ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಅಗಲಿದ ಸಾಹಿತ್ಯದಿಗ್ಗಜರ ‘ಸ್ಮೃತಿ’ ದಾಖಲೆ.


‘ಸಾಕ್ಷ್ಯಚಿತ್ರಗಳು ಚಲಿಸುವ ಚಿತ್ರಗಳ ಮೂಲಕ ನೆನಪುಗಳನ್ನು ದಾಖಲಿಸುವ ಸಾಮರ್ಥ್ಯ ಹೊಂದಿವೆ. ಲೇಖಕರ ಕೃತಿಗಳು ಹಾಗೂ ಅವರ ಸಾಂಸ್ಕೃತಿಕ-ಸಾಹಿತ್ಯಕ ಮಹತ್ವವನ್ನ ಚಿತ್ರಿಸುತ್ತವೆ’ ಎನ್ನುತ್ತಾರೆ ಪತ್ರಕರ್ತ, ಲೇಖಕ ದೇವು ಪತ್ತಾರ. ಕೇಂದ್ರ ಸಾಹಿತ್ಯ ಅಕಾಡೆಮಿ ಅಗಲಿದ ಸಾಹಿತಿಗಳ ಕುರಿತಾದ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಿದ್ದು, ಸಾಹಿತ್ಯ ದಿಗ್ಗಜರ ಸಾಧನೆಗಳನ್ನು ದಾಖಲಿಸುತ್ತಿದೆ. ಈ ಕುರಿತು ದೇವು ಪತ್ತಾರ ಅವರ ಬರೆಹ ಇಲ್ಲಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯು ‘ಸ್ಮೃತಿ’ ಸರಣಿಯ ಆರಂಭಿಸಿದೆ. ಅದು ಅಕಾಡೆಮಿ ಸಿದ್ಧಪಡಿಸಿದ ಲೇಖಕ/ಸಾಹಿತಿಗಳ ಸಾಕ್ಷಚಿತ್ರ ಪ್ರದರ್ಶನ. ಇತ್ತೀಚೆಗೆ ಅಸು ನೀಗಿದ ಭಾರತದ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ ಐವರು ಲೇಖಕರ ಸಾಕ್ಷ್ಯಚಿತ್ರಗಳ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡಿತು. ‘ಸ್ಮೃತಿ’ ಸರಣಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಬಂಗಾಳಿ ಲೇಖಕ ಶಂಖಗೋಷ, ಮೈಥಿಲಿ ಭಾಷೆಯ ಸಾಹಿತಿ ಚಂದ್ರನಾಥ ಮಿಶ್ರಾ (ಅಮರ), ಮಲಯಾಳಂನ ಸುಗತಕುಮಾರಿ, ಓಡಿಯಾ ಭಾಷೆಯ ಮನೋಜ್‌ ದಾಸ್‌ ಮತ್ತು ಸಂಸ್ಕೃತದ ರೇವಾಪ್ರಸಾದ್‌ ದ್ವಿವೇದಿ ಅವರ ಸಾಕ್ಷ್ಯಚಿತ್ರಗಳ ಗೌರವ ನಮನ ಸಲ್ಲಿಸಿತು.

ಸಾಕ್ಷ್ಯಚಿತ್ರಗಳು ಚಲಿಸುವ ಚಿತ್ರಗಳ ಮೂಲಕ ನೆನಪುಗಳನ್ನು ದಾಖಲಿಸುವ ಸಾಮರ್ಥ್ಯ ಹೊಂದಿವೆ. ಲೇಖಕರ ಕೃತಿಗಳು ಹಾಗೂ ಅವರ ಸಾಂಸ್ಕೃತಿಕ-ಸಾಹಿತ್ಯಕ ಮಹತ್ವವನ್ನ ಚಿತ್ರಿಸುತ್ತವೆ. ಸಾಹಿತ್ಯಲೋಕದ ಮಹತ್ವದ ವ್ಯಕ್ತಿಗಳ ಸಾಧನೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ-ತಲುಪಿಸುವ ಮಹತ್ವದ ಕೆಲಸ ಮಾಡುತ್ತಿವೆ. ಲೇಖಕರ ಹಾಗೂ ಅವರ ಸಾಹಿತ್ಯದ ಮಹತ್ವ-ಸಾರವನ್ನು ಗಂಭೀರ ಚರ್ಚೆ, ಆಪ್ತಸಂವಾದ, ದಿನನಿತ್ಯದ ಜೀವನವಿಧಾನ, ಕೃತಿ-ವಿಚಾರ-ಪಾತ್ರಗಳು ರೂಪುಗೊಂಡ ಬಗೆ, ಸಾಹಿತ್ಯಕೃತಿಗಳ ವಾಚನ, ವಿಮರ್ಶಕರ-ಓದುಗರ ಅಭಿಪ್ರಾಯಗಳನ್ನು ಒಳಗೊಂಡಿವೆ. ಈ ಚಿತ್ರಗಳ ನಿರ್ದೇಶಕರು ಬರೆಹದಲ್ಲಿದ್ದ ಸಂಗತಿಗಳೇ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸುವ ಪುನರಾವೃತ್ತಿಯ ತಪ್ಪಿಸಿದ್ದಾರೆ. ಅದಕ್ಕಾಗಿ ಅವರು ಕ್ಯಾಮರಾ ಹಾಗೂ ಮೈಕ್ರೋಫೋನ್‌ಗಳನ್ನು ಬಳಸಿ ದಾಖಲಿಸಿಕೊಂಡಿದ್ದಾರೆ. ಈ ಸಾಕ್ಷ್ಯಚಿತ್ರಗಳು ಕೇವಲ ಸಾಹಿತಿಗಳ ಬದುಕಿನ ದಾಖಲೀಕರಣ ಮಾತ್ರವಾಗಿರದೆ ಲೇಖಕರ ವಿಚಾರ ಹಾಗೂ ಸಾಹಿತ್ಯಕೃತಿಗಳ ಸ್ವರೂಪದ ಬಗೆಗೂ ಚರ್ಚಿಸುತ್ತವೆ.

ಲೇಖಕರ ಬದುಕು-ಬರೆಹಗಳನ್ನು ದಾಖಲಿಸಿಕೊಳ್ಳುವ ಹಾಗೂ ಸಾಧನೆಗಳ ಮಹತ್ವ ಬಿಂಬಿಸುವ ಸಾಕ್ಷ್ಯಚಿತ್ರಗಳ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡ ಸಾಹಿತ್ಯ ಅಕಾಡೆಮಿಯು ಇದುವರೆಗೆ 150ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದೆ.

ವಿವಿಧ ಭಾರತೀಯ ಭಾಷೆಗಳಲ್ಲಿ ಬರೆಯುವ ಸಾಹಿತಿಗಳ ಜೀವನ-ಸಾಧನೆಗಳ ವಿಡಿಯೋ ಸಾಕ್ಷ್ಯಚಿತ್ರಗಳು ಸಾಹಿತ್ಯ ಅಕಾಡೆಮಿಯ ಅಮೂಲ್ಯ ಆಕರಗಳಾಗಿವೆ. ಸಾಹಿತಿಯ ಜೀವನವನ್ನು ದಾಖಲಿಸಿಕೊಳ್ಳಲು ದೃಶ್ಯಮಾಧ್ಯಮದ ಹೆಸರಾಂತ ನಿರ್ದೇಶಕರನ್ನು ಆಯ್ಕೆ ಮಾಡಿ ಅವರಿಗೆ ಈ ಕೆಲಸವನ್ನು ವಹಿಸಲಾಗುತ್ತಿತ್ತು. ಬರೆಹ-ಪುಸ್ತಕಗಳ ಮೂಲಕ ಮಾತ್ರವಲ್ಲದೆ ಲೇಖಕರನ್ನು ದೃಶ್ಯ ಮಾಧ್ಯಮದ ಮೂಲಕವೂ ಮುಂದಿನ ಜನಾಂಗಕ್ಕೆ ಪರಿಚಯಿಸುವ ವಿಭಿನ್ನ-ವಿಶಿಷ್ಟ ಪ್ರಯೋಗವನ್ನು ಅಕಾಡೆಮಿ ಮಾಡುತ್ತ ಬಂದಿರುವುದು ಶ್ಲಾಘನೀಯ ಕೆಲಸ.

ಆಧುನಿಕ ಡಿಜಿಟಲ್‌ ತಂತ್ರಜ್ಞಾನ ಬರುವ ಬಹಳಷ್ಟು ಮುಂಚೆಯೇ ಅಕಾಡೆಮಿ ಸಾಕ್ಷ್ಯಚಿತ್ರಗಳ ಮಹತ್ವ ಅರಿತಿತ್ತು. ಆದ್ದರಿಂದಲೇ ಅಕಾಡೆಮಿಯ ಸಾಕ್ಷ್ಯಚಿತ್ರಗಳು ವಿವಿಧ ಫಾರ್ಮ್ಯಾಟ್‌ಗಳಲ್ಲಿವೆ. ಫಿಲಂ, ಸಿಡಿ, ಡಿವಿಡಿಗಳಲ್ಲಿಯೂ ಅವುಗಳನ್ನು ಸಾರ್ವಜನಿಕರಿಗೆ/ಆಸಕ್ತರಿಗೆ ಒದಗಿಸಲಾಗುತ್ತಿತ್ತು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯದ ಬಗ್ಗೆ ಅರಿವು-ಆಸಕ್ತಿ ಮೂಡಿಸುವ ಪ್ರಕ್ರಿಯೆ ಭಾಗವಾಗಿ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು.

ಕನ್ನಡದ ಪ್ರಮುಖ ಲೇಖಕರಾದ ಪು.ತಿ.ನರಸಿಂಹಾಚಾರ್‌ (ನಿರ್ದೇಶನ: ಚಂದ್ರಶೇಖರ ಕಂಬಾರ), ಯು.ಆರ್‌. ಅನಂತಮೂರ್ತಿ (ನಿರ್ದೇಶನ: ಕೃಷ್ಣ ಮಾಸಡಿ), ಗೋಪಾಲಕೃಷ್ಣ ಅಡಿಗ (ನಿರ್ದೇಶನ: ಗಿರೀಶ ಕಾರ್ನಾಡ್), ಗಿರೀಶ ಕಾರ್ನಾಡ್‌ (ನಿರ್ದೇಶನ: ಕೆ.ಎಂ. ಚೈತನ್ಯ) ಇತ್ಯಾದಿ ಚಿತ್ರಗಳನ್ನೂ ಅಕಾಡೆಮಿ ನಿರ್ಮಿಸಿದೆ. ಒಟ್ಟಾರೆಯಾಗಿ ಕನ್ನಡ ಲೇಖಕರನ್ನು ಕುರಿತ ಸಾಕ್ಷ್ಯಚಿತ್ರಗಳ ಸಂಖ್ಯೆ ಕಡಿಮೆಯೇ ಸರಿ. ಕನ್ನಡದ ಮೂವರು ಅಧ್ಯಕ್ಷರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರೂ ಸಾಕ್ಷ್ಯಚಿತ್ರಗಳ ಸಂಖ್ಯೆ ಹೆಚ್ಚಿಸುವುದು ಸಾಧ್ಯವಾಗದೇ ಇರುವುದು ವಿಚಿತ್ರ ಮತ್ತು ವಿಷಾದದ ಸಂಗತಿ.

ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯೂ ಕೆಲವು ಕನ್ನಡ ಲೇಖಕರ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದೆ. ಆ ಬಗ್ಗೆ ಮತ್ತೊಮ್ಮೆ ಬರೆಯಬಹುದು. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರೊ. ಎಂ.ಎಚ್‌. ಕೃಷ್ಣಯ್ಯ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ’ಸ್ವಂತ ಕವಿತೆಯ ಓದು’ ಎಂಬ ಕವಿತೆಯ ವಾಚನದ ವಿಡಿಯೋ ದಾಖಲೀಕರಣ ನಡೆಸಿತ್ತು. ಅದೊಂದು ಮಹತ್ವದ ಮೈಲಿಗಲ್ಲು. ಕವಿಯ ಧ್ವನಿಯಲ್ಲಿಯೇ ಕವಿತೆ ವಾಚನ ನೋಡುವ-ಕೇಳುವ ವಿಭಿನ್ನ ಪ್ರಯೋಗ-ಪ್ರಯತ್ನ ಅದಾಗಿತ್ತು.

ಹೆಚ್ಚುತ್ತಿರುವ ಮಲ್ಟಿಮೀಡಿಯಾ ಕಂಟೆಂಟ್‌ ಬಳಕೆಯ ಈ ದಿನಗಳಲ್ಲಿ ಸಾಹಿತಿಗಳು ಮತ್ತು ಸಾಹಿತ್ಯಕೃತಿಗಳನ್ನು ಕುರಿತ ವಿಡಿಯೋ-ಆಡಿಯೋ ದಾಖಲೆಗಳಿಗೆ ಹೆಚ್ಚಿನ ಮಹತ್ವ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ-ಸಾಂಸ್ಕೃತಿಕ ವಲಯ ಎಚ್ಚೆತ್ತು ಪ್ರತಿಕ್ರಿಯಿಸುವ ಅಗತ್ಯವಿದೆ.

ಪು.ತಿ.ನರಸಿಂಹಾಚಾರ್ ಅವರ ಕುರಿತಾದ ಸಾಕ್ಷ್ಯಚಿತ್ರ:

ಗಿರೀಶ್ ಕಾರ್ನಾಡ್ ಅವರ ಕುರಿತಾದ ಸಾಕ್ಷ್ಯಚಿತ್ರ:

MORE FEATURES

'ಅವಳ ಹೆಜ್ಜೆ ಗುರುತು' ನನ್ನ ಪ್ರಾಮಾಣಿಕ ಪ್ರಯತ್ನವಷ್ಟೇ : ಸೌಮ್ಯ ಕಾಶಿ

19-04-2024 ಬೆಂಗಳೂರು

‘ಕತೆ ಹೀಗೆಯೇ ಇರಬೇಕು, ಹೀಗೇ ಬರೆಯಬೇಕು, ಹೀಗೆ ಬರೆದರೇ ಚಂದ ಎಂಬ ಲೆಕ್ಕಾಚಾರಗಳಿನ್ನೂ ನನ್ನ ತಲೆಗೆ ಹತ್ತಿಲ್ಲ. ಆ...

ನಿತ್ಯ ಜೀವನದ‌ ಮಾರ್ಗದರ್ಶನಕ್ಕಾಗಿ ಓದಬೇಕಾದ ಕೃತಿ ‘ಇರುವುದೆಲ್ಲವ ಬಿಟ್ಟು’

19-04-2024 ಬೆಂಗಳೂರು

'ಗೆಲುವಿಗಿಂತ ಸೋಲನ್ನೆ ಹೆಚ್ಚು ಪ್ರೀತಿಸುವ ರೈಗಳು ಸೋಲು ನಮ್ಮನ್ನು ನಮ್ರರನ್ನಾಗಿ ಮಾಡಿದರೆ ಗೆಲುವು ನಮ್ಮನ್ನು ಅಹಂ...

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...