ಕೃಷಿ ರಂಗದ ಬಿಕ್ಕಟ್ಟಿಗೆ ಸುಸ್ಥಿರ ಪರಿಹಾರ ಅಗತ್ಯ: ಕೇಸರಿ ಹರವೂ ಪ್ರತಿಪಾದನೆ

Date: 07-03-2021

Location: ಬೆಂಗಳೂರು


ದೇಶದಲ್ಲಿ ಕೃಷಿ ರಂಗವು ಎದುರಿಸುತ್ತಿರುವ ಹತ್ತು ಹಲವು ಬಿಕ್ಕಟ್ಟುಗಳ ಶಮನಕ್ಕೆ ಸುಸ್ಥಿರ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದು ಹೆಸರಾಂತ ಚಿತ್ರ ನಿರ್ದೇಶಕ ಕೇಸರಿ ಹರವೂ ಪ್ರತಿಪಾದಿಸಿದರು.

ನಗರದ ಬಹುರೂಪಿ ಬುಕ್ ಹಬ್ ನಲ್ಲಿ ಭಾನುವಾರ ಶ್ರೀ ಪಡ್ರೆ ಅವರ ‘ರೈತರ ಆದಾಯವರ್ಧನೆಗೆ ಮೌಲ್ಯವರ್ಧನೆ’ ಹಾಗೂ ಆನಂದತೀರ್ಥ ಪ್ಯಾಟಿ ಅವರ ‘ಥಾಯ್ಲೆಂಡ್ ಕೃಷಿ ಪ್ರವಾಸ’ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ದೆಹಲಿ ಗಡಿಯಲ್ಲಿ ರೈತರ ಚಳವಳಿ ನಡೆಯುತ್ತಿದೆ. ಕೇಂದ್ರ ಸರ್ಕಾರ ಈ ಚಳವಳಿಗೆ ಮಣಿದು ಮಾರಕ ಎನ್ನಬಹುದಾದ ಕಾಯ್ದೆಗಳನ್ನು ಹಿಂಪಡೆದರೂ ಕೃಷಿ ರಂಗದ ಸಮಸ್ಯೆಗಳು ಬಗೆಹರಿಯುವುದಿಲ್ಲ; ರೈತರು ವಿವಿಧ ಬಹುರಾಷ್ಟ್ರೀಯ ಕಂಪೆನಿಗಳನ್ನು ನೆಚ್ಚಿಕೊಳ್ಳುವ ಅನಿವಾರ್ಯತೆಯ ಪರಿಸ್ಥಿತಿಗಳು ಉಂಟಾಗಿವೆ. ರೈತರ ಚಳವಳಿಗಳು ಮುಗಿದರೂ ಅವರ ಸಂಕಷ್ಟಗಳು ಕೊನೆಗೊಳ್ಳವು. ಆದ್ದರಿಂದ, ಸುಸ್ಥಿರ ಪರಿಹಾರದತ್ತ ಗಮನ ಹರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಾವಯವ ಕೃಷಿಗೆ ಥಾಯ್ಲೆಂಡ್ ಮಾದರಿ: ಪ್ರವಾಸಿಗರ ದೇಶವಾಗಿ ಪ್ರಸಿದ್ಧಿ ಪಡೆದ ಥಾಯ್ಲೆಂಡ್, ಕೃಷಿ ರಂಗದಲ್ಲೂ ಜಾಗತಿಕ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿದೆ. ಸಾವಯವ ಕೃಷಿ ಅವಲಂಬಿಸಿರುವ ಥಾಯ್ಲೆಂಡ್ ನಲ್ಲಿ ರೈತರು ತಮ್ಮ ಸರ್ವಾಂಗೀಣ ವಿಕಾಸಕ್ಕೆ ನಾವಿನ್ಯಪೂರ್ಣ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಭಾರತದ ರೈತರಿಗೆ ಥಾಯ್ಲೆಂಡ್ ಮಾದರಿಯಾಗಬೇಕು ಎಂದರು.

ಗ್ರಾಮೀಣ ಜನತೆಗೆ ಕೃಷಿ ಪುಸ್ತಕಗಳು: ಹಿರಿಯ ಬರಹಗಾರ ನಾಗೇಶ ಹೆಗಡೆ ಮಾತನಾಡಿ ‘ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರೇರಣಾದಾಯಕ ಪುಸ್ತಕಗಳು ಗ್ರಾಮೀಣ ಯುವಜನತೆಗೆ ಹೆಚ್ಚುಹೆಚ್ಚಾಗಿ ತಲುಪಬೇಕಿದೆ; ಈ ಮೂಲಕ ಅವರು ನಗರಗಳತ್ತ ಮುಖಮಾಡುವ ಬದಲು ಗ್ರಾಮೀಣ ಭಾಗದಲ್ಲೇ ಉಳಿಯುವಂತೆ ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯಪಟ್ಟರೆ, ಹಾಸನ ಕೃಷಿ ಕಾಲೇಜಿನ ಡೀನ್ ಡಾ. ಎನ್. ದೇವಕುಮಾರ್ ಮಾತನಾಡಿ, ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಇಂತಹ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು; ಇದರಿಂದ ಕೃಷಿ ರಂಗದ ಹೊಸ ವಿದ್ಯಮಾನಗಳ ಬಗ್ಗೆ ಅರಿವಿನ ಜತೆಗೆ ಪರಿಣಾಮಕಾರಿಯಾಗಿ ಬರೆಯುವ ಕ್ರಮದ ಕುರಿತು ಕೂಡ ಮಾರ್ಗದರ್ಶನ ದೊರೆಯುತ್ತದೆ ಎಂದರು.

‘ಸಹಜ ಸಮೃದ್ಧ’ ನಿರ್ದೇಶಕ ಜಿ. ಕೃಷ್ಣಪ್ರಸಾದ್ ‘ಮೌಲ್ಯವರ್ಧನೆ ಹಾಗೂ ನೇರ ಮಾರುಕಟ್ಟೆ’ ಬಗ್ಗೆ ಸಂವಾದ ನಡೆಸಿಕೊಟ್ಟರು. ಕೋವಿಡ್ ಸಂದರ್ಭದಲ್ಲಿ ರೈತ ಸಮುದಾಯ ಹೆಚ್ಚಿನ ಸಂಕಟ ಅನುಭವಿಸಿತು. ಆದರೂ ಮೌಲ್ಯವರ್ಧನೆ, ಬೀಜೋತ್ಪಾದನೆ, ಗೃಹೋದ್ಯಮದಂತಹ ಚಟುವಟಿಕೆಗಳು ಅಲ್ಲಲ್ಲಿ ತುಸು ನೆಮ್ಮದಿಯನ್ನು ತಂದುಕೊಟ್ಟವು ಎಂದರು.

ಪತ್ರಕರ್ತ ಗಾಣಧಾಳು ಶ್ರೀಕಂಠ ಪುಸ್ತಕ ಪರಿಚಯ ಮಾಡಿದರು. ಬಹುರೂಪಿ ಬುಕ್ ಹಬ್ ನಿರ್ದೇಶಕ ಜಿ.ಎನ್. ಮೋಹನ್, ಪುಸ್ತಕ ಸಂಸ್ಕೃತಿಯನ್ನು ಹೆಚ್ಚು ವ್ಯವಸ್ಥಿತ ಮತ್ತು ವೈವಿಧ್ಯಮಯವಾಗಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಸಂಸ್ಥೆ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.

ಲೇಖಕ ಆನಂದತೀರ್ಥ ಪ್ಯಾಟಿ, ಡಾ.ಜಿ. ಕರುಣಾಕರನ್, ವಿಶಾಲಾಕ್ಷಿ ಶರ್ಮ, ಸಾವಯವ ಕೃಷಿಕರಾದ ಶಿವನಾಪುರ ರಮೇಶ್, ನಂದೀಶ್ ಚುರ್ಚಿಗುಂಡಿ, ಶಿವಪುತ್ರ ಚೌಧರಿ, ಶ್ರೀಪಾದ ರಾಜ ಮುರಡಿ ಮತ್ತಿತರರು ಉಪಸ್ಥಿತರಿದ್ದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...