ಕೃಷ್ಣಾನಂದ ಕಾಮತ್‌ ಅವರ ಕ್ಯಾಮೆರಾ ಕಣ್ಣಿನಲ್ಲಿ ಕಂಗೊಳಿಸಿದ ಕಲೆ 


ಕೀಟ ವಿಜ್ಞಾನಿಯಾಗಿದ್ದರೂ ಕ್ಯಾಮೆರಾ ಕಣ್ಣಿನಿಂದ ಜಗತ್ತಿನ ವಿಸ್ಮಯಗಳನ್ನುಸೆರೆ ಹಿಡಿಯುವ ಹವ್ಯಾಸದ ಕೃಷ್ಣಾನಂದ ಕಾಮತ್ ಅವರು, ತಮ್ಮ ಜೀವಿತದ ಕೊನೆಯ ಅರ್ಧ ಭಾಗದ (ಸುಮಾರು 35-40 ವರ್ಷ) ಅವಧಿಯುದ್ದಕ್ಕೂ ಕ್ಲಿಕ್ಕಿಸಿದ ಸುಮಾರು 1,25 ಲಕ್ಷ ಛಾಯಾಚಿತ್ರಗಳ ಡಿಜಟಲೀಕರಣ ಕಾರ್ಯವು ನಡೆದಿದ್ದು, ಕಲೆ ಹಾಗೂ ಕಲಾಕಾರ- ಹೀಗೆ ಏಕಕಾಲಕ್ಕೆ ಸಮಾನ ಗೌರವ ಪಡೆಯುವ, ಅಭಿಮಾನದ ಹಿರಿಮೆಯ ಅಪರೂಪದ ಪ್ರಯತ್ನವನ್ನು ವೆಂಕಟೇಶ ಮಾನು ಅವರು ದಾಖಲಿಸಿದ್ದಾರೆ.   

 

ಇವರು, ತಮ್ಮ ಸ್ವಂತ ಕಣ್ಣುಗಳಿಂದ ನೋಡಿದ್ದು ಕಡಿಮೆ; ಜೀವಿತಾವಧಿಯ ಒಟ್ಟು 72 ವರ್ಷಗಳ ಪೈಕಿ ಮೊದಲರ್ಧದ ವರ್ಷಗಳು (ಸುಮಾರು 35-40 ವರ್ಷಗಳು) ಬರಿಗಣ್ಣಿನಿಂದ ನೋಡಿದ್ದರೆ, ಬದುಕಿನ ಕೊನೆಯ ಅರ್ಧಕ್ಕಿಂತ (ಸುಮಾರು 35 ವರ್ಷಗಳು) ಹೆಚ್ಚು ವರ್ಷಗಳನ್ನುಕ್ಯಾಮೆರಾ ಕಣ್ಣುಗಳಿಂದ ನೋಡಿದ್ದೇ ಹೆಚ್ಚು; ಸಾಧಿಸಿದ್ದು ಅಚ್ಚರಿ. ತಮ್ಮ ಸ್ವಂತ ಕಣ್ಣಿನಿಂದ ಓದಿ ತಿಳಿದಿದ್ದು-ಕೀಟಶಾಸ್ತ್ರ. ನ್ಯೂಯಾರ್ಕ್ ನಲ್ಲಿ ಪಿಎಚ್ ಡಿ ಪೂರ್ಣ. ವಿದ್ವತ್ ವಲಯದ ಹೆಸರು-ಕೀಟವಿಜ್ಞಾನಿ.. ಸಂಶೋಧನೆ-ಬೋಧನೆಯಲ್ಲಿ ಅನುಭವದ ಅನನ್ಯತೆ ಕಂಡಿದ್ದು, ತಮ್ಮ ಸ್ವಂತ ಕಣ್ಣುಗಳಿಂದಲೇ! 

ಪತ್ನಿ, ಮಕ್ಕಳು, ಸಂಬಂಧಿಕರು, ಸಮಾಜ-ಭಾರತೀಯ ಸಂಸ್ಕೃತಿ-ಸಂಸ್ಕಾರ, ಜನಾಂಗೀಯ ಆಚಾರ-ವಿಚಾರ, ಬದುಕಿನ ರೀತಿ-ನೀತಿಗಳು ಎಲ್ಲವೂ ಬರಿಗಣ್ಣಿನಿಂದಲೇ ನೋಡಿ ತಿಳಿದಿದ್ದು, ಓದಿದ್ದು, ಅಷ್ಟೇ ಏಕೆ?   ಅಕಾಡೆಮಿಕ್ ವಲಯದ ವಿದ್ವತ್ ಪೂರ್ಣ ಪುಸ್ತಕಗಳನ್ನು ಬರೆಯಲು ಕಂಡಕಂಡಿದ್ದನ್ನೆಲ್ಲ ತಿಳಿದು ಕೊಂಡಿದ್ದು ಬರಿಗಣ್ಣಿನಿಂದಲೇ! 

ಇವರು, ತಮ್ಮ ಸ್ವಂತ ಕಣ್ಣುಗಳಿಂದ ನೋಡಿ ತಿಳಿದ ಯಾವುದೂ ಈಗ (1934-2002) ಉಳಿದಿಲ್ಲ. ಆದರೆ, ಕ್ಯಾಮೆರಾ ಕಣ್ಣಿನಿಂದ ನೋಡಿ, ಜಗತ್ತಿಗೆ ನೀಡಿದ್ದು ಮಾತ್ರ ಅವರನ್ನು ಜೀವಂತವಾಗಿರಿಸಿದೆ. ಕ್ಯಾಮೆರಾ ಕಣ್ಣಿನ ಈ ಕೊಡುಗೆಗಳೇ ಅವರ ಹೆಸರನ್ನು ಅಮರವಾಗಿಸಿವೆ!  ಇದು ಪವಾಡವಲ್ಲ; ಅದ್ಭುತ ವ್ಯಕ್ತಿತ್ವವೊಂದರ ಸಹಜ ಪ್ರಭಾವದ ಪರಿ. ಈ ಮೋಡಿ ರೂಪದ ವಾಸ್ತವತೆಗೆ ಹೀಗೆ ಹೆಸರಿಸಬಹುದು-ಕೃಷ್ಣಾನಂದ ಕಾಮತ್! 

ಲಕ್ಷ ಫೋಟೋಗಳತ್ತ ಲೋಕ ಲಕ್ಷ್ಯ!

ಕೃಷ್ಣಾನಂದ ಕಾಮತ್ -ಸಾಹಿತಿ, ಕೀಟವಿಜ್ಞಾನಿ, ಪರಿಸರವಾದಿ, ಛಾಯಾಚಿತ್ರಕಾರ ಹೀಗೆ ವಿದ್ವತ್ತಿನ ಹಲವು ಮುಖಗಳ ಮೊತ್ತ. ಪ್ರತಿ ಮುಖದ ಆಂತರ್ಯವು ಸ್ವಯಂ ಪ್ರಭೆ ಉಳ್ಳದ್ದು.ಕಾಮತ್ ಅವರು ತಮ್ಮೊಳಗಿನ ಸೃಜನಶೀಲತೆಯ ಅಭಿವ್ಯಕ್ತಿಗೆ ಕ್ಯಾಮೆರಾ ಕಣ್ಣುಗಳೇ ಅನಿವಾರ್ಯವಾದವು. ಅದರ ಪರಿಣಾಮ, ಲಕ್ಷ ಲಕ್ಷ ಛಾಯಾಚಿತ್ರಗಳು. ಕೇವಲ ಸಂಕ್ಯೆಯಲ್ಲಿ ಮಾತ್ರವಲ್ಲ; ಗುಣಮಟ್ಟದಲ್ಲೂ ಅಪರೂಪ ಎನಿಸಿವೆ. ಆದ್ದರಿಂದ, ಲೋಕದ ಲಕ್ಷ್ಯವೇ ಈಗ ಕಾಮತ್ ಅವರ ಛಾಯಾಗ್ರಹಣದ ವಿಸ್ಮಯದತ್ತ ಹೊರಳುವಂತಾಗಿದೆ.

ಕುಟುಂಬ, ನೆರೆಹೊರೆಯರು, ಸಂತೆ, ಸಮಾಜ, ನಾಡಿನ ಸ್ವಾರ್ಥ; ದುಡಿಯುವ, ಮಿಡಿಯುವ ಜೀವಗಳು, ತುತ್ತು ಅನ್ನಕ್ಕಾಗಿ ಕಣ್ ಕಣ್ಣು ಬಿಡುತ್ತಿರುವ ಮಕ್ಕಳು, ಕಾಡಿನ ರಮ್ಯತೆ: ಪ್ರಾಣಿ-ಪಕ್ಷಿಗಳ ಸಮನ್ವಯದ-ಸ್ವಚ್ಛಂದದ  ಬದುಕು, ಅಷ್ಟೇಕೆ? ತರಕಾರಿಗಳು; ಅವರು ಕಂಡ ವಿಚಿತ್ರ, ವಿಸ್ಮಯಕಾರಿ ಹಾಗೂ ಕುತೂಹಲದ ಆಕಾರಗಳನ್ನೂ ಸಹ ಕ್ಲಿಕ್ಕಿಸಿದ್ದಾರೆ. ಅರೆಕ್ಷಣಗಳಲ್ಲಿ ಮಾಯವಾಗುವುದೋ ಎಂಬ ಆತಂಕದೊಂದಿಗೆ ಮೋಡಗಳಾಟದ  ಮೋಡಿಯನ್ನು ಶಾಶ್ವತವಾಗಿ ಸೆರೆ ಹಿಡಿದಿದ್ದಾರೆ. ಹೀಗೆ ಒಂದೇ ಎರಡೇ...1.25 ಲಕ್ಷಕ್ಕೂ ಅಧಿಕ ಅಪರೂಪದ  ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ. ಅಲ್ಲಲ್ಲ;;;! ಈ ಎಲ್ಲ ವಸ್ತು-ಪ್ರಾಣಿ-ಪಕ್ಷಿಗಳು ಕ್ಯಾಮೆರಾ ಕಣ್ಣಿನಲ್ಲಿ ಅಪರೂಪದ ಗುಣ-ಸ್ಪರ್ಶದ ಕಲಾತ್ಮಕತೆಯನ್ನು ಪಡೆದಿವೆ ಎಂಬುದೇ ಸೂಕ್ತ. 

ಆಸಕ್ತಿಕರ ಸಂಗತಿ ಎಂದರೆ, ಸುಮಾರು 50 ಸಾವಿರಗಳಷ್ಟು ಛಾಯಾಚಿತ್ರಗಳು ತಮ್ಮೂರು ಹೊನ್ನಾವರದ ಸುತ್ತಮುತ್ತಲಿನ ಪ್ರದೇಶದ ಸೊಗಡಿನಲ್ಲಿವೆ. ಉತ್ತರಕನ್ನಡ ಜಿಲ್ಲೆಯ ಕಾಡು, ಗ್ರಾಮೀಣ ಜನಜೀವನ, ಗವಳಿ, ಕುಣಬಿ, ಸಿದ್ಧಿಗಳು ಹೀಗೆ ಇಡೀ ಅರಣ್ಯವಾಸಿಗಳ ನೈಜಚಿತ್ರಣದ ದರ್ಶನವಾಗುತ್ತದೆ. ಕಾಮತ್ ಅವರು ತೆಗೆದ ಛಾಯಾಚಿತ್ರಗಳ ಕಣಜವೇ ಅವರ ವ್ಯಕ್ತಿತ್ವದ ಸಮೃದ್ಧ ರಾಶಿಗೆ ಕನ್ನಡಿ ಹಿಡಿಯುತ್ತದೆ. ಒಬ್ಬ ವ್ಯಕ್ತಿಯಾಗಿ, ನಾಡು-ಕಾಡನ್ನು ಅಲೆದು ಬದುಕನ್ನು ಸೂಕ್ಷ್ಮವಾಗಿ ನೋಡುವ ವ್ಯವಧಾನದೊಂದಿಗೆ  ಲಕ್ಷ -ಲಕ್ಷ ಛಾಯಾಚಿತ್ರಗಳನ್ನು ಕ್ಲಿಕ್ಕಿಸಬಹುದೆ? ಎಂಬ ಅಚ್ಚರಿಯ ಜೊತೆ ಅಭಿಮಾನವೂ ಮೂಡಿಸುತ್ತದೆ. 

www.kamat.com ಎಂಬ ವಿರಾಟ ಲೋಕ

ಲಕ್ಷ-ಲಕ್ಷ ಛಾಯಾಚಿತ್ರಗಳ ಪೈಕಿ ಅಪರೂಪದ್ದು ಎಂದು ಪರಿಗಣಿಸಬಹುದಾದ 1.25 ಲಕ್ಷ ಛಾಯಾಚಿತ್ರಗಳನ್ನು ಪುತ್ರ ವಿಕಾಸ್ ಕಾಮತ್, ತಮ್ಮ ತಂದೆಯ(ಕೃಷ್ಣಾನಂದ ಕಾಮತ್ ಮರಣ; 2002ರ ಫ್ರೆಬ್ರವರಿ 20) ಸ್ಮರಣೆಯಲ್ಲಿ Kamat's Potpourri ಹೆಸರಿನಲ್ಲಿ  www.kamat.com ವೆಬ್ ಸೈಟ್ ಆರಂಭಿಸಿ, ಅಪ್ ಲೋಡ್ ಮಾಡುತ್ತಿದ್ದಾರೆ. 34 ಸಾವಿರ ಛಾಯಾಚಿತ್ರಗಳನ್ನು ನೋಡಬಹುದು. 20ಸಾವಿರದಷ್ಟು ಛಾಯಾಚಿತ್ರಗಳು ಡಿಜಿಟಲೀಕರಣಗೊಳ್ಳಬೇಕಿದೆ. 1 ಲಕ್ಷಕ್ಕೂ ಅಧಿಕ ಇರುವ ಛಾಯಾಚಿತ್ರಗಳನ್ನು ಶಾಲಾ-ಕಾಲೇಜುಗಳಲ್ಲಿ ಆಗಾಗ ಪ್ರದರ್ಶಿಸುವ ಯೋಜನೆಯೂ ಕಾರ್ಯವ್ಯಾಪ್ತಿಯಲ್ಲಿದೆ. ಈ ಎಲ್ಲ ಛಾಯಾಚಿತ್ರಗಳ ವರ್ಗೀಕರಣವು ಒಂದು ಸವಾಲು. ಅಷ್ಟೊಂದು ವೈವಿಧ್ಯತೆ ಛಾಯಾಚಿತ್ರಗಳಲ್ಲಿದೆ. ಅಪ್ರತಿಮ ಕಲಾಕಾರನ ಅದ್ಭುತ ಛಾಯಾಚಿತ್ರಗಳ ಉಳಿಸುವಿಕೆ ಮಾತ್ರವಲ್ಲ; ಆ ಮೂಲಕ ಕಲಾಕಾರನಿಗೆ ಹಾಗೂ ಕಲೆಗೆ ಬೆಲೆ ತಂದುಕೊಡುವ ಘನ ಕಾರ್ಯದ ಹಿರಿಮೆಯನ್ನು ಇಲ್ಲಿ ಕಾಣಬಹುದು. ಈ ಹಿನ್ನೆಲೆಯಲ್ಲಿ, ಪತ್ನಿ ಜೋತ್ಸ್ನಾ ಕಾಮತ್ ಹಾಗೂ ಪುತ್ರ ವಿಕಾಸ್ ಅವರ ಕರ್ತವ್ಯ ಪ್ರಜ್ಞೆ -ಮಾದರಿ ಹಾಗೂ ಅನುಕರಣೀಯ. 

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...