ಕೃಷ್ಣಮೂರ್ತಿ ಹನೂರರ ಕಾಲಯಾತ್ರೆ–ಬೃಹತ್  ಕಾದಂಬರಿಯೊಂದರ ಮೊದಲ ಪುಟಗಳು

Date: 22-12-2020

Location: .


ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿರುವ ನಿತ್ಯಾನಂದ ಬಿ ಶೆಟ್ಟಿ ಅವರು ಬರೆಯುವ ಅಂಕಣ ‘ಲೋಕೋಕ್ತಿ’. ಈ ಅಂಕಣದಲ್ಲಿ ಅವರು ಕರ್ನಾಟಕದ ಜಾನಪದ ಅಧ್ಯಯನ ವಿದ್ವಾಂಸರಾದ ಕೃಷ್ಣಮೂರ್ತಿ ಹನೂರು ರಚಿಸಿದ ‘ಕಾಲಯಾತ್ರೆ’ ಎಂಬ ಕಾದಂಬರಿಯ ವಿಶಿಷ್ಟತೆಗಳ ಬಗ್ಗೆ ಬರೆದಿದ್ದಾರೆ.

ಕರ್ನಾಟಕದ ಜಾನಪದ ಅಧ್ಯಯನದ ಮುಂಚೂಣಿಯ ವಿದ್ವಾಂಸರಲ್ಲಿ ಒಬ್ಬರಾಗಿರುವ ಕೃಷ್ಣಮೂರ್ತಿ ಹನೂರು ಅವರು ಆಧುನಿಕಪೂರ್ವ ಕನ್ನಡ ಕಾವ್ಯಗಳ ತಜ್ಞ ಓದುಗನೂ ಹೌದು. ಹನೂರರು ಇದುವರೆಗೆ ಒಟ್ಟು 47 ಕೃತಿಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಜಾನಪದಕ್ಕೆ ಸಂಬಂಧಿಸಿಯೇ 16 ಕೃತಿಗಳಿವೆ. ಸಣ್ಣಕಥೆ ಮತ್ತು ಪ್ರವಾಸ ಕಥನಗಳನ್ನೂ ಬರೆದು, ಶಾಸನ-ಕಾವ್ಯ-ತತ್ವಪದಗಳ ಕುರಿತೂ ಬಹಳ ಮುಖ್ಯವಾದ ಕೆಲಸಗಳನ್ನು ಮಾಡಿ ಗಂಭೀರ ಸಂಶೋಧಕನೂ ಆಗಿರುವ ಹನೂರರು ಇದುವರೆಗೆ ಮೂರು ಕಾದಂಬರಿಗಳನ್ನು ಬರೆದಿದ್ದಾರೆ. ತಮ್ಮ ಮೊದಲ ಕಾದಂಬರಿ ನಿಕ್ಷೇಪ (1998) ಪ್ರಕಟಗೊಂಡ 14 ವರ್ಷಗಳ ಬಳಿಕ ಅಜ್ಞಾತನೊಬ್ಬನ ಆತ್ಮಚರಿತ್ರೆ (2012) ಎಂಬ ತಮ್ಮ ಎರಡನೇ ಕಾದಂಬರಿಯ ಮೂಲಕ ಹನೂರರು ಕನ್ನಡದ ಕಾದಂಬರಿ ಲೋಕದಲ್ಲಿ ಗಟ್ಟಿಕಾಳನ್ನೇ ಬಿತ್ತಿದರು. ಇದೀಗ ಅವರ ಮೂರನೇ ಕಾದಂಬರಿ ಕಾಲಯಾತ್ರೆ (2020) ಪ್ರಕಟಗೊಂಡಿದ್ದು ಓದುಗರ ಮೆಚ್ಚುಗೆಯನ್ನು ಪಡೆದಿದೆ.

ಕಾದಂಬರಿಕಾರರೇ ಹೇಳಿಕೊಂಡಂತೆ ಕಾಲಯಾತ್ರೆ ಆರಂಭದಲ್ಲಿ ಸಣ್ಣಕಥೆಯಾಗಿ ರೂಪುಗೊಂಡಿದ್ದು ಬಳಿಕ ಕಾದಂಬರಿ ಆಯಿತು. ಹಾಗೆ ನೋಡಿದರೆ ಹನೂರರ ಅಜ್ಞಾತನೊಬ್ಬನ ಅತ್ಮಚರಿತ್ರೆ ಕೂಡ ಆರಂಭದಲ್ಲಿ ಮೂವತ್ತು ಪುಟಗಳ ಕಥೆಯಾಗಿದ್ದದ್ದು ಬಳಿಕ 220 ಪುಟಗಳ ಕಾದಂಬರಿ ಆಗಿ ರೂಪಾಂತರಗೊಂಡಿದೆ. ಕಾಲಯಾತ್ರೆ 100 ಪುಟಗಳ ಕಿರು ಕಾದಂಬರಿ.

ಕಾದಂಬರಿಯ ಕಥೆ ಇರುವುದು ಹೀಗೆ:

ನಿಗಿನಿಗಿ ಕೆಂಡದಂತಿರುವ ಗುಲ್ಬರ್ಗದ ಜೇವರ್ಗಿಗೆ ತನ್ನ ಬದುಕಿನ ಆಟದ ಕೊನೆಯ ದೇಖಾವೆಯಲ್ಲಿ ಬಂದು ಬಿದ್ದವನು ಭೀಮಾಜೋಗಿ ತಳವಾರ. ಆತನ ಮಗನೇ ಮಾರುತಿ ತಳವಾರ. ಭೀಮಾ ಜೋಗಿ ನಾಟಕ ಕಲಿಸುವ ಮಾಸ್ತರನೂ ಹೌದು. ಸ್ವತಃ ನಟಭಯಂಕರನೂ ಹೌದು. ಸುರಪುರದ ಮಹಾರಾಜ ವೆಂಕಟಪ್ಪ ನಾಯಕರ ನವುಲೇಹಾಳಿನ ಗಡಿಕಾಯುವ ತಳವಾರ ನಾಯಕರ ಪರಂಪರೆ ಆತನದ್ದು. ಮಹಾರಾಜರಿಗೆ ಆಪ್ತನಾಗಿರುವ ಕೆಚ್ಚೆದೆಯ ಭಂಟ ಕಂಠಿ ನರಸಪ್ಪನಾಯಕರ ವಂಶಾವಳಿಯನ್ನು ಹೆಮ್ಮೆಯಿಂದ ಹೇಳುವ ಭೀಮಾಜೋಗಿ ತನ್ನ ಮಗನಿಗೆ ’ಆಕ್ಸ್ ಫರ್ಡ್ ಕಾನ್ವೆಂಟ್ ’ನಲ್ಲಿ ಉನ್ನತ ಶಿಕ್ಷಣದ ಅವಕಾಶವನ್ನು ನಿರಾಕರಿಸಿದ ಮೇಲೆ ಯಾವ್ಯಾವುದೋ ನೌಕರಿ ಮಾಡ್ಕೊಂಡು, ಪ್ರಾಯಕ್ಕೆ ಬಂದು ಲಕ್ಷ್ಮವ್ವನನ್ನು ಲಗ್ನವೂ ಆಗಿ, ತತ್ಫಲವಾಗಿ ಜನಿಸಿದ ಕೂಸು ಮರಿ ಸರಸಿ ಸಹಿತನಾಗಿ ಬೆಂಗಳೂರಿಗೆ ಬರುತ್ತಾನೆ. ಅವನ ಜೊತೆಗೆ ಅಂಟಿಕೊಂಡೇ ಇದ್ದ ಮಗ್ಗುಲ ಹಟ್ಟಿಯ ಅಲ್ಲಾಭಕ್ಷ ಲಾಡಸಾಬ ಲಗಾಟಿಯೂ ಮತ್ತು ನಾಯಿ ಸಿಂಗನೂ ಇವರ ಜೊತೆಗಾರರಾಗಿ ಹಿಂಬಾಲಿಸುತ್ತಾರೆ.

ಬೆಂಗಳೂರಿನಲ್ಲಿ ಪೀಣ್ಯಕ್ಕೆ ಬಂದ ಮಾರುತಿ, ಲಕ್ಷ್ಮೀ ವೆಂಕಟೇಶ್ವರ ಸರ್ವೀಸಸ್ ನಲ್ಲಿ ಲಾರಿ ಡ್ರೈವರ್ ಆದರೆ, ಲಗಾಟಿ ಕ್ಲೀನರ್ ಆಗುತ್ತಾನೆ. ಲಕ್ಷ್ಮವ್ವ ಲಾರಿ ಕಛೇರಿಯ ಪಬ್ಲಿಕ್ ರಿಲೇಷನ್ ಆಫೀಸರ್ ನ ದಯೆಯಿಂದ ಹರಿಶ್ಚಂದ್ರ ಘಾಟ್ ನಲ್ಲಿ ಸಂಬಳವಿಲ್ಲದ, ಆದರೆ ಹೆಣ ಸುಡುವವರು ಎಸೆವ ಕಾಸು-ಕಾಳು ಹೆಕ್ಕಿಕೊಳ್ಳುವಷ್ಟು ಸ್ವಾತಂತ್ರ್ಯ ಇರುವ, ಸ್ಮಶಾನವನ್ನು ಕಾಯುವ-ಕಿಲೀನು ಮಾಡುವ ಕೆಲಸ ಮಾಡುವಂಥವಳಾಗುತ್ತಾಳೆ.

ಹೀಗೆ ಬದುಕು ಮಾಡುತ್ತಿರುವಾಗಲೇ ಒಂದು ದಿನ ಇದೇ ಸ್ಮಶಾನದಲ್ಲಿ ಅಂತ್ಯಸಂಸ್ಕಾರಕ್ಕೊಳಗಾಗಿದ್ದ ಶ್ರೀಮಂತನೊಬ್ಬನ ಹೆಣ ಕಳವು ಆಗಿ, ಆ ಆರೋಪ ಮಾರುತಿ ಮತ್ತು ಲಗಾಟಿಯ ಮೇಲೆ ಬಂದದ್ದರಿಂದ ಅವರಿಬ್ಬರೂ ಜೈಲು ಸೇರುತ್ತಾರೆ. ಈ ಕ್ರಿಮಿನಲ್ ಪ್ರಕರಣದಿಂದಲಾಗಿ ಮಾರುತಿ ತನ್ನ ಕೆಲಸವನ್ನೂ ಕಳೆದುಕೊಳ್ಳುತ್ತಾನೆ. ಆದರೆ ಕೊನೆಯಲ್ಲಿ ಈ ಹೆಣ ಕಳವಿನ ಹಿಂದೆ ಗಣ್ಯ ವ್ಯಕ್ತಿಗಳು ನಡೆಸುವ ಮೆಡಿಕಲ್ ಕಾಲೇಜ್ ಗಳ ಲಾಬಿ ಇರುವುದು ಪೊಲೀಸರಿಗೆ ಗೊತ್ತಾಗಿ ಬಂಧಿತರು ಬಿಡುಗಡೆ ಆಗುತ್ತಾರೆ.

ಕಾಲಯಾತ್ರೆಯನ್ನು ಓದುವುದು ಒಂದು ಒಳ್ಳೆಯ ಅನುಭವ. ಆದರೆ ಈ ಅನುಭವ ಕಥಾವಸ್ತುವಿನ ಸಂಕೀರ್ಣ ನಿರ್ವಹಣೆಯಿಂದ ಹುಟ್ಟುವುದಿಲ್ಲ. ಬದಲಾಗಿ ಕಥಾವಸ್ತುವನ್ನು ನಿರೂಪಿಸುವ ಹನೂರರ ಭಾಷಿಕ ಮಾಯಾಜಾಲದ ಮೋಡಿಯಿಂದ ಲಭಿಸುತ್ತದೆ. ಕಾದಂಬರಿಯನ್ನು ಓದಿ ಮುಗಿಸಿದಾಗ ಓದಿದ್ದು ಕಾದಂಬರಿಯೋ ಕಾವ್ಯವೋ ಎಂಬ ಅನುಮಾನವೂ ಹುಟ್ಟುವಂತೆ ಇದೆ ಹನೂರರ ಭಾಷೆ. ಭಾಷೆಯ ಮೂಲಕವೇ ಅಭಿವ್ಯಕ್ತಗೊಳ್ಳುವ ಅನಿವಾರ್ಯತೆ ಇರುವ ಮೌಖಿಕ ಅಥವ ಲಿಖಿತ ರೂಪದ ಕೃತಿ ನಿರೂಪಣೆಯ ಪ್ರಕ್ರಿಯೆಯಲ್ಲಿ ನಾವು ಸಾಮಾನ್ಯವಾಗಿ ‘ಭಾಷೆಯನ್ನು ಬಳಸುವುದು’, ’ಭಾಷೆಯನ್ನು ಉಪಯೋಗಿಸುವುದು’ ಎಂಬಿತ್ಯಾದಿ ಪದ ಬಳಕೆಯನ್ನು ಮಾಡುತ್ತೇವೆ. ಆದರೆ ಇವುಗಳಿಗಿಂತ ’ಭಾಷೆಯನ್ನು ಪ್ರಯೋಗಿಸುವುದು’ ಎಂದು ಹೇಳುವುದು ಹೆಚ್ಚು ಸಮರ್ಪಕವಾದ ಮಾತು. ಯಾಕೆಂದರೆ ಬಾಣವನ್ನು ಒಮ್ಮೆ ಪ್ರಯೋಗಿಸಿದ ಬಳಿಕ ಮಾರ್ಗಮಧ್ಯದಿಂದ ಅದನ್ನು ಹೇಗೆ ಮರಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಹಾಗೆಯೇ ಭಾಷಾ ಪ್ರಯೋಗವೂ ಕೂಡ. ಹಾಗಾಗಿ ಪ್ರಯೋಗಿಸುವುದರ ಮೊದಲು ಹತ್ತು-ಹಲವು ಬಾರಿ ಬುದ್ಧಿ-ಭಾವ-ಪ್ರಜ್ಞೆಗಳ ಪ್ರಯೋಗಶಾಲೆಯಲ್ಲಿ ತಿದ್ದಿ-ತೀಡಿ ಅಂತಿಮವಾಗಿ ಹೊರಗೆ ಪ್ರಯೋಗಿಸುವಾಗ, ಅದು ಒಮ್ಮೊಮ್ಮೆ ತನ್ನನ್ನು ಪ್ರಯೋಗಿಸಿದವರನ್ನು ನುಂಗಿ ನೊಣೆಯುವ ಸುಳಿಯೂ ಆದೀತು. ಹಾಗೆಯೇ ಕೆಲವೊಮ್ಮೆ ಪ್ರಯೋಗಿಸಿದವರನ್ನು ಬೆಳಗಿಸುವ ಬೆಳಕೂ ಆದೀತು. ಕಾಲಯಾತ್ರೆಯ ಭಾಷಿಕ ಸುಳಿ ಎಷ್ಟು ತೀವ್ರತರವಾದದ್ದೆಂದರೆ ಅದು ಕಾದಂಬರಿಕಾರರನ್ನು ತನ್ನ ಭಾಷಾವಿಲಾಸದಲ್ಲೇ ಮುಳುಗಿಸಿ ಬಿಟ್ಟಿದೆ. ಹಾಗಾಗಿ ಈ ಭಾಷಿಕ ಲೀಲೆಯೇ ಕಾದಂಬರಿಯ ಶಕ್ತಿಯೂ ಮತ್ತು ಮಿತಿಯೂ ಆಗಿದೆ.

ಕಾದಂಬರಿಯ ಆರಂಭದಲ್ಲಿ ನಾಂದೀಪದ್ಯದೋಪಾದಿಯಲ್ಲಿ ದಾನಮ್ಮ ಎಂಬ ಜನಪದ ಹಾಡುಗಾರ್ತಿಯ ಪದವೊಂದನ್ನು ಹನೂರರು ಉಲ್ಲೇಖಿಸಿದ್ದಾರೆ. ಅದು ಹೀಗಿದೆ:

ಭತ್ತ ಬಿತ್ತಿ ಅನ್ನ ಕಾಣೆ
ಹತ್ತಿ ಬಿತ್ತಿ ಬಟ್ಟೆ ಕಾಣೆ
ಕಟ್ಟೊ ಗುಡಿಗೆ ಕಲ್ಲು ಹೊತ್ತು
ದೇವರ ಕಾಣೆನೇ,
ಮಕ್ಕಳ್ಹೆತ್ತು ದೂರವಾಗಿ
ಗಂಡನಿಲ್ಲದ ಲೋಕ ಕಂಡು
ಬರಿಗೈಲೆ ನಿಂತ;
ತಾಯಿಯಾದೆನೆ!
– ತತ್ತ್ವಪದದಂತಿರುವ ಈ ಹಾಡನ್ನು ಕಾದಂಬರಿಯ ಆರಂಭದಲ್ಲಿ ಓದಿದ ಬಳಿಕ ಕಾದಂಬರಿ, ಮುಕ್ತಾಯಗೊಂಡ ನಂತರ ಮತ್ತೊಮ್ಮೆ ಓದಬೇಕು ಎಂಬ ಒತ್ತಾಸೆ ಒದ್ದುಕೊಂಡು ಬರುತ್ತದೆ. ನಾಂದೀ ಪದ್ಯವೇ ಮಂಗಳ ಪದ್ಯವೂ, ಅ-ಮಂಗಳ ಪದ್ಯವೂ ಆಗುವಂಥ ಒಂದು ವಿಲಕ್ಷಣ ಸನ್ನಿವೇಶ ಈ ಕಾದಂಬರಿಯ ಉದ್ದಕ್ಕೂ ಹರಡಿದೆ. ಊರೊಳಗೆ ಗೆಯ್ಮೆ ಮಾಡಿಕೊಂಡಿರಬೇಕಾದ ನಮ್ಮ ರೈತರು ರಾಜಬೀದಿಗೆ ಬಂದು ಬೀಡು ಬಿಟ್ಟು ರಾಷ್ಟ್ರಪ್ರಭುತ್ವಕ್ಕೆ ಮುಖಾಮುಖಿಯಾಗಿ ನಿಂತಿರುವ ಈ ಸನ್ನಿವೇಶದಲ್ಲೂ ದಾನಮ್ಮನ ಈ ತತ್ತ್ವಪದ ಬೇರೆ ಇನ್ನೇನೋ ಹೇಳುವಂತಿದೆ. ಈ ಪದದಲ್ಲಿ ತೊಟ್ಟಿಕ್ಕುತ್ತಿರುವ ಹತಾಶೆ ನಮ್ಮ ದೇಶ-ಕಾಲದಲ್ಲೂ ಜಿನುಗುತ್ತಿದ್ದು ಅದು ಈ ಕಾದಂಬರಿಯ ಒಳಗೂ ಹರಿಯುತ್ತಿರುವಂತಿದೆ.

ದಟ್ಟವಾದ ವಿಷಾದವನ್ನು, ದಿಟ್ಟವಾದ ಹೆಣ್ಣುಮಗಳನ್ನು, ಚಿಂದಿ ಬಟ್ಟೆಯಂಥ ಬದುಕನ್ನು, ಆ ಬದುಕಿನ ಕಷ್ಟ-ಕಾರ್ಪಣ್ಯಗಳನ್ನು, ಆಳವಾದ ನೋವನ್ನು, ಅಖಂಡವಾದ ಜೀವನ ಪ್ರೀತಿಯನ್ನು, ಹೆಜ್ಜೆಹೆಜ್ಜೆಯಲ್ಲೂ ಮುಗ್ಗರಿಸುವಷ್ಟು ವಿರೋಧಾಭಾಸಗಳನ್ನು ಮೈಮೇಲೆ ಹೊದ್ದುಕೊಂಡಂತಿರುವ ಕಾಲಯಾತ್ರೆಯನ್ನು ಹನೂರರಿಗೆ ಕಾಂಕ್ರೀಟ್ ಕಾಡಿನ ಮದುಮಗಳು ಆಗಿ ಕಟ್ಟುವ ಎಲ್ಲ ಸಾಧ್ಯತೆಗಳು ಮುಕ್ತವಾಗಿಯೇ ಇದ್ದವು. ಆದರೆ ಅವರು ಯಾಕೋ ರನ್ ಔಟ್ ಆಗುವುದಕ್ಕೆ ಮನಸ್ಸು ಮಾಡಿದ್ದಾರೆ. ಹಾಗಿದ್ದೂ ವ್ಯಂಗ್ಯ ಮತ್ತು ವಿನೋದವನ್ನು ವಿಷಾದದ ಜೊತೆಜೊತೆಗೇ ಬೆರೆಸಿಕೊಡುವ ಹನೂರರ ಈ ಕಲಾ ನೈಪುಣ್ಯ ಆಗಿಂದಾಗ್ಗೆ ಆಲನಹಳ್ಳಿ ಕೃಷ್ಣರನ್ನು ನೆನಪಿಸುತ್ತದೆ. ಗ್ರಾಮ್ಯ ಜೀವನದ ಲೋಕದಾಟವನ್ನು ಕೃಷ್ಣ ಚಿತ್ರಿಸಿದರೆ ನಗರ ಜೀವನದ ಬದುಕಿನ ಶೈಥಿಲ್ಯವನ್ನು ಹನೂರರು ಮಂತ್ರಮುಗ್ಧಗೊಳ್ಳುವಂತೆ ಚಿತ್ರಿಸಬಲ್ಲರು.

ಚುರುಕಿನ ಲಾರಿ ಡ್ರೈವರ್, ಆತನ ಗಟ್ಟಿಗಿತ್ತಿ ಹೆಂಡತಿ, ಮುಗ್ಧ ಲಗಾಟಿ, ಪಂಥ-ಪರಾಕ್ರಮದ ನಾಯಿ ಸಿಂಗ, ಎಲ್ಲದಕ್ಕೂ ಬೆಕ್ಕಸ ಬೆರಗಾಗುವ ಕೂಸು ಸರಸಿಯನ್ನು ಹೊತ್ತಿರುವ ಹನೂರರ ಈ ಯಾತ್ರೆಯಲ್ಲಿ ನಗರ ಜೀವನದ ಹಲವು ದೃಶ್ಯಗಳು ಕಂಡು ಬರುತ್ತವೆ. ಇವು ’ಯಾತ್ರೆ’ಯಾಗಿರುವುದರಿಂಡ ಇಲ್ಲಿಯ ಆಳವಾದ ತಳಮಳಗಳನ್ನು ತೋರಿಸುವ ಹನೂರರಿಗೆ ಇದ್ದಂತಿಲ್ಲ. ಒಂದು ಯಾತ್ರೆಯಲ್ಲಿ (ಜರ್ನಿ) ಏನು ಕಾಣಬಹುದೋ ಅಷ್ಟನ್ನು ಸಮರ್ಥವಾಗಿ ತೋರಿಸಿರುವ ಹನೂರರು, ಹೆಣವನ್ನೂ ಕದಿಯಬಲ್ಲ ನಗರ ಬದುಕಿನ ಕತ್ತಲ ಲೋಕದ ಬೀಭತ್ಸ ಮುಖವನ್ನು ಓದುಗರ ಮುಂದೆ ಅನಾವರಣಗೊಳಿಸುತ್ತಾರೆ. ಜೊತೆಗೆ ಸಹನೆಯನ್ನೇ ದಬಾಯಿಸುವಷ್ಟು ತಾಳ್ಮೆ ಹೊಂದಿರುವ ಮಾರುತಿಯ ಪರಿವಾರವನ್ನು ನಮ್ಮ ಮುಂದೆ ಬೆಳಕಿಗೊಡ್ಡಿ ಈ ಕುಟುಂಬದ ಅಪ್ರತಿಹತವಾದ ಶಕ್ತಿಯ ಬಗ್ಗೆ ನಮಗೆ ಬೆರಗನ್ನೂ ಹುಟ್ಟಿಸುತ್ತಾರೆ.

ಕಾಲಯಾತ್ರೆ ಅರಿವಿದ್ದೋ ಇಲ್ಲದೆಯೋ ಎರಡು ಮಾದರಿಗಳನ್ನು ತನ್ನ ಕಥನದೊಳಗೆ ಕಟ್ಟಿದೆ. ಅದರಲ್ಲಿ ಒಂದು ನವುಲೇಹಾಳು. ಇನ್ನೊಂದು ಬೆಂಗಳೂರು.

“ನವುಲೇಹಾಳಿನಲ್ಲಿ ಹೊಟ್ಟೆ ಬಟ್ಟೆಗಿಲ್ಲದಿದ್ದರೂ ಹಾದಿಬೀದಿಯ ಮನೆಮಂದಿಯದು ಮಾತೋಮಾತು. ಬೆಳಗಿನಿಂದ ಬೈಗಿನವರೆಗೆ ಉಣ್ಣದಿದ್ದರೂ ’ಉಂಡ್ಯೇನಾ’, ತಿನದಿದ್ದರೂ ’ತಿಂದ್ಯೇನಾ’, ಕಾಯಿಲೆ ಕಸಾಲೆಯಿದ್ದರೂ ’ಆರಾಮೇನಾ’ ಅನ್ನುವ ಮಾತು. ಸರಸಿ ಹೇಳುವಂತೆ ಇಲ್ಲಿ ಜನವೆಂಬುದು ನಿತ್ಯ ಜಾತ್ರೆಯಂತಿದ್ದರೂ ನಮ್ಮತ್ತ ತಿರುಗಿ ’ನೀ ಯಾರಾ, ಯಾವೂರಾ’ ಅನ್ನುವವರಿಲ್ಲವಲ್ಲ.“ (ಕಾಲಯಾತ್ರೆ, ಪುಟ. 39)

ಈ ಮಾದರಿಯನ್ನು ಕನ್ನಡದಲ್ಲಿ ಸೃಜಿಸಿದ ಅನೇಕರಿದ್ದಾರೆ. ಮುಗ್ಧರೂ, ಪರಮ ನಿರಪಾಯಕಾರಿಗಳೂ ಆದ ಒಂದು ಸಂಸಾರವನ್ನು ಇಂಥ ಘನಘೋರ ನಗರ ಕಾಂತಾರದಲ್ಲಿ ಬಿಟ್ಟು ನಗರವಾಸಿಗಳ ಗಿಲೀಟನ್ನು ಅಜಮಾಯಿಷಿ ಮಾಡುವುದು ಸುಲಭದ ಕೆಲಸವೂ ಹೌದು. ಹಾಗಾಗಿ ಸಂಕೀರ್ಣವಾದವುಗಳು ಘಟಿಸುವುದಕ್ಕೆ ಅವಕಾಶ ಇದ್ದೂ ಅವುಗಳು ಸಂಭವಿಸದೇ ಇರುವುದರಿಂದ ಕಾಲಯಾತ್ರೆ ಗಹನವಾದ ಯಾವುದೋ ದಿವ್ಯಕ್ಷಣಕ್ಕಾಗಿ ಕಾಯುವಂತಿದೆ. ಕಾದಂಬರಿಯ ಕೊನೆಯ ಸಾಲುಗಳಲ್ಲಿ ಹೊಸಬಗೆಯ ಚೇತರಿಕೆಯೊಂದು ಕಂಡುಬರುತ್ತದೆಯಾದರೂ ಆ ಚೇತರಿಕೆಗೆ ಚೈತನ್ಯ ತುಂಬುವ ಶಕ್ತಿ ಕಾದಂಬರಿಯ ಒಟ್ಟು ವಿನ್ಯಾಸದಲ್ಲಿ ಇದ್ದಂತಿಲ್ಲ.

ಗಹನವಾಗದ ಅಥವ ಗಹನವಾಗುವ ಸಾಧ್ಯತೆಯಿರದ ಸಾಹಿತ್ಯ ಕೃತಿಗಳಲ್ಲಿ ನುಡಿಗಟ್ಟುಗಳನ್ನು ಆಕರ್ಷಕಗೊಳಿಸಿ ಕೇಳುಗರನ್ನು, ಓದುಗರನ್ನು ಪುಳಕಿತಗೊಳಿಸುವ, ಭಾಷೆಯನ್ನು ರುಚಿಕರಗೊಳಿಸುವ ಒಂದು ಬಗೆಯ ರಂಜನೀಯ ಧಾಟಿ ಇರುತ್ತದೆ. ಮಾತನ್ನು ನುಣುಪುಗೊಳಿಸುವ ಮತ್ತು ಮಾತನ್ನು ಮಸಾಲೆಯುಕ್ತಗೊಳಿಸುವ ಇಂತಹ ಪಾಕ ವಿಧಾನಗಳಿಂದ ರಸೋತ್ಪತ್ತಿಯಾಗಬಹುದು. ಆದರೆ ಚಿಂತನೆಯ ದ್ರವ್ಯ ಹುಟ್ಟಲಾರದು. ಭಾಷೆಯನ್ನು ಅದರ ವಿಶಿಷ್ಟತೆಯಲ್ಲಿ ಬಳಕೆ ಮಾಡುವ ನೈಪುಣ್ಯತೆಯನ್ನು ಸಿದ್ಧಿಸಿಕೊಂಡಿರುವ ಮತ್ತು ಓರ್ವ ಕಸುಬುಗಾರನೂ ಆಗಿರುವ ಕಾದಂಬರಿಕಾರ ಹನೂರರ ದಾರಿ ಇದಲ್ಲ. ಅವರು ಭಾಷೆಗೂ ಮೆರುಗು ತರುತ್ತ ವ್ಯವಸ್ಥೆಯ ಕೊಳಕಿಗೂ ಬೆಳಕು ಹಾಯಿಸುತ್ತ, ಮಾನುಷ ವಿವೇಕವನ್ನು ಎಚ್ಚರಿಸುವ ಕೆಲಸವನ್ನು ಕಾಲಯಾತ್ರೆಯ ಮೂಲಕ ಮಾಡುತ್ತಿದ್ದಾರೆ. ಆದರೆ ಅದು ತನ್ನ ಪೂರ್ಣರೂಪದಲ್ಲಿ ಇಲ್ಲಿ ವಿಕಾಸಗೊಂಡಿಲ್ಲವಾದುದರಿಂದ ಬಹಳ ಮುಖ್ಯವಾದ ವಿದ್ಯಮಾನವೊಂದು ದಾರಿಮಧ್ಯದಲ್ಲೇ ತನ್ನ ಚಲನೆಯನ್ನು ತಾನೇ ಅಮಾನತುಗೊಳಿಸಿದಂತಿದೆ. ಈ ದಾರಿ ವಿಸ್ತಾರಕ್ಕೆ ಚಲಿಸುವ ದಾರಿಯೂ ಹೌದು; ಹಾಗೆಯೇ ಆಳಕ್ಕೆ ಇಳಿಯುವ ದಾರಿಯೂ ಹೌದು. ಹಾಗಾಗಿ ಓರ್ವ ಓದುಗನಾಗಿ ನನಗೆ, ಕೃಷ್ಣಮೂರ್ತಿ ಹನೂರರು ತಾವು ಬರೆಯಲಿರುವ ಬೃಹತ್ ಕಾದಂಬರಿಯೊಂದರ ಮೊದಲ ಅಧ್ಯಾಯವನ್ನಷ್ಟೇ ಇಲ್ಲಿ ಬರೆದಿದ್ದಾರೆ ಎಂಬ ಹೊಸ ಆಶಾವಾದವೊಂದು ಹುಟ್ಟಿದೆ.

ಈ ಅಂಕಣದ ಹಿಂದಿನ ಬರಹಗಳು

ಅನೇಕಲವ್ಯ – 3

ಅನೇಕಲವ್ಯ-2

ಅನೇಕಲವ್ಯ-1

‘ಇಂದಿರಾಬಾಯಿ’ ಯ ರಾಜಕೀಯ ಓದು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...