“ಓದಿಸಿಕೊಂಡು ಹೋಗುವ ಒಂಭತ್ತೂ ಕತೆಗಳು ತೇವಭಾವ ಉಳಿಸಿಬಿಡುತ್ತವೆ. ವ್ಯವಸ್ಥೆಯ ಭಾಗವಾದ ಹೆಣ್ಣು ತನ್ನತನಕ್ಕಾಗಿ ಹೋರಾಡಬೇಕಾದ ಅನಿವಾರ್ಯತೆ ಇದ್ದೇ ಇದೆ. ಆಗ ಸಿಗುವ ಸೋಲಿನಲ್ಲಿ ಗೆಲುವಿನಲ್ಲಿ ಅವಳು ಹೆಜ್ಜೆಗುರುತು ಮೂಡಿಸುತ್ತಾ ಸಾಗುತ್ತಾಳೆ,” ಎನ್ನುತ್ತಾರೆ ಮಲ್ಲಮ್ಮ ಜೊಂಡಿ. ಅವರು ಎಡೆಯೂರು ಪಲ್ಲವಿ ಅವರ “ಕುಂಡದ ಬೇರು” ಕೃತಿ ಕುರಿತು ಬರೆದ ವಿಮರ್ಶೆ.
'ಮತ್ತೆ ಮೋಡ ಕಟ್ಟುತಿದೆ' ಎಂಬ ನನ್ನ ಕವನ ಸಂಕಲನ, 2019 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪುರಸ್ಕೃತಗೊಂಡ ಕಾರ್ಯಕ್ರಮದಲ್ಲಿ, ಮೊದಲ ಬಾರಿ ನಾನು ಎಡೆಯೂರು ಪಲ್ಲವಿ ಅವರನ್ನು ಕಂಡಿದ್ದು. ಮೊದಲ ಭೇಟಿಯಲ್ಲಿಯೇ ಆತ್ಮೀಯವಾಗಿ ಮಾತನಾಡಿಸಿದ್ದರು. ಹಸನ್ಮುಖಿಯಾದ ಪಲ್ಲವಿ ಅವರ ಕಥಾಸಂಕಲನ 'ಕುಂಡದ ಬೇರು' ವಿಶಿಷ್ಟವಾಗಿರುವುದು, ಹೆಣ್ಣು ಜೀವಗಳಿಗೆ ಮಾಡಿದ ಅರ್ಪಣೆಯಿಂದ. ಚೆಂದದ ಮುಖಪುಟದಿಂದ ಪುಸ್ತಕ ಗಮನ ಸೆಳೆಯುತ್ತದೆ. ಒಂಭತ್ತು ಕತೆಗಳು ಹೆಣ್ಣಿನ ಲೋಕವನ್ನು ವಾಸ್ತವಿಕ ನೆಲೆಯಲ್ಲಿ ತೂಗುತ್ತವೆ.
ಮೊದಲ ಕತೆ 'ಕುಂಡದ ಬೇರು' ಈಗಲೂ ಅನೇಕ ಮನೆಗಳ ದಿನಚರಿಯಾಗಿದೆ. ತನ್ನದೇ ಭಾವಲೋಕದಲ್ಲಿ ವಿಹರಿಸುತ್ತ ಅಕ್ಷರ ಕಲಿತು ನೆಮ್ಮದಿ ಕಂಡುಕೊಳ್ಳುವ ತವಕದಲ್ಲಿದ್ದವಳು ಚಿನ್ನಮ್ಮ. ಹೆಂಡತಿ, ಮಗಳನ್ನು ಮನುಷ್ಯರಂತೆ ಕಾಣದ ಅಪ್ಪನೊಂದಿಗೆ ಏಗಬೇಕಾದ ಅನಿವಾರ್ಯತೆ. ಅದಕ್ಕೆ ಚಿನ್ನಮ್ಮಳ ತಾಯಿ ಹೇಳುವುದು, "ಅಬ್ಬ ಗಂಡಸ್ರು ಇಲ್ಲದ ಮನೆ ಸ್ವರ್ಗ ಕಣೆ ಚಿನ್ನಿ" ಎಂದು. ಇಂಥ ಮನೆಯ ವಾತಾವರಣದ ನಡುವೆ ಶಾಲೆಯಲ್ಲಿ, ಓದಿನಲ್ಲಿ ಸಂತಸ ಕಾಣುತ್ತಿದ್ದ ಚಿನ್ನಮ್ಮಳ ಪುಸ್ತಕಗಳು ಬೆಂಕಿಗಾಹುತಿಯಾಗುತ್ತವೆ. ದಿನಪತ್ರಿಕೆ ಹಾಕುವುದನ್ನು ನಿಲ್ಲಿಸಬೇಕೆಂದು ಹೇಳಿದ ಅಪ್ಪ, ಚಿನ್ನಮ್ಮಳ ಕನಸಿನ ಬೇರುಗಳನ್ನು ಬುಡಸಮೇತವಾಗಿ ಕತ್ತರಿಸಿದಂತೆ ಕಾಣುತ್ತದೆ. ನಮ್ಮ ಸಮಾಜದಲ್ಲಿರುವ ಎಷ್ಟೋ ಚಿನ್ನಮ್ಮರಿಗೆ ಪೋಷಿಸಿ ನೀರುಣಿಸುವ ತಂದೆ-ತಾಯಿ ಸಿಗುವಂತಾಗಲಿ, ಅವರ ಕನಸುಗಳು ಕುಂಡ ದಾಟಿ ನೆಲೆಯೂರುವಂತಾಗಲಿ ಎಂಬ ಆಶಯವನ್ನು ಈ ಕತೆ ದಾಟಿಸುತ್ತದೆ.
'ತಿರುವು' ಕತೆಯ ಚಂದ್ರಿ, ನಿರೂಪಕನ ಶಾಲಾದಿನಗಳ ಕನಸಿನ ಕನ್ಯೆ. ಬದುಕು ಮುನ್ನಡೆದು ತಿರುವುಗಳನ್ನು ಕಂಡು ಮತ್ತೆ ಎದುರು ಬಂದು ನಿಂತು ಮುಗುಳುನಗುತ್ತದೆ. ಅದರೊಂದಿಗೆ ನಡೆದವರಿಗೋ ಚುಚ್ಚಿದ ವಿವಿಧ ಮುಳ್ಳುಗಳ ಮುಲುಕಾಟ! ತಾನೆಂದೊ ಹಾಕಿದ ಶಾಪದ ಪರಿಣಾಮವಾಗಿ ಚಂದ್ರಿ ವಿಧವೆಯಾಗಿರುವುದು ಎಂದು ಬಗೆಯುವ ನಿರೂಪಕ ಅಪರಾಧಿ ಭಾವದಲ್ಲಿ ಕೂಡುತ್ತಾನೆ. ಈ ಕತೆಯಲ್ಲಿ ಬರುವ, "ಈ ಹೂನ ಕಟ್ದ ಹಾಗೆ ಸಂಬಂಧಗಳನ್ನ ಬಿಗಿಯಾಗೆ ಕಟ್ಟಾಕುವಂಗೆ ಇರ್ಬೇಕಿತ್ತು. ಆಗ ನಮ್ಮಪ್ಪ ನಮ್ಮವ್ವನ್ ಬಿಟ್ ಎಲ್ಲೂ ಹೋಗ್ತಿರ್ಲಿಲ್ಲ' ಎಂಬ ಚಂದ್ರಿಯ ಮಾತು ಯೋಚನೆಗೆ ಹಚ್ಚುತ್ತದೆ.
'ರದ್ದಿ' ಕತೆ ಇಂದಿನ ದಿನಗಳಲ್ಲಿಯೂ ಇರುವ ಜಾತಿ ವ್ಯವಸ್ಥೆಯ ವಾಸನೆಯನ್ನು ಮೂಗಿಗೆ ಅಡರಿಸುತ್ತದೆ. ಮನುಷ್ಯನನ್ನು ಮನುಷ್ಯನನ್ನಾಗಿ ಕಾಣದೇ ದೂರೀಕರಿಸುವ, ಮಿತಿಯನ್ನು ಮೀರದ ಮನಸುಗಳು ಇನ್ನೂ ನಮ್ಮಲ್ಲಿವೆ. ಸಣ್ಣತನಗಳಿಗೆ ದೊಡ್ಡಸ್ತಿಕೆಯ ಲೇಪಹಚ್ಚಿ ನಟಿಸುವ ಜನರು ಸದಾ ಇರುತ್ತಾರೆ ಎಂಬ ಭಾವವನ್ನು ಕತೆ ಮೌನವಾಗಿ ದಾಟಿಸುತ್ತದೆ.
ಹೆಣ್ಣೆಂಬ ಕಾರಣಕ್ಕೆ ಪ್ರತಿ ಹೆಣ್ಣು ಒಮ್ಮಿಲೊಮ್ಮೆ ಅನುಭವಿಸುವ ಕರಾಳತೆ ಹೊತ್ತ ಕತೆ, 'ಕಣಗಿಲೆ'. ಜಗದ ಕಣ್ಣಿಗೆ ಸಭ್ಯರಾಗಿ ಕಾಣುತ್ತ ಆಂತರ್ಯದಲ್ಲಿ ಹೊಲಸು ತುಂಬಿಕೊಂಡಿರುವ ಅದೆಷ್ಟೋ ಗಂಡುಗಳ ಪ್ರತಿರೂಪ ಗೋಪಾಲಪ್ಪ. ಸಂಪಿಯ ನೋವಿಗೆ ಮುಲಾಮಾಗುವ, ಅಂತಃಕರಣದ ರೂಪೇಶ ಕತ್ತಲೆಯಲ್ಲಿನ ಕಂದೀಲಿನಂತೆ ಕಾಣುತ್ತಾನೆ.
ಕಲಿಯುಗದ ಅವಸರಕ್ಕೆ ಉದಾಹರಣೆಯಂತಿರುವ ಕತೆ, 'ಎಜುಕೇಟೆಡ್ ಗಲ್ಸ್೯'. ಬ್ರೇಕ್ ಇಲ್ಲದಂತೆ ಓಡುತ್ತಿರುವ ನಾವು ತಾಳ್ಮೆ, ಜೀವನಪ್ರೀತಿ, ಹೊಂದಾಣಿಕೆ ಜೊತೆಗೆ ಬದುಕಲು ಅವಶ್ಯವಿರುವ ಚಾಲಾಕಿತನವನ್ನೂ ಕಲಿಯಬೇಕಿರುವ ಅನಿವಾರ್ಯತೆ ಈ ಕತೆಯಿಂದ ತಿಳಿದುಬರುತ್ತದೆ.
ಜಗದ ಮಾತಿಗೆ ಕಿವಿಗೊಡದೆ ತನ್ನ ಮಗನ ಭವಿಷ್ಯಕ್ಕಾಗಿ ದಿಟ್ಟತನದಿಂದ ನಿಂತ ಸಾವಿತ್ರಿಯ ಕತೆ, 'ಬಿಲ್'. ಬದುಕಿದಾಗ ಹತ್ತಿರ ಸುಳಿಯದಿದ್ದವರು ಸತ್ತ ನಂತರ ಮೇಲೆ ಬಿದ್ದು ಅಳುವ ಪ್ರೀತಿ ತೋರುತ್ತಾರೆ. ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಿತ್ತು ಎಂಬ ಬಿಟ್ಟಿ ಸಲಹೆ ನೀಡುತ್ತಾರೆ. ನಮ್ಮ ದಾರಿಯಲ್ಲಿ ನಡೆಯುವ ಕಡೆಗಷ್ಟೇ ನಮ್ಮ ಗಮನ ಇರಬೇಕೆಂಬುದನ್ನು ಈ ಕತೆ ಧ್ವನಿಸುತ್ತದೆ.
ಹೆಣ್ಣುಮಗು ಜನಿಸಿದ ಕ್ಷಣದಿಂದ ಅವಳ ಮದುವೆ ಮಾಡಿ ಮುಗಿಸುವ ದೊಡ್ಡ ಜವಾಬ್ದಾರಿಯ ಹುಳು ತಂದೆ ತಾಯಿಯನ್ನು ಕೊರೆಯತೊಡಗುತ್ತದೆ. 'ಯುರೊಫ್ಲೊಮೆಟ್ರಿ' ಕತೆಯ ಭಾನು ಮದುಮಗಳಾಗಬೇಕಾದವಳು. ಅವಳ ಮೂತ್ರದ ಸಮಸ್ಯೆಗಿಂತ ಮದುವೆ ಮಾಡಿ ಕಳಿಸುವ, ಸಿಕ್ಕ ಹುಡುಗನನ್ನು... ತಮ್ಮ ಮರ್ಯಾದೆಯನ್ನು... ಕಾಯ್ದುಕೊಳ್ಳುವ ತವಕ ಅವಳ ಪೋಷಕರಿಗೆ. ಹೆಣ್ಣೆಂದರೆ, ಕುಟುಂಬವ್ಯವಸ್ಥೆಯ ಅದರ ಮಾನಕ್ಕೆ ಕಿರೀಟ ಮಾತ್ರ ಆಗಬೇಕಾದವಳಲ್ಲವೇ?! ಹಾಗೆ ಆಗಲು ಹೊರಟ ಭಾನುವಿನ ರಕ್ತ ಇಲ್ಲಿ ಸಾಕ್ಷಿಯಾಗಿ ಹರಿಯುತ್ತದೆ.
ಮಹಾನಗರಗಳ ಓಟ, ಗೆಳೆತನ, ಕೆಲಸ, ಹೊಂದಾಣಿಕೆ ಹೇಳುವ ಕತೆ, 'ಹುಳಿತೇಗು'. ದೈಹಿಕ ಆರೋಗ್ಯಕ್ಕೂ ಮಾನಸಿಕ ಆರೋಗ್ಯಕ್ಕೂ ಇರುವ ಸಂಬಂಧ ಬಿಡಿಸಲಾಗದ್ದು. ಗೆಳತಿಯರ ಕೋಳಿಜಗಳ ಕೊನೆಗೊಂಡು ಬದುಕಿನ ಸೂತ್ರ ಹಿಡಿಯುವಲ್ಲಿ ಅವರಿಬ್ಬರ ಆ ಕ್ಷಣದ ಗೆಲುವು ಅಡಗಿದೆ.
'ಮಾಯದ ಗಾಯ' ಹೊತ್ತ ಅದೆಷ್ಟೋ ಜನ ಉಸಿರಾಡಲು ಹರಸಾಹಸ ಪಡುತ್ತಾ ಬದುಕುತ್ತಿದ್ದಾರೆ. ಬದುಕು ಎಲ್ಲರ ಪಾಲಿಗೂ ದಯಾಮಯಿ ಅಲ್ಲ ಎಂದು ಅನಿಸುವುದು ಈ ಕತೆಯಿಂದ. ದೊಡ್ಡಪಾದದ ನಡೆಯ ಮುಂದೆ ಸಣ್ಣಪಾದ ಸೋತು ಸುಣ್ಣವಾಗದೆ ವಿಧಿಯೇ ಇಲ್ಲ. 'ಹಸಿವು ತುಂಬಾ ಕೆಟ್ಟದ್ದು' ಎಂಬುದು ಅನ್ನ ಸಿಗದವರಿಗೇ ಗೊತ್ತಾಗುವ ಸಂಗತಿ.
ಓದಿಸಿಕೊಂಡು ಹೋಗುವ ಒಂಭತ್ತೂ ಕತೆಗಳು ತೇವಭಾವ ಉಳಿಸಿಬಿಡುತ್ತವೆ. ವ್ಯವಸ್ಥೆಯ ಭಾಗವಾದ ಹೆಣ್ಣು ತನ್ನತನಕ್ಕಾಗಿ ಹೋರಾಡಬೇಕಾದ ಅನಿವಾರ್ಯತೆ ಇದ್ದೇ ಇದೆ. ಆಗ ಸಿಗುವ ಸೋಲಿನಲ್ಲಿ ಗೆಲುವಿನಲ್ಲಿ ಅವಳು ಹೆಜ್ಜೆಗುರುತು ಮೂಡಿಸುತ್ತಾ ಸಾಗುತ್ತಾಳೆ. ಒಂದೊಳ್ಳೆ ಓದಿನ ಅನುಭವ ಕೊಟ್ಟ 'ಕುಂಡದ ಬೇರು' ಕಥಾಸಂಕಲನ ಬರೆದ ಪಲ್ಲವಿಯವರಿಗೆ ಅಭಿನಂದನೆಗಳು. ಮತ್ತಷ್ಟು ಕತೆಗಳು ನಿಮ್ಮಿಂದ ಹೊಮ್ಮಲಿ ಎಂಬ ಹಾರೈಕೆಯೊಂದಿಗೆ,
"ಬ್ಲಾಗುಗಳು ಫೇಸ್ಬುಕ್ ಥರದ ವೇದಿಕೆಯಲ್ಲದ ಕಾರಣ ಸಂವಹನ ಸೀಮಿತವಾಗಿತ್ತು. ಆದರೆ ಇಂದಿನ ಹಾಗೆ ಎಲ್ಲವನ್ನೂ ಪ...
"ಬಾಲ್ಯ, ಹದಿಹರೆಯದ, ದುರ್ಬಲ,ದಾಂಪತ್ಯ ಜೀವನದ ಹೆಣ್ಣುಮಕ್ಕಳ ತೊಳಲಾಟವನ್ನು ಅನಾವರಣ ಮಾಡುತ್ತದೆ . ಮುದ್ದಣನ ಮನೋರಮ...
"ಲೇಖಕರ ಹಸ್ತಾಕ್ಷರದ ಪ್ರತಿಯೊಂದಿಗೆ ಓದಲು ಕುಳಿತ ಪ್ರಥಮ ಪುಸ್ತಕವಿದು.....ಗಮನಿಸಿ ನೋಡಿ, ಜಗತ್ತನ್ನು ನೆಗೆಟಿವ್ ...
©2025 Book Brahma Private Limited.