ಕಾವ್ಯಸೌಂದರ್ಯ

Date: 31-01-2023

Location: ಬೆಂಗಳೂರು


“ಅಂಧಕನ ಕೈಯನ್ನು ಕಣ್ಣಿದ್ದವ ಹಿಡಿಯಬೇಕು, ಆದರೆ ಇಲ್ಲಿ ಅಂಧಕನ ಕೈಯನ್ನು ಅಂಧಕ ಹಿಡಿದಿದ್ದಾನೆ. ಮೂಗನಿಗೆ ಮಾತೇ ಬರುವುದಿಲ್ಲ ಇನ್ನು ಅವನು ಕಾವ್ಯವನ್ನೇನು ಹೇಳುತ್ತಾನೆ? ಎಂದು ನಮಗಾಶ್ಚರ್ಯವಾಗುತ್ತದೆ. ಆದರೆ ಮುಕ್ತಾಯಕ್ಕನಿಗೆ ಹಾಗೆನ್ನಿಸುವುದಿಲ್ಲ. ಅಂಧಕನ ಕೈ ಅಂಧಕ ಹಿಡಿಯುವುದು, ಮೂಗ ಕಾವ್ಯ ಹೇಳುವುದು ಮುಖ್ಯವೆನಿಸುತ್ತದೆ” ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ವಚನಕಾರ್ತಿಯರ ‘ಕಾವ್ಯಸೌಂದರ್ಯ’ದ ಕುರಿತು ತಿಳಿಸಿದ್ದಾರೆ.

ಕಾವ್ಯ ಸೌಂದರ್ಯ ಕೇವಲ ಕವಿತೆಗಳಲ್ಲಿಯೇ ಇರುತ್ತದೆಯೆಂದಲ್ಲ. ಪ್ರತಿಭಾನ್ವಿತರು ಬರೆದ ರಚನೆಗಳಲ್ಲಿ ಕಾವ್ಯದ ಅನನ್ಯತೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ವಚನ-ಕೀರ್ತನೆ- ತತ್ವಪದ ಇವು ಯಾವೂ ಹೊರತಾಗಿಲ್ಲ. ಅಕ್ಕಮಹಾದೇವಿಯ ವಚನಗಳಂತೂ ಆಧುನಿಕ ಸಂದರ್ಭದ ಭಾವಗೀತೆಗಳಂತೆ ಸುಂದರವಾಗಿವೆ. ರಚನೆ ಸುಂದರವಾಗಿ, ಅನನ್ಯವಾಗಿ ಕಾಣಲು ಹೇಳುವ ವಿಷಯದಷ್ಟೇ ಅಭಿವ್ಯಕ್ತಿ ಕ್ರಿಯೆಯೂ ಮುಖ್ಯವಾಗಿರಬೇಕಾಗುತ್ತದೆ. ಕಾವ್ಯದ ಅಭಿವ್ಯಕ್ತಿ ಭಾಷೆಯನ್ನವಲಂಬಿಸಿರುತ್ತದೆ. ಹೀಗಾಗಿ ಕವಿತೆಯಾಗಲಿ, ವಚನವಾಗಲಿ ಸುಂದರವಾಗಿ ಕಾಣಬೇಕಾದರೆ ಅದರಲ್ಲಿ ಬಳಸುವ ಭಾಷಾ ಚಮತ್ಕಾರ, ಪಡೆನುಡಿಗಳು, ಗಾದೆಮಾತುಗಳು, ಅಲಂಕಾರಗಳು ತುಂಬ ಮುಖ್ಯವಾಗಿರುತ್ತವೆ. ಕೆಲವು ಕವಿಗಳು, ವಚನಕಾರರು ಅಭಿವ್ಯಕ್ತಿಯ ಕಡೆ ಗಮನ ಕೊಡುವುದಿಲ್ಲ. ನೇರವಾಗಿ ವಿಷಯವನ್ನು ಪ್ರತಿಪಾದಿಸಿಬಿಡುತ್ತಾರೆ. ಆಗ ಅದು ವಾಚ್ಯವಾಗಿಬಿಡುತ್ತದೆ. ಆದರೆ ನಿಜವಾದ ಕಾವ್ಯ ಓದುಗನನ್ನು ಕಟ್ಟಿಹಾಕುತ್ತದೆ, ಒಳಗೆ ಇಳಿಯುತ್ತದೆ, ನಿನದಿಸುತ್ತದೆ, ಗುನುಗುಡುತ್ತದೆ, ಮನದಾಳದಲ್ಲಿ ಹಸಿರಾಗುತ್ತದೆ. ಇಂತಹ ತೀವ್ರವಾದ, ಆಶ್ಚರ್ಯಕರವಾದ, ಅನನ್ಯವಾದ ಪರಿಣಾಮ ನಿಜವಾದ ಕಾವ್ಯದಿಂದ ಮಾತ್ರ ಸಾಧ್ಯವಾಗುತ್ತದೆ. ಅಕ್ಕಮಹಾದೇವಿಯ ವಚನಗಳು ಅಂತಹ ಸುಂದರ ರಚನೆಗಳಾಗಿವೆ. ಆಕೆಯ ಅನೇಕ ವಚನಗಳಲ್ಲಿ ಕಾವ್ಯಸೌಂದರ್ಯದ ಅನುಭವವನ್ನು ಪಡೆಯಬಹುದಾಗಿದೆ.

"ಅಕ್ಕ ಕೇಳೌ, ನಾನೊಂದು ಕನಸ ಕಂಡೆ
ಅಕ್ಕಿ ಅಡಕೆ ಓಲೆ ತೆಂಗಿನಕಾಯಿ ಕಂಡೆ
ಚಿಕ್ಕಚಿಕ್ಕ ಜಡೆಗಳ ಸುಲಿಪಲ್ಲ
ಗೊರವನು
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ..."
- ಅಕ್ಕಮಹಾದೇವಿ (ಸ.ವ. ಸಂ.5, ವ-10)

ಈ ವಚನವೊಂದು ಅದ್ಭುತವಾದ ಭಾವಗೀತೆಯಾಗಿದೆ. ಆದರೆ ಅಕ್ಕ ಕಂಡ ಇಲ್ಲಿಯ ಕನಸು ಭಾವಗೀತೆಗೂ ಮೀರಿದ್ದಾಗಿದೆ. ಕನಸಿನಲ್ಲಿ ಬರುವಂತಹ ಅಕ್ಕಿ, ಅಡಕೆ, ಓಲೆ, ತೆಂಗಿನಕಾಯಿ ಇವೆಲ್ಲಾ ಶುಭದ ಸಂಕೇತಗಳಾಗಿವೆ. ಕನಸಿನ ಭವ್ಯತೆಗೆ ಇವು ಸಾಕ್ಷಿಯಾಗಿ ನಿಂತಿವೆ. ಈ ಕನಸು ಸಾಮಾನ್ಯರು ಕಾಣುವ ಕನಸಲ್ಲವೆಂದು ಪ್ರಾರಂಭದಲ್ಲಿಯೇ ಸ್ಪಷ್ಟವಾಗುತ್ತದೆ. ಈ ಕನಸಿನಲ್ಲಿ ಬಂದವನು ರಾಜಕುಮಾರನಲ್ಲ ಒಬ್ಬ ಗೊರವ. ಆ ಗೊರವ ಸಾಮಾನ್ಯ ಭಿಕ್ಷುಕನಲ್ಲ, ಸಾಕ್ಷಾತ್ ಶಿವ.

ಇಂತಹ ಕನಸು ಸಾಮಾನ್ಯರಿಗೆ ಬೀಳಲು ಸಾಧ್ಯವೇ ಇಲ್ಲ. ತಿರುಕ ಅರಸನಾಗುವ ಕನಸು ಬೀಳುತ್ತದೆ; ಬಡವನಿಗೆ ಸಂಪತ್ತು ದೊರೆತ ಕನಸು ಬೀಳುತ್ತದೆ ಅದೇ ರೀತಿ ಸುಂದರಿಗೆ ರಾಜಕುಮಾರನ ಕನಸು ಬೀಳುತ್ತದೆ, ಸುಂದರನಿಗೆ ರಾಜಕುಮಾರಿಯ ಕನಸು ಬೀಳುತ್ತದೆ. ಆದರೆ ಅಕ್ಕನಂತಹ ಕನಸು ಬೇರೆಯವರಿಗೆ ಬೀಳುವುದು ಬಹು ಅಪರೂಪ. ಇಂತಹ ಅಪರೂಪದ ಕನಸಿಗೆ ಇಲ್ಲಿ ಕಾವ್ಯದ ಚಿತ್ತಾರವಿದೆ. ಆ ಗೊರವನು ಹೇಗಿದ್ದನೆಂಬುದನ್ನು ಇಲ್ಲಿ ಅಕ್ಕ ಒಂದೇ ಸಾಲಿನಲ್ಲಿ ವಿವರಿಸುತ್ತಾಳೆ. ಚಿಕ್ಕಚಿಕ್ಕ ಜಡೆಯುಳ್ಳ, ಸುಲಿಪಲ್ಲ ಅಂದರೆ ಸುಂದರವಾದ ಹಲ್ಲುಗಳುಳ್ಳ ಚೆಲುವನಾಗಿದ್ದ ಹೀಗೆ ಈ ಚೆಲುವನ ದೃಶ್ಯ ಸಾಧ್ಯತೆಗಳನ್ನು ವಿಸ್ತರಿಸುತ್ತ ಹೋಗಬಹುದು. ಅಂತಹ ಸಾಧ್ಯತೆಗಳು ಈ ವಚನದಲ್ಲಿವೆ.

"ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು ದೇವಾಂಗವನುಟ್ಟೆನೆಲೆ ಪರುಷಬಾರಾ,
ಪುರುಷ ರತ್ನವೆ ಬಾರಾನಿನ್ನ ಬರವೆನ್ನ ಅಸುವಿನ ಬರವಾದುದೀಗ
ಬಾರಯ್ಯಾ ಚೆನ್ನಮಲ್ಲಿಕಾರ್ಜುನಯ್ಯ..."
- ಅಕ್ಕಮಹಾದೇವಿ (ಸ.ವ. ಸಂ.5, ವ-45)

"ಎಲ್ಲರ ಗಂಡರ ಶೃಂಗಾರದ ಪರಿಯಲ್ಲ ಎನ್ನ ನಲ್ಲನ ಶೃಂಗಾರದ ಪರಿಬೇರೆ
ಶಿರದಲ್ಲಿ ಕಂಕಣ, ಉರದ ಮೇಲಂದುಗೆ, ಕಿವಿಯಲ್ಲಿ ಹಾವುಗೆ ಉಭಯ ಸಿರಿವಂತನ ಮೊಳಕಾಲಲ್ಲಿ ಜಳವಟ್ಟಿಗೆ ಉಂಗುಟದಲ್ಲಿ ಮೂಕುತಿ - ಇದು ಜಾಣರ ಜಗುಳಿಕೆ ಚೆನ್ನಮಲ್ಲಿಕಾರ್ಜುನಯ್ಯನ ಶೃಂಗಾರದ ಪರಿ ಬೇರೆ!..."

- ಅಕ್ಕಮಹಾದೇವಿ (ಸ.ವ. ಸಂ.5, ವ-117)

ಅಕ್ಕನ ಈ ಎರಡು ವಚನಗಳಲ್ಲಿ ಸತಿ-ಪತಿಭಾವದ ಮಧುರ ಭಕ್ತಿಯೇ ಪ್ರಧಾನವಾಗಿದೆ. ಆದರೆ ಈ ವಚನಗಳ ಅಭಿವ್ಯಕ್ತಿಯಲ್ಲಿ ಕಾಣುವ ಕಾವ್ಯಸೌಂದರ್ಯ ಅದ್ಭುತವಾದುದಾಗಿದೆ. ಮೊದಲನೇ ವಚನದಲ್ಲಿ ಶೃಂಗಾರಭಾವ ಮಡುಗಟ್ಟಿದೆ. ನಲ್ಲನ ಆಗಮನಕ್ಕಾಗಿ ಪರಿತಪಿಸುವ ತೀವ್ರತೆ ಎದ್ದುಕಾಣುತ್ತದೆ. ಅರಿಸಿನವನ್ಹಚ್ಚಿಕೊಂಡು, ಹೊನ್ನಿನ ಆಭರಣಗಳನ್ನು ಧರಿಸಿಕೊಂಡು ಪೀತಾಂಬರವನ್ನುಟ್ಟುಕೊಂಡು ಶೃಂಗಾರಗೊಂಡ ನಲ್ಲೆ, ತನ್ನ ನಲ್ಲನಿಗಾಗಿ ಕಾಯುವ ಭಾವನೆ ಸೊಗಸಾಗಿ ಮೂಡಿಬಂದಿದೆ. `ಬಾರಾ' ಎಂಬ ಪದ ಪ್ರತಿಸಾಲಿನಲ್ಲಿಯೂ ಪುನರಾವರ್ತನೆಗೊಳ್ಳುತ್ತ ತೀವ್ರತರವಾದ ಪರಿಣಾಮವನ್ನುಂಟು ಮಾಡಿದೆ. ಈ ವಚನವೊಂದು ಸುಂದರವಾದ ಭಾವಗೀತೆಯಾಗಿದೆ.

ಎರಡನೇ ವಚನ, ನಲ್ಲನ ಶೃಂಗಾರದ ಪರಿಯನ್ನು ಹೇಳುತ್ತ, ಆತನ ಚೆಲುವಿಕೆಯನ್ನು ಪ್ರಕಟಿಸುತ್ತದೆ. ಅದುವರೆಗೆ ಪುರುಷ ಕವಿಗಳೇ ಇದ್ದರು. ಹೆಣ್ಣಿನ ವರ್ಣನೆಯನ್ನು ಮಾತ್ರ ನೋಡಿದ ಕಣ್ಣುಗಳಿಗೆ, ಅಕ್ಕಮಹಾದೇವಿ ವರ್ಣಿಸುವ ಈ ಗಂಡಿನ ವರ್ಣನೆ ತುಂಬ ಕುತೂಹಲಕಾರಿಯಾಗಿದೆ. ಕನ್ನಡಕಾವ್ಯ ಪರಂಪರೆಯಲ್ಲಿ ಮಹಿಳೆಯಿಂದ ಬಂದ ಪುರುಷನ ಈ ವರ್ಣನೆ, ಇದೇ ಪ್ರಥಮವಾಗಿದೆ. ಇಲ್ಲಿಯ ನಲ್ಲನ ಪರಿ ಉಳಿದ ನಲ್ಲರ ಹಾಗೆ ಅಲ್ಲವೆಂದು ಹೇಳುವುದರ ಮೂಲಕ, ಇದು ಲೌಕಿಕ ಗಂಡರಿಗಿಂತ ಭಿನ್ನವಾದದ್ದೆಂಬ ಅರ್ಥ ಮೊದಲ ಸಾಲಿನಲ್ಲಿಯೇ ಪ್ರಕಟವಾಗಿದೆ. ಅಲೌಕಿಕನಾಗಿರುವ ಆ ನಲ್ಲ ಮೂರ್ತರೂಪ ತೊಟ್ಟು ಕಣ್ಮುಂದೆ ಬಂದು ನಿಲ್ಲುತ್ತಾನೆ. ಶಿರದಲ್ಲಿ ಕಂಕಣ, ಉರದಮೇಲಂದುಗೆ, ಕಿವಿಯಲ್ಲಿ ಹಾವುಗೆ, ಮೊಳಕಾಲಲ್ಲಿ ಜಳವಟ್ಟಿಗೆ, ಉಂಗುಟದಲ್ಲಿ ಮೂಕುತಿ ಹೀಗೆ ಈ ಸುಂದರಾಂಗನ ವರ್ಣನೆ ಬೆಳೆಯುತ್ತ ಹೋಗುತ್ತದೆ. ಉಳಿದವರಿಗಿಂತ ಬೇರೆಯಾಗಿರುವ ಚೆನ್ನಮಲ್ಲಿಕಾರ್ಜುನನ ಶೃಂಗಾರದ ಪರಿ ಗಮನಿಸುವಂತಿದೆ.

"ಕುಂಜರನ ಮರಿಯ ಸರಪಳಿಯಲ್ಲಿ ಕಟ್ಟುವರಲ್ಲದೆ, ಹಂದಿಯ ಮರಿಯ ಸರಪಳಿಯಲ್ಲಿ ಕಟ್ಟುವರೆ ಅಯ್ಯಾ? ಸಿಂಹದ ಮರಿಯ ಕಂಡಡೆ ಸೋಜಿಗ ಬಡುವರಲ್ಲದೆ ಸಿಂಗಳೀಕನ ಮರಿಯ ಕಂಡಡೆ ಸೋಜಿಗಬಡುವರೆ ಅಯ್ಯಾ? ಕಸ್ತೂರಿಯ ಮೃಗವ ಕಂಡಡೆ ಆಶ್ಚರ್ಯಗೊಂಬರಲ್ಲದೆ ಕತ್ತೆಯ ಮರಿಯ ಕಂಡಡೆ ಕಣ್ಣಿನಲ್ಲಿ ನೋಡರು ನೋಡಾ!...
ಅಮುಗೇಶ್ವರನೆಂಬ ಲಿಂಗವನರಿಯದ ಆಜ್ಞಾನಿಗಳ ಕಂಡಡೆ ಕತ್ತೆಯ ಮರಿಯೆಂದು ಕಣ್ಣುಮುಚ್ಚಿಕೊಂಡಿಪ್ಪರು ನೋಡಾ!"

- ಅಮುಗೆ ರಾಯಮ್ಮ (ಸ.ವ. ಸಂ.5, ವ-635)

ಇಲ್ಲಿ ಬಳಸಿರುವ ಉಪಮಾಲಂಕಾರ ಅದ್ಭುತವಾಗಿದೆ. ಕಾವ್ಯಕ್ಕೆ ಅಲಂಕಾರ-ಪ್ರತಿಮೆ-ಸಂಕೇತಗಳು ಸೌಂದರ್ಯವನ್ನು ಹೆಚ್ಚಿಸುತ್ತವೆ. ಅಮುಗೆರಾಯಮ್ಮ ಇಲ್ಲಿ ಕೊಟ್ಟಿರುವ ಹೋಲಿಕೆಗಳು ವಾಸ್ತವವಾಗಿರುವುದರ ಜತೆಗೆ ತುಂಬ ಕುತೂಹಲಕಾರಿಯಾಗಿವೆ. ಆನೆಯಮರಿ-ಹಂದಿಯಮರಿ, ಸಿಂಹದಮರಿ-ಕರಿಮಂಗನ ಮರಿ, ಕಸ್ತೂರಿಯ ಮೃಗ

- ಕತ್ತೆಯ ಮರಿ ಇವುಗಳ ನಡುವೆ ಇಲ್ಲಿ ಹೋಲಿಕೆ ಮಾಡಲಾಗಿದೆ. ಆನೆ ಎಂದಾಕ್ಷಣ ಒಂದು ಬೃಹದಾಕಾರದ ಪ್ರಾಣಿ ಕಣ್ಣಿಗೆ ಕಾಣುತ್ತದೆ. ಅದನ್ನು ಸರಪಳಿಯಲ್ಲಿ ಕಟ್ಟಿರುತ್ತಾರೆ. ಆದರೆ ಹಂದಿಯ ಮರಿಯೂ ಇದೆ. ಅದು ಯಾರನ್ನೂ ಆಕರ್ಷಿಸುವುದಿಲ್ಲ. ಅದನ್ನು ಸರಪಳಿಯಲ್ಲಿ ಕಟ್ಟುವ ಅಗತ್ಯವೇ ಇಲ್ಲ. ಸಿಂಹದಮರಿಯನ್ನು ಕಂಡರೆ ಎಲ್ಲರಿಗೂ ಸೋಜಿಗ, ಆದರೆ ಕರಿಮಂಗನ ಮರಿಯನ್ನು ಯಾರೂ ಗಮನಿಸುವುದಿಲ್ಲ. ಕಸ್ತೂರಿಯ ಮೃಗ ನೋಡಲು ಆಶ್ಚರ್ಯವನ್ನುಂಟು ಮಾಡುತ್ತದೆ, ಆದರೆ ಕತ್ತೆಯ ಮರಿಯನ್ನು ಯಾರೂ ನೋಡುವುದಿಲ್ಲ. ಇಲ್ಲಿ ಯಾವ ಪ್ರಾಣಿಯೂ ಕೆಟ್ಟದ್ದಲ್ಲ, ಯಾವ ಪ್ರಾಣಿಯೂ ಒಳ್ಳೆಯದಲ್ಲ. ಪ್ರತಿಯೊಂದು ಪ್ರಾಣಿಗೂ ಅದರದೇ ಆದ ಗುಣವಿಶಿಷ್ಟತೆ ಇದೆ. ಈ ಎಲ್ಲ ಪ್ರಾಣಿಗಳ ಗುಣಸ್ವಭಾವನ್ನು ಅರಿತ ಅಮುಗೆ ರಾಯಮ್ಮ ಈ ಎಲ್ಲ ಹೋಲಿಕೆಗಳನ್ನುಲಿಂಗವರಿಯದ ಅಜ್ಞಾನಿಗೆ ಹೋಲಿಸಿದ್ದಾಳೆ. ಇಂತಹ ಅಜ್ಞಾನಿಗಳನ್ನು ಕಂಡರೆ ಕತ್ತೆಯ ಮರಿಯೆಂದು ಕಣ್ಣುಮುಚ್ಚಿಕೊಂಡಿಪ್ಪರೆಂದು ಹೇಳಿದ್ದಾಳೆ. ಒಂದರ ನಂತರ, ಮತ್ತೊಂದು ಬಂದು ಸೇರಿಕೊಳ್ಳುವ ಇಲ್ಲಿಯ ಹೋಲಿಕೆಗಳು ತುಂಬ ಸೊಗಸಾಗಿವೆ. ಅರ್ಥಪೂರ್ಣವಾಗಿವೆ.

"ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ:
ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು
ನಿಂದಬೊಂಬೆ ಮಹಾರುದ್ರ,
ರುದ್ರನ ಬೆಂಬಳಿಯವೆರಡು ಸೂತ್ರಕರ್ಣ.
ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ,
ಸುತ್ತಿತ್ತು ನೂಲು ಕದಿರು ತುಂಬಿತ್ತು.
- ಕದಿರ ರೆಮ್ಮವ್ವೆ (ಸ.ವ. ಸಂ.5, ವ-747)

ಈ ವಚನದಲ್ಲಿ ಕಾಣಿಸಿಕೊಂಡಿರುವ ಹೋಲಿಕೆಗಳು ಒಂದು ಪ್ರತಿಮೆಯ ಮೂಲಕ ಬೆಳೆದು ನಿಲ್ಲುತ್ತವೆ. ತಿರುಗುತ್ತಿರುವ ರಾಟೆ ಇಲ್ಲಿ ಬದುಕಿನ ಸಂಕೇತವಾಗಿದೆ. ಈ ರಾಟೆಗೆ ಕುಲಜಾತಿಗಳಿಲ್ಲವೆಂದು ಕದಿರ ರೆಮ್ಮವ್ವೆ ಮೊದಲೇ ಸ್ಪಷ್ಟಪಡಿಸಿದ್ದಾಳೆ. ರಾಟೆಯ ಪರಿಕರಗಳನ್ನು ಹೆಸರಿಸುತ್ತ, ಅವುಗಳನ್ನು ಪೌರಾಣಿಕ ದೇವರುಗಳಿಗೆ ಹೋಲಿಕೆ ಮಾಡುತ್ತ ಹೋಗುತ್ತಾಳೆ. ರಾಟೆಯ ಅಡಿಯಲ್ಲಿರುವ ಹಲಗೆ-ಬ್ರಹ್ಮ, ಅದರ ತೋರಣ-ವಿಷ್ಣು, ಅಲ್ಲಿರುವ

ಬೊಂಬೆ-ಮಹಾರುದ್ರ. ಹೀಗೆ ರಾಟೆಯ ಪರಿಕರಗಳು ಬ್ರಹ್ಮ-ವಿಷ್ಣು-ರುದ್ರರಾಗಿ ಕಾಣಿಸಿಕೊಳ್ಳುತ್ತಾರೆ. ಈ ಹೋಲಿಕೆಯಲ್ಲಿಯೇ ರೆಮ್ಮವ್ವೆಯ ಕಾವ್ಯದ ವಿಶಿಷ್ಟತೆಯಿದೆ. ಈ ರೀತಿಯ ಹೋಲಿಕೆಗಳು ಇತರ ಕವಿಗಳಲ್ಲಿ ಕಾಣಲಾರವು. ಆಧ್ಯಾತ್ಮ ಸೌಂದರ್ಯವೇ ಇಲ್ಲಿ ಕಾವ್ಯಸೌಂದರ್ಯವಾಗಿದೆ. ಅರಿವೆಂಬ-ಕದಿರು ಮತ್ತು ಭಕ್ತಿಯೆಂಬ-ಕೈ ಇವರಡೂ ಇಲ್ಲಿ ತುಂಬ ಮುಖ್ಯವಾಗುತ್ತವೆ. ಅರಿವೆಂಬ ಕದಿರನ್ನು, ಭಕ್ತಿಯೆಂಬ ಕೈಯಲ್ಲಿ ತಿರುವಿದಾಗ ನೂಲು ಸುತ್ತತ್ತದೆ, ಕದಿರು ತುಂಬುತ್ತದೆ. ತುಂಬ ಕುತೂಹಲಕಾರಿಯಾದ ವಿಶಿಷ್ಟ್ಯ ರೀತಿಯ ಹೋಲಿಕೆಗಳನ್ನಿಲ್ಲಿ ಕಾಣಬಹುದಾಗಿದೆ. ಒಂದು ವೃತ್ತಿಪ್ರತಿಮೆಯ ಮೂಲಕ ಎಷ್ಟೊಂದು ಸಂಗತಿಗಳು ಸೇರಿಕೊಂಡಿವೆಯೆಂದು ನೋಡಿದಾಗ ತುಂಬ ಆಶ್ಚರ್ಯವಾಗುತ್ತದೆ. ಪ್ರಕೃತಿಯ ಹೋಲಿಕೆಗಳ ಜತೆಗೆ ಆಧ್ಯಾತ್ಮದ ಹೋಲಿಕೆಗಳೂ ಸೇರಿಕೊಂಡು ಈ ವಚನಕಾರ್ತಿಯರನ್ನು ವಿಶಿಷ್ಟ ಕವಿಗಳನ್ನಾಗಿ ಮಾಡಿವೆ.

ಉಪಮೆ, ರೂಪಕದಂತಹ ಅನೇಕ ಅಲಂಕಾರಗಳನ್ನು ಶರಣೆಯರು ತಮ್ಮ ವಚನಗಳಲ್ಲಿ ಬಳಸಿದ್ದಾರೆ. ಅವುಗಳಲ್ಲಿ ಕೆಲವು ವಚನಗಳನ್ನಿಲ್ಲಿ ಗಮನಿಸಬಹುದಾಗಿದೆ.

"ಎಲೆಗಳೆದ ಮರದಲ್ಲಿ ನೆಳಲನರಸಲಿಲ್ಲ ಕಳೆಯರತ ದೀಪದಲ್ಲಿ ಬೆಳಗನರಸಲಿಲ್ಲ ಕುರುಹಳಿದ ಮೂರ್ತಿಯಲ್ಲಿ ರೂಪನರಸಲಿಲ್ಲ
ಶಬ್ಧವಡಗಿ ನಿಶ್ಯಬ್ಧನಾದ ಬಸವನಲ್ಲಿ ಶಬ್ದವನರಸಲಿಲ್ಲ.
ಸಂಗಯ್ಯನಲ್ಲಿ ಕಾಯವಿಲ್ಲದ ಕರುಣೆಯಾದೆ ನಾನು."
- ನೀಲಮ್ಮ (ಸ.ವ.ಸಂ.5, ವ-897)

``ಅಲರೊಳಡಗಿದ ಪರಿಮಳದಂತೆ
ಪತಂಗದೊಳಡಗಿದ ಅನಲನಂತೆ
ಶಶಿಯೊಳಡಗಿದ ಷೋಡಶಕಳೆಯಂತೆ,

ಉಲುಹಡಿಗಿದ ವಾಯುವಿನಂತೆ ಸಿಡಿಲೊಳಡಗಿದ ಗಾತ್ರದ ತೇಜದಂತೆ,
ಇರಬೇಕಯ್ಯಾ ಯೋಗ, ಎನ್ನ ಅಜಗಣ್ಣ ತಂದೆಯಂತೆ''
- ಮುಕ್ತಾಯಕ್ಕ (ಸ.ವ. ಸಂ.5, ವ-1100)

ಈ ಎರಡು ವಚನಗಳಲ್ಲಿ ಅಲಂಕಾರಗಳು ತುಂಬ ಪರಿಣಾಮಕಾರಿಯಾಗಿ ಬಳಕೆಯಾಗಿವೆ. ಮೊದಲನೇ ವಚನದಲ್ಲಿ ನೀಲಮ್ಮ ತನ್ನ ಪತಿಯ ಬಗೆಗೆ ಹೇಳುವಾಗ ಅನೇಕ ಹೋಲಿಕೆಗಳನ್ನು ಕೊಟ್ಟಿದ್ದಾಳೆ. ಎಲೆ ಉದುರಿದ ಮರದಲ್ಲಿ ನೆರಳನ್ನು ಕಾಣಲು ಸಾಧ್ಯವಿಲ್ಲ, ಕಳೆಗುಂದಿದ ದೀಪದಲ್ಲಿ ಬೆಳಕನ್ನು ನೋಡಲು ಸಾಧ್ಯವಿಲ್ಲ, ಗುರುತೇ ಸಿಗದ ಮೂರುತಿಯಲ್ಲಿ ರೂಪವನ್ನು ಕಂಡುಹಿಡಿಯುವುದು ಸಾಧ್ಯವಿಲ್ಲ. ಇವು ಮೂರು ಸಾಧ್ಯವಿಲ್ಲದ ಕ್ರಿಯೆಗಳಾಗಿವೆ. ಇಂತಹ ಹೋಲಿಕೆಗಳ ಮೂಲಕ ಬಸವಣ್ಣನ ವ್ಯಕ್ತಿತ್ವವನ್ನಿಲ್ಲಿ ನೀಲಮ್ಮ ಕಟ್ಟಿಕೊಟ್ಟಿದ್ದಾಳೆ. ಶಬ್ದವಡಗಿ ನಿಶ್ಯಬ್ದನಾದ ಬಸವನಲ್ಲಿ ಶಬ್ದವನರಸಲಿಲ್ಲ ಎಂಬ ಹೇಳಿಕೆಗೆ ಈ ಎಲ್ಲ ಹೋಲಿಕೆಗಳು ಸಮರ್ಥನೆಯನ್ನೊದಗಿಸುತ್ತವೆ. ಈ ಹೋಲಿಕೆಗಳು ಸಾಂದರ್ಭಿಕವಾಗಿವೆ. ಅರ್ಥಪೂರ್ಣವಾಗಿವೆ.

ಎರಡನೇ ವಚನದಲ್ಲಿ ಮುಕ್ತಾಯಕ್ಕ ತನ್ನ ಅಣ್ಣನ ಯೋಗ ಸಾಧನೆಯನ್ನು ಕುರಿತು ಮಾತನಾಡಿದ್ದಾಳೆ. ಆಕೆಯ ಅಣ್ಣ ಶಿವಯೋಗಿಯಾಗಿದ್ದ. ಅಜಗಣ್ಣನ ಯೋಗವನ್ನು ಕುರಿತು ಅನೇಕ ಶರಣರು ಉಲ್ಲೇಖಿಸಿದ್ದಾರೆ. ಅಂತಹ ಸಾಧಕನೊಬ್ಬನ ಯೋಗದ ಪರಿ ಎಂತಹದೆಂಬುದನ್ನು ಮುಕ್ತಾಯಕ್ಕ ಇಲ್ಲಿ ಉಪಮೆಗಳ ಮೂಲಕ ಬಿಡಿಸುತ್ತಾ ಹೋಗುತ್ತಾಳೆ. ಗಾಳಿಯಲ್ಲಿ ಪರಿಮಳವಿದೆ ಇದು ಸತ್ಯ. ಆದರೆ ಅದು ಕಣ್ಣಿಗೆ ಕಾಣುವುದಿಲ್ಲ. ಪತಂಗ ತನ್ನೊಡಲೊಳಗಿರುವ ಬೆಂಕಿಯಿಂದ ತಾನೇ ಸುಟ್ಟುಕೊಂಡು ಸಾಯುತ್ತದೆ. ಆದರೆ ಆ ಬೆಂಕಿ ಕಾಣಿಸುವುದಿಲ್ಲ. ಚಂದ್ರನಲ್ಲಿ ಹದಿನಾರು ಕಲೆಗಳಿವೆ. ಆದರೆ ಅವು ನಮಗೆ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಗಾಳಿಯಲ್ಲಿ ಧ್ವನಿಯಿದೆ, ಆದರೆ ಅದು ಗಟ್ಟಿಯಾಗಿ ನಮಗೆ ಕೇಳಿಸುವುದಿಲ್ಲ. ಸಿಡಿಲಿನಲ್ಲಿ ಬಹುದೊಡ್ಡ ಗಾತ್ರದ ಬೆಂಕಿಯಿದೆ ಆದರೆ ಅದು ನಮಗೆ ಕಾಣಿಸುವುದಿಲ್ಲ. ಶಶಿ, ವಾಯು, ಸಿಡಿಲು ಇವುಗಳಲ್ಲಿರುವ ಶಕ್ತಿ-ಸಾಧ್ಯತೆಗಳು ಹೊರನೋಟಕ್ಕೆ ಹೇಗೆ ಕಾಣುವುದಿಲ್ಲವೋ ಹಾಗೆ ಅಜಗಣ್ಣನ ಯೋಗ ಹೊರಗೆ ಕಾಣಿಸುವುದಿಲ್ಲ. ಒಂದು ವಸ್ತು ಅಥವಾ ಒಬ್ಬ ವ್ಯಕ್ತಿಯಲ್ಲಿರುವ ಶಕ್ತಿ ಸಾಧ್ಯತೆಗಳು ಹೊರಗೆ ಕಾಣಬೇಕೆಂದಿಲ್ಲ. ಹೊರಗೆ ಕಾಣದಿದ್ದರೂ ಅವು ಒಳಗಡೆ ಇರುತ್ತವೆ. ಈ ಒಳಗಿನ ಶಕ್ತಿ - ಸಾಧ್ಯತೆಗಳನ್ನು ಶೋಧಿಸುವುದು ಶರಣೆಯರ ಉದ್ದೇಶವಾಗಿತ್ತು. ಅದನ್ನು ಅಕ್ಕಮಹಾದೇವಿ, ಮುಕ್ತಾಯಕ್ಕ, ನೀಲಾಂಬಿಕೆಯಂತಹ ಶರಣೆಯರು ಈ ದಿಸೆಯಲ್ಲಿ ಪ್ರಯತ್ನಿಸಿದ್ದಾರೆ. ಅಜಗಣ್ಣ ಮುಕ್ತಾಯಕ್ಕನಿಗೆ ಅಣ್ಣನಾಗಿರುವಂತೆ, ತಂದೆಯಾಗಿ ಅವಳನ್ನು ಬೆಳೆಸಿದ್ದ. ಹೀಗಾಗಿ ಮುಕ್ತಾಯಕ್ಕನಿಗೆ ಅಣ್ಣನೇ ಸರ್ವಸ್ವನಾಗಿದ್ದ. ಆತನ ಶಕ್ತಿ-ಸಾಧ್ಯತೆಗಳು ಆಕೆಗೆ ಗೊತ್ತಿದ್ದವು. ಅವುಗಳನ್ನು ಇಂತಹ ಅಲಂಕಾರಗಳ ಮೂಲಕ ಆಕೆ ಸಮರ್ಥವಾಗಿ ಇಲ್ಲಿ ಕಟ್ಟಿಕೊಟ್ಟಿದ್ದಾಳೆ.

"ಕಾಲಿದ್ದಂತೆ ತಲೆ ನಡೆದುದುಂಟೆ ಅಯ್ಯಾ? ಕಣ್ಣಿದ್ದಂತೆ ಕರ್ಣ ನೋಡಿದುದುಂಟೆ ಅಯ್ಯಾ?
ಬಾಯಿದ್ದಂತೆ ನಾಸಿಕ ಉಂಡುದುಂಟೆ ಅಯ್ಯಾ? ತಾಯಿಲ್ಲದೆ ಮಕ್ಕಳು ಬಂದ ತೆರನ ಹೇಳಯ್ಯಾ?..."
- ಮೋಳಿಗೆ ಮಹಾದೇವಿ (ಸ.ವ. ಸಂ. 5, ವ-1159)

"ನೀರು ನೆಲನಿಲ್ಲದೆ ಇರಬಹುದೆ?
ಬೀಜ ನೆಲೆಯಿಲ್ಲದೆ ಹುಟ್ಟಬಹುದೆ? ಜ್ಞಾನ ಕ್ರಿಯೆಯಿಲ್ಲದೆ ಅರಿಯಬಹುದೆ?
ಚಿತ್ತ ಚಿತ್ತುವಿಲ್ಲದೆ ವಸ್ತುವ ಲಕ್ಷಿಸಿ ಗ್ರಹಿಸಬಲ್ಲುದೆ?..."
- ಮೋಳಿಗೆ ಮಹಾದೇವಿ (ಸ.ವ. ಸಂ. 5, ವ-1176)

ಮೋಳಿಗೆ ಮಹಾದೇವಿಯ ಈ ಎರಡು ವಚನಗಳಲ್ಲಿ ಅಲಂಕಾರಗಳ ಸರಮಾಲೆಯೇ ಇದೆ. ಈ ವಚನದಲ್ಲಿ ಎಲ್ಲ ಸಾಲುಗಳಲ್ಲಿಯೂ ಪ್ರಶ್ನೆಗಳೇ ಇವೆ. ಆದರೆ ಆ ಪ್ರಶ್ನೆಗಳೊಗಡೆಯೇ ಉತ್ತರಗಳಿವೆ. ಶರಣೆಯರಲ್ಲಿ ಎಷ್ಟೊಂದು ಅನುಭವವಿತ್ತು? ಆ ಅನುಭವವನ್ನವರು ಹೇಗೆ ಅನುಭಾವವನ್ನಾಗಿ ಮಾಡುತ್ತಿದ್ದರೆಂಬುದಕ್ಕೆ ಇಂತಹ ವಚನಗಳೇ ಸಾಕ್ಷಿಯಾಗಿವೆ.

ಮೊದಲನೇ ವಚನದಲ್ಲಿ ದೇಹದ ಅಂಗಾಂಗಳ ಹೋಲಿಕೆಗಳ ಮುಖಾಂತರ ವೈಜ್ಞಾನಿಕ ಸತ್ಯವನ್ನು ಮೋಳಿಗೆ ಮಹಾದೇವಿ ಹೇಳಿದ್ದಾಳೆ. ಕಾಲಿನ ಕೆಲಸ ನಡೆಯುವುದು, ಅದು ತಲೆಗೆ ಸಾಧ್ಯವಾಗುವುದಿಲ್ಲ. ಕಣ್ಣಿನ ಕೆಲಸ ನೋಡುವುದು ಅದು ಕಿವಿಗೆ ಸಾಧ್ಯವಾಗುವುದಿಲ್ಲ. ಇವೆಲ್ಲ ಸಂಗತಿಗಳು ಎಲ್ಲರಿಗೂ ತಿಳಿದವುಗಳೇ ಆಗಿವೆ. ಹೀಗೆ ಸಾಮಾನ್ಯರಿಗೆ ತಿಳಿದ ವಿಷಯಗಳ ಮೂಲಕವೇ ಶರಣೆಯರು ಹೊಸ ಸತ್ಯಸಾಧ್ಯತೆಗಳನ್ನು ಬಿಚ್ಚಿಟ್ಟಿದ್ದಾರೆ. ಶರಣ ಚಳವಳಿಗಿಂತಲೂ ಹಿಂದೆಯೇ ನಡೆದು ಹೋದ ರಾಮಾಯಣ-ಮಹಾಭಾರತ ಮಹಾಕಾವ್ಯಗಳಲ್ಲಿ ಅನೇಕ ಪವಾಡಕತೆಗಳಿವೆ. ಕಣ್ಣಲ್ಲಿ ಹುಟ್ಟಿದವರು, ಕಿವಿಯಲ್ಲಿ ಹುಟ್ಟಿದವರು ಅಲ್ಲಿದ್ದಾರೆ. ಹತ್ತು ತಲೆಯುಳ್ಳವರು, ಪಕ್ಷಿಯಂತೆ ಹಾರುವವರು ಅಲ್ಲಿದ್ದಾರೆ. ಈ ಎಲ್ಲವನ್ನೂ ತಿಳಿದುಕೊಂಡಿದ್ದ ಶರಣರು ಕಟ್ಟುಕತೆಗಳನ್ನು ಹೇಳದೆ ವೈಜ್ಞಾನಿಕವಾಗಿ, ವೈಚಾರಿಕವಾಗಿ ಮಾತನಾಡಿದ್ದಾರೆ.

"ತಾಯಿಯಿಲ್ಲದೆ ಮಕ್ಕಳು ಬಂದ ತೆರನ ಹೇಳಯ್ಯಾ?" ಎಂದು ಇಲ್ಲಿ ಮೋಳಿಗೆ ಮಹಾದೇವಿ ಪ್ರಶ್ನಿಸಿದ್ದಾಳೆ. ಅಂದರೆ ಜೀವಿ ಜನಿಸಬೇಕಾದರೆ ತಾಯಿಯ ಗರ್ಭ, ಬೇಕೆಬೇಕೆಂಬ ವೈದ್ಯಕೀಯ ಸತ್ಯವನ್ನು ತಿಳಿಸಿದ್ದಾಳೆ. ಹೀಗೆ ತಿಳಿಸುವಾಗ ಆಕೆ ನೀಡಿರುವ ಸಾದೃಶ್ಯಗಳು ತುಂಬ ಕಾವ್ಯಾತ್ಮಕವಾಗಿವೆ. ಎರಡನೇ ವಚನದಲ್ಲಿ ಜ್ಞಾನ-ಕ್ರಿಯೆಗಳ ಸಂಬಂಧವನ್ನು ಹೇಳಲು ಅನೇಕ ಹೋಲಿಕೆಗಳನ್ನು ಕೊಟ್ಟಿದ್ದಾಳೆ. ತುಂಬ ಸಂಕ್ಷಿಪ್ತವಾಗಿರುವ ವಚನಗಳ ಮೂಲಕವೇ ಶರಣೆಯರು ಮಹತ್ವದ ವಿಚಾರಗಳನ್ನು ಪ್ರತಿಪಾದಿಸಿದ್ದಾರೆ. ನೀರು ಇದೆ, ಅದು ಹೇಗಿದೆ? ನೆಲದ ಮೇಲಿದೆ. ಮುಗಿಲಿನಿಂದ ಬಿದ್ದ ನೀರಿಗೆ ನೆಲವೇ ಆಸರೆ. ನೆಲವಿಲ್ಲದೆ ನೀರು ಸಂಗ್ರಹವಾಗುವುದಿಲ್ಲ. ಇದು ವೈಜ್ಞಾನಿಕ ಸತ್ಯ. ಎಲ್ಲಾ ಭೂಗರ್ಭಶಾಸ್ತ್ರಜ್ಞರು ಇದನ್ನೇ ಹೇಳುತ್ತಾರೆ. ಬೀಜಕ್ಕೆ ಮರವಾಗುವ, ಹೂವಾಗುವ, ಹಣ್ಣಾಗುವ ಶಕ್ತಿಯಿದೆ. ಆದರೆ ಅದು ಭೂಮಿಯಿಂದ ಮಾತ್ರ ಸಾಧ್ಯವಾಗುತ್ತದೆ. ಭೂಮಿಯೇ ಇಲ್ಲದ ಮೇಲೆ ಬೀಜಕ್ಕೇನು ಬೆಲೆ. ಭೂಮಿಯಿದ್ದಾಗಲೇ ಬೀಜದ ಸಂಭ್ರಮ. ಮನಸ್ಸು ಸ್ವಾಸ್ಥ್ಯವಿದ್ದಾಗ ಮಾತ್ರ ವಸ್ತುಗಳನ್ನು ಗ್ರಹಿಸುತ್ತದೆ. ಹೀಗೆ ಒಂದಕ್ಕೊಂದು ಇವು ಪೂರಕವಾಗಿವೆ. ಒಂದಿಲ್ಲದೆ ಮತ್ತೊಂದರ ಅಸ್ತಿತ್ವವಿಲ್ಲ. ಒಂದು ಇನ್ನೊಂದರ ಮೇಲೆ ಅವಲಂಬಿತವಾಗಿವೆ. ಈ ಎಲ್ಲ ಹೋಲಿಕೆಗಳ ಮೂಲಕ ಮಹಾದೇವಿ ಇಲ್ಲಿ ಜ್ಞಾನ- ಕ್ರಿಯೆಯ ಸಮಾಗಮದ ಅಗತ್ಯವನ್ನು ಒತ್ತಿ ಹೇಳಿದ್ದಾಳೆ. ಜ್ಞಾನವಿದ್ದರೇನು ಉಪಯೋಗ, ಅದು ಕ್ರಿಯೆಯಲ್ಲಿ ಬಾರದಿದ್ದರೆ ಕೇವಲ ಪಾಂಡಿತ್ಯದ ಪ್ರದರ್ಶನವಾಗುತ್ತದೆ. ಕ್ರಿಯೆಯಲ್ಲಿ ಬಂದಾಗ ಜ್ಞಾನದ ಬೆಳಕು ಕಾಣಿಸಿಕೊಳ್ಳುತ್ತದೆ. ಅಲಂಕಾರ-ರೂಪಕಗಳ ಮೂಲಕ ತಮ್ಮ ಅಭಿವ್ಯಕ್ತಿಯನ್ನು ವಚನಕಾರ್ತಿಯರು ಸಮರ್ಥವಾಗಿ ಮಾಡಿದ್ದಾರೆ.

"ಜಲದ ಚಿತ್ತಾರದ ಕೊರಳಿನಲ್ಲಿ ದಾರವಿಲ್ಲದ ಮುತ್ತಿನ ಸರವು ನೋಡಾ! ಚಿತ್ತಾರವಳಿಯದೆ, ಮುತ್ತು ಉಳಿಯದೆ
ನಿಂದನಿಲವಿನ ಪರಿಯ ನೋಡಾ!
ಗಮನವಿಲ್ಲದ ಗಂಭೀರ, ಶಬುದವಿಲ್ಲದ ಸಾರಾಯ
ಸಮತೆಯಾಗಿ ನಿಂದ ಅಜಗಣ್ಣಂಗೆ ಇನ್ನಾರು ಸರಿ ಎಂಬೆನು?"
- ಮುಕ್ತಾಯಕ್ಕ (ಸ.ವ. ಸಂ. 5, ವ - 1113)

ಈ ವಚನದಲ್ಲಿ ಅದ್ಭುತವಾದ ಪ್ರತಿಮೆಯಿದೆ. ಈ ಪ್ರತಿಮೆ ತುಂಬಾ ಕಾವ್ಯಾತ್ಮಕವಾಗಿದೆ. ಇಲ್ಲಿಯ ಕಲ್ಪನೆ ಗಮನಿಸುವಂತಹದ್ದಾಗಿದೆ. "ಜಲದ ಚಿತ್ತಾರ" ಎಂಬ ಹೆಸರು ಕೇಳಿದಾಕ್ಷಣವೇ ರೋಮಾಂಚನವಾಗುತ್ತದೆ. ನೆಲದಲ್ಲಿ ಚಿತ್ತಾರ ಬರೆಯುವುದು, ಗೋಡೆಗೆ ಚಿತ್ತಾರ ಬರೆಯುವುದು ಸಹಜ. ಆದರೆ ಇಲ್ಲಿ ಜಲದ ಮೇಲೆ ಚಿತ್ತಾರವಿದೆ. ಆ ಚಿತ್ತಾರದ ಕೊರಳಿನಲ್ಲಿ ದಾರವಿಲ್ಲದ ಮುತ್ತಿನ ಹಾರವಿದೆ. ಜಲದ ಹನಿಗಳು ಸಾಲಾಗಿ ಕಾಣಿಸಿಕೊಂಡಾಗ ಅದು ಮುಕ್ತಾಯಕ್ಕನಿಗೆ ಮುತ್ತಿನ ಹಾರದಂತೆ ಕಾಣಿಸಿದೆ. ಜಲದಲ್ಲಿ ಚಿತ್ತಾರಗಳು ಗಾಳಿಯಂದ ಮೂಡುತ್ತಲೇ ಇರುತ್ತವೆ. ಆದರೆ ನೀರಿನ ಹನಿಗಳು ಬಹಳ ಹೊತ್ತು ನಿಲ್ಲುವುದಿಲ್ಲ. ಅಂತೆಯೇ ``ಮುತ್ತು ಉಳಿಯದೆ ನಿಂದ ನಿಲವಿನ ಪರಿಯ ನೋಡಾ'' ಎಂದು ಹೇಳಿದ್ದಾಳೆ. ಈ ನಿಲುವು ತುಂಬ ಕುತೂಹಲಕಾರಿಯಾಗಿದೆ. ಅದು ಗಮನವಿಲ್ಲದ ಗಂಭೀರದಂತೆ, ಶಬ್ದವಿಲ್ಲದ ತಿರುಳಿನಂತಿದೆ. ಅಂತಹ ಸಮತೆಯ ವ್ಯಕ್ತಿತ್ವ ಅಜಗಣ್ಣನದಾಗಿದೆಯೆಂದು ಹೇಳಲು ಜಲದ ಚಿತ್ತಾರದ ಪ್ರತಿಮೆ ಬೆಳೆದುನಿಂತಿದೆ. ಇಂತಹ ಅಜಗಣ್ಣಂಗೆ ಇನ್ನಾರು ಸರಿ ಎಂಬೆನು? ಎಂಬ ಮುಕ್ತಾಯಕ್ಕನ ಪ್ರಶ್ನೆಯಲ್ಲಿ ಅಜಗಣ್ಣ ಮಹಾಸಾಧಕನಾಗಿರಬೇಕೆಂಬುದು ಸ್ಪಷ್ಟವಾಗುತ್ತದೆ. ಮುಕ್ತಾಯಕ್ಕ ಮತ್ತು ಅಕ್ಕಮಹಾದೇವಿಯರ ವಚನಗಳಲ್ಲಿ ಅನೇಕ ಪ್ರತಿಮೆಗಳು ಬಳಕೆಯಾಗಿವೆ. ``ತೊರೆಯ ಕಟ್ಟೆಯ ಕಟ್ಟಿ ನಿಲ್ಲಿಸಲುಬಹುದೆ? ನೆರೆಮರುಳಿಗೆ ಬುದ್ಧಿಯ ಹೇಳಲುಬಹುದೆ? (ವ-1118)'' ಎಂಬ ಇನ್ನೊಂದು ವಚನದಲ್ಲಿರುವ ಹೋಲಿಕೆ, ಉಪಮೆ, ಉಪಮಾನ ತುಂಬ ಅರ್ಥಪೂರ್ಣವಾಗಿವೆ. ಮುಕ್ತಾಯಕ್ಕ ಅನುಭಾವಿಯಾಗಿರುವುದರ ಜತೆಗೆ ಮಹತ್ವದ ಕವಯತ್ರಿಯಾಗಿದ್ದಾಳೆ.

"ಅಂಧಕನ ಕೈಯ ಅಂಧಕ ಹಿಡಿದಂತಿರಬೇಕು ಮೂಗನ ಕೈಯಲ್ಲಿ ಕಾವ್ಯವ ಕೇಳಿದಂತಿರಬೇಕು ದರ್ಪಣದೊಳಗಣ ಪ್ರತಿಬಿಂಬದಂತೆ
ಹಿಡಿವರಿಗಳವಲ್ಲದಿರಬೇಕು ಅಣ್ಣಾ.
ಕೂರ್ಮನ ಶಿಶುವಿನ ಸ್ನೇಹದಂತೆ ಇರಲೊಲ್ಲದೆ ಆರೂಢಗೆಟ್ಟೆಯೋ (ಅಜಗಣ್ಣಾ)"
- ಮುಕ್ತಾಯಕ್ಕ (ಸ.ವ. ಸಂ.5, ವ-1097)

ಮುಕ್ತಾಯಕ್ಕನ ಈ ವಚನದಲ್ಲಿ ಧ್ವನಿ ತತ್ವವಿದೆ. ರಸ, ಧ್ವನಿ, ಅಲಂಕಾರ, ಪ್ರತಿಮೆ, ಸಂಕೇತಗಳಿಂದ ಕಾವ್ಯಕ್ಕೆ ಕಳೆಬರುತ್ತದೆ. ಶರಣೆಯರು ಉದ್ದೇಶಪೂರ್ವಕವಾಗಿ ಸಾಹಿತ್ಯರಚನೆ ಮಾಡದೆ, ವಚನಚಳವಳಿಯ ಬಯ್‍ಪ್ರಾಡಕ್ಟ್ ಆಗಿ ವಚನಗಳು ಹುಟ್ಟಿಕೊಂಡಿವೆ. ಹೀಗಾಗಿ ವಚನಗಳಲ್ಲಿ ಶರಣರ ಧಾರ್ಮಿಕ ಸಾಮಾಜಿಕ ಸಿದ್ಧಾಂತಗಳು ಅವರು ಪ್ರತಿಪಾದಿಸಿದ ಮೌಲ್ಯಗಳು ಎದ್ದುಕಾಣುತ್ತವೆ. ಆದರೆ ಮುಕ್ತಾಯಕ್ಕ ಅಕ್ಕಮಹಾದೇವಿಯಂತವರ ವಚನಗಳು ತುಂಬ ಕಾವ್ಯಾತ್ಮಕವಾಗಿವೆ ಮತ್ತು ಧ್ವನಿಪೂರ್ಣವಾಗಿವೆಯೆಂಬುದಕ್ಕೆ ಇಂತಹ ಅನೇಕ ವಚನಗಳು ಸಾಕ್ಷಿಯಾಗಿವೆ.

ಅಂಧಕನ ಕೈಯನ್ನು ಕಣ್ಣಿದ್ದವ ಹಿಡಿಯಬೇಕು, ಆದರೆ ಇಲ್ಲಿ ಅಂಧಕನ ಕೈಯನ್ನು ಅಂಧಕ ಹಿಡಿದಿದ್ದಾನೆ. ಮೂಗನಿಗೆ ಮಾತೇ ಬರುವುದಿಲ್ಲ ಇನ್ನು ಅವನು ಕಾವ್ಯವನ್ನೇನು ಹೇಳುತ್ತಾನೆ? ಎಂದು ನಮಗಾಶ್ಚರ್ಯವಾಗುತ್ತದೆ. ಆದರೆ ಮುಕ್ತಾಯಕ್ಕನಿಗೆ ಹಾಗೆನ್ನಿಸುವುದಿಲ್ಲ. ಅಂಧಕನ ಕೈ ಅಂಧಕ ಹಿಡಿಯುವುದು, ಮೂಗ ಕಾವ್ಯ ಹೇಳುವುದು ಮುಖ್ಯವೆನಿಸುತ್ತದೆ. ಅಂಧಕನ ಕೈಯ ಅಂಧಕ ಹಿಡಿದರೆ ದಾರಿಕಾಣುವುದಿಲ್ಲ, ಆದರೆ ಅದು ಸಾಧ್ಯವಾಗಬೇಕೆಂಬುದು ಆಕೆಯ ಬಯಕೆಯಾಗಿದೆ. ಅದೇರೀತಿ ಮೂಗ ಕಾವ್ಯ ಹೇಳುವುದು ಸಾಧ್ಯವಿಲ್ಲ. ಆದರೆ ಅದು ಆಗಬೇಕೆಂಬುದು ಆಕೆಯ ಇಚ್ಛೆ. ಅಂದರೆ ಪಂಚೇಂದ್ರಿಯಗಳ ಸಹಾಯವಿಲ್ಲದೆಯೇ ಸಾಧಕ ಬೆಳೆದುನಿಲ್ಲಬೇಕೆಂಬ ಧ್ವನಿತತ್ವ ಈ ವಚನದಲ್ಲಿದೆ. ಕೂರ್ಮನ ಶಿಶುವಿನ ಸ್ನೇಹ ಇಲ್ಲಿ ತುಂಬ ಆಕರ್ಷಣೆಯಾಗಿದೆ. ಆಮೆ ತುಂಬ ಸೂಕ್ಷ ್ಮ ಪ್ರಾಣಿ, ಅದರ ಶಿಶು ಇನ್ನೂ ಸೂಕ್ಷ್ಮ, ಅಂತಹ ಸೂಕ್ಷ್ಮ

``ಗಿರಿಯಲ್ಲಲ್ಲದೆ ಹುಲ್ಲು ಮೊರಡಿಯಲ್ಲಾಡುವುದೆ ನವಿಲು? ಕೊಳಕ್ಕಲ್ಲದೆ ಕಿರುವಳ್ಳಕ್ಕೆಳಸುವುದೆ ಹಂಸ?
ಮಾಮರ ತಳಿರಲ್ಲದೆ ಸ್ವರಗೈವುದೆ ಕೋಗಿಲೆ?
ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ? ಎನ್ನದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆ ಅನ್ಯಕ್ಕೆಳಸುವುದೆ ಎನ್ನಮನ? ಪೇಳಿರೆ ಕೆಳದಿಯರಿರಾ!''
- ಅಕ್ಕಮಹಾದೇವಿ (ಸ.ವ.ಸಂ.5, ವ-196)

``ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ ಶಿಲೆಯ ಮರೆಯ ಹೇಮದಂತೆ ತಿಲದ ಮರೆಯ ತೈಲದಂತೆ ಮರದ ಮರೆಯ ತೇಜದಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು''

- ಅಕ್ಕಮಹಾದೇವಿ (ಸ.ವ.ಸಂ.5, ವ-268)

ಈ ಎರಡು ವಚನಗಳಲ್ಲಿ ಅಕ್ಕಮಹಾದೇವಿ ಮಹತ್ವದ ಉಪಮೆಗಳನ್ನು ಬಳಸಿದ್ದಾಳೆ. ನವಿಲು, ಹಂಸೆ, ಕೋಗಿಲೆ ಮತ್ತು ಭ್ರಮರ ಇವುಗಳ ಮೂಲ ಗುಣಸ್ವಭಾವವನ್ನು ಹೇಳುತ್ತಲೇ ತನಗೂ-ಚೆನ್ನಮಲ್ಲಿಕಾಜುನನಿಗೂ ಇರುವ ಸಂಬಂಧವನ್ನು ಗಟ್ಟಿಕೊಳಿಸಿ ಕೊಳ್ಳುತ್ತಾಳೆ. ಏನೇ ಆದರೂ ನವಿಲು ಆಡುವುದು, ಗಿರಿಗುಡ್ಡಗಳಲ್ಲಿಯೇ ಹೊರತು ಹುಲ್ಲುಮೊರಡಿಯಲ್ಲಲ್ಲ, ಕೋಗಿಲೆ ಮಾವಿನಮರದ ತಳಿರಿನ ಮೇಲೆ ಕುಳಿತಾಗ ಸ್ವರಗಯ್ಯುತ್ತದೆಯೇ ಹೊರತು ಉಳಿದ ಮರಗಳ ಮೇಲೆ ಕುಳಿತಾಗ ಅಲ್ಲ, ಅದೇರೀತಿ ಭ್ರಮರವು ಪರಿಮಳವಿಲ್ಲದ ಹೂಗಳ ಕಡೆ ಸುಳಿಯುವುದಿಲ್ಲ. ಇವು ಪಕ್ಷಿಗಳಾದರೂ ಇವುಗಳಿಗೆ ಒಂದು ಬದ್ಧತೆ, ಕ್ರಮ ಇದೆ. ಅದೇರೀತಿ ತನ್ನ ಮನಸ್ಸು ಕೂಡ ಚೆನ್ನಮಲ್ಲಿಕಾರ್ಜುನನಿಗಲ್ಲದೆ ಅನ್ಯರ ಕಡೆ ಹೋಗುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾಳೆ.

ಇನ್ನೊಂದು ವಚನದಲ್ಲಿ ಚೆನ್ನಮಲ್ಲಿಕಾರ್ಜುನನ ನಿಲವನ್ನು ಅನೇಕ ಉಪಮೆಗಳ ಮೂಲಕ ವಿವರಿಸಿ ಹೇಳಿದ್ದಾಳೆ. ನಿಧಾನವೆಂಬುದು ನೆಲದ ಮರೆಯಲ್ಲಿರುತ್ತದೆ, ರುಚಿಯೆಂಬುದು ಫಲದ ಮರೆಯಲ್ಲಿರುತ್ತದೆ, ಬಂಗಾರವು ಶಿಲೆಯ ಮರೆಯಲ್ಲಿರುತ್ತದೆ. ಅದೇರೀತಿ ಎಣ್ಣೆಯು ಎಳ್ಳಿನ ಮರೆಯಲ್ಲಿರುತ್ತದೆ. ಹಾಗೆಯೇ ತೇಜ ಅಥವಾ ಬೆಂಕಿ ಮರದ ಮರೆಯಲ್ಲಿರುತ್ತದೆ. ಈ ಎಲ್ಲ ಉಪಮೆಗಳ ಮೂಲಕ ಚೆನ್ನಮಲ್ಲಿಕಾರ್ಜುನನ ನಿಲವೆಂತಹದೆಂಬುದನ್ನು ಸ್ಪಷ್ಟಪಡಿಸಿದ್ದಾಳೆ. ಆತನು ಭಾವದ ಮರೆಯಲ್ಲಿ ಬ್ರಹ್ಮನಂತಿ ರುವನೆಂದು ಬಣ್ಣಿಸುತ್ತಾಳೆ. ಹೀಗೆ ಉಪಮೆ-ಉಪಮಾನ, ವರ್ಣನೆ-ಬಣ್ಣನೆ ಶರಣೆಯರ ವಚನಗಳಲ್ಲಿ ಸೊಗಸಾಗಿ ಮೂಡಿಬಂದಿವೆ.

``ನೀರಬೊಂಬೆಗೆ ನಿರಾಳದ ಗೆಜ್ಜೆಯಕಟ್ಟಿ,
ಬಯಲಬೊಂಬೆಯ ಕೈಯಲ್ಲಿಕೊಟ್ಟು ಮುದ್ದಾಡಿಸುತ್ತಿರ್ದೆನಯ್ಯಾ ಕರ್ಪೂರದ ಪುತ್ಥಳಿಗೆ ಅಗ್ನಿಯ ಸಿಂಹಾಸನವನ್ನಿಕ್ಕಿ,
ಅಗ್ನಿ ಕರಗಿ ಕರ್ಪೂರ ಉಳಿದುದಕ್ಕೆ ಬೆರಗಾದೆನಯ್ಯಾ ಎನ್ನ ಅಜಗಣ್ಣನ ಯೋಗಕ್ಕೆ''

- ಮುಕ್ತಾಯಕ್ಕ (ಸ.ವ. ಸಂ.5, ವ-1121)

ಈ ವಚನದಲ್ಲಿ ಬಳಸಿರುವ ಸಾದೃಶ್ಯಗಳು ಗಮನ ಸೆಳೆಯುತ್ತವೆ. ನಿರಾಳವೆಂದರೆ ಶಾಂತವಾದ ಎಂಬರ್ಥವಿದೆ. ನೀರೇ ಇಲ್ಲಿ ಬೊಂಬೆಯಾಗಿದೆ. ಆ ಬೊಂಬೆಗೆ ಪ್ರಶಾಂತವಾದ ಗೆಜ್ಜೆಯ ಕಟ್ಟಲಾಗಿದೆ. ಅಂದರೆ ನೀರಬೊಂಬೆ ಕಾಣುವುದಿಲ್ಲ. ನಿರಾಳದ ಗೆಜ್ಜೆ ಗಿಲ್‍ಗಿಲ್ ಮಾಡುವುದಿಲ್ಲ. ಬಯಲಬೊಂಬೆಯನ್ನು ಕೊಟ್ಟು ಆ ನೀರಬೊಂಬೆಯನ್ನು ಮುದ್ದಾಡುವ ಸಾದೃಶ್ಯ ಬೆರಗುಗೊಳಿಸುತ್ತದೆ. ಕರ್ಪೂರದ ಪುತ್ಥಳಿಗೆ ಅಗ್ನಿ ಮೂಡಿಸಿದಾಗ ಕರ್ಪೂರ ಕರಗುತ್ತದೆ. ಆದರೆ ಇಲ್ಲಿ ಅಗ್ನಿಯೇ ಕರಗಿ, ಕರ್ಪೂರ ಉಳಿಯುತ್ತದೆ. ಹಾಗೆಂದಾಕ್ಷಣ ಇದು ಅತಿಶಯೋಕ್ತಿ ಅಲಂಕಾರವಲ್ಲ. ಅಜಗಣ್ಣನ ಯೋಗದ ಪರಿಯಾಗಿದೆ. ಅಜಗಣ್ಣನ ಯೋಗ ಹೇಗಿದೆಯೆಂಬುದನ್ನು ಈ ವಚನದಲ್ಲಿ ಸುಂದರವಾಗಿ ಹೇಳಲಾಗಿದೆ. ಹೀಗೆ ಶರಣೆಯರ ವಚನಗಳಲ್ಲಿ ಕಾವ್ಯದ ಅನನ್ಯತೆಯ ಬಗೆಗೆ, ಕಾವ್ಯಸೌಂದರ್ಯದ ಬಗೆಗೆ ಅನೇಕ ಮಹತ್ವದ ರಚನೆಗಳಿವೆ.

ಈ ಅಂಕಣದ ಹಿಂದಿನ ಬರೆಹಗಳು:
ಅಹಂಕಾರ ನಿರಸನ
ಸತಿ-ಪತಿ ಭಾವ
ಕಾಯಕ ನಿಷ್ಠೆ
ಅರಿವು-ಆಚಾರ

ತ್ರಿಪುರಾಂತಕ ಕೆರೆಯ ನಿರ್ಮಾಣ ಕಾರ್ಯದಲ್ಲಿ ಶಿವಶರಣೆಯರು
ಸಾಮಾಜಿಕ ಪ್ರಜ್ಞೆ
ಆಗಮ ಮೋಹಿನಿ
ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ
ಬೆಡಗಿನ ಭಾಷೆಯಲ್ಲಿ ವಚನಕಾರ್ತಿಯರು
ವಿಡಂಬನೆ
ಶರಣರ ಸಮಕಾಲೀನ ವಚನಕಾರ್ತಿ ‘ಸೂಳೆ ಸಂಕವ್ವೆ’
ಜಾತ್ಯಾತೀತ ಮನೋಭಾವ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...