ಕೃಷ್ಣಮೂರ್ತಿ ಹನೂರು, ಸಿರಿಯಮ್ಮರಿಗೆ ಸಿರಿಬೆಳಗು ಪ್ರಶಸ್ತಿ

Date: 18-01-2021

Location: ಬೆಂಗಳೂರು


ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನವು ಕೊಡಮಾಡುವ ‘ಸಿರಿಬೆಳಗು ಪ್ರಶಸ್ತಿ’ಗೆ ಮೈಸೂರಿನ ಜಾನಪದ ವಿದ್ವಾಂಸರಾದ ಕೃಷ್ಣಮೂರ್ತಿ ಹನೂರು ಹಾಗೂ ಚಿತ್ರದುರ್ಗದವರಾದ ಜನಪದ ಕಲಾವಿದೆ ಸಿರಿಯಮ್ಮ ಅವರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ತಲಾ 10 ಸಾವಿರ ರೂ ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್ ತಿಂಗಳಲ್ಲಿ ಚಳ್ಳಕೆರೆಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷರಾದ ಮಲ್ಲಿಕಾರ್ಜುನ ಕಲಮರಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಕೃಷ್ಣಮೂರ್ತಿ ಹನೂರು

ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ಹನೂರು ಗ್ರಾಮದವರರಾದ ಕೃಷ್ಣಮೂರ್ತಿ ಹನೂರು ಅವರು ಕರ್ನಾಟಕದ ಪ್ರಖ್ಯಾತ ಜಾನಪದ ವಿದ್ವಾಂಸರು, ಸಾಹಿತಿ, ಹಾಗೂ ಸಂಸ್ಕೃತಿ ಚಿಂತಕರಾಗಿದ್ದಾರೆ. ಲೀಲಾವತಿ-ಪದ್ಮಾವತಿ, ಕತ್ತಾಲ ದಾರಿ ದೂರ, ಸಾವಿರದ ಸಿರಿಬೆಳಗು, ಕಾಲುದಾರಿಯ ಕಥನಗಳು, ಅಜ್ಞಾತನೊಬ್ಬನ ಆತ್ಮಚರಿತ್ರೆ, ಕಾಲಯಾತ್ರೆ, ಸರಸಸೌಗಂಧಿಕ ಪರಿಮಳ ಮುಂತಾಗಿ ಸುಮಾರು 50ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿರುವ ಶ್ರೀಯುತರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ, ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗಳು, ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಪ್ರಶಸ್ತಿ, ಚಲನಚಿತ್ರ ರಾಜ್ಯ ಪ್ರಶಸ್ತಿ, ಹೀಗೆ ರಾಜ್ಯ, ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡ ಬಹುಮುಖ ಪ್ರತಿಭೆಯ ವಿದ್ವಾಂಸರಾಗಿದ್ದಾರೆ.

ಕೃಷ್ಣಮೂರ್ತಿ ಹನೂರು ಅವರು ಬೆಳಗೆರೆ ಕೃಷ್ಣಶಾಸ್ತ್ರಿಯವರ ಸಹಕಾರದಲ್ಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಯಲಗಟ್ಟೆ ಕಾಡುಗೊಲ್ಲರ ಹಟ್ಟಿಯ ಜನಪದ ಕಲಾವಿದೆ ಸಿರಿಯಜ್ಜಿಯ ಪ್ರತಿಭಾ ಮೂಸೆಯಲ್ಲಿದ್ದ ಸುಮಾರು ಹತ್ತು ಸಾವಿರ ಪದಗಳನ್ನು ಹೆಕ್ಕಿ ತೆಗೆದು ಅವುಗಳಿಗೆ ಅಕ್ಷರ ರೂಪ ನೀಡಿ 'ಸಾವಿರದ ಸಿರಿಬೆಳಗು', 'ಕತ್ತಾಲ ದಾರಿ ದೂರ', 'ಜನಪದ ವೀರ ಗೀತೆಗಳು' ಶೀರ್ಷಿಕೆಯಲ್ಲಿ ಲೋಕಾರ್ಪಣೆ ಗೊಳಿಸಿದ್ದಾರೆ. ಇಷ್ಟಲ್ಲದೆ ಸಿರಿಯಜ್ಜಿ ಲೋಕಖ್ಯಾತಿ ಪಡೆಯುವಲ್ಲಿ ಡಾ. ಕೃಷ್ಣಮೂರ್ತಿ ಹನೂರರ ಪಾತ್ರ ಪ್ರಧಾನವಾಗಿದೆ.

 

ಸಿರಿಯಮ್ಮ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಯಲಗಟ್ಟೆ ಕಾಡುಗೊಲ್ಲರ ಹಟ್ಟಿ ನಿವಾಸಿಯಾದ ಸಿರಿಯಮ್ಮ (80 ವರ್ಷ) ಅವರು ಅನಕ್ಷರಸ್ಥೆಯಾದರೂ ಸಾವಿರಾರು ಪದಗಳ ಒಡತಿ. ಕುರಿ ಸಾಕಣೆ ಹಾಗೂ ಕೃಷಿ ಚಟುವಟಿಕೆಗಳ ನಡುವೆಯೇ ಕಾಡುಗೊಲ್ಲ ಬುಡಕಟ್ಟಿನ ಸಾಂಸ್ಕೃತಿಕ ನಾಯಕರಾದ ಎತ್ತಪ್ಪ, ಜುಂಜಪ್ಪ, ಕ್ಯಾತಪ್ಪ, ಸಿರಿಯಣ್ಣ. ಮುಂತಾದ ಮಹಾಕಾವ್ಯಗಳನ್ನು ಲೀಲಾಜಾಲವಾಗಿ ಹಾಡಬಲ್ಲವರಾಗಿದ್ದಾರೆ. ನಾಡೋಜ ಸಿರಿಯಜ್ಜಿಯ ಸಹವರ್ತಿಯಾಗಿ ನೂರಾರು ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ತನ್ನ ಹಟ್ಟಿಯ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಜರುಗುವ ಯಾವುದೇ ಮದುವೆ-ಮಂಗಳ ಕಾರ್ಯಗಳು ಸಿರಿಯಮ್ಮನವರ ಪದಗಳಿಲ್ಲದೆ ಜರುಗುವುದಿಲ್ಲ. ಅಷ್ಟರ ಮಟ್ಟಿಗೆ ಸುತ್ತಲಿನ ಪರಿಸರದಲ್ಲಿ ಖ್ಯಾತನಾಮರಾಗಿದ್ದಾರೆ. ನಾಡೋಜ ಸಿರಿಯಜ್ಜಿಯ ನಂತರ ಇಂದಿನ ಯುವತಿಯರಿಗೆ ಪದಗಳನ್ನು ಕಲಿಸಿ ಕೊಡುವ ಮೂಲಕ ತನ್ನ ನಂತರದ ಮುಂದಿನ ಪೀಳಿಗೆಗೆ “ಸಿರಿಯಜ್ಜಿ ಪದಗಳನ್ನು ಹೊತ್ತೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ.

MORE NEWS

ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’

29-03-2024 ಬೆಂಗಳೂರು

ಅಂಭು ಪ್ರಕಾಶನದಿಂದ ಬೇಸಿಗೆ ರಜಾ- ಸಖತ್ ಮಜಾ ‘ಹಾಡಿನ ಬಂಡಿ ಸ್ಪರ್ಧೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ...

ಪ್ರಕಾಶ ಖಾಡೆ ‘ಬಾಳುಕುನ ಪುರಾಣ’ ಕೃತಿಗೆ ಕಸಾಪ ಅರಕೇರಿ ದತ್ತಿ ಪ್ರಶಸ್ತಿ

29-03-2024 ಬೆಂಗಳೂರು

ಬಾಗಲಕೋಟೆ: ಸಾಹಿತಿ ಡಾ.ಪ್ರಕಾಶ ಗ.ಖಾಡೆ ಅವರ ‘ಬಾಳುಕುನ ಪುರಾಣ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್...

2024ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

29-03-2024 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು ಕಾದಂಬರಿ ಪುರಸ್ಕಾರ 2024ʼ ರೂ. 2 ಲಕ್ಷ 69 ಸ...