ಲಿಂಗ ರಾಜಕಾರಣ

Date: 21-01-2023

Location: ಬೆಂಗಳೂರು


“ಸ್ತ್ರೀವಾದಿ ಚರ್ಚೆ ತೀವ್ರವಾಗಿರುವ ಈ ದಿನಗಳಲ್ಲಿ ಗೊಗ್ಗವ್ವೆಯ ಈ ವಚನ ತೀರ ಪ್ರಸ್ತುತವೆನಿಸುತ್ತದೆ. ಹನ್ನೆರಡನೆ ಶತಮಾನದಲ್ಲಿ ಬರೆದ ಈ ವಚನ ಇಂದಿಗೂ ಮುಖ್ಯವಾಗುತ್ತದೆ. ಈ ವಚನವನ್ನು ಮೊದಲಸಲ ಓದಿದಾಗ ಸ್ತ್ರೀ ಸಮಾನತೆಯ ವಿಷಯವನ್ನು ಹೇಳುತ್ತದೆಯೆಂದೆನಿಸುತ್ತದೆ'' ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ವಚನಕಾರ್ತಿಯರ ‘ಲಿಂಗ ರಾಜಕಾರಣ’ದ ಕುರಿತು ತಿಳಿಸಿದ್ದಾರೆ.

ಈ ಸಮಾಜ ವ್ಯವಸ್ಥೆಯ ಅಸಮಾನತೆಗೆ ವರ್ಗ ಅಸಮಾನತೆ, ವರ್ಣ ಅಸಮಾನತೆ ಕಾರಣವಾದಂತೆ, ಲಿಂಗ ಅಸಮಾನತೆಯೂ ಕಾರಣವಾಗಿದೆ. ಹುಟ್ಟುತ್ತಲೇ ಶಿಶುವನ್ನು ಗಂಡು-ಹೆಣ್ಣೆಂದು ಕರೆದು ಭೇದಭಾವದಿಂದಲೇ ಬೆಳೆಸಲಾಗುತ್ತದೆ. “ಪುರುಷ” ಪದವು ‘ಪುರ’ ಎಂಬ ಧಾತುವಿನಿಂದ ಹುಟ್ಟಿದೆ. ಪುರ ಎಂದರೆ ಶ್ರೇಷ್ಠ, ಪುರುಷ ಹುಟ್ಟುತ್ತಲೇ ಶ್ರೇಷ್ಠನಾಗಿ ಬಿಡುತ್ತಾನೆ. “ಸ್ತ್ರೀ” ಎಂಬ ಪದವು ‘ಸೂತ್ರಿ’ ಎಂಬ ಪದದ ರೂಪಾಂತರ. ಸೂತ್ರಿಯೆಂದರೆ ಹೆರುವವಳು ಎಂದರ್ಥ. ಹೀಗೆ ‘ಪುರುಷ’ ಶ್ರೇಷ್ಠನೆಂದು ಬೆಳೆಯುವ ಭಾವ, ‘ಸ್ತ್ರೀ’ ಹೆರುವವಳು ಭೋಗದ ವಸ್ತು ಎಂಬ ಕೀಳರಿಮೆ ಲಿಂಗ ಅಸಮಾನತೆಗೆ ಕಾರಣವಾಗಿದೆ. ಹಿಂದೆ, ಒಬ್ಬ ರಾಜ ಇನ್ನೊಬ್ಬ ರಾಜನೊಂದಿಗೆ ಯುದ್ಧಮಾಡಿ ಸೋತಾಗ ಆನೆ, ಕುದುರೆ, ಕಾಲ್ದಳಗಳನ್ನು, ಭಂಡಾರವನ್ನು ಗೆದ್ದರಾಜನಿಗೆ ಒಪ್ಪಿಸುವಂತೆ; ಯುವತಿಯರನ್ನೂ ಒಪ್ಪಿಸುತ್ತಿದ್ದ ವಿಷಯ ತಿಳಿದುಬರುತ್ತದೆ. ಹೀಗೆ ಹೆಣ್ಣು ಇಲ್ಲಿ ಪ್ರಾಣಿಯಾಗಿ, ಮಾರಾಟದ ಸರಕಾಗಿ ಧ್ವನಿಯೆತ್ತದ ಅಮಾಯಕಳಾಗಿದ್ದಾಳೆ.

ಇಂತಹ ಲಿಂಗ ಅಸಮಾನತೆಯನ್ನು, ಶರಣರು ಸತಿ-ಪತಿ ಭಾವದ ಮೂಲಕ ಹೊಡೆದೋಡಿಸಿದರು. ಈ ಲೋಕದಲ್ಲಿ ಹೆಣ್ಣು - ಸತಿ, ಗಂಡು-ಪತಿಯೆಂದು ಭಾವಿಸಿ, ಪತಿಯೇ ಪರದೈವವೆಂದು ನಂಬಿದ್ದ ಜನತೆಗೆ ಶರಣೆಯರು ಹೊಸ ಸಿದ್ಧಾಂತವನ್ನು ಕೊಟ್ಟರು. ಇಲ್ಲಿ ಹುಟ್ಟಿದ್ದ ಹೆಣ್ಣಿರಲಿ-ಗಂಡಿರಲಿ, ಅವರಿಬ್ಬರೂ ಸತಿ. ದೇವನೊಬ್ಬನೇ ಪತಿಯೆಂಬ ಭಾವನೆಯನ್ನು ಜನಮನದಲ್ಲಿ ಬೆಳೆಸಿದರು. ಈ ಕಾರಣದಿಂದ ಸತಿ-ಪತಿ ಭಾವ ಕ್ರಾಂತಿಕಾರಿಯಾಗಿ ಕಾಣಿಸುತ್ತದೆ.

“ಆಡಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ,
ನುಡಿಯಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ,
ನಾನು ಹೆಣ್ಣಲ್ಲದ ಕಾರಣ ನಾನು ಇರಪರ ನಾಸ್ತಿಯಾದವಳಯ್ಯ...”
- ನೀಲಮ್ಮ (ಸ.ವ.ಸಂ.5, ವ-840)

ನೀಲಮ್ಮನ ಈ ವಚನ ಲಿಂಗಸಮಾನತೆಯನ್ನು ಕಂಡುಕೊಳ್ಳುವ ಹೊಸ ವಿಧಾನವಾಗಿದೆ. ಹೆಣ್ಣುರೂಪ ಧರಿಸಿ ನಾನಿಲ್ಲಿ ಆಡಲಿಲ್ಲ, ನಾನಿಲ್ಲಿ ನುಡಿಯಲಿಲ್ಲ ಏಕೆಂದರೆ ನಾನು ಹೆಣ್ಣಲ್ಲವೆಂಬ ಭಾವದ ಮೂಲಕ ಬೆಳೆದು ನಿಲ್ಲುವ ಈ ವಚನ ಇರಪರ ನಾಸ್ತಿಯಾದವಳಯ್ಯಾ ಎಂಬ ನುಡಿಯನ್ನು ಸೇರಿಸಿಕೊಳ್ಳುತ್ತದೆ. ಇರಪರವೆಂದರೆ ಇಹಪರವೆಂಬರ್ಥವಿದೆ.

ಇಲ್ಲಿ ನೀಲಮ್ಮ ಇಹ-ಪರ, ಹೆಣ್ಣು-ಗಂಡು ಎಂಬ ರೂಪಗಳನ್ನು ಕಳೆದುಕೊಂಡು, ಉಭಯದ ಸಂಗವ ಕಂಡೂ ಕಾಣದಂತಿದ್ದಾಳೆ. ಇಲ್ಲಿ ಶರಣೆಯರು ಕೇವಲ ಹೆಣ್ಣು- ಗಂಡು ಸಮಾನರು ಎಂದು ಮಾತ್ರ ಹೇಳದೆ, ಲಿಂಗ ಸಮಾನತೆಯೊಂದಿಗೆ ಅದನ್ನು ಮೀರಿ ಬೆಳೆಯುತ್ತ ಬಯಲಾಗುವ, ಬೆಳಕಾಗುವ ಸಾಧ್ಯತೆಗಳನ್ನು ಸೂಚಿಸಿದ್ದಾರೆ. ಇನ್ನೊಂದು ವಚನದಲ್ಲಿ ನೀಲಮ್ಮ “ಸಂಗಯ್ಯನಲ್ಲಿ ಬಸವನ ವಧುವಾದ ಕಾರಣ ಎನಗೆ ಹೆಣ್ಣು ನಾಮವಿಲ್ಲವಯ್ಯಾ” ಎಂದು ಹೇಳಿದ್ದಾಳೆ. ಇಲ್ಲಿಯ ಸಂಗಯ್ಯ ದೇವರನಾಮ, ಬಸವ, ಶರಣನ ಹೆಸರು, ಬಸವನ ವಧುವಾದವಳು, ಶರಣಸಂಬಂಧಿಯಾದವಳು ಇವೆಲ್ಲಾ ಸಹಜವಾಗಿಯೇ ಹೆಣ್ಣು-ಗಂಡೆಂಬ ಭೇದವನ್ನು ಕಳೆದುಕೊಳ್ಳುವ ಕಾರಣದಿಂದ “ಎನ್ನ ನಾಮ ಹೆಣ್ಣುನಾಮವಲ್ಲಯ್ಯಾ” ಎಂದು ಸ್ಪಷ್ಟಪಡಿಸಿದ್ದಾಳೆ.

“ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ. ಅದು ಜಗದ ಹಾಹೆ, ಬಲ್ಲವರ ನೀತಿಯಲ್ಲ...”

- ಸತ್ಯಕ್ಕ (ಸ.ವ. ಸಂ. 5, ವ-1228)

ಎಂದು ತಿಳಿಸಿಹೇಳುವ ಸತ್ಯಕ್ಕ ಲಿಂಗಸಮಾನತೆಯ ಹೊಸ ಸಾಧ್ಯತೆಗಳನ್ನು ಕಟ್ಟಿಕೊಟ್ಟಿದ್ದಾಳೆ. ಮೊಲೆ-ಮುಡಿ ಹಾಗೂ ಕಾಸೆ-ಮೀಸೆಯಂತಹ ಜೈವಿಕ ಲಕ್ಷಣಗಳು ಲಿಂಗ ಅಸಮಾನತೆಯನ್ನುಂಟು ಮಾಡಬಾರದೆಂಬುದು ಈ ವಚನಕಾರ್ತಿಯ ಸ್ಪಷ್ಟನಿಲುವಾಗಿದೆ. ಹಾಗೆ ಭೇದಭಾವ ಮಡುವುದು ಜಗದ ಹಾಹೆ - ಎಂದರೆ ಜಗತ್ತಿನ ದೃಷ್ಟಿ, ಅಂದರೆ ಸಮಾಜದ ದೃಷ್ಟಿಕೋನವೇ ಹೊರತು ಬಲ್ಲವರ ನೀತಿಯಲ್ಲವೆಂದು ಹೇಳಿದ್ದಾಳೆ.

“ಗಂಡು ಮೋಹಿಸಿ ಹೆಣ್ಣು ಹಿಡಿದಡೆ
ಅದು ಒಬ್ಬರ ಒಡವೆ ಎಂದು ಅರಿಯಬೇಕು ಹೆಣ್ನು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು
ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ
ನಾಸ್ತಿನಾಥನು ಪರಿಪೂರ್ಣನೆಂಬೆ”

- ಗೊಗ್ಗವ್ವೆ (ಸ.ವ. ಸಂ. 5, ವ-693)

ಸ್ತ್ರೀವಾದಿ ಚರ್ಚೆ ತೀವ್ರವಾಗಿರುವ ಈ ದಿನಗಳಲ್ಲಿ ಗೊಗ್ಗವ್ವೆಯ ಈ ವಚನ ತೀರ ಪ್ರಸ್ತುತವೆನಿಸುತ್ತದೆ. ಹನ್ನೆರಡನೆ ಶತಮಾನದಲ್ಲಿ ಬರೆದ ಈ ವಚನ ಇಂದಿಗೂ ಮುಖ್ಯವಾಗುತ್ತದೆ. ಈ ವಚನವನ್ನು ಮೊದಲಸಲ ಓದಿದಾಗ ಸ್ತ್ರೀ ಸಮಾನತೆಯ ವಿಷಯವನ್ನು ಹೇಳುತ್ತದೆಯೆಂದೆನಿಸುತ್ತದೆ. ಲೋಕರೂಢಿಯ ಪ್ರಕಾರ, ಗಂಡು ಯಾವುದಾದರೂ ಹೆಣ್ಣನ್ನು ಮೋಹಿಸಿ ನಿಶ್ಚಿತಾರ್ಥ ಮಾಡಿಕೊಂಡರೆ ಅದು ಅವನ ಒಡವೆಯಾಗುತ್ತದೆ. ಇದನ್ನು ಲೋಕ ಒಪ್ಪಿಕೊಂಡಿದೆ. ಹೀಗೆ ಸ್ವೀಕಾರ್ಹವಾದ ಲೌಕಿಕ ರೂಢಿ - ಆಚರಣೆಗಳನ್ನು ಗೊಗ್ಗವ್ವೆ ಇಲ್ಲಿ ಪ್ರಶ್ನಿಸುವದಿಲ್ಲ. ಹೆಣ್ಣನ್ನು ಒಂದು ಒಡವೆಯೆಂದು ಕರೆದುದಕ್ಕೂ ಆಕೆ ಪ್ರತಿಭಟಿಸುವದಿಲ್ಲ. ಮೊದಲೆರಡು ಸಾಲುಗಳಲ್ಲಿ ವ್ಯಕ್ತವಾಗಿರುವ ವಿಚಾರವನ್ನೊಪ್ಪಿಕೊಳ್ಳುತ್ತಲೇ, ನಂತರದ ಎರಡು ಸಾಲುಗಳಲ್ಲಿ ಒಂದು ಮಹತ್ವದ ಪ್ರಶ್ನೆಯನ್ನಿಡುತ್ತಾಳೆ. ಗಂಡು ಮೋಹಿಸಿ ಹೆಣ್ಣನ್ನು ಒಂದು ಒಡವೆಯೆಂದು ತಿಳಿಯುವದಾದರೆ, ಅದೇ ನೀತಿಯನ್ನು ಹೆಣ್ಣಿಗೂ ಏಕೆ ಅನ್ವಯಿಸಬಾರದೆಂದು ಕೇಳುತ್ತಾಳೆ. ಒಂದು ವೇಳೆ ಹೆಣ್ಣೇ ಒಂದು ಗಂಡನ್ನು ಮೋಹಿಸಿದರೆ, ಆತ ಅವಳ ಒಡವೆಯಾಗುತ್ತಾನೆಯೆ? ಎಂದು ಪ್ರಶ್ನಿಸುತ್ತಾಳೆ.

ಗಂಡು ಹೋಗಿ ಒಂದು ಹೆಣ್ಣನ್ನು ಮೋಹಿಸಿದಾಗ ಅದು ಅವನ ಒಡವೆಯಾಗುವದಾದರೆ, ಹೆಣ್ಣು ಹೋಗಿ ಒಂದು ಗಂಡನ್ನು ಮೋಹಿಸಿದರೆ ಅದು ಅವಳ ಒಡವೆ ಯಾಕಾಗಬಾರದು? ಎಂಬ ಅವಳ ಪ್ರಶ್ನೆಯಲ್ಲಿ, ಶತಮಾನಗಳ ಹೆಣ್ಣಿನ

ಶೋಷಣೆಯ ಮಹತ್ವದ ಧ್ವನಿಯಿದೆ. ವ್ಯವಸ್ಥೆಯಲ್ಲಿದ್ದುಕೊಂಡೇ ಅಂದಿನ ರೂಢಿ - ಆಚರಣೆಗಳನ್ನು ಒಪ್ಪಿಕೊಂಡೇ ಸ್ತ್ರೀಸಮಾನತೆಯ ಚರ್ಚೆಯನ್ನು ಪ್ರಾರಂಭಿಸುವ ಈ ವಚನದ ಮೊದಲ ನಾಲ್ಕು ಸಾಲುಗಳು ಸಾಮಾಜಿಕವಾಗಿ ತುಂಬ ಮುಖ್ಯವಾಗುತ್ತವೆ. ಹನ್ನೆರಡನೆ ಶತಮಾನದಲ್ಲಿಯೇ ಸ್ತ್ರೀಸಮಾನತೆ ಬಗೆಗೆ ಧ್ವನಿಯೆತ್ತಿದ ಗೊಗ್ಗವ್ವೆ ಪ್ರಥಮ ಸ್ತ್ರೀವಾದಿಯಾಗಿ ಕಾಣಿಸುತ್ತಾಳೆ.

ಆದರೆ ಮುಂದಿನ ಎರಡು ಸಾಲುಗಳನ್ನು ಗಮನಿಸಿದಾಗ ವಚನ ಮತ್ತೊಂದು ಅರ್ಥವನ್ನು ಪಡೆದುಕೊಳ್ಳುತ್ತದೆ. ಈ ಎರಡರ ಉಭಯವ ಕಳೆದುಕೊಂಡು ಸುಖಿ ತಾನಾದಾಗ ನಾಸ್ತಿನಾಥನು ಪರಿಪೂರ್ಣನಾಗುತ್ತಾನೆಂದು ಹೇಳುತ್ತಾಳೆ. ಇಲ್ಲಿ ಉಭಯವ ಕಳೆದುಕೊಳ್ಳುವದೆಂದರೆ, ಉಭಯವನ್ನು ಕೂಡಿಸಿಕೊಂಡು ಬೆಳೆಯುವದೆಂದರ್ಥ. ಎರಡಳಿದು ಒಂದಾಗುವದೆಂದರೆ, ದ್ವೆತದಿಂದ ಅದ್ವೆ ೈತದ ಕಡೆಗಿನ ಪಯಣ. ಕೊನೆಯ ಈ ಎರಡು ಸಾಲುಗಳನ್ನು ಓದಿದಾಗ ಈ ವಚನ ಕೇವಲ ಹೆಣ್ಣು-ಗಂಡಿನ ಸಮಾನತೆಯನ್ನಷ್ಟೇ ಮಾತನಾಡುವದಿಲ್ಲ. ಅದರಾಚೆಗಿನ ಏಕತ್ವವನ್ನು ಧ್ವನಿಸುತ್ತದೆಯೆಂದೆನ್ನಿಸುತ್ತದೆ.

ಗಂಡು ಹೆಚ್ಚು - ಹೆಣ್ಣು ಅವನ ಒಡವೆಯೆಂದು ವಾದಿಸುವುದು ಯಜಮಾನ ಸಂಸ್ಕೃತಿಯ ಹೇಳಿಕೆ. ಗಂಡಿಗಿಂತ ಹೆಣ್ಣೇನು ಕಡಿಮೆ? ಅವನೇಕೆ ಅವಳ ಒಡವೆಯಾಗಬಾರದೆಂದು ವಾದಿಸುವುದು ಸ್ತ್ರೀವಾದದ ಪ್ರಾರಂಭದ ಹಂತ. ಆದರೆ ಗೊಗ್ಗವ್ವೆ ಈ ವಚನದಲ್ಲಿ ಈ ಅರ್ಥವನ್ನು ಮೀರಿ ಮುಂದೆ ಸಾಗುತ್ತಾಳೆ. ಇಲ್ಲಿ ಉಭಯವನಳಿಯುವುದು- ಸುಖಿಯಾಗುವುದು - ಪರಿಪೂರ್ಣವಾಗುವುದು ಬಹುಮುಖ್ಯವಾಗುತ್ತವೆ. ಉಭಯವನಳಿದಾಗ ಮಾತ್ರ, ವ್ಯಕ್ತಿ ಪರಿಪೂರ್ಣನಾಗುತ್ತಾನೆ, ಪರಿಪೂರ್ಣನಾದಾಗ ಮಾತ್ರ ಸುಖಿಯಾಗುತ್ತಾನೆ. ಹೀಗೆ ಇವು ಒಂದಕ್ಕೊಂದು ಸಂಬಂಧ ಪಡೆದುಕೊಂಡಿವೆ.

ಉಭಯವೆಂದಾಕ್ಷಣ ಗಂಡು-ಹೆಣ್ಣು, ಗುರು-ಶಿಷ್ಯ, ಆತ್ಮ-ಪರಮಾತ್ಮ, ಸತಿ- ಪತಿ ಈ ಎಲ್ಲ ವಿಷಯಗಳೂ ಸೇರಿಕೊಳ್ಳುತ್ತವೆ. ಗಂಡು-ಹೆಣ್ಣು, ಸತಿ-ಪತಿ ಭಾವಗಳು ಲೌಕಿಕವಾದರೆ; ಆತ್ಮ-ಪರಮಾತ್ಮ ಸಂಗತಿಗಳು ಅಲೌಕಿಕವೆನಿಸುತ್ತವೆ. ಲೌಕಿಕದ ಮೂಲಕ ಅಲೌಕಿಕವನ್ನು ಹೇಳುವುದು ಈ ವಚನದ ಮುಖ್ಯ ಆಶಯವಾಗಿದೆ. ಗುರು, ಒಬ್ಬ ಒಳ್ಳೆಯ ಶಿಷ್ಯನನ್ನು ಮೆಚ್ಚಿಕೊಂಡಾಗ, ಆ ಶಿಷ್ಯ ಆ ಗುರುವಿನ ವಸ್ತುವಾಗುತ್ತಾನೆ. ಆದರೆ ಶಿಷ್ಯನೇ ಹೋಗಿ ಒಬ್ಬ ಗುರುವನ್ನು ಮೆಚ್ಚಿಕೊಂಡಾಗ ಆ ಗುರು ಆ ಶಿಷ್ಯನ ಅಧೀನನಾಗುತ್ತಾನೆಯೇ? ಎಂಬ ಪ್ರಶ್ನೆ ಬಹುಮುಖ್ಯವಾಗುತ್ತದೆ. ಈ ಚರ್ಚೆ ಆತ್ಮ-ಪರಮಾತ್ಮನಿಗೂ ಅನ್ವಯಿಸುತ್ತದೆ.

ಅಹಂಭಾವವನ್ನಳಿದಾಗ, ಉಭಯ ಭಾವವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಉಭಯ ಭಾವವನ್ನು ಏಕತ್ರಗೊಳಿಸಿದಾಗ ಸಮಾನತೆಯ ತತ್ವ ಕಾಣಿಸಿಕೊಳ್ಳುತ್ತದೆ. ಸಮಾನತೆ ಬಂದಾಗ ನಾಥ-ಅನಾಥವೆಂಬ ಭಾವನೆಗಳು ಕರಗಿಹೋಗಿ ವ್ಯಕ್ತಿಯೇ ಶಕ್ತಿಯಾಗುತ್ತಾನೆ, ನರನೇ ಹರನಾಗುತ್ತಾನೆ. ಅದೇ ಪರಿಪೂರ್ಣ ತತ್ತ ್ವವಾಗಿದೆ. ಅದೇ ಜ್ಞಾನದ ಜ್ಯೋತಿಯಾಗಿದೆ.

“ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು
ಭಾವಿಸಲು ಗಂಡು ರೂಪು ನೋಡಾ...”
- ಅಕ್ಕಮಹಾದೇವಿ (ಸ.ವ. ಸಂ. 5, ವ-709)
``ಕೂಟಕ್ಕೆ ಸತಿ-ಪತಿಯೆಂಬ ನಾಮವಲ್ಲದೆ
ಅರಿವಿಂಗೆ ಬೇರೊಂದೊಡಲುಂಂಟೆ?''
- ಆಯ್ದಕ್ಕಿ ಲಕ್ಕಮ್ಮ (ಸ.ವ.ಸಂ.5, ವ-709)
``ಹೆಣ್ಣುಬಿಟ್ಟು ಲಿಂಗವನೊಲಿಸಬೇಕೆಂಬರು ಹೆಣ್ಣೆಂಗೆಯೂ ಲಿಂಗಕ್ಕೆಯೂ ವಿರುದ್ಧವೆ?''
- ಗಜೇಶ ಮಸಣಯ್ಯಗಳ ಪುಣ್ಯಸ್ತ್ರಿ (ಸ.ವ.ಸಂ.5, ವ-771)

ಶಿವಶರಣೆಯರ ಈ ಮೂರು ವಚನಗಳಲ್ಲಿಯೂ ಲಿಂಗಾಧಾರಿತ ವ್ಯವಸ್ಥೆಯ ಅಸಮಾನತೆಯ ಬಗೆಗೆ ಬಹುಮುಖ್ಯವಾದ ಪ್ರಶ್ನೆಗಳಿವೆ. ಹೆಸರಿನಲ್ಲಿ ಮಾತ್ರ ಗಂಡು- ಹೆಣ್ಣು ರೂಪಗಳಿರುವುದಿಲ್ಲವೆಂದು ಹೇಳಿರುವ ಅಕ್ಕಮಹಾದೇವಿ, ಲಿಂಗತಾರಾತಮ್ಯವನ್ನು ತಿರಸ್ಕರಿಸುತ್ತಾಳೆ. ಆಯ್ದಕ್ಕಿ ಲಕ್ಕಮ್ಮ ಇದೇ ವಿಚಾರವನ್ನು ಇನ್ನೊಂದು ರೀತಿಯಲ್ಲಿ ಹೇಳುತ್ತಾಳೆ. ಗಂಡ ಹೆಂಡತಿಯ ಕೂಟಕ್ಕೆ ಸತಿ-ಪತಿಯೆಂಬ ನಾಮವಿದೆಯೇ ಹೊರತು, ಅವರಲ್ಲಿರುವ ಅರಿವಿಗೆ ಬೇರೆ ಹೆಸರಿಲ್ಲ. ಪತಿಯ ಅರಿವು, ಸತಿಯ ಅರಿವು ಎಂಬುದಿರುವುದಿಲ್ಲ. ಅರಿವು, ಆತ್ಮ, ಭಾವನೆ ಇವುಗಳಿಗೆ ಹೆಣ್ಣು-ಗಂಡೆಂಬ ಭೇದವಿರುವುದಿಲ್ಲ. ಅಂದಮೇಲೆ ಹೊರಗಿನ ರೂಪ ಕಂಡು, ಜೈವಿಕ ವಿಂಗಡನೆಯನ್ನು ಮುಖ್ಯ ಮಾಡುವುದು ತರವಲ್ಲವೆಂದು ಇವರು ಅಭಿಪ್ರಾಯ ಪಟ್ಟಿದ್ದಾರೆ.

ಹೆಣ್ಣು-ಗಂಡು ಜೈವಿಕವಾಗಿ ಬೇರೆ ಬೇರೆಯಾಗಿ ಕಾಣಬಹುದು, ಆದರೆ ಅದು ಅಂತರಂಗದ ಭೇದವಾಗಬಾರದೆಂದು ಶರಣೆಯರು ಎಚ್ಚರಿಸಿದ್ದಾರೆ. ಲಿಂಗಾಧಾರಿತ ಅಸಮಾನತೆಗೆ ನಿಜವಾದ ಕಾರಣಗಳೇ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಅನೇಕ ಧರ್ಮಗಳು ತಮ್ಮ ಆಚರಣೆಗಳಲ್ಲಿ ಮಹಿಳೆಗೆ ಅವಕಾಶ ನೀಡುವುದಿಲ್ಲ. ಮಹಿಳೆಯನ್ನು ಧಾರ್ಮಿಕ ಆಧ್ಯಾತ್ಮಿಕ ಕ್ಷೇತ್ರದಿಂದ ದೂರವಿಡಲಾಗಿದೆ. ವೈದಿಕ ಮಹಿಳೆಯರಿಗೆ ಇಂದಿಗೂ ಜನಿವಾರ ಹಾಕಿಕೊಳ್ಳುವ ಸ್ವಾತಂತ್ಯ್ರವಿಲ್ಲ. ಹೆಣ್ಣು ಕೆಲವು ದೇವಸ್ಥಾನಗಳಲ್ಲಿ ಪ್ರವೇಸಿಸುವಂತಿಲ್ಲ. ಪ್ರಸಿದ್ಧ ಚಲನಚಿತ್ರ ನಟಿ ಜಯಮಾಲಾ ಇಂದೂ ಕೂಡ ಕೋರ್ಟಿನಲ್ಲಿ ಈ ಸವಾಲನ್ನೆದುರಿಸುತ್ತಿದ್ದಾರೆ. ಇಪ್ಪತ್ತೊಂದನೇ ಶತಮಾನದ ಈ ತಂತ್ರಜ್ಞಾನ ಯುಗದಲ್ಲಿಯೂ ಮಹಿಳೆಯನ್ನು ಮತ್ತದೇ ದೃಷ್ಟಿಯಿಂದ ನೋಡುವ ಜನರಿರುವಾಗ, ಹನ್ನೆರಡನೇ ಶತಮಾನದಲ್ಲಿದ್ದ ಶಿವಶರಣೆಯರು ಎಷ್ಟೊಂದು ಧೈರ್ಯದಿಂದ ಈ ಪ್ರಶ್ನೆಗಳನ್ನು ಕೇಳಿದ್ದಾರಲ್ಲ ಎಂದು ಆಶ್ಚರ್ಯವಾಗುತ್ತದೆ.

ಶರಣರ ಕಾಲಕ್ಕೆ ಗಂಡಿನ ಹಾಗೆ ಹೆಣ್ಣೂ ಕೂಡ ಇಷ್ಟಲಿಂಗ ಧರಿಸಿದಳು. ಪೂಜೆ- ಧ್ಯಾನ ಮಾಡಿದಳು. ಅಕ್ಕನಂತಹ ಮಹಿಳೆ ಅನುಭವ ಮಂಟಪದ ಅನಿವಾರ್ಯ ಭಾಗವಾಗಿದ್ದಳೆಂಬುದು ಹೆಮ್ಮೆಯ ಸಂಗತಿಯೆನಿಸುತ್ತದೆ. ಮುಕ್ತಾಯಕ್ಕನಂತಹ ಅನುಭಾವಿ ಅಲ್ಲಮಪ್ರಭುವಿನೊಂದಿಗೆ ನಡೆಸಿದ ಚರ್ಚೆ ಇಂದಿಗೂ ಮುಖ್ಯವೆನಿಸುತ್ತದೆ. ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಕೇಳಿರುವ ಪ್ರಶ್ನೆ ತುಂಬ ಮಹತ್ವದ್ದಾಗಿದೆ. “ಹೆಣ್ಣನ್ನು ಬಿಟ್ಟು ಲಿಂಗವನೊಲಿಸಬೇಕೆಂಬರು ಹೆಣ್ಣೆಂಗೆಯೂ ಲಿಂಗಕ್ಕೂ ವಿರುದ್ಧವೆ?” ಎಂದು ಪ್ರಶ್ನಿಸಿರುವ ನಿಲುವು ಗಮನಿಸುವಂತಿದೆ. ಲಿಂಗ ಗಂಡಿಗೆ ಮಾತ್ರ ಒಲಿಯುತ್ತದೆಯೆ? ಹೆಣ್ಣು, ಲಿಂಗಕ್ಕೆ ಹೇಗೆ ವಿರುದ್ಧವಾಗುತ್ತಾಳೆ? ಆಕೆ ಏಕೆ ಲಿಂಗ ಪೂಜೆ ಮಾಡಿಕೊಳ್ಳಬಾರದು? ಆಧ್ಯಾತ್ಮ ಸಾಧನೆ ಅವಳಿಂದ ಏಕೆ ಸಾಧ್ಯವಾಗುವದಿಲ್ಲ? ಎಂದು ಪ್ರಶ್ನಿಸಿದ ಶಿವಶರಣೆಯರು ಸಮಾನತೆಯ ಬದುಕು ಕಂಡುಕೊಂಡರು. ಆಧ್ಯಾತ್ಮ ಕ್ಷೇತ್ರದಲ್ಲಿ ಎತ್ತರವಾಗಿ ಬೆಳೆದುನಿಂತರು, ಮಹಾ ಅನುಭಾವಿಗಳಾದರು.

ಈ ಅಂಕಣದ ಹಿಂದಿನ ಬರೆಹಗಳು:
ಸತಿ-ಪತಿ ಭಾವ
ಕಾಯಕ ನಿಷ್ಠೆ
ಅರಿವು-ಆಚಾರ
ತ್ರಿಪುರಾಂತಕ ಕೆರೆಯ ನಿರ್ಮಾಣ ಕಾರ್ಯದಲ್ಲಿ ಶಿವಶರಣೆಯರು
ಸಾಮಾಜಿಕ ಪ್ರಜ್ಞೆ
ಆಗಮ ಮೋಹಿನಿ
ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ
ಬೆಡಗಿನ ಭಾಷೆಯಲ್ಲಿ ವಚನಕಾರ್ತಿಯರು
ವಿಡಂಬನೆ
ಶರಣರ ಸಮಕಾಲೀನ ವಚನಕಾರ್ತಿ ‘ಸೂಳೆ ಸಂಕವ್ವೆ’
ಜಾತ್ಯಾತೀತ ಮನೋಭಾವ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...