ಕಾಯಕ ನಿಷ್ಠೆ

Date: 06-01-2023

Location: ಬೆಂಗಳೂರು


“ಅವ ಕಾಯಕವ ಮಾಡಿದರೂ ಒಂದೆ ಕಾಯಕವಯ್ಯಾ” ಎನ್ನುವ ಹಾದರ ಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮನ ವಚನವೊಂದು ಕುತೂಹಲಕಾರಿಯಾಗಿದೆ. ಕಾಯಕದಲ್ಲಿ ತಾರತಮ್ಯವಿಲ್ಲವೆಂದು ಈ ವಚನ ಸ್ಪಷ್ಟಪಡಿಸುತ್ತದೆ. ಹೀಗೆ ಶರಣೆಯರು ಕಾಯಕಕ್ಕೆ ಅತ್ಯಂತ ಮಹತ್ವದ ಸ್ಥಾನ ನೀಡಿದ್ದಾರೆ” ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ವಚನಕಾರ್ತಿಯರ ‘ಕಾಯಕ ನಿಷ್ಠೆ’ ಕುರಿತು ತಿಳಿಸಿದ್ದಾರೆ.

“ಕಾಯಕವೇ ಕೈಲಾಸ” ವೆಂಬ ಧ್ಯೇಯವಾಕ್ಯವನ್ನು ನೀಡಿದ ಶರಣರ ಹೆಸರು ಆಯ್ದಕ್ಕಿ ಮಾರಯ್ಯ. ಈತನಿಂದ ಈ ಧ್ಯೇಯವಾಕ್ಯ ಬರಲು ಕಾರಣಳಾದವಳು ಮಾರಯ್ಯನ ಪತ್ನಿ ಆಯ್ದಕ್ಕಿ ಲಕ್ಕಮ್ಮ. ಬಿದ್ದ ಅಕ್ಕಿಯನ್ನು ಆಯ್ದುತಂದು, ಶುದ್ಧಗೊಳಿಸಿ ಪ್ರಸಾದ ಸಿದ್ಧಪಡಿಸಿ ದಾಸೋಹ ಮಾಡುವುದು ಈ ಶರಣ ದಂಪತಿಗಳ ನಿತ್ಯದ ಬದುಕಾಗಿತ್ತು. ಒಂದು ದಿನ ಆಯ್ದಕ್ಕಿ ಮಾರಯ್ಯ, ಬಸವಣ್ಣನವರ ಅಂಗಳದಲ್ಲಿ ರಾಶಿಯಾಗಿ ಬಿದ್ದಿದ್ದ ಅಕ್ಕಿಯನ್ನು ತುಂಬಿಕೊಂಡು ಬಂದ. ಆಗ ಸಿಟ್ಟಿಗೆದ್ದ ಆತನ ಪತ್ನಿ ಲಕ್ಕಮ್ಮ ಆತನಿಗೆ ಕಾಯಕದ ಮಹತ್ವವನ್ನು ತಿಳಿಸಿದಳು.

“ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ?”
- ಆಯ್ಕಕ್ಕಿ ಲಕ್ಕಮ್ಮ (ಸ.ವ. ಸಂ. 5, ವ-710)

ಎಂದು ಪ್ರಶ್ನಿಸಿದ ಲಕ್ಕಮ್ಮ, ಅಕ್ಕಿಹೊತ್ತು ತಂದ ಪತಿಯನ್ನು ಕಂಡು ಸಿಟ್ಟಿಗೆ ಬಂದಳು. ``ಈಸಕ್ಕಿಯಾಸೆ ನಿಮಗೇಕೆ?” ಎಂದು ಪ್ರಶ್ನಿಸಿದಳು. ಒಮ್ಮನವ ಮೀರಿ ಇಮ್ಮನದಲ್ಲಿ ತಂದಿರಿ, ಇದು ಅಮರೇಶ್ವರ ಲಿಂಗಕ್ಕೆ ಸಲ್ಲದ ಬೋನವೆಂದು ಸ್ಪಷ್ಟಪಡಿಸಿದಳು. ಬಸವಣ್ಣನಂಗಳಕ್ಕೆ ಹೋಗಿ ಈ ಅಕ್ಕಿಯನ್ನು ಸುರಿದು ಬನ್ನಿಯೆಂದು ಪತಿಗೆ ಕಟುವಾಗಿ ನುಡಿದಳು. ದೇವರು ಕೊಟ್ಟ ಕಾಯಕವೇ ನಮಗೆ ಸಾಕೆಂದು ಬುದ್ಧಿ ಹೇಳಿದಳು. ಪತ್ನಿಯ ಇಂತಹ ಮಾತುಗಳಿಂದ ಮನಪರಿವರ್ತನೆಗೊಂಡ ಆಯ್ದಕ್ಕಿ ಮಾರಯ್ಯ ಮತ್ತೆ ಆ ಅಕ್ಕಿಯನ್ನೊಯ್ದು ಸುರವಿ ಬರುತ್ತಾನೆ. ಒಬ್ಬ ಸಾಮಾನ್ಯ ಮಹಿಳೆ ಹೇಗೆ ಸತ್ಯಶುದ್ಧ ಬದುಕಿಗೆ ನಿಷ್ಠಳಾಗಿದ್ದಳೆಂಬುದು ಇದರಿಂದ ತಿಳಿದುಬರುತ್ತದೆ. ತಪ್ಪು ಯಾರೇ ಮಾಡಲಿ ಅದು ತಪ್ಪೇ ಎಂದು ಭಾವಿಸಿದ ಲಕ್ಕಮ್ಮ ಪತಿಗೆ ಅಂಜದೆ ಕಾಯಕ ಮೌಲ್ಯವನ್ನು ಎತ್ತಿಹಿಡಿದಳು. ಆಗ ಪತಿಗೂ ಕೂಡ ಈ ಸತ್ಯ ತಿಳಿದು ಲಕ್ಕಮ್ಮನಂತಹ ಸತಿ ದೊರೆತುದುದಕ್ಕೆ ಹೆಮ್ಮೆಪಟ್ಟುಕೊಂಡು ನಿಷ್ಠಾವಂತ ಕಾಯಕಜೀವಿಯಾಗಿ ಬೆಳೆದುನಿಂತ. ಕಾಯಕವೇ ಕೈಲಾಸವೆಂದು ಸಾರಿ ಹೇಳಿದ. ಬಡತನವೆಂಬುದು ಮನಶುದ್ಧವಿಲ್ಲದವನಿಗಿರುತ್ತದೆಯೇ ಹೊರತು ಚಿತ್ತಶುದ್ಧವಿದ್ದವನಿಗಲ್ಲವೆಂದು ಹೇಳಿದ ಆಯ್ದಕ್ಕಿ ಲಕ್ಕಮ್ಮ, ಕಾಯಕ ತತ್ವಕ್ಕೆ ಹೊಸ ಆಯಾಮ ನೀಡಿದಳು.

“ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ
ಭಾವಶುದ್ಧವಾಗಿ ಮಹಾಶರಣರ ತಿಪ್ಪೆಯತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡಬೇಕು ಮಾರಯ್ಯಪ್ರಿಯ ಅಮರೇಶ್ವರ ಲಿಂಗಕ್ಕೆ
ಬೇಗ ಹೋಗು ಮಾರಯ್ಯಾ”
- ಆಯ್ದಕ್ಕಿ ಲಕ್ಕಮ್ಮ (ಸ.ವ.ಸಂ 5, ವ713)
ಆಯ್ದಕ್ಕಿ ಲಕ್ಕಮ್ಮನ ಈ ವಚನವನ್ನು ಓದಿದರೆ, ನಮ್ಮ ಜನಪದ ಮಹಿಳೆಯರು ನೆನಪಾಗುತ್ತಾರೆ. ಜನಪದರು ಕಾಯಕವನ್ನೇ ತಮ್ಮ ಜೀವವೆಂದು ಭಾವಿಸಿದವರು. ಕಾಯಕದಲ್ಲಿ ನೆರವಾಗುವ ಎತ್ತುಗಳನ್ನೇ ನಂದಿಯವತಾರವೆಂದು ನಂಬಿದವರು. ಕಾಯಕ ಮಾಡಬೇಕಾದರೆ ಮೊದಲು ಭಾವಶುದ್ಧವಾಗಿರಬೇಕೆಂಬುದು ಲಕ್ಕಮ್ಮನ ತಿಳುವಳಿಕೆ. ಅಂತೆಯೇ ವೃತ್ತಿಗೂ-ಕಾಯಕಕ್ಕೂ ಬಹುದೊಡ್ಡ ವ್ಯತ್ಯಾಸವಿದೆ. ಭಾವಶುದ್ಧವಿಲ್ಲದ, ಪ್ರಮಾಣಿಕತೆಯಿಲ್ಲದ ವೃತ್ತಿಯನ್ನು ಅವರು ಕಾಯಕವೆಂದು ಪರಿಗಣಿಸಲಿಲ್ಲ.

ಭಕ್ತರಾಗಬೇಕಾದರೆ ಮೊದಲು ಕಾಯಕ ಮಾಡಬೇಕು. ಕಾಯಕವೇ ನಿಜವಾದ ಭಕ್ತಿ, ಅದೇ ನಿಜವಾದ ಪೂಜೆ. ಮಹಾಶರಣರ ತಿಪ್ಪೆಯ ಪಕ್ಕದಲ್ಲಿ ಬಿದ್ದಿರುವ ಅಕ್ಕಿಯನ್ನು ಆಯ್ದು ತಂದು ಭಾವಶುದ್ಧವಾಗಿ ದಾಸೋಹ ಮಾಡಬೇಕು. ಅಂತೆಯೇ ಲಕ್ಕಮ್ಮ “ಬೇಗ ಹೋಗು ಮಾರಯ್ಯಾ” ಎಂದು ಗಂಡನನ್ನು ಕಾಯಕಕ್ಕೆ ಕಳಿಸುತ್ತಾಳೆ. ಶರಣರ ಬದುಕಿನಲ್ಲಿ ಈ ಶರಣೆಯರು ಎಚ್ಚರಿಕೆಯ ಗಂಟೆಯಾಗಿದ್ದರು ಎಂಬುದನ್ನು ಗಮನಿಸಬೇಕು.

ಗಂಡನಾದವ ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳುವ, ಅತಿಯಾಸೆಗೊಳಗಾದಾಗ ಸರಿದಾರಿಗೆ ತರುವ ಬಹುದೊಡ್ಡ ಜವಾಬ್ದಾರಿಯನ್ನು ಶಿವಶರಣೆಯರು ನಿರ್ವಹಿಸಿದ್ದಾರೆ. ಅಂತಹ ಶರಣೆಯರಲ್ಲಿ ಲಕ್ಕಮ್ಮನ ಹೆಸರು ಪ್ರಮುಖವಾದುದು.

ಕಾಯಕವೆಂದರೆ ಬರೀ ಕೆಲಸವಲ್ಲ. ಕೇವಲ ಹಣ ಗಳಿಸಲು ಮಾಡುವ ದಂಧೆಯಲ್ಲ. ಕಾಯಕವೆಂದರೆ, ಕಾಯ ಶುದ್ಧಿಗೊಳಿಸುವ ಕ್ರಿಯೆ, ಮನಶುದ್ಧಿಗೊಳಿಸುವ ಮಂತ್ರ. ಮನ ಮತ್ತು ಕಾಯ ಎರಡನ್ನೂ ಚಲನಶೀಲಗೊಳಿಸುವ ಶಕ್ತಿ ಕಾಯಕಕ್ಕಿದೆ. ಕಾಯಕದಿಂದ ಬಂದ ಹಣವನ್ನು ಸ್ವಾರ್ಥಕ್ಕಾಗಿ ಕೇವಲ ತನಗಾಗಿ ಬಳಸದೆ ದಾಸೋಹದ ಮೂಲಕ ಸಮುದಾಯಕ್ಕಾಗಿ ಸಮಾಜಕ್ಕಾಗಿ ಸದುಪಯೋಗವಾಗುವಂತೆ ಮಾಡುವುದೇ ಕಾಯಕದ ನಿಜವಾದ ಧ್ಯೇಯ. “ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು ದಾಸೋಹವ ಮಾಡಬಹುದೆ?” ಎಂದು ಕೇಳುವ ಆಯ್ದಕ್ಕಿ ಲಕ್ಕಮ್ಮ, ವಚನ ಚಳುವಳಿಯ ಸಂದರ್ಭದಲ್ಲಿ ಕಾಯಕತತ್ವವನ್ನೆತ್ತಿ ಹಿಡಿದ ಮಹಾ ಸಾಧಕಿಯಾಗಿದ್ದಾಳೆ. ಪತಿಯಷ್ಟೇ ಏಕೆ ಪರಮಾತ್ಮ ತಪ್ಪು ಮಾಡಿದರೂ ಈ ಶರಣೆಯರು ಸುಮ್ಮನಿರುವುದಿಲ್ಲ. ಏಕೆಂದು ನೇರವಾಗಿ ಪ್ರಶ್ನಿಸುತ್ತಾರೆ. “ನಿಮ್ಮ ಹಿರಿಯತನಕ್ಕಿದು ಪಥವೆ,

ಬಲ್ಲಾಳನ ವಧುವ ಬೇಡುವುದು? ನಿಮ್ಮ ಗುರುತನಕ್ಕಿದು ಪಥವೆ, ನಾರಿಯರಿಬ್ಬರೊಡನೆ ಇಪ್ಪುದು?” ಎಂದು ನೇರವಾಗಿ ಶಿವನನ್ನೇ ಪ್ರಶ್ನಿಸಿದ ಸತ್ಯಕ್ಕನೆಂಬ ಶರಣೆ, ಸತ್ಯಶುದ್ಧ ಕಾಯಕ ಮಾಡುವಲ್ಲಿ ಹೆಸರಾಗಿದ್ದಾಳೆ. ಕಸಗುಡಿಸುವ ಕಾಯಕದ ಈ ಶರಣೆ, ಹೊರಗಿನ ಕಸವನ್ನು ತೆಗೆದು ಸ್ವಚ್ಛಗೊಳಿಸಿದಂತೆ, ಮನುಷ್ಯರ ಒಳಗಿನ ಕಸವನ್ನೂ ತೆಗೆದು ಶುದ್ಧಿಗೊಳಿಸಿದ್ದಾಳೆ.

ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಕೂಡ ನಿಷ್ಠುರ ಸ್ವಭಾವದ ಶರಣೆ. ಈಕೆ ತಪ್ಪು ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ತನ್ನ ವಚನಗಳಲ್ಲಿ ಸಮಾಜ ವ್ಯವಸ್ಥೆಯ ಅಸಮಾನತೆಯ ಬಗೆಗೆ ಬಹುಮಹತ್ವದ ಪ್ರಶ್ನೆಗಳನ್ನೆತ್ತಿದ್ದಾಳೆ.

“ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ
ಸತ್ಯ ಶುದ್ಧವಿಲ್ಲದುದು ಕಾಯಕವಲ್ಲ”
- ಕಾಳವ್ವೆ (ಸ.ವ.ಸಂ. 5, ವ-735)

ಹೀಗೆಂದು ಸ್ಪಷ್ಟಪಡಿಸಿದ ಕಾಳವ್ವೆ, ಆಸೆ-ಅತಿಯಾಸೆಯಿಂದಲೇ ಮನುಷ್ಯ ದಾರಿ ತಪ್ಪುತ್ತಾನೆ. ಮೋಸದ ಹಣದಿಂದ ದೊಡ್ಡವನೆನಿಸಿಕೊಳ್ಳುತ್ತಾನೆ. ಆದರೆ ಶರಣೆಯರು ಇಂತಹ ವ್ಯಕ್ತಿಗಳೊಂದಿಗೆ ನೇರವಾಗಿ ಪ್ರತಿಭಟನೆಗಿಳಿದಿದ್ದಾರೆ. “ಆಸೆಯೆಂಬುದು ಭವದ ಬೀಜ”ವೆನ್ನುವ ಕಾಳವ್ವೆಯ ಈ ನುಡಿ “ಆಸೆಯೇ ದುಃಖಕ್ಕೆ ಕಾರಣ”ವೆಂಬ ಬುದ್ಧನ ಮಾತನ್ನು ನೆನಪಿಸುತ್ತದೆ. ಶಿವಶರಣೆಯರು ಕಾಯಕದಲ್ಲಿ ತಾರತಮ್ಯವಿಲ್ಲವೆಂದು ಸ್ಪಷ್ಟಪಡಿಸಿದರು. ಶರಣರಿಗಿಂತ ಮೊದಲಿದ್ದ ವ್ಯವಸ್ಥೆಯಲ್ಲಿ ವೃತ್ತಿಭೇದಗಳಿದ್ದವು. ಚಾತುರ್ವರ್ಣ ವ್ಯವಸ್ಥೆಯ ಪ್ರಕಾರ ಇಂತಹವರು ಇಂತಹ ವೃತ್ತಿಗಳನ್ನೇ ಮಾಡಬೇಕೆಂಬ ನಿಯಮಗಳಿದ್ದವು. ಆದರೆ ಶರಣರು ವೃತ್ತಿಗಳಲ್ಲಿದ್ದ ಭೇದಗಳನ್ನು ಹೊಡೆದುಹಾಕಿ, ತಾರತಮ್ಯ ನೀತಿಯನ್ನು ತಳ್ಳಿ ಹಾಕಿ, ವೃತ್ತಿಗೌರವ ಹೆಚ್ಚಿಸಿದರು. ಆಗ ವೃತ್ತಿಗಳು ಕಾಯಕಗಳಾದವು. ತನಗಿಷ್ಟವಾದ ಯಾವುದಾದರೂ ಕಾಯಕವಾಗಿರಲಿ, ಅದರಲ್ಲಿ ನಿಷ್ಠೆ-ಪ್ರಾಮಾಣಿಕತೆ ಇರಬೇಕೆಂದು ತಿಳಿಸಿ ಹೇಳಿದರು. ಅಕ್ಕಮ್ಮನ ಒಂದು ವಚನದಲ್ಲಿ ಇದಕ್ಕೆ ಸಂಬಂಧಿಸಿದ ವಿವರವನ್ನು ಗಮನಿಸಬಹುದಾಗಿದೆ.

“ಅಸಿಮಸಿ ಕೃಷಿ ವಾಣಿಜ್ಯ ಮುಂತಾದ ಕಾಯಕವ ಮಾಡಿ
ಭಕ್ತರ ಪಡುಗ, ಪಾದತ್ರಾಣ, ಪಹರಿ, ಬಾಗಿಲು, ಬೊಕ್ಕಸ, ಬಿಯಗ ಮುಂತಾದ ಕಾಯಕವಂ ಮಾಡಿಕೊಂಡು
ವ್ರತಕ್ಕೆ ಊಣೆಯವಿಲ್ಲದೆ ಮಾಡುವ ಕೃತ್ಯಕ್ಕೆ ಕಡೆಯಾಗದೆ ಈ ಭಕ್ತನ ಅಂಗಳ ಅವಿಮುಕ್ತಿ ಕ್ಷೇತ್ರ,
ಆತನ ಮನೆಯ ಆಚಾರವೆ ಪ್ರಾಣವಾದ ರಾಮೇಶ್ವರ ಲಿಂಗದಾಶ್ರಯ”

- ಅಕ್ಕಮ್ಮ (ಸ.ವ.ಸಂ.5, ವ-445)

ಅಕ್ಕಮ್ಮನ ಈ ವಚನಗಳಲ್ಲಿ ಪ್ರಮುಖ ವಿಚಾರಗಳು ಕೂಡಿಕೊಂಡಿವೆ. ಕೃಷಿ- ವಾಣಿಜ್ಯ-ವ್ಯಾಪಾರ ಯಾವುದೇ ಕಾಯಕ ಮಾಡಿದರೂ ಅದರಲ್ಲಿ ಒಂದು ನೀತಿಯಿರ ಬೇಕೆಂಬುದನ್ನು ವಚನಕಾರ್ತಿ ಸ್ಪಷ್ಟಪಡಿಸಿದ್ದಾಳೆ. ಹಾಗೆ ನಿಷ್ಠೆಯಿಂದ, ನೀತಿಯಿಂದ ಕಾಯಕ ಮಾಡುವವನೇ ನಿಜವಾದ ಭಕ್ತ. ಅಂತಹ ಭಕ್ತನ ಅಂಗಳವೇ ಅವಿಮುಕ್ತಿ ಕ್ಷೇತ್ರ, ಅಂತಹ ಭಕ್ತನ ಮನೆಯೇ ನಿಜವಾದ ಆಶ್ರಯವೆಂದು ಹೇಳುವಲ್ಲಿ ಕಾಯಕದ ಮಹತ್ವವನ್ನು ವಿವರಿಸಲಾಗಿದೆ. ಶಿವಶರಣೆಯರು ಕಾಯಕದಲ್ಲಿಯೇ ಪೂಜೆಯಿದೆ, ಕಾಯಕದಲ್ಲಿಯೇ ದೇವರಿದ್ದಾನೆಂದು ಸ್ಪಷ್ಟಪಡಿಸಿದರು.

ಕದಿರ ರೆಮ್ಮವ್ವೆಯೆಂಬ ಶರಣೆ ತನ್ನ ವೃತ್ತಿಪ್ರತಿಮೆಯ ಮೂಲಕ ಕಾಯಕದ ಮಹತ್ವವನ್ನು ಸಾರಿದ್ದಾಳೆ. ತಾನು ತಿರುಹುವ ರಾಟೆಯ ಬಗೆಗೆ ಈ ಶರಣೆ ಹೇಳಿರುವ ವಿಷಯಗಳು ಗಮನ ಸೆಳೆಯತ್ತವೆ. ರಾಟೆಯ ಕೆಳಗಡೆಯಿರುವ ಹಲಗೆಯೇ ಬ್ರಹ್ಮ, ಅದರ ತೋರಣವೇ ವಿಷ್ಣು, ನಿಂತ ಬೊಂಬೆಯೇ ಮಹಾರುದ್ರ. ಹಾಗೆ ಇಂತಹ ರಾಟೆಯ ಪ್ರತಿಮೆ ಬೆಳೆಯುತ್ತ ಹೋಗುತ್ತದೆ.

“ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ
ಸುತ್ತಿತ್ತು ನೂಲು, ಕದಿರು ತುಂಬಿತ್ತು.”

- ಕದಿರ ರೆಮ್ಮವ್ವೆ (ಸ.ವ.ಸಂ. 5 ವ-747)

ಎನ್ನುವ ರೆಮ್ಮವ್ವೆಯ ವಚನದಲ್ಲಿ ಅನುಭಾವದ ಮಾರ್ಗವನ್ನು ಕಾಯಕದ ಮೂಲಕ ಕಂಡುಕೊಳ್ಳುವ ಪ್ರಯತ್ನವಿದೆ. ನೂಲು ತೆಗೆಯುವ ಕಡ್ಡಿಗೆ ಕದಿರು ಎಂಬ ಹೆಸರಿದೆ. ರೆಮ್ಮವ್ವೆಯ ಪ್ರಕಾರ ಇಲ್ಲಿ ಅರಿವೇ ಕದಿರು, ಭಕ್ತಿಯೇ ಕೈ. ಹೀಗೆ ವೃತ್ತಿಪ್ರತಿಮೆಯ ಮೂಲಕ ಆಧ್ಯಾತ್ಮದೆತ್ತರವನ್ನು ಕಂಡುಕೊಂಡ ಅನೇಕ ಶಿವಶರಣೆಯರಿದ್ದಾರೆ. ಅವರಿಗೆ ಆಧ್ಯಾತ್ಮ ಕಾಯಕವೆಂಬುವುಗಳು ಬೇರೆ ಬೇರೆಯಾಗಿರಲಿಲ್ಲ. ಇಹಪರಗಳು ಭಿನ್ನಭಿನ್ನವಾಗಿರಲಿಲ್ಲ. ಅಂತೆಯೇ ಅವರಿಗೆ ಲೌಕಿಕವೇ ಅಲೌಕಿಕವಾಗಿತ್ತು. ಕಾಯಕವೇ ಕೈಲಾಸವಾಗಿತ್ತು. ಕಾಯಕ ತಪ್ಪಿದರೆ ಎಂದಿಗೂ ಸೈರಿಸಬಾರದೆಂದು ಸ್ಪಷ್ಟಪಡಿಸಿರುವ ಬಾಚಿ ಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆಯ ವಚನ ಆಲಸಿಗಳಿಗೆ ಚಾಟಿ ಏಟಿನಂತಿದೆ.

“ಅವ ಕಾಯಕವ ಮಾಡಿದರೂ ಒಂದೆ ಕಾಯಕವಯ್ಯಾ” ಎನ್ನುವ ಹಾದರ ಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮನ ವಚನವೊಂದು ಕುತೂಹಲಕಾರಿಯಾಗಿದೆ. ಕಾಯಕದಲ್ಲಿ ತಾರತಮ್ಯವಿಲ್ಲವೆಂದು ಈ ವಚನ ಸ್ಪಷ್ಟಪಡಿಸುತ್ತದೆ. ಹೀಗೆ ಶರಣೆಯರು ಕಾಯಕಕ್ಕೆ ಅತ್ಯಂತ ಮಹತ್ವದ ಸ್ಥಾನ ನೀಡಿದ್ದಾರೆ. ಇವರ ಕಾಲಕ್ಕೆ ಕಾಯಕವೇ ಪೂಜೆಯಾಗಿತ್ತು.

ಈ ಅಂಕಣದ ಹಿಂದಿನ ಬರೆಹಗಳು:
ಅರಿವು-ಆಚಾರ
ತ್ರಿಪುರಾಂತಕ ಕೆರೆಯ ನಿರ್ಮಾಣ ಕಾರ್ಯದಲ್ಲಿ ಶಿವಶರಣೆಯರು
ಸಾಮಾಜಿಕ ಪ್ರಜ್ಞೆ
ಆಗಮ ಮೋಹಿನಿ
ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ
ಬೆಡಗಿನ ಭಾಷೆಯಲ್ಲಿ ವಚನಕಾರ್ತಿಯರು
ವಿಡಂಬನೆ
ಶರಣರ ಸಮಕಾಲೀನ ವಚನಕಾರ್ತಿ ‘ಸೂಳೆ ಸಂಕವ್ವೆ’
ಜಾತ್ಯಾತೀತ ಮನೋಭಾವ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದ


MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...