ಕೃಷಿ ಸಾಹಿತ್ಯ ಪರಿಪೂರ್ಣವಾಗಲು ವಿಜ್ಞಾನ ಅಗತ್ಯ!


ಬೆಂಗಳೂರು: "ಕೃಷಿ ಸಾಹಿತ್ಯಕ್ಕೆ ಒಂದು ರೀತಿಯಾಗಿ ವೈಜ್ಞಾನಿಕ ಸಾಹಿತ್ಯವಿದ್ದಂತೆ. ವಿಜ್ಞಾನವನ್ನು ಅರಿತು ಅದನ್ನು ವೈಚಾರಿಕವಾಗಿ ಬಿಂಬಿಸುವ ಅನೇಕ ಬರಹಗಳನ್ನು ಹಿಂದಿನಿಂದಲೂ ನಮ್ಮ ಹಿರಿಯರು ನೀಡಿದ್ದಾರೆ. ಆ ಎಲ್ಲಾ ದಾಖಲೆಗಳು ಒಂದು ಕೃಷಿ ಪರಿಕಲ್ಪನೆಯಲ್ಲಿ ವೈಜ್ಞಾನಿಕ ಹಾದಿ ತುಳಿಸುತ್ತದೆ. ಹಾಗಾಗಿ ಕೃಷಿ ಜೊತೆಗೆ ವಿಜ್ಞಾನವೂ ಸೇರಿಕೊಂಡಾಗ ಮಾತ್ರ ಅದು ಪರಿಪೂರ್ಣ ಕೃಷಿ ಸಾಹಿತ್ಯವಾಗುತ್ತದೆ," ಎಂದು ಟಿ.ಎಸ್‌ ಚನ್ನೇಶ್‌ ಹೇಳಿದರು.

ಅವರು ಬುಕ್‌ ಬ್ರಹ್ಮ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ "ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವ2025"ರ ಎರಡನೇ ದಿನದ ಅಂಗಳ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ "ನೆಲದ ಮಾತು: ಕೃಷಿ ಬರವಣಿಗೆಯ ನೆಲೆ-ಹಿನ್ನೆಲೆ" ಗೋಷ್ಠಿಯಲ್ಲಿ ಮಾತನಾಡಿದರು. ಈ ಗೋಷ್ಠಿಯಲ್ಲಿ ಇತಿಹಾಸ, ಕಾರ್ಯ ರೂಪ ಮತ್ತು ಮಾಧ್ಯಮಗಳ ಕೊಡುಗೆಗಳ ಬಗ್ಗೆ ಚರ್ಚಿಸಲಾಯಿತು.

ನಂತರದಲ್ಲಿ ಮಾತನಾಡಿದ ಅವರು, "ವಿಜ್ಞಾನವೂ ಕೂಡ ಒಂದು ರೀತಿಯಾದಂತಹ ವೈಜ್ಞಾನಿಕ ಸಾಹಿತ್ಯ. ವಿಜ್ಞಾನಕ್ಕೆ ಒಂದು ಸಾರ್ವತ್ರಿಕ ಸತ್ವ ಇದೆ. ಅದು ತನ್ನನ್ನು ತಾನು ವಿಮರ್ಶೆಗೊಡ್ಡುತ್ತದೆ. ಕೃಷಿ ವಿಜ್ಞಾನದ ಬರಹಗಳಲ್ಲಿ ಕೆಲವು ಅಂಶಗಳನ್ನು ಅವೈಜ್ಞಾನಿಕವಾಗಿ ಬಿಂಬಿಸಲಾಗುತ್ತಿದೆ. ಕೃಷಿ ವಿಜ್ಞಾನದಲ್ಲಿ ಕೆಲವು ಜನಪದರ ಅನೇಕ ಲೇಖನಗಳು ಶತಮಾನದ ಹಿಂದೆಯೇ ರೂಪುಗೊಂಡಿದ್ದವು. ಬರಹಗಾರರು ತಮ್ಮ ಅನುಭವದ ದೃಷ್ಠೀಕೋನದಿಂದ ಅಳೆಯುವ ಕೆಲಸ ಮಾಡುತ್ತಿದ್ದಾರೆ. ಕೃಷಿ ವಿಜ್ಞಾನವನ್ನು ಬಳಸಿ ಸಾಹಿತ್ಯ ರಚಿಸುವವರಿಗೆ ಬಹುಪಾಲು ಜೈವಿಕವಾಗಿ ಸಂಪೂರ್ಣ ವೈಜ್ಞಾನಿಕ ಅಂಶಗಳನ್ನಿಟ್ಟುಕೊಂಡು ಸಾಹಿತ್ಯ ರಚನೆಯಾಗಿದೆ. ಆದರೆ ಇತ್ತೀಚಿಗೆ ಸ್ವಲ್ಪ ಕೃಷಿ ಸಾಹಿತ್ಯದ ಬರವಣಿಗೆ ಶೈಲಿ ಬದಲಾಗಿದೆ. ವಿಜ್ಞಾನವನ್ನು ನಾವು ಉತ್ತಮವಾಗಿ ಕಲಿಯಬೇಕೆಂದರೆ ವೈಜ್ಞಾನಿಕ ಅಂಶಗಳನ್ನು ಜನರ ಮುಂದೆ ತೆರೆದಿಡಬೇಕು. ಅರವತ್ತರ ದಶಕದ ನಂತರ ಕೃಷಿ ವಿಜ್ಞಾನದ ಕಲಿಕೆ ಜಾರಿಗೆ ಬಂತು. ಪ್ರಪ್ರಥಮವಾಗಿ ನೇರವಾಗಿ ಕೃಷಿ ವಿಚಾರಕ್ಕೆ ಹೋಗದೇ ಅಲ್ಲಿನ ವೈಜ್ಞಾನಿಕ ಅಂಶಗಳ ಸ್ಪಷ್ಟ ಅರಿವನ್ನು ಮೂಡಿಸಲಾಯಿತು. ಇಂತಹ ಅನೇಕ ಕೆಲಸಗಳು ಕೃಷಿ ಸಾಹಿತ್ಯದ ಬೆಳವಣಿಗ ಪ್ರಮುಖ ಪಾತ್ರವಹಿಸಿದವು," ಎಂದು ಹೇಳಿದರು.

ಇನ್ನೋರ್ವ ಸಂವಾದಕರಾಗಿ ಉಪಸ್ಥಿತರಿದ್ದ ಲೇಖಕ ಶಿವಾನಂದ ಕಳವೆ ಮಾತನಾಡಿ, "ಕೃಷಿ ಮತ್ತು ಸಾಹಿತ್ಯಕ್ಕೆ ಶತಮಾನಗಳ ಹಿಂದಿನ ಇತಿಹಾಸವಿದೆ. ಮಾಧ್ಯಮಗಳಲ್ಲಿ ಕೃಷಿಯ ಕುರಿತು ವಿಜ್ಞಾನಿಗಳು ಬರೆಯುತ್ತಿದ್ದರು. ಕೃಷಿಕರ ಕೈಗೆ ಶಿಬಿರಗಳು ಎನ್ನುವಂತಹ ಕಾರ್ಯಕ್ರಮಗಳು ಶುರುವಾದವು. ಮೊದಲನೆಯದಾಗಿ ಗಮನಿಸಿ-ದಾಖಲಿಸಿ, ಎರಡನೆಯದಾಗಿ ಪ್ರಶ್ನಿಸಿ-ಪರಿಚಯಿಸಿ ಮೂರನಯದಾಗಿ ಬರೆಯುತ್ತಾ-ಬೆಳೆಯಬೇಕು. ಬರೆಯುವವರು ಸೃಜನಶೀಲಾತ್ಮಕಾವಾಗಿದ್ದಾಗ ಜನರ ಗಮನ ಸೆಳೆಯುತ್ತದೆ. ಮತ್ತು ಅದನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳುತ್ತಾರೆ. ರೈತರಿಗೆ ವಿಷಯವನ್ನು ಮುಟ್ಟಿಸುವ ಬರಹಗಳು ಸರಳೀಕೃತ ಭಾಷೆಯಲ್ಲಿರಬೇಕು. ಯಾಕೆಂದರೆ ರೈತನ ಭಾಷೆಗೂ ಮತ್ತು ವೈಜ್ಞಾನಿಕ ಸಾಹಿತ್ಯದ ಭಾಷೆಗೂ ತುಂಬಾ ವ್ಯಾತ್ಯಾಸವಿದೆ. ಆದ್ದರಿಂದ ಮಾಹಿತಿಯನ್ನು ಸಂಗ್ರಹಿಸುವ ಬರಹಗಾರರು ರೈತರರಿಗೆ ಹತ್ತಿರವಾದ ಭಾಷೆಯಲ್ಲಿರಬೇಕು. ನಾವು ಒಂದು ಬೀಜದ ಥಳಿಗೆ ಸಂಬಂಧಿಸಿದಂತೆ ಮಣ್ಣಿನ, ಹಾಗೂ ಅದರ ಬೆಳವಣಿಗೆಯ ಕುರಿತಾದಂತಹ ಆಯಾಮಗಳನ್ನು ಸಾಹಿತ್ಯದ ಮೂಲಕ ಪ್ರಚಾರಪಡಿಸಬೇಕು. ಜಲ ಸಂರಕ್ಷಣೆಯ ಹಲವು ವಿಚಾರಗಳನ್ನು ಅಡಿಕೆ ಪತ್ರಿಕೆ ಮೂಲಕ ಕೃಷಿಕರಿಗೆ ನೀಡಲಾಯಿತು. ಅನೇಕ ಕೃಷಿಕರು ತಮ್ಮ ತಮ್ಮ ಕೃಷಿ ಬದುಕಿನಕಲ್ಲಿ ನೀರಿನ ಕೊರತೆಯ ದಟ್ಟವಾದ ಸವಾಲುಗಳನ್ನು ಎದುರಿಸುತ್ತಾರೆ ಕರ್ನಾಟಕದ ವಿವಿಧ ಭಾಗಗಳಲ್ಲಿ ರೈತರಿಗೆ ಒಂದೊಂದು ಸವಾಲು. ಕಳೆದ ಮೂವತ್ತು ವರ್ಷದ ಅವಲೋಕನ ಮಾಡಿಕೊಂಡಾಗ 300 ಮಿಲಿ ಮೀಟರ್‌ ಮಳೆ ಬೀಳುವ ಚಳ್ಳಕೆರೆಯಲ್ಲೂ ಕೃಷಿಯಿದೆ. ಅತೀ ಹೆಚ್ಚು ಮಳೆ ಬೀಳುವ ಆಗುಂಬೆಯಲ್ಲೂ ಕೃಷಿ ಇದೆ. ಅದರ ಅರ್ಥ ವಾತಾವರಣಕ್ಕೆ ಅನುಗುಣವಾಗಿ ಕೃಷಿಕರು ತಮ್ಮ ಯೋಜನೆಯನ್ನು ರೂಪಿಸಿದರೆ ಆ ಕೃಷಿ ಯಶಸ್ವಿಯಾಗಬಹುದು. ಕೃಷಿಯಲ್ಲಿ ನಕರಾತ್ಮಕ ಯೋಚನೆಗಳನ್ನು ಬಿಟ್ಟು ಕೃಷಿ ಸಾಹಿತ್ಯದ ಮೂಲಕ ಸಕಾರಾತ್ಮಕ ಅಂಶಗಳನ್ನು ಬಳಸಿಕೊಂಡು ಯಶಸ್ವಿ ಕೃಷಿಕರಾಗಬಹುದು," ಎಂದರು.

ಕೃಷಿ ಬರಹಗಾರ್ತಿ ವಿ ಗಾಯತ್ರಿ ಮಾತನಾಡಿ, "ಕೃಷಿ ಬರಹಗಳನ್ನು ನಾವು ಮೊದಲನೆಯದಾಗಿ 1879ರಲ್ಲಿ ಗುರಿತಿಸಲಾಗಿದೆ. ಮತ್ತು ನಮ್ಮ ಹಿರಿಯರು ದಾಖಲಿಸಿದ್ದು, ಅನೇಕ ಕೃಷಿ ಬರಹಗಳನ್ನು ಸಂಗ್ರಹಿಸಿಡುವಂತಹ ಕೆಲಸವನ್ನು ಕೃಷಿ ಬರಹಗಾರರು ಮಾಡಿದ್ದಾರೆ. ಇತ್ತೀಚಿಗೆ ಕೆಲವು ಬದಲಾವಣೆಗಳು ಆಗಿದ್ದು, ಅದಕ್ಕೆ ಮುಖ್ಯ ಕಾರಣ, ರೈತರು ಆಧುನಿಕ ಕೃಷಿ ಪದ್ದತಿಗೆ ಹೊಂದಿಕೊಂಡು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಭೂಮಿಯ ಫಲವತ್ತತೆ ಮತ್ತು ರಾಸಾಯನ ಗೊಬ್ಬರ ಬಳಕೆ ಮತ್ತು ಇಳುವರಿಯ ವಿಚಾರದಲ್ಲಿ ಮುಖ್ಯವಾದ ಹಿನ್ನಡೆಯಾಯಿತು. ಆದರೆ ಪ್ರಸಕ್ತ ಕೃಷಿ ಪದ್ದತಿಯಲ್ಲಿ ನಮ್ಮ ಹಿಂದಿನ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಸಾಮಾನ್ಯನಿಗೆ ಕೃಷಿ ಸಾಹಿತ್ಯವನ್ನು ನೀಡಲಾಯಿತು. ಇದು ಕೃಷಿ ಸಾಹಿತ್ಯಕ್ಕೆ ಕೊಟ್ಟ ಅಪೂರ್ವ ಕೊಡುಗೆ ಎನ್ನಬಹುದು. ಮಹಿಳಾ ಚಳುವಳಿಯಲ್ಲಿ "ಕೃಷಿಯಲ್ಲಿ ಮಹಿಳೆಯರು" ಎನ್ನುವ ಯೋಜನೆಯಡಿ ಅಧ್ಯಯನ ಮಾಡಿದಾಗ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಕೆಲಸ ಮಾಡುತ್ತಾರೆ. ಬೀಜ ಬಿತ್ತನೆಯಲ್ಲಿ ನಾವು ಮಹಿಳೆಯರ ಪಾತ್ರವನ್ನು ಗಮನಿಸುತ್ತಾ ಹೋದಾಗ ಕೂರಿಗೆಯಲ್ಲಿ ಬೀಜ ಮತ್ತು ಗೊಬ್ಬರವನ್ನು ಮಹಿಳೆಯರೇ ಹಾಕಬೇಕು. ಕೂರಿಗೆಯ ವೇಗಕ್ಕೆ ಹೊಂದಿಕೊಂಡು ಹೋಗುವ ಮಹಿಳೆಯರ ಕೌಶಲ್ಯ ಅಸಾಧ್ಯವಾದುದು. ರೈತ ಮಹಿಳೆಯರು ದಿನ ನಿತ್ಯದ ಕೆಲಸದಲ್ಲಿ ಮಾತನಾಡುತ್ತಾ ಒಬ್ಬರಿಂದ ಇನ್ನೊಬ್ಬರು ಹಲವು ವಿಷಯಗಳನ್ನು ಕಲಿಯುತ್ತಾ ಹೋಗುತ್ತಾರೆ. ಇದು ಕೃಷಿ ಕುಟುಂಬದ ಮಹಿಳೆಯರ ನೆಲಮೂಲ ಜ್ಞಾನವನ್ನು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮೂರು ತಾಳಿನ ಕೂರಿಗೆಯಲ್ಲಿ ಬಿತ್ತನೆ ಮಾಡುವ ಮೂಲ ಉದ್ದೇಶ ಒಂದು ತಾಳಿನ ಬಿತ್ತನೆ ಪಶು ಪಕ್ಷಿಗಳಿಗೆ ಹೋಗುತ್ತದೆ. ಇನ್ನೊಂದು ತಾಳಿನ ಬಿತ್ತನೆ ಆಳು-ಕಾಳುಗಳಿಗೆ ಹೋಗುತ್ತದೆ. ಇನ್ನೊಂದು ತಾಳಿನ ಪಾಲು ಮಾತ್ರ ರೈತನ ಕೈ ಸೇರುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಲೇಖಕ ಗಾಣದಾಳು ಶ್ರೀಕಂಠ ಅವರು ಸಮನ್ವಯಿಸಿದರು.

- ಕೆ ಎನ್ ರಂಗು ಚಿತ್ರದುರ್ಗ
ಎಸ್.ಡಿ.ಎಂ ಕಾಲೇಜು, ವಿದ್ಯಾರ್ಥಿ

MORE FEATURES

ಏಕಾಂತ ಹಾಗೂ ಲೋಕಾಂತದ ಬರಹಗಳಿವು..

08-12-2025 ಬೆಂಗಳೂರು

"ಇದು ಕವನದ ಪಲ್ಲವಿ. ಈ ಹಾಡು ಏಕಾಂತಕ್ಕೂ, ಲೋಕಾಂತಕ್ಕೂ ಸೇರಿಯೇ ಸಲ್ಲುವ ಹಾಡು. ಅಂತರಂಗ ಎನ್ನುವುದು ನಮ್ಮೊಳಗಿನದ್...

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...