ಕೇಳದೇ ಉಳಿದ ಸ್ವರ ಮಾಧುರ್ಯ

Date: 05-11-2020

Location: ಬೆಂಗಳೂರು


ಅಪ್ರತಿಮ ಸಂಗೀತ ಸಾಧಕ ಅಲ್ಲಾದಿಯಾ ಖಾನ್ ಅವರ ಪುತ್ರಿ ಅನ್ನಪೂರ್ಣ ದೇವಿಯೂ ಹಿಂದೂಸ್ತಾನಿ ಸಂಗೀತ ಸಾಧಕಿ. ಖ್ಯಾತ ಸಂಗೀತಗಾರ ಪಂಡಿತ್ ರವಿಶಂಕರ ಅವರ ಮೊದಲ ಪತ್ನಿ. ಪತಿಗೆ ವಿಚ್ಛೇದನ ನೀಡಿ, ಸಂಗೀತಗಾರ ಪುತ್ರ ಶುಭೇಂದ್ರ ಶಂಕರ್ ನನ್ನೂ ಕಳೆದುಕೊಂಡು , 50 ವರ್ಷ ಕಾಲ ಸಾರ್ವಜನಿಕ ಬದುಕಿನಿಂದ ದೂರವಾಗಿ ಉಳಿದ ಅವರ ದುರಂತಮಯ ಬದುಕಿನ ಚಿತ್ರಣವನ್ನು 'ಗಾನಲೋಕದ ಗಂಧರ್ವರು' ಸರಣಿಯ ಲೇಖಕ-ಪತ್ರಕರ್ತ ಜಗದೀಶ ಕೊಪ್ಪ ಅವರು ಕಟ್ಟಿಕೊಟ್ಟಿದ್ದಾರೆ.

ಅನ್ನಪೂರ್ಣದೇವಿ ಎಂಬ ಹೆಸರು ಭಾರತೀಯ ಹಿಂದೂಸ್ತಾನಿ ಸಂಗೀತದಲ್ಲಿ ಒಂದು ಅನನ್ಯವಾದ ಹಾಗೂ ಅಜರಾಮರವಾದ ಹೆಸರು. ಈ ದೇಶ ಕಂಡ ಓರ್ವ ಅಪ್ರತಿಮ ಸಂಗೀತದ ಸಾಧಕ ಹಾಗೂ ಮೈಹಾರ್ ಘರಾಣೆ ಸಂಗೀತದ ಗುರು ಅಲ್ಲಾದಿಯಾ ಖಾನರ ಪುತ್ರಿಯಾಗಿ, ಸಿತಾರ್ ಲೋಕದ ಮಾಂತ್ರಿಕ ಪಂಡಿತ್ ರವಿಶಂಕರ್‌ರವರ ಮೊದಲ ಪತ್ನಿಯಾಗಿ, ಭಾರತದ ಪ್ರತಿಭಾವಂತ ಸುರ್ ಬಹಾರ್ ವಾದ್ಯದ ಸುಪ್ರಸಿದ್ಧ ಕಲಾವಿದೆಯಾಗಿ ಹಾಗೂ ಜಗತ್ ಪ್ರಸಿದ್ಧ ಕಲಾವಿದರನ್ನು ಸೃಷ್ಟಿಸಿದ ಗುರುವಾಗಿ ಬದುಕಿದವರು. ಇವೆಲ್ಲಕ್ಕಿಂತ ಹೆಚ್ಚಾಗಿ ಸತತ ಐವತ್ತು ವರ್ಷಗಳ ಕಾಲ ಸಾರ್ವಜನಿಕ ಬದುಕಿನಿಂದ ದೂರವಾಗಿ ನಾಲ್ಕುಗೋಡೆಯ ಮಧ್ಯೆ ತಪಸ್ವಿನಿಯ ಹಾಗೆ ಸಂಗೀತವನ್ನು ಉಸಿರಾಡಿದ ಈ ಮಹಾನ್ ತಾಯಿಯ ಬದುಕು ಒಂದು ರೀತಿಯಲ್ಲಿ ದುರಂತ ಕಾವ್ಯವೆಂದು ಬಣ್ಣಿಸಬಹದು.

2018ರ ಅಕ್ಟೋಬರ್ 13 ರಂದು ಮುಂಬೈ ನಗರದ ಆಸ್ಪತ್ರೆಯಲ್ಲಿ ತಮ್ಮ 91ನೇ ವಯಸ್ಸಿಗೆ ನಿಧನರಾದ ಅನ್ನಪೂರ್ಣದೇವಿಯವರು ತಾವು ಘೋಷಿಸಿದ್ದಂತೆ “ನನ್ನೆಲ್ಲಾ ವೈಯಕ್ತಿಕ ಬದುಕಿನ ನೋವು, ನಿರಾಸೆ ಮತ್ತು ಅಸಮಾಧಾನಗಳ ಕುರಿತು ಮಾತನಾಡುವುದಿಲ್ಲ. ಅವುಗಳನ್ನು ನನ್ನೊಂದಿಗೆ ಮಣ್ಣಿಗೆ ಕೊಂಡೊಯ್ಯುತ್ತೇನೆ” ಎಂಬ ಮಾತುಗಳ ಅನುಸಾರ ನಡೆದುಕೊಂಡು ಸಂಗೀತದ ರಸಿಕರ ಪಾಲಿಗೆ ಜೀವನಪೂರ್ತಿ ಒಗಟಾಗಿ ಉಳಿದು ಬದುಕಿದರು.

1962ರಲ್ಲಿ ಪಂಡಿತ್ ರವಿಶಂಕರ್ ಜೊತೆಗಿನ ದಾಂಪತ್ಯ ಬದುಕಿಗೆ ವಿದಾಯ ಹೇಳಿದ ನಂತರ ಅವರು ತಮ್ಮ ತಂದೆಯ ಅಣತಿಯಂತೆ ಕೆಲವು ಆಯ್ದ ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳಿಕೊಡುತ್ತಾ ಮುಂಬೈ ನಗರದ ಪ್ರತಿಷ್ಠಿತ ಬಡಾವಣೆಯಾದ ಮಲಬಾರ್ ಹಿಲ್ ನಲ್ಲಿ ಸಮುದ್ರಕ್ಕೆ ಎದುರಾಗಿರುವ ವಾರ್ಡನ್ ರಸ್ತೆಯ ‘ಆಕಾಶ್ ಗಂಗಾ’ ಎಂಬ ವಸತಿ ಸಮುಚ್ಚಯದ ಆರನೆಯ ಮಹಡಿಯಲ್ಲಿ ಸತತ ಐವತ್ತೆಂಟು ವರ್ಷಗಳ ಕಾಲ ಮೌನಿಯಾಗಿ ಬದುಕಿದರು. ಬೆಳಗಿನ ಜಾವ ನಾಲ್ಕು ಗಂಟೆಗೆ ಮನೆಯ ಬಾಗಿಲು ತೆರೆದು ಹೊರಬಂದು ಸೂರ್ಯ ಸಮಸ್ಕಾರ ಮಾಡಿ, ಪಾರಿವಾಳಗಳಿಗೆ ಆಹಾರ ಹಾಕಿ ನಂತರ ಬಾಗಿಲು ಮುಚ್ಚಿದರೆ, ಅವರು ಮತ್ತೇ ಬಾಗಿಲು ತೆರೆಯುತ್ತಿದ್ದುದು ಮರುದಿನ ಬೆಳಿಗ್ಗೆ.
ತಮ್ಮ ಆಯ್ದ ಶಿಷ್ಯಬಳಗ ಮತ್ತು ಬಂದು ಮಿತ್ರರನ್ನು ಹೊರತು ಪಡಿಸಿ, ಅವರು ಬದುಕಿನಲ್ಲಿ ಯಾರೋಬ್ಬರನ್ನು ಭೇಟಿ ಮಾಡಲಿಲ್ಲ. ರವಿಶಂಕರ್ ಜೊತೆಗಿನ ವಿವಾಹ ವಿಚ್ಚೇದನದ ನಂತರ ಸಾರ್ವಜನಿಕ ಸಂಗೀತ ಕಛೇರಿ ನೀಡಲಿಲ್ಲ. ಯಾವೊಂದು ಮಾಧ್ಯಮಗಳಿಗೆ ಸಂದರ್ಶನ ನೀಡಲಿಲ್ಲ. ಅಷ್ಟೇ ಏಕೆ? ಭಾರತ ಸರ್ಕಾರ ನೀಡಿದ ಪದ್ಮಭೂಷಣ ಪ್ರಶಸ್ತಿ, ಕೇಂದ್ರ ಸಂಗೀತ ಮತ್ತು ನೃತ್ಯ ಅಕಾಡೆಮಿ ನೀಡಿದ ಪ್ರಶಸ್ತಿ ಮತ್ತು ಫೆಲೋಶಿಪ್ ಹಾಗೂ ಶಾಂತಿನಿಕೇತನದ ವಿಶ್ವಭಾರತಿ ವಿಶ್ವ ವಿದ್ಯಾಲಯ ನೀಡಿದ ದೇಶಿಕೋತ್ತಮ ಗೌರವ (ಗೌರವ ಡಾಕ್ಟರೇಟ್) ಪ್ರಶಸ್ತಿಗಳನ್ನು ಅವರು ಸಮಾರಂಭಕ್ಕೆ ತೆರಳಿ ಸ್ವೀಕರಿಸಲಿಲ್ಲ. ಎಲ್ಲವೂ ಅವರ ಮನೆಬಾಗಿಲಿಗೆ ಬಂದು ಸಂದಾಯವಾದವು. ಮನೆಯ ಬಾಗಿಲಿಗೆ ತೂಗು ಫಲಕವೊಂದನ್ನು ನೇತು ಹಾಕಿದ್ದರು.

“ಮೂರು ಬಾರಿ ಕರೆ ಮಾಡಿದ ನಂತರವೂ ಬಾಗಿಲು ತೆರಯಲಿಲ್ಲ ಎಂದರೆ, ಕಾಯಬೇಡಿ. ಸಂದೇಶವನ್ನು ಬರೆದಿಟ್ಟು ನೀವು ಹೊರಡಬಹುದು” ಎಂಬ ಸೂಚನೆಯ ಫಲಕ ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ನಾಲ್ಕು ಗೋಡೆಯ ನಡುವೆ ಸಂಗೀತ, ಧ್ಯಾನ, ಪ್ರಾರ್ಥನೆ ಇವುಗಳ ನಡುವೆ ಬದುಕಿದ ಅನ್ನಪೂರ್ಣದೇವಿಯವರು ಹರಿಪ್ರಸಾದ್ ಚೌರಾಸಿಯ ಎಂಬ ಕೊಳಲು ಮಾಂತ್ರಿಕ ಹಾಗೂ ನಿಖಿಲ್ ಬ್ಯಾನರ್ಜಿ ಎಂಬ ಸಿತಾರ್ ಪ್ರತಿಭಾವಂತ ಕಲಾವಿದ ಮತ್ತು ನಿತ್ಯಾನಂದ ಹಳದಿಪುರ್, ಸುಧೀರ್ ಫಡ್ಕೆ, ಬಸಂತ್ ಕಾಬ್ರ, ಮತ್ತು ತಮ್ಮ ಸಹೋದರ ಪಂಡಿತ್ ಆಲಿ ಅಕ್ಬರ್ಖಾನ್ (ಪಂಡಿತ್ ರಾಜೀವ್ ತಾರಾನಾಥರ ಗುರು) ಪುತ್ರ ಆಶಿಶ್ ಖಾನ್ ಹಾಗೂ ತಮ್ಮ ಪುತ್ರ ಶುಭೇಂದ್ರ ಶಂಕರ್ ಹೀಗೆ ಅನೇಕ ಪ್ರತಿಭಾನ್ವಿತ ಕಲಾವಿದರನ್ನು ತಯಾರು ಮಾಡಿದ ಮಹಾನ್ ಗುರು ಎನಿಸಿಕೊಂಡರು. ತಮ್ಮ ತಂದೆಯವರಾದ ಉಸ್ತಾದ್ ಅಲ್ಲಾದಿಯಾ ಖಾನ್ ಅವರಿಂದ ಬಳುವಳಿಯಾಗಿ ಪಡೆದ ಸಂಗೀತ ಮತ್ತು ಪ್ರತಿಭೆ ಇವುಗಳನ್ನು ಯಾವ ಸ್ವಾರ್ಥವಿಲ್ಲದೆ ತಮ್ಮ ಶಿಷ್ಯರಿಗೆ ಧಾರೆಯೆರೆದರು.

ಅನ್ನಪೂರ್ಣದೇವಿ ಅವರು 1927ರ ಏಪ್ರಿಲ್ ತಿಂಗಳಿನಲ್ಲಿ ಈಗಿನ ಮಧ್ಯಪ್ರದೇಶದ ಜಬ್ಬಲ್ಪುರ ಸಮೀಪದ ಮೈಹಾರ್ ಎಂಬ ಪುಟ್ಟ ಸಂಸ್ಥಾನ ಹಾಗೂ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ಅಲ್ಲಾದಿಯಾಖಾನ್ ಸಂಸ್ಥಾನದ ಆಸ್ಥಾನ ಕಲಾವಿದರಾಗಿದ್ದುಕೊಂಡು ಅನೇಕ ಹೊಸ ರಾಗಗಳನ್ನು ಹುಟ್ಟು ಹಾಕಿ, ಮೈಹಾರ್ ಘರಾಣೆ ಎಂಬ ಹೊಸ ಸಂಗೀತ ಶಾಲೆಯನ್ನು ತೆರೆದು, ಸಂಗೀತ ಗುರುಗಳಾಗಿದ್ದರು. ಹುಟ್ಟಿನಿಂದ ಮುಸ್ಲಿಂ ಆದರೂ ಸಹ ಅಲ್ಲಾದಿಯಾಖಾನ್ ಹಿಂದೂ-ಮುಸ್ಲಿಂ ಧರ್ಮದ ಭಾವಕ್ಯತೆಯ ಕೊಂಡಿಯಂತೆ ಬದುಕಿದವರು. ಪ್ರತಿದಿನ ಐದು ಬಾರಿ ನಮಾಜ್ ಮಾಡುವುದರ ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ಸಂಗೀತದ ಶಾರದೆ ಎನ್ನುವ ಸರಸ್ವತಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಜೊತೆಗೆ ತಾವು ವಾಸವಿದ್ದ ನಿವಾಸಕ್ಕೆ ಅನತಿ ದೂರದಲ್ಲಿದ್ದ ಬೆಟ್ಟದ ಮೇಲಿನ ಶ್ರೀಕೃಷ್ಣನ ದೇಗುಲಕ್ಕೆ ಪ್ರತಿದಿನ ಬೆಳಿಗ್ಗೆ ಎದ್ದು ನಮಿಸುವುದು ಅವರ ಕಾಯಕಗಳಲ್ಲಿ ಒಂದಾಗಿತ್ತು.

ಪಂಡಿತ್ ರವಿಶಂಕರ್ ಅವರ ಅಣ್ಣ ಹಾಗೂ ಖ್ಯಾತ ನೃತ್ಯಪಟು ಉದಯಶಂಕರ್ ಅವರ ನೃತ್ಯ ತಂಡದೊಂದಿಗೆ ವಿದೇಶ ಪ್ರವಾಸ ಮಾಡುವುದರ ಜೊತೆಗೆ ನೈನಿತಾಲ್ ಬಳಿಯ ಅಲ್ಮೋರದಲ್ಲಿ ಉದಯಶಂಕರ್ ಸ್ಥಾಪಿಸಿದ್ದ ನೃತ್ಯಶಾಲೆಯ ಅನೇಕ ನಾಟಕಗಳಿಗೆ ಅಲ್ಲಾದಿಯಾಖಾನ್ ಸಂಗೀತ ಸಂಯೋಜನೆ ಮಾಡಿದ್ದರು. ಆರಂಭದಲ್ಲಿ ಅಣ್ಣನ ತಂಡದಲ್ಲಿ ನೃತ್ಯಪಟುವಾಗಿದ್ದ ರವಿಶಂಕರ ಅವರು ಅಲ್ಲಾದಿಯಾಖಾನರ ಸಂಗೀತಕ್ಕೆ ಮಾರುಹೋಗಿ 1938ರಲ್ಲಿ ಅವರ ಬಳಿ ಶಿಷ್ಯವೃತ್ತಿ ಸ್ವೀಕರಿಸಿ ನಾಲ್ಕು ವರ್ಷಗಳ ಕಾಲ ಸಿತಾರ್ ಸಂಗೀತ ಕಲಿತರು. ತಮ್ಮ ಹದಿನೇಳನೆಯ ವಯಸ್ಸಿಗೆ ಸಂಗೀತ ಕಲಿಯಲು ಮೈಹಾರ್ ಪಟ್ಟಣಕ್ಕೆ ಬರುವ ವೇಳೆಗೆ ರವಿಶಂಕರ್ ಪಾಶ್ಚಿಮಾತ್ಯ ಬದುಕಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಆದರೆ, ಗುರುವಿನ ನಿವಾಸಕ್ಕೆ ಬಂದನಂತರ ಓರ್ವ ನಮ್ರ ಶಿಷ್ಯನಾಗಿ ಜುಬ್ಬಾ, ಕಚ್ಚೆ ಹಾಗೂ ಉದ್ದವಾದ ನೀಳವಾದ ಕೂದಲಿನೊಂದಿಗೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ತ್ಯಜಿಸಿ, ಅಲ್ಲಾದಿಯಾಖಾನರ ಪುತ್ರ ಅಕ್ಬರ್ ಆಲಿಖಾನ್ ಜೊತೆ ಸಿತಾರ್ ವಾದನದ ಅಭ್ಯಾಸ ಮಾಡಿದರು.

ಅಲ್ಲಾದಿಯಾಖಾನರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವಪುತ್ರ. ಮೊದಲನೆಯ ಪುತ್ರಿ ಜಹನಾರ ಎಂಬಾಕೆಗೆ ಅವರ ಸಂಗೀತ ಅಭ್ಯಾಸ ಮಾಡಿಸಿದ್ದರು. ಆದರೆ, ವಿವಾಹದ ಸಂದರ್ಭದಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಸಂಗೀತ ಕಲಿಯುವುದು ನಿಷಿದ್ಧ ಎಂಬ ಮಾತು ಕೇಳಿ ಬಂದ ಹಿನ್ನಲೆಯಲ್ಲಿ ಇನ್ನೊರ್ವ ಪುತ್ರಿ ಅನ್ನಪೂರ್ಣಳಿಗೆ ಅವರು ಸಂಗೀತ ಕಲಿಸುವ ಒಲವು ತೋರಲಿಲ್ಲ. ವಾಸ್ತವವಾಗಿ ಅನ್ನಪುರ್ಣದೇವಿಯ ಹೆಸರು ರೋಷನಾರ ಎಂಬುದಾಗಿತ್ತು. ಹುಣ್ಣಿಮೆಯ ದಿನ ಜನಿಸಿದ ಕಾರಣ ಸಂಸ್ಥಾನದ ದೊರೆ ಬೈಜನಾಥಸಿಂಗ್ ಅನ್ನಪೂರ್ಣದೇವಿ ಎಂದು ನಾಮಕರಣ ಮಾಡಿದ ಫಲವಾಗಿ ಈ ಹೆಸರು ಅವರಿಗೆ ಶಾಶ್ವತವಾಗಿ ಉಳಿಯಿತು. ತಮ್ಮ ನಿವಾಸದಲ್ಲಿ ತನ್ನ ಹಿರಿಯಣ್ಣ ಹಾಗೂ ಶಿಷ್ಯ ರವಿಶಂಕರ್ ಅವರಿಗೆ ತಂದೆ ಹೇಳಿಕೊಡುತ್ತಿದ್ದ ಸಂಗೀತ ಪಾಠವನ್ನು ಮನೆಯೊಳಗೆ ಇದ್ದುಕೊಂಡು ತಮ್ಮ ಒಂಬತ್ತನೇ ವಯಸ್ಸಿನಿಂದ ಮನನ ಮಾಡಿಕೊಂಡಿದ್ದರು. ಒಮ್ಮೆ ಅಲ್ಲಾದಿಯಾಖಾನ್ ತಮ್ಮ ಪುತ್ರ ಆಲಿ ಅಕ್ಬರ್ಖಾನ್ಗೆ ಒಂದು ರಾಗವನ್ನು ಹೇಳಿಕೊಟ್ಟು ಅದನ್ನು ಅಭ್ಯಾಸ ಮಾಡುವಂತೆ ಹೇಳಿ ಮಾರುಕಟ್ಟೆಗೆ ತೆರಳಿದ್ದರು. ಆಲಿ ಅಕ್ಬರ್‌ಖಾನ್ ರಾಗವನ್ನು ತಪ್ಪಾಗಿ ನುಡಿಸುವುದನ್ನು ಕಂಡು, ಅನ್ನಪೂರ್ಣರವರು ಅವರಿಂದ ಸಿತಾರ್ ವಾದ್ಯವನ್ನು ಪಡೆದು ತಂದೆಯವರು ಹೇಳಿಕೊಟ್ಟ ಹಾಗೆ ಕರಾರುವಕ್ಕಾಗಿ ನುಡಿಸಿ ತೋರಿಸಿದರು. ಆ ವೇಳೆಗೆ ಮನೆ ಬಾಗಿಲಿಗೆ ಬಂದಿದ್ದ ಅಲ್ಲಾದಿಯಾಖಾನ್ ಮರೆಯಲ್ಲಿ ನಿಂತು ಪುತ್ರಿಯ ಪ್ರತಿಭೆಗೆ ಮಾರುಹೋಗಿದ್ದರು. ನಂತರ ಪುತ್ರಿಯನ್ನು ಕರೆದು ಆಕೆಯ ಕೈಗೆ ತಾನ್‍ಪುರ (ತಂಬೂರ)ವನ್ನು ನೀಡಿ, ಪುತ್ರ ಮತ್ತು ಶಿಷ್ಯನ ಜೊತೆಗೆ ಪುತ್ರಿಗೂ ಸಹ ಸಂಗೀತವನ್ನು ಧಾರೆಯೆರೆದರು.

1942 ರಲ್ಲಿ ರವಿಶಂಕರ್ ಅವರ ಶಿಷ್ಯವೃತ್ತಿ ಪೂರ್ಣಗೊಳ್ಳುವ ವೇಳೆಗೆ ಅವರು ಅನ್ನಪೂರ್ಣರವರ ವ್ಯಕ್ತಿತ್ವ ಮತ್ತು ಪ್ರತಿಭೆಗೆ ಮಾರುಹೋಗಿದ್ದರು. ಅನ್ನಪೂರ್ಣರವರನ್ನು ವಿವಾಹವಾಗಲು ಇಚ್ಚಿಸಿದಾಗ ಯಾವುದೇ ಪ್ರತಿರೋಧವಿಲ್ಲದೆ ತಮ್ಮ ಪುತ್ರಿಯನ್ನು ಶಿಷ್ಯನಿಗೆ ಧಾರೆಯೆರೆದುಕೊಟ್ಟರು. ಜೊತೆಗೆ ರವಿಶಂಕರ್ ಅವರ ಹಿರಿಯ ಸಹೋದರ ಉದಯಶಂಕರ್ ಅವರ ಅಪೇಕ್ಷೆಯ ಮೇರೆಗೆ ಹಿಂದೂ ಧರ್ಮದ ರೀತಿಯಲ್ಲಿ ವಿವಾಹವನ್ನು ನೆರವೇರಿಸಿಕೊಟ್ಟರು. ವಿವಾಹವಾದಾಗ ರವಿಶಂಕರ ಅವರಿಗೆ 21 ವರ್ಷ ಮತ್ತು ಅನ್ನಪೂರ್ಣದೇವಿಗೆ 15 ವರ್ಷವಾಗಿತ್ತು.

ನಂತರ ದಂಪತಿಗಳಿಬ್ಬರೂ ಅಲ್ಲಾದಿಯಾಖಾನರ ಸಂಗೀತ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಮುಂಬೈ ನಗರಕ್ಕೆ ಬಂದು ನೆಲೆ ನಿಂತರು. ಆರಂಭದ ದಿನಗಳಲ್ಲಿ ಅನ್ನಪೂರ್ಣದೇವಿ ಮತ್ತು ರವಿಶಂಕರ್ ಇಬ್ಬರೂ ಒಟ್ಟಾಗಿ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದು ಉಂಟು. ರವಿಶಂಕರ್ ಸಿತಾರ್‌ನಲ್ಲಿ ನುಡಿಸಿದರೆ, ಅನ್ನಪೂರ್ಣದೇವಿಯವರು ಸುರ್ ಬಹಾರ್ ವಾದ್ಯದಲ್ಲಿ ನುಡಿಸುತ್ತಿದ್ದರು. ( ಸುರ್ ಬಹಾರ್ ಎನ್ನುವುದು ಸಿತಾರ್ ವಾದ್ಯದ ಇನ್ನೊಂದು ರೂಪ. ಸಿತಾರ್ ವಾದ್ಯಕ್ಕಿಂತ ಆಕಾರದಲ್ಲಿ ದೊಡ್ಡದಾಗಿದ್ದು, ಸಿತಾರ್‌ಗಿಂತ ಹೆಚ್ಚು ಮೀಟು ತಂತಿಗಳನ್ನು ಒಳಗೊಂಡ ವಾದ್ಯ. ಇದರಲ್ಲಿ ಸುಶ್ರಾವ್ಯವಾದ ನಾದವನ್ನು ಹೊರಡಿಸುವುದರ ಜೊತೆಗೆ, ಆಲಾಪ್ ಮತ್ತು ಜೋಡ್ ಅಲಾಪ್ ನುಡಿಸುವಿಕೆಗೆ ಪ್ರಸಿದ್ಧವಾದ ವಾದ್ಯವಾಗಿತ್ತು. ತಾನ್ ಸೇನ್ ನ ಸಂಗೀತ ಪರಂಪರೆಗೆ ಸೇರಿದ ಈ ವಾದ್ಯ, ಸಿತಾರ್ ಹಾಗೂ ಸರೋದ್ ವಾದ್ಯಗಳು ಒಂದೇ ವಾದ್ಯದ ವಿವಿಧ ಮಾದರಿಗಳಾಗಿವೆ. ಕರ್ನಾಟಕ ಸಂಗೀತದಲ್ಲಿ ವೀಣೆ ಮತ್ತು ರುದ್ರವೀಣೆ ಇದ್ದ ಹಾಗೆ) ನಂತರದ ದಿನಗಳಲ್ಲಿ ರವಿಶಂಕರ್ ಅವರಲ್ಲಿ ಸಂಗೀತ ಕುರಿತಂತೆ ಪ್ರಯೋಗಶೀಲತೆ ಮನೋಭಾವ ಹುಟ್ಟಿಕೊಂಡಿದ್ದು, ಭಾರತದ ಸಂಗೀತವನ್ನು ಪಾಶ್ಚಿಮಾತ್ಯ ಜಗತ್ತಿಗೆ ಪರಿಚಯಿಸಬೇಕೆಂಬ ಆಕಾಂಕ್ಷೆ ಹುಟ್ಟಿಕೊಂಡಿದ್ದು, ದಾಂಪತ್ಯದ ಬದುಕಿನಲ್ಲಿ ವಿರಸ ಹುಟ್ಟಿಕೊಳ್ಳಲು ಕಾರಣವಾಯಿತು. ಹಲವರ ಹೇಳಿಕೆಯ ಪ್ರಕಾರ, ಪಾಂಡಿತ್ಯದಲ್ಲಿ ಅನ್ನಪೂರ್ಣದೇವಿಯವರದು ರವಿಶಂಕರ್ ಅವರನ್ನು ಮೀರಿಸುವ ಪ್ರತಿಭೆಯಾಗಿತ್ತು. ಹಾಗಾಗಿ ಅನ್ನಪೂರ್ಣದೇವಿಯವರ ಸಾರ್ವಜನಿಕರ ಕಛೇರಿಗಳಿಗೆ ರವಿಶಂಕರ್ ತಡೆಯೊಡ್ಡಿದರು ಎಂಬ ಆರೋಪಗಳಿವೆ. ಆದರೆ, ಇವುಗಳಿಗೆ ಯಾವುದೇ ಆಧಾರಗಳಿಲ್ಲ.

ಇಪ್ಪತ್ತು ವರ್ಷಗಳ ಅವರ ದಾಂಪತ್ಯದ ಬದುಕಿನಲ್ಲಿ ರವಿಶಂಕ ರ ಅವರ ದಾಂಪತ್ಯದಾಚೆಗಿನ ಮಹಿಳೆಯರೊಂದಿಗಿನ ಸಂಬಂಧ ವಿಚ್ಛೇದನಕ್ಕೆ ಮೂಲಕಾರಣವಾಗಿದೆ. ರವಿಶಂಕರ್ ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿರುವಂತೆ ”ಕಮಲಾ ಎಂಬಾಕೆಯೊಂದಿನ ನನ್ನ ಸಂಬಂಧ ವಿರಸಕ್ಕೆ ಕಾರಣವಾಯಿತು. ಪ್ರತಿಯೊಂದು ವಿಷಯದಲ್ಲಿಯೂ ಅನ್ನಪೂರ್ಣ ನನ್ನನ್ನು ಸಂಶಯ ದೃಷ್ಟಿಯಿಂದ ನೊಡತೊಡಗಿದಾಗ ಹಾಗೂ ಸಂಗೀತ ವಿಚಾರದಲ್ಲಿ ವಿಭಿನ್ನ ದೃಷ್ಟಿಕೋನ ಹೊಂದಿದ್ದ ಫಲವಾಗಿ ನಾವಿಬ್ಬರು ಅಗಲುವುದು ಅನಿವಾರ್ಯವಾಯಿತು” ಎಂಬ ಮಾತು ಸತ್ಯಕ್ಕೆ ಹತ್ತಿರವಾಗಿದೆ.

1959ರಲ್ಲಿ ದಾಂಪತ್ಯ ಕಲಹ ತಾರಕಕ್ಕೇರಿದಾಗ, ಅನ್ನಪೂರ್ಣದೇವಿಯವರು ತಂದೆಯವರ ಸಲಹೆಯಂತೆ 1962ರಲ್ಲಿ ರವಿಶಂಕರ್‌ಗೆ ವಿಚ್ಛೇದನ ನೀಡಿ, ಮುಂಬೈ ನಗರದಲ್ಲಿ ಶಿಷ್ಯರಿಗೆ ಸಂಗೀತ ಪಾಠ ಹೇಳುತ್ತಾ ಜೀವಿಸತೊಡಗಿದರು. ಈ ಘಟನೆಯ ನಂತರ ಸಾರ್ವಜನಿಕ ಬದುಕಿಗೆ ತಿಲಾಂಜಲಿ ನೀಡಿದ ಅವರು ಎಂದಿಗೂ ರವಿಶಂಕರ್ ಕುರಿತಾಗಲಿ, ತಮ್ಮ ದಾಂಪತ್ಯ ಕುರಿತಾಗಲಿ ಮಾತನಾಡಲಿಲ್ಲ. ಕೊಲ್ಕತ್ತ ಮೂಲದ ಸ್ವಪ್ನ ಕುಮಾರ್ ಬಂಡೋಪಾಧ್ಯಾಯ ಎಂಬುವರು “An unheard Melody” (ಕೇಳದೇ ಉಳಿದ ಸ್ವರ ಮಾಧುರ್ಯ) ಎಂಬ ಕೃತಿ ರಚಿಸಿದಾಗಲೂ ಸಹ, ಕೃತಿಯಲ್ಲಿ ದಾಖಲಾಗಿರುವ ಅನೇಕ ವಿವರಗಳಿಗೆ ಅವರು ಪ್ರತಿಕ್ರಿಯೆ ನೀಡಲಿಲ್ಲ. 2012ರಲ್ಲಿ ಅಮೆರಿಕಾದಲ್ಲಿ ಪಂಡಿತ್ ರವಿಶಂಕರ್ ನಿಧನರಾದಾಗ ಪ್ರಪಥಮ ಬಾರಿಗೆ ಕೊಲ್ಕತ್ತದ ತಮ್ಮ ಶಿಷ್ಯ ನಿಖಿಲ್ ಬ್ಯಾನರ್ಜಿಯವರ ಒತ್ತಾಯದ ಮೇರೆಗೆ ಕೊಲ್ಕತ್ತ ನಗರದ ಇಂಗ್ಲಿಷ್ ದೈನಿಕ ಟೆಲಿಗ್ರಾಫ್‌ ಪತ್ರಿಕೆಗೆ ಐದು ನಿಮಿಷದ ಪ್ರತಿಕ್ರಿಯೆಯನ್ನು ದೂರವಾಣಿ ಮೂಲಕ ನೀಡಿದ್ದರು. ಈ ಹೇಳಿಕೆಯಲ್ಲಿಯೂ ಸಹ ರವಿಶಂಕರ ಅವರ ಪಾಂಡಿತ್ಯದ ಬಗ್ಗೆ ಹಾಗೂ ತನ್ನ ತಂದೆ ಮತ್ತು ಗುರು ಅಲ್ಲಾದಿಯಾಖಾನರ ಕುರಿತು ರವಿಶಂಕರ ಅವರಿ‌ಗಿದ್ದ ಅದಮ್ಯ ಪ್ರೀತಿ ಮತ್ತು ಗೌರವ ಕುರಿತು ಸ್ಮರಿಸಿಕೊಂಡಿದ್ದರು. ತಮ್ಮ ಪುತ್ರ ಶುಭೇಂದ್ರ ಶಂಕರ್ ಸಂಗೀತ ಕಲಿತು ರವಿಶಂಕರ್ ಜೊತೆ ಅಮೆರಿಕಾದಲ್ಲಿ ಜೀವಿಸಲು ಹೊರಟಾಗಲೂ ಸಹ ಅವರು ಪ್ರತಿಭಟಿಸಲಿಲ್ಲ. ಮಧ್ಯ ವಯಸ್ಸಿನಲ್ಲಿ ಪುತ್ರ ತೀರಿಹೋದಾಗ ಒಳಗೊಳಗೆ ಅತ್ತು ತಮ್ಮನ್ನು ತಾವು ಸಂತೈಸಿಕೊಂಡರು. ಘಾಸಿಗೊಂಡ ಅವರ ಎದೆಯ ಗಾಯಕ್ಕೆ ಸಂಗೀತವನ್ನು ಮದ್ದಾಗಿ ಬಳಸಿಕೊಂಡರು.

1990ರ ದಶಕದಲ್ಲಿ ಋಷಿಕುಮಾರ್ ಪಾಂಡೆ ಎಂಬುವರು ದೂರದ ಅಮೆರಿಕಾದಿಂದ ಸಂಗೀತ ಕಲಿಯಲು ಬಂದು ಒಂದು ದಿನ ನಾನು ನಿಮ್ಮನ್ನು ವಿವಾಹವಾಗುವುದಾಗಿ ತಿಳಿಸಿದಾಗ ಅನ್ನಪೂರ್ಣದೇವಿ ತಲ್ಲಣಿಸಿ ಹೋದರು. ವಯಸ್ಸಿನಲ್ಲಿ ಚಿಕ್ಕವರಾಗಿದ್ದ ಪಾಂಡೆಯವರಿಗೆ ಯಾವ ದೈಹಿಕ ಆಕರ್ಷಣೆಯೂ ಇರಲಿಲ್ಲ. ವಯಸ್ಸಾಗುತ್ತಿದ್ದ ತನ್ನ ಗುರು ಕಣ್ಣಿನ ತೊಂದರೆ, ಹಲ್ಲಿನ ತೊಂದರೆಯಿಂದ ಬಳಲುವಾಗ ಅವರನ್ನು ವೈದ್ಯರ ಬಳಿ ಕರೆದುಹೋಗಲು, ಆರೈಕೆ ಮಾಡಲು ಒಂದು ಜೀವ ಬೇಕಿತ್ತು. ಈ ಸ್ಥಾನವನ್ನು ಮಾತ್ರ ತುಂಬುತ್ತೇನೆ ಎಂದು ಗುರುವಿನ ಬಳಿ ನಿವೇದಿಸಿಕೊಂಡಾಗ ಅನ್ನಪೂರ್ಣದೇವಿ ಒಪ್ಪಿಗೆ ಸೂಚಿಸಿದ್ದರು. ದುರಂತವೆಂದರೆ, 2013ರಲ್ಲಿ ಅನ್ನಪೂರ್ಣ ಅವರ ಎದುರಿನಲ್ಲಿ ಪಾಂಡೆ ನಿಧನರಾದರು.

ದೇವಿಯವರ ಕೊನೆಯ ದಿನಗಳಲ್ಲಿ ಅವರ ಪ್ರೀತಿಯ ಶಿಷ್ಯ ನಿತ್ಯಾನಂದ ಹಳದೀಪುರ್ ಗುರುವಿನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರು. ಈ ಜಗತ್ತಿಗೆ, ಈ ಸಮಾಜಕ್ಕೆ ಅಥವಾ ಯಾವುದೇ ವ್ಯಕ್ತಿಗೆ ನೋವುಂಟು ಮಾಡಬಾರದು ಎಂಬಂತೆ ಬದುಕಿದ ಈ ಮಹಾನ್ ಸಂಗೀತಗಾರ್ತಿ ಎರಡು ವರ್ಷಗಳ ಹಿಂದೆ ಅಕ್ಟೋಬರ್ ತಿಂಗಳಿನಲ್ಲಿ (2018) ತಮ್ಮ ಪರಿಪೂರ್ಣ ಬದುಕಿಗೆ ವಿದಾಯ ಹೇಳಿದರು. ಆದರೆ, ಹಿಂದೂಸ್ತಾನಿ ರಾಗವಾದ ಕೌಶಿಕ್ ರಾಗದಲ್ಲಿ ಅಪ್ರತಿಮವಾದ ಸಾಧನೆ ಮಾಡಿದ್ದ ಈ ಮಹಾನ್ ಕಲಾವಿದೆ ಭಾರತದ ಸಂಗೀತ ರಸಿಕರಿಗೆ ತಮ್ಮ ಸ್ವರ ಮಾಧುರ್ಯವನ್ನು ಉಣಬಡಿಸದೇ ಹೋದದ್ದು ಮಾತ್ರ ದುರಂತವಲ್ಲದೆ ಬೇರೇನೂ ಅಲ್ಲ.

ಇದನ್ನು ಓದಿ:

ಶುದ್ದ ಸಂಗೀತದ ಪ್ರತಿಪಾದಕ: ಪಂಡಿತ್ ವಿಷ್ಣು ದಿಗಂಬರ್ ಪಲುಸ್ಕರ್

ಹಿಂದೂಸ್ತಾನಿ ಸಂಗೀತದ ಆಧುನಿಕ ಪಿತಾಮಹ- ವಿಷ್ಣು ನಾರಾಯಣ ಭಾತಖಾಂಡೆ

ಕಿರಾನಾ ಘರಾಣದ ಉಸ್ತಾದ್ ಅಬ್ದುಲ್ ಕರೀಂ ಖಾನ್

MORE NEWS

ಅನಾಮಿಕರಾಗಿ ಉಳಿದ ಮಹಾನ್ ಗಾಯಕಿಯರು...

17-04-2021 ಬೆಂಗಳೂರು

ಉತ್ತರ-ದಕ್ಷಿಣ ಎಂಬ ಭೇದವಿಲ್ಲದೆ ಬಹುತೇಕ ಪ್ರತಿಭಾವಂತ ಕಲಾವಿದೆಯರ ಮಾಹಿತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ ಎನ್ನು...

‘ಸೂಳ್ನುಡಿ’ಯಾಗಬೇಕಾದ ಮಾತು ‘ಸುಳ್ಳ...

15-04-2021 ಬೆಂಗಳೂರು

ಸ್ವಜನ-ಸ್ವಜಾತಿ ಪಕ್ಶಪಾತಿಯ ಇಂದಿನ ‘ಜಾತಿಶ್ರೀ’ ಸ್ವಾಮೀಜಿಗಳು ಜ್ಞಾನಯೋಗಿ ತತ್ವದ ಅರ್ಥವನ್ನೇ ನಾಶ ಮಾಡುತ...

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್...

14-04-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...