ಕಾವ್ಯೋತ್ಸಾಹದ ಅನಾವರಣವೇ ‘ಪ್ರೇಮಾಯತನ’  : ನಟರಾಜ ಕೆ. ಪಿ


"ಅನಾವರಣ ಸಾಹಿತ್ಯೋತ್ಸಾಹಿ ವಿಮರ್ಶಕನೊಬ್ಬನ ಸಮಸ್ತ ಚಹರೆಗಳನ್ನೂ ಹೊತ್ತ ವಿಮರ್ಶಾಸಂಕಲನವಾಗಿದೆ . ಈ ಸಂಗ್ರಹವು ಗಜಲ್ , ಕವಿತೆ ಅನುವಾದ , ವಿಮರ್ಶೆ, ಹೀಗೆ ಭಿನ್ನ ಪ್ರಕಾರಗಳ ಪುಸ್ತಕಗಳನ್ನು ಸಹೃದಯ ಉತ್ಸಾಹದಿಂದ ಓದಿ, ಆ ಓದಿನ ಹಿತಾಹಿತಗಳಿಗೆ ಮನಗೊಟ್ಟು ಸ್ಪಂದಿಸಿದ ದಾಖಲೆಯಾಗಿದೆ" ಎನ್ನುತ್ತಾರೆ ಲೇಖಕ ನಟರಾಜ ಕೆ. ಪಿ. ಅವರು ಲೇಖಕ ಜಬಿವುಲ್ಲಾಎಂ ಅಸದ್ ಅವರ ‘ಪ್ರೇಮಾಯತನ’ ಕವನ ಸಂಕಲನಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಯುವ ವಿಮರ್ಶಕ ಜಬಿವುಲ್ಲಾ ಎಂ ಅಸದ್ ಅವರ "ಅನಾವರಣ " ಸಾಹಿತ್ಯೋತ್ಸಾಹಿ ವಿಮರ್ಶಕನೊಬ್ಬನ ಸಮಸ್ತ ಚಹರೆಗಳನ್ನೂ ಹೊತ್ತ ವಿಮರ್ಶಾಸಂಕಲನವಾಗಿದೆ . ಈ ಸಂಗ್ರಹವು ಗಜಲ್, ಕವಿತೆ ಅನುವಾದ, ವಿಮರ್ಶೆ, ಹೀಗೆ ಭಿನ್ನ ಪ್ರಕಾರಗಳ ಪುಸ್ತಕಗಳನ್ನು ಸಹೃದಯ ಉತ್ಸಾಹದಿಂದ ಓದಿ , ಆ ಓದಿನ ಹಿತಾಹಿತಗಳಿಗೆ ಮನಗೊಟ್ಟು ಸ್ಪಂದಿಸಿದ ದಾಖಲೆಯಾಗಿದೆ . ಹೀಗಾಗಿ ಜಬಿವುಲ್ಲಾ ಅಸದ್ ಅವರನ್ನು ಸಾಹಿತ್ಯೋತ್ಸಾಹಿ ವಿಮರ್ಶಕ ಎನ್ನಲು ಎಲ್ಲ ಆಧಾರಗಳೂ ಕಾರಣಗಳೂ ಇಲ್ಲಿ ಸಾಕಷ್ಟಿವೆ .

ಅಶ್ಪಾಕ್ ಪೀರ್ ಜಾದೆ ಅವರ ಕವನ ಸಂಕಲನದ ಬಗ್ಗೆ ಬರೆಯುತ್ತಾ "ಹೊಸ ಕಾವ್ಯಕ್ಕೆ ಓದುಗ ವರ್ಗವೇ ಇಲ್ಲದೆ ಹಿರಿಯ ಮತ್ತು ಪ್ರತಿಷ್ಠಿತ ಸಾಹಿತ್ಯ ಕೃತಿಗಳಿಗೆ ಓದುಗರು ಜೋತುಬಿದ್ದಿದ್ದಾರೆ" ಎಂದು ಎಂದು ತಮ್ಮ ಆಕ್ಷೇಪವನ್ನು ದಿಟ್ಡವಾಗಿ ದಾಖಲಿಸುತ್ತಾರೆ .

ಈ ಬಗೆಯ ಅಕ್ಷೇಪವೂ ಹಾಗೂ ಅದರ ದಿಟ್ಟ ದಾಖಲೆಗಳೆರಡೂ ಸಹ , ವಿಮರ್ಶಕನ ಮೇಲೆ ಹೊಸ ಜವಾಬ್ದಾರಿಗಳನ್ನು ಹೊರಿಸುತ್ತದೆ ಅವು ಎರಡು ತೆರನಾದ ಜವಾಬ್ದಾರಿಗಳಾಗಿರುತ್ತವೆ . ಒಂದು: ಹೊಸ ತಲೆಮಾರಿನ ಸಾಹಿತ್ಯ ಕೃತಿಗಳೆಲ್ಲವನ್ನೂ ಓದಿ ಗಮನಿಸಬೇಕಾದ ತಹತಹದ ಜವಾಬ್ದಾರಿ ಮತ್ತು ಆ ಸಾಹಿತ್ಯ ಕೃತಿಗಳ ಸಾಹಿತ್ಯ ಮೌಲ್ಯವನ್ನು ಕಂಡುಕೊಳ್ಳುವುದು ಈ ಎರಡನ್ನೂ ಈ ಹೇಳಿಕೆ ಮಾಡುವ ವಿಮರ್ಶಕ ಮನಸ್ಸು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಬೇಕಾಗಿ ಬರುತ್ತದೆ . ಆದರೆ ಸಾಹಿತ್ಯೋತ್ಸಾಹಿಯಾದ ಮನಸ್ಸಿಗೆ ಈ ಜವಾಬ್ದಾರಿ , ಹೊರಬೇಕಾದ ಜಡ ಹೊರೆಯಾಗಿ‌ ಕಾಣದೆ , ಲೀಲೆಯಂತಹ ಸಂಭ್ರಮವಾಗಿಬಿಡುತ್ತದೆ . ಅಂತಹ 'ಓದು' ಗಳ ಪ್ರಯತ್ನದ ದಾಖಲೆಯಾಗಿಯೂ ಈ ವಿಮರ್ಶಾ ಕೃತಿಯನ್ನು ನಾವು ನೋಡಬಹುದಾಗಿದೆ .

ಇಲ್ಲಿ , ಕವಿ ಬಿದಲೋಟಿ ರಂಗನಾಥ್ ಅವರ "ಉರಿಯುವ ಕರುಳ ದೀಪ " ಕವನ ಸಂಕಲನದ ಬಗ್ಗೆ ಬರೆದ ಬರಹ ಗಮನಾರ್ಹವಾದ ಕಾರಣ ಅದನ್ನೇ ಮೊದಲಿಗೆ ಗಮನಿಸಬಹುದು . ಈ ಸಂಕಲನದ ಬಗ್ಗೆ ಬರೆಯ ಹೊರಡುವ ಇವರ ಉತ್ಸಾಹದಲ್ಲಿಯೇ ಈ ಕವಿತೆಗಳು ಮಾಡಿರುವ ಪ್ರಭಾವದ ಗಾಢತೆ ಗೊತ್ತಾಗುತ್ತದೆ . ಈ ಅನುರಕ್ತಿಯ ಕಾರಣದಿಂದಾಗಿಯೇ ಈ ಬರಹಕ್ಕೆ ಒಂದು ಅನನ್ಯತೆ ಪ್ರಾಪ್ತವಾಗಿದೆ ..

ಈ ಬರಹ ನನ್ನಲ್ಲಿ ಉಂಟು ಮಾಡಿದ ಮುಖ್ಯವಾದೊಂದು ಅನಿಸಿಕೆಯನ್ನು ಈ ಹಂತದಲ್ಲಿ ದಾಖಲಿಸುವ ಮನಸ್ಸಾಗುತ್ತಿದೆ .. ಈ ಲೇಖಕನಲ್ಲಿ , ಸಮಕಾಲೀನ ಕಾವ್ಯ ಕರ್ಮದ ನಕಲಿತನಗಳ ಬಗೆಗೆ ಅಸದ್ ಅವರಿಗಿರುವ ಅಸಹನೆ ಒಮ್ಮೆಲೇ ಮುಂಚೂಣಿಗೆ ಬರುತ್ತದೆ ಅದು ಈ ಬಿದಲೋಟಿ ಯವರ ಕವನಗಳ ಓದಿನ ಸಂದರ್ಭದಲ್ಲಿ ವಿಕೋಪಕ್ಕೆ ಹೋದಂತೆ ಕಾಣುತ್ತದೆ .. ಹಲವು ಆಕ್ಷೇಪ ಗಳ , ಆಗ್ರಹಗಳ ಸ್ವತಂತ್ರ ಆಲೋಚನೆಗಳ ಪೂರ್ವಗ್ರಹಗಳ ಅನಿಸಿಕೆಗಳ ಹುಟ್ಟನ್ನು ನಾವಿಲ್ಲಿ ನೋಡುತ್ತೇವೆ . ಅಸದ್ ತಮ್ಮ ಸದಭಿರುಚಿಯನ್ನು , ಓದುಗ ವರ್ಗವು ಕಾಣಬಯಸ ಬೇಕಾದ ಸಾಂಸ್ಕೃತಿಕ ತುರ್ತುಗಳಾಗಿಯೂ ಇಲ್ಲಿ ಇಡಬಯಸುತ್ತಾರೆ . ಅಂತಹ ಕೆಲವು ಅಂಶಗಳನ್ನು ಇಲ್ಲಿ ಹೀಗೆ ಸಂಗ್ರಹಿಸಬಹುದು

ಒಂದು : "ಜಿದ್ದಿಗೆ ಬಿದ್ದವರಂತೆ ದಿನಕ್ಕೊಂದು ಅರ್ಥವಿಲ್ಲದ ಸಾಲುಗಳನ್ನು ಗೀಚಿ ಅದನ್ನೇ ಕವಿತೆ ಎನ್ನುತ್ತಾ ವರ್ಷಕ್ಕೊಂದು , ವ್ಯವಧಾನವಿಲ್ಲದೆ ಜೀವವಿಲ್ಲದ ಕೃತಿಗಳನ್ನು ಪ್ರಕಟಿಸುವ ಹಲವರ ನಡುವೆ"
ಎರಡು : ಅಂತರಂಗದಲ್ಲಿ ಜನ್ಮ ತಳೆದ ಕವಿತೆಗಳಿಗೆ ಮಾತ್ರ ಜೀವ ಕರುಣಿಸುವ ಅರ್ಥ ತುಂಬಿ ಲೋಕದ ಅರಿವಿಗೆ ನೀರೆರೆಯುವ

ಮೂರು: ಗಜಲ್, ಷಟ್ಪದಿಯಂತಹ ಕೆಲವು ಕಾವ್ಯ ಪ್ರಕಾರಗಳನ್ನು ಹೊರತುಪಡಿಸಿ ಕವಿತೆಯ ರಚನೆಗೆ ಯಾವ ಮಾನದಂಡಗಳಿಲ್ಲ ಯಾವ ನಿಯಮ ನಿರ್ಬಂಧಗಳೂ ಇಲ್ಲ
ನಾಲ್ಕು : ಕವಿ ಗಿಂತ ಓದುಗ ಆಪ್ತವಾದ ಅನುಭೂತಿಯನ್ನು ಪಡೆಯಬಹುದಾಗಿದೆ . ಕವಿಗೆ ಕಾಣದ್ದನ್ನು ಓದುಗ ವಿಮರ್ಶಕನಾಗಿ ಪಡೆಯಬಹುದಾಗಿದೆ
ಐದು: ನಾವು ಎಷ್ಟು ವಾಚಾಳಿಗಳಾಗಿದ್ದೇವೆ ಎಂದರೆ ಬರೆದದ್ದೆಲ್ಲ ಸಾಹಿತ್ಯ ಎನ್ನಿಸಲು ಶುರುವಾಗಿದೆ . ಇವು ಅವರ ಕೆಲವು ಹೇಳಿಕೆಗಳು. ಈ ಹೇಳಿಕೆಗಳ ಬಹುಪಾಲು ಬಿದಲೋಟಿ ರಂಗನಾಥ್ ಅವರ ಕವಿತೆಗಳ ಓದು ಅವರಲ್ಲಿ ಉಂಟುಮಾಡಿದ ಸ್ಪಂದನದ ಭಾವಾವೇಶದಲ್ಲಿ ಹುಟ್ಟಿದವಾಗಿವೆ .

ಇವುಗಳನ್ನು ಆವೇಶ ಪೂರ್ವಕವಾಗಿ ಮಂಡಿಸುವ ಅಸದ್ ಇಂತಹ ಭಾವಸ್ಪಂದನದ ಅಸಲಿ ಬಂಡವಾಳದ ಮೇಲೆ ತಮ್ಮ ವಿಮರ್ಶಾ ಬರೆಹಗಳನ್ನು ಕಟ್ಟುತ್ತಾರೆ ‌‌. ಇಂತಹ ಸಾಧಾರ ವಿಮರ್ಶೆಯನ್ನು ಸಮರ್ತಿಸುವಂತೆ ಜೀವಂತವಾದ ಕಾವ್ಯವನ್ನು ಮುಟ್ಟಿದ ಮತ್ತು ಜೀವಂತವಾದ ಕಾವ್ಯಕ್ಕೆ ಸ್ಪಂದಿಸಿದ ಎರಡೂವ ಕುರುಹುಗಳನ್ನೂ ನೀಡುತ್ತಾರೆ ಅವರ ಈ ವಿಮರ್ಶಾ ಹೇಳಿಕೆಗಳು ವಿಮರ್ಶಕರಾಗಿ ಅವರ ಆತ್ಮವಿಶ್ವಾಸವನ್ನು ಆಧಾರ ಪೂರ್ವಕವಾಗಿ ಮಂಡಿಸುತ್ತವೆ.

ಹೀಗೆ ಆತ್ಮವಿಶ್ವಾಸದಿಂದ ಕವಿತೆಯನ್ನು ಓದಬಲ್ಲ , ಸ್ಪಂದಿಸಬಲ್ಲ ಈ ಲೇಖಕರಿಗೆ , ಕನ್ನಡದ ಲೇಖಕರಾದ ಗೋಪಾಲಕೃಷ್ಣ ಅಡಿಗ , ಏಕೆ ರಾಮಾನುಜನ್ , ಕೆ ವಿ ತಿರುಮಲೇಶ್ , ಪಿ ಲಂಕೇಶ್ ಅವರಂತಹ ಮುಖ್ಯ ಲೇಖಕರ ಬರಹಗಳ ಓದಿನ ಬಲವಿದೆ. ಈ ಲೇಖಕ ಅದೆಷ್ಟರ ಮಟ್ಟಿಗೆ ತನ್ನ ಸಾಹಿತ್ಯ ಸ್ಪಂದನದ ಮತ್ತು ಮೌಲಿಕತೆಯನ್ನು ಕಂಡುಕೊಳ್ಳುವ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂದರೆ, ಬಿದಲೋಟಿ ರಂಗನಾಥ್ ಅವರ ಕವಿತೆಗಳ ಬಗ್ಗೆ ಕೆಲವರು ಬರೆದ ಆಕ್ಷೇಪಗಳಿಗೆ ಉತ್ತರಿಸಲು ತಮ್ಮ ಓದಿನ ಅನುಬವವನ್ನು ಹಂಚಿಕೊಳ್ಳುವುದರಲ್ಲಿ ನೋಡಬಹುದು .

" ಬಿದಲೋ ಟಿ ರಂಗನಾಥ್ ಅವರ "ಅಸಂಗತ ಪ್ರತಿಮೆ ರೂಪಕ'' ಗಳ ಆರೋಪಗಳ ಕುರಿತು ಹೇಳಲೇಬೇಕು. ಇಲ್ಲಿನ ಕವಿತೆಗಳ ಒಳ ಹೊಕ್ಕು ನೋಡಿದಾಗ ಕವಿ ಅದ್ಯಾವ ಜ್ಞಾನದ ಪೀಪಾಯಿಂದ ಹೀರಿರುವನೋ , ನಾ ಕಾಣೆ '' ಎಂದು ಉದ್ಗರಿ ಸುತ್ತಾರೆ, ಈ ಬರಹ ತನ್ನ ಸ್ವಾರ್ಥಕತೆಯನ್ನು ಕಂಡುಕೊಳ್ಳುವುದೇ , ಕವಿತೆಗಳೊಡನೆ ತನ್ನ ಸಹಾನುಭೂತಿಯ ಸ್ಪಂದನದಲ್ಲಿ ಮತ್ತು ಅದನ್ನು ತನ್ನ ಸಮಕಾಲೀನ ಸಂದರ್ಭದಲ್ಲಿ ಹಂಚಿಕೊಳ್ಳುವ ದಿಟ್ಟತೆ ತೋರುವದರಲ್ಲಿ .

ಕವಿತೆಯಾಗಿರದ ರಚನೆಗಳನ್ನು ಬಹುಶಹ ಕೈ ಬಿಟ್ಡು , ಕವಿಯೊಬ್ಬನ ಯಶಸ್ವಿ ಕವನಗಳ ಮೂಲಕ , ಕವಿ ಒಬ್ಬನ ಯಶಸ್ಸನ್ನು ಮೌಲ್ಯಮಾಪನ ಮಾಡುವುದು ಜಬಿವುಲ್ಲಾ ಅವರು ತೋರುವ ಮತ್ತೊಂದು ಹೊಸತನ .. ಈ ವಿದಾನ ಆಧುನಿಕವೂ . ನ್ಯಾಯ ಸಮ್ಮತವಾದದ್ದೂ ಆದದ್ದು ಎಂಬುದು ನನ್ನ ಭಾವನೆ ..ಈ ಮೂಲಕ ಕವಿಗೂ ನ್ಯಾಯ ಒದಗುತ್ತದೆ ಎಂದು ಹೇಳಬಹುದಾಗಿದೆ , ಹಾಗೆ ನೋಡಿದರೆ , ಇದೇ ಸೂಕ್ತವಾದ ವಿಮರ್ಶಾ ಧೋರಣೆ ಎಂದು ನನಗನಿಸುತ್ತದೆ ಕವಿಯ ಯಶಸ್ವಿಯಾಗದ ರಚನೆಗಳ ದೋಷಗಳ ಬಗ್ಗೆ ಮಾತಾಡುವುದರಿಂದ ಯಾವ ಪ್ರಯೋಜನವೂ ಆಗದು ‌. ಕವಿಯೊಬ್ಬ ತನ್ನ ಕಾವ್ಯದ ಕಸುಬುಗಾರಿಕೆಯಲ್ಲಿ ಸಾರ್ಥಕ್ಯ ಸಾಧಿಸಿದ ಕೃತಿಗಳನ್ನು ಚರ್ಚಿಸುವುದು ನಿಜವಾಗಿಯೂ ವಿವೇಕಯುತವಾದದ್ದು . ನಾವು ಕಲ್ಲುಗಳನ್ನು ಹುಡುಕ ಹೋಗದೆ ವಿಗ್ರಹಗಳ ಎದುರು ನಿಲ್ಲುತ್ತೇವಲ್ಲ ಹಾಗೆ ಇದು . ಕಲ್ಲನ್ನು ಹಳಿಯುತ್ತಾ ಕುಳಿತರೆ ಮೋಕ್ಷ ಸಿಕ್ಕುವುದಿಲ್ಲ ಅದನ್ನು ವಿಮರ್ಶಾ ಮೋಕ್ಷ ಎಂತಲೂ ಕರೆಯಬಹುದು ಪ್ರತಿಮೆಯಾದ ಕಲ್ಲಿನ ಜೊತೆ ಮಾತಾಡಲಾದರೆ , ನಮಗೆ ಬೆಳಕು ಹೊಳೆದು ಕಾಣಬಹುದು ..

ಇದು ಅಸದ್ ಅವರ ವಿಮರ್ಶೆಯ ಹಿಂದಿರುವ ತತ್ವವಾಗಿರುವಂತೆ ಕಾಣುತ್ತದೆ. ಅದಕ್ಕೇಯೆ ಅವರ. ಬಹುಪಾಲು ವಿಮರ್ಶಾ ಬರೆಹಗಳು ಮೆಚ್ಚುವ ಅಂಶಗಳನ್ನು ನಿಡಿದಾಗಿಯೂ , ಆಕ್ಷೇಪಗಳನ್ನು ಸೂಕ್ಷ್ಮವಾಗಿಯೂ ಹೇಳುತ್ತಾರೆ . ಹೀಗಾಗಿಯೇ ಅಶ್ಫಾಕ್ ಪೀರಜಾದೆ ಅವರ ಕವಿತೆಗಳ ಹೆಚ್ಚುಗಾರಿಕೆಯ ಬಗ್ಗೆ ಬಗ್ಗೆ ಬರೆಯುವಾಗ , ಅಷ್ಟೇ ಏಕೆ ಇಲ್ಲಿನ ಯಾವುದೇ ಬರೆಹಗಳಲ್ಲೂ ಅಸದ್ ಅವರು ಅವಲಂಬಿಸುವುದು ಆಯಾ ಕವಿಗಳ ಅವರ ಯಶಸ್ವಿ ಸಾಲುಗಳನ್ನು

೧ : "ಆಗಾಗ ನನಗನಿಸುವುದು ನನ್ನ ಮುರಿದ ಮನಸ್ಸಿನ ಮೂಕ ವೇದನೆಗೆ ನಾನೇ ಧ್ವನಿಯಾದೆ ನನ್ನ ಹೃದಯದ ಸಾಂತ್ವನಕ್ಕೆ ನಾನೇ ಕವಿತೆಯಾದೆ "

"ನಿನ್ನೂರಲ್ಲಿ ನಿನ್ನ ಬೀದಿಯಲ್ಲಿ ನೀನೇ ಅಪರಿಚಿತ ಯಾರು ನಿನ್ನ ಗುರುತಿಸುವವರಿಲ್ಲ ಹೊರಡು ಇಲ್ಲಿಂದ " ಇಂತಹ ಮೌಲಿಕ ಸಾಲುಗಳನ್ನು ಇವರು ಕಂಡುಕೊಳ್ಳುತ್ತಾರೆ . ಇಂತಹ ಬೆಲೆಯುಳ್ಳ ಸಾಲುಗಳ ಜೊತೆಗೆ ಇವರು ನಡೆಸಿದ ಭಾವ ಸಂವಾದದಂತೆ ಇವರ ಬರಹಗಳು ನನಗೆ ಕಾಣುತ್ತವೆ ..

ವಿಮರ್ಶೆ ಎನ್ನುವುದು ಎರಡು ತರದಲ್ಲಿ ಜರುಗಬೇಕಾಗುತ್ತದೆ ಒಂದು ಯುಕ್ತ ಕೃತಿಗಳ , ಸಾಲುಗಳ , ಉಲ್ಲೇಖಗಳ ಆಯ್ಕೆ ; ಅದರೊಂದಿಗೆ ವಿಮರ್ಶೆಯ ಅರ್ಧ ಕೆಲಸ ಮುಗಿಯುತ್ತದೆ ಇನ್ನರ್ಧ , ಹೀಗೆ ಆಯ್ದ ಕೃತಿ , ಕಾವ್ಯ ಭಾಗ. ,ಇಲ್ಲವೇ ಉಲ್ಲೇಖಗಳ ವಿಶಿಷ್ಟತೆಯನ್ನು ಮೌಲ್ಯವನ್ನು ಕಂಡುಕೊಳ್ಳುವುದು.. ಇದು ಬಿಡಿಸಿ ನೋಡುವ ಅಥವಾ ವಿಶ್ಲೇಷಿಸುವ ; ಕೂಡಿಸಿ ನೋಡುವ ಅಥವಾ ಸಂಶ್ಲೇಷಿಸುವ ಕೆಲಸ..

ಇಲ್ಲಿ ಎರಡನೆಯ ಭಾಗ , ಅಂದರೆ ವಿಶ್ಳೇಷಣೆಯ‌ ಉಳಿದರ್ಧ ಭಾಗ ತಕ್ಕ ವಿಸ್ತಾರ ಕಾಣದೆ ಹೋದರೂ ,

'' ಮಿಂಚು ಹೀಚಿ ಹಗಲಾದಂತೆ " ಎಂಬ ಮಾತಿದೆ , ಹಗಲನ್ನು ಕಾಣಿಸದೆ ಹೋದರೂ ಮಿಂಚಿನ ಬೆಳಕನ್ನಾದರೂ ನಮ್ಮೆದುರು ಮಿಂಚಿಸುವ ಮೂಲಕ ಬೆಲೆಯುಳ್ಳದ್ದನ್ನು ಕಾಣಿಸುವ ಪ್ರಯತ್ನ ಇಲ್ಲಿ ಸ್ವಾಗತಾರ್ಹ ವಾಗಿ ಕಾಣು ತ್ತದೆ. ಅಂತಹ ವಿಮರ್ಶಾ ಕಾರ್ಯ ಈ ಕೃತಿಯಲ್ಲಿ ನಿಸ್ಸಂದೇಹವಾಗಿ ಜರುಗಿದೆ ಎಂದು ಹೇಳಬಹುದಾಗಿದೆ . ಅಸದ್ ಅವರು ಕಾವ್ಯದಿಂದ ನಿರೀಕ್ಷಿಸುವ ಹಂಬಲ ಮೇಲ್ದರ್ಜೆಯದಾಗಿದೆ ಈ ಬಗ್ಗೆ ಅವರು ಹರಿಗಡಿಯದ ಮತ್ತು ಸತತವಾದ ನಿರೀಕ್ಷೆಯನ್ನು ಕಾಪಾಡಿಕೊಂಡಿದ್ದಾರೆ .

"ವಸಂತಾವಧಿ ಚೈತ್ರ ಮಾಸದಿ ವರುಣ ನಿಣುಕಲು ನೋಡೈ
ಹಣ್ಣೆಲೆಗಳು ಉದುರಿ ತಳಿ ರೆಲೆಗಳೊಡೆದು
ಗಿಡ ಮರಗಳಲ್ಲಿ ಕೂಡೈ ''

ಎಂಬುದು ಅವರು ಉಲ್ಲೇಖಿಸುವ ಮತ್ತೊಬ್ಬ ಕವಿಯ , ಮತ್ತೊಂದು ಸಾಲು . ಇದರ ಬೆನ್ನಿಗೆ , ಅವರು ಕವಿತೆ '' ಕೇವಲ ಭಾಷೆಯ ಪದಗಳಾಗಿ ಉಳಿಯದೆ ಒಟ್ಟಾರೆಯಾಗಿ ಭಾವಾರ್ಥ ವೂ ಸೇರಿದಾಗ ಸಾರ್ಥಕತೆ ಸಿದ್ಧಿಸುತ್ತದೆ ಇಲ್ಲದಿದ್ದರೆ ಕವಿತೆ ಪ್ರಯತ್ನಪೂರ್ವಕವಾಗಿ ಕಟ್ಟಿದ ಕೇವಲ ಅರ್ಥವಿಲ್ಲದ ವ್ಯರ್ಥ ಅಕ್ಷರಗಳ ಗೋಡೆಯಾಗಿ ಬಿದ್ದ ರಾಶಿ ಕಲ್ಲು ಇಟ್ಟಿಗೆಗಳ ರಾಶಿಯಂತೆ ಭಾಸವಾಗುತ್ತದೆ " ಎಂದು ಬರೆಯುತ್ತಾರೆ .

ವಿಶೇಷವೆಂದರೆ ಕವಿತೆಯ ಬಗೆಗಿನ ಈ ಬಗೆಯ ರೆಫ್ರೆಶಿಂಗ್ ಸಾಲುಗಳು ಅಥವಾ ಹೊಸ ಕಾಣ್ಕೆಯ ನಿರೂಪ ಣೆಯ ತರದ ಸಾಲುಗಳು ಕವಿ ಮಂಡಿಸುತ್ತಿರುವ ನವೀನ ಆಗ್ರಹದಂತೆ ಕಾಣುತ್ತವೆ . ಇಂತಹ ಸಾಲುಗಳು ಇಡೀ ಸಂಕಲನದುದ್ದಕ್ಕೂ ಅನುರಣಿಸುವುದು ಇಲ್ಲಿನ ವಿಶೇಷ.

"ನಾನೀ ಕುಲ ನೀನಾಕುಲ
ಇವನೀ ಕುಲವೆಂದು ಹೊಡೆದಾಡುತಿಹುದಿಲ್ಲಿ ಮನು ಸಂಕುಲ ವಿಂದು
ಜಾತಿಯಲ್ಲೇನಿದೆ? ನೀ ಕಂಡಿದ್ದು ಹೇಳು ಜಾತಿಯೇ ಇಲ್ಲೆಂಬ ನನ ಮಾತು ಕೇಳು''

ಇಂತಹ ಸರಳ ಸಾಲುಗಳಲ್ಲಿರುವ ಕ್ರಾಂತಿಕಾರಿ ದನಿಯನ್ನು ಆಲಿಸುವ ಮತ್ತು ಮಂಡಿಸುವ ಆಸಕ್ತಿ ತೋರಿಸುವ ಅಸದ್ ವಿಮರ್ಶೆ , ಕಾವ್ಯ ಕುರಿತು ಸ್ಥಗಿತ ದೃಷ್ಟಿಯನ್ನು ಹೊಂದಿಲ್ಲ ಎಂಬುದನ್ನು ತೋರುತ್ತದೆ ಅವರ ಗಜಲ್ ಕುರಿತ ಬರಹಗಳಲ್ಲಿ ಮಲ್ಲಿನಾಥ ತಳವಾರ್ , ಪ್ರಭಾವತಿ ದೇಸಾಯಿ ಅವರ ಕೃತಿಗಳಿಗೆ ಬರೆದ ವಿಮರ್ಶೆ .. ಗಜಲ್ ಪ್ರಕಾರದ. ಬಗೆಗೂ ಚರ್ಚಿಸುವ ಮಹತ್ವಾಕಾಂಕ್ಷೆ ಯನ್ನು ತೋರುತ್ತವೆ...

ಆದರೆ ಕನ್ನಡಕ್ಕೆ ಗಜಲ್ ಎಂಬ ಸೃಜನ ಶೀಲ‌ ಕಾವ್ಯ ಪ್ರಕಾರವನ್ನು , ಅದರ ಪಾರಿಬಾಷಿಕಗಳನ್ನು ಮು ರಿದು ಕಟ್ಟುವ ಮೂಲಕ ತರ ಬೇಕಲ್ಲವೆ ?.. ಅಥವಾ ಈಗಿರುವಂತೆಯೆ ಇರಬೇಕೆ ಅಥವಾ ಬೇಡವೆ ಎಂಬ ಬಗ್ಗೆ ಇಲ್ಲಿನ ಬರೆಹಗಳ ವ್ಯಾಪ್ತಿಯ ಮಿತಿಯಿಂದಾಗಿ ವಿಜ್ಞಾಸೆ ನಡೆಯಲು ಸಾದ್ಯವಾಗಿಲ್ಲ ಅನ್ನಿಸುತ್ತದೆ ... ಆದರೆ ಅಂತಹ ಅಗತ್ಯವೊಂದು ಈ ಬರೆಹಗಳ ಓದಿನ ಸಂದರ್ಬದಲ್ಲಿ ಉಂಟಾದದ್ದನ್ನು ಹೇಳಬೇಕಾಗುತ್ತದೆ‌. ಇಲ್ಲಿ ಬಳಕೆಯಾಗುವ ಗಜಲ್ ನ ಉರ್ದು ಪದ ‌ಪ್ರಯೋಗಗಳ ಸರಿ ತಪ್ಪುಗಳ ವಿವೇಚನೆಯನ್ನೂ ಇಲ್ಲಿ ಸ್ಪಷ್ಟವಾಗಿ ಕಾಣಲಾಗುವುದಿಲ್ಲ

ಈ ಅಂಶಗಳನ್ನು ಇಲ್ಲಿ ಕೈಬಿಡಬಹುದು . ಒಳ್ಳೆಯ ಸಾಲುಗಳು ಅಸದ್ ಅವರ ಮುಂದೆ ಬಂದಾಗ ಅವರ ಬರವಣಿಗೆಗೆ ಒಂದು ಹೊಸ ಸೌಷ್ಠವ ಬರುತ್ತದೆ ಎಂಬುದು ಮಾತ್ರ ಮತ್ತೆ ಮತ್ತೆ ಸಮರ್ಥಿಸಲ್ಪಡುತ್ತಹೋಗುವುದು ಈ ಸಂಕಲನದ ಮಹತ್ವದ ಲಕ್ಷಣವಾಗಿ ಗುಣವಾಗಿ ಕಾಣುತ್ತದೆ..

' ಮೌನ ಇಂಚರದ ಮಾತನಾಡಿಸುತ್ತಾ ' ಎಂಬ ಶೀರ್ಷಿಕೆಯಲ್ಲಿ ಶ್ರೀಮತಿ ಪ್ರಭಾವತಿ ದೇಸಾಯಿ ಅವರ 'ಮೌನ ಇಂಚರ ' ಎಂಬ ಸಂಗ್ರಹದಲ್ಲಿರುವ ಗಜಲ್ ಗಳ ಬಗ್ಗೆ ಬರೆಯುವುದನ್ನು ನೋಡಿದಾಗ ನನಗೆ , ಯಾವು ಯಾವುದೋ ಸಾಧಾರಣ ಕೃತಿಗಳಿಗೆ ವಿಮರ್ಶೆ ಬರೆಯುವಾಗ ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಬರೆಯುತ್ತಿರುವುದು ಗೊತ್ತಾಗಿಬಿಡುತ್ತದೆ ಆದರೆ ಅವರಿಗೆ ಇಷ್ಟವಾದ ಕವಿತೆಗಳು ಎದುರಾದಾಗ ‌ಮಾತ್ರ , ಅವರಲ್ಲಿದ್ದ ಸಂಕೋಚ , ದಾಕ್ಷಿಣ್ಯ , ಹಿಂಜರಿಕೆಯಲ್ಲಿ ಕ್ಷೀಣವಾಗಿರುವ , ಅಸ್ಪಷ್ಟವಾಗಿರುವ ದನಿ ಮ ರೆಯಾಗಿ ಆ ಕೃತಿಗಳ ಜೊತೆಗೆ ದೇಹಾತ್ಮ ಸಂಬಂಧದಂತೆ ಅನುಬಂಧ ಒಂದು ಸಾಧ್ಯವಾಗಿ ಅನುರಕ್ತ ಬರಹ ಒಂದು ಒಡಮೂಡಿಬಿಡುತ್ತದೆ

"ಕೆನ್ನೆಯಲ್ಲಿ ಕೆಂಪು ಮೂಡಿಲ್ಲ
ಆಧರ ಮಧು ಇನ್ನೂ ಹೀರಿಲ್ಲ
ಲಜ್ಜೆಯು ನಯನದಲ್ಲಿ ಇನ್ನೂ ಬಿರಿದಿಲ್ಲ ನೀ ಏಕೆ ಹೋಗುವೆ "

ಎಂಬ ಗಜಲ್ ಬಗ್ಗೆ ಬರೆಯುತ್ತಾ '' ಇಂತಹ ಗಜಲ್ ನ ಮುಡಿಗೆ ನಾಲ್ಕು ತುಂಬೊಲವಿನ ಗುಲಾಬಿಗಳನ್ನು ಮೂಡಿಸಿರುವ ಪ್ರಭಾವತಿ ದೇಸಾಯಿ ಅವರ ಗಜಲ್ ಗಳ ಭಾವತೀವ್ರತೆ ಉತ್ಕಟತೆ ಅನಂತತೆಯೆಡೆಗಿನ ನಡಿಗೆ ಒಂದು ಅವರ್ಣನೀಯ ಆನಂದದ ಮದಿರೆಯಲಿ ಹೃದಯ ಪುಷ್ಪವನ್ನು ಅದ್ದಿ ತೆಗೆದ ಅನುಭವವಾಗುತ್ತದೆ '' ಎಂದು ಪರವಶವಾಗಿ ಅಸದ್ ಅವರು ಬರೆಯುತ್ತಾರೆ

ಪ್ರಭಾವತಿ ದೇಸಾಯಿಯವರ "ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ " ಸಂಕಲನಕ್ಕೆ ಬರೆಯುತ್ತಾ 'ತೆರಹೀ ಗಜಲ್' ನ ಕುರಿತು ಬರೆದ ಪರಿಚಯ ಮತ್ತು ವಿಮರ್ಶಾತ್ಮಕ ಜಿಜ್ಞಾಸೆ ಕುತೂಹಲಕರವಾಗಿದೆಯಾದರೂ ಅಲ್ಲಿ ಬಳಕೆಯಾಗಿರುವ ಪಾರಿಭಾಷಿಕಗಳನ್ನು ಕನ್ನಡದಲ್ಲಿ ಮರು ರಚಿಸುವ ಮತ್ತು ಅವುಗಳನ್ನು ವಿವರಿಸುವ ಅಥವಾ ಕನ್ನಡೀಕರಿಸುವ ಕಾರ್ಯ ಪೂರ್ಣಗೊಂಡಂತೆ ಕಾಣುವುದಿಲ್ಲ . ಹೀಗಾಗಿ ಗಜಲ್ ಮತ್ತು ಅಲ್ಲಿ ಬಳಕೆಯಾಗುವ ವಿವಿಧ ಪಾರಿಭಾಷಿಕ ಪದಗಳ ಕುರಿತ ಚರ್ಚೆಗಳು ಸಾಮಾನ್ಯರಿಗೆ ಗೊತ್ತಾಗದೆ ಹೋಗುತ್ತವೆ.

ಅಸದ್ ಅವರ 'ಅನಾವರಣ' ನಿಜ ಅರ್ಥದಲ್ಲಿ ಕವಿ ಕೃತಿಗಳ ಉತ್ತಮಿಕೆಯನ್ನು ಅನಾವರಣ ಮಾಡುತ್ತದೆ . ಉತ್ತಮಿಕೆಯನ್ನು ಗುರುತಿಸುವ ಜೊತೆಗೆ ಆಯಾ ಕವಿತೆಗಳ ನೂರಾರು ವರ್ಷದ ಅಪ್ತೇಷ್ಟನೇನೋ ಎಂಬಂತೆ ಕವಿತೆಗಳ ಹೆಗ್ಗಳಿಕೆಯನ್ನು ಮಾತಾಡತೊಡಗುತ್ತದೆ . ಅದು ಭಾಷಣದ ಸ್ವರೂಪದಲ್ಲಿರದೆ ಸ್ವಗತವೆಂಬಂತೆ , ತಾದಾತ್ಮ್ಯದಲ್ಲಿ ನಿರೂಪಿಸಲ್ಪಡುತ್ತದೆ.

ಹೀಗೆ , ಇಲ್ಲಿ ಅವರು ಗಮನಾರ್ಹ ವೆಂದು ಗುರುತಿಸುವ ಕವಿಗಳಲ್ಲಿ‌ ಪ್ರಭಾವತಿ ದೇಸಾಯಿ , ಮಲ್ಲಿನಾಥ ತಳವಾರ್ , ಆನಂದ್ ಕುಮಾರ್ , ಪ್ರಶಾಂತ್ ಅಂ ಗಡಿ , ಅಶ್ಪಾಕ್ ಪೀರ್ಜಾದೆ , ನೂರ್ ಅಹಮದ್ ನಾಗನೂರ್ , ಲತಾಮಣಿ ಎಂ ಕೆ . ಆರ್ ಗುರುಮೂರ್ತಿ , ದ್ಯಾವರನಳ್ಳಿ ಆನಂದಕುಮಾರ್ , ಬಿದಲೋಟಿ ರಂಗನಾಥ್ , ಸದಾಶಿವ ದೊಡ್ಡಮನಿ ಮಂಜುಳಾ , ಶಮಾ ಜಮಾದಾರ್ , ಡಿ ರಾಯ್ಸಾಬ್ ಏನ್ ದರ್ಗಾ . ಕೆ ಬಿ ವೀರಲಿಂಗನ ಗೌಡ್ರ , ಶಿವ ಪ್ರಸಾದ್ ಕುಂಬಾರ .. ಈ ಮುಂತಾದ ಕವಿಗಳು ಸೇರುತ್ತಾರೆ

ಅಸದ್ ಅವರ ಕೃತಿಯಲ್ಲಿ ಜರುಗಿದ ಮತ್ತೊಂದು ಮುಖ್ಯ ವಿದ್ಯಮಾನವೆಂದರೆ , ನಾನು ಈಗಾಗಲೇ ಪ್ರಸ್ತಾಪಿಸಿದಂತೆ ಭಿನ್ನ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಹುಟ್ಟಿದ ಗಜಲ್ , ಹೈಕು , ತೆರಹಿ ಮುಂತಾದ ಕಾವ್ಯ ಪ್ರಕಾರಗಳನ್ನು ಎದೆಗಿಳಿಸಿಕೊಂಡು ಕನ್ನಡಕ್ಕೆ ತರುವ ಪ್ರಯತ್ನ ಮಾಡಿದ ಕನ್ನಡ ಕವಿಗಳ ಮಹತ್ವಕಾಂಕ್ಷಿ ಪ್ರಯತ್ನಗಳನ್ನು ಇಲ್ಲಿ ಪರಿಶೀಲಿಸಿ ನೋಡಿದ್ದು . ಹೀಗಾಗಿ ಇಲ್ಲಿ ಜ್ವಲಂತ ಸಹೃದಯತೆಯ ಜೊತೆಗೆ ಭಿನ್ನ ದೇಶಕಾಲಗಳ ಕಾವ್ಯಧಾರೆಗಳ ಪರಿಚಯವನ್ನು ಕನ್ನಡದ ಒಳಗೆ ಬರಮಾಡಿಕೊಳ್ಳುವ ಮುಕ್ತ ಉದಾರ ಚರ್ಚೆಯೊಂದು - ಅದು ಪ್ರಾಥಮಿಕ ಸ್ವರೂಪದಲ್ಲಿಯಾದರೂ - ಅವಕಾಶ ಪಡೆದಿದೆ. ..

ಕನ್ನಡಕ್ಕೆ ಅಪರಿಚಿತವಾದ ಈ ಪ್ರಕಾರಗಳನ್ನು ಪರಿಶೀಲಿಸಲು ಬೇಕಾದ ಅಧ್ಯಯನದ ಸಿದ್ದತೆಯನ್ನು ಅಸದ್ ಅವರು ಆಯಾ ಕೃತಿಗಳೊಡನೆ ನಡೆಸುವ ಅನುಸಂಧಾನದಲ್ಲಿ ನಾವು ಗುರುತಿಸಬಹುದಾಗಿದೆ. ಶಿವಪ್ರಕಾಶ್ ಕುಂಬಾರ ಅವರ 'ಮಣ್ಣಿನ ಕಣ್ಣುಗಳು ' ಸಂಕಲನದಲ್ಲಿ 'ಖಸೀದಾ ' ಎಂಬ ಕಾವ್ಯದ ಮಾದರಿಯನ್ನು ಕನ್ನಡದಲ್ಲಿ ಪ್ರಯತ್ನಿಸಲಾಗಿರುವುದನ್ನು ಎಲ್ಲಿ ಪರಿಶೀಲಿಸಿ ನೋಡಲಾಗಿದೆ . 'ಖಸೀದಾ' ಎಂದರೆ ಉನ್ನತ ಶಕ್ತಿಯನ್ನು , ಮೌಲ್ಯವನ್ನು ಉದ್ದೇಶಿಸಿದ ನಿವೇದನೆ ಎಂದು ಇಲ್ಲಿ ಪರಿಚಯಿಸಲಾಗಿದೆ

" ಕೋಪದ ಮಾತುಗಳಾದರೂ ಸರಿ ನೋವಾಗದಂತೆ ತಿಳಿಸುವನು
ಪ್ರೀತಿಯ ಮಾತುಗಳ ಯಾರಾಡಿದರೂ ಸಹ ಅವರಿಗೆ ಒಲಿಯುವನು "
ಇದು ಶಿವಪ್ರಕಾಶ್ ಕುಂಬಾರ ಅವರ 'ಖಸಿದಾ' ದ ಒಂದು ಪದ್ಯವಾಗಿದೆ..

ಕಾವ್ಯ ಪ್ರಕಾರಗಳಿಗೆ ಹೊರತಾದ ಎರಡು ಗದ್ಯಕೃತಿಗಳ ಪರಿಚಯಾತ್ಮಕ ಬರಹಗಳು ಇಲ್ಲಿ ಸೇರಿವೆ . ಕನ್ನಡದ ಹಿರಿಯ ಜಾನಪದ ವಿದ್ವಾಂಸರಾದ ಮೀರಾಸಾಬಿಹಳ್ಳಿ ಶಿವಣ್ಣ ನವರ "ನಾಯಕನಹಟ್ಟಿ ಪಾಳೆಯಗಾರರು" ಮತ್ತು ಪ್ರೊ ಎಂ ಜಿ ರಂಗಸ್ವಾಮಿ ಅವರ ಫ್ರಾನ್ಸಿಸ್ ಬುಕಾ ನನ್ ಅವರ A journey from Madras through the countries of Mysore ,Canara and Malabar ಪುಸ್ತಕದ ಆಯ್ದ ಭಾಗದ ಅನುವಾದವಾದ " ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್ '' ಎಂಬ ಎರಡು ಕೃತಿಗಳ ವಿಮರ್ಶಾತ್ಮಕ ಪರಿಚಯವನ್ನು ಈ ಎರಡು ಬರೆಹಗಳು ಒಳಗೊಂಡಿವೆ .

"ನಾಯಕನ ಹಟ್ಟಿ ಪಾಳೆಯಗಾರರು" ಮ್ಯಾಸ ಬೇಡರ ಕುರಿತ ಅಧ್ಯಯನದ ಮುಖ್ಯಾಂಶಗಳನ್ನು ಕಂಡುಕೊಳ್ಳಲು ಯತ್ನಿಸುವ ವಿಮರ್ಶೆ ,ಈ ಅಧ್ಯಯನ ಗುರುತಿಸುವ , ಕಾಲ ಗತಿಯಲ್ಲಿ ಮ್ಯಾಸಬೇ ಡರು ಒಂದು ಸಮುದಾಯವಾಗಿ ಭೌಗೋಳಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಲನೆ ಗಳನ್ನು ಪ್ರಕಟಿಸಿದ್ದನ್ನೂ ; ಅಲ್ಲಿರುವ ವಿವಿಧ ಬೆಡಗುಗಳನ್ನೂ ; ಡಿಕ್ಕಿ ಹಬ್ಬ ಗುಗ್ಗರಿ ಹಬ್ಬ , ಮಣೇವು ಮುಂತಾದ ಆಚರಣೆಗಳನ್ನು ಮತ್ತು ಸಾಹಸ ಹಾಗೂ ಸಾಂಸ್ಕೃತಿಕ ಸಮೃದ್ಧಿಗಳೆರಡೂ ಹೊಯ್ಕಯ್ಯಾದ ಬೇಡರ ಬದುಕನ್ನು ಸಾಂಸ್ಕೃತಿಕ ಶ್ರದ್ದೆಯಿಂದ ಬೆನ್ನಾಡಿದ ಪ್ರೊಫೆಸರ್ ಶಿವಣ್ಣನವರ ಸಂಶೋಧಕ ಕುತೂಹಲವನ್ನು , ವಸ್ತುನಿಷ್ಟ , ವೈಜ್ನಾನಿಕ ವಿದಾನವನ್ನು ಗುರುತಿಸುವ ಅಸದ್ ಅವರ ವಿಮರ್ಶೆಯು ಅಷ್ಟೇ ಸಮಾನವಾದ ಶ್ರದ್ಧೆಯಿಂದ ಆ ಭಾಗಗಳನ್ನು ಪರಿಶೀಲಿಸುತ್ತದೆ .

ಮ್ಯಾಸಬೇಡ ಸಂಪ್ರದಾಯವನ್ನು ಕಂಡುಕೊಳ್ಳುವ ತೀವ್ರ ಕುತೂಹಲ ಮತ್ತು ಆಸಕ್ತಿ ವಹಿಸುವ ಸಂಶೋಧಕ ರಂತೆ ಈ ವಿಮರ್ಶೆಯೂ ತನ್ನ ಅಚ್ಚರಿಯನ್ನು ಸಮ ಪ್ರಮಾಣದಲ್ಲಿ ದಾಖಲಿಸುವುದು ಕಾಣುತ್ತದೆ ಬೇಡ ಜನಾಂಗದ ಗುರು ತಿಪ್ಪೇರುದ್ರಸ್ವಾಮಿ ಎಂಬ ಈ ಸಂಶೋಧಕರ ಪ್ರತಿಪಾದನೆಯನ್ನು

"ಅಪ್ಪ ತಿಪ್ಪಯ್ಯನು ಮತ್ತೆ ಮತ್ತೆಲ್ಲಿದ್ದಾನೆಂದು ಕಿತ್ತಲೆ ವನವ ಬೆದಕೀದೆ ನಾಯಕನಟ್ಟಿ ದಿಕ್ಕು ಒಳ್ಳೆದೆಂದು ನೆಲೆ ನಿಂತ "

ತಿಪ್ಪೇರುದ್ರಸ್ವಾಮಿ ಯ ಬಗ್ಗೆ ಬರೆಯುತ್ತ ಪ್ರೊ ಶಿವಣ್ಣನವರು "ಸಾಂಸ್ಕೃತಿಕ ರಾಜಕಾರಣದ ಪರಿಣಾಮವಾಗಿ ಪ್ರಭಾವಿ ಬೇಡನಾದ ಅವಧೂತನೊಬ್ಬನನ್ನು ಶರಣ ಸಂಸ್ಕೃತಿಯಲ್ಲಿ ಸೇರ್ಪಡೆ ಮಾಡಿಕೊಳ್ಳುವ ಮುಖಾಂತರ ವೀರಶೈವೀಕರಣ ಮಾಡುವುದು ಎಷ್ಟರ ಮಟ್ಟಿಗೆ ಸರಿ '' ಎಂದು ಪ್ರಶ್ನಿಸುವ ನಿಲುವನ್ನು , ಆಗ್ರಹವನ್ನು ಸಹಮತದಿಂದ ಸಹಾನುಭೂತಿಯಿಂದ ಸಹಚರಿಯಾಗಿ ಈ ವಿಮರ್ಶೆ ಜೊತೆಯಾಗುವುದು ಕಾಣುತ್ತದೆ..

ಪ್ರೊ ಎಂಜಿ ರಂಗಸ್ವಾಮಿಯವರ "ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್ " ಕೃತಿಯ ಬಗೆಗೆ ಬರೆಯುವ ಅಸದ್ ಅವರು ಈ ಕೃತಿಯ ಅಂತಹ್ಸಾರವನ್ನು ತಮ್ಮ ಬರೆಹದಲ್ಲಿ ಹಿಡಿದಿಟ್ಟಿದ್ದಾರೆ .
ಅನುವಾದದ ಬಾಷೆಯ '' ಕಣ್ಣಿಗೆ ಕಟ್ಟುವ ಚಿತ್ರಣದ ನಿರೂಪಣೆಯನ್ನೂ '' ಬುಕಾನನ್ ನ ಸೂಕ್ಷ್ಮಾವಲೋಕನವನ್ನೂ ಇವರು ತಮ್ಮ ಬರೆಹದಲ್ಲಿ ಗುರುತಿಸುತ್ತಾರೆ.
ಅಸದ್ ಅವರು ಈ ಕೃತಿಯಲ್ಲಿ ಕಾವ್ಯ ಮೀಮಾಂಸಕನಂತೆ, ಕಾವ್ಯ ಪಕ್ಷ ಪಾತಿಯಂತೆ , ಕಾವ್ಯ ಶಿಕ್ಷಕನಂತೆ ಕಾವ್ಯದ ಕಾವಲುಗಾರನಂತೆ , ಕಾವ್ಯ ವಿವರಕಾರನಂತೆ ಪ್ರಕಟವಾಗಿದ್ದಾರೆ ಅನಿಸುತ್ತದೆ ..

ಇನ್ನು ಈ ಸಂಕಲನದ ದೋಷಗಳೆಂದು‌ ನನಗೆ ಕಂಡುಬಂದ ಕೆಲ ವಂಶಗಳನ್ನು ನಾನಿಲ್ಲಿ ಹೇಳಬಹುದಾದರೆ , ಮೊದಲನೆಯದಾಗಿ , ಪ್ರತಿಯೊಂದು ಬರಹದ ಮೊದಲು ಕವಿತೆಯ ಸ್ವರೂಪವನ್ನು ವಿವರಿಸುವ ಭಾಗವೊಂದು ಅವಿನಾಭಾವವಾಗಿ ಒಡಗೂಡುವುದು ಕಾಣುತ್ತದೆ . ಹಾಗೆಯೇ ಪ್ರತಿ ಬರಹವೂ 'ಮುಕ್ತಾಯ' 'ಕೊನೆಯ ಮಾತು' ಅಥವಾ 'ಉಪಸಂಹಾರ' ದಂತಹ ಭಾಗಗಳನ್ನು ಒಳಗೊಂಡಿದೆ ಮತ್ತು ಈ ಎರಡು ಭಾಗಗಳು ಅನಿವಾರ್ಯವಾಗಿ ಎಂಬಂತೆ ಈ ಲೇಖಕರ ಕಾವ್ಯ ಕುರಿತ ನೋಟವನ್ನೂ ಮತ್ತು ಸದರಿ ಕವಿತೆಗಳ ಕೊರತೆಗಳನ್ನೂ ವಿವರಿಸುತ್ತವೆ ಕವಿ ಅಸದ್ ಅವರು ಬೇಕೆಂದೇ ಈ format ನಲ್ಲಿ ತಮ್ಮ ಬರೆಹಗಳನ್ನು ಬರೆದಿದ್ದಾರೋ ಅಥವಾ ಬರೆಹಗಳೆ ಸಹಜವಾಗಿ ಈ ಸ್ವರೂಪ ಪಡೆದಿವೆಯೋ ಗೊತ್ತಾಗುವುದಿಲ್ಲ.

ನನ್ನ ದೃಷ್ಟಿಯಲ್ಲಿ , ಸೃಜನ ಶೀಲ ಬರೆಹವೊಂದು ( ವಿಮರ್ಶೆ ಯೂ ಸೃಜನ ಶೀಲ ಬರಹವೆಂದೇ ನನ್ನ ಎಣಿಕೆ ) ಬರಹವು ತನ್ನ ಇಚ್ಛಿತ ರೂಪವನ್ನು ಪಡೆಯಲು ಅನುವು ಮಾಡಿಕೊಡುವುದು ಒಳ್ಳೆಯದು ಅನ್ನಿಸುತ್ತದೆ ‌‌.. ಈ ಸ್ವಾತಂತ್ರ್ಯ ಸಿಕ್ಕಾಗ ಬರಹಕ್ಕೆ ಸ್ವಾಯತ್ತತೆ ಲಬಿಸುತ್ತದೆ ಬರಹದ ಗುಣಮಟ್ಟ ತನ್ನಷ್ಟಕ್ಕೆ ಉತ್ತಮ ವಾಗುತ್ತದೆ.

ಇನ್ನು , ಇಲ್ಲಿನ ಬಾಷೆಗೆ ಸಂಬಂಧಿಸಿ ಹೇಳುವುದಾದಲ್ಲಿ ಇಲ್ಲಿನ ಯಶಸ್ವಿ ಬರಹಗಳಲ್ಲಿ (ಉದಾಹರಣೆಗೆ : ಬಿದಲೋಟಿ ರಂಗನಾಥ್ ಅವರ ಕವಿತೆಯ ವಿಮ ರ್ಶೆ ) ಭಾಷೆಯು ಸುಸಂಬದ್ಧವಾಗಿ ಕಂಡರೆ ಅನೇಕ ಕಡೆ ಗೊಂದಲಕ್ಕೆ ಎಡೆಗೊಡುತ್ತದೆ , ಏನು ಹೇಳುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟಪಡಬೇಕಾಗುತ್ತದೆ ಉದಾಹರಣೆಗೆ, ಈ ಭಾಗವನ್ನು ಪ್ರಾತಿ ನಿಧಿಕವಾಗಿ ಗಮನಿಸಬಹುದು :

" ಕನ್ನಡದ ಕವಿತೆಯೊಂದನ್ನು ಹೇಗೆ ಬರೆಯಬೇಕು ಎಂಬುದರ ಕುರಿತು ಯಾವುದೇ ಕಟ್ಟುಪಾಡು, ನಿಯಮ ಹಾಗೂ ನಿರ್ಬಂ ಧಗಳಿಲ್ಲದಿದ್ದರೂ ಸಹ, ಹೇಗಿದ್ದರೂ ಸರಿ ಎಂದು ಒಪ್ಪಿಕೊಳ್ಳುವುದಕ್ಕಿಂತ ಹೀಗಿದ್ದರೆ ಚಂದ ಎಂದು ಅಪ್ಪಿಕೊಳ್ಳುವುದು ಉತ್ತಮವೆಂದು ನಮ್ಮ ಪೂರ್ವಸೂರಿಗಳು ಕಾವ್ಯಕ್ಕೆ ಸಂಬಂಧಿಸಿದ ಕೆಲವೊಂದು ಲಕ್ಷಣಗಳನ್ನು ಕವಿರಾಜಮಾರ್ಗದಿಂದಾಯಾಗಿ, ಕಾವ್ಯ ಮೀಮಾಂಸಕರನ್ನು ಒಳಗೊಂಡಂತೆ ಪರಂಪರಾಗತವಾಗಿ ವಿವರಿಸಲಾಗಿದೆ. ಕಾಲಾಂತರದಲ್ಲಿ ಕಾವ್ಯದ ರಚನಾ ಕ್ರಮ, ಛಂದಸ್ಸು, ಲಯಗಾರಿಕೆ, ಧಾಟಿ, ವಿಷಯ ವಸ್ತು ಹೀಗೆ ಇತ್ಯಾದಿ ಅಂಶಗಳಿಗೆ ಸಂಬಂಧಿಸಿದಂತೆ ವಿಭಿನ್ನ ಪ್ರಯೋಗಗಳೊಂದಿಗೆ, ವಿಶಿಷ್ಟ ಆಯಾಮಗಳೊಂದಿಗೆ ಅಯಾ ತಲೆಮಾರುಗಳಿಂದ ಗಣನೀಯವಾದ ಬದಲಾವಣೆ ಗಳಿಗೆ ಒಗ್ಗಿಕೊಳ್ಳುವುದರ ಮುಖೇನ ನಿಂತ ನೀರಾಗದೆ ನಿರಂತರವಾಗಿ ತನ್ನ ಶ್ರೇಷ್ಟತೆ ಮತ್ತು ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುತ್ತ ಬಂದಿದೆ. ಈ ಒಂದು ಬದಲಾವಣೆ ಏಕಕಾಲದಲ್ಲಿ ದಿಢೀರ್ ಎಂದು ಆದದ್ದಲ್ಲ ಕಾಲಾಂತರದಲ್ಲಿ ಕಂಬಳಿ ಹುಳುವೊಂದು ಚಿಟ್ಟೆಯಾಗಿ ರೂಪಾಂತರ ಹೊಂದಿದ ಹಾಗೆ, ಸುದೀರ್ಘ ಅವಧಿಯ ಪಲ್ಲಟಗಳಿಗೆ, ಚರ್ಚೆ ಮತ್ತು ವಿಮರ್ಶೆಗಳಿಗೆ ಕ್ರಾಂತಿಕಾರಕವಾಗಿ ಹೊರಹೊಮ್ಮಿದ, ' ಸಂಭವಾಮಿ ಯುಗೆ ಯುಗೆ ' ಎಂಬ ಗೀತೆಯ ವಾಣಿಯಂತೆ ಇಂದಿಗೂ ಜಾರಿಯಲ್ಲಿರುವ ಪ್ರಕ್ರಿಯೆಯಾಗಿದೆ."

ಈ. ಭಾಗ ಏನನ್ನು ಹೇಳುತ್ತಿದೆ ಎಂದು ಅಂದಾಜು ಮಾಡಬಹುದೇ ವಿನಹ , ನಿಖರವಾಗಿ ಈ ಬರೆಹವೇ ತನ್ನನ್ನು ತಾನು ನಿರೂಪಿಸಿಕೊಂಡಿಲ್ಲ‌.

ಈ ತರಹದ , ಆತುರದ ನಿರೂಪಣೆ ಇಲ್ಲಿನ ದೋಷವಾಗಿ ನನಗೆ ಕಾಣುತ್ತದೆ .. ಅದರಲ್ಲೂ‌ ಕಾವ್ಯ ವೊಂದು ಉಂಟು‌ಮಾಡುವ ಪರಿಣಾಮವು ಹೊಸತೂ , ಅಮೂರ್ತವೂ , ವ್ಯಕ್ತಿಗತವೂ ಆಗಿರುವುದರಿಂದ. ಅದನ್ನು ತಕ್ಕ ಬಾಷೆಯಲ್ಲಿ ಹಿಡಿಯುವುದು‌ ಸುಲಭವಲ್ಲ‌.. ಅತುರದಿಂದಲಂತೂ ಅದನ್ನು ಹಿಡಿಯಲಾಗುವುದಿಲ್ಲ.. ಈಗಾಗಲೆ ಬಳಸಿಬಿಟ್ಟ ಪದಗಳಲ್ಲಿ ಪ್ರಯತ್ನಿಸಿದರೆ ನಮ್ಮ ವೈಯಕ್ತಿಕಾನುಭವವನ್ನು ಸೂಕ್ತವಾಗಿ ಹೇಳಲಾಗದೆಹೋಗುತ್ತೇವೆ. ಇಂತಹ ಸವಾಲನ್ನು ಅಸದ್ ಅವರ ಬಾಷೆ ಸೂಕ್ತವಾಗಿ ಎದುರಿಸಬೇಕಾಗಿದೆ‌. ಉತ್ತಮ ಕಾವ್ಯವನ್ನು ಕಾಣಬಲ್ಲ ಮತ್ತು ಅದರ ಹೃದಯವನ್ನು ಮುಟ್ಟಬಲ್ಲ ಶಕ್ತಿ ಅವರಿಗಿರುವ ಕಾರಣ ಇದೇನೂ ಅವರಿಗೆ ಅಸಾದ್ಯವಾದ ಕೆಲಸವಲ್ಲ. ಭಾಷೆಯ ಮಟ್ಟದಲ್ಲಷ್ಟೇ ಎಲ್ಲರಂತೆ ಅವರೂ ತೊಡಕನ್ನೆದುರಿಸುತ್ತಿದ್ದಾರೆ ‌‌‌.

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...