ಕೇಳುವ ಸಂಸ್ಕೃತಿಗೆ ಇಂಬು ನೀಡುವ readout


ಕತೆ ಕೇಳುವುದು ಯಾರಿಗಿಷ್ಟವಿಲ್ಲ. ಹಾಗೆಯೇ ಹೇಳುವುದು ಕೂಡ. ಹೀಗೆ ಹೇಳುವ-ಕೇಳುವ ಮೌಖಿಕ ಪರಂಪರೆ ಹಿಂದಕ್ಕೆ ಸರಿಯಿತೇ? ಎಂಬ ಪ್ರಶ್ನೆ ಹುಟ್ಟಲು ಆರಂಭವಾದ ದಿನಗಳಲ್ಲಿಯೇ ಕತೆಯ ಲೋಕ ವಿಭಿನ್ನ ರೀತಿಯಲ್ಲಿ ತೆರೆದುಕೊಳ್ಳುತ್ತಿದೆ. ಓದುತ್ತಿದ್ದ ಓದುಗನಿಗೆ ಕತೆ ಹೇಳಿ ’ಕೇಳುಗ’ನನ್ನು ರೂಪಿಸುವ ಹಲವು ಪ್ರಯತ್ನಗಳು ಡಿಜಿಟಲ್‌ ಮಾಧ್ಯಮದಲ್ಲಿ ನಡೆಯುತ್ತಿವೆ. ಯುವಕರ ಗುಂಪೊಂದು ’ರೀಡ್‌ಔಟ್‌’ ಮೂಲಕ ಕನ್ನಡ ಕತೆಯ ಪರಂಪರೆಯನ್ನು ವಿಭಿನ್ನ ರೀತಿಯಲ್ಲಿ ಜೀವಂತವಾಗಿಡುವ ಪ್ರಯತ್ನ ಮಾಡುತ್ತಿದೆ. ಈ ಪ್ರಯತ್ನವನ್ನು ಪಲ್ಲವಿ ಎಡೆಯೂರು ಅವರು ಈ ಬರೆಹದಲ್ಲಿ ದಾಖಲಿಸಿದ್ದಾರೆ.

 

ಪುಸ್ತಕ ಹಾಗೂ ಫ್ರೆಂಡ್ಸ್‌ ಯಾವತ್ತೂ ಹಳತಾಗಲ್ಲ. ಒಂದಷ್ಟು ಕಾಲ ಕಳೆದ ನಂತರ ಮರು ಭೇಟಿ ಆದಾಗ ಪುಸ್ತಕ ಹಾಗೂ ಗೆಳೆಯರು ಹೊಸ ಮಿಂಚು ಹುಟ್ಟುವಂತೆ ಮಾಡಬಲ್ಲರು. ಕತೆ-ಕವಿತೆ-ಲೇಖನಗಳ ಓದಿನ ಸುಖವನ್ನು ಕೇಳುವ ಮೂಲಕ ವಿಸ್ತರಿಸುವ ಕೆಲಸವನ್ನು “ReadOut” ಮಾಡುತ್ತಿದೆ. ಕೇಳುವ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯಲೋಕದಲ್ಲಿ ಇದೊಂದು ವಿಶಿಷ್ಟ ಪ್ರಯತ್ನ. 

 ಇದು ಆರಂಭವಾದದ್ದು ಸಮಾನಾಸಕ್ತ ಗೆಳೆಯರ ಉತ್ಸಾಹದಿಂದ ರವಿಪ್ರಸಾದ್, ಅರುಣ್, ರಾಜೇಶ್, ವಿಶ್ವಾಸ್ ಹಾಗೂ ಸಚ್ಚಿದಾನಂದ ಅವರ ಗೆಳೆಯರ ಗುಂಪು ತಮ್ಮ ಬಿಡುವಿನ ಸಮಯದಲ್ಲಿ ತಾವು ಓದಿ, ಮೆಚ್ಚಿದ ಕತೆಗೆ ದನಿ ನೀಡಿ, ರೆಕಾರ್ಡ್ ಮಾಡಿ ವಾಟ್ಸ್ಯಾಪ್ ‌ನಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದರು. ಆನಂತರ ಹೀಗೆ ತಮ್ಮಲ್ಲಿಯೇ ಹಂಚಿಕೊಳ್ಳುವ ಬದಲು ಇನ್ನಿತರ ಸಾಹಿತ್ಯಾಸಕ್ತರನ್ನು ಸೇರಿಸಿ ಯುಟ್ಯೂಬ್‌ನಲ್ಲಿಗೆ ವಿಸ್ತರಿಸಬಾರದೇಕೆ ಎಂಬ ವಿಚಾರ ಹೊಳೆಯಿತು ವಿಶ್ವಾಸ್‌ ಅವರಿಗೆ. ಆ ತಕ್ಷಣವೇ ತಮ್ಮ ಗೆಳೆಯರೊಂದಿಗೆ ಇದನ್ನು ಹಂಚಿಕೊಂಡು ಜಾರಿಗೆ ತಂದದ್ದೆ ಈ ಕತೆ ಹೇಳುವ ಕಾರ್ಯಕ್ರಮ. ಒಂದು ಕತೆ ಇಂದ ಪ್ರಾರಂಭಗೊಂಡು ಇಂದು ಶತಕದತ್ತ ಹೆಜ್ಜೆ ಹಾಕುತ್ತಿದೆ. ಪ್ರತಿದಿನವೂ ತಪ್ಪದೆ ಒಂದು ಕತೆಯನ್ನು ಯುಟ್ಯೂಬ್‌ನಲ್ಲಿ ಪ್ರಸಾರ ಮಾಡುವ ಈ ಬಳಗ ಮುಂದಿನ ದಿನಗಳಲ್ಲಿ ಸಾಹಿತ್ಯದ ಇತರ ಪ್ರಕಾರಗಳಿಗೂ ಮಾನ್ಯತೆ ನೀಡುವ ಯೋಜನೆ ಹೊಂದಿದೆ. ಹೀಗೆ ಮೊದಲು ಓದಿ ಯುಟ್ಯೂಬ್‌ನಲ್ಲಿ ಹಂಚಿಕೊಂಡ ಕತೆ ಸಾಹಿತಿ ಜಯಂತ್‌ ಕಾಯ್ಕಿಣಿ ಅವರ ‘ನೋ ಪ್ರೆಸೆಂಟ್ಸ್ ಪ್ಲೀಸ್’. ಪ್ರಶಾಂತ್ ಹಿರೇಮಠ ಅವರ ದನಿಯಲ್ಲಿ ಈ ಕತೆಯ ಓದು ಮೂಡಿ ಬಂದಿರುವುದು ಹೀಗೆ

 

ಮೊದಲಿನಿಂದಲೂ ಸಹ ಕತೆ ಓದಲು ಎಲ್ಲರಿಗೂ ಸಮಾನ ಆದ್ಯತೆ ನೀಡಿದರು ಈ ಗೆಳೆಯರ ಗುಂಪು. ಆದರೆ ಇದೀಗ ಅದೆಷ್ಟೋ ಸಾಹಿತ್ಯಾಸಕ್ತರು ಸ್ವ-ಆಸಕ್ತಿಯಿಂದ, ಪ್ರೀತಿಯಿಂದ ಕತೆಗಳನ್ನು ಓದಿ ರೆಕಾರ್ಡ್ ಮಾಡಿ ಕಳುಹಿಸುತ್ತಿದ್ದಾರೆ. ಕಲೆಯ ವಿವಿಧ ರಂಗದಲ್ಲಿ ದಿಗ್ಗಜರೆನಿಸಿರುವ ಜಯಂತ್‌ ಕಾಯ್ಕಿಣಿ, ವೈದೇಹಿ, ದೇವನೂರು ಮಹಾದೇವ, ರಾಜೇಂದ್ರ ಚೆನ್ನಿ, ಅಚ್ಯುತ್‌ ಕುಮಾರ್‌, ಮುಖ್ಯಮಂತ್ರಿ ಚಂದ್ರು, ಸುಧಾ ಬೆಳವಾಡಿ, ಕೆ ಜೆ ಸಚ್ಚಿದಾನಂದ, ಬಿ ಕೆ ಸುಮತಿ ಮುಂತಾದವರು ತಮ್ಮ ನೆಚ್ಚಿನ ಕತೆಗಾರರ ಕತೆಗೆ ದನಿಯಾಗಿದ್ದಾರೆ. “ಈಗಲೂ ಸಹ ಇದರ ರುವಾರಿಗಳು ನಾವಲ್ಲ. ಕತೆ ಓದುವವರು-ಕೇಳುಗರು-ಪ್ರತಿಸ್ಪಂದಿಸುವವರು. ನಾವೆಂದೂ ‘ReadOut’ ನಮ್ಮದೆಂದು ಚೌಕಟ್ಟು ಹಾಕಿಲ್ಲ. ಸಾಹಿತ್ಯಾಸಕ್ತರೇ ಇದರ ಪಾಲುದಾರರು, ಒಡೆಯರು. ಯಾರು ಬೇಕಾದರೂ ಜವಾಬ್ದಾರಿ ತೆಗೆದುಕೊಂಡು ಮುನ್ನಡೆಸುವ ಸದಾವಕಾಶ ಇರುವ ಮುಕ್ತಕೆ ನಮ್ಮಲ್ಲಿದೆ” ಎನ್ನುತ್ತಾರೆ ಕೆ. ಜೆ. ಸಚ್ಚಿದಾನಂದ. 

ಕತೆಗಾರ, ಸಾಹಿತಿ ಜಯಂತ ಕಾಯ್ಕಿಣಿ ಅವರು ಸಹ ಮುಕುಂದ ಜೋಷಿ ಅವರ ನಿರುತ್ತರ ಕಾದಂಬರಿಯ ಒಂದು ಅಧ್ಯಾಯವನ್ನು ಪ್ರೀತಿಯಿಂದ ಓದಿದ್ದು ಇಲ್ಲಿದೆ.

ಬದುಕಿನ ವೈರುಧ್ಯಗಳನ್ನು ವೈಪರೀತ್ಯಗಳನ್ನು ಮತ್ತು ಅದರಿಂದ ಉಂಟಾಗುವ ವಿಚಿತ್ರ ಸನ್ನಿವೇಶಗಳಿಗೆ ಮನುಷ್ಯ ಸ್ಪಂದಿಸುವ ರೀತಿಯನ್ನು ತೇಜಸ್ವಿ ಗ್ರಹಿಸಿದ ಕತೆ ‘ಎಂಗ್ಟನ ಪುಂಗಿ’. ಹಾಸ್ಯ ಮತ್ತು ವಿಡಂಬನೆಯ ಮೂಲಕ ಬದುಕಿನ ದುರಂತಗಳನ್ನು ಮತ್ತು ಸತ್ಯಗಳನ್ನು ಒಂದು ಹೊಸ ದೃಷ್ಟಿಕೋನದಿಂದ ಮುಖಾಮುಖಿಯಾಗಿಸಿ, ಅವರವರ ಭಾವಕ್ಕೆ ಎಂಬಂತೆ ನಮ್ಮನ್ನು ಒಂದು ಹೊಸ ಚಿಂತನೆ ಇರುವ ಈ ಕತೆಯನ್ನು ‘ಬಿ. ಪಿ. ಅರುಣ್’ ಅವರು ಓದಿದ್ದು ಇಲ್ಲಿದೆ. 

ಶಿಷ್ಟವಲ್ಲದ ದಲಿತ , ಪ್ರಾದೇಶಿಕ ಭಾಷೆಯನ್ನೇ ಬಳಸಿ ರಚಿಸಿದ, ಕನ್ನಡ ಸಾಹಿತ್ಯರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ಕೃತಿ ‘ಕುಸುಮಬಾಲೆ’. ಅತೀ ಮೆಚ್ಚುಗೆಗೂ, ಅತಿ ಟೀಕೆಗಳ ಮಧ್ಯೆ ಇಂದೂ ಚರ್ಚೆಗೊಳಪಡುತ್ತಿರುವ ಈ ವಿಶಿಷ್ಟ ಕೃತಿಯನ್ನು ರಚಿಸಿದ ದೇವನೂರು ಮಹಾದೇವ. ಅವರು ತಮ್ಮದೇ ರಚನೆಯ ಈ ಕೃತಿಯ ಆಯ್ದ ಭಾಗಕ್ಕೆ ದನಿಯಾಗಿ ಓದಿದ್ದು ಇಲ್ಲಿದೆ.

 

ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲ ಅಪೂರ್ವ ಗದ್ಯ ಕೃತಿ ವಡ್ಡಾರಾಧನೆ. ಅದರ ಮೂರನೇ ಕತೆಯಾದ ‘ಗಜಕುಮಾರನ ಕತೆ’ಯ ರಸದೌತಣವನ್ನು ಇಲ್ಲಿ ಉಣಬಡಿಸಿದ್ದಾರೆ  ಬಿ.ಎಸ್. ವಿನಯ್. ಪೂರ್ವದ ಹಳಗನ್ನಡ ಮತ್ತು ಹಳಗನ್ನಡದ ಮಿಶ್ರಣವಿರುವ, ಹೊಟ್ಟೆ ಅಡಿಯಾಗಿ ಮಲಗಿಸಿ ಚರ್ಮವನ್ನು ಸುಲಿದು, ಕಾದ ಕಬ್ಬಿಣದ ಮೊಳೆಗಳನ್ನು ಹೊಡೆದುದನ್ನು ಸಹಿಸಿದ ಈ ಸಣ್ಣ ಕಥೆ ಇಲ್ಲಿದೆ. 

ಪರಿಸರ ವಿಜ್ಞಾನಿಗಳಾಗಿ ತಮ್ಮ ಅಪಾರ ಅಧ್ಯಯನ ಹಾಗೂ ವಿಜ್ಞಾನ ಬರಹಗಳ ಮೂಲಕ ಓದುಗರನ್ನು ಬೆರಗಿಗೆ ಹಚ್ಚಿದವರು ಕೃಪಾಕರ-ಸೇನಾನಿ. ತಮ್ಮ ಬಹುಪಾಲು ಬದುಕನ್ನು ಕಾಡಿನಲ್ಲೇ ಕಳೆದು ಅವರ ಅನುಭವಲೋಕವನ್ನು ತೆರೆದಿಟ್ಟಿರುವ ಲೇಖನ ‘ಕಣ್ಣರಿಯದೊಡೇಂ ಕರುಳರಿಯದೆ’. ಸೊಗಸಾಗಿ ಓದಿದ್ದಾರೆ ಲೇಖಕಿ ವಿಜಯಶ್ರೀ ಹಾಳಾಡಿ. 

ಆಸೆಯೇ ದುಖಃಕ್ಕೆ ಮೂಲ ಎಂದು ಮೋಕ್ಷವನ್ನು ಅರಸುತ್ತಾ ಸ್ವಯಂ ಜ್ಞಾನೋದಯವನ್ನು  ಕಂಡುಕೊಂಡವನು ಬುದ್ಧ. ಈ ಕುರಿತು ಪಿ. ಲಂಕೇಶ್ ಅವರು ಬರೆದ ‘ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’ ಲೇಖನ ಮತ್ತೆ ಮತ್ತೆ ಓದಿದಷ್ಟು ಚಿಂತನೆಗೆ ಹಚ್ಚುತ್ತದೆ. ಈ ಬರಹಕ್ಕೆ ಮನೋಜ್ಞವಾಗಿ ದನಿ ನೀಡಿದ್ದಾರೆ ಪಲ್ಲವ ವೆಂಕಟೇಶ್. 

ನಮ್ಮಲ್ಲಿ ಬಹುತೇಕರ ಅಳಲು ಏನೆಂದರೆ ಕಾಲೇಜು ವಿದ್ಯಾರ್ಥಿ ಹಾಗೂ ಯುವಜನರಿಗೆ ಸಾಹಿತ್ಯದೊಲವು ಕಡಿಮೆ ಎಂದು. ಆದರೆ ‘Readout'ನ ಕತೆ ಹೇಳುವ ಸರಣಿಯನ್ನು ನೋಡಿ ಪ್ರೇರಣೆಗೊಂಡ ’ತೇಜಸ್ ಎಚ್. ಬಾಡಾಲ’ ಅವರು ತಮ್ಮ ಪಠ್ಯಪುಸ್ತಕದ ಒಂದು ಕತೆಯನ್ನು ಕನ್ನಡಕ್ಕೆ ಅನುವಾದಿಸಿ ಓದಿದ್ದಾರೆ. ಪಿ.ಯು.ಸಿ ಓದುತ್ತಿರುವ ಅವರು ‘ಪತ್ರ’ ಎಂಬ ಕತೆಯನ್ನು ತಾವೇ ಸ್ವತಃ ಅನುವಾದಿಸಿ ಓದಿದ್ದು ಇಲ್ಲಿದೆ. 

`readout' ಯುಟ್ಯೂಬ್‌ ಚಾನೆಲ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ : https://www.youtube.com/channel/UC8dq7Bqhu1wleozofVSNpqg/videos

MORE FEATURES

ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕು: ಮಮತಾ ಜಿ. ಸಾಗರ್

16-04-2024 ಬೆಂಗಳೂರು

‘ವೈವಿಧ್ಯತೆಯಿಂದ ಏಕತೆಯನ್ನ ಕಾಣಬೇಕೆ ಹೊರತು, ವೈವಿಧ್ಯತೆಯನ್ನ ಅಳಿಸಿ ಏಕತೆಯನ್ನ ಕಟ್ಟಲಾಗಲ್ಲ’ ಎನ್ನುತ್ತ...

ಎಲ್ಲ ಕಾಲಕ್ಕೂ ಸಲ್ಲುವ ಮಕ್ಕಳ ಕವನ ಸಂಕಲನ ‘ಏನು ಚಂದವೋ…’‌

15-04-2024 ಬೆಂಗಳೂರು

"ಮಕ್ಕಳಿಗಾಗಿ ಈಗಾಗಲೇ ಮೂರು ಕವನ ಸಂಕಲನಗಳನ್ನು ಹೊರತಂದಿರುವ ಎಸ್. ಎಸ್. ಸಾತಿಹಾಳ ಅವರು ಈಗ ‘ಏನು ಚಂದವೋ&h...

ಕಥೆಯ ಅಂತ್ಯ, ಅಚ್ಚರಿ, ಹೃದಯಸ್ಪರ್ಶಿ ಅಂಶಗಳಿಂದ ಸಮೃದ್ಧವಾಗಿದೆ

16-04-2024 ಬೆಂಗಳೂರು

"ಸಾಹಿತ್ಯಕ, ಭಾಷೆ ಮತ್ತು ಮನೋರಂಜನೆಯ ಪರಿಭಾಷೆಯಿಂದ ನೋಡುವುದಾದರೆ “ಯಾವುದೀ ಹೊಸ ಒಗಟು?" ಕಾದಂಬರಿ ಒ...