‘ಖಾಸಗಿ ಕವಿತೆ ಬಹಿರಂಗದ ಚರ್ಚೆಯಲ್ಲ’

Date: 19-10-2020

Location: ಬೆಂಗಳೂರು


’ಅಮೃತಮತಿಯ ಸ್ವಗತ” ಕವಿತೆಯ ಮೂಲಕ ಕನ್ನಡ ಕಾವ್ಯದಲ್ಲಿ ಹೊಸ ಛಾಪು ಮೂಡಿಸಿದ ಕವಿ-ಲೇಖಕಿ ಡಾ. ಎಚ್‌.ಎಲ್‌. ಪುಷ್ಪ ಅವರು ಬರೆವ ಅಂಕಣ ’ಜೀವ ಸಂಚಾರ’. ಈ ಅಂಕಣದಲ್ಲಿ ಹೊಸ ಪುಸ್ತಕ- ಸ್ತ್ರೀಸಂವೇದನೆಗೆ ಸಂಬಂಧಿಸಿದ ಸಂಗತಿಗಳನ್ನು ಕುರಿತು ಚರ್ಚಿಸುತ್ತಾರೆ. ಆರತಿ ಎಚ್.ಎನ್. ಅವರು ರಚಿಸಿರುವ ‘ಸ್ಮೋಕಿಂಗ್‌ ಝೋನ್‌’ ಕೃತಿಯ ಬಗ್ಗೆ ಇಲ್ಲಿ ಬರೆದಿದ್ದಾರೆ.

ಕವಿತೆ ಎಂದಿನಿಂದಲೂ ಆಕರ್ಷಕವಾದದ್ದು. ಕವಯತ್ರಿಯರಿಗೆ ಆಪ್ತಸಖನ ಹಾಗೆ ಸಾಂತ್ವನ ಕೊಡುವಂತದ್ದು. ಕವಿಗಳಿಗೆ ಆಪ್ತ ಗೆಳತಿಯಂತೆ ಸ್ನೇಹವನ್ನು ನೀಡುವಂತದ್ದು. ನಾವು ನಮ್ಮೆಲ್ಲಾ ಅಂತರಂಗದ ಕ್ಷಣಗಳನ್ನು, ಗುಟ್ಟುಗಳನ್ನು ನೋವು, ನಲಿವುಗಳನ್ನು ಅದರ ಎದುರು ಪ್ರಾಮಾಣಿಕವಾಗಿ ನಿವೇದಿಸಿಕೊಂಡರೆ ಅದು ಓಗೊಡುತ್ತದೆ. ನಾವು ಆಸರೆಗೋ ಎಂಬಂತೆ ಅದರ ಕೈ ಹಿಡಿದರೆ ಅದೂ ಕೂಡ ನಲ್ಲನ ಹಾಗೆ ಕೈ ಹಿಡಿಯುತ್ತದೆ, ಜೊತೆ ನಡೆಯುತ್ತದೆ.

ಪ್ರಸಿದ್ಧ ನಟ ಅಮಿತಾಬ್ ಬಚ್ಚನ್ ಅವರ ಪ್ರಸಿದ್ಧವಾದ ಪ್ರೇಯಸಿಯರು ಪತ್ನಿಯಾಗಲಾರರು ಮತ್ತು ಪತ್ನಿಯರು ಪ್ರೇಯಸಿಯಾಗಲಾರರು ಎಂಬ ಮಾತು ನೆನಪಿಗೆ ಬರುತ್ತಿದೆ. ಕವಿತೆಯೂ ಅಷ್ಟೇ. ನೀವು ನಂಬಬಹುದು, ನೆಚ್ಚಬಹುದು. ಅಂತರಂಗದಲ್ಲಿ ದಾಖಲಾದ ಬಹಿರಂಗದಲ್ಲಿ ಹೇಳಿಕೊಳ್ಳಲಾರದ ಸಂಗತಿಗಳೆಲ್ಲವನ್ನೂ ಅದು ಕಾಪಾಡುತ್ತದೆ. ಸಾಧ್ಯವಾದ ಕಡೆಯಲೆಲ್ಲ ನಿಮ್ಮ ಜೊತೆ ನಿಲ್ಲುತ್ತದೆ. ಲೌಕಿಕದ ನಿಯಮಾವಳಿಗಳೆಲ್ಲವನ್ನು ಕವಿತೆಯ ಮೂಲಕ ಮೀರಲೆತ್ನಿಸುತ್ತದೆ. ಇಷ್ಟೆಲ್ಲಾ ವಿವರಗಳು ಕೊನೆಗೆ ಹೇಳುವುದೆಂದರೆ ಕವಿತೆ ಖಾಸಗಿಯಾದದ್ದು, ಸಮತೆಯಲ್ಲಿ ಮಾಡುವ ಬಹಿರಂಗದ ಚರ್ಚೆಯಲ್ಲ ಎಂಬ ಅಂತರಂಗದ ಸತ್ಯವನ್ನು.

ಆರತಿ. ಹೆಚ್.ಎನ್ ನಮ್ಮ ನಡುವಿನ ಸೂಕ್ಷ್ಮ ಸಂವೇದನೆಗಳನ್ನು ನಯವಾಗಿ ಹಿಡಿದಿಡುವ ಕವಯಿತ್ರಿ. ಅವರ ಮೂರನೆಯ ಸಂಕಲನ ‘ಸ್ಮೋಕಿಂಗ್ ಝೋನ್' ಹಲವು ಕಾರಣಕ್ಕೆ ವಿಶಿಷ್ಟವಾದದ್ದು. ಈಗಾಗಲೇ ಓಕುಳಿ, ಬಾ ಹೇಳಿ ಕಳಿಸೋಣ ಹಗಲಿಗೆ ಎಂಬ ಎರಡು ಕವಿತಾ ಸಂಕಲನಗಳು ಪ್ರಕಟವಾಗಿವೆ. ಕವಿತೆಗೂ, ಕೌಶಲ್ಯಕ್ಕೂ ಹತ್ತಿರದ ನಂಟು. ಸ್ಥಾಯಿಭಾವ ಹಾಗೂ ವ್ಯಬಿಚಾರಿ ಭಾವಗಳನ್ನು ಕುರಿತು ಕಾವ್ಯಮೀಮಾಂಸೆ ವಿಸ್ತಾರವಾಗಿ ಮಾತನಾಡುತ್ತದೆ. ವ್ಯಭಿಚಾರಿ ಎಂದರೆ ನೇರಾರ್ಥದಲ್ಲಿ ವ್ಯಭಿಚಾರಿಯಲ್ಲ. ಅದು ನಮ್ಮೊಳಗೇ ಇರುವಂತದ್ದು, ಅಭಿವ್ಯಕ್ತಿಗೆ ಸಿಗುವಂತದ್ದಲ್ಲ. ಅಭಿವ್ಯಕ್ತಿಸುವಾಗಲೂ ಲೋಕಕ್ಕೆ ಒಪ್ಪಿತವಾದುದನ್ನೇ ನಾವು ಪ್ರಜ್ಞಾಪೂರ್ವಕವಾಗಿ ಹೇಳ ಹೊರಡುವುದರಿಂದ ಕೆಲವು ಸಹಜ ಭಾವಗಳು ಹಾಗೇ ಉಳಿದು ಹೋಗುವುದುಂಟು. ನಂತರ ಮರೆವಿಗೆ ಒಳಗಾಗುವುದುಂಟು. ಆರತಿಯವರ ಕಾವ್ಯದ ವಿಶಿಷ್ಟತೆಯಿರುವುದು ಮರೆವಿಗೆ ಸಲ್ಲುವ ಮಾತುಗಳನ್ನು ಹಿಡಿದಿಡುವಲ್ಲಿ. ‘ಸ್ಮೋಕಿಂಗ್ ಝೋನ್' ಎನ್ನುವ ಹೆಸರೇ ಸೂಚಿಸುವಂತೆ ಉರಿವ ಬೆಂಕಿಗಿಂತ ಹರಡುವ ಹೊಗೆಯನ್ನು ಹಿಡಿದಿಡುವಲ್ಲಿ ಅವರಿಗೆ ವಿಶೇಷ ಆಸಕ್ತಿ.

ನಮ್ಮ ತಲೆಮಾರಿನ ಕವಿಗಳೆಲ್ಲ ಹೆಚ್ಚು, ಕಡಿಮೆ ಮೂರು ಅಥವಾ ನಾಲ್ಕನೆಯ ಸಂಕಲನದ ಪ್ರಕಟಣೆಗೆ ಒದ್ದಾಡಿದವರೆ. ಕಾವ್ಯ ರಚನೆಯನ್ನು ಪ್ರವೃತ್ತಿಯಾಗಿ ತೆಗೆದುಕೊಂಡವರಿಗೆ ರಚನೆ ಮತ್ತು ಪ್ರಕಟಣೆ ಎರಡೂ ಕಷ್ಟವೇ. ಬರೆಯುವ ಹಂಬಲವಿದ್ದರೂ ಸತತವಾಗಿ ತೊಡಗಿಸಿಕೊಳ್ಳುವಲ್ಲಿ ಇರುವ ಅಡಚಣೆ ಒಂದು ಕಡೆಯಾದರೆ, ಬರೆಯಲೇಬೇಕೆಂಬ ಹಟವಿಲ್ಲದಿರುವುದು ಇನ್ನೊಂದು ಕಾರಣವಿರಬಹುದು. ತಡವಾಗಿ ಈ ಸಂಕಲನ ಪ್ರಕಟವಾದರೂ ಅದು ಓದುಗರ ಕಣ್ಸೆಳೆದಿರುವುದು ಅದರ ಸಹಜ ಅಭಿವ್ಯಕ್ತಿ ವಿಧಾನದ ಕವಿತೆಗಳಿಂದಾಗಿ.

ಒಂದು ಕಾಲದಲ್ಲಿ ಭರತನಾಟ್ಯದ ನೃತ್ಯಗಾರ್ತಿಯೂ ಆಗಿ ಪ್ರದರ್ಶನ ನೀಡಿದ್ದ ಆರತಿ ತಮ್ಮ ಒಳ್ಳೆಯ ವ್ಯಕ್ತಿತ್ವ, ನಡೆನುಡಿಯ ಕಾರಣದಿಂದಲೇ ಪ್ರಸಿದ್ಧರು. ಹೀಗಾಗಿಯೇ ಒಳಗು, ಹೊರಗಿನ ಭಾವಾಭಿವ್ಯಕ್ತಿಯನ್ನು ಗುರುತಿಸುವ ಕ್ರಮ ಅವರಿಗೆ ಸಿದ್ದಿಸಿದೆ. ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ನೀಲಾಂಜನೆಯ ನೃತ್ಯ ಪ್ರಸಂಗ ವಿಶೇಷವಾದದ್ದು. ಕ್ಷಣಮಾತ್ರದಲ್ಲಿ ನರ್ತಕಿಯ ಸಾವು ಹಾಗೂ ಸಾವಿನ ಜಾಗದಲ್ಲಿ ಮತ್ತೊಂದು ಜೀವದ ಸೇರ್ಪಡೆಯಾಗುವುದನ್ನು ಗಮನಿಸಿ ಜೀವದ ನಶ್ವರತೆಯನ್ನು ಗುರುತಿಸಿದ ಆದಿದೇವನ ದಿವ್ಯಗ್ರಹಿಕೆ ಸಂತರಿಗೆ ಮಾತ್ರ ಸಾಧ್ಯವಾಗುವಂತದ್ದು. ಇಂತಹ ಗಮನಿಸುವಿಕೆ ಆರತಿಯವರ ಕವಿತೆಗಳಲ್ಲಿ ಪ್ರಧಾನವಾಗಿ ಕಂಡುಬರುತ್ತದೆ. ‘ನಾನು- ಅವನು' ಕವಿತೆಯಲ್ಲಿ ಗೊಮ್ಮಟನ ಪದತಲದಲ್ಲಿ ನಿಂತು ಅವನೊಂದಿಗೆ ಹೋಲಿಸಿಕೊಳ್ಳುವ ಕ್ರಮ ವಿಶೇಷವಾಗಿದೆ. ನಾನು ‘ಅಡಗಿರುವ ಲಾವ ಹೊರ ಚಿಮ್ಮುವವಳು, ಅಸಹನೆ ಉಡುಪು ತೊಟ್ಟು ನಿಂತಂತಿರುವ ರೂಪು'. ಅವನು ‘ ಬಿಟ್ಟದ್ದು ಆ ಸಾಮ್ರಾಜ್ಯ, ನಡೆದದ್ದು ಆ ದೂರ, ನೋಡಿದ್ದು ಆ ಅಂಬರ, ದಾಟಿದ್ದು ಮನಃಕಷಾಯದ ಸುಪ್ತ ಸಪ್ತಸಾಗರ' . ಈ ಗ್ರಹಿಕೆ, ಹೋಲಿಕೆ ನಮ್ಮಲ್ಲಿನ ಅತಿಸಾಮಾನ್ಯತೆಯನ್ನು ಎತ್ತಿ ಹಿಡಿಯುವಂತದ್ದಾಗಿದೆ.

ಮೇಣದಬತ್ತಿ ಹಾಗೂ ಸಿಗರೇಟ್ ಉರಿಯತ್ತಾ ಇಲ್ಲವಾಗುವ ಅಸ್ತಿತ್ವಕ್ಕೆ ಬಳಸಲಾಗುವ ಪ್ರತಿಮೆಗಳು. ಮೇಣದ ಬತ್ತಿ ಉರಿಯುತ್ತಾ ಬೆಳಕ ನೀಡುವ, ಸಾಕ್ಷಿಗೂ ಸಿಗದಂತೆ ತನ್ನ ಅಸ್ತಿತ್ವ ಕಳೆದುಕೊಳ್ಳುವ ಕಾಯವೊಂದರ ಪ್ರತೀಕ. ಸಿಗರೇಟ್ ಕೂಡ ಒಳಗೇ ಉರಿಯತ್ತಾ, ಹೊಗೆಚೆಲ್ಲುತ್ತಾ ಬೂದಿ ಸಾಕ್ಷಿಗೆ ಬೂದಿ ಉಳಿಸಿ ಇಲ್ಲವಾಗುವ ಕ್ರಿಯೆ. ವೈವಾಹಿಕ ಜೀವನದಲ್ಲಿನ ಸೂಕ್ಷ್ಮ ಸಂವೇದನೆಯುಳ್ಳ ಹೆಣ್ಣು ಒಳಗೆ ಉರಿದು, ಹೊರಗೆ ಬೂದಿಚೆಲ್ಲುತ್ತಾ ನಿರಂತರವಾಗಿ ಖಾಲಿಯಾಗುತ್ತಾ ಹೋಗುತ್ತಾಳೆ. ಮುಂದೆ ಅವಳಿಗೆ ತನಗೆ ತಾನು ಪೊಳ್ಳು ಅನ್ನುವ ತಪ್ಪಿತಸ್ಥ ಭಾವ ಮೂಡಲಾರಭಿಸಿದರೆ ಬದುಕಿನಲ್ಲಿ ಅದಕ್ಕಿಂತ ದೋಕಾ ಎನ್ನುವುದು ಇರಲು ಸಾಧ್ಯವಿಲ್ಲ. ಇಂತಹ ಹಲವು ದೋಕಾಗಳನ್ನು ಇಲ್ಲಿನ ಕವಿತೆಗಳು ಹಿಡಿದಿಡುತ್ತವೆ. ಇದುವರೆಗಿನ ಮಹಿಳಾ ಕಾವ್ಯ ತನಗೆ ಮೋಸವಾಗುತ್ತಿದೆ ಎಂಬ ತಿಳುವಳಿಕೆಯನ್ನು ಪ್ರಜ್ಞಾಪೂರ್ವಕವಾಗಿ ಮುಚ್ಚಿಟ್ಟಿತ್ತು. ತಾನು ಸೀತೆಯಲ್ಲ, ಅಹಲ್ಯೆಯಲ್ಲ, ದ್ರೌಪದಿಯಲ್ಲ ಎಂಬ ನಿರಾಕರಣೆಯ ಮೂಲಕ ತೃಪ್ತಿ ಪಡೆದುಕೊಂಡಿತ್ತು. ಈ ಸಭ್ಯತೆಯ ಆವರಣವನ್ನು ಸಭ್ಯತೆಯ ಮಾತುಗಳಿಂದಲೇ ಸರಿಸುವ ಕೆಲಸವನ್ನು ಇಲ್ಲಿನ ಕವಿತೆಗಳು ಮಾಡುತ್ತವೆ. ತಮ್ಮ ವಾಸ್ತವದ ಪರಿಸ್ಥಿತಿಯನ್ನು ಪ್ರತಿಭಟಿಸುವ ಪ್ರತಿಭಟನಾ ರೂಪದ ಕಾವ್ಯ ನಮ್ಮಲ್ಲಿ ಹೇರಳವಾಗಿ ಬಂದಿವೆ. ಪ್ರತಿಭಟಿಸುವಿಕೆಗೂ, ಸಾರ್ವಜನಿಕವಾಗಿ ತನ್ನನ್ನು ತನ್ನೆಲ್ಲಾ ಮಿತಿಗಳೊಂದಿಗೆ ಸ್ಥಾಪಿಸಿಕೊಳ್ಳುವುದಕ್ಕೂ ಅಗಾಧವಾದ ವ್ಯತ್ಯಾಸವಿದೆ. ಇಲ್ಲಿನ ಕವಿತೆಗಳಲ್ಲಿ ಗಂಡು ಮೇಲ್ಮೆಯ ಬದುಕಿನಲ್ಲಿದ್ದು ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಬಯಕೆಯೊಂದು ಮೇಲಿಂದ ಮೇಲೆ ವ್ಯಕ್ತವಾಗುತ್ತದೆ.

‘ಮುರಿಯಲೇಬೇಕು’ ಎನ್ನುವ ಕವಿತೆ ಈ ನಿಟ್ಟಿನಲ್ಲಿ ಮುಖ್ಯವಾದದ್ದು. ಯಾರಾದ್ದಾದರೂ ಸೊಂಟ, ಕೈಕಾಲು ಮುರಿಯಬೇಕು ಎಂಬ ಅಕಾರಣವಾದ ಬಯಕೆಯೊಂದು ಹುಟ್ಟಿ ಅದು ಯಾರದ್ದು. ಹೆಣ್ಣಿನದೋ, ಗಂಡಿನದೋ ಎಂಬ ಪ್ರಶ್ನೆಯಾಗಿ ಅದು ಮುಂದುವರೆಯುತ್ತಾ ಲಿಂಗರಾಜಕಾರಣವಾಗಬಾರದು ಎಂಬ ವಿವೇಕವನ್ನು ಹೇಳುತ್ತದೆ. ಹೊಸತೊಂದು ನಿರ್ಮಾಣವಾಗಬೇಕೆಂದರೆ ಹಳತನ್ನು ಮುರಿಯಬೇಕು ನಿಜ. ಆದರೆ ಹೊಸಕಾಲದ ಅಗತ್ಯ ಕಟ್ಟಿಯೂ ಮುರಿಯಬಹುದೆಂಬ ವಿವೇಕವನ್ನು ಹೇಳುತ್ತದೆ. ಆದರೆ ಬಾಳನ್ನು ಕುರಿತು ಈ ಚರ್ಚೆ ಮಾಡಲಾಗದು. ಎಕೆಂದರೆ ದಾಂಪತ್ಯದಂತಹ ವ್ಯವಸ್ಥೆಯಲ್ಲಿ ಕರುಳಬಳ್ಳಿಯಿದ್ದರೆ ಮುರಿದು ಕಟ್ಟುವ ಸೀದಾಸಾದಾ ಮಾತನ್ನು ಆಡಲಾಗದು.

ಮುರಿಯಲಾಗದು ಬಾಳು, ಅದು ಸುಲಭವಲ್ಲ/ ಕಟ್ಟಿಕೊಂಡಷ್ಟು ಸುಲಭವಲ್ಲ ಬಿಟ್ಟುಬಿಡುವುದು/ ….ನಿಯಮ ಇರುವುದು ಮುರಿಯುವುದಕ್ಕಲ್ಲ, ಪಾಲಿಸಲು ಪರಮಾತ್ಮನಾಗಬೇಕಿಲ್ಲ, ಪತಿವ್ರತೆಯಾದರೆ ಸಾಕು/ ಮೇಲೆ ಹೋದವರು ಕೆಳಗೆ ಬರಲೇಬೇಕು, ನಿಯಮ ಮುರಿಯುವುದು ನಿಮಗೆ ಸರಿಯಿಲ್ಲ- ಈ ರೀತಿಯ ಗಡಿಯಾಚೆ, ಈಚೆಯ ಮಾತುಗಳಲ್ಲಿ ತಾಕಲಾಟಗಳು ಕಂಡುಬರುತ್ತವೆ.

ಬದಲಾಗುತ್ತಿರುವ ಕಾಲಘಟ್ಟದಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವ ಬದುಕಿನಲ್ಲಿ ಅಡಗಿರುವ ಬಿರುಕುಗಳು, ಅದರ ವ್ಯಾಖ್ಯಾನಗಳು, ವಿಸ್ತಾರಗೊಳ್ಳುತ್ತಿರುವ ಹೆಣ್ಣಿನ ಪರಿಧಿಗಳು, ಹೆಣ್ಣು ಗಂಡಿನ ಒಡನಾಟಗಳು, ದೇಹ ಮತ್ತ ಮನಸ್ಸಿನ ಶೀಲ ಮೀಮಾಂಸೆಗಳು – ಹೊಸಕಾಲದ ಆಶಯಗಳು ಹಾಗೂ ತಲ್ಲಣಗಳನ್ನು ಇಲ್ಲಿನ ಕವಿತೆಗಳು ಮಾತಾಡುವಷ್ಟೇ ಸಹಜವಾಗಿ ತೆರೆದಿಡುತ್ತವೆ. ಕವಿತೆಗಳ ಓದಿನ ನಂತರ ‘ಅರೆ! ನನ್ನದೇ ಕವಿತೆ' ಎನ್ನಿಸುವ ಸಾಧಾರೀಕರಣವಿದೆ. ಮುಳ್ಳುಕಂಟಿಯನ್ನು ಹೆಗಲ ಮೇಲೆ ಹೊತ್ತು ಏನೂ ನಡೆದಿಲ್ಲ ಎನ್ನುವ ನಡಿಗೆಗಳ ದಾಂಪತ್ಯವಿದೆ. ಕೊನೆಯಲ್ಲಿ ‘ಸೀತೆ, ಗೆರೆ ದಾಟಿದ್ದು ಏಕೆ ಎಂಬುದು ಈಗ' ಎಂಬ ಉದ್ಗಾರವಿದೆ. ಬ್ರಹ್ಮಾಂಡದ ಭಾರವನ್ನು ಹೆಗಲಹೊತ್ತ ಹರ್ಕ್ಯುಲಸ್ ಅದನ್ನು ಬೇರೊಬ್ಬನಿಗೆ ವರ್ಗಾಯಿಸಲು ಕಾದಂತೆ ತಮ್ಮ ದುಗುಡವನ್ನು ಇಳಿಸಿಕೊಳ್ಳುವ ಪ್ರಯತ್ನವನ್ನು ಇಲ್ಲಿನ ಕವಿತೆಗಳು ಕಾಯುವಿಕೆಯಲ್ಲಿ ಮಾಡುತ್ತವೆ.

ಈ ಸಂಕಲನಕ್ಕೆ ನಮ್ಮ ಕಾಲದ ಇಬ್ಬರು ಮುಖ್ಯ ಕವಯತ್ರಿಯರಾದ ಪ್ರತಿಭಾ ನಂದಕುಮಾರ್ ಹಾಗೂ ವಿನಯಾ ವಕ್ಕುಂದ ಮುನ್ನುಡಿ ರೂಪದ ಮಾತುಗಳನ್ನು ಬರೆದಿದ್ದಾರೆ. ಸಂಕಲನದ ಕವಿತೆಗಳು ಹಾಗೂ ಅವುಗಳ ಸಾಲುಗಳ ಮೂಲಕವೇ ಬರೆದ ಪ್ರತಿಭಾ ಅವರ ಹೊಸರೀತಿಯ ಮುನ್ನುಡಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಒಳ್ಳೆಯ ಮನಸ್ಸು ಹಾಗೂ ನಡೆನುಡಿಯುಳ್ಳ ಆರತಿಯವರ ಕಾವ್ಯ ಎಂತಹ ದುರಿತ ಕಾಲದಲ್ಲೂ ಜೀವನ ಪ್ರೀತಿಯನ್ನು ಚಿಮ್ಮಿಸುವಂತದ್ದು. ಹೀಗಾಗಿಯೇ ಇಲ್ಲಿನ ಕವಿತೆಗಳಲ್ಲಿ ಬರುವ ಬದುಕಿಗೆ ವಿವೇಕವೆಂಬ ಕಟ್ಟುಗಳನ್ನು ಕಟ್ಟಲಾಗಿದೆ.

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...