ಕೊಳದ ಮೇಲೆ ಬಿದ್ದ ಬೆಳಕು ಕೊಳವನೆಂದೂ ಕಲಕದು

Date: 21-03-2023

Location: ಬೆಂಗಳೂರು


“ಜನ್ಮಕ್ಕಂಟಿಕೊಂಡ ಸಂಗತಿಗಳು ಹೀಗೆ ಆಳವನ್ನು ಕೊರೆದೂ ಕೊರೆದೂ ನದಿಯಂತೆ ದಾರಿ ಮಾಡಿಕೊಂಡುಬಿಟ್ಟಿರುತ್ತದೆ. ಪಥ ಅರಿತ ಅದು ತನ್ನ ದಿಕ್ಕಲ್ಲಿ ಹರಿಯುತ್ತಿರುವಾಗಲೇ ಕೆಲವೊಮ್ಮೆ ಪಥವರಿಯದಂತೆ ದಿಕ್ಕೆಟ್ಟು ಸಿಕ್ಕ ಸಿಕ್ಕ ಕಡೆಗೆ ನುಗ್ಗಿಬಿಡುತ್ತದೆ. ಇದನ್ನು ಸಂಭವಿಸುವುದು ಎನ್ನಬೇಕಾ?,'' ಎನ್ನುತ್ತಾರೆ ಲೇಖಕಿ ಪಿ. ಚಂದ್ರಿಕಾ. ಅವರು ತಮ್ಮ ‘ನಡೆಯದ ಬಟ್ಟೆ’ ಅಂಕಣದಲ್ಲಿ ‘ಕೊಳದ ಮೇಲೆ ಬಿದ್ದ ಬೆಳಕು ಕೊಳವನೆಂದೂ ಕಲಕದು’ ಎನ್ನುವ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.

ಆಡುವ ಮಾತು ನಿಜವೇ ಆಗಿಬಿಟ್ಟರೆ?! ಅವತ್ತು ಆಗಿದ್ದು ಅದೇನಾ? ಶ್ಯಾಮು ಹೇಳಿದ ಆ ಘಟನೆ ನನಗೆ ಚೆನ್ನಾಗಿ ನೆನಪಿದೆ ನೆನಪಿರಲೇ ಬೇಕು. ಕೆರೆಯ ದಂಡೆಗೆ ಕೂತು ಕೈಲಿದ್ದ ಕಡ್ಡಿಯಿಂದ ಮುಳುಗುವ ಸೂರ್ಯನನ್ನು ಬರೆಯುವೆ ಎಂದು ಹೊರಟಳಲ್ಲ ಅವತ್ತು ನಾನು ನಿಜಕ್ಕೂ ಗಲಿಬಿಲಿಗೊಂಡಿದ್ದೆ.

`ಅನುಭವ ಎನ್ನುವುದು ಆಯಾ ಕಾಲಕ್ಕೆ ಆಗಿ ಮುಗಿದು ಹೋಗುವಂಥದ್ದು, ನಾವು ಅದನ್ನು ಸದಾ ರಿವೈಂಡ್ ಮಾಡಿಕೊಳ್ಳಲಿಕ್ಕೆ ನೋಡುತ್ತಿರುತ್ತೇವೆ. ಅವಾಗ ಅದು ಮೂಲ ಸ್ವರೂಪವನ್ನು ಕಳೆದುಕೊಂಡುಬಿಡುತ್ತದೆ. ಮೊದಲ ಸಲ ಅದರ ಮುಂದೆ ನಿಲ್ಲುತ್ತೇವಲ್ಲ ಆಗ ನಾನು ಅದು ಎನ್ನುವ ಭೇದ ಇರೊಲ್ಲ ಸ್ವತಃ ನಾವೇ ಅದಾಗಿರುತ್ತೇವೆ’. ಈಗ ನಾನು ನೆನಪಿಸಿಕೊಂಡÀ ಅವತ್ತಿನ ಘಟನೆಗೆ ಶ್ಯಾಮುವಿನ ಪ್ರತಿಕ್ರಿಯೆ ಹೀಗಿತ್ತು. ನಾನು ಕೇಳಿದೆ, `ಅಲ್ಲ ಶ್ಯಾಮು ಅವತ್ತು ನಡೆದದ್ದು ಜಾದೂನಾ ಅಥವಾ ನಮ್ಮೊಳಗಿನ ಭಯಕ್ಕೆ ದಕ್ಕಿದ್ದಾ?’

ಗೆರೆ ಎಳೆದೂ ಎಳೆದೂ ಸೂರ್ಯನನ್ನು ಬರೆಯುತ್ತಿದ್ದ ಶ್ಯಾಮೂ ಒಮ್ಮೆಲೇ ಆಕಾಶವನ್ನೂ ಗೆರೆಯನ್ನೂ ನೋಡುತ್ತಲೇ ಇದ್ದಳು. ಈಗಲೂ ನನಗೆ ನಗು ಉಕ್ಕಿ ಬರುತ್ತದೆ, ಅವಳ ಆ ಗೆರೆಗಳು ಮಗುವೊಂದು ಹಾಗೊಂದು ಹೀಗೊಂದು ಎಳೆದು ಇದು ಮನೆ ಎಂದು ಹೇಳಿ ಅರ್ಥ ಮಾಡಿಸುತ್ತದಲ್ಲ- ದೀಕ್ಷೆ ತೆಗೆದುಕೊಂಡ- ಹಾಗೆ. ಕೆರೆಯ ಏರಿಯ ಮೇಲೆ ಹೋಗುವವರಿಗೆ ಸಂಜೆ ಸೂರ್ಯ ಇಳಿದುಬಿಟ್ಟರೆ ಆವರಿಸುವ ಕತ್ತಲೆಯ ಭಯ. ಅಷ್ಟರಲ್ಲಿ ಈ ಹುಡುಗಿಯರು ಮನೆಗೆ ಸೇರುತ್ತರೋ ಇಲ್ಲವೋ ಎನ್ನುವ ಆತಂಕ. ಶ್ಯಾಮುಗೆ ತಾನು ಸಂಜೆಯ ಸೂರ್ಯನನ್ನು ಹಿಡಿಯುತ್ತಿದ್ದೇನೆ ಎನ್ನುವ ದೊಡ್ಡ ಹಮ್ಮು. ಬರೆದ ಗೆರೆಗಳನ್ನು ತೋರುತ್ತಾ ನೋಡು ಪ್ರತಿ ದಿನ ಜಗತ್ತಿನಿಂದ ಸೂರ್ಯ ಪಾರಾಗಿ ಬಿಡುತ್ತಾನೆ.÷ನಮಗೆ ಮಾತ್ರ ಇದು ಯಾಕೆ ಸಾಧ್ಯ ಇಲ್ಲ ಎನ್ನುತ್ತಿದ್ದಳು.

`ಶ್ಯಾಮು ಸೂರ್ಯ ಮುಳುಗಿದರೆ ಕತ್ತಲೆಯೇ. ಮನೆಗೆ ತಲುಪುವಾಗ ದಾರಿಯಲ್ಲಿ ಯಾವ ಪ್ರಾಣಿಗಳು ಬರುತ್ತವೋ ಗೊತ್ತಾಗಲ್ಲ ಹೋಗೋಣ’ ಎಂದು ನಾನು ಗೋಗರೆದಿದ್ದೆ. `ಈಗೊಂದು ಮ್ಯಾಜಿಕ್ ನಡೆಯುತ್ತೆ ನೋಡುತ್ತಿರು’ ಎಂದು ಏರಿಯ ಮೇಲೆ ಕಾಲ ಮೇಲೆ ಕಾಲನ್ನು ಹಾಕಿಕೊಂಡು ಕೂತಳು. ಮ್ಯಾಜಿಕ್ ಶೋಗಳನ್ನು ಕಂಡಿದ್ದ ನಾನು ಏನು ಮ್ಯಾಜಿಕ್ ನಡೆಯುತ್ತದೆ? ಎನ್ನುವ ಕುತೂಹಲಕ್ಕೆ ಬಿದ್ದು, `ಕತ್ತಲಾಗುತ್ತೆ’ ಎನ್ನುವುದನ್ನು ಮರೆತು ಅವಳ ಪಕ್ಕಕ್ಕೆ ಕೂತೆ. ಅವಳ ಕಣ್ಣುಗಳ ಹೊಳಪೇ ಬೇರೆ. ಅವಳ ಮನಸ್ಸು ಗಾಢವಾಗಿ ಏನನ್ನು ಕಲ್ಪನೆ ಮಾಡಿಕೊಳ್ಳುತ್ತಿತ್ತು. ನೆಲದ ಮೇಲೆ ಬರೆಯುತ್ತಿದ್ದ ಗೆರೆಗಳನ್ನು ತೋರಿಸುತ್ತಾ, `ಮೊದಲು ನಾವಾಡುವ ಮಾತು ಸುಳ್ಳು ಎನ್ನುವುದನ್ನು ಮರೆತುಬಿಡು. ನೋಡು ನನ್ನ ರೇಖೆಗಳು ಚಲಿಸಿದಂತೆ ಕಾಣುತ್ತಿದೆಯಾ ಬಗ್ಗಿ ನೋಡು’ ಎಂದಳು. ನೆಲದ ಮೇಲಿನ ಗೆರೆಗಳು ಹುಳುಗಳ ಹಾಗೆ ಹರಿಯತೊಡಗಿದ್ದವು. ಗಂಭೀರಳಾದ ಶ್ಯಾಮು, `ಈಗ ನೋಡು... ನೋಡು... ಸೂರ್ಯ ಈ ಕೆರೆಯ ಒಳಗೆ ಇಳಿಯುತ್ತಾನೆ. ಅವನ ಮೈ ಬಿಸಿಯನು ಆರಿಸಿಕೊಳ್ಳಲಿಕ್ಕೆ. ಹಗಲೆಲ್ಲಾ ಉರಿದ ಅವನು ತನ್ನ ಶಾಖವನ್ನೆಲ್ಲಾ ನೀರಿಗೆ ಬಿಟ್ಟು ತಣ್ಣಗಾಗುತ್ತಾನೆ’ ಎಂದಳು. `ಶ್ಯಾಮು ನಿನಗೆ ಹುಚ್ಚು ಹಿಡಿದಿರಬೇಕು. ಇಲ್ಲದಿದ್ದರೆ ಸೂರ್ಯ ಕೆರೆಯ ಆಳಕ್ಕೆ ಮೀಯಲಿಕ್ಕೆ ಮುಳುಗುವುದಾ?’ `ನಾನು ಹೇಳಿದೆನಲ್ಲಾ ನಾವಾಡುವ ಮಾತಿನ ಮೇಲೆ ನಂಬಿಕೆ ಇಡಬೇಕು ಎಂದು! ಈಗ ನೋಡು ಅವನು ಮೀಯುವುದರಿಂದ ನೀರು ಬಿಸಿಯಾಗಿ ಕಾಯಲಿಕ್ಕೆ ಶುರುವಾಗುತ್ತೆ. ಥೇಟ್ ದಬರಿಯಲ್ಲಿ ಕಾಯಲಿಕ್ಕಿಟ್ಟ ನೀರಿನಂತೆ. ನೋಡ್ತಾ... ನೋಡ್ತಾ... ಕುದೀಲಿಕ್ಕೆ ಶುರುವಾಗುತ್ತೆ ಒಳಗೇ ತಳಮಳಿಸಿ...’ ಎನ್ನಲಿಕ್ಕೆ ಶುರುಮಾಡಿದಾಗ, ಕೆಂಪಡರಿದ ಆಕಾಶ ತನ್ನ ಬಣ್ಣವನ್ನು ನೀರಿಗೂ ಬಿಟ್ಟುಕೊಡುತ್ತಾ, ಕೊಡುತ್ತಾ ಹೋದಂತೆ ಬಗ್ಗಿ ನೋಡುತ್ತಿದ್ದ ನಮ್ಮ ಮುಖಕ್ಕೆ ಸಣ್ಣದಾಗಿ ಗುಳ್ಳೆ ಗುಳ್ಳೆಗಳೇಳುತ್ತಾ ಬಿಸಿ ಹಬೆ ಹೊಡೆಯುತ್ತಾ ಹೋಯಿತು. `ನಿಜ ಇರಬೇಕು ಶ್ಯಾಮು ನೀನು ಹೇಳಿದ್ದು’ ಎಂದೆ. ಶ್ಯಾಮು ಜಗತ್ತನ್ನೇ ಗೆದ್ದಂತೆ ನಕ್ಕಳು. ಗಲಗಲ ನಗು ನೀರಿನ ಜೊತೆ ಸೇರಿತೇ? ಶ್ಯಾಮು ಈಗ ಅವಸರಿಸ ತೊಡಗಿದಳು `ಏಳು ತೇಜೂ ಇಡೀ ಕೆರೆ ಕಾದ ತಪ್ಪಲೆಯಾಗಿ ನೀರು ಕುದಿಯುತ್ತದೆ. ಇಲ್ಲಿದ್ದರೆ ನಾವೂ ಬೆಂದು ಹೋಗುತ್ತೇವೆ’ ಎಂದು ಕೂಗಿ ಓಡತೊಡಗಿದಳು. ಗಲಿಬಿಲಿಸಿ ನಾನೂ ಓಡತೊಡಗಿದೆ. ಸ್ವಲ್ಪ ದೂರ ಓಡಿ ಏದುಸಿರುಡುತ್ತಾ ತಿರುಗಿ ನೋಡಿದಾಗ ಮಬ್ಬು ಮಬ್ಬು ಕತ್ತಲಲ್ಲಿ ಧೂಮ್ರದ ಥರಾ ಏಳುತ್ತಿತ್ತು. ಜೋರಾಗಿ ಏದುತ್ತಿದ್ದ ನಮ್ಮ ಬಾಯಿಂದ ಕೂಡಾ ಹೊಗೆ ಬರುತ್ತಿತ್ತು. ಈಗಲೂ ನನಗೆ ಅನುಮಾನವಿದೆ. ಅದು ಡಿಸೆಂಬರ್ ತಿಂಗಳಾದ್ದರಿಂದ ಅಲ್ಲಿ ಮಬ್ಬು ಮಬ್ಬಾಗಿ ಧೂಮ್ರದ ಹಾಗೆ ಕಂಡಿದ್ದು ಮಂಜೇ ಅಥವಾ ...

ಓಡುವಾಗ ಬಿದ್ದು ಮೊನಚು ಕಲ್ಲು ಶ್ಯಾಮುವಿನ ಮಂಡಿಯನ್ನು ಸೀಳಿ ರಕ್ತ ಸುರಿಯುತ್ತಿತ್ತು. ಹಾ ಎನ್ನುತ್ತಾ ಕಾಲನ್ನು ಎಳೆದು ಹಾಕುವಾಗ ಮೊಣಕಾಲಿಂದ ಪಾದದ ವರೆಗೂ ರಕ್ತವು ಇಳಿದು ಗೆರೆಯಾಗಿ ಮೂಡುವಾಗ ನಾನು ಕೂಗಿದ್ದೆ, `ಶ್ಯಾಮು ನಿನಗೆ ಯಾವುದರ ಅರಿವೂ ಇಲ್ಲವೇ?’ ಅವಳು ಹುಚ್ಚು ನೋಟ ನೋಡಿ, `ನಾನು ಕಲ್ಪನೆಯಾಗುತ್ತಿದ್ದೇನೆ’ ಎಂದಿದ್ದಳು. ಹುಚ್ಚಿ ಎಂದು ಅವಳನ್ನು ತಳ್ಳಿ ಅತ್ತಿದ್ದೆ. ನೋವು ಅವಳಿಗಾ? ನನಗಾ? ಅರ್ಥವಾಗದೆ.

ಈಗಲೂ ಅಚ್ಚರಿಯಾಗುತ್ತೆ ಕಲ್ಪನೆಯಾಗುವುದು ಎಂದರೇನು? ಪಾದ ಸೀಳಿಸಿಕೊಂಡು ರಕ್ತ ಬರಿಸಿಕೊಳ್ಳುವುದಾ? ಹಾಗಾದರೆ ಅಲ್ಲಿಯವರೆಗೂ ಅವಳಲ್ಲಿ ಕಲ್ಪನೆ ಇರಲಿಲ್ಲವಾ? ಅಲ್ಲಿಯವರೆಗೂ ಅವಳಿದ್ದ ಸ್ಥಿತಿಯನ್ನು ಏನೆಂದುಕೊಳ್ಳುವುದು? ಈ ಮಾತುಗಳು ಏನು? ಅವಸ್ಥಾಂತರಕ್ಕೆ ಸಿಕ್ಕ ಕಂಬಳಿ ಹುಳು ಹೆಗಲಿಗೆ ರೆಕ್ಕೆ ಏರಿಸಿಕೊಂಡ ಕ್ಷಣವೆಂದೇ? ಅನಪೇಕ್ಷವಾದ ಸಂಗತಿಯೊಂದಿಗೆ ಎದುರು ನಿಂತು ತೆಗೆದ ಉದ್ಗಾರವೆಂದೇ?

ನಾನು ಅಳುತ್ತಿದ್ದರೆ ಇಷ್ಟೆಲ್ಲಾ ಅನುಭವಕ್ಕ್ಕೆ ಕಾರಣಳಾದ ಶ್ಯಾಮು ಎದುರು ನಿಲ್ಲಿಸಿದ್ದ ಗಾಡಿಯೊಂದರ ಕನ್ನಡಿಯಲ್ಲಿ ಬಾಯಿಂದ ಗಾಳಿಯನ್ನು ಊದಿ ಮಬ್ಬಾದ ಅದರ ಮೇಲೆ ಕೈಯ್ಯಿಂದ ಏನನ್ನೋ ಬರೆಯುತ್ತಿದ್ದಳು. ಬಗ್ಗಿ ನೋಡಿದೆ ತನ್ನ ಹೆಸರನ್ನೇ ಬರೆದಿದ್ದಳು. `ನೋಡು ತೇಜೂ, ಸ್ವಲ್ಪ ಹೊತ್ತಷ್ಟೇ ನನ್ನ ಹೆಸರನ್ನು ಈ ಪ್ರಕೃತಿ ತನಗೆ ಬೇಕು ಅಂತ ತಗೊಂಡ್ ಬಿಡುತ್ತೆ. ಆಗ ಈ ಗಿಡ ಮರ, ಬಂದೆ ಕಲ್ಲುಗಳ ಮಧ್ಯೆ ಸೇರಿ ನನೂ ಒಬ್ಬಳಾಗಿ ಬಿಡುತ್ತೇನೆ’ ಎಂದಳು. ಇಷ್ಟು ಹೊತ್ತು ನನ್ನನ್ನು ಹೆದರಿಸಿ ಕೆರೆಯ ದಡದಿಂದ ಓಡಿಸಿಕೊಂಡು ಬಂದ ಶ್ಯಾಮು ಇವಳೇನಾ? ರಕ್ತ ಸುರಿದ ಗೆರೆಯನ್ನು ನೋಡುತ್ತಾ, `ನಾನು ಕಲ್ಪನೆ’ ಎನ್ನುವ ಮಾತಿಗೆ ಯಾವ ಅರ್ಥ? ಇವಳ ಕೇಳಿಕೆಗೆ ಸೂರ್ಯ, ಚಂದ್ರ, ಆಕಾಶ ಎಲ್ಲಾ ಸಪೋರ್ಟ್ ಮಾಡಿಬಿಡುತ್ತಾ? ಏನು ನಡಿತಾ ಇದೆ ಇಲ್ಲಿ? ಎಂದು ಅಚ್ಚರಿಗೊಂಡಿದ್ದೆ. ಶ್ಯಾಮುಗೆ ಮಾತ್ರ ಯಾವುದರ ಪರಿವೆಯೇ ಇರಲಿಲ್ಲ. ನನಗೆ ಇನ್ನೂ ಅರ್ಥವೇ ಆಗದ ಸಂಗತಿ ಎಂದರೆ ಅವಳ ಸೂರ್ಯ ಮುಳುಗಿ ಕೊಳದ ನೀರು ಕುದಿವ ಕಲ್ಪನೆ ನನಗೆ ಕಾಣಿಸಿದ್ದು ಹೇಗೆ?!

ಇದೆಲ್ಲಾ ಹೇಗೆ ನಡೆಯಿತು? ಜಗತ್ತಿನ ಅಸಂಖ್ಯ ನಿಯಮಗಳು ಹೀಗೆ ದಿಕ್ಕು ತಪ್ಪುವಾಗ ಯಾವ ಜಿಪಿಎಸ್ ಹಾಕಿ ಹಾದಿಗಳನ್ನು ಹುಡುಕಿಕೊಳ್ಳಲಿ? ಬಂಡಿ ಚಕ್ರದ ಜಾಡನ್ನು ನೋಡುತ್ತಾ, `ಇಲ್ಲಿ ತಪ್ಪಿದೆ ನೋಡು!’ ಎಂದು ತೋರುತ್ತಿದ್ದ ಶ್ಯಾಮುವಿನ ಮಾತನ್ನು ಹಿಡಿದು ನೋಡಿದರೆ ಅಲ್ಲಿ ನೆಲ ಸಮವಾಗಿರಲಿಲ್ಲ. `ಶ್ಯಾಮು ನೆಲ ಸರಿ ಇಲ್ಲ’ ಎಂದರೆ ತಲೆ ಆಡಿಸುತ್ತಾ ಹೇಳಿದ್ದು, `ಆಕಾಶದಿಂದ ಇಳಿವ ಕತ್ತಲೆಯೂ ಧಾರೆಯಾಗುವಾಗ ಜಗತ್ತು ಹೇಳುವ ಮಾತಿದು. ನೆಲ ತುಳಿದ ಬಂಡಿಯ ಚಕ್ರಕ್ಕೆ ನೆಲ ನಿಯಮವನ್ನು ಹೇಳಿಕೊಡುತ್ತದೆ’ ಎಂದು.

ಎಲ್ಲ ನೆನಪಿಸಿಕೊಳ್ಳುವಾಗ ಶ್ಯಾಮು ಅದೇ ಮುಗ್ಧತೆಯಲ್ಲೇ ಹೇಳಿದ್ದಳು, `ಆಗಲೇ ಅಲ್ಲವೇ ನನಗೂ ನಂಬಿಕೆ ಬಂದಿದ್ದು ನಡಿದಿದ್ದೆಲ್ಲಾ ಸತ್ಯ. ನನ್ನ ಕಲ್ಪನೆ ಭ್ರಮೆಯದ್ದು ಎಂದು ಎಲ್ಲ ಹೇಳುತ್ತಿದ್ದರೂ ಆ ಅನುಭವ ಬೇರೆಯವರದ್ದೂ ಆದಾಗ ಅವರು ನನ್ನ ಹಾಗೆ ಹೇಗೆ ಭ್ರಮಾಧೀನರಾಗಿರಲು ಸಾಧ್ಯ! ಇಲ್ಲ ನನ್ನೊಳಗಿನ ಅಲುಗಾಟ ಲೋಕದ ಅಲುಗಾಟವಾಗುವಾಗ, ನನ್ನ ಕಲ್ಪನೆ ಇನ್ನೊಬ್ಬರ ಕಲ್ಪನೆ ಆಗುವಾಗ, ನಾನು ಹಾಕಿದ ರೇಖೆಗಳ ಹಾಡು ಕುಣಿತಗಳನು ಇನ್ನೊಬ್ಬರು ಕೇಳುತ್ತಾ, ಕಾಣುವಾಗ ಅವು ಲೋಕದ ಸಂಗತಿಗಳಲ್ಲ ಬರಿ ನನ್ನವು ಎಂದು ಹೇಗೆ ನಿರ್ಧರಿಸಲಿ? ಹಾಗೆ ನಿರ್ಧಾರ ಮಾಡಲಿಕ್ಕೆ ಬೇರೆ ಯಾವ ಕಾರಣವೂ ತೋಚದಿದ್ದಾಗ ಆರ್ದ್ರವಾಗಿ ಕೇಳಿದ್ದು, `ಅಮ್ಮಾ ಈ ರೂಮು, ನೀನೂ- ಅಷ್ಟೇ ಯಾಕೆ ಇಡೀ ಜಗತ್ತು ಯಾಕೆ ಅಲುಗುತ್ತಿದೆ?’ ಎಂದು. ಆ ಅಲುಗಾಟ ಹೊರಗಿನದ್ದಲ್ಲ, ನನ್ನೊಳಗಿನದ್ದೇ ಎಂದು ಅರ್ಥ ಆಗಲಿಕ್ಕೆ ಎಷ್ಟು ವರ್ಷಗಳು ಬೇಕಾಯಿತು!

`ನಿನ್ನ ಒಳಗೆ ಏನಿದೆ?’ ಡಾಕ್ಟರ್ ಕೇಳಿದಾಗ ನಾನು ನಕ್ಕೆ, `ಇರೋದೆಲ್ಲ ಹೊರಗೆ ಬರುವಾಗ ಒಳಗೆ ಏನಿರುತ್ತೆ ಅಂತ ಹೇಗೆ ಹೇಳೋದು?’ ನನ್ನ ನಗೆಗೆ ಕಾರಣ ಅವರು ಕಂಡುಕೊಂಡಿದ್ದರು. `ಯಾಕೆ ನಿನಗೆ ಆ ಕನಸು ಬಿತ್ತು?’ ನನಗೆ ಅಚ್ಚರಿಯಾಯಿತು, `ಯಾವ ಕನಸು?’ `ಅದೇ ಹೂವಿನ ತೋಟಕ್ಕೆ ಹೋದ ಕನಸು’. ಅಮ್ಮನ ಕಡೆಗೆ ನೋಡಿದೆ ಅಮ್ಮ ಕಣ್ಣು ತಪ್ಪಿಸಿದ್ದಳು. ಎಲ್ಲಾ ಸೇರಿ ಪಿತೂರಿ ನಡೆಸುತ್ತಿದ್ದಾರೆ, ಅವಳಿಗೆ ಇದನ್ನೊಂದು ಗುಟ್ಟೆಂದು ಹೇಳಿದ್ದೆ. ಅವಳು ಯಾಕೆ ಈ ಡಾಕ್ಟರ್‌ಗೆ ಹೇಳಿದಳು? ನಾನು ಮಗುಮ್ಮಾದೆ. ಹಳೆಯ ಗಾಯವೊಂದನ್ನು ಕೆಣಕಿದಂತಾಗಿತ್ತು ನನ್ನ ಸ್ಥಿತಿ. ಒಣಗಿದ್ದನ್ನು ಕೆದಕಿದರೆ ಹುಣ್ಣು ಮತ್ತಷ್ಟು ವ್ರಣವೇ. ನನಗೆ ಸಿಟ್ಟು, ಹಠ ಎರಡು ಬಂದಿತ್ತು, ಅಮ್ಮನಿಗೆ ಹೇಳಿದ ಕಥೆಗೆ ಮತ್ತಷ್ಟನ್ನು ಸೇರಿಸಿ ಹೇಳಲು ಆರಂಭಿಸಿದೆ.

ಡಾಕ್ಟರ್ ನನ್ನೇ ನೋಡುತ್ತಿದ್ದರು, `ನಾನು ಆಡುತ್ತಾ ನಲಿದಾಡುತ್ತಾ ಹೂವಿನ ತೋಟವೊಂದಕ್ಕೆ ಬಂದೆ. ಅಲ್ಲಿ ಹೂವಿಗೆ ಜೇನ್ನೊಳಗಳು ಮುತ್ತಿಕೊಂಡಿದ್ದವು. ನನ್ನನ್ನು ನೋಡಿ ಅವು ನನ್ನೂ ಒಂದು ಹೂವೆಂದು ಮುತ್ತಲು ಬಂದವು. ನಾನದನ್ನು ಓಡಿಸಲು ನೋಡಿದೆ ಆಗಲಿಲ್ಲ. ಅದಕ್ಕೆ ತಪ್ಪಿಸಿಕೊಳ್ಳಲು ಬೇರೆ ದಾರಿ ಕಾಣದೆ ನಾನು ನೀರಿನಲ್ಲಿ ಮುಳುಗಿದೆ. ಎಲ್ಲಾ ಜೇನ್ನೊಳಗಳು ನನ್ನ ನೆತ್ತಿಯ ಮೇಲೆ ಹಾರಾಡುತ್ತಿದ್ದವು. ನನಗೆ ನೀರಲ್ಲಿ ಒಂದು ಕತ್ತಿ ಸಿಕ್ಕಿತು. ಅದು ಝಾನ್ಸಿ ರಾಣಿಯದ್ದಾಗಿತ್ತು. ಅದೇಕೆ ನನ್ನ ಕೈಗೆ ಬಂತು? ಅದಕ್ಕೂ ನನಗೂ ಇದ್ದ ಸಂಬಂಧ ಏನು? ಇದ್ದಿರಬಹುದು ಹಿಂದಿನ ಜನ್ಮದಲ್ಲಿ ನಾನು ಅವಳೇ. ಅದನ್ನು ತೆಗೆದುಕೊಂಡ ನಾನು ನೀರಿಂದ ಮೇಲೆದ್ದು ಬಂದೆ. ಮತ್ತೆ ಅವು ನನ್ನನ್ನು ಮುತ್ತಲು ಬಂದವು. ನಾನು ಕತ್ತಿ ಜಳಪಿಸುತ್ತಾ ಅವುಗಳನ್ನೆಲ್ಲಾ ಕೊಂದು ಕೆಡವಿದೆ. ನನಗಾಗ ಖಚಿತವಾಗಿತ್ತು ನಾನು ಅವಳೇ’ ಎಂದೆ. ಅಮ್ಮ, `ಇಲ್ಲ ಇದು ನನಗೆ ಹೇಳಿದ ಕಥೆಯಲ್ಲ’ ಅಂದಳು. `ಸುಳ್ಳು ಹೇಳ್ತಾ ಇದೀಯಾ? ಮನಸ್ಸನ್ನು ಬಗ್ಗಡ ಮಾಡಿಕೊಳ್ಳಬೇಡ ತಿಳಿಯಾಗಿರಿಸಿಕೋ’ ಎಂದರು ಡಾಕ್ಟರ್ ಪ್ರಶಾಂತವಾಗಿ. ನಾನು ಇನ್ನಷ್ಟು ಪ್ರಸನ್ನವಾಗಿ, `ಡಾಕ್ಟರ್ ಅಮ್ಮನಿಗೆ ಕೆಲಸ ಜಾಸ್ತಿ. ಅದಕ್ಕೆ ಅವಳು ಸರಿಯಾಗಿ ಕೇಳಿಸಿಕೊಂಡಿಲ್ಲ ಅಥವಾ ಮರೆವಿರಲೂಬಹುದು’ ಎಂದೆ. ಅವರು ತೀಕ್ಷ÷್ಣವಾಗಿ ನನ್ನ ಕಣ್ಣ ಆಳಕ್ಕೆ ಏನೋ ತಡಕುವಂತೆ ನೋಡುತ್ತಾ, ಸುಳಿಯನ್ನು ಸೃಷ್ಟಿ ಮಾಡುವಂತೆ ಭ್ರಮೆ ಹುಟ್ಟಿಸುತ್ತಿದ್ದರು. ನಾನು ಕಣ್ಣು ತಪ್ಪಿಸಿದೆ. ಅವರ ಕಣ್ಣಲ್ಲಿ ತೇಜೂ, `ನಾನು ನಿನ್ನಂಥವಳನ್ನು ಎಷ್ಟು ಜನರನ್ನು ನೋಡಿಲ್ಲ’ ಎನ್ನುವ ಹಮ್ಮಿತ್ತು. ನನಗೋ, `ನೀವು ಎಷ್ಟೋ ಜನರನ್ನು ನೋಡಿರಬಹುದು ನನ್ನನ್ನಲ್ಲ’ ಎನ್ನುವ ಹೆಮ್ಮೆಯಿತ್ತು. ಅಮ್ಮ ಅಪ್ಪ ಬೆವರಿಳಿಸಿಕೊಳ್ಳುತ್ತಾ ಕುಳಿತಿದ್ದರು. `ಏನಾದರೂ ಬರಿ’ ಎಂದು ನನ್ನ ಮುಂದಿಟ್ಟ ಪೇಪರ್‌ನಲ್ಲಿ ದೋಣಿ ನಡೆಸುವ ಹುಡುಗಿಯನ್ನು ಬರೆಯಬೇಕೆನ್ನಿಸಿತ್ತು, ಆದ್ರೆ ಬರೆದದ್ದು ಗಾಳಿ ಪಟ ಹಾರಿಸುತ್ತಿರುವ ಹುಡುಗಿಯನ್ನು. `ಏನು ಬರೆದೆ?’ ಎಂದು ಕೇಳಿದ್ದಕ್ಕೆ `ಈ ಹುಡುಗಿ ದೋಣಿ ನಡೆಸುತ್ತಿದ್ದಾಳೆ’ ಎಂದಿದ್ದೆ. ಒಳಗಿದ್ದದ್ದು ಗೊಂದಲವಾ? ಸ್ಪಷ್ಟತೆಯಾ? ಅಥವಾ ಕೈಗಳಿಗಿಂತ ಮನಸ್ಸು ಬರೆದ ಚಿತ್ರ ಪ್ರಬಲವಾಗಿತ್ತಾ?

ಡಾಕ್ಟರ್ ನನ್ನ ಕೈಯ್ಯ ನರವೊಂದನ್ನು ಹುಡುಕಿ ಇಂಜೆಕ್ಷನ್ ಕೊಟ್ಟು ನಿಧಾನವಾಗಿ ಮಲಗುವಂತೆ ಮಾತಿನಲ್ಲಿ ಸೂಚನೆ ಕೊಡುತ್ತಿದ್ದರು. ನನ್ನ ಕಣ್ಣು ಎಳೆಯುತ್ತಿತ್ತು. ಅವರು ಕೇಳಿದ್ದ ಮೊದಲ ಪ್ರಶ್ನೆ `ನೀನು ಯಾರು?’ ಆಮೇಲೇನಾಯಿತು ಗೊತ್ತಿಲ್ಲ. ನಿದ್ದೆ ಮಾಡಿದ್ದೆನಾ? ಎಷ್ಟು ಹೊತ್ತು ಹಾಗಿದ್ದೆನೋ ತಿಳಿಯದು. ಎದ್ದಮೇಲೂ ಮಂಪರು ಇದ್ದೇ ಇತ್ತು. ಎದ್ದಾಗ ತಲೆ ಭಾರವಾಗಿತ್ತು. ಭಾರವಾದರೆ ತಲೆ ತಗ್ಗಿಸಬೇಕಿತ್ತಲ್ಲಾ?! ನಾನು ತಲೆ ಎತ್ತಿ ಆಕಾಶವನ್ನು ನೋಡುತ್ತಿದ್ದೆ. ಅಮ್ಮ `ಏನಾಯಿತು?’ ಎಂದಳು. `ತಲೆ ಭಾರ ಅದಕ್ಕೆ ಮೇಲೆ ನೋಡುತ್ತಿದ್ದೇನೆ’ ಎಂದೆ. ಎಡವಟ್ಟು ಮಾತು ಎನ್ನಿಸಿರಬೇಕು. ಬಿಕ್ಕುವಿಕೆ ಕಿವಿ ಮೇಲೆ ಬಿದ್ದಿತ್ತು. ಕಣ್ಣು ಅದನ್ನೆಲ್ಲಾ ನೋಡಲು ನಿರಾಕರಿಸಿತ್ತು. ಡಾಕ್ಟರ್ ನನ್ನನ್ನು ಸಾಂತ್ವಾನಗೊಳಿಸುವAತೆ `ನಿನಗೆ ಏನೂ ಆಗಿಲ್ಲ, ಇದೆಲ್ಲಾ ಸಹಜ. ಕಲ್ಪನೆಯಲ್ಲಿ ನೀನು ಏನೋ ಆಗಬೇಕೆಂದಿರುವೆ. ಅದು ನಿನ್ನ ನಿಜ ಜೀವನದಲ್ಲಿ ಆಗಲಿಕ್ಕೆ ಆಗ್ತಾ ಇಲ್ಲ ಅದಕ್ಕೆ ಹೀಗೆಲ್ಲಾ ಆಗ್ತಾ ಇದೆ. ಇದನ್ನು ನಮ್ಮ ಸೈಕಾಲಜಿಯ ಭಾಷೆಯಲ್ಲಿ ಸ್ಕಿಜೋಪ್ರೇನಿಯಾ ಅಂತಾರೆ’. ಅದನ್ನು ಕೇಳಿ ಯಾರಿಗೆ ಏನನ್ನಿಸಿತೋ ಗೊತ್ತಿಲ್ಲ, ನಾನು ನಕ್ಕಿದ್ದೆ. ನನ್ನ ನಗೆ ನನಗೆ ಅಪರಿಚಿತ ಅನ್ನಿಸಿದ್ದು ಅವತ್ತೇ. ಯಾಕೆಂದರೆ ನನ್ನ ಒಳಗೆ ಏನಿದೆ ಎಂದು ಕಾಣದ ಅವರು ಅದಕ್ಕೊಂದು ಹೆಸರಿಡುವ ಪ್ರಯತ್ನ ಮಾಡಿದ್ದರು. ನಾನು ಮಾತ್ರ ಅಲುಗಾಟದ ಹಿಂದೆ ಬಿದ್ದು ಆಟದಂತೆ ಹಿಂಬಾಲಿಸತೊಡಗಿದ್ದೆ.

ಎಲ್ಲಕ್ಕೂ ಹೆಸರಿದೆ ತೇಜೂ, ಆದರೆ ನನ್ನೊಳಗೆ ನಡೆಯುತ್ತಿತ್ತಲ್ಲ ಅದಕ್ಕೆ ಯಾವ ಹೆಸರೂ ಇರಲಿಲ್ಲ. ಇಡಬೇಕಾದರೆ ನಾನು ಮಾತ್ರ ಇಡಬೇಕಲ್ಲವೇ? ನಾನು ಬಯಸಿದ್ದು ಏನನ್ನು ಏಕತ್ರವಾದ ಒಂದು ಗೆರೆಯನ್ನು.ನಾನೆಲ್ಲಿ ಛಿದ್ರವಾದದ್ದನ್ನು ಬಯಸಿದೆ. ಏಕತ್ರವಾಗಬಹುದಾದ ಎಲ್ಲಾ ಸಂಗತಿಗಳನ್ನೂ ನನ್ನ ಗೆರೆಯಲ್ಲಿ ಹಿಡಿಯ ಬಯಸಿದ್ದೆ. ಅದನ್ನೇ ಮಾಡುತ್ತಿದ್ದೆ. ಹಾಗಾದರೆ ನಾನು ಬಯಸಿದ್ದು ಆಗಿದ್ದು ಎರಡೂ ಬೇರೆ ಹೇಗಾಯಿತು?! ಆಯಿತೆಂದು ಇವರಿಗೆ ಹೇಗೆ ಗೊತ್ತಾಯಿತು?! ಇಲ್ಲ ತೇಜೂ ಕೊಳದ ಮೇಲೆ ಬಿದ್ದ ಬೆಳಕು ಎಂದೂ ಕೊಳವನ್ನು ಕಲಕದು. ಬದಲಿಗೆ ಆಳದ ನೀರಿನ ನಿಲುವನ್ನು ತೋರುವಂತೆ ಮೀನುಗಳ ಓಡಾಟವನ್ನು ಕಾಣಿಸುತ್ತದೆ.

`ಅವಳು ಚೆನ್ನಾಗಿ ನಿದ್ದೆ ಮಾಡಲಿ, ಮನಸ್ಸು ಸರಿಯಾಗಲು ಮಾತ್ರೆಗಳನ್ನು ಕೊಡುತ್ತೇನೆ ಅದು ನಿದ್ದೆಯನ್ನೂ ತರುತ್ತದೆ. ಅಂಥಾ ಸಮಸ್ಯೆ ಏನೂ ಇಲ್ಲ. ಶುರುವಿನಲ್ಲೇ ನೀವು ಬಂದಿದ್ದರಿAದ ಮನಸ್ಸಿನ ವಿಕಲ್ಪಗಳನ್ನು ತೆಗೆದು ಹಾಕಿ ಬಿಡಬಹುದು’ ಡಾಕ್ಟರ್ ಮಾತಾಡುತ್ತಿದ್ದರೆ ಅಪ್ಪ ಅಮ್ಮ, `ಏನೂ ಸಮಸ್ಯೆ ಇಲ್ಲವಾ?’ `ಇಲ್ಲ, ತಿಂಗಳಿಗೊಮ್ಮೆ ಕರೆದುಕೊಂಡು ಬನ್ನಿ ಅವಳನ್ನ ಸ್ಟಡಿ ಮಾಡ್ತೀನಿ’ ಎನ್ನುತ್ತ್ತಿದ್ದುದು ಮಂಪರಿನ ಮಧ್ಯೆಯೂ ನನಗೆ ಸ್ಪಷ್ಟವಾಗಿ ಕೇಳುತ್ತಿತ್ತು. ಆತ್ಯಂತಿಕ ಸತ್ಯ ಏನು ಗೊತ್ತಾ?! ಆ ಡಾಕ್ಟರ್‌ಗೆ ಅವರಿಗೆ ತಮ್ಮ ಪ್ರಮೇಯಗಳನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಅಥವಾ ಸಾಧಿಸಲಿಕ್ಕೆ ನಾನು ಒಂದು ಸಾಧನ ಮಾತ್ರ ಆಗಿದ್ದೆ. ನನಗೆ ಅವರೂ ಒಬ್ಬ ಕಲಾಕಾರ ಆಗಿ ಕಾಣತೊಡಗಿದ್ದರು.

ಹೊರಗೆ ಬಂದ ಮೇಲೆ, ದಿನ ಕಳೆದು ಎರಡನೇ ದಿನಕ್ಕೆ ಕಾಲಿಟ್ಟ ಮೇಲೂ ನಾನು ಯಾಕೆ ತಲೆ ಹಾಗೆ ಎತ್ತೇ ಇದ್ದೆ? ಕುತ್ತಿಗೆ ನೋವಾದರೂ ತಲೆ ತಗ್ಗಿಸಲು ಆಗಲಿಲ್ಲ. ಕೊಟ್ಟ ಔಷಧದ ಅಡ್ಡ ಪರಿಣಾಮ ಇದ್ದೀತು. ಇದ್ದೀತು ಎಲ್ಲದಕ್ಕೂ ಅಡ್ಡ, ಉದ್ದ ಪರಿಣಾಮಗಳು! ನನ್ನ ಮನಸ್ಸಿಗೆ ಮಾತ್ರ ಇರಬಾರದು! ಇದ್ಯಾವ ಅಪೇಕ್ಷೆ? ನಾನೆಷ್ಟು ಕಷ್ಟ ಅನುಭವಿಸಿದೆ. ಪ್ರತಿ ತಿಂಗಳೂ ಹೀಗೆ ಕುತ್ತಿಗೆಯನ್ನು ಎತ್ತಿಕೊಂಡು ಎರಡು ದಿನ ಅನುಭವಿಸುವ ನೋವಿಗೆ ಕೊನೆ ಇಲ್ಲವೇ ಎನ್ನಿಸಿಬಿಟ್ಟಿತ್ತು.

ಈಗನ್ನಿಸ್ತಾ ಇದೆ ತೇಜೂ ನಾನೇನು ಮಾಡಿದೆ? ಕೈಯಿದೆ ಕೈಲೊಂದು ಕೋಲೋ, ಪೆನ್ನೋ, ಬಳಪವೋ ಏನೋ ಇದೆ ಎಂದು ಗೆರೆ ಎಳೆದುಬಿಟ್ಟರೆ ಅದು ಕಲೆ ಆಗಿಬಿಡುತ್ತದಾ? ಹಾಗಾದರೆ ಅಂದು ಮಂಡಿಯ ಮೇಲೆ ಹರಿದ ರಕ್ತದ ಗೆರೆ ಕೂಡಾ ಕಲೆಯೇ ಆಗಬೇಕಿತ್ತಲ್ಲ. ಅದ್ಯಾಕೆ ಆಗಲಿಲ್ಲ. ರೇಖೆಯೆಂದರೂ ಕ್ಷಣಕಾಲದ ಮಿಂಚು. ಅದು ಹೊಳೆಯದೆ ಕೈಗಳು ಬರೆಯಲಾರವು. ಯಾವಾಗಲಾದರೊಮ್ಮೆ ಬಾ ಎಂದು ಕರೆದರೆ ಬಂದು ಕೂರುವುದಲ್ಲ; ಅದನ್ನು ಧ್ಯಾನಿಸು ಅದೇ ಆಕಾರ ತೆಗೆದುಕೊಳ್ಳಬೇಕು. ಅದನ್ನಲ್ಲವೇ ನಾನು ಮಾಡಿದ್ದು? ಬಂದದ್ದಕ್ಕೂ ಉದ್ದೇಶವಿರಲಿಲ್ಲ, ಕರೆದ ನನಗೂ ಉದ್ದೇಶವಿರಲಿಲ್ಲ ಸುಮ್ಮನೆ ಹಾಗೆ ಸಂಧಿಸಿ ಕೂತು ಮಾತಾಡುವಾಗ ಜಗತ್ತಿಗೆ ಯಾವ ದರ್ದು ಇತ್ತು ಅಂತ?

ಜನ್ಮಕ್ಕಂಟಿಕೊಂಡ ಸಂಗತಿಗಳು ಹೀಗೆ ಆಳವನ್ನು ಕೊರೆದೂ ಕೊರೆದೂ ನದಿಯಂತೆ ದಾರಿ ಮಾಡಿಕೊಂಡುಬಿಟ್ಟಿರುತ್ತದೆ. ಪಥ ಅರಿತ ಅದು ತನ್ನ ದಿಕ್ಕಲ್ಲಿ ಹರಿಯುತ್ತಿರುವಾಗಲೇ ಕೆಲವೊಮ್ಮೆ ಪಥವರಿಯದಂತೆ ದಿಕ್ಕೆಟ್ಟು ಸಿಕ್ಕ ಸಿಕ್ಕ ಕಡೆಗೆ ನುಗ್ಗಿಬಿಡುತ್ತದೆ. ಇದನ್ನು ಸಂಭವಿಸುವುದು ಎನ್ನಬೇಕಾ? ಹಾಗೆನ್ನುವುದೇ ಆದರೆ ಆ ಡಾಕ್ಟರ್, ಅಪ್ಪ, ಅಮ್ಮ, ಕಡೆಗೆ ನಾನೂ ಕೂಡಾ ಸಂಭವಿಸಿದ್ದೇ ಅಲ್ಲವಾ? ಹಾಗಾದರೆ ನನ್ನೊಳಗಿನದ್ದು ಯಾಕೆ ಸಂಭವಿಸಿದ್ದಲ್ಲ. ಅದು ಮಾತ್ರ ಯಾಕೆ ವಿಕಲ್ಪ ಆಯಿತು?

ಸಂಭವಿಸುವುದು ಎಂದರೇನು? ಜಗತ್ತು ವಿನಮ್ರತೆಯಿಂದ ಬೆಳಕಿಗಾಗಿ ಪ್ರಾರ್ಥಿಸಿದಾಗ ಸೂರ್ಯ ಕತ್ತಲೆಯ ಬೇಡಿ ಕಳಚಿ ಹೊರಬರುತ್ತಾನೆ. ಪ್ರತಿಸಲವೂ ಮೊದಲ ಬಾರಿಗೆ ಸೂರ್ಯೋದಯ ನೋಡುವ ಆತುರಕ್ಕೆ ಬಿದ್ದು ಹೊರಗೆ ಓಡಿ ಬರುವೆ. ಅದ್ಭುತ, ಅವ ಮುಳುಗಲು ಕಾತುರ ತೋರುವಷ್ಟೇ ಹುಟ್ಟುವುದಕ್ಕೂ ತೋರುತ್ತಿದ್ದಾನೆ. ತೇಜೂ ಹನಿ ಹುಟ್ಟಿದಾಗ ನನಗೂ ಅವಳಿಗೂ ಸಂಬಂಧ ಅಂತ ಇದ್ದ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿ, ಅವಳ ಹೊಕ್ಕುಳಿಗೆ ಇನ್ನೂ ಅಂಟಿಕೊಂಡಿದ್ದ ಬಳ್ಳಿಗೆ ಒಂದು ಕ್ಲಿಪ್ ಹಾಕಿದ್ದರು. ಅದು ಮೂರನೆಯ ದಿನಕ್ಕೋ ನಾಲ್ಕನೆಯ ದಿನಕ್ಕೋ ಒಣಗಿ ತಾನೇ ತಾನಾಗಿ ಬಿದ್ದು ಹೋಗಿತ್ತು. ಅದನ್ನು ಜೋಪಾನ ಮಾಡಿದಾಗ ಅಮ್ಮ ಗದರಿದ್ದಳು, `ಅದನ್ನೆಲ್ಲಾ ಎತ್ತಿಡುತ್ತೀಯಾ’ ಅಂತ. ಗೊತ್ತಿಲ್ಲ ಅದು ನನಗೆ ತುಂಬಾ ಅಮೂಲ್ಯ ಅನ್ನಿಸಿತ್ತು. ಸಂಬಂಧಗಳು ಸಣ್ಣ ಸಂಗತಿಗಳಲ್ಲಿದೆ ಎಂದು ಅರ್ಥ ಮಾಡಿಸಲು ಸಾಧ್ಯವೇ? ನನ್ನ ಜಗತ್ತು ಛಿದ್ರವಾಗುತ್ತಿದೆ ಎನ್ನಿಸಿದಾಗಲೆಲ್ಲಾ ಭಾವ ಬೆಚ್ಚಗಾಗುವಂತೆ ಅದನ್ನು ತೆಗೆದು ನೋಡುತ್ತೇನೆ. ಅದರಲ್ಲಿ ಸಮಸ್ತ ಜಗತ್ತು ಕಾಣಿಸಿ ಪೂರ್ಣ ಅನ್ನಿಸುತ್ತೆ’.

ಹೀಗೆಲ್ಲಾ ಮಾತಾಡುವ ಶ್ಯಾಮು ಬಿಳಿದಾದ ರೆಕ್ಕೆಗಳನ್ನು ಮೂಡಿಸಿಕೊಂಡ ಕನ್ಯತ್ವ ಮಾಸದ ಗಂಧರ್ವಳೆನ್ನಿಸುತ್ತಾಳೆ. ಒಂದು ಕ್ಷಣ ಗಾಬರಿಯಾಗುತ್ತದೆ ಹೀಗೆ ರೆಕ್ಕೆ ಮೂಡಿಸಿಕೊಂಡು ಹಾರಿ ಹೋದರೆ ಎನ್ನಿಸಿ ಅವಳ ಭಾವತೀವ್ರತೆಯನ್ನು ಒಡೆಯುವಂತೆ ಭುಜದ ಮೇಲೆ ಕೈಯಿಟ್ಟು ಶ್ಯಾಮು ಎಂದೆ. ತಿರುಗಿ ನೋಡಿದ ಅವಳ ಕಣ್ಣುಗಳಲ್ಲಿ ಮೇಲೆ ತೇಲಿ ಹೋದ ಬೆಳ್ಳಕ್ಕಿ ಕಾಣಿಸಿತು.

ಈ ಅಂಕಣದ ಹಿಂದಿನ ಬರೆಹಗಳು:
ತೆರೆದುಹೋದ ಅರಿಯದ ಸಮ್ಮೋಹಕ ಲೋಕ
ತತ್ತಿಯೊಡೆದ ಪುಟ್ಟ ಕೀಟದ ಕಣ್ಣಲ್ಲಿ ಫಲಿಸಿದ ಬೆಳಕು
ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ
ನೆತ್ತರಲೂ ರತ್ನವಾಗುವ ಗುಣ

ಅಘಟಿತ ಘಟನೆಗಳು
ಪ್ರಪಂಚ ಒಂದು ಸುಂದರ ಕನಸು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...