ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು

Date: 25-07-2022

Location: ಬೆಂಗಳೂರು


“ಕಾಯಕವೆಂದರೆ ಕೇವಲ ಕೆಲಸವಲ್ಲ, ಹಣ ಗಳಿಕೆಗಾಗಿರುವ ಮಾರ್ಗವಲ್ಲವೆಂಬುದು ಶರಣರ ವಚನಗಳಿಂದ ಸ್ಪಷ್ಟವಾಗುತ್ತದೆ. ಕಾಯಕದಲ್ಲಿ ಕೇವಲ ದುಡಿಮೆಯಿಲ್ಲ, ಅದರಲ್ಲಿ ಧರ್ಮವಿದೆ” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಸಾಮಾಜಿಕ ಸಿದ್ಧಾಂತಗಳು ಅಂಕಣದಲ್ಲಿ ಶರಣರ ಕಾಲದ ಮಹಿಳೆಯರ ಕಾಯಕಗಳ ಬಗ್ಗೆ ವಿವರಿಸಿದ್ದಾರೆ

6. ಮಹಿಳೆಯರ ಕಾಯಕಗಳು

ಮಹಿಳೆಯರ ಕಾಯಕಗಳೆಂದು ಪ್ರತ್ಯೇಕಿಸದಿದ್ದರೂ, ಮಹಿಳೆಯರಿಗೇ ಆದ ಕಾಯಕಗಳಿವೆ. ಆ ಕಾಲದಲ್ಲಿ ಅವುಗಳನ್ನು ಪುರುಷರು ಮಾಡುತ್ತಿರಲಿಲ್ಲ. ಮಹಿಳೆ ತನ್ನ ಅಡುಗೆ ಕಾಯಕದ ಜತೆಗೆ ಇತರ ಹೊರಗಿನ ಕಾಯಕಗಳನ್ನು ಮಾಡುತ್ತಿದ್ದಳು. ಮನೆಯ ಒಳಗೂ, ಹೊರಗೂ ಸತತ ಕೆಲಸ ಮಾಡುತ್ತಿರುವ ಸೇವೆಗೆ ಬೆಲೆಕಟ್ಟಲಿಕ್ಕಾಗುವುದಿಲ್ಲ.

ಗೃಹಿಣಿ ಅಡಿಗೆ ಮಾಡುವುದು ಒಂದು ಕಾಯಕವಾಗದಿದ್ದರೂ, ಅಡುಗೆಯನ್ನೇ ವೃತ್ತಿಯನ್ನಾಗಿಸಿಕೊಂಡು, ದಿನನಿತ್ಯ ಬೇರೆಯವರ ಮನೆಗೆ ಹೋಗಿ ಮಾಡುವ ಅಡುಗೆ ಕೆಲಸವನ್ನು ಕಾಯಕವೆಂದು ಪರಿಣಿಸಲಾಗಿತ್ತು. ಅಂದು ಇಂದಿನ ಹಾಗೆ ಗ್ಯಾಸ್ ಬಳಕೆ ಇರಲಿಲ್ಲ, ಕರೆಂಟ್ ಒಲೆಗಳು ಇರಲಿಲ್ಲ. ಕಟ್ಟಿಗೆಯನ್ನುರಿಸಿಯೇ ಅಡುಗೆ ಮಾಡಬೇಕಾಗುತಿತ್ತು. ದಿನನಿತ್ಯ ಅಡುಗೆ ಮನೆಯಲ್ಲಿ ಮಹಿಳೆಯರು ಹೊಗೆಯ ನಡುವೆಯೇ ಬದುಕುತ್ತಿದ್ದರು.

ಶರಣರ ವಚನಗಳಲ್ಲಿ ವಿವಿಧ ಅಡುಗೆಗಳ ಬಗೆಗೆ, ಅಡುಗೆ ತಯಾರಿಸುತ್ತಿದ್ದ ವಿಧಾನಗಳ ಬಗೆಗೆ ಪ್ರಸ್ತಾಪವಿದೆ. ಅಡುಗೆ ಮಾಡಿ ಕೂಲಿ ಪಡೆಯುತ್ತಿದ್ದವರಿಗೆ ಅಡುಗೂಲಿಕಾರರೆಂದು ಏಲೇಶ್ವರ ಕೇತಯ್ಯ ತನ್ನ ವಚನದಲ್ಲಿ ಕರೆದಿದ್ದಾನೆ. ಶರಣರ ಕಾಲದಲ್ಲಿ ಅನೇಕ ಮಹಿಳೆಯರು ಅಡುಗೆ ಕಾರ್ಯದಲ್ಲಿ ತೊಡಗಿರುವುದು ಸಸ್ಪಷ್ಟವಾಗುತ್ತದೆ. ಉಳಿದಂತೆ ಮಹಿಳೆಯು, ಪುರುಷ ಮಾಡುವ ಎಲ್ಲ ಕಾಯಕಗಳಲ್ಲೂ ಭಾಗವಹಿಸುತ್ತಿದ್ದಳು. ಅಂದು ಪುರುಷಪ್ರಧಾನ ವ್ಯವಸ್ಥೆ ಇದ್ದುದರಿಂದ ಮಹಿಳೆಯ ಶ್ರಮಕ್ಕೆ ಅಷ್ಟೊಂದು ಬೆಲೆಯಿರಲಿಲ್ಲ. ಕೂಲಿಕಾಯಕ ಮಾಡುತ್ತಿದ್ದ ಗಂಡಾಳಿಗೆ ಒಂದು ಕೂಲಿ, ಹೆಣ್ಣಾಳಿಗೆ ಒಂದು ಕೂಲಿ ಇತ್ತು. ಗಂಡಾಳಿಗೆ ಹೆಚ್ಚಿನ ಕೂಲಿಯಿದ್ದರೆ, ಹೆಣ್ಣಾಳಿಗೆ ಕಡಿಮೆ ಕೂಲಿ ಕೊಡಲಾಗುತ್ತಿತ್ತು.

ಶರಣೆಯರು ಶರಣರು ಸರಿಸಮಾನವಾಗಿ ದುಡಿದರು. ಅನೇಕ ಶರಣೆಯರು ಮಾಡುತ್ತಿದ್ದ ಕಾಯಕಗಳ ಬಗೆಗೆ ವಚನಗಳಲ್ಲಿ ಉಲ್ಲೇಖಗಳಿವೆ. ಮೀನುಗಾರಿಕೆ ಕಾಯಕ ಮಾಡುತ್ತಿದ್ದ ಗಾಳದ ಕಣ್ಣಪ್ಪನ ಪತ್ನಿ ರೇಚವ್ವೆ ಪತಿಗೆ ಸಮಸಮವಾಗಿ ಕೆಲಸ ಮಾಡುತ್ತಿದ್ದಳು. ಕಣ್ಣಪ್ಪ ಮೀನುಗಳನ್ನು ಹಿಡಿದುಕೊಂಡು ಬಂದರೆ, ಆ ಮೀನುಗಳನ್ನು ಸ್ವಚ್ಛಗೊಳಿಸುವುದು ಅವುಗಳಿಗೆ ಉಪ್ಪು ಹಚ್ಚುವುದು, ಮೀನು ಕೆಡದಂತೆ ನೋಡಿಕೊಳ್ಳುವುದು, ಮೀನುಗಳನ್ನು ಮಾರಾಟ ಮಾಡುವುದು ಈ ಎಲ್ಲ ಕಾರ್ಯಗಳನ್ನು ಶರಣೆ ರೇಚವ್ವೆಯೇ ಮಾಡುತ್ತಿದ್ದಳು. ಹೀಗೆ ಪ್ರತಿಯೊಂದು ಕಾಯಕದಲ್ಲಿಯೂ ಪತಿಯೊಂದಿಗೆ ಸತಿ ಕೆಲಸ ಮಾಡುತ್ತಿದ್ದಳು. ಜೇಡರ ದಾಸಿಮಯ್ಯನ ಪತ್ನಿ ದುಗ್ಗಳೆಯು ಬಟ್ಟೆ ನೇಯ್ಗೆಯ ಸಂದರ್ಭದಲ್ಲಿ ಪತಿಗೆ ಸರಿಸಮಾನವಾಗಿ ನಿಂತುಕೊಂಡು ನೇಯ್ಗೆ ಕೆಲಸ ಮಾಡುತ್ತಿದ್ದಳು. ಪಶುಪಾಲನೆ ಮತ್ತು ಕೃಷಿಕಾಯಕಗಳಲ್ಲಿ ಮಹಿಳೆಯರು ತಮ್ಮ ಪತಿಯೊಂದಿಗೆ ಕೂಡಿಕೊಂಡು ಸರಿಸಮಾನ ಕೆಲಸಮಾಡುತ್ತಿದ್ದರು. ಶಿವಶರಣೆಯರಲ್ಲಿ ಸತ್ಯಕ್ಕ ಶರಣರ ಮನೆಯ ಕಸ ಗುಡಿಸುವ ಕಾಯಕ ಮಾಡುತ್ತಿದ್ದರೆ, ಶರಣೆ ಸಾಯಿದೇವಿ ಶರಣರ ಮನೆಮುಂದೆ ರಂಗವಲ್ಲಿ ಬಿಡಿಸುವ ಕಾಯಕ ಮಾಡುತ್ತಿದ್ದಳು. ಕೊಟ್ಟಣದ ಸೋಮವ್ವೆ ಭತ್ತಕುಟ್ಟುವ ಕಾಯಕ ಮಾಡುತ್ತಿದ್ದಳು.

ಆಯ್ದಕ್ಕಿ ಲಕ್ಕಮ್ಮ ಪತಿ ಮಾರಯ್ಯ ತಂದ ಅಕ್ಕಿಯನ್ನು ಹಸನ ಮಾಡುತ್ತಿದ್ದಳು. ಆ ಮೂಲಕ ಆಯ್ದಕ್ಕಿ ಕಾಯಕಕ್ಕೆ ಸಹಕಾರಿಯಾಗಿದ್ದಳು. ಕದಿರಕಾಯಕದ ಕಾಳವ್ವೆ, ಕದಿರ ರೆಮ್ಮವ್ವೆ. ಈ ಮೊದಲಾದ ಶರಣೆಯರು ನೆಯ್ಗೆ ಕಾಯಕದಲ್ಲಿ ನಿರತರಾಗಿರುತ್ತಿದ್ದರು ಕಾಲಕಣ್ಣೆಯ ಕಾಮಮ್ಮ ಕಣ್ಣೆ (ಹಗ್ಗ)ಗಳನ್ನು ಸಿದ್ದಪಡಿಸುತ್ತಿದ್ದಳು. ಕೊಟ್ಟಣದ ಸೋಮಮ್ಮ ಶರಣರ ಮನೆಯ ಧಾನ್ಯಗಳನ್ನು ಕುಟ್ಟುವ ಕಾಯಕ ಮಾಡುತ್ತಿದ್ದಳು. ಗಂಗಾಂಬಿಕೆ-ನೀಲಾಂಬಿಕೆಯರು ಪತಿಯ ಪ್ರತಿಯೊಂದು ಕಾರ್ಯದಲ್ಲಿ ಸಹಾಯಕರಾಗಿ ನಿಂತುಕೊಂಡು ಗೃಹಕೃತ್ಯದ ಕಾಯಕ ಮಾಡುತ್ತಿದ್ದರು. ಕುಂಬಾರ ಗುಂಡಯ್ಯನ ಪತ್ನಿ ಕೇತಲೆ ಕುಂಬಾರ ಕಾಯಕದಲ್ಲಿ ಪತಿಗೆ ಸಹಾಯಕಳಾಗಿ ಕೆಲಸಮಾಡುತ್ತಿದ್ದಳು. ಗೊಗ್ಗೆವ್ವೆ ಶಿವಶರಣರ ಮನೆಗೆ ಧೂಪಹಾಕುವ ಕಾಯಕ ಮಾಡುತ್ತಿದ್ದಳು. ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆಯು ಪತಿಯ ಕಾಯಕದಲ್ಲಿ ಸಹಾಯಕಳಾಗಿ ತೊಡಗಿಸಿಕೊಂಡಿದ್ದಳು. ಮೋಳಿಗೆ ಮಹಾದೇವಿ ಗಂಡ ಮಾರಯ್ಯನೊಂದಿಗೆ ಕಟ್ಟಿಗೆ ತಂದು ಮಾರುವ ಕಾಯಕ ಮಾಡುತ್ತಿದ್ದಳು. ರೇವಣ್ಣ ಸಿದ್ಧಯ್ಯಗಳ ಪುಣ್ಯಸ್ತ್ರೀ ರೇಕಮ್ಮ ಹೂವಿನದಂಡೆ ಕಟ್ಟುವ ಕಾಯಕವ ಮಾಡುತ್ತಿದ್ದಳು. ಮೊದಲು ಸೂಳೆಗಾರಿಕೆ ಮಾಡುತ್ತಿದ್ದ ಸೂಳೆಸಂಕವ್ವೆ ಶರಣೆಯಾದ ನಂತರ ಆ ವೃತ್ತಿಯನ್ನು ಬಿಟ್ಟು ಕೂಲಿಕಾಯಕವನ್ನು ಮಾಡುತ್ತಿದ್ದಳು. ಹೀಗೆ ಶರಣೆಯರು ಒಂದಿಲ್ಲೊಂದು ಕಾಯಕದಲ್ಲಿ ನಿರತರಾಗಿರುತ್ತಿದ್ದರು. ``ಆವ ಕಾಯಕವ ಮಾಡಿದಡೂ ಒಂದೆ ಕಾಯಕವಯ್ಯ'' ಎಂದು ಹಾದರ ಕಾಯಕದ ಗಂಗಮ್ಮ ಹೇಳಿದ್ದಾಳೆ. ಶರಣರ ಕಾಲಕ್ಕೆ ವೃತ್ತಿತಾರತಮ್ಯ ಹೊರಟುಹೋಗಿ ಎಲ್ಲ ಕಾಯಕಗಳಿಗೂ ಗೌರವಸಿಗುತ್ತಿತ್ತೆಂದು ತಿಳಿದುಬರುತ್ತದೆ.

ಬೇರೆಯವರ ಮನೆಯಲ್ಲಿ ಅಡುಗೆ ತಯಾರಿಸುತ್ತಿದ್ದ ಅಡುಗೆ ಕಾಯಕಕ್ಕೆ ಲಂದಣಗಾರಿಕೆ ಎಂಬ ಹೆಸರೂ ಇದೆ. ಹೀಗೆ ಅಡುಗೆ ಕೆಲಸ ಮಾಡುತ್ತಿದ್ದ ಮಹಿಳೆಯರನ್ನು ಲಂದಣಗಿತ್ತಿಯರೆಂದು ಕರೆಯಲಾಗುತ್ತಿತ್ತು. ಶರಣರ ಮನೆಗೆ ಹೋಗಿ ದೋಸೆ ಮಾಡಿಕೊಡುವ ಶರಣೆ ಪಿಟ್ಟವ್ವೆ ಲಂದಣಗಾರಿಕೆ ವೃತ್ತಿಯಲ್ಲಿ ನೈಪುಣ್ಯತೆ ಪಡೆದಿದ್ದಳೆಂದು ತಿಳಿದುಬರುತ್ತದೆ. ಸೂಲಗಿತ್ತಿ ಕಾಯಕ ಮಾತ್ರ ಕೇವಲ ಮಹಿಳೆಗೆ ಮೀಸಲಾದ ಕಾಯಕವಾಗಿತ್ತು. ಏಲೇಶ್ವರ ಕೇತಯ್ಯನ ವಚನದಲ್ಲಿ ಸೂಲಗಿತ್ತಿಯ ಪ್ರಸ್ತಾಪ ಬರುತ್ತದೆ. ಸೂಲಗಿತ್ತಿ ಕಾಯಕ ಮಾಡುತ್ತಿದ್ದವರು ಅನುಭವ ಹೊಂದಿದ್ದ ಹಿರಿಯ ಮಹಿಳೆಯರಾಗಿರುತ್ತಿದ್ದರು. ಸಾಮಾನ್ಯವಾಗಿ ಕೆಳವರ್ಗದ ಮಹಿಳೆಯರು ಈ ಕಾಯಕ ಮಾಡುತ್ತಿದ್ದರು. ಶರಣರ ಕಾಲಕ್ಕೆ ಈ ಕಾಯಕಕ್ಕೆ ಮನ್ನಣೆ ಸಿಕ್ಕಿತು. ಸೂಲಗಿತ್ತಿಯರನ್ನು ಗೌರವದಿಂದ ಕಾಣತೊಡಗಿದರು.

12ನೇ ಶತಮಾನದ ಪೂರ್ವದಲ್ಲಿ ಸೂಳೆಗಾರಿಕೆ ವೃತ್ತಿ ಮುಖ್ಯ ಕಸುಬಾಗಿತ್ತು. ಶರಣರು ಬಂದ ನಂತರ ಸೂಳೆಗಾರಿಕೆಯನ್ನು ನಿಷೇಧಿಸಿದರು. ಸೂಳೆಗಾರಿಕೆಯನ್ನು ಮಾಡುತ್ತಿದ್ದ ಸೂಳೆಸಂಕವ್ವೆ ಮೊದಲಾದ ಶರಣೆಯರು ಬೇರೆ ಕಾಯಕಗಳನ್ನು ಹುಡುಕಿಕೊಂಡರು. ಈ ವೃತ್ತಿಯಲ್ಲಿದ್ದ ಕೆಲವು ಮಹಿಳೆಯರು ಶರಣರನ್ನು ಮದುವೆಯಾದ ನಂತರ ಪುಣ್ಯಸ್ತ್ರೀಯರೆಂದು ಕರೆಯಲ್ಪಟ್ಟರು.

ಶರಣರ ಕಾಲಕ್ಕೆ ಕಾಯಕದ ಮೂಲಕ ಕ್ರಾಂತಿಯೇ ನಡೆಯಿತು. ಸಮಾಜವ್ಯವಸ್ಥೆಯಲ್ಲಿ ಹೊಲೆಯ, ಮಾದಿಗ, ಡೋಹರ, ಸಮಗಾರ ಎಂದು ಕರೆಯಿಸಿಕೊಳ್ಳುತ್ತಿದ್ದ ಅಸ್ಪೃಶ್ಯರು ಅತ್ಯಂತ ಅವಮಾನಕ್ಕೊಳಗಾಗಿದ್ದರು. ಶರಣರ ಕಾಲಕ್ಕೆ ಇವರು ಮಾಡುವ ವೃತ್ತಿಗಳೆಲ್ಲ ಕಾಯಕಗಳಾಗಿ ಬದಲಾದವು. ಆಗ ಈ ಅಸ್ಪೃಶ್ಯ ಜನಾಂಗಗಳಿಗೆ ವೃತ್ತಿಗೌರವ ದೊರೆತು ಇವರನ್ನು ಸಮಾನತೆಯಿಂದ ಕಾಣುವ ದೃಷ್ಠಿಕೋನ ಬೆಳೆಯಿತು. ಅದೇ ರೀತಿ ಶರಣರು ಬರುವುದಕ್ಕಿಂತ ಮೊದಲು ಸೂಳೆಯರೆಂದು ಕರೆಯಿಸಿಕೊಳ್ಳುತ್ತಿದ್ದವರು, ಶರಣರ ಕಾಲಕ್ಕೆ ಪುಣ್ಯಸ್ತ್ರೀಯರಾಗಿ ಅನೇಕ ಶರಣರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೀಗೆ ಶರಣರ ಈ ಕಾಯಕಗಳು ಅವಮಾನಿತರಿಗೆ, ಶೋಷಿತರಿಗೆ, ಅಸ್ಪೃಶ್ಯರಿಗೆ, ಕೆಳವರ್ಗದ ಮಹಿಳೆಯರಿಗೆ ಕ್ರಾಂತಿಕಾರಕವಾಗಿ ಕಂಡವು. ಅವರ ಬದುಕಿನ ದಿಕ್ಕನ್ನೇ ಬದಲಿಸಿದವು.

``ಲಂಚವಂಚನಕ್ಕೆ ಕೈಯಾನದ ಭಾಷೆ
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ...........''
-ಸತ್ಯಕ್ಕ (ಸ.ವ.ಸಂ.5,ವ-1229)

ಶರಣರ ಮನೆಯಲ್ಲಿ ಕಸಗೂಡಿಸುವ ಕಾಯಕಮಾಡುತ್ತಿದ್ದ ಸತ್ಯಕ್ಕನ ವಚನವಿದು. ನೇರನುಡಿಯ ನಿರ್ಭಿಡೆಯ ಶರಣೆಯೆಂದರೆ ಸತ್ಯಕ್ಕ. ಈಕೆ ಕಾಯಕನಿಷ್ಠೆಯ ಬಗೆಗೆ ತನ್ನ ವಚನಗಳಲ್ಲಿ ಹೇಳಿದ್ದಾಳೆ. ಕಸಗೂಡಿಸುವ ಕಾಯಕ ಮಾಡುತ್ತಿದ್ದಾಗ ಕೆಲವರು ಈಕೆಯ ಕಾಯಕನಿಷ್ಠೆಯನ್ನು ಪರೀಕ್ಷಿಸಲು ಬಂಗಾರದ ಗುಂಡು, ವಜ್ರದ ತುಂಡುಗಳನ್ನು ಚಲ್ಲಿರುತ್ತಾರೆ. ಇವುಗಳನ್ನು ಕಸ ಗುಡಿಸುವಾಗ ನೋಡಿದ ಈ ಶರಣೆ ಇವು ಕಲ್ಲು ಚೂರುಗಳೆಂದು ಕಸದಲ್ಲಿ ಸೇರಿಸಿ ಒಗೆದುಬಿಡುತ್ತಾಳೆ. ಕಾಯಕನಿಷ್ಠೆಯ ಎದುರು ಬಂಗಾರ-ವಜ್ರ ಆಕೆಗೆ ದೊಡ್ಡದಾಗಿ ಕಾಣಿಸುವುದಿಲ್ಲ. ಕಾಯಕವೆಂಬ ಮೌಲ್ಯದೆದುರು, ಬಂಗಾರ-ವಜ್ರ ಬೆಲೆ ಕಳೆದುಕೊಳ್ಳುತ್ತವೆ. ಬಟ್ಟೆಯೆಂದರೆ ದಾರಿ ದಾರಿಯಲ್ಲಿ ಕಸ ಗುಡಿಸುತ್ತಿದ್ದಾಗ ಹೊನ್ನು ವಸ್ತ್ರ ಬಿದ್ದಿದ್ದನ್ನು ಕಂಡೆನಾದರೆ, ನಾನು ಅವುಗಳನ್ನು ಕೈಮುಟ್ಟಿ ಎತ್ತುವುದಿಲ್ಲವೆಂದು ದೇವರ ಆಣೆ ಮಾಡಿ ಹೇಳುತ್ತಾಳೆ. ಇದು ಕಾಯಕದ ಮಹತ್ವವನ್ನು ಹೇಳುತ್ತದೆ. ಪರದ್ರವ್ಯಕ್ಕೆ ಆಸೆಪಡುವವರು. ಸಣ್ಣಮನಸ್ಸಿನ ಸ್ವಾರ್ಥಿಗಳೆಂದು ಈಕೆ ಈ ವಚನದಲ್ಲಿ ಹೇಳಿದ್ದಾಳೆ. 12ನೇ ಶತಮಾನದ ವಚನಚಳುವಳಿಯಲ್ಲಿ ಸತ್ಯಕ್ಕನಂತಹ ಕಸ ಗುಡಿಸುವ ಕಾಯಕದ ಮಹಿಳೆ ದೊಡ್ಡ ಶರಣೆಯಾಗಿ ಬೆಳೆದುನಿಲ್ಲುತ್ತಾಳೆ. ಸತ್ಯಶುದ್ಧ ಕಾಯಕಕ್ಕೆ ಅಂತಹ ಶಕ್ತಿಯಿದೆ. ಹೀಗೆ ಹಲವಾರು ಮಹಿಳೆಯರು ಶರಣರ ಕಾಲಕ್ಕೆ ಬಗೆಬಗೆಯ ಕಾಯಕಗಳನ್ನು ಮಾಡುತ್ತಿದ್ದರೆಂಬ ವಿಷಯ ತಿಳಿದುಬರುತ್ತದೆ. ಮತ್ತು ಮಹಿಳೆಯರ ಕಾಯಕಗಳಲ್ಲಿ ಪ್ರಾಮಾಣಿಕತೆ ನಿಷ್ಠೆ ಎದ್ದು ಕಾಣುತ್ತವೆ.

ಹೀಗೆ 12ನೇ ಶತಮಾನದಲ್ಲಿ ಮಹಿಳೆಯರ ಕಾಯಕಕ್ಕೆ ವಿಶಿಷ್ಟ ಸ್ಥಾನವಿದೆ. ಪುರುಷರು ಮಾಡುವ ಕಾಯಕಗಳನ್ನೂ ಅವರು ಮಾಡುತ್ತಿದ್ದರು. ಪುರುಷರಿಂದ ಮಾಡಲು ಆಗದೇ ಇರುವ ಕೆಲವು ಕಾಯಕಗಳನ್ನು ಅವರು ಮಾಡುತ್ತಿದ್ದರು ಹೀಗಾಗಿ ಕಾಯಕದ ವೈವಿಧ್ಯತೆಯನ್ನು ಮಹಿಳೆಯರಲ್ಲಿ ಕಾಣಬಹುದಾಗಿದೆ. ಕಾಯಕನಿಷ್ಠೆಯ ಅನೇಕ ಶರಣೆಯರಿದ್ದರು. ಅವರಲ್ಲಿ ವಚನಗಳನ್ನು ರಚಿಸಿದವರು ವಿರಳ. ವಿರಳವಾಗಿದ್ದ ವಚನಕಾರ್ತಿಯರಲ್ಲಿ ಕಾಯಕನಿಷ್ಠೆ ಕುರಿತು ಮಹತ್ವದ ವಿಚಾರಗಳು ಪ್ರಕಟವಾಗಿವೆ.

ಕಾಯಕದ ನಿಷ್ಠೆ ಮತ್ತು ಬದ್ಧತೆಗೆ ಸಂಬಂಧಿಸಿದಂತೆ ಆಯ್ದಕ್ಕಿ ಮಾರಯ್ಯನ ಪತ್ನಿ, ಆಯ್ದಕ್ಕಿ ಲಕ್ಕಮ್ಮ ಬಹುಮಹತ್ವದ ವಿಚಾರಗಳನ್ನು ತನ್ನ ವಚನಗಳಲ್ಲಿ ಹೇಳಿದ್ದಾಳೆ. ಆಯ್ದಕ್ಕಿ ಮಾರಯ್ಯ ಬಳಿದು ತಂದ ಅಕ್ಕಿಯನ್ನು ಲಕ್ಕಮ್ಮ ಮರಳಿ ಕಳಿಸುತ್ತಾಳೆ. ``ಕೃತ್ವ ಕಾಯಕವಿಲ್ಲದವರು ಭಕ್ತರಲ್ಲ, ಸತ್ಯಶುದ್ಧವಿಲ್ಲದುದು ಕಾಯಕವಲ್ಲ (ವ-735)'' ಎಂದು ಸ್ಪಷ್ಟಪಡಿಸಿರುವ ಆಯ್ದಕ್ಕಿ ಲಕ್ಕಮ್ಮ, ಕಾಯಕದ ಪರಿಶುದ್ದತೆಯ ಬಗೆಗೆ ಹೇಳಿದ್ದಾಳೆ. ``ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು ದಾಸೋಹವ ಮಾಡಬಹುದೆ? (ವ-724)'' ಎಂದು ಪ್ರಶ್ನೆ ಕೇಳಿದ್ದಾಳೆ. ಒಂದೇ ಮನಸ್ಸಿನಿಂದ, ಭಕ್ತಿಯಿಂದ ಕಾಯಕ ಮಾಡಬೇಕೆಂದು ಹೇಳಿದ್ದಾಳೆ. ನೇಮ. ಆಚರಣೆ. ದಾಸೋಹ ಕೃತ್ಯಗಳಲ್ಲಿ ಕಾಯಕಕೃತ್ಯ ಮಹತ್ವವಾದದ್ದೆಂದು ಅಕ್ಕಮ್ಮ ತನ್ನ ವಚನದಲ್ಲಿ ತಿಳಿಸಿದ್ದಾಳೆ. ``ಕಾಯಕ ತಪ್ಪಿದಡೆ ಸೈರಿಸಬಾರದೆಂದು'' (ವ-1090) ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ ಸ್ಪಷ್ಟಪಡಿಸಿದ್ದಾಳೆ. ಹೀಗೆ ಅನೇಕ ವಚನಕಾರ್ತಿಯರು ತಾವು ಮಾಡುವ ಕಾಯಕದ ಬಗ್ಗೆ ನಿಷ್ಠೆಯನ್ನು ತೋರಿಸಿದ್ದಾರೆ. ಕಾಯಕವೇ ನಿಜವಾದ ವ್ರತವೆಂದು ಹೇಳಿದ್ದಾರೆ.

5. ಕಾಯಕದಲ್ಲಿ ನಿಷ್ಠೆ-ಪ್ರಾಮಾಣಿಕತೆ

ಅನೇಕರು ಅನೇಕ ವೃತ್ತಿಗಳನ್ನು ಮಾಡುತ್ತಾರೆ. ಆದರೆ ಆ ವೃತ್ತಿಗಳಲ್ಲಿ ನಿಷ್ಠೆ-ಪ್ರಾಮಾಣಿಕತೆಯಿರುವುದು ವಿರಳ. ಕೇವಲ ಸಂಬಳಕ್ಕಾಗಿ ಮಾಡುವವರೇ ಹೆಚ್ಚು. ಆದರೆ ಶರಣರು ಹೇಳಿದ ಕಾಯಕತತ್ವಕ್ಕೆ ನಿಷ್ಠೆ-ಪ್ರಾಮಾಣಿಕತೆ ಕಡ್ಡಾಯವಾಗಿದೆ. ಹೀಗಾಗಿ ಇತರರು ಮಾಡುವ ವೃತ್ತಿಗಳಿಗೂ, ಶರಣರು ಹೇಳಿರುವ ಕಾಯಕಕ್ಕೂ ತುಂಬ ವ್ಯತ್ಯಾಸವಿದೆ. ನಿಷ್ಠೆ-ಪ್ರಾಮಾಣಿಕತೆ ಇದ್ದುದರಿಂದ ಕಾಯಕವೆಂಬುದು ಒಂದು ಮೌಲ್ಯವಾಗಿ ಬೆಳೆದು ನಿಂತಿದೆ.

“ಪಾಪಿಯ ಧನ ಪ್ರಾಯಶ್ಚಿತ್ತಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ
ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥಕಂಡಯ್ಯಾ”
- ಬಸವಣ್ಣ (ಸ.ವ.ಸಂ.1, ವ:223)

ಬಸವಣ್ಣನವರು ಈ ವಚನದಲ್ಲಿ ನಿಷ್ಠೆ-ಪ್ರಾಮಾಣಿಕತೆಗೆ ಸಂಬಂಧಿಸಿದಂತೆ, ಬಹುಮಹತ್ವದ ವಿಚಾರಗಳನ್ನು ಹೇಳಿದ್ದಾರೆ. “ಮಾಡುವ ಅರ್ಥ ವ್ಯರ್ಥ ಕಂಡಯ್ಯಾ” ಎಂಬ ಮಾತು ತುಂಬ ಮಹತ್ವದ್ದಾಗಿದೆ. ನಮ್ಮ ಹಣ ಸದುಪಯೋಗವಾಗಬೇಕಾದರೆ ಅದು ಸತ್ಪಾತ್ರಕ್ಕೆ ಸಲ್ಲಬೇಕು. ಇಲ್ಲದಿದ್ದರೆ ಅದು ವ್ಯರ್ಥವಾಗುತ್ತದೆಂದು ಶರಣರು ಹೇಳಿದ್ದಾರೆ. ಪಾಪ ಎಂದರೆ ಇಲ್ಲಿ ಕೆಟ್ಟ ಕೆಲಸ ಎಂದರ್ಥವಾಗುತ್ತದೆ. ಇಂತಹ ಪಾಪದ ಹಣ ಎದಕ್ಕೂ ಉಪಯೋಗವಾಗುವುದಿಲ್ಲ. ಅದು ನಾಯಿಯ ಹಾಲಿದ್ದಂತೆ ಎಂದು ಬಸವಣ್ಣನವರು ಇಲ್ಲಿ ಸೂಕ್ತ ಉದಾಹರಣೆಯ ಮೂಲಕ ತಿಳಿಸಿ ಹೇಳಿದ್ದಾರೆ. ನಾಯಿಯ ಹಾಲು ನಾಯಿಗಲ್ಲದೆ ಮತ್ತಾವುದಕ್ಕೂ ಉಪಯೋಗವಾಗದೆಂಬ ಸತ್ಯವನ್ನು ಇಲ್ಲಿ ವಿವರಿಸಿದ್ದಾರೆ. ಧನವನ್ನು ಗಳಿಸಬೇಕಾದರೆ ಬೇಕಾದಷ್ಟು ಮಾರ್ಗಗಳಿವೆ. ಆದರೆ ಶರಣರು ಆರಿಸಿಕೊಂಡ ಮಾರ್ಗವೆಂದರೆ ಅದು ಸತ್ಯನಿಷ್ಠೆಯ ಮಾರ್ಗವಾಗಿದೆ. ಸತ್ಯ-ಪ್ರಾಮಾಣಿಕತೆಯಿಂದ ದುಡಿದು ತಂದ ಧನವು ಮಾತ್ರ ಸತ್ಪಾತ್ರಕ್ಕೆ ಸಲ್ಲುತ್ತದೆಂಬ ಸ್ಪಷ್ಟ ಸಂದೇಶವನ್ನು ಸಾರಿ ಹೇಳಿದ್ದಾರೆ.

“ತನ್ನ ಸತ್ಕಾರ್ಯದಿಂದೊದಗಿದ ವಿಶುದ್ಧ ಪದಾರ್ಥವ ಲಿಂಗಕ್ಕಿತ್ತು,
ಆ ಲಿಂಗ ಪ್ರಸಾದವ ತಾನುಭೋಗಿಸಬೇಕಲ್ಲದೆ
ಇದು ಸ್ಥೂಲ, ಇದು ಸೂಕ್ಷ್ಮವೆಂದರಿಯದೆ,
ಅಂಗಸುಖಕ್ಕಾಗಿ ಲಿಂಗವನು ಮರೆತು,
ಕಂಡ ಕಂಡ ಪದಾರ್ಥವನುಂಡಡೆ ಅದು ಕೆಂಡದಂತಾಗುವುದಯ್ಯಾ”
-ಚೆನ್ನಬಸವಣ್ಣ (ಸ.ವ.ಸಂ.3, ವ: 1288)

ಇಲ್ಲಿ ಚೆನ್ನಬಸವಣ್ಣ “ಸತ್ಕಾರ್ಯ” ಎಂಬ ಪದ ಬಳಸಿದ್ದಾರೆ. ಕಾರ್ಯಗಳು ಕೆಲಸಗಳು ಒಂದೇ ರೀತಿಯಾಗಿರುವುದಿಲ್ಲ. ಕೆಟ್ಟ ಕಾರ್ಯ ಮಾಡುವವರೂ ಇದ್ದಾರೆ, ಒಳ್ಳೆಯ ಕಾರ್ಯ ಮಾಡುವವರೂ ಇದ್ದಾರೆ. ಕೆಟ್ಟಕಾರ್ಯ ಮಾಡಿದಾಗಲೂ ಹಣ ಸಿಗುತ್ತದೆ. ಒಳ್ಳೆಯ ಕಾರ್ಯ ಮಾಡಿದಾಗಲೂ ಹಣ ಸಿಗುತ್ತದೆ. ಆದರೆ ಕೆಟ್ಟ ಕಾರ್ಯ ಮಾಡಿದಾಗ ಹೆಚ್ಚು ಹಣ ಸಿಗುತ್ತದೆ. ನಿಷ್ಠೆಯಿಲ್ಲದವರು, ಪ್ರಾಮಾಣಿಕತೆಯಿಲ್ಲದವರು ಹೆಚ್ಚಿನ ಹಣಕ್ಕಾಗಿ ಆಸೆಪಡುತ್ತಾರೆ. ಹೀಗೆ ಕೆಟ್ಟ ಕಾರ್ಯ ಮಾಡಿ ಗಳಿಸಿದ ಹಣ ದಾಸೋಹಕ್ಕೆ ಸಲ್ಲುವುದಿಲ್ಲ. ದುಡಿಮೆಯಿಂದ ಎಷ್ಟು ಹಣ ಗಳಿಸಿದ್ದೇನೆಂಬುದು ಮುಖ್ಯವಾಗುವುದಿಲ್ಲ. ಆ ಹಣವನ್ನು ಎಂತಹ ದುಡಿಮೆಯಿಂದ ಗಳಿಸಿದೆ, ಹೇಗೆ ಗಳಿಸಿದೆಯೆಂಬುದು ಮುಖ್ಯವಾಗುತ್ತದೆ. ಇದನ್ನೇ ಚೆನ್ನಬಸವಣ್ಣ ಇಲ್ಲಿ ಸ್ಥೂಲ-ಸೂಕ್ಷ್ಮವೆಂದು ಹೇಳಿದ್ದಾರೆ. ಅಂಗಸುಖಕ್ಕಾಗಿ ಲಿಂಗವ ಮರೆತು ಕಂಡಕಂಡದ್ದನ್ನು ತಿಂದರೆ ಎಂತಹ ಅನಾಹುತವಾಗುತ್ತದೆಂಬುದನ್ನು ಇಲ್ಲಿ ವಿವರಿಸಿದ್ದಾರೆ. ಕಾಯಕವನ್ನು ನಿಷ್ಠೆಯಿಂದ ಮಾಡಬೇಕು ಮತ್ತು ಅದರಲ್ಲಿ ಪ್ರಾಮಾಣಿಕತೆ ಇರಬೇಕು. ಅಂತಹ ಕಾಯಕದಿಂದ ಬಂದ ಹಣ ಮಾತ್ರ ಸತ್ಪಾತ್ರಕ್ಕೆ ಸಲ್ಲುತ್ತದೆಂಬುದು ಶರಣರ ಸಿದ್ಧಾಂತವಾಗಿದೆ.

ಕಾಯಕವೆಂದರೆ ಕೇವಲ ಕೆಲಸವಲ್ಲ, ಹಣ ಗಳಿಕೆಗಾಗಿರುವ ಮಾರ್ಗವಲ್ಲವೆಂಬುದು ಶರಣರ ವಚನಗಳಿಂದ ಸ್ಪಷ್ಟವಾಗುತ್ತದೆ. ಕಾಯಕದಲ್ಲಿ ಕೇವಲ ದುಡಿಮೆಯಿಲ್ಲ, ಅದರಲ್ಲಿ ಧರ್ಮವಿದೆ. ಹೀಗಾಗಿ ಕಾಯಕ ಸಾಮಾಜಿಕ ಸಿದ್ಧಾಂತವಾದರೂ ಅದರಲ್ಲಿ ಧರ್ಮವೇ ಪ್ರಧಾನವಾಗಿದೆ. ನಿಷ್ಠೆ-ಪ್ರಾಮಾಣಿಕತೆಯಂತಹ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಅದು ಕಾಯಕವೆನಿಸುತ್ತದೆ.

(1) “ಹಾಗದ ಕಾಯಕವ ಮಾಡಿ, ಹಣವಡ್ಡವ ತಾ ಎಂಬಲ್ಲಿ
ಸತ್ಯದ ಕಾಯಕ ಉಂಟೆ?
ಭಕ್ತರಲ್ಲಿ ಕಾಯಕಕ್ಕೆ ಕಡಿಮೆಯಾಗಿ ತಾ ಎಂಬುದು
ಅಮರೇಶ್ವರಲಿಂಗಕ್ಕೆ ಚಿತ್ತಶುದ್ಧದ ಕಾಯಕ”
-ಆಯ್ದಕ್ಕಿ ಮಾರಯ್ಯ (ಸ.ವ.ಸಂ.6,ವ:1196)

(2) “ಸತ್ಯಶುದ್ಧ ಕಾಯಕವ ಮಾಡಿತಂದು
ವಂಚನೆಯಿಲ್ಲದೆ ಪ್ರಪಂಚಳಿದು
ನಿಚ್ಚಜಂಗಮಕ್ಕೆ ದಾಸೋಹವ ಮಾಡುವ ಸದ್ಭಕ್ತನ
ಹೃದಯದೊಳಗೆ ಅಚ್ಚೊತ್ತಿದಂತಿಪ್ಪ
ಕಾಮಧೂಮ ಧೂಳೇಶ್ವರ”
-ಮಾದಾರ ಧೂಳಯ್ಯ (ಸ.ವ.ಸಂ.8, ವ:1268)

ಬೇರೆ ಬೇರೆ ವೃತ್ತಿಗಳಲ್ಲಿದ್ದ ಈ ಇಬ್ಬರು ವಚನಕಾರರು, ಕಾಯಕವೆಂಬುದು ಸತ್ಯಶುದ್ಧವಾಗಿರಬೇಕೆಂದು ಹೇಳಿದ್ದಾರೆ. ಅಲ್ಪಾವಧಿಯಲ್ಲಿಯೇ ಹೆಚ್ಚು ಹಣಗಳಿಸುವ ಅನೇಕ ಕೆಟ್ಟ ಕಾರ್ಯಗಳಿವೆ; ಅವುಗಳನ್ನು ಕಾಯಕವೆಂದು ಕರೆಯಲಾಗುವುದಿಲ್ಲ. ಇದನ್ನೇ ಆಯ್ದಕ್ಕಿ ಮಾರಯ್ಯ ತಮ್ಮ ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ. ಸಣ್ಣ ನಾಣ್ಯದ ಕಾಯಕವ ಮಾಡಿ, ದೊಡ್ಡಮಟ್ಟದ ದ್ರವ್ಯ ಬರಬೇಕೆಂದು ಬಯಸುವುದು ಸತ್ಯದ ಕಾಯಕವಾಗಲಾರದೆಂದು ಮಾರಯ್ಯ ಇಲ್ಲಿ ವಿವರಿಸಿದ್ದಾರೆ.

ಇನ್ನು ಮಾದಾರ ಧೂಳಯ್ಯ ತನ್ನ ವಚನದಲ್ಲಿ ಮಹತ್ವದ ಸಂದೇಶ ಹೇಳಿದ್ದಾರೆ. ಸದ್ಭಕ್ತನ ಹೃದಯದಲ್ಲಿಯೇ ದೇವರು ನೆಲೆನಿಲ್ಲಬೇಕಾದರೆ ಸತ್ಯಶುದ್ಧ ಕಾಯಕ ಮಾಡಬೇಕು. ವಂಚನೆಯಿಲ್ಲದೆ ದುಡಿದುಬಂದ ದ್ರವ್ಯದಲ್ಲಿ ನಿತ್ಯ ಜಂಗಮ ದಾಸೋಹವ ಮಾಡಬೇಕು. ಭಕ್ತಿಯಿಂದ ದೇವರನೊಲಿಸಬಹುದು, ಆದರೆ ಕಾಯಕದಿಂದ ಸ್ವತಃ ದೇವರೇ ಭಕ್ತನ ಹೃದಯದಲ್ಲಿ ಬಂದು ನೆಲೆನಿಲ್ಲುತ್ತಾನೆಂದು ಹೇಳಿದ ಶರಣರು ಕಾಯಕಕ್ಕೆ ಮಹತ್ವದ ಸ್ಥಾನ ನೀಡಿದ್ದಾರೆ.

(1) “ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ
ಭಾವಶುದ್ಧವಾಗಿ ಮಹಾಶರಣರ ತಿಪ್ಪೆಯ ತಪ್ಪಲ ಅಕ್ಕಿಯ ತಂದು
ನಿಶ್ಚೈಸಿ ಮಾಡಬೇಕು ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ
ಬೇಗ ಹೋಗು ಮಾರಯ್ಯಾ”

- ಆಯ್ದಕ್ಕಿ ಲಕ್ಕಮ್ಮ (ಸ.ವ.ಸಂ.5, ವ:713)

(2) “ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನಕ್ಕರ”

- ಆಯ್ದಕ್ಕಿ ಲಕ್ಕಮ್ಮ (ಸ.ವ.ಸಂ.5, ವ:725)

ಕಾಯಕವನ್ನು ಒಂದು ಮೌಲ್ಯವನ್ನಾಗಿ ಬೆಳೆಸಿದ ಶರಣರಲ್ಲಿ ಆಯ್ದಕ್ಕಿ ಲಕ್ಕಮ್ಮ ಪ್ರಮುಖರಾಗಿದ್ದಾರೆ. ಕಾಯಕಕ್ಕೆ ಹೊಸ ವ್ಯಾಖ್ಯಾನ ನೀಡಿದ ಬಹುದೊಡ್ಡ ಶರಣೆ ಲಕ್ಕಮ್ಮ. ತನಗಿಂತ, ತನ್ನ ಪತಿಗಿಂತ ಕಾಯಕ ದೊಡ್ಡದೆಂದು ನಂಬಿದ ಶರಣೆ ಲಕ್ಕಮ್ಮ ಈ ಎರಡು ವಚನಗಳಲ್ಲಿ ಸತ್ಯಶುದ್ಧ ಕಾಯಕದ ಬಗೆಗೆ, ಪ್ರಾಮಾಣಿಕತೆಯ ಕಾಯಕದ ಬಗೆಗೆ ವಿವರಿಸಲಾಗಿದೆ.

ಕಾಯಕ ಒಂದು ದಿನ ಮಾಡುವುದಲ್ಲ, ಅದು ನಿತ್ಯ ನಿರಂತರವಾದುದೆಂಬ ವಿಷಯ ಈ ವಚನದಿಂದ ತಿಳಿದುಬರುತ್ತದೆ. ದಿನವೂ ಕಾಯಕ ನಿಲ್ಲಬಾರದು. ಕಾಯಕ ಮಾಡಲು ಭಾವಶುದ್ಧಾಗಿರಬೇಕು ಎಂಬಂತಹ ಮಾತುಗಳನ್ನಾಡಿರುವ ಈಕೆ ತನ್ನ ಗಂಡನನ್ನೇ ಎಚ್ಚರಿಸುತ್ತಾಳೆ. ತಿಪ್ಪೆಯಲ್ಲಿ ಬಿದ್ದ ಅಕ್ಕಿಯ ಆಯ್ದುತರಲು ಗಂಡನನ್ನು ಕಳಿಸುತ್ತಾಳೆ. ಮನಶುದ್ಧವಿದ್ದವರಿಗೆ ದ್ರವ್ಯದ ಬಡತನವಿಲ್ಲ, ಮನಶುದ್ಧವಿಲ್ಲದವರಿಗೆ ಅಂತಹ ಬಡತನವಿರುತ್ತದೆಂದು ಹೇಳಿದ ಲಕ್ಕಮ್ಮ ಶುದ್ಧ ಮನಸ್ಸಿನಿಂದ, ಪ್ರಾಮಾಣಿಕತೆಯಿಂದ ಕಾಯಕ ಮಾಡಿದರೆ ಲಕ್ಷ್ಮಿ ತಾನೇ ಒಲಿದು ಬರುತ್ತಾಳೆಂದು ತಿಳಿಸಿದ್ದಾಳೆ. ಹೀಗೆ ಅನೇಕ ವಚನಕಾರ್ತಿಯರು ಕಾಯಕನಿಷ್ಠೆಯ ಬಗೆಗೆ ಪ್ರಾಮಾಣಿಕತೆಯ ಬಗೆಗೆ ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ.

ಮುಂದುವರಿಯುವುದು…

ಈ ಅಂಕಣದ ಹಿಂದಿನ ಬರಹಗಳು:
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...