್ಯಗಳಲ್ಲಿ ಚಿಕ್ಕದು ದೊಡ್ಡದು ಎನ್ನುವ ಭೇದವಿಲ್ಲ. ನಾಲ್ಕು- ಆರು ಸಾಲಿನ ಕಾವ್ಯಗಳು ಉತ್ತಮ ಕಾವ್ಯಗಳಾಗಿ ಮೂಡಿ ಬಂದಿದೆ. ಹನಿಗವಿತೆಗಳ ದಿಗ್ಗಜರಾದ ದಿನಕರ ದೇಸಾಯಿ ಅವರು ಚುಟುಕುಗಳನ್ನು ರಚಿಸಿದ್ದಾರೆ. ಅದೇ ಸಾಲಿನಲ್ಲಿ,ಕವಿ ಪೂರ್ಣಚಂದ್ರ ಅವರು ಚುಟುಕು ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ ಎಂದು ಪ್ರಶಂಸಿಸಿದರು.

ಸಾಧನೆಗೆ ಗುರು ದಾರಿಯೇ ಶ್ರೇಷ್ಠ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ಪುಸ್ತಕವನ್ನು ಲೋಕಾರ್ಪಣೆ ಮಾಡಿ ‘ ಗುರುವು ತೋರಿಸಿದ ಮಾರ್ಗದಲ್ಲಿ ಮುನ್ನೆಡೆದಾಗ ಸಮಾಜದಲ್ಲಿ ಸಾಧನೆ ಸಾಧ್ಯ. ಪುಸ್ತಕ ಸಂಸ್ಕೃತಿ ಉಳಿಯಬೇಕಾದರೆ ಇಂದಿನ ಯುವಕರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು, ಪುಸ್ತಕಗಳಿಂದ ನಮ್ಮ ಬದುಕನ್ನು ರೂಪಿಸಿಕೊಳ್ಳಬಹುದು. ಯುವ ಸಮುದಾಯ ಸಮೂಹ ಮಾಧ್ಯಮಗಳಿಗೆ ಮಾರುಹೋಗದೇ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೆಚ್.ಚಂದ್ರಶೇಖರ್ ಸಮಾರಂಭ ಉದ್ಘಾಟಿಸಿ ‘ ಓದು ಮನುಷ್ಯನ ಮನಸ್ಸಿನಲ್ಲಿರುವ ಅಂಧಕಾರ, ಮೂಢನಂಬಿಕೆಗಳನ್ನುಕಿತ್ತೊಗೆಯುತ್ತದೆ. ವೈಚಾರಿಕವಾಗಿ ಇರುವಂತೆ ಮಾಡುತ್ತದೆ ಎಂದು ಹೇಳಿದರೆ, ಪುಸ್ತಕ ಕುರಿತು ಉಪನ್ಯಾಸಕ ಡಾ.ಶಿಪಿಲೆ ಸತೀಶ್ ಮಾತನಾಡಿ ಕವಿ ಪೂರ್ಣಚಂದ್ರ ಅವರು ರಚಿಸಿರುವ ಚಂದ್ರೋದಯ ಕವಿತೆಗಳು ಬದುಕಿನಲ್ಲಿ ಭರವಸೆ ಮೂಡಿಸುತ್ತವೆ. ಪ್ರಾಸಕ್ಕೆ ಹೆಚ್ಚು ಒತ್ತುಕೊಟ್ಟು ಹನಿಗವಿತೆಗಳನ್ನು ರಚಿಸಿದ್ದಾರೆ.ಸಮಾಜವನ್ನು ವಿಮರ್ಶಿಸುವ ಗುಣಗಳನ್ನು ಕವಿತೆಗಳಲ್ಲಿವೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ವಿಜಯ್ ಕುಮಾರ್,‍ ಎಸ್.ಸಿ, ಎಸ್.ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಾದೇವಸ್ವಾಮಿ, ಸಹಪ್ರಾಧ್ಯಾಪಕ ವಿ.ಹೆಚ್.ರಾಜಶೇಖರ್,‍ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಅಂಕನಹಳ್ಳಿ ಪಾರ್ಥ, ಕಾರ್ಯದರ್ಶಿ ಕೆ.ಸಿ ಕಾಂತಪ್ಪ ಹಾಗೂ ಕೂ.ಗಿ.ಗಿರಿಯಪ್ಪ ಉಪಸ್ಥಿತರಿದ್ದರು.

ಕವಿಗೋಷ್ಠಿಯಲ್ಲಿ ಕಾಕೋಳು ಶೈಲೇಶ್, ಶೈಲಾ ಶ್ರೀನಿವಾಸ್, ಕೂರಣಗೆರೆ ಕೃಷ್ಣಪ್ಪ, ತೋಟದಮನೆ ಗಿರೀಶ್, ತುಂಬೆನಹಳ್ಳಿ ಕಿರಣ್ ರಾಜ್, ಜಯರಾಮ್ ಹೊಸದುರ್ಗ, ವಿಜಯ್ ಕುಮಾರ್‍ ಹೆಬ್ಬೆರಳು, ನೇತ್ರಾವತಿ ಕವಿತೆಗಳನ್ನು ವಾಚಿಸಿದರು. ಬೇವೂರು ರಾಮಯ್ಯ, ವಿನಯ್ ಕುಮಾರ್,‍ಶ್ರೀಮತಿ ಲಕ್ಷ್ಮೀದೇವಿ, ಸಿದ್ಧರಾಜು ಗೀತಗಾಯನ ನಡೆಸಿಕೊಟ್ಟರು. ಕಲಾಜ್ಯೋತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಂಸಾಳೆನೃತ್ಯ, ಕು.ಭಾವನಾ ಅವರಿಂದ ಭರತನಾಟ್ಯ ಪ್ರದರ್ಶನ ನೆರವೇರಿಸಿದರು. ಕೃತಿಕಾರ ಪೂರ್ಣಚಂದ್ರ ಅವರು ವಂದಿಸಿದರು. ರಮೇಶ್ ಹೊಸದೊಡ್ಡಿ ನಿರೂಪಿಸಿದರು.

MORE NEWS

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...

ಸಾಧನೆಯ ಹಾದಿಯಲ್ಲಿ ಎಲ್ಲರೂ ಏಕಾಂಗಿ - ಬಿ. ಪುರಂದರ ಭಟ್

16-04-2024 ಬೆಂಗಳೂರು

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಸಾಹಿತ್ಯ ಬಳಗದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಅಂಬ...