ಕೋಣವನ್ನು ಬಲಿಕೊಡುವ ಆಚರಣೆ ಮತ್ತು ನಂಬಿಕೆ

Date: 24-02-2021

Location: .


ಸಂಶೋಧಕಿ-ಲೇಖಕಿ ರೇಣುಕಾ ಕೋಡಗುಂಟಿ ಅವರು ಹೈದರಾಬಾದ್‌ ಕರ್ನಾಟಕದ ವಿಭಿನ್ನ ಆಚರಣೆ-ನಂಬಿಕೆ ಕುರಿತು 'ವರ್‍ತಿ ನೀರು ಕರಿಕಿ ಬೇರು’ ಅಂಕಣದಲ್ಲಿ ಬರೆಯುತ್ತಾರೆ. ತಮ್ಮೂರಿನ ದುರಗಮ್ಮನ ಜಾತ್ರೆಯ ಆಚರಣೆಗಳೊಂದಿಗೆ ಬೆಸೆದುಕೊಂಡ ಭಾವನಾತ್ಮಕ ನಂಟಿನ ಕತೆಯನ್ನು ಅವರು ವಿವರಿಸಿದ ಬರಹ ಇಲ್ಲಿದೆ.

ನಮ್ಮಲ್ಲಿರುವ ಹಲವು ದೇವರಿಗೆ ಕೋಣವನ್ನು ಬಲಿ ಕೊಡುವುದು ಬಹು ಹಳೆಯ ವಾಡಿಕೆ. ಇಂದು ಬೇರೆ ಬೇರೆ ಕಾರಣಗಳಿಗೆ ಕೋಣ ಕಡಿಯುವ ಪದ್ದತಿ ನಿಂತು ಹೋಗಿದೆ. ಕೋಣ ಕಡಿಯುವುದಕ್ಕೆ ಸಂಬಂಧಿಸಿ ಅದರದೇ ಆದ ಹಲವಾರು ಆಚರಣೆಗಳು, ನಂಬಿಕೆಗಳು ಇದ್ದವು. ಈ ಆಚರಣೆಗಳನ್ನು ತಿಳಿದುಕೊಳ್ಳುವುದರಿಂದ ಅದರ ಹಿಂದೆ ಅಡಗಿರಬಹುದಾದ ಹಲವಾರು ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಇವು ಬಹು ಕುತೂಹಲದಾಯಕವೂ ಆಗಿವೆ. ಕೆಲವು ವರುಷಗಳ ಹಿಂದೆ ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ನಡೆದ ಒಂದು ವಾಸ್ತವ ಘಟನೆಯೊಂದು ಕಥಾನಕವಾಗಿ ಈ ಭಾಗದಲ್ಲಿ ಉಳಿದಿದೆ. ಇದನ್ನು ಈ ಬರಹದಲ್ಲಿ ಪರಿಚಯಿಸುತ್ತೇನೆ.

ಮಸ್ಕಿಯ ಗ್ರಾಮ ದೇವತೆ ಕಟ್ಟಿ ದುರಗಮ್ಮ. ಒಂದು ಕಟ್ಟೆಗೆ ಈ ದೇವರು ಒಡೆದು ಮೂಡಿದ್ದರಿಂದ, ಈ ದೇವರನ್ನು ಕಟ್ಟಿ ದುರಗಮ್ಮ ಎಂಬ ಹೆಸರು ಬಂದಿದೆ. ಪ್ರತಿವರ್ಷ ಕಟ್ಟಿ ದುರಗಮ್ಮನ ಜಾತ್ರೆ ಎಳ್ಳು ಅಮವಾಸೆಯ ದಿನದಂದು ನಡೆಯುತ್ತದೆ. ಮೂರು ವರ್ಷಕ್ಕೊಮ್ಮೆ ಕಟ್ಟಿದುರಗಮ್ಮ ದೇವರಿಗೆ ಕೋಣ ಕಡಿಯುವ ಪದ್ಧತಿ ಇತ್ತು. ಕೇವಲ ಕೋಣವನ್ನು ಕಡಿಯುವುದು ಮಾತ್ರವಲ್ಲ, ಆ ಸಂದರ್ಭದಲ್ಲಿ ಕೆಲವು ವಿಶಿಷ್ಟ ನಂಬಿಕೆಗಳು ಆಚರಣೆಗಳು ಇಲ್ಲಿ ಇದ್ದವು. ಈ ತರದ ನಂಬಿಕೆ ಆಚರಣೆಗಳು ಆಯಾ ಪ್ರದೇಶಗಳಲ್ಲಿ ಭಿನ್ನ ಭಿನ್ನ ವಾಗಿರುತ್ತವೆ. ಅದರಂತೆ ಮಸ್ಕಿಯಲ್ಲಿ ನಡೆದ ಒಂದು ಘಟನೆಯನ್ನು ಇಲ್ಲಿ ಪರಿಚಯಸಲಾಗಿದೆ. ದೇವರು ಧರ್ಮ ಎಂಬುದು ಸಮಾಜದ ಮತ್ತು ಮನುಷ್ಯನ ಬದುಕಿನ ಭಾಗವೆ ಆಗಿರುತ್ತದೆ. ಹಾಗಾಗಿ ಮನುಷ್ಯದೇವರು, ಆಚರಣೆಗಳೊಂದಿಗೆ ಭಾವನಾತ್ಮಕ ನಂಟನ್ನು ಹೊಂದಿರುತ್ತಾನೆ. ನೂರಾರು ವರ್ಷಗಳ ಹಿಂದೆ ನಡೆದ ಘಟನೆ ಇದಾಗಿದೆ.

ಇದನ್ನು ಪ್ರಾದೇಶಿಕ ಭಾಷೆಯಲ್ಲಿ, ಕಥಾ ರೂಪದಲ್ಲಿ ಹೇಳುವ ಪ್ರಯತ್ನವನ್ನುಇಲ್ಲಿ ಮಾಡಿದ್ದೇನೆ
ದರಾವರ್‍ಸ ಎಳ್ಳಮಾಸಿ ದಿನ ಕಟ್ಟಿದುರ್‍ಗಮ್ಮನ ಜಾತ್ರಿ ನಡಿತಿತ್ತು. ಮೂರು ವರ್‍ಸಕ್ಕೊಮ್ಮೆ ಈ ಜಾತ್ರ್ಯಾಗ ಕ್ವಾಣನ್ನ ಕಡಿತಿದ್ರು. ಒಂದೊರ್‍ಸ ಇಂಗ ಕ್ವಾಣ ಕಡೇದಿತ್ತು. ಜಾತ್ರಿ ಸಲುವಾಗಿ ದುರಗಮ್ಮಗ ಎಲ್ಲಾ ತಯಾರಿ ಮಾಡಿದ್ರು. ಅಸ್ರು ಸೀರಿ, ಅಸ್ರು ಬಳಿ, ಕೈಯಾಗಕತ್ತಿ, ನಿಂಬೆಣ್ಣಿನಾರ, ಅಣಿಮ್ಯಾಲೆದೊಡ್ಡಕುಂಕ್ಮ, ಬಂಡಾರ, ತಾಳಿ, ಗಾಡಿನತ್ತು, ಇಟ್ಟ ಗುಡ್ಯಾಗಿನ ದುರಗಮ್ಮ ಎದ್ದು ಬರ್‍ತಾಳ ಅನ್ನಂಗ ಇದ್ಲು. ಆ ವರ್‍ಸಾ ಕಡಿಯಾ ಕ್ವಾಣನ್ನ ಪದ್ದತಿ ಪ್ರಕಾರ ತಯಾರ ಮಾಡಿದ್ರು. ದುರಗಮ್ಮಗ ಬಿಟ್ಟಿರ ಆ ಪಟ್ಟದ ಕ್ವಾಣನ್ನ ಎಂಟ ದಿನ ಮುಂಚಾಕ ಇಡ್ಕಂಡು ಬಂದ್ಕಾಸಿ ಅದಕ್ಕ ದಿನಾ ಸುಣ್ಣದ ನೀರು ಕುಡುಸ್ತಿದ್ರು. ಬಾಳ ಬಂದೋಬಸ್ತಿನ್ಯಾಗ ಕ್ವಾಣ ಕಡಿತಿದ್ರು.
ಗುಡಿ ಒಳಾಗ ಒಂದುಕಂಬ್ಳಿ ಆಸಿ, ಅದ್ರ ಮ್ಯಾಲೆ ಜ್ವಾಳದ ಸ್ಯಾಸಿ ಆಕಿ, ಅದ್ರ ಮ್ಯಾಲೆ ಬಾನದಗಡ್ಗಿಅದ್ರ ಮುಂದ ಮಾತಂಗೇರ್‍ವು ಅಡ್ಲಿಗಿ ಇಟ್ಟು ಅದರಾಗ ಕಡುಬು, ಬದ್ನಿಕಾಯಿ, ನಿಂಬೆಣ್ಣು, ಜ್ವಾಳದ ಬಾನ, ಉಳ್ಳಾಗಡ್ಡಿ ತಪ್ಪಲ, ಬದ್ನಿಕಾಯಿ, ಬೇನಿತಪ್ಲಾ, ಕುಂಕ್ಮಾ ಬಂಡಾರ, ಊದ್ನಿಕಡ್ಡಿ, ಉವ್ವ ಇಟ್ಟು ಪೂಜಿ ಮಾಡಿದ್ರು.
ಇತ್ತಾಗ ಕ್ವಾಣ ಕಡಿಯಾಕ ಎಲ್ಲಾ ತಯಾರಿ ನಡ್ದಿತ್ತು. ಪಟ್ಟದ ಕ್ವಾಣದ ಕೊಳ್ಳಿಗೆ ಬೇನಿ ತಪ್ಲಕಟ್ಟಿ, ಅಣಿಗೆ ಬಂಡಾರಚ್ಚಿ, ಪಾದ್ಗಟ್ಟಿಯಿಂದ ಸೊಲುಪು ದೂರ್‍ದಾಗತಂದು ನಿಂದ್ರಿಸಿ, ಕ್ವಾಣಕ್ಕ ವಸಾದು ಅಗ್ಗ ಕಟ್ಟಿದ್ರು. ಮುಗದಾಣ ಆಕಿದ್ರು, ಜಮದಗ್ನಿ, ಲಚಮಣ್ಣ, ಸೇರಿಎಂಟತ್ತ ಮಂದಿ ಅಗ್ಗ ಅಚ್ಚಿ ಇಡ್ಕಂಡಿದ್ರು. ಕ್ವಾಣದ ರಗತಾ ಅರುದು ಓಗ್ಬಾರ್‍ದಂತ ಕ್ವಾಣ ಕಡಿಯಾ ಜಾಗ್ದಾಗಾ ತೆಗ್ಗು ಮಾಡಿದ್ರು. ಕ್ವಾಣ ಕಡಿಯಾ ಕರೆಪ್ಪ ಚಪಗೊಡ್ಲಿನ ಇಡ್ಕಂಡು ನಿಂತಿದ್ದ. ಒಂದು ಮರದ ತುಂಬ ತಂದಿದ್ದ ಓಳಿಗಿನ್ನ ಆ ಕರಿಯಪ್ಪನ ಬೆನ್ನಿಗೆ ಬಡದಕಾಸಿ ತೆಗುದ್ರು. ಗುಡಿ ಸುತ್ತರ್‍ದು ಗಣಮಕ್ಳು ಕೈಯಾಗ ಕೊಡ್ಲಿ, ಬಡಿಗಿ, ಬಿಚ್ಚಗತ್ತಿ ಇಡ್ಕಂಡು ಕಾಯಾಕ ನಿಂತಿದ್ರು. ಗುಡಿ ಪೂಜಾರಿ, ಮತ್ತೆ ಊರಾಗಿನ ಇರೇರು ಎಲ್ಲಾರು ಗುಡಿ ಮುಂದ ಸೇರಿದ್ರು. ಎಲ್ಲಾರು ಅಣಿಗೆ ಬಂಡಾರ ಅಚಿಗೆಂಡಿದ್ರು. ಜೋಗಮ್ಮನೋರು ಚೌಡಿಕಿ ಬಾರ್‍ಸಾಕತ್ತಿದ್ರು. ಉದೋಉದೋ ಅನ್ನಾ ಶಬುದ ಮುಗಿಲಿಗಿ ಮುಟ್ಟಿ ನಮ್ಮವ್ವ ದುರಗ ಮುಗಿಲಿನ ತುಂಬೆಲ್ಲ ಬೆಳಕು ಬೆಳಕು ಚೆಲ್ಲಿದಂಗ ತುಂಬಿಕೆಂಡಳು, ತಾಯಿಗಿ ತೂರಿದ ಬಂಡಾರ ಮೂಡಮುಣಗ ತುಂಬಿಕೆಂಡು ಬಯಲೆಲ್ಲ ಬಂಗಾರದಂಗಾಗಿತ್ತು.
ಗುಡಿ ಪೂಜಾರೆಮ್ಮ ಕ್ವಾಣಕ್ಕ ಬಂಡಾರಚ್ಚಿ ಪೂಜಿ ಮಾಡಿ ಒಳಾಗೋದ್ಲು. ಎಲ್ಲರು ಉದೋಉದೋ, ಕಟ್ಟಿ ದುರಗಮ್ಮ ನಿನ್ನಾಲ್ಕುದೋಉದೋ ಅಂತ ಅನ್ನಾಕ ಸುರು ಮಾಡಿದ್ರು. ಅದು ಕೇಳಾಕ ಮಯ್ಯಿ ಜುಮ್ಮಂದು ಮಯ್ಯನ ಕೂದ್ಲೆಲ್ಲ ನೆಟ್ಟಗಾತಿದ್ವು. ಕರೆಪ್ಪ ಚಪಗೊಡ್ಲಿನ್ನ ಯಾಡೂಕೈಯಿಂದ ಇಡುದು, ದುರಗಮ್ಮಗ ಕೈಮುಗಿದು ಅಕಿ ಅಪ್ಪಣಿ ಪಡದು ಕ್ವಾಣ ಕಡಿಯಾಕ ಮುಂದಾದ ಕರೆಪ್ಪನ ಮಯ್ಯಾಗ ಮಿಂಚು ಅರದಂಗಾಗಿ ಕಣ್ಣ ಅಗಾಲ ಮಾಡಿ, ಜೋರು ಉಸುರುತಗಂಡು, ಎರಡೂ ಕೈಯಿಂದ ಚಪಗೊಡ್ಲಿನ್ನ ಮ್ಯಾಕೆತ್ತಿ ಕ್ವಾಣದ ಕುತಿಗಿಗೆ ರೆಪ್ಪಂತ ಏಟಾಕಿದ. ಆಕಿದ ಕೂಡ್ಲೆ ಸುತ್ತ ಕೆಂಪು ವರ್ಣ ಚೆಲ್ತಿ. ಅಲ್ಲೆ ಇದ್ದೋರು ಸಾತ್ ಕೊಟ್ಟುಕ್ವಾಣದ ರುಂಡನ್ನ ಬ್ಯಾರೆ ಮಾಡಿ, ತಡ ಮಾಡದಾ ಕುಂಕ್ಮಾ ಸುರುದ್ರು.
ಕ್ವಾಣದರುಂಡನ್ನ ತಗಂಡೋಗಿ ಕಂಬ್ಳಿ ಮುಂದಿಟ್ಟು, ಆ ಕ್ವಾಣದ ಅಣ್ಣೆತ್ತಿ ಮ್ಯಾಲೆ ಕಣಕದಾರ್‍ತಿ, ಕಕ್ಕಡದ ಬತ್ತಿ ಇಟ್ಟು ಎಣ್ಣಿ ಆಕಿ ದೀಪ ಅಚ್ಚಿದ್ರು. ಇನ್ನೇನು ಎಲ್ಲಾ ಸಂಪನ್ನ ಆತು , ಅನ್ನಾದ್ರಾಗ ಒಬ್ಬಾತ ಕೆಕ್ಕೆ ಒಡದಬಿಟ್ಟ. ಯಾರು ಯಾರು ಅಂತಾ ಎಲ್ಲರೂ ಕಕ್ಕಾಬಿಕ್ಕಿಯಾಗಿ ನೋಡಾಕತ್ರು. ಎತ್ತಾಗ ಏನು ಅಂತ ಅಕ್ಕಡಿಕ್ಕಡಿ ನೋಡಾದ್ರಾಗ ಬಗಲಾಗಿನ ಊರಿನ ಈರಣ್ಣ ಅಂಬಾತ ಓಡೋಗಾಕತ್ತಿದ್ದ. ಅತನ್ನ ನೋಡಿ, ಇವನು ಕ್ವಾಣದ ರಗತಾ ತಗಂಡು ವಂಟಾನ ಅಂಬಾದು ಕಾತ್ರಿಆತು.
ಅದೇನಂದ್ರ ನಮ್ಮೂರು ದುರುಗಮ್ಮನ ಕ್ವಾಣದ ರಗುತನ್ನ ಬ್ಯಾರೆ ಊರೋರು ಯಾರುತಗಂಡೋಗ್ಬಾರ್‍ದು, ಅಂಗೇನರ ತಗಂಡೋದ್ರ ಊರಿಗಿ ಅಳಿಗಾಲ ಬರುತ್ತ, ರಗುತ ತಗಂಡೋದೋರ ಊರು ಉದ್ದಾರಾಗುತ್ತ. ಮತ್ತೆ ಅಂಗ ರಗುತ ತಗಂಡೋಗೋರು ಕಳುವಿಲೆ ಗಿಳುವಿಲೆ ಓಡಂಗಿಲ್ಲ, ರಗುತ ತಗಂಡು ’ಇಡಿರೆಲೆ ತಾಕತ್ತಿದ್ರ’ ಅಂತೇಳಿ ಊರೋರಿಗೆ ಸವಾಲಾಕಿ ಓಡ್ಬೇಕು. ಅದಕ ಕ್ವಾಣ ಕಡಿಯಾಗ ಬ್ಯಾರೆ ಊರೋರನ್ನ ಅವತ್ತಿನ ದಿನ ಊರೊಳಾಗ ಬುಟಗಂತಿದ್ದಿಲ್ಲ, ಬ್ಯಾರೆ ಊರೋರು ಊರಿಗೆ ಬರಬಾರ್‍ದು ಅಂತ ಸುತ್ತ ಕಾವ್ಲು ಇರತಿದ್ರು. ಅಂತಾದ್ರಾಗ ಈ ವರುಸ ಇವ್ನು ಈ ಈರಣ್ಣಂಬೋನು ಪಟ್ಟದ ಕ್ವಾಣದ ರಗತನ್ನ ಕಿರಿಬಳ್ಳಿಗೆ ಅಚಿಗೆಂಡು ಓಡಿ ಓಗಿಬುಟ್ಟ. ಎಲ್ಲಾರಕಣ್ಣ ತಪ್ಪಿಸಿ ಅದೆಂತಾ ಮಾಯದಾಗ ಬಂದಿದ್ನೊ ಏನೊ, ಬಂದಾತ ಕ್ವಾಣದ ರಗತಾ ತಗಂಡು ಕೆಕ್ಕೆ ವಡುದು ಓಡಿ ಓಗಿಬುಟ್ಟಾ.
ಅತುನ್ನ ನೋಡಿ ಊರೋರಿಗೆಲ್ಲ ಗಾಬ್ರಿ ಆತು, ಅಲ್ಲೆ ಇದ್ದ ಜಂಬಣ್ಣ, ಲಚಮಣ್ಣ, ಸುಬ್ಬಣ್ಣ, ಯಲ್ಲಪ್ಪ, ಚೋಳ ಮತ್ತೆ ಕೊಡ್ಲಿ ಬಡಿಗಿ ಇಡಕಂಡು ಕಾಯಾಕ ನಿಂತೋರೆಲ್ಲರು ಆ ಈರಣ್ಣನ್ನ ಇಡಿಯಾಕ ನಿಂತ ಜಪಟಿಲ್ಲೆ ಓಡಿ ಓದ್ರು. ಆ ಈರಣ್ಣಂತು ಚಿಣಿಗಿ ಆವು ಆರಿದಂಗ ಯಾರ ಕೈಗೂ ವಶ ಆಗದಂಗ ಓಡಿವಂಟಿದ್ದ. ಆವಾಗ ಇನ್ನ ಊರಾಗ ಕರೆಂಟು ಇದ್ದಿಲ್ಲ, ಅಮಾಸಿ ಕತ್ತಲ ಬ್ಯಾರೆ ಅಲ್ಲಲ್ಲಿ ಕಂದೀಲಾ ತೂಗಾಕಿರ್‍ತಿದ್ರು ಆಟ. ಅಂತಾ, ಕತ್ತಲದಾಗ ಕಾಣದಂಗ ಜಿಗಜಿಕ್ಕಂಡು ಒಂಟಿದ್ದ.
ಇವರೆಲ್ಲರಿಗಿಂತ ಬಾರಿ ರೌಸು ಇತ್ತು ಈರಣ್ಣನ ಓಟ, ಅತೇನರ ಮಸಿಗಿ(ಮಸ್ಕಿ) ಸೀಮಿ ದಾಟಿಬಿಟ್ರ ಮತ್ತೆ ಈ ಮಸಿಗಿ ಮಂದಿ ಆತನ್ನ ಮುಟ್ಟಂಗಿರ್‍ಲಿಲ್ಲ. ಅತ ಗೆದ್ದಂಗ ಆತಿತ್ತು. ಅತನ ಊರು ಯಗ್ಳ ಆತಿತ್ತು. ಮಸಿಗಿ ಮಂದಿ ಸೋತಂಗಾತಿತ್ತು. ಕಣ್ಬುಟ್ಟು ಕಣ್ತೆಗೆಟಿಗೆ ಈರಣ್ಣ ಇನ್ನೇನು ತಮ್ಮೂರ ಸೀಮಿ ಸನೇವು ಮಾಡಿಬುಟಿದ್ದ, ಆತು ಬುಡು ಮಸಿಗಿ ಸೀಮಿ ದಾಟಿಬುಡ್ತಾನ ನಾವಿನ್ನ ಸೋತ್ವಿ ಅಂತ ಈರಣ್ಣನ್ನ ತಿರ್‍ವೆಚ್ಚಿದೋರಾಗ ಕೆಲವ್ರು ದೈರ್‍ಯ ಕಳಕಂಡಬುಟ್ರು. ತಮ್ಮೂರು ಸೀಮಿ ಕಣ್ಣಿಗೆ ಕಾಣ್ತಿದ್ದಂಗ ಈರಣ್ಣಗ ಕುಶಿ ಆತು. ಇನ್ನೇನು ನಾನು ಪಾರಾದೆ ಅಂತ ಚಮುತು ಮಾಡಿ ಓಡಾಕತ್ತಿದ್ದ, ಮಸಿಗಿ ಸೀಮಿದು ಪಾಜಾ ದಾಟಾಕ ನಾಕೆಜ್ಜಿ ಇತ್ತು ಆತನ ಕುತಿಗೀಗೆ ರೆಪ್ಪ ಅಂತ ಚಪಗೊಡ್ಲಿ ಬಂದು ಬಿತ್ತು. ಚಪಗೊಡ್ಲಿ ಬಿದ್ದ ವಡತಕ್ಕ ಅತಾ ಎಜ್ಜಿ ಕಿತ್ತಾಕ ಆಗಲಾರ್‍ದ ಅಲ್ಲೆ ನೆಲಕ್ಕ ಬಿದ್ದಬಿಟ್ಟ. ಈರಣ್ಣನ್ನ ಇಡಿಯಾ ದಿಡಿಗಿನ್ಯಾಗ ತನಗ ಕಬರಿಲ್ಲದಂಗ ದುರಗಮ್ಮನ ಕ್ವಾಣ ಕಡುದಿಟ್ಟಿದ್ದ ಚಪಗೊಡ್ಲಿನ್ನ ಜಂಬಣ್ಣ ಕಯ್ಯಾಗಿಡಕಂಡು ಬಂದಿದ್ದ. ಇನ್ನೇನು ಈರಣ್ಣ ಊರಸೀಮಿ ದಾಟ್ತಾನ ಅಂತ ದೂರ್‍ದಿಂದನ ಕೊಡ್ಲಿ ಬೀಸಿದ್ದ ಜಂಬಣ್ಣ. ಆ ಕೊಡ್ಲಿ, ಯವ್ವ, ಆ ದುರುಗಮ್ಮನ ನೆಟ್ಟಗಣ್ಣಿನ ಅಲುಗು ಅರುದಂಗ ಅರುದು ಸೀದ ಈರಣ್ಣನ ಕುತಿಗಿಗೆ ಬಿದ್ದುಚೆಂಡು ನೆಲಕ್ಕ ಬಿತ್ತು. ಎಲ್ಲರು ಬಂದಕಾಸಿ ನೋಡಟಿಗೆ ರಣಾರಗತ ಚೆಲ್ಲಿ, ರಗುತುದ ಮಡಿವಿನ್ಯಾಗ ಬಿದ್ದುಬುಟ್ಟಿದ್ದ ಈರಣ್ಣ.
ಈರಣ್ಣನ್ನ ವಡುದು ಬರಾದು ನೋಡಿ ಊರೋರಿಗೆಲ್ಲಾ ಅಲ್ಲಿತನ ನಿಂತೋದುಸುರು ಬಂದಂಗಾಗಿ ನಿರುಮ್ಳಾದ್ರು. ಈರಣ್ಣನ್ನ ವಡದ ಸುದ್ದಿ ಕೇಳಿ ಊರೋರೆಲ್ಲಾ ಜಂಬಣ್ಣಗ ಇಳೇವು ತೆಗದ್ರು, ಉವ್ವಿನಾರ ಆಕಿ ಬಂಡಾರಚ್ಚಿ, ಎಣಮಕ್ಳೆಲ್ಲಾ ಬಂದು ಆರ್‍ತಿ ಮಾಡಿದ್ರು. ಊರಿನಗೌಡ ಮಲ್ಲನಗೌಡ ಜಂಬಣ್ಣಗ ಅತ್ತುಬಳ್ಳಿಗೆ ಅತ್ತುಂಗ್ರಇಟ್ಟು ಮೆರಣಿಗಿ ಮಾಡಿದ್ರು.
ಹೀಗೆ ಇಂತಹ ಹಲವಾರು ರೋಚಕ ಘಟನೆಗಳು, ಆಚರಣೆಗಳು ನಮ್ಮಲ್ಲಿ ಇದ್ದವು.

ಈ ಅಂಕಣದ ಹಿಂದಿನ ಬರಹಗಳು

ಕನ್ನಾಡ ಪ್ರೇಮದ ಜೋತಿ ಅಂಪವ್ವ ಪೂಜಾರಿ

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...