'ಕೊರಕಲಿನ ಜಾಡಿನಲ್ಲಿ' ಪ್ರವಾಸ ಕಥನದ ಒಳನೋಟ


ನಮ್ಮ ದೇಶದ ಪ್ರತಿಯೊಂದು ಪಟ್ಟಣವೂ ಒಂದಲ್ಲಾ ಒಂದು ವಿಶೇಷತೆಗೆ ಹೆಸರಾಗಿದೆ. ಆದರೆ ಆ ಪಟ್ಟಣಗಳಿಗೆ ಹೋದವರು ಅವುಗಳನ್ನು ಹೆಕ್ಕಿ ತೆಗೆಯಬೇಕು. ಯಾರಾದರೂ ಒಂದು ಸ್ಥಳಕ್ಕೆ ಪ್ರವಾಸ ಹೋಗಿದ್ದಾರೆ ಎಂದರೆ ಅಲ್ಲಿನ ಪ್ರತಿಯೊಂದು ವಿಷಯಗಳನ್ನೂ ನೋಡಿದ್ದಾರೆ ಎನ್ನಲು ಸಾಧ್ಯವಿಲ್ಲ ಎನ್ನುತ್ತಾರೆ ಶತಕೃತಿ ಲೇಖಕರು ಮತ್ತು ಹಾಸ್ಯ ಬರಹಗಾರ ಬೇಲೂರು ರಾಮಮೂರ್ತಿ. ಅವರು ಡಿ.ಎಸ್. ಮಂಜುನಾಥ್ ಅವರ ಕೊರಕಲಿನ ಜಾಡಿನಲ್ಲಿ ಪ್ರವಾಸ ಕಥನಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಶ್ರೀ ಡಿ.ಎಸ್. ಮಂಜುನಾಥ್ ಅವರು ಸಂಕಲಿಸಿರುವ ಕೊರಕಲಿನ ಜಾಡಿನಲ್ಲಿ ಪ್ರವಾಸ ಕಥನ ಗ್ರಂಥ ಒಂದು ಆಕರ್ಷಕ ಓದಿನ ಆಗರ. ಇದರಲ್ಲಿ ಒಂದಿಷ್ಟು ಲೇಖನಗಳಲ್ಲಿ ವಿದೇಶದಲ್ಲಿನ ಪ್ರವಾಸ ತಾಣಗಳ ಸೂಕ್ಷ್ಮ ಪರಿಚಯ ಇದ್ದರೆ ಇನ್ನೊಂದಿಷ್ಟು ಲೇಖನಗಳಲ್ಲಿ ನಮ್ಮ ದೇಶದ ಪ್ರೇಕ್ಷಣೀಯ ಸ್ಥಳಗಳ ಪರಿಚಯವಿದೆ. ಇಲ್ಲಿರುವ ಬಹುಪಾಲು ಲೇಖನಗಳು ಈಗಾಗಲೇ ವಿಶ್ವವಾಣಿ ದಿನಪತ್ರಿಕೆಯ ಯಾತ್ರಾ ಪುರವಣಿಯಲ್ಲಿ ಪ್ರಕಟವಾಗಿರುವುದು ಎಂದರೆ ಈ ಎಲ್ಲ ಲೇಖನಗಳ ವಿಶೇಷತೆ ಮತ್ತು ಜನಪ್ರಿಯತೆ ಅರ್ಥವಾಗುತ್ತದೆ. ಚೆನ್ನಾಗಿ ಬರೆಯಬಲ್ಲವರು ಪ್ರವಾಸ ಹೋದಾಗ ಅಲ್ಲಿನ ಮಾಹಿತಿಗಳನ್ನೆಲ್ಲಾ ಸಂಗ್ರಹಿಸಿ ನಂತರ ಅದನ್ನು ಒಂದು ಲೇಖನವನ್ನಾಗಿ ಮಾಡುವುದು ಸಾಮಾನ್ಯ. ಇದು ಇನ್ನೂ ಅಂಥಾ ತಾಣಗಳಿಗೆ ಪ್ರವಾಸ ಹೋಗಿಲ್ಲದ ಓದುಗರನ್ನು ಒಂದು ರೀತಿ ಆಕರ್ಷಿಸಿದರೆ ಒಮ್ಮೆ ಅಲ್ಲಿಗೆ ಹೋದವರು ತಮ್ಮ ಭೇಟಿಯನ್ನು ನೆನಪು ಮಾಡಿಕೊಳ್ಳಲು ಸಹಾಯವಾಗುತ್ತದೆ. ನಾನು ಈ ಹಿಂದೆ ಜಪಾನ್ ಪ್ರವಾಸ ಹೋಗಿಬಂದ ನಂತರ ಜಪಾನಿನಲ್ಲಿ ಬೇಲೂರು ಪುಸ್ತಕ ಬರೆದಿದ್ದು ಇಲ್ಲಿ ನನ್ನ ನೆನಪಿಗೆ ಬರುತ್ತಿದೆ.

ಪ್ರಸ್ತುತ ಕೊರಕಲಿನ ಜಾಡಿನಲ್ಲಿ ಸಂಗ್ರಹದಲ್ಲಿ ತುಂಬಾ ಕುತೂಹಲ ತರುವ ಅನೇಕ ತಾಣಗಳಿವೆ. ಇವುಗಳಲ್ಲಿ ಸ್ವಲ್ಪ ಅಪರೂಪ ಎನ್ನಬಹುದಾದ ನಕ್ಕಿ ಸರೋವರ, ಜಸ್‌ವಂಥ್ ಥಡಾ, ಜೈಸಲ್ಮೇರ್ ನಗರದ ಮೂಲ ಝರಿ, ಮೇಘಾಲಯದ ಉಮಿಯಂ ಸರೋವರ ತುಂಬಾ ಮನೋಹರವಾಗಿವೆ. ಷಿಲ್ಲಾಂಗ್‌ನ ಉಂಗಟ್ ನದಿಯ ಹೆಸರನ್ನು ತುಂಬಾ ಅಪರೂಪವಾಗಿ ಕೇಳಿದವರಿದ್ದಾರೆ. ಮಾಹೇಶ್ವರ್ ಪಟ್ಟಣದ ವಿವರಗಳು ಸೊಗಸಾಗಿವೆ. ನಮ್ಮ ದೇಶದ ಪ್ರತಿಯೊಂದು ಪಟ್ಟಣವೂ ಒಂದಲ್ಲಾ ಒಂದು ವಿಶೇಷತೆಗೆ ಹೆಸರಾಗಿದೆ. ಆದರೆ ಆ ಪಟ್ಟಣಗಳಿಗೆ ಹೋದವರು ಅವುಗಳನ್ನು ಹೆಕ್ಕಿ ತೆಗೆಯಬೇಕು. ಯಾರಾದರೂ ಒಂದು ಸ್ಥಳಕ್ಕೆ ಪ್ರವಾಸ ಹೋಗಿದ್ದಾರೆ ಎಂದರೆ ಅಲ್ಲಿನ ಪ್ರತಿಯೊಂದು ವಿಷಯಗಳನ್ನೂ ನೋಡಿದ್ದಾರೆ ಎನ್ನಲು ಸಾಧ್ಯವಿಲ್ಲ. ಹೀಗಾಗಿ ಒಂದೇ ಪ್ರದೇಶಕ್ಕೆ ಎಷ್ಟೇ ಜನ ಪ್ರವಾಸ ಹೋದರೂ ಹೊಸದೊಂದು ವಿಷಯ ಸಿಗುತ್ತದೆ. ಹಾಗೆ ಸಿಕ್ಕ ವಿಷಯಗಳನ್ನು ಅಚ್ಚುಕಟ್ಟಾಗಿ ಜೋಡಿಸುವ ಕೆಲಸವನ್ನು ಸಮರ್ಥವಾಗಿ ಶ್ರೀ ಡಿ.ಎಸ್. ಮಂಜುನಾಥ್ ಅವರು ಮಾಡಿದ್ದಾರೆ ಎಂದರೆ ಅವರಿಗೆ ಪ್ರವಾಸದಲ್ಲಿ ಮಾತ್ರ ಆಸಕ್ತಿಯಿಲ್ಲ, ಜೊತೆಗೆ ಅಲ್ಲಿ ಅವರು ಕಂಡ ಮಾಹಿತಿಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಕಳಕಳಿ ಹೊಂದಿದ್ದಾರೆ ಎಂದು ಅರ್ಥವಾಗುತ್ತದೆ. ಹಳೇಬೀಡಿನಂಥಾ ಸಣ್ಣ ಊರಿಗೆ ಹೋಗುವವರು ಅಲ್ಲಿನ ಪ್ರಸಿದ್ಧ ಹೊಯ್ಸಳೇಶ್ವರ ದೇವಾಲಯವನ್ನು ನೋಡಿ ಬಂದುಬಿಡುತ್ತಾರೆ. ಆದರೆ ಅಲ್ಲಿ ಇಂಥಾ ಒಂದು ಹುಲಿಕೆರೆಯ ಪುಷ್ಕರಣಿ ಇರುವುದು ಎಷ್ಟು ಜನರಿಗೆ ತಿಳಿದಿದ್ದೀತು.?

ಹಾಗೇ ಲೇಖಕರು ತಾವು ವಿದೇಶ ಪ್ರವಾಸ ಕೈಗೊಂಡಂಥ ಸಂದರ್ಭಗಳಲ್ಲಿ ತಾವು ನೋಡಿದ ಸ್ಥಳಗಳ ಬಗೆಗೆ ಸೂಕ್ಷ್ಮವಾದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಪ್ರವಾಸ ಕಥನ ಎಂದರೆ ಲೇಖಕರು ಯಾವ ಪ್ರದೇಶಕ್ಕೆ ಹೋಗಿದ್ದರೋ ಅಲ್ಲಿನ ವಿಶೇಷತೆ ಅಲ್ಲಿಗೆ ಹೋಗುವ ಮಾರ್ಗ, ಸುಮಾರಾಗಿ ತಗುಲುವ ವೆಚ್ಚ, ಅಲ್ಲಿನ ಹವಾಮಾನ, ಅಲ್ಲಿನ ಜೀವನ ಪರಿಸ್ಥಿತಿ ಮತ್ತು ಅವರಿಗೆ ಆದ ಅನುಭವ ಇವುಗಳನ್ನು ದಾಖಲಿಸುತ್ತಾರೆ. ಆದರೆ ಲೇಖಕರು ಇಲ್ಲಿ ಆ ಸ್ಥಳದ ಮಹತ್ವವನ್ನು ಚಿಕ್ಕ ಮಾಹಿತಿಯಾದರೂ ಚೊಕ್ಕವಾಗಿ ದಾಖಲಿಸಿದ್ದಾರೆ.
ನಮ್ಮಲ್ಲಿ ಪ್ರಧಾನಿಯಾಗಿದ್ದ ಜವಾಹರ್‌ಲಾಲ್ ನೆಹರು ಅವರ ತೀನ್‌ಮೂರ್ತಿ ಭವನದ ಸ್ಮಾರಕವನ್ನು ನೆನಪಿಗೆ ತರುವಂಥಾ ಲೇಖನ ನ್ಯೂಜಿಲೆಂಡ್ ಸಾವೆಜ್ ಮೆಮೊರಿಯಲ್, ರೋಮಾಂಚಕ ರೋಟೊರೊವ, ಸ್ಕಾಂಟ್‌ಲೆಂಡ್‌ನ ಕಮಾಂಡೋ ಮೆಮೋರಿಯಲ್, ಜೊತೆಗೆ ಸ್ಕಾಟ್‌ಲೆಂಡ್‌ನ ಎಡಿನ್‌ಬರ್ಗ್ ಕೋಟೆ, ಆಕ್ಲೆಂಡ್‌ನ ಆಲ್ಬರ್ಟ್ ಪಾರ್ಕ್, ಬಹಳ ಆಕರ್ಷಣೀಯವಾಗಿದೆ ಮತ್ತು ಉತ್ತಮ ಮಾಹಿತಿಗಳಿಂದ ಕೂಡಿದೆ. ಹಾಗೆ ನೋಡಿದರೆ ಒಂದೊಂದು ಲೇಖನವೂ ಒಂದೊಂದು ವಿಶೇಷತೆಯಿಂದಲೇ ಕೂಡಿದೆ ಎಂದರೆ ಅತಿಶಯೋಕ್ತಿಯಲ್ಲ. ಮುನ್ನುಡಿ ಬರೆಯುವುದು ಎಂದರೆ ಗ್ರಂಥದ ಎಲ್ಲ ಲೇಖನಗಳನ್ನೂ ಕುರಿತು ಬರೆಯುವುದಲ್ಲ. ಹೀಗಾಗಿ ನಾನು ಇಲ್ಲಿನ ಎಲ್ಲ ಲೇಖನಗಳನ್ನೂ ಓದಿದ್ದರೂ ಅವುಗಳು ನನಗೆ ಅತ್ಯಂತ ಪ್ರಿಯವಾಗಿದ್ದರೂ ನಾನು ಎಲ್ಲ ಲೇಖನಗಳನ್ನೂ ಉದಾಹರಿಸದೇ ಕೇವಲ ಕೆಲವೇ ಲೇಖನಗಳನ್ನು ಉದಾಹರಿಸಿ ಎಲ್ಲ ಲೇಖನಗಳೂ ಇವುಗಳಂತೆಯೇ ನಯನಮನೋಹರವಾಗಿದೆ, ಓದುತ್ತಾ ಹೋದಂತೆ ಕರ್ಣಮಧುರವೂ ಆಗಿದೆ ಎಂದು ಹೇಳುವುದು ನನ್ನ ಉದ್ಧೇಶ.

ಬರೀ ಲೇಖನಗಳಿದ್ದರೆ ಬಹುಶಃ ಗ್ರಂಥ ಇಷ್ಟೊಂದು ಆಕರ್ಷಣೀಯವಾಗಿ ಇರುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅನೇಕ ಕಡೆಗಳಲ್ಲಿ ಇರುವ ಬಣ್ಣ ಬಣ್ಣದ ಛಾಯಾಚಿತ್ರಗಳು ಗ್ರಂಥದ ಮತ್ತು ಆಯಾ ಲೇಖನಗಳ ಮೆರುಗನ್ನು ಹೆಚ್ಚಿಸಿವೆ. ಈ ಗ್ರಂಥವನ್ನು ಕೈಯಲ್ಲಿ ಇಟ್ಟುಕೊಂಡಾಗ ಲೇಖಕರು ಮಾಹಿತಿಗಳನ್ನು ಸಂಗ್ರಹಿಸಿರುವ ಕಲೆಗಾರಿಕೆ, ಅವುಗಳನ್ನು ಓದುಗರಿಗೆ ನೇರವಾಗಿ ಮುಟ್ಟುವಂತೆ ಪ್ರಸ್ತುತಪಡಿಸುವ ರೀತಿ, ಅಚ್ಚುಕಟ್ಟುತನ, ಕ್ರಿಯಾಶೀಲತೆ ಎಲ್ಲವೂ ಮನಮುಟ್ಟುತ್ತವೆ.

ಲೇಖಕರು ಇನ್ನಷ್ಟು ಪ್ರವಾಸ ಹೋಗಲಿ, ಅಲ್ಲಿಂದ ಮಾಹಿತಿಗಳನ್ನು ಸಂಗ್ರಹಿಸಿ ತರಲಿ, ಅವುಗಳನ್ನು ಗ್ರಂಥ ರೂಪದಲ್ಲಿ ಓದುಗರಿಗೆ ನೀಡಲಿ ಎನ್ನುವ ಆಶಯದಿಂದ ಮತ್ತೊಮ್ಮೆ ಡಿ.ಎಸ್. ಮಂಜುನಾಥ್ ಅವರಿಗೆ ಶುಭ ಕೋರಿ ಓದುಗರು ಇಂಥಾ ಒಂದೊಂದು ಪುಸ್ತಕವನ್ನು ತಮ್ಮ ಸಂಗ್ರಹದಲ್ಲಿಟ್ಟುಕೊಂಡು ಅವಶ್ಯಕತೆ ಬಂದಾಗ ಇಲ್ಲಿನ ಮಾಹಿತಿಗಳಿಂದ ಪ್ರಯೋಜನ ಪಡೆಯಲಿ ಎನ್ನುವುದು ನನ್ನ ಆಶಯ.

ಲೇಖಕರಿಗೆ ಹೋಗಿಬಂದ ಪ್ರವಾಸದ ಪ್ರಯಾಸ ಈ ಗ್ರಂಥ ಬಿಡುಗಡಯಾದ ಸಂತೋಷದಿಂದ ಕಡಿಮೆಯಾಗುತ್ತದೆ. ಮತ್ತು ಓದುಗರು ಇಂಥಾ ಗ್ರಂಥಗಳನ್ನು ಓದುವುದರಿಂದ ಅವರ ಸಂತಸ ಮನೋಲ್ಲಾಸ ಹೆಚ್ಚಾಗುತ್ತದೆ. ಲೇಖಕರಿಗೆ ಶುಭಕೋರಿ ಅವರ ಮುಂದಿನ ಬರಹಗಳಿಗೆ ಯಶಸ್ಸು ಕೋರುತ್ತಾ ಇಂಥಾ ಗ್ರಂಥವನ್ನು ಕೊಂಡು ಓದುವ ಮೂಲಕ ಓದುಗರು ಈ ಶುಭಯಾತ್ರೆಯಲ್ಲಿ ಪಾಲ್ಗೊಳ್ಳಲಿ ಎಂದು ಆಶಿಸುತ್ತೇನೆ.

 

MORE FEATURES

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...

'ಮರ ಬರೆದ ರಂಗೋಲಿಯ ರಂಗಿನೋಕುಳಿ'

18-04-2024 ಬೆಂಗಳೂರು

'ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವ...