’ಕಿರಗೂರಿನ ಗಯ್ಯಾಳಿಗಳು: ಗಂಡು ಪ್ರಧಾನತೆಯ ನಿರಾಕರಣೆ ಹಾಗೂ ಮಹಿಳೆಯರ ಸಾಂಘಿಕ ಹೋರಾಟ’

Date: 03-12-2020

Location: .


ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಭಾಷ್ಯ ಬರೆದ ಪೂರ್ಣಚಂದ್ರ ತೇಜಸ್ವಿ ಅವರ ಅಚ್ಚಳಿಯದ ನೀಳ್ಗತೆ ‘ಕಿರಗೂರಿನ ಗಯ್ಯಾಳಿಗಳು’. ಇದೇ ಶೀರ್ಷಿಕೆಯಡಿಯಲ್ಲಿ, ಸುಮನ್ ಕಿತ್ತೂರು ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಲಿಂಗ ತಾರತಮ್ಯತೆಯ ಸಾಮಾಜಿಕ ಮೌಲ್ಯಗಳನ್ನು ಬುಡಮೇಲು ಮಾಡುವ ಕಥನಕವಾಗಿದೆ. ಪ್ರಾಧ್ಯಾಪಕ - ಲೇಖಕ ಡಾ. ಸುಭಾಷ್ ರಾಜಮಾನೆ ಅವರು ತಮ್ಮ ಇಂದಿನ ನವಿಲ ನೋಟ ಅಂಕಣದಲ್ಲಿ ಪಿತೃ ಪ್ರಧಾನ ಮೌಲ್ಯಗಳನ್ನು ಪ್ರತಿಭಟಿಸಿ ನಿಲ್ಲುವ ಮಹಿಳೆಯರನ್ನು ಸಾಮಾಜಿಕ ಮೌಲ್ಯದ ನೆಲೆಯಲ್ಲಿ ಸಮೀಕರಿಸಿ ಅವರು ಈ ಸಿನಿಮಾ ಕುರಿತು ವಿಶ್ಲೇಷಿಸಿದ್ದು ಇಲ್ಲಿದೆ.

ಪೂರ್ಣಚಂದ್ರ ತೇಜಸ್ವಿ ಅವರ ’ಕಿರಗೂರಿನ ಗಯ್ಯಾಳಿಗಳು’ (1991) ನೀಳ್ಗತೆಯು ಇದೇ ಶೀರ್ಷಿಕೆಯಲ್ಲಿ ಸಿನಿಮಾ ಆಗಿದೆ. ಸುಮನ್ ಕಿತ್ತೂರು ಅವರ ನಿರ್ದೇಶನದಲ್ಲಿ ಈ ಸಿನಿಮಾ 2016ರಲ್ಲಿ ತೆರೆ ಕಂಡಿದೆ. ಈ ಮೊದಲು ’ಸ್ಲಂ ಬಾಲ’ (2008), ’ಕಳ್ಳರ ಸಂತೆ’ (2009) ಹಾಗೂ ’ಎದೆಗಾರಿಕೆ’ (2012) ಸಿನಿಮಾಗಳನ್ನು ನಿರ್ದೇಶಿಸಿರುವ ಅನುಭವ ಅವರಿಗಿದೆ. ಇವುಗಳಲ್ಲಿ `ಸ್ಲಂ ಬಾಲ’ ಹಾಗೂ `ಎದೆಗಾರಿಕೆ’ ಭೂಗತ ಜಗತ್ತಿನ ಪಾತಕಗಳನ್ನು ನಿರೂಪಿಸುವ ಕ್ರೈಂ ಥ್ರಿಲ್ಲರ್ ಸಿನಿಮಾಗಳು. ’ಕಳ್ಳರ ಸಂತೆ’ಯು ರಾಜಕೀಯ ಭ್ರಷ್ಟತೆಯನ್ನು ಕುರಿತ ಚಲನಚಿತ್ರವಾಗಿದೆ. ಇವುಗಳಿಗೆ ಹೋಲಿಸಿದರೆ `ಕಿರಗೂರಿನ ಗಯ್ಯಾಳಿಗಳು’ ತದ್ವಿರುದ್ಧವಾದ ಸಿನಿಮಾ. ಹಾಗೆ ನೋಡಿದರೆ ಭೂಗತ ಲೋಕದ ಸಿನಿಮಾಗಳಲ್ಲಿ ಮಹಿಳೆಯರ ಪಾತ್ರಗಳೇ ಗೌಣವಾಗಿರುತ್ತವೆ. ಇದರಲ್ಲಿ ಸಿನಿಮಾ ಹೆಸರೇ ಸೂಚಿಸುವಂತೆ ಮಹಿಳೆಯರು ಪ್ರಧಾನ ಭೂಮಿಕೆಯಲ್ಲಿದ್ದಾರೆ. ಜಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯನ್ನು ಪರಿವರ್ತಿಸುವ ಆಶಯದ ಕಥಾನಕವನ್ನು ಸುಮನ್ ಕಿತ್ತೂರು ಆರಿಸಿಕೊಂಡಿದ್ದಾರೆ.
ತೇಜಸ್ವಿಯವರ ಮೂಲ ಕತೆಯ ನಿರೂಪಣೆಯಲ್ಲಿ ಕಿರುಗೂರು ಸಹ್ಯಾದ್ರಿ ಪರ್ವತಗಳ ಜಟಿಲ ಬಂಧಗಳಲ್ಲಿ ಬಂದಿಯಾಗಿ ಸಿಕ್ಕಿಕೊಂಡಿದ್ದ ಹಳ್ಳಿಯಾಗಿದೆ. ಅಲ್ಲಿಯ ಗಂಡಸರು ಹೆಂಡ ಕುಡಿದು ಬೀಡಿ ಸೇದಿ ಹೊಗೆ ಹತ್ತಿ ಸಣಕಲಾಗಿರುವುದನ್ನು ವಿವರಿಸುವ ನಿರೂಪಕ ಕಿರಗೂರಿನ ಹೆಣ್ಣು ಮಕ್ಕಳು ಮಾತ್ರ ತಮ್ಮ ಉಜ್ವಲ ಸೌಂದರ್ಯದಿಂದ ನೊಡಿದವರನ್ನು ಬೆಚ್ಚಿ ಬೀಳಿಸುತ್ತಿದ್ದರು ಎಂದು ವರ್ಣಿಸುತ್ತಾನೆ. ಲಿಂಗ ತಾರತಮ್ಯತೆಯ ಸಾಮಾಜಿಕ ಮೌಲ್ಯಗಳನ್ನು ಬುಡಮೇಲು ಮಾಡುವ ಕಥಾನಕವನ್ನು ಸಿನಿಮಾ ಒಳಗೊಂಡಿದೆ. ಮೂಲ ಕತೆ ಹಾಗೂ ಸಿನಿಮಾದ ಶೀರ್ಷಿಕೆಯಲ್ಲಿರುವ `ಗಯ್ಯಾಳಿ’ ಎಂದರೆ `ಗಂಡುಬೀರಿ’, `ಘಾಟಿ ಹೆಂಗಸು’, ’ಗಟ್ಟಿಗಿತ್ತಿ’, ’ಬಲು ಜೋರಿನವಳು’ ಎನ್ನುವ ಅರ್ಥಗಳಿವೆ. ಅಷ್ಟೇ ಅಲ್ಲದೆ ಕತೆಯ ನಿರೂಪಣೆಯಲ್ಲಿ ಕೂಡ ಕಿರಗೂರಿನ ಜನರು ಅವರನ್ನು ’ಗಾಂಚಲಿ ಮುಂಡೇರು’, ’ಬಜಾರಿಯರು’ ಎಂದೇ ಕರೆಯುತ್ತಾರೆ. ಇದು ಮಹಿಳೆಯರನ್ನು ನಿಂದಾತ್ಮಕ ಹಾಗೂ ನೇತ್ಯಾತ್ಮಕ ನಿಟ್ಟಿನಿಂದಲೇ ನೋಡುವ ಪುರುಷ ಪ್ರಧಾನ ವ್ಯವಸ್ಥೆಯ ಧೋರಣೆಯಾಗಿದೆ. ಈ ವ್ಯವಸ್ಥೆಯು ಹೆಣ್ಣಿನಲ್ಲಿ ಕೋಮಲತೆ, ವಿಧೇಯತೆ, ಅಧೀನತೆ, ಸೇವಾ ಭಾವನೆ, ಕ್ಷಮೆ, ತಾಳ್ಮೆಯಂತಹ ಗುಣಗಳು ಇರಬೇಕೆಂದು ನಿರೀಕ್ಷಿಸುತ್ತದೆ. ಇಂತಹ ಗುಣ ಸ್ವಭಾವಗಳನ್ನು ಹೊಂದಿರುವವರನ್ನು ಮಾತ್ರವೇ ಆದರ್ಶ ಹೆಣ್ಣೆಂದು ಗೌರವಿಸಲಾಗುತ್ತದೆ. ಆದರೆ ಸಿನಿಮಾ ಕಿರಗೂರಿನ ಮಹಿಳೆಯರಲ್ಲಿ ಧೈರ್ಯ, ಸಾಹಸ, ಪ್ರತಿಭಟನೆ, ಆಕ್ರಮಣಾಶೀಲತೆ, ಉಗ್ರವಾದ ಕೋಪ, ಪ್ರಶ್ನಿಸುವ ಸಾಮರ್ಥ್ಯ ಮುಂತಾದ ಗುಣಗಳಿರುವುದನ್ನು ನಿರೂಪಿಸುತ್ತದೆ. ಇವು ಪುರುಷರಲ್ಲಿರುವುದು ಸಹಜ ಎನ್ನುವ ನಂಬಿಕೆ ಇರುತ್ತದೆ; ಇಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ಇವು ಮಹಿಳೆಯರಲ್ಲಿ ಕೂಡ ಇರಬಹುದಾದ ಸಹಜ ಗುಣಗಳೇ ಎಂಬುದನ್ನು ನಿರೂಪಿಸುವುದು ಈ ಕಥಾ ವಸ್ತುವಿನ ದೊಡ್ಡ ಶಕ್ತಿಯಾಗಿದೆ.
’ಕಿರಗೂರಿನ ಗಯ್ಯಾಳಿಗಳು’ ಪ್ರಕಟವಾದ ಆರಂಭದಲ್ಲಿಯೇ ನಾಟಕವಾಗಿ ರೂಪಾಂತರಗೊಂಡಿದೆ. ನೀಳ್ಗತೆಯೊಂದು ರಂಗಭೂಮಿಯ ಮಾಧ್ಯಮಕ್ಕೆ ಅಳವಡುವಾಗ ನಿರ್ದೇಶಕರ ಅಪೇಕ್ಷೆಯಂತೆ ಬದಲಾವಣೆಗಳನ್ನು ಪಡೆದುಕೊಳ್ಳುತ್ತದೆ. ಅದೇ ಕತೆಯು ಮಾಧ್ಯಮದ ಸ್ವರೂಪಕ್ಕೆ ಅನುಗುಣವಾಗಿ ಕೆಲವು ಮಾರ್ಪಾಟುಗಳನ್ನು ಕಂಡಿದೆ. ತೇಜಸ್ವಿಯವರ ಕತೆಯನ್ನು ಓದಿದವರು ಅದರ ಸೂಕ್ಷ್ಮತೆಯನ್ನು ಮರೆತು ’ಕಿರಗೂರಿನ ಗಯ್ಯಾಳಿಗಳು’ ಸಿನಿಮಾ ನೋಡುವವರಿಗೆ ಶುದ್ಧ ಮನರಂಜನಾತ್ಮಕ ಹಾಗೂ ಉತ್ತಮ ಸಿನಿಮಾ ಎಂದೇ ತೋರುತ್ತದೆ. ಆದರೆ ತೇಜಸ್ವಿಯವರ ಕತೆಯ ನಿಜವಾದ ಆಶಯ ಸಿನಿಮಾದಲ್ಲಿ ಸಾಕಾರವಾಗಿದೆಯೇ ಎಂದು ಹುಡುಕಲು ಹೊರಟರೆ ಕೊಂಚ ನಿರಾಶೆಯಾಗುತ್ತದೆ.
ಮೂರು ಹಗಲು ಮೂರು ರಾತ್ರಿ ರಭಸದಿಂದ ಬೀಸಿದ ಬಿರುಗಾಳಿಗೆ ತತ್ತರಿಸಿ ಬುಡ ಸಮೇತ ಕಿತ್ತು ಬೀಳುವ ಭಾರಿ ಗಾತ್ರದ ಹೆಬ್ಬಲಸಿನ ಮರಕ್ಕೂ ಮತ್ತು ಹೆಣ್ಣಿನ ಮೇಲೆ ಹೇರುತ್ತ ಬಂದಿರುವ ಕಟ್ಟುಪಾಡುಗಳಿಗೂ ಸಂಬಂಧವಿದೆ. ಅವು ಬೇರು ಸಮೇತವಾಗಿ ನಿರ್ನಾಮವಾಗಬೇಕೆಂಬ ಸಾಂಕೇತಿಕ ಅರ್ಥವಿದೆ. ಹೆಬ್ಬಲಸಿನ ಮರ ಬೀಳುವುದಕ್ಕೂ ಹಾಗೂ ಕಿರಗೂರಿನ ಮುಂದಿನ ಎಲ್ಲ ಬಗೆಯ ಆಗು ಹೋಗುಗಳಿಗೆ ಸಂಬಂಧವಿದೆ. ಮೂಲ ಕತೆಯಲ್ಲಿ ಈ ಮರವು ಒಂದು ರೂಪಕದಂತೆ ಬಳಕೆಯಾಗಿದೆ. ಮರವು ಸೀಗೇಗೌಡನ (ಸೊಸೆ ದಾನಮ್ಮ) ಮನೆಯ ಸಮೀಪದಲ್ಲಿರುತ್ತದೆ. ಸಿನಿಮಾದಲ್ಲಿ ಅದು ಊರ ಹೊರಗೆ ಅನಾಥವಾಗಿ ಬಿದ್ದಿರುವಂತೆ ತೋರಿಸಲಾಗಿದೆ. ಇದರಿಂದಾಗಿ ಕಿರಗೂರಿಗೂ ಮರಕ್ಕೂ ಸಂಬಂಧವೇ ತಪ್ಪಿ ಹೋಗಿದೆ. ಮರದ ದಿಮ್ಮಿ ಉರುಳಿಕೊಂಡು ಹೋಗುದನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಆದರೂ ಮೂಲ ಕತೆಯಲ್ಲಿ ಮರದ ದಿಮ್ಮಿಯು ತನ್ನಷ್ಟಕ್ಕೆ ತಾನೇ ಊರಿನಲ್ಲೆಲ್ಲ ಉರುಳಿಕೊಂಡು ಹೋಗುವುದು ಸಾಮಾಜಿಕ ಚಲನಶೀಲತೆಗೆ ಮತ್ತೊಂದು ಸಾಂಕೇತಿಕ ಅರ್ಥವನ್ನು ಹೊಂದಿದೆ. ಇಂತಹ ಬಹುಮುಖಿ ಆಯಾಮದ ಕೊಂಡಿಗಳು ಸಿನಿಮಾದಲ್ಲಿ ಕಳಚಿಕೊಂಡಿವೆ.
ಸಿನಿಮಾದಲ್ಲಿ ಮಾಡಿರುವ ಇನ್ನೊಂದು ಬದಲಾವಣೆಯೆಂದರೆ ಗ್ರಾಮ ಸೇವಕ ಶಂಕ್ರಪ್ಪ ಹಾಗೂ ಭೂತ ವೈದ್ಯ ಹೆಗ್ಡೆ-ಇವರಿಬ್ಬರನ್ನು ಇಡೀ ಕಿರಗೂರಿನಲ್ಲಿ ನಡೆಯುವ ಅನಾಹುತಗಳಿಗೆಲ್ಲ ಸೂತ್ರದಾರರಂತೆ ಚಿತ್ರಿಸಲಾಗಿದೆ. ಮೂಲ ಕತೆಯಲ್ಲಿ ಸಾಮಾಜಿಕ ವ್ಯವಸ್ಥೆ ಹಾಗೂ ಅದರ ಸಂಕೀರ್ಣತೆಗೆ ಹೆಚ್ಚಿನ ಒತ್ತು ಇದೆ. ತೇಜಸ್ವಿಯವರು ವ್ಯಕ್ತಿಗತ ನೆಲೆಯ ನವ್ಯದ ತಾತ್ವಿಕತೆಯನ್ನು ಬಿಟ್ಟುಕೊಟ್ಟು ಸಾಮುದಾಯಿಕ ಬಿಕ್ಕಟ್ಟುಗಳ ಹುಡುಕಾಟದತ್ತ ಹೊರಳಿಕೊಂಡಿದ್ದರು. ನಿರ್ದೇಶಕರು ಇಂತಹ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸದಿರುವುದರಿಂದ ಶಂಕ್ರಪ್ಪ ಹಾಗೂ ಹೆಗ್ಡೆ-ಇವರನ್ನು ವಿಲನ್‌ಗಳಂತೆ ಚಿತ್ರಿಸಲಾಗಿದೆ. ಸಿನಿಮಾದಲ್ಲಿ ಕೃಷಿ ಅಧಿಕಾರಿಯೊಬ್ಬ (ಪ್ರಕಾಶ್ ಬೆಳವಾಡಿ) ಕಿರಗೂರಿಗೆ ಭೇಟಿ ಕೊಡುವ ಸಂದರ್ಭದಲ್ಲಿ ’ಹಿಟ್ಟಿನ ದೊಣ್ಣೆ’ ಎಂಬುದರ ಪುನರಾವರ್ತನೆಯಿಂದ ಆ ಪ್ರಸಂಗವು ಹಾಸ್ಯಾಸ್ಪದವೇ ಆಗಿದೆ.
ನೂರಾರು ಸಿನಿಮಾಗಳಲ್ಲಿ ಪೋಲಿಸ್ ಠಾಣೆಯ ದೃಶ್ಯಗಳು ಬಂದು ಹೋಗಿವೆ. ಪೋಲಿಸ್ ವ್ಯವಸ್ಥೆಯ ಭ್ರಷ್ಟತೆಯನ್ನು ಎತ್ತಿ ತೋರಿಸುವ ಸಿನಿಮಾಗಳೂ ದಂಡಿಯಾಗಿವೆ. ಆದರೆ `ಕಿರಗೂರಿನ ಗಯ್ಯಾಳಿಗಳು’ ಸಿನಿಮಾದಲ್ಲಿ ಬರುವ ಪೋಲಿಸ್ ಠಾಣೆಯ ಒಂದೇ ಒಂದು ದೃಶ್ಯವು ಪೋಲಿಸರ ಬೇಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ಗಂಡಸರ ಮೈನೀರಿಳಿಸುವ ಲಘು ಹಾಸ್ಯ ಧಾಟಿಯ ಈ ದೃಶ್ಯವು ಕಾನೂನಿನ ದುರುಪಯೋಗಕ್ಕೆ ಸಾಕ್ಷಿಯಾಗಿದೆ. ಯಾವ ಅಪರಾಧಗಳನ್ನೂ ಮಾಡಿರದ ಕಿರಗೂರಿನ ಗಂಡಸರಿಗೆ (ಒಕ್ಕಲಿಗರು) ಒಂದು ಬಗೆಯಲ್ಲಿ ಅಪರಾಧ ಪ್ರಜ್ಞೆಯು ಕಾಡಲಾರಂಭಿಸುತ್ತದೆ. ದಲಿತರು ಇವರ ಮೇಲೆ ದೂರನ್ನು ಕೊಟ್ಟಿದ್ದಾರೆಂಬ ಸುಳ್ಳು ಆಪಾದನೆಯನ್ನೂ ಹೊರಿಸಲಾಗಿದೆ. ಇದು ದಲಿತರು ಹಾಗೂ ಒಕ್ಕಲಿಗರ ನಡುವೆ ಜಾತಿ ಕಲಹಕ್ಕೆ ನಾಂದಿ ಹಾಡುತ್ತದೆ. ದೇಶದ ಪ್ರತಿಷ್ಠಿತ ಮತ್ತು ಹೆಸರಾಂತ ಜವಾರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಮುಖಂಡನಾದ ಕನ್ಹಯ್ಯ ಕುಮಾರನ ಮೇಲೆ `ದೇಶದ್ರೋಹ’ದ ಆರೋಪ ಹೊರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅಧಿಕಾರಶಾಹಿಯು ಅಮಾಯಕ ಜನಸಾಮಾನ್ಯರ ಸ್ವತಂತ್ರ ಬದುಕು ಹಾಗೂ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸುಳ್ಳು ಆರೋಪಗಳ ಮೂಲಕ ದಮನಿಸುತ್ತದೆ. ಭಾರತದ ಹಳ್ಳಿಗಳಲ್ಲಿ ಕೂಡ ಇಂತಹ ಕೃತ್ಯಗಳಿಗೇನು ಕೊರತೆಯಿಲ್ಲ ಎಂಬುದನ್ನು ’ಕಿರಗೂರಿನ ಗಯ್ಯಾಳಿಗಳು’ ಸಿನಿಮಾ ತೋರಿಸಿಕೊಟ್ಟಿದೆ.
ಮಲಯಾಳಿ ವೈದ್ಯನೊಂದಿಗೆ ಓಡಿ ಹೋಗಿದ್ದಳೆಂಬ ಆಪಾದನೆಯನ್ನು ಹೊತ್ತಿರುವ ಮಕ್ಕಳಿಲ್ಲದ ನಾಗಮ್ಮಳ (ಕಾಳೆಗೌಡನ ಹೆಂಡತಿ) ಪಂಚಾಯ್ತಿ ವಿಚಾರಣೆ ನಡೆಯುವ ಕ್ಲೈಮ್ಯಾಕ್ಸ್ ದೃಶ್ಯವು ಮಹತ್ವದ್ದಾಗಿದೆ. ಇಡೀ ಕಿರಗೂರಿನ ಹೆಂಗಸರಲ್ಲಿ ನಾಗಮ್ಮ ಅತ್ಯಂತ ಮೌನಿ. ಯಾಕೆಂದರೆ ಆಕೆಯ ಗಂಡ `ಮಕ್ಕಳಾಗಲಿಲ್ಲ ಎಂದು ರೇಗಾಡಿದರೂ ಮಾತಿಲ್ಲ; ಎರಡನೆ ಮದುವೆ ಆಗುತ್ತೇನೆಂದರೂ ಮಾತಿಲ್ಲ'ದವಳೇ ಆಗಿದ್ದಾಳೆ. ನಾಗಮ್ಮ ಪುರುಷ ದಮನ ಹಾಗೂ ಎಲ್ಲ ರೀತಿಯ ಅನ್ಯಾಯಗಳನ್ನು ಮೌನವಾಗಿಯೇ ಸಹಿಸಿಕೊಂಡವಳು. ಸಿನಿಮಾದಲ್ಲಿ ಕಾಳೆಗೌಡ ಆಕೆಯನ್ನು ಮಾತು ಮಾತಿಗೆ ’ಗೊಡ್ಡು ಹಸಾ’ ಎಂಬ ಹೀನೋಪಮೆಯಿಂದ (ಮೂಲ ಕತೆಯಲ್ಲಿ ಇದಿಲ್ಲ. ಅಷ್ಟೆ ಅಲ್ಲದೆ ನಿರೂಪಕನಿಗೆ ಹೆಣ್ಣಿನ ಬಗ್ಗೆ ತುಂಬ ಸಹಾನುಭೂತಿ ಮತ್ತು ಗೌರವವಿದೆ) ಜರೆಯುವುದು ವಿಚಿತ್ರವಾಗಿದೆ. ಸಿನಿಮಾದಲ್ಲಿ ಕಾಳೆಗೌಡನಿಗೆ ಒಬ್ಬ ಪ್ರೇಯಸಿಯೂ ಇದ್ದಾಳೆ; ಅವನು ಆಕೆಯೊಂದಿಗೆ ಓಡಿ ಹೋಗಿ ಮದುವೆಯಾಗುವ ಸನ್ನಾಹದಲ್ಲಿಯೂ ಇರುತ್ತಾನೆ. ಇಂತಹ ಸನ್ನಿವೇಶದಲ್ಲಿ ಆತನ ಹೆಂಡತಿ ನಾಗಮ್ಮ ಓಡಿ ಹೋಗುವುದು ಪುರುಷ ಪ್ರಧಾನ ಒಪ್ಪಿತ ಮೌಲ್ಯಕ್ಕೆ ತೋರಿದ ಪ್ರತಿಭಟನೆಯೇ ಆಗುತ್ತದೆ. ಆದರೆ ಕಾಳೆಗೌಡನ ತನ್ನ ’ಗಂಡಸುತನ’ ಹಾಗೂ ’ಸಾಮಾಜಿಕ ಗೌರವ’ಕ್ಕೆ ಕುಂದಾಯಿತೆಂದು ಪಂಚಾಯ್ತಿ ಸೇರಿಸುತ್ತಾನೆ.
ಇಲ್ಲಿ ’ಗಂಡಸುತನ’ ಮತ್ತು ’ಹೆಣ್ಣುತನ’ ಎಂಬ ರೂಢಿಗತ ನಂಬಿಕೆಗಳೇ ತಿರುಗು ಮುರುಗುಗಾಗುತ್ತವೆ. ಹೆಂಗಸರನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಶೋಷಿಸುವ ಪುರುಷ ವರ್ಗವೇ ಪಂಚಾಯ್ತಿಯ ಯಜಮಾನಿಕೆಯನ್ನು (ಹೆಗ್ಡೆ) ವಹಿಸುತ್ತದೆ. ವಿಚಾರಣೆಯ ಸಂದರ್ಭದಲ್ಲಿ ಶಂಕ್ರಪ್ಪ, ನಾಗಮ್ಮಳನ್ನು ಎಳೆದುಕೊಂಡು ಬರುವುದು ಮಹಾಭಾರತದ ಪ್ರಸಂಗವನ್ನು ನೆನಪಿಸುತ್ತದೆ. ಆದರೆ ದಾನಮ್ಮ ಪಂಚಾಯ್ತಿಯ ಮುಂದೆ ಬಂದಾಗ ಅದರ ಸ್ವರೂಪವೇ ಬದಲಾಗುತ್ತದೆ. ದಾನಮ್ಮಳ ನೇತೃತ್ವದಲ್ಲಿ ಹೆಂಗಸರೆಲ್ಲ ಮೈಮೇಲೆ ಬಂದವರಂತೆ ಗಂಡಸರ ಮೇಲೆ ತಿರುಗಿ ಬೀಳುತ್ತಾರೆ. ಹೆಂಗಸರ ಕೈಗೆ ಬರುವ ದೊಣ್ಣೆಗಳನ್ನು ಹಾಗೂ ಅಸಹಜವಾದ ಒಗ್ಗಟ್ಟನ್ನು ಕಂಡ ಗಂಡಸರೆಲ್ಲ ಬೆಚ್ಚಿಬೀಳುತ್ತಾರೆ. ಈ ಸನ್ನಿವೇಶದಲ್ಲಿ ಕಿರಗೂರಿನ ಹೆಂಗಸರ ಗೈಯ್ಯಾಳಿತನಕ್ಕೆ ನಿಜವಾದ ಅರ್ಥವು ಪ್ರಾಪ್ತವಾಗುತ್ತದೆ.
ಹೆಣ್ಣಿಗೆ ಬಜಾರಿತನವು ನೇತ್ಯಾತ್ಮಕ ಹಾಗೂ ನಿಂದಾತ್ಮಕ ಹಣೆಪಟ್ಟಿಯಂತಾಗಿದೆ; ಆದರೆ ಇಲ್ಲಿ ಅದು ಸಾಮಾಜಿಕ ಚಲನಶೀಲತೆಗೆ ದಾರಿ ಮಾಡಿಕೊಡುತ್ತದೆ. ಪಿತೃ ಪ್ರಧಾನ ಮೌಲ್ಯಗಳನ್ನು ಪ್ರತಿಭಟಿಸಿ ನಿಲ್ಲುವುದಕ್ಕೆ ಮಾತ್ರವೇ ಸೀಮಿತವಾಗುವುದಿಲ್ಲ. ಕಿರಗೂರಿನಲ್ಲಿ ನಡೆದ ಸಣ್ಣಪುಟ್ಟ ಜಗಳ, ವೈಮನಸ್ಯ, ಜಾತಿ ಜಗಳ, ಗಂಡಸರ ಸಾರಾಯಿ ಕುಡಿತ-ಇವೆಲ್ಲ ಸೇರಿದಂತೆ ಆ ಊರಿನ ಸಾಮಾಜಿಕ ಆರೋಗ್ಯವನ್ನು ಕಾಪಾಡುವುದಕ್ಕೆ ಕಾರಣವಾಗುತ್ತದೆ. ಹೆಂಗಸರು ತಮ್ಮ ಸಾಮಾಜಿ ಅಸ್ತಿತ್ವ ಹಾಗೂ ಸಾಂಸ್ಕೃತಿಕ ಅಸ್ಮಿತೆಗಾಗಿ ಸಂಘಟನೆಯಿಂದ ಹೋರಾಟ ನಡೆಸುವುದು ಮಹತ್ವದ್ದಾಗಿದೆ. ಈ ಹೋರಾಟವೇ ಮುಂದೆ ರೂಪಾಂತರ ಹೊಂದಿ ಪುರುಷಾಧಿಕಾರ ಮತ್ತು ಯಜಮಾನಿಕೆಯನ್ನು ಪ್ರತಿರೋಧಿಸುವ ಮಹಿಳಾ ಚಳುವಳಿಯಾಗುತ್ತದೆ. ದಮನಿತ ಮಹಿಳೆಯರು ತಮ್ಮ ಸ್ವಾತಂತ್ರ್ಯ ಹಾಗೂ ಹಕ್ಕುಗಳನ್ನು ಪಡೆಯುವ ಮಾರ್ಗವಾಗುತ್ತದೆ. ಆದ್ದರಿಂದ ’ಕಿರಗೂರಿನ ಗಯ್ಯಾಳಿಗಳು’ ಬರಿ ವೈನೋದಿಕ ಧಾಟಿಯ ನಿರೂಪನೆಯುಳ್ಳ ಚಲನಚಿತ್ರವಾಗದೆ ಸಾಮಾಜಿಕ ಬದಲಾವಣೆಗಳ ಕಡೆ ಮುಖ ಮಾಡುತ್ತದೆ. ತಂತಮ್ಮ ಆತ್ಮಗೌರವ ಹಾಗೂ ಸ್ವಾಭಿಮಾನಕ್ಕಾಗಿ ಸೆಣಸುತ್ತಿರುವ ಮಹಿಳೆಯರಿಗೆ ಸಿನಿಮಾ ಪ್ರೇರಣೆಯನ್ನು ನೀಡುತ್ತದೆ. ’ಕಿರಗೂರಿನ ಗಯ್ಯಾಳಿಗಳು’ ಕಥಾ ಸಂಕಲನವು ತಮ್ಮ ಆತ್ಮಗೌರವಕ್ಕಾಗಿ ಅವಿರತ ಹೋರಾಡುತ್ತಿರುವ ಎಲ್ಲ ಮಹಿಳೆಯರಿಗೆ ಅರ್ಪಿತವಾಗಿರುವುದು ಅರ್ಥಪೂರ್ಣವಾಗಿದೆ.
ಹಿಂದಿಯಲ್ಲಿ ಬಂದಿರುವ ಹೆಣ್ಣು ಪ್ರಧಾನವಾದ ಮತ್ತು ವಿಭಿನ್ನ ಕಥಾನಕಗಳ ಮೂರು ಸಿನಿಮಾಗಳು ಮುಖ್ಯವಾಗಿವೆ. ಮೊದಲನೆಯದಾಗಿ, ವಿಕಾಸ್ ಬಹಲ್ ನಿರ್ದೇಶನದ ’ಕ್ವೀನ್’ (2014) ಚಲನಚಿತ್ರವು ಮದುವೆಯ ನಿಶ್ಚಿತಾರ್ಥವಾಗಿದ್ದ ಹುಡುಗಿಗೆ (ಕಂಗನಾ ರಣಾವತ್) ಒಂದು ದಿನ ಇದ್ದಕ್ಕಿದ್ದಂತೆ ಹುಡುಗ (ರಾಜಕುಮಾರ್ ಯಾದವ್) ತಿರಸ್ಕರಿಸಿದಾಗ ಆ ಹುಡುಗಿಯು ತನಗಾದ ಅವಮಾನ ಮತ್ತು ನೋವನ್ನು ಮರೆತು ಅವನಿಲ್ಲದೆಯೇ ತನ್ನ ಬದುಕನ್ನು ಕಟ್ಟಿಕೊಳ್ಳುವ ಬಗೆಯನ್ನು ಈ ಸಿನಿಮಾ ಅದ್ಭುತವಾಗಿ ನಿರೂಪಿಸಿದೆ. ಆಧುನಿಕ ಹೆಣ್ಣೊಬ್ಬಳ ಸ್ವಾತಂತ್ರ್ಯ ಹಾಗೂ ಆತ್ಮಗೌರವಕ್ಕೆ ಪುರಷನೊಬ್ಬನಿಂದ ಧಕ್ಕೆಯಾದಾಗ ಅವಳು ತನ್ನತನವನ್ನು ಶೋಧಿಸಿಕೊಳ್ಳುವುದನ್ನು ಈ ಸಿನಿಮಾ ಕಮರ್ಷಿಲ್‌ನ ಶೈಲಿಯ ಸೂತ್ರಗಳನ್ನೂ ಬಿಟ್ಟುಕೊಡದೆ ಭಿನ್ನವಾದ ಕಥಾನಕ ಮತ್ತು ನಿರೂಪಣೆಯಿಂದಲೇ ಗಮನಾರ್ಹವಾಗಿದೆ. ಎರಡನೆಯದಾಗಿ, ನಿಶ್‌ಥಾ ಜೈನ್ ನಿರ್ದೇಶನದ ’ಗುಲಾಬಿ ಗ್ಯಾಂಗ್’ (2014) ಎಂಬ ಹಿಂದಿ ಸಿನಿಮಾ ಉತ್ತರ ಭಾರತದ ಹಳ್ಳಿಯೊಂದರಲ್ಲಿ ಲಿಂಗ ತಾರತಮ್ಯತೆ, ಜಾತಿ ದೌರ್ಜನ್ಯ ಮತ್ತು ಅಧಿಕಾರಶಾಹಿಯ ಭ್ರಷ್ಟಾಚಾರವನ್ನು ಮಹಿಳೆಯರು ಸಂಘಟಿತರಾಗಿ ಬಂಡಾಯ ಹೂಡುವ ವಸ್ತುವನ್ನು ಹೊಂದಿದೆ. ಇದು ಹಿಂಸೆಯನ್ನು ವೈಭವೀಕರಿಸಿದರೂ ಗ್ರಾಮೀಣ ಮಹಿಳೆಯರ ರಾಜಕೀಯ ಪ್ರಜ್ಞೆ ಮತ್ತು ಅವರ ಸಾಂಘಿಕ ಹೋರಾಟದ ಹೆಜ್ಜೆಗಳು ಮಾದರಿಯಾಗಿವೆ.


ಮೂರನೆಯದಾಗಿ, ನವದೀಪ್ ಸಿಂಗ್ ನಿರ್ದೇಶನದ ’ಓಊ-10’ (2015) ಹಿಂದಿ ಸಿನಿಮಾ ಕೂಡ ಮಹಿಳಾ ಪ್ರಧಾನತೆಯ ವಿಭಿನ್ನ ಧಾಟಿಯ ಕಥಾನಕವಾಗಿದೆ. ಪ್ರೇಮಿಗಳಾದ ಮೀರಾ (ಅನುಷ್ಕಾ ಶರ್ಮಾ) ಮತ್ತು ಅರ್ಜುನ (ನೇಲ್ ಭೂಪಲಮ್)-ಹೆದ್ದಾರಿಯೊಂದರ ಪಕ್ಕದಲ್ಲಿದ್ದ ಧಾಬಾದಲ್ಲಿ ಹುಡುಗಿಯೊಬ್ಬಳು ತನ್ನನ್ನು ಬೆನ್ನಟ್ಟಿದ ಗ್ಯಾಂಗ್‌ನಿಂದ ರಕ್ಷಣೆಗಾಗಿ ಇವರ ಸಹಾಯವನ್ನು ಯಾಚಿಸುತ್ತಾಳೆ. ಅವರು ವಿರೋಧಿಸಿದ್ದಕ್ಕೆ ತಾವಾಗಿಯೇ ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಹಳ್ಳಿಯ ಮೇಲ್ಜಾತಿಯ ಹುಡುಗಿಯೊಬ್ಬಳು ತಾನು ಇಷ್ಟಪಟ್ಟ ಅನ್ಯ ಜಾತಿಯ ಹುಡುಗನೊಂದಿಗೆ ಓಡಿ ಹೋಗುವ ಕಥಾನಕದಲ್ಲಿ ಮೀರಾ ಮತ್ತು ಅರ್ಜುನ ತಮ್ಮ ಜೀವವನ್ನು ಪಣಕ್ಕಿಟ್ಟು ಹೋರಾಡುವ ಸನ್ನಿವೇಶಗಳು ಗ್ರಾಮೀಣ ಜಗತ್ತಿನ ಕರಾಳತೆಯ ಬೇರೆ ಬೇರೆ ಮುಖಗಳು ವಾಸ್ತವದ ನೆಲೆಯಲ್ಲಿ ನಿರೂಪಿತವಾಗಿವೆ.
’ಕಿರಗೂರಿನ ಗಯ್ಯಾಳಿಗಳು’ ಸಿನಿಮಾದ ಕೆಲವು ಡೈಲಾಗ್‌ಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿರುವ ಹಿನ್ನೆಲೆಯಲ್ಲಿ ಚಿತ್ರ ತಂಡದಿಂದ ತೀವ್ರವಾಗಿ ಆಕ್ಷೇಪ ವ್ಯಕ್ತವಾಯಿತು. ಇದರ ಬಗ್ಗೆ ಮಾದ್ಯಮಗಳಲ್ಲಿ ಬಿರುಸಿನ ಚರ್ಚೆಯೂ ನಡೆಯಿತು. ಜಾತಿ ವ್ಯವಸ್ಥೆಯನ್ನು ಪ್ರಶ್ನಿಸುವ ಕಥಾವಸ್ತುವನ್ನು ಹೊಂದಿದ್ದ ’ಸಂಸ್ಕಾರ’ವು (1970) ಕೂಡ ಸೆನ್ಸಾರ್ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿತ್ತು; ಆಗ ’ಸಂಸ್ಕಾರ’ ಸಿನಿಮಾದ ಬಿಡುಗಡೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. ಈ ಹಿನ್ನೆಲೆಯಲ್ಲಿ ’ಕಿರಗೂರಿನ ಗಯ್ಯಾಳಿಗಳು’ ಸಿನಿಮಾದ ಕೆಲವು ಸಂಭಾಷಣೆಗಳು ಅಶ್ಲೀಲತೆಯಿಂದ ಕೂಡಿವೆ ಎನ್ನುವ ಸೆನ್ಸಾರ್ ಮಂಡಳಿಯ ಆಪಾದನೆಯಲ್ಲಿ ಹುರುಳಿಲ್ಲ. ಪಾತ್ರಗಳು ಆಡುವ ಕೆಲವು ಮಾತುಗಳನ್ನು ಮ್ಯೂಟ್ ಮಾಡಿರುವುದರಿಂದ ಸಿನಿಮಾ ನೋಡುಗರಲ್ಲಿ ಕಿರಿಕಿರಿಯಾಗುತ್ತದೆ. ಇದು ಸಿನಿಮಾದಂತಹ ಕಲಾ ಮಾದ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ಹುನ್ನಾರವಾಗಿದೆ. ವಿಚಿತ್ರವೆಂದರೆ ಕರ್ನಾಟಕದ ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಅಧಿಕಾರಿಯಾಗಿರುವ ನತಾಶ ಡಿಸೋಜ ಅವರಿಗೆ ಕನ್ನಡ ಭಾಷೆಯೇ ಗೊತ್ತಿಲ್ಲ. ಕನ್ನಡ ಭಾಷೆಯ ಗಂಧ ಗಾಳಿಯೇ ಇಲ್ಲದ ನತಾಶ ಅವರು ಸೆನ್ಸಾರ್ ಮಂಡಳಿಯ ಮುಖ್ಯಸ್ಥೆಯಾಗಿ ನೇಮಕಗೊಂಡಿರುವುದು ವಿವಾದಾಸ್ಪದ ವಿಚಾರವಾಗಿದೆ.
’ಕಿರಗೂರಿನ ಗಯ್ಯಾಳಿಗಳು’ ಸಿನಿಮಾ ಹಲವು ಮಿತಿಗಳ ನಡುವೆಯೂ ಒಂದು ಒಳ್ಳೆಯ ಪ್ರಯತ್ನವೇ ಆಗಿದೆ. ಸದ್ಯಕ್ಕೆ ಕನ್ನಡದಲ್ಲಿ ಹೆಣ್ಣು ಪ್ರಧಾನ ಕಥಾನಕದ ಕೊರತೆಯನ್ನು ನೀಗಿಸಿದೆ. ’ಕ್ವೀನ್’ ಚಿತ್ರವು ನಗರದ ಮದ್ಯಮ ವರ್ಗದ ಹುಡುಗಿಯೊಬ್ಬಳ ಚೈತನ್ಯಶೀಲತೆಯ ಹುಡುಕಾಟವಾದರೆ, ’ಕಿರಗೂರಿನ ಗಯ್ಯಾಳಿಗಳು’ ಹಳ್ಳಿಯೊಂದರ ಪಾರಂಪರಿಕವಾಗಿ ಗಂಡು ಪ್ರಧಾನ ಸ್ಥಾಪಿತ ನಂಬಿಕೆಗಳನ್ನು ಕಿತ್ತೆಸೆಯುವ ಮಹಿಳೆಯರ ಸಾಮೂಹಿಕ ಹೋರಾಟದಿಂದ ಆಪ್ತವಾಗುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆಯು ಸಾಮುದಾಯಿಕ ಪ್ರಯತ್ನದಿಂದಲೇ ಸಾಧ್ಯ ಎಂಬುದನ್ನು ಧ್ವನಿಸುತ್ತದೆ. ’ಓಊ-10’ ಚಲನಚಿತ್ರವು ವಿಷಮ ಪರಿಸ್ಥಿತಿಯಲ್ಲಿ ಕಥಾನಾಯಕಿಯ ಧೈರ್ಯ ಹಾಗೂ ಕೆಚ್ಚೆದೆಯ ಏಕಾಂಗಿ ಹೋರಾಟವನ್ನು ತುಂಬ ಗಂಭೀರವಾದ ಧಾಟಿಯಲ್ಲಿ ಕಟ್ಟಿಕೊಡುತ್ತದೆ; ಅದೇ ’ಕಿರಗೂರಿನ ಗಯ್ಯಾಳಿಗಳು’ ಹಲವು ಕಥನಗಳ ಮೂಲಕ ಮಹಿಳೆಯರ ಬದುಕಿನ ಬಹುಮುಖಗಳನ್ನು ದರ್ಶಿಸುತ್ತದೆ.

ಈ ಅಂಕಣದ ಹಿಂದಿನ ಬರೆಹಗಳು

’ದಿ ಪರ್‌ಸ್ಯೂಟ್ ಆಫ್ ಹ್ಯಾಪಿನೆಸ್: ಕಂಗೆಟ್ಟ ಬದುಕಿನಲ್ಲಿ ಮಗನಿಗೆ ಆಪ್ತಮಿತ್ರನಾಗುವ ಅಪ್ಪ’

ಮರಾಠಿ ಸಿನಿಮಾ ‘ನಟ ಸಮ್ರಾಟ್: ಮನುಷ್ಯ ಸಂಬಂಧದ ಬಿಕ್ಕಟ್ಟುಗಳ ಕತೆ’

ಜೆನ್ ದಾರ್ಶನಿಕತೆಯ ಸಿನಿಮಾ: ‘ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ ಅಂಡ್... ಸ್ಪ್ರಿಂಗ್’

ಡ್ರೀಮ್ಸ್: ಅಕಿರ ಕುರೋಸಾವನ ಭಗ್ನ ಹಾಗೂ ಸುಂದರ ಕನಸುಗಳ ಜಗತ್ತು

ಮಸಾನ್: ’ಸ್ಥಾಪಿತ ಮೌಲ್ಯಗಳ ದಾಟುವಿಕೆ’

ಟೇಸ್ಟ್ ಆಫ್ ಚೆರಿ: ‘ಮನುಷ್ಯನ ಒಂಟಿತನ ಮತ್ತು ದ್ವಂದ್ವಗಳ ತಾಕಲಾಟ’

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...