ಕುಳಿತಲ್ಲೇ ಒಂದು ಸಾಹಸಯಾತ್ರೆ ಮಾಡಿದ ಅನುಭವ ನೀಡುವ ‘ಅಲೆಮಾರಿಯ ಡೈರಿ’


ನಮಗೆ ಬದುಕಲು ಸಕಲ ಸೌಲಭ್ಯಗಳಿದ್ದರೂ ನಮ್ಮ ವ್ಯವಸ್ಥೆಯನ್ನು ಸದಾ ಬೈಯುವ ನಾವು ಸಮುದ್ರ ಮಟ್ಟದಿಂದ 10,000 ಅಡಿ ಮೇಲಿನ ವಂಗ್ಚುಲಾದಂತಹ ಹಳ್ಳಿಗಳ ಜನರನ್ನು ನೋಡಿ ಕಲಿಯಬೇಕಾದದ್ದು ಬಹಳವಿದೆ ಎನ್ನುತ್ತಾರೆ ಬರಹಗಾರ್ತಿ ಅಶ್ವಿನಿ ಸುನಿಲ್. ಲೇಖಕ ಸಂತೋಷ್ ಕುಮಾರ್ ಮೆಹೆಂದಳೆ ಅವರ ಅಲೆಮಾರಿಯ ಡೈರಿ ಕೃತಿಯ ಬಗ್ಗೆ ಅವರು ಬರೆದಿರುವ ಟಿಪ್ಪಣಿ ನಿಮ್ಮ ಓದಿಗಾಗಿ...

ಕೃತಿ: ಅಲೆಮಾರಿಯ ಡೈರಿ
ಲೇಖಕರು : ಸಂತೋಷ್ ಕುಮಾರ್ ಮೆಹೆಂದಳೆ
ಪುಟಗಳ ಸಂಖ್ಯೆ: 197 ಬೆಲೆ :200
ಪ್ರಕಾಶಕರು : ವಿಕ್ರಮ್ ಪ್ರಕಾಶನ

ದೇಶ ಸುತ್ತು ಕೋಶ ಓದು ಎಂಬ ಮಾತಿದೆ. ಹಾಗೆಂದು ದೇಶ ಸುತ್ತುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ . ಆದರೆ ದೇಶ ಸುತ್ತಿದವರ ಅನುಭವದ ಕಥನವನ್ನು ಓದುವ ಅವಕಾಶವನ್ನು ಬಿಡಬಾರದು. ಪ್ರವಾಸ ಕಥನವನ್ನು ಓದುವುದು ಒಂದು ವಿಭಿನ್ನ ಅನುಭವ. ನಮ್ಮ ಜ್ಞಾನವನ್ನು ಹೆಚ್ಚಿಸುವುದಷ್ಟೇ ಅಲ್ಲ, ನಮ್ಮ ಮುಂದಿನ ಪ್ರವಾಸಕ್ಕೆ ಮಾರ್ಗದರ್ಶಿಯಾಗಬಲ್ಲದು.

ಹೌದು ಪ್ರತಿ ನೂರು ಮೀಟರಿಗೊಮ್ಮೆ ಬದಲಾಗುವ ವೇಷ, ಭಾಷೆ, ಆಹಾರ, ಸಂಸ್ಕೃತಿ, ಹವಾಮಾನಗಳಿಂದ ಪ್ರತಿ ಊರೂ ವಿಶೇಷವಾಗಿರುವ ನಮ್ಮ ದೇಶದ ಪ್ರತಿಯೊಂದು ಭಾಗವೂ ಪ್ರವಾಸಕ್ಕೆ ಯೋಗ್ಯವಾಗಿದೆ , ಅಷ್ಟೇ ಶ್ರೀಮಂತ ಇತಿಹಾಸವನ್ನೂ ಹೊಂದಿದೆ. ಪ್ರತಿ ಸ್ಥಳಕ್ಕೂ ವಿಶೇಷ ಹಿನ್ನೆಲೆ ಇದೆ, ಲೆಕ್ಕವಿಲ್ಲದಷ್ಟು ಕಥೆಗಳು ಅಡಗಿದೆ. ಹಾಗಾಗಿ ಪ್ರವಾಸವೆಂದರೆ ಬರಿ ತಿರುಗಾಡುವುದು, ಫೋಟೋ ಕ್ಲಿಕ್ಕಿಸುವುದಷ್ಟೇ ಅಲ್ಲ ಅಲ್ಲಿಯ ಜನರ ಜೀವನ, ಸಂಸ್ಕೃತಿ, ಆಚರಣೆಗಳು ,ಪಾರಂಪರಿಕ ಮೌಲ್ಯಗಳನ್ನು ಅರಿಯುವುದು ಎನ್ನುತ್ತಾ ಮೆಹಂದಳೆಯವರು ತಮ್ಮ 'ಅಲೆಮಾರಿಯ ಡೈರಿ' ಕೃತಿಯಲ್ಲಿ ಇದೆಲ್ಲವನ್ನು ಸುಂದರವಾಗಿ ಅನಾವರಣಗೊಳಿಸಿದ್ದಾರೆ.

ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಿತ ಅಂಕಣ ಬರಹಗಳ ಸಂಗ್ರಹವೇ ಅಲೆಮಾರಿಯ ಡೈರಿ. ಈ ಪ್ರವಾಸ ಕಥನದಲ್ಲಿ ನಮ್ಮ ದೇಶದ ಉತ್ತರ ಭಾಗ ಹಾಗೂ ಈಶಾನ್ಯ ಭಾಗದ ವಿಶಿಷ್ಟ ಪ್ರದೇಶಗಳ ಪರಿಚಯವಷ್ಟೇ ಅಲ್ಲ, ರಾಜಸ್ಥಾನ, ಮಹಾರಾಷ್ಟ್ರ ,ಒಡಿಸ್ಸಾ ಅಂಡಮಾನ್ ನಂತಹ ಪ್ರದೇಶಗಳ ವಿಶಿಷ್ಟ ಪ್ರವಾಸಿ ತಾಣಗಳ ತಮ್ಮ ಅನುಭವದ ಬುತ್ತಿಯನ್ನು ಹಂಚಿಕೊಂಡಿದ್ದಾರೆ.

ಮಣಿಪುರದ ತುತ್ತ ತುದಿಯಿಂದ ಆರು ತಾಸು ಪ್ರಯಾಣ ಮಾಡಿ ತಲುಪಬೇಕಾದ ಯಾಂಖುಲ್ಲೇನ್ ಬಗ್ಗೆ ಗೂಗಲ್ ನ ಮಾಹಿತಿಯೂ ಸೀಮಿತ . ಇಲ್ಲಿಯ ಧೂಳು ತುಂಬಿದ ದಾರಿಯಲ್ಲಿ ಆರ್ಯರ ಹೆಜ್ಜೆ ಗುರುತುಗಳು ನೆಟ್ಟ ಕಥನ ಓದುತ್ತಾ ಜೀವಮಾನದಲ್ಲೊಮ್ಮೆ ಅಲ್ಲಿಗೆ ಹೋಗಬೇಕೆಂದು ಮನಸ್ಸು ಬಯಸುವುದರಲ್ಲಿ ಆಶ್ಚರ್ಯವಿಲ್ಲ.

ಸ್ಪಿತಿ ವ್ಯಾಲಿಗೆ ಬರುವ ದಾರಿಯಲ್ಲಿ ಹತ್ತಾರು ಕಿಲೋಮೀಟರ್ ಗಳಿಗೊಮ್ಮೆ ಸಿಗುವ ಒಂದೆರಡು ಮನೆಗಳಲ್ಲಿ ಗ್ರಹಿಣಿಯರೇ ನಡೆಸುವ ದುಂಗಡಿ ಎಂಬ ಓಪನ್ ಟೆಂಟ್ ಹೌಸ್ ಸರ್ವಿಸ್ ಗಳು ನಮ್ಮಲ್ಲಿನ ಕೈಗಾಡಿಗಳಂತೆ ಎನ್ನುತ್ತಾರೆ ಲೇಖಕರು. ಅಲ್ಲಿ ಊಟ, ನೀರು, ಬಿಸ್ಕೆಟ್, ಚಹಾ, ಮ್ಯಾಗಿ, ಗುಳಿಗೆ, ಪೆಟ್ರೋಲ್, ಬಟ್ಟೆ ಒಗೆದುಕೊಡುವುದು, ಬಟ್ಟೆ ಒಣಗಿಸಿ ಕೊಡುವಂತಹ ಹತ್ತು ಹಲವು ಸೇವೆಗಳನ್ನು ಒದಗಿಸುವ ಗ್ರಹಿಣಿಯರದು ಕೇವಲ ವ್ಯವಹಾರವಲ್ಲ ,ಅಮ್ಮನಂತೆ ದಾರಿಯಲ್ಲಿ ತಿನ್ನಲು ಪರೋಟಗಳನ್ನು ಕಟ್ಟಿಕೊಡುವುದನ್ನು ಓದುತ್ತಾ ಆಕೆ ಸಾಕ್ಷಾತ್ ಅನ್ನಪೂರ್ಣೇ ಎಂದು ನಮಗೂ ಅನ್ನಿಸುತ್ತದೆ.

ಹಿಮಾಚಲದ ಪರ್ವತದ ಅಡಿಯಲ್ಲಿ ಇಲ್ಲಿಯವರೆಗೆ ನಿರುಮ್ಮಳವಾಗಿದ್ದ ಕಾಲ್ಗಾ-ಪುಲ್ಗಾ ಎಂಬ ಊರು ಗೂಗಲ್ ನ ಕೈಗೆ ಸಿಲುಕಿ, ದುಡ್ಡಿನ ಲೆಕ್ಕವಿಲ್ಲದೆ ವೀಕೆಂಡ್ ಬರುವುದೇ ಸುತ್ತಾಡಲು ಎಂದುಕೊಂಡಿರುವ ಹೊಸ ತಲೆಮಾರಿನಿಂದ ಮಲಿನಗೊಳ್ಳುವ ದಿನ ಹೆಚ್ಚು ದೂರ ಇಲ್ಲ ಎನ್ನುವುದು ವಿಷದವೇ ಹೌದು. ಬಹುಶಃ ಇಲ್ಲಿಗೆ ಸುಲಭವಾಗಿ ತಲುಪಲು ಸಾಧ್ಯವಾಗದೆ ಇರುವ ಕಾರಣ ಕಾಲ್ಗಾ- ಪುಲ್ಗಾ ಇನ್ನೂ ಕೂಡಾ ಶುದ್ಧವಾಗಿದೆ ಎನ್ನುವುದು ಒಂದು ನೆಮ್ಮದಿಯಾದರೆ, ಅದು ಹೀಗೆ ಇರಲಿ ಎಂದು ಮನಸ್ಸು ಬಯಸುತ್ತದೆ.

ನಮಗೆ ಬದುಕಲು ಸಕಲ ಸೌಲಭ್ಯಗಳಿದ್ದರೂ ನಮ್ಮ ವ್ಯವಸ್ಥೆಯನ್ನು ಸದಾ ಬೈಯುವ ನಾವು ಸಮುದ್ರ ಮಟ್ಟದಿಂದ 10,000 ಅಡಿ ಮೇಲಿನ ವಂಗ್ಚುಲಾದಂತಹ ಹಳ್ಳಿಗಳ ಜನರನ್ನು ನೋಡಿ ಕಲಿಯಬೇಕಾದದ್ದು ಬಹಳವಿದೆ. ಸರಿಯಾದ ರಸ್ತೆ , ಟೀವಿ ,ಮೊಬೈಲ್, ಪತ್ರಿಕೆ ಹೀಗೆ ಯಾವ ಸಂಪರ್ಕವೂ ಇಲ್ಲದಿದ್ದರೂ ಮನೆಯ ಅಷ್ಟೂ ಜನ ಇರುವ ಚಿಕ್ಕ ಕೋಣೆಯಲ್ಲಿ ಮಾತನಾಡುತ್ತಾ ತಮ್ಮ ಜೀವನದ ಸವಿಯ ಅನುಭವಿಸುವ ಪರಿಯನ್ನು ಓದುತ್ತಿದ್ದರೆ ಮನಸ್ಸು ಅಲ್ಲಿಗೆ ಓಡುತ್ತದೆ.

ಪ್ರಕೃತಿಯೇ ಎಲ್ಲವನ್ನು ಕಲಿಸುತ್ತದೆ

ಅರುಣಾಚಲದ ಹೆಗಲು ಸರಿದಂತೆ ಇರುವ ಮಿನ್ ಚುಕಾ ಇರಬಹುದು, ನಮ್ಮೆಲ್ಲರಿಗೂ ಕೇಳಿ ಗೊತ್ತಿರುವ ಕಾರ್ಗಿಲ್ ಸಮೀಪದ ಮುಲ್ಬೇಕ್ ಇರಬಹುದು ಇಂತಹ ಹಲವಾರು ಸುಂದರ ಪ್ರದೇಶಗಳ ಚಿತ್ರಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ನೋಡುವಾಗ

ಹಿಮ ಪರ್ವತಗಳು, ಜಲಪಾತಗಳು, ಹಸಿರು ಬೆಟ್ಟಗಳು, ಹೀಗೆ ವರ್ಣಮಯ ರಂಗೋಲಿಯಂತೆ ನಮಗೆ ಕಾಣುವ ಈ ಊರುಗಳಲ್ಲಿರುವ ಜನರ ಜೀವನ ಆದಷ್ಟು ದುಸ್ತರವಾದದ್ದು ಎನ್ನುವುದನ್ನು ಓದಬಹುದಾದರೂ ಸಂಪೂರ್ಣವಾಗಿ ಕಲ್ಪಿಸಿಕೊಳ್ಳುವುದು ಕಷ್ಟವೇ. ಆದರೆ ಅಲ್ಲಿ ಬದುಕುವ ರೀತಿಯನ್ನು ಪ್ರಕೃತಿ ಅವರಿಗೆ ಕಲಿಸಿದೆ. ಮಳೆಗಾಲ, ಚಳಿಗಾಲದಲ್ಲಿ ನೀರಿಗೆ ಅದೆಷ್ಟು ಅಭಾವ ಎಂದರೆ ಹಿಮಕರಗಿದಾಗ ಸಂಗ್ರಹವಾಗುವ ಹನಿ ಹನಿ ನೀರೇ ಗತಿ ಎನ್ನುತ್ತಾ, ಲೇಖಕರು ಆ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಬೂದಿಯೇ ಬೆಳಗ್ಗಿನ ಸ್ವಚ್ಛತಾ ಅಭಿಯಾನಕ್ಕೆ ಸಹಾಯಕ ಎಂದು ಅರಿವು ಆದ ನಂತರ ಇಂತಹ ಅನುಭವಗಳಿಂದಲೂ ಬದಲಾಗದಿದ್ದರೆ ಹೇಗೆ ಎಂದು ಪ್ರಶ್ನಿಸುವುದು ,ನಾವು ಕೂಡ ನಮ್ಮನ್ನು ಪ್ರಶ್ನೆ ಮಾಡಿಕೊಳ್ಳಬೇಕಾದ ಸಂಗತಿ.

ಇನ್ನು ಅಸ್ಸಾಮಿನ ಮಜೂಲಿಯದ್ದು ವಿಭಿನ್ನ ಚಿತ್ರಣ. ಎತ್ತೆಂದರತ್ತ ನೀರು . ಕೂಸು ಹುಟ್ಟುವುದರಿಂದ ಸಾವಿನ ಮೆರವಣಿಗೆಯ ತನಕ ಎಲ್ಲಾ ದೋಣಿಯ ಮೂಲಕವೇ. ಪಕ್ಕದ ಮನೆಗೆ ಹೋಗಬೇಕೆಂದರೂ ದೋಣಿಯಲ್ಲಿ ಬರಬೇಕು ಎನ್ನುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ.

ಹೀಗೆ ಅದೆಷ್ಟೇ ಕಷ್ಟ ಇದ್ದರೂ ತಾವು ಇದ್ದ ನೆಲ ಬಿಡದೆ ಬದುಕುವ ಅವರ ಪರಿಗೆ ಒಂದು ಸಲಾಂ!!

ಅಂದಹಾಗೆ ಇಲ್ಲಿರುವ ಪ್ರವಾಸ ಕಥನ ಚಳಿಯಲ್ಲಿ ಮರ ಗಟ್ಟುವ, ಹಿಮದಿಂದ ಆವೃತವಾದ ಸುಂದರ ಸೇಬು ಹಣ್ಣಿನ ತೋಟಗಳಿರುವ ಈಶಾನ್ಯ ಭಾರತ , ಉತ್ತರ ಭಾರತದ ಹಳ್ಳಿಗಳದ್ದಷ್ಟೇ ಅಲ್ಲ. ರಣರಣ ಸೆಕೆಗೆ ಕುಡಿದ ನೀರೂ ಕ್ಷಣದಲ್ಲಿ ಆವಿಯಾಗುವಂತಹ ಬಿಸಿಲ ನಾಡಿನದ್ದೂ ಇದೆ. ಜಗತ್ತಿನ ಒದ್ದೆ ಮರುಭೂಮಿ ಎಂದು ಕರೆಸಿಕೊಳ್ಳುವ ಮೌಸನ್ ರಾಮ್ ನಂತಹ ವಿಚಿತ್ರ ಭೌಗೋಳಿಕ ಪ್ರದೇಶ, ಚೈನಾದ ಮಹಾಗೋಡೆಯ ತದ್ರೂಪಿಯಂತಿರುವ ನಮ್ಮ ಪಕ್ಕದ ಮಹಾರಾಷ್ಟ್ರದಲ್ಲಿರುವ ಮಾಂಗಿತುಂಗಿ, ಊರ ತುಂಬಾ ಚಿತ್ರ ಸಂತೆ ಇರುವ ಒಡಿಸ್ಸಾದ ಪುರಿ ಮುಂತಾದ ಸ್ಥಳಗಳ ವಿಶಿಷ್ಟತೆಯ ಪರಿಚಯವಿದೆ.

ಬಹುಶಃ ಎಲ್ಲವನ್ನು ಗೂಗಲ್ ನಲ್ಲಿ ನೋಡಿಕೊಂಡು ಹೋಗುತ್ತೇವೆ ಎನ್ನುವುದು ಮೂರ್ಖತನ. ಪ್ರವಾಸ ಹೋದವರ ಅನುಭವದ ಮಾತುಗಳು ಇಂತಹ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗುವವರಿಗೆ ಉಪಯುಕ್ತವಾಗಬಲ್ಲದು. ಲೇಖಕರೇ ಹೇಳುವಂತೆ ಮಣಿಪುರದ ಹಳ್ಳಿಯ ಪ್ರವಾಸಿ ಸ್ಥಳಗಳ ಬಗ್ಗೆ ಗೂಗಲ್ ನ ಮಾಹಿತಿಯ ಮೇರೆಗೆ ಪ್ರವಾಸ ಹೋದರೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ದರಬೇಸಿ ಆಗಬೇಕಾದ ಪರಿಸ್ಥಿತಿ.

ವಿಪರ್ಯಾಸ ಎಂದರೆ ಕುಡಿಯುವ ನೀರಿಗೆ ಸರಿಯಾದ ವ್ಯವಸ್ಥೆ ಇರದಿದ್ದರೂ, ಹೇರಳವಾಗಿ ಬಿಕರಿಯಾಗುವ ತಂಪು ಪಾನಿಯಗಳು, ಲೇಸ್, ಕುರ್ಕುರೆಗಳಂತಹ ತಿಂಡಿಗಳು ಬದಲಾದ ನಮ್ಮ ಜೀವನ ಶೈಲಿಗೆ ಕನ್ನಡಿ ಎಂದಷ್ಟೇ ಹೇಳಬಹುದು.

ಒಟ್ಟಿನಲ್ಲಿ ಓದುತ್ತಾ ಕುಳಿತಲ್ಲೇ ಒಂದು ಸಾಹಸಯಾತ್ರೆಯನ್ನು ಮಾಡಿದ ಅನುಭವದ ಜೊತೆಗೆ, ನಮಗೆ ಗೊತ್ತಿಲ್ಲದ ಸಂಸ್ಕೃತಿಯ ಪರಿಚಯವನ್ನೂ ಮಾಡಿಸುತ್ತದೆ.

- ಅಶ್ವಿನಿ ಸುನಿಲ್

MORE FEATURES

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...

'ಮರ ಬರೆದ ರಂಗೋಲಿಯ ರಂಗಿನೋಕುಳಿ'

18-04-2024 ಬೆಂಗಳೂರು

'ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವ...