ಲೋಕಸೌಂದರ್ಯವೇ ತಿರುಳಾದ ಸಾಹಿತ್ಯ ಸದಾ ಚಲನಶೀಲ

Date: 18-08-2020

Location: ಬೆಂಗಳೂರು


ಲೇಖಕ-ವಿಮರ್ಶಕ ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರು ಸಾಹಿತ್ಯ-ವಿಮರ್ಶೆ ಕುರಿತು ಬರೆವ ಅಂಕಣ ’ನೀರು ನೆರಳು’ ಈ ಸರಣಿಯ ಮೊದಲ ಬರೆಹದಲ್ಲಿ ಸಾಹಿತ್ಯದ ಅಂತರಾತ್ಮ ಹಾಗೂ ಅದರ ಸ್ವರೂಪ, ಆಗುತ್ತಿರುವ ಬದಲಾವಣೆ-ಬೆಳವಣಿಗೆಯನ್ನು ಕುರಿತು ಚರ್ಚಿಸಿದ್ದಾರೆ.

ಸಾಹಿತ್ಯದ ಅಂತರಾತ್ಮ
ಬಾಲ್ಯದಲ್ಲಿ ಕೇಳಿದ ಒಂದು ಚಂದಮಾಮ ಕತೆ, ವಿಕ್ರಮ-ಬೇತಾಳನ ಕತೆ, ಯಾವುದೋ ಒಂದು ಗಾದೆ, ಒಗಟು, ಶಿಶುಪ್ರಾಸ, ಅಣಕುವಾಡು ಇವೆಲ್ಲವೂ ನಮ್ಮನ್ನು ರಂಜಿಸುವ ಕೆಲಸವನ್ನು, ಬುದ್ದಿಗೆ ಕಸರತ್ತು ಕೊಡುವ ಕೆಲಸವನ್ನು ಮಾಡುತ್ತಿದ್ದವು. ನಾವು ಆಗ ಬಳಸುತ್ತಿದ್ದ ಹಲವಾರು ಶಿಶುಪ್ರಾಸಗಳು, ಸರಗತೆಗಳು ನುಡಿರಚನೆಗಳು ಅರ್ಥದ ಬಗ್ಗೆ ಅಷ್ಟಾಗಿ ಒತ್ತು ನೀಡುತ್ತಿರಲಿಲ್ಲ. ಸುಮ್ಮನೆ ಅವನ್ನು ಕೇಳಬೇಕು, ಉಚ್ಚರಿಸಬೇಕು ಭಾಷೆಯ ಆಟ ಆಡಬೇಕು, ಉಲ್ಲಾಸವಾಗಿರಬೇಕು ಅವುಗಳ ಉದ್ದೇಶ ಅಷ್ಟೆ ಆಗಿತ್ತು. ’ರಮೇಶ ಒಂದ್ ಗಿಮೇಶ, ಗಿಮೇಶನ್‌ಗೆ ಅಮೇಶ, ಅಮೇಶನ್ ಮಗ ಉಮೇಶ’, ’ಸಿದ್ರಾಜ ಮೂರ್ ಅದ್ರಾಜ ಅದ್ರಾಜಂಗೆ ಬಿದ್ರಾಜ ಬಿದ್ರಾಜನ್ ಮಗ ರುದ್ರಾಜ’ ಇಂತಹ ಕಣ್ಕಟ್ಟಿನಂತೆ ಕಾಣುವ ಆದರೆ ಯಾರು ಬೇಕಾದರೂ ಯಾವ ಹೆಸರಿನಿಂದ ಬೇಕಾದರೂ ನುಡಿಕಟ್ಟುವ ಸಾಧ್ಯತೆ ಉಳ್ಳ ರಚನೆಗಳು ಅವಾಗಿದ್ದವು. ಅಂಥವುಗಳನ್ನು ಕಟ್ಟುವುದೇ ಬಾಲ್ಯದಲ್ಲಿ ನಮಗೊಂದು ಆಟವಾಗಿತ್ತು. ’ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ ಡಾಂ ಡೂಂ ಕೊಯ್ ಕೊಟಾರ್’ ಈ ಆಟವಾಗಲೀ, ಒಲೆ ಸಾರಿಸಿದೆ, ಬೂದಿ ತೆಗೆದೆ, ರಂಗೋಲಿ ಇಟ್ಟೆ...’ ಈ ಆಟವಾಗಲೀ, ’ಕಣ್ಣಾಮುಚ್ಚೆ ಕಾಡೆ ಗೂಡೇ ಉದ್ದಿನ ಮೂಟೆ ಉರುಳೇ ಹೋಯ್ತು...’ ಈ ಆಟವಾಗಲೀ, ’ಬಾಳೆಹಣ್ಣು ತಿಂದೆ, ಸಿಪ್ಪೆ ಕದಿನ ಹಿಂದೆ ಹಾಕ್ದೆ, ಕದ ಏನ್ ಕೊಡ್ತು? ಚಕ್ಕೆ ಕೊಡ್ತು, ಚಕ್ಕೆ ಏನ್ ಮಾಡ್ದೆ? ಒಲೆಗೆ ಹಾಕ್ದೆ, ಒಲೆ ಏನ್ ಕೊಡ್ತು? ಬೂದಿ ಕೊಡ್ತು, ಬೂದಿ ಏನ್ ಮಾಡ್ದೆ? ಹೊಲಕ್ ಹಾಕ್ದೆ, ಹೊಲ ಏನ್ ಕೊಡ್ತು?...’ ಇಂತಹ ಸರಗತೆಯ ಆಟವಾಗಲಿ ಇವೆಲ್ಲವೂ ಸಾಹಿತ್ಯ-ಬದುಕು-ಕಲಿಕೆ ಇವುಗಳ ನಡುವೆ ಒಡಕುಗಳೇ ಇಲ್ಲವೆಂದು ಹೇಳುತ್ತಿದ್ದವು. ಸಾಹಿತ್ಯ ಹೀಗೆ ನಮ್ಮ ಬಾಲ್ಯವನ್ನು ಸಮೃದ್ಧಗೊಳಿಸಿತ್ತು. ಇದಾವುದನ್ನೂ ನಾವು ಶಾಲೆಗೆ ಬಂದಾಗ ಓದಲಿಲ್ಲ. ನಾವು ಶಾಲೆಗಳಲ್ಲಿ ಓದಿದ್ದೇ ಬೇರೆ.
ಮನೆ ಮತ್ತು ಪರಿಸರದಲ್ಲಿ ಬಳಸುತ್ತಿದ್ದ ಮತ್ತು ಬಾಳುತ್ತಿದ್ದ ಸಾಹಿತ್ಯಕ್ಕು, ಶಾಲೆಯಲ್ಲಿ ನಾವು ಬಾಲ್ಯದಲ್ಲಿ ಕಲಿಯುತ್ತಿದ್ದ ಸಾಹಿತ್ಯಕ್ಕು ಅಜಗಜಾಂತರವಿತ್ತು. ರಾಚನಿಕತೆ, ಚೌಕಟ್ಟು, ಭಾಷಿಕತೆ, ನಿಯೋಗ ಎಲ್ಲ ದೃಷ್ಟಿಯಿಂದಲೂ ಅಜಗಜಾಂತರವಿತ್ತು. ವಯೋಮಾನ, ವಾತಾವರಣ, ಬದುಕಿನ ಕ್ರಮ, ಆಲೋಚನಾಕ್ರಮ, ಅಂತಸ್ತು, ಜ್ಞಾನ, ವೃತ್ತಿ ಇತ್ಯಾದಿ ಇತ್ಯಾದಿಗಳು ನಮ್ಮ ಸಂವೇದನೆ, ಅಪೇಕ್ಷೆ, ಅಭಿರುಚಿಗಳನ್ನು ನಿರ್ಧರಿಸುತ್ತವೆ ಅಲ್ಲವೆ? ಆದ್ದರಿಂದಲೆ ಆಯಾಯಾ ಅಪೇಕ್ಷೆಗಳಿಗೆ ತಕ್ಕಂತೆ ನಮ್ಮಲ್ಲಿ ಹಲವು ಜಗತ್ತುಗಳಿವೆ ಮತ್ತು ಸಾಹಿತ್ಯಗಳೂ ಇವೆ. ಹಾಗಾಗಿ ಸಾಹಿತ್ಯದ ಅಂತರಾತ್ಮ ಯಾವುದು ಎಂಬುದಕ್ಕೆ ಒಮ್ಮುಖಿಯಾದ ಉತ್ತರ ಸಾಧ್ಯವಿಲ್ಲ. ಯಾಕೆಂದರೆ ಬದುಕೂ ಒಮ್ಮುಖಿಯಲ್ಲ; ಸಾಹಿತ್ಯವೂ ಒಮ್ಮುಖಿಯಲ್ಲ, ಸಾಹಿತ್ಯದ ಅಂತಸ್ಸತ್ವ ಸದಾ ಓದುಗರ, ಬರಹಗಾರರ ಸಂವೇದನೆ, ಅಪೇಕ್ಷೆ, ಅಭಿರುಚಿ, ಅಗತ್ಯ ಇವುಗಳಿಂದ ಭಿನ್ನ ಭಿನ್ನವಾಗಿ ನಿರ್ಧರಿತ ಆಗುತ್ತಿರುತ್ತದೆ. ಸಾಹಿತ್ಯ ಮತ್ತು ಬದುಕು ಬೇರೆ ಬೇರೆಯಲ್ಲ. ಬದುಕು ವಾಸ್ತವದಲ್ಲಿ ಆಗುತ್ತಿದ್ದರೆ ಸಾಹಿತ್ಯ ಶಬ್ದಗಳಲ್ಲಿ ಆಗುತ್ತಿರುತ್ತದೆ. ಹಾಗಾಗಿ ಬದುಕಿನ ಸತ್ವಕ್ಕು ಸಾಹಿತ್ಯದ ಸತ್ವಕ್ಕು ಅಂತಹ ವ್ಯತ್ಯಾಸವಿಲ್ಲ.
ಸಾಹಿತ್ಯವನ್ನು ಉತ್ಪಾದಿಸುವ ಮತ್ತು ಬಳಸುವ ಕೆಲಸವನ್ನು ಕೆಲವೊಮ್ಮೆ ಸಾಹಿತ್ಯೇತರ ಸಂಸ್ಥೆಗಳು ಮಾಡುತ್ತಿರಬಹುದು. ಸಾಹಿತ್ಯವು ಯಾರಿಂದ ಉತ್ಪಾದನೆ ಆಗುತ್ತದೆ? ಯಾವ ಉದ್ದೇಶಕ್ಕಾಗಿ ಉತ್ಪಾದನೆಯಾಗುತ್ತಿದೆ ಮತ್ತು ಬಳಕೆಯಾಗುತ್ತಿದೆ ಎಂಬುದೂ ಕೂಡ ಸಾಹಿತ್ಯದ ಅಂತರಾತ್ಮವನ್ನು ನಿರ್ಧರಿಸುತ್ತಿರುತ್ತದೆ. ಸಾಹಿತ್ಯದ ಉದ್ದೇಶ, ಕಾರ್‍ಯ, ಪರಿಣಾಮ, ಪ್ರಯೋಜನಗಳೂ ಅದರ ಅಂತರಾತ್ಮವನ್ನು ನಿರ್ಧರಿಸುತ್ತವೆ. ಅಂತರಾತ್ಮಕ್ಕು ಇವುಗಳಿಗು ಅಂತಹ ವ್ಯತ್ಯಾಸವಿಲ್ಲ. ಯಾವುದೇ ಸಾಹಿತ್ಯಕೃತಿ ತಾನು ಏನನ್ನು ಓದುಗನಲ್ಲಿ ಸಂವಹನ ಮಾಡಬಲ್ಲದು ಯಾವ ಯಾವ ಅರ್ಥಸಾಧ್ಯತೆಗಳನ್ನು ಅದು ಬಿಟ್ಟುಕೊಡಬಲ್ಲುದು? ಸಾಹಿತ್ಯವು ತಾನು ಸೃಷ್ಟಿಯಾದ ಸ್ಥಳ, ಕಾಲದಿಂದ ದಾಟಿ ಓದಿಗೆ ಗುರಿಯಾಗುವ ಕಾಲ, ಸ್ಥಳದಲ್ಲಿ ಹೇಗೆ ಉಪಯೋಗಕ್ಕೆ ಬರುತ್ತಿದೆ? ಓದುಗರ ಗ್ರಹಿಕೆ, ಲೋಕದೃಷ್ಟಿಯನ್ನು ರೂಪಿಸುವ, ಬದಲಿಸುವ ಶಕ್ತಿ ಅದಕ್ಕಿದೆಯೇ? ಇದ್ದರೆ ಅದು ಯಾವ ರೀತಿಯದ್ದು? ಇತ್ಯಾದಿ ಇತ್ಯಾದಿ ಸಂಗತಿಗಳು ಸಾಹಿತ್ಯಕ್ಕೆ ಇಂದು ಮುಖ್ಯವಾಗುತ್ತಿವೆ. ಇವೂ ಸಾಹಿತ್ಯದ ಅಂತರಾತ್ಮವೆ. ಒಳ್ಳೆಯ ಸಾಹಿತ್ಯ ಅಂದರೆ ಅದು ಯಾವುದು? ಹೆಚ್ಚು ಜನರಿಂದ ಓದಿಗೆ ಗುರಿಯಾಗುವ ಸಾಹಿತ್ಯ ಒಳ್ಳೆಯ ಸಾಹಿತ್ಯವೇ? ಹೆಚ್ಚು ಕಾಲ ಮತ್ತೆ ಮತ್ತೆ ಓದಿಗೆ ಗುರಿಯಾಗುವ ಸಾಹಿತ್ಯ ಒಳ್ಳೆಯ ಸಾಹಿತ್ಯವೇ? ಭಾಷೆ, ದೇಶಗಳ ಗಡಿ ದಾಟಿ ಸಾರ್ವತ್ರಿಕವಾಗಿ ಓದಿಗೆ ಗುರಿಯಾಗುವ ಸಾಹಿತ್ಯ ಒಳ್ಳೆಯ ಸಾಹಿತ್ಯವೇ? ಇವೆಲ್ಲ ಅಂಶಗಳೂ ಸಾಹಿತ್ಯದ ಗುಣವನ್ನು ನಿರ್ಧರಿಸುತ್ತವೆ. ಸಾರ್ವಜನಿಕತೆ, ಸಾರ್ವಕಾಲಿಕತೆ, ಸಾರ್ವತ್ರಿಕತೆ ಎಂಬುವು ಆದರ್ಶಗಳೇ ಹೌದು. ಇವೆಲ್ಲವೂ ಉಳ್ಳ ಸಾಹಿತ್ಯದ ಬೆಲೆ ಹೆಚ್ಚು, ಇವೂ ಕೂಡ ಸಾಹಿತ್ಯದ ಅಂತರಾತ್ಮವನ್ನು ನಿರ್ಧರಿಸುತ್ತವೆ.
ನಮ್ಮ ಪ್ರಾಚೀನರು ಸಾಹಿತ್ಯದ ಆತ್ಯಂತಿಕ ಪ್ರಯೋಜನ, ಉದ್ದೇಶ, ಗುರಿಗಳನ್ನು ಚರ್ಚಿಸುತ್ತ ಸದ್ಯಃಪರ ನಿವೃತ್ತಿ, ರಸಾನುಭವ, ರಸಾನಂದ, ಮುಕ್ತಿ, ಆಧ್ಯಾತ್ಮಿಕ ಅನುಭವ, ಕರಾಳರಾತ್ರಿಯ ಅನುಭವ, ಆತ್ಮಶೋಧ, ಪರಕಾಯ ಪ್ರವೇಶ ಇತ್ಯಾದಿ ಹೇಳಿದ್ದಾರೆ. ಕೆಲವು ಸಂಸ್ಕೃತ ಮೀಮಾಂಸಕರು ಕಾವ್ಯದ (ಸಾಹಿತ್ಯದ) ಆತ್ಮ ಯಾವುದೆಂಬ ಚಿಂತನೆಯನ್ನು ನೇರವಾಗಿ ನಡೆಸಿದ್ದಾರೆ. ಆನಂದವರ್ಧನ ’ಕಾವ್ಯಾಸ್ಯಾತ್ಮ ಧ್ವನಿಃ’ ಎಂದರೆ ವಿಶ್ವನಾಥನು ’ವಾಕ್ಯಂ ರಸಾತ್ಮಕಂ ಕಾವ್ಯಂ’ ಎಂದಿದ್ದಾನೆ. ಸುಮಾರು ಕ್ರಿ.ಶ. 800ರ ಕಾಲದ ವಾಮನ ತನ್ನ ಕಾವ್ಯಾಲಂಕಾರ ಸೂತ್ರ ವೃತ್ತಿಯಲ್ಲಿ ಕಾವ್ಯದ ಆತ್ಮದ ಬಗ್ಗೆ ಚರ್ಚೆ ಮಾಡುತ್ತ ’ರೀತಿರಾತ್ಮಾ ಕಾವ್ಯಸ್ಯ’ ಎಂದು ಹೇಳಿದ್ದಾನೆ. ಕಾವ್ಯದ ಲಕ್ಷಣ, ಗುಣ-ದೋಷ, ಅಲಂಕಾರ, ವಸ್ತು, ಧ್ವನಿ, ಶೈಲಿ, ಇತ್ಯಾದಿ ಚರ್ಚಿಸುವಾಗ ಒಬ್ಬೊಬ್ಬ ಮೀಮಾಂಸಕರೂ ತಮ್ಮದೇ ಆದ ಸಿದ್ಧಾಂತಗಳನ್ನು ಮಂಡಿಸಿದ್ದಾರೆ. ಅವರವರ ಪ್ರಕಾರ ರಸ, ಧ್ವನಿ, ರೀತಿ, ವಕ್ರೋಕ್ತಿ, ಔಚಿತ್ಯ ಇತ್ಯಾದಿಗಳೇ ಕಾವ್ಯದ ಆತ್ಮ.
ಕಾವ್ಯಪ್ರಯೋಜನದ ಜಿಜ್ಞಾಸೆ ನಮ್ಮಲ್ಲಿ ಸಾವಿರಾರು ವರ್ಷಗಳಿಂದ ಇದೆ. ’ಕಾವ್ಯಂ ಯಶಸ್ಸೇ ಅರ್ಥಕೃತೇ ವ್ಯವಹಾರವಿದೇ ಶಿವೇತರಕ್ಷತಯೇ ಸದ್ಯ: ಪರನಿವೃತಯೇ ಕಾಂತಾಸಂಮಿತ ತಯೋಪದೇಶಯುಜೇ’ ಎಂದು ಬಹಳ ಹಿಂದೆಯೇ ಮಮ್ಮಟ ತನ್ನ ಕಾವ್ಯಪ್ರಕಾಶದಲ್ಲಿ ಹೇಳಿದ್ದಾನೆ. ಪಂಪ ತನ್ನ ಆದಿಪುರಾಣದಲ್ಲಿ ’ಕವಿತೆಯೊಳ್ ಆಸೆಗೆಯ್ವ ಫಲಮಾವುದೋ ಪೂಜೆ, ನೆಗಳ್ತೆ, ಲಾಭಮೆಂಬಿವು ಜಿನೇಂದ್ರಸ್ತುತಿಯಿಂದಂ ತಾಮೆ ಸಾರವೇ?...’ ಮುಂತಾಗಿ ಹೇಳುತ್ತಾ ಧರ್‍ಮ ಆಧ್ಯಾತ್ಮಗಳೇ ಕಾವ್ಯದ ಆಸ್ತಿವಾರಗಳಾಗಬೇಕು; ಧರ್‍ಮ ಮತ್ತು ಕಾವ್ಯಧರ್‍ಮಗಳನ್ನು ಹಿತವಾಗಿ ಬೆರೆಸುವುದೇ, ಅರ್ಣವದಂತೆ ನಿತ್ಯ ಹೊಸತಾಗಿ ಇರುವುದೇ ಉತ್ತಮ ಕಾವ್ಯ ಎನ್ನುತ್ತಾನೆ. ನಮ್ಮ ಕಾವ್ಯ ಸ್ವರೂಪ ಮತ್ತು ಕಾವ್ಯ ಪ್ರಯೋಜನಗಳ ಜಿಜ್ಞಾಸೆ ಯಾವುದು ಉತ್ತಮ ಕಾವ್ಯ ಎಂಬಲ್ಲಿಗೇ ಮತ್ತೆ ಮತ್ತೆ ಬರುತ್ತದೆ. ಈ ಜಿಜ್ಞಾಸೆಯು ಸಮರ್ಥವಾಗಿ ನಮ್ಮ ಸಾಹಿತ್ಯದ ಅಂತರಾತ್ಮವನ್ನು ವಿವರಿಸಬಲ್ಲುದು.
ಆದಿಯಿಂದ ಇಂದಿನವರೆಗಿನ ನಮ್ಮ ಸಾಹಿತ್ಯ ಪರಂಪರೆಗಳನ್ನು ನೋಡಿದರೆ ಅಲ್ಲಿ ಧರ್‍ಮ-ಕಾವ್ಯಧರ್‍ಮಗಳ ಸಂಯೋಗವು ಕಾವ್ಯಸ್ವರೂಪವನ್ನು ಮೊದಲಿಗೆ ನಿರ್ಧರಿಸಿರುವಂತೆ ಕಾಣುತ್ತದೆ. ಇದು ಪಂಪ, ರನ್ನರಿಂದ ಇಂದಿನವರೆಗೂ ಹರಿದು ಬಂದಿರುವ ಸಾಹಿತ್ಯದ ಅಂತರಾತ್ಮದ ಒಂದು ಎಳೆಯಾಗಿದೆ, ಇದರ ಜೊತೆ-ಜೊತೆಯಲ್ಲಿ ರಾಜಾಶ್ರಯವನ್ನು ಪ್ರತಿರೋಧಿಸಿದ; ಧರ್‍ಮ-ಭಕ್ತಿಗಳನ್ನು ಸಾಹಿತ್ಯದ ಶಕ್ತಿಗಳನ್ನಾಗಿ ಸ್ವೀಕರಿಸಿದ ನೆಲೆಯನ್ನು ವಚನಕಾರರಲ್ಲಿ ಹರಿಹರ, ರಾಘವಾಂಕ, ಚಾಮರಸಾದಿಗಳಲ್ಲಿ ಕಾಣಬಹುದು. ಸುಧಾರಣಾವಾದಿ ನೆಲೆಯಿಂದ; ತಳಸಮುದಾಯದ ಜನವರ್ಗವನ್ನು ಪರಿಧಿಯಿಂದ ಕರೆತಂದು ಒಳಗೊಳ್ಳುವ ನೆಲೆಯಿಂದ; ಸಾಮಾಜಿಕ ನ್ಯಾಯ, ಲಿಂಗನ್ಯಾಯ, ಜ್ಞಾನನ್ಯಾಯಗಳ ದೃಷ್ಟಿಯಿಂದ ವಚನ ಸಾಹಿತ್ಯ ಬಹಳಷ್ಟನ್ನು ಸಾಧಿಸಿದೆ. ವಚನ ಸಾಹಿತ್ಯವು ಭಕ್ತಿ ಮತ್ತು ಏಕದೇವೋಪಾಸನೆಯ ನೆಲೆಯಿಂದ ಜನಸಂಘಟನೆಗೆ ಸಾಹಿತ್ಯವನ್ನು ಬಳಸುವ ಸಾಧ್ಯತೆಗಳನ್ನು ಅನಾವರಣ ಮಾಡಿದೆ. ವೈಚಾರಿಕತೆ, ಜೀವನ ತತ್ವಜ್ಞಾನ, ಜ್ಞಾನ ಕ್ರೀ ಸಮನ್ವಯ, ನಡೆ ನುಡಿ ಸಮನ್ವಯ, ಕಾಯಕತತ್ವ, ದಾಸೋಹ ತತ್ವ, ಇತ್ಯಾದಿ ಇತ್ಯಾದಿ ಆಚಾರ ವಿಚಾರಗಳೇ ಸಾಹಿತ್ಯದ ಅಂತರಾತ್ಮಗಳಾಗಬೇಕು ಎಂದು ವಚನ ಸಾಹಿತ್ಯ ಸಾರುತ್ತದೆ. ಅಂತಿಮವಾಗಿ ಸಮಾಜದಲ್ಲಿ ಯಾವ ಗುಣಾತ್ಮಕ ಬದಲಾವಣೆಗಳನ್ನು ಸಾಹಿತ್ಯ ಉಂಟುಮಾಡಿತು ಎಂಬುದೇ ಸಾಹಿತ್ಯದ ನಿಜವಾದ ಶಕ್ತಿ-ಸಾಮರ್ಥ್ಯ. ಅದೇ ಸಾಹಿತ್ಯದ ನಿಜವಾದ ಅಂತಃಶಕ್ತಿ, ಅಂತರಾತ್ಮ. ಸಾಹಿತ್ಯದ ಸಾಮಾಜಿಕ ನಿಯೋಗ-ಪ್ರಯೋಜನ-ಪರಿಣಾಮಗಳು ಎಂಥವು ಎಂಬ ಈ ವಿಚಾರ ನಮ್ಮ ಇತರೆಲ್ಲ ಪ್ರಾಚಿನ ಸಾಹಿತ್ಯದಿಂದ ತಿಳಿಯುವ ಬಗೆಗಿಂತ ಭಿನ್ನವಾಗಿ ವಚನ ಸಾಹಿತ್ಯದಿಂದ ನಮಗೆ ಗೊತ್ತಾಗಿದೆ.
ಕೆಲವರು ಸಾಹಿತ್ಯವನ್ನು ಹಣಕ್ಕೆ ಮಾರಿಕೊಳ್ಳಬಹುದು. ಕೆಲವರು ತಮ್ಮ ಪ್ರತಿಭೆಯನ್ನು ಅಧಿಕಾರಕೇಂದ್ರದಲ್ಲಿ ಇರುವವರನ್ನು ಸ್ತುತಿಸಲು ಬಳಸಿ ಹೊಟ್ಟೆ ಹೊರೆದುಕೊಳ್ಳಬಹುದು. ತಮಗೆ ಬೇಕಾದ ಪ್ರಶಸ್ತಿ ಗೌರವಗಳನ್ನು ಹೊಡೆದುಕೊಳ್ಳಲೂ ತಮ್ಮ ಸಾಹಿತ್ಯ ಸೇವೆಯನ್ನು, ಆತ್ಮಸಾಕ್ಷಿಯನ್ನು ಅಧಿಕಾರ ಕೇಂದ್ರಗಳಿಗೆ ಒತ್ತೆ ಇಡಬಹುದು. ಕೆಲವು ಪ್ರತಿಭಾವಂತರು ಸುಂದರ ಹೆಣ್ಣುಗಳ ಸಂಗಕ್ಕಾಗಿ, ಹೆಣ್ಣುಗಳು ತಮಗೆ ಬೇಕಾದ ಗಂಡುಗಳ ಸಂಗ-ಸಾಂಗತ್ಯಕ್ಕಾಗಿ ತಮ್ಮ ಸಾಹಿತ್ಯವನ್ನು ಬಳಸಬಹುದು. ಲೋಕದಲ್ಲಿ ಪ್ರತಿಯೊಂದು ವಸ್ತುವೂ ಸದ್ಬಳಕೆ, ದುರ್ಬಳಕೆ ಎರಡಕ್ಕೂ ಗುರಿಯಾಗುತ್ತದೆ. ಸ್ವಾರ್ಥ, ಸಾಮಾಜಿಕ ಹಿತ ಎರಡಕ್ಕೂ ಬಳಕೆಯಾಗುತ್ತದೆ. ಹಾಗೆ ಇದರಿಂದ ಸಾಹಿತ್ಯಕ್ಕು-ಪ್ರತಿಭೆಗೂ ವಿನಾಯಿತಿಯೇನೂ ಇಲ್ಲ. ಕೆಲವರು ತಮ್ಮದೇ ಪ್ರತಿಭಾಸೃಷ್ಟಿಯನ್ನು ದುರ್ಬಳಸಿದರೆ ಕೆಲವರು ಇತರರ ಸೃಷ್ಟಿಯನ್ನು ದುರ್ಬಳಸುತ್ತಾರೆ. ಇದು ಸಾಹಿತ್ಯದ ಸಾಧ್ಯತೆ ಅಲ್ಲ. ಮನುಷ್ಯ ವರ್ತನೆಗೆ ಇರುವ ಸಾಧ್ಯತೆ. ಹೀಗಾಗಿ ಸಾಹಿತ್ಯದ ಅಂತರಾತ್ಮಕ್ಕೂ ಇಂತಹ ಬಳಕೆಗು ಯಾವ ಸಂಬಂಧವೂ ಇಲ್ಲ.
ಸಾಮಾಜಿಕ ವಿಡಂಬನೆಯನ್ನು ಒಳಗೊಂಡಂತೆ; ಸ್ಥಾಪಿತ ಮೌಲ್ಯಗಳನ್ನು ಒಡೆಯುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಸಾಹಿತ್ಯವೆಂದರೆ ತತ್ವಸಾಹಿತ್ಯ. ವಚನಗಳಂತೆ ಸಾಮಾಜಿಕ ಕ್ರಾಂತಿಯನ್ನು ಮಾಡಿರುವ ಸಾಹಿತ್ಯ ಸಮುದಾಯ ಯಾವುದಾದರೂ ನಮ್ಮಲ್ಲಿ ಇದ್ದರೆ ಅದು ತತ್ವಸಾಹಿತ್ಯ. ಸ್ವರವಚನಗಳು, ಕೀರ್ತನೆಗಳು, ಉದಯರಾಗ, ಸುಳಾದಿ, ಉಗಾಭೋಗಗಳು ಮಾಡಲಾಗದ ಕೆಲಸವನ್ನು ತತ್ವಪದಗಳು ಮಾಡಿವೆ. ವಚನ-ಕೀರ್ತನೆ ಮತ್ತು ತತ್ವಪದಗಳು ಈ ಮೂರೂ ನಮ್ಮ ಅಸಂಖ್ಯ ಛಾಂದಸಿಕ, ಮಹಾಕಾವ್ಯರೂಪಿ ರಚನೆಗಳು ತಲುಪಿದ ಜನವರ್ಗಗಳನ್ನು ದಾಟಿ ಅದರಾಚೆಗಿನ ಮತ್ತು ಅಂಚಿನ ಜನರನ್ನೂ ತಲುಪುವ ಸಾಧನೆ ಮಾಡಿವೆ. ಸೃಷ್ಟಿ ಮತ್ತು ಬಳಕೆ ಎರಡೂ ನೆಲೆಯಲ್ಲಿ ಸಾಮಾನ್ಯರನ್ನು ಒಳಗೊಂಡ ಕೀರ್ತಿ ಈ ಮೂರೂ ಪ್ರಕಾರಗಳಿಗೆ ಸಲ್ಲಬೇಕು. ಆಧುನಿಕ-ಶೈಕ್ಷಣಿಕ ಸಾಹಿತ್ಯ ಕೂಡ ತಲುಪಲಾಗದ ಜನರನ್ನೂ ವಚನ, ಕೀರ್ತನೆ, ತತ್ವಪದಗಳು ತಲುಪಿವೆ. ಈ ಒಳಗೊಳ್ಳುವಿಕೆ ಮತ್ತು ರೀಚ್ ಕೂಡ ಸಾಹಿತ್ಯದ ಶಕ್ತಿಯೇ, ಅಂತರಾತ್ಮವೇ.
ತತ್ವಸಾಹಿತ್ಯಗಳು ಹಲವಾರು ಪಾಂಥಿಕತೆ-ಬದುಕಿನ ಮಾರ್ಗಗಳನ್ನು ಶೋಧಿಸುವ ಸಾಹಿತ್ಯಗಳಾಗಿವೆ. ಇವು ಭಕ್ತಿ, ನಾಸ್ತಿಕತೆ, ನಿರೀಶ್ವರವಾದ, ಆಧ್ಯಾತ್ಮ ಅನುಭವ, ಅಲೌಕಿಕತೆ, ಆಧಾರ್‍ಮಿಕತೆ, ಜಾತ್ಯತೀತತೆ, ಲಿಂಗಾತೀತತೆ, ನಶ್ವರವಾದ, ಶೂನ್ಯವಾದ ಹೀಗೆ ಹತ್ತೆಂಟು ಯೋಚನಾಕ್ರಮ ಮತ್ತು ಜೀವನಕ್ರಮಗಳನ್ನು ಶೋಧಿಸುವ ಸಾಹಿತ್ಯಗಳಾಗಿವೆ. ಇವು ನಮ್ಮ ಇಡೀ ಸಾಹಿತ್ಯ ಪರಂಪರೆಗಳಲ್ಲೆ ಅತ್ಯಂತ ವೈವಿಧ್ಯಮಯವಾದ ಮತ್ತು ಗಾತ್ರ-ಸ್ವರೂಪದಲ್ಲು, ಅಗಾಧವಾದ ಮತ್ತು ನಿತ್ಯ ಬಾಳಿಗೂ, ಪರಿವರ್ತನೆಗೂ ಗುರಿಯಾಗುತ್ತಿರುವ ಸಾಹಿತ್ಯಗಳಾಗಿವೆ. ವಚನ, ಕೀರ್ತನೆ, ಪುರಾಣ, ಮಹಾಕಾವ್ಯ, ಶಾಸ್ತ್ರ, ಶತಕ, ತ್ರಿವಿಧಿ, ಆಧುನಿಕ ಮುಕ್ತಛಂದ ಸಾಹಿತ್ಯಾದಿ ಎಲ್ಲವನ್ನು ಮೀರಿದ ’ಘನ’ ಈ ಸಾಹಿತ್ಯ ಸಮುದಾಯ. ಯಾವ ಸಾಹಿತ್ಯವು ಲಿವಿಂಗ್ ಟ್ರೆಡಿಶನ್ ಆಗಿರುತ್ತದೋ ಅದು ಸದಾ ಚಲನಶೀಲವಾಗಿಯೂ ಇರುತ್ತದೆ. ಈ ಮಾತು ತತ್ವಪದಗಳಿಗೆ ಮಾತ್ರವಲ್ಲ, ಮೌಖಿಕ ಮಹಾಕಾವ್ಯಗಳಿಗೂ ಅನ್ವಯಿಸುತ್ತದೆ. ಇದುವರೆಗೆ ನಮ್ಮಲ್ಲಿ ಮುವ್ವತ್ತಕ್ಕು ಹೆಚ್ಚು ಮೌಖಿಕ ಮಹಾಕಾವ್ಯಗಳು ಸಂಪಾದಿತವಾಗಿ ಮುದ್ರಿತವಾಗಿವೆ. ಅವೆಲ್ಲವೂ ಶಿಷ್ಟ ಮಹಾಕಾವ್ಯಗಳಿಗಿಂತ ಭಿನ್ನವಾಗಿ ಮತ್ತು ವೈವಿಧ್ಯಮಯವಾಗಿ ಬದುಕನ್ನು ಕಂಡರಿಸಿವೆ, ಕಂಡರಿಸುತ್ತಿವೆ. ಇವೆಲ್ಲವುಗಳ ಅಂತರಾತ್ಮ ಏನು ಎಂದು ಒಂದೆರಡೇ ಮಾತಿನಲ್ಲಿ ಗುಡಿಸಿ ಹೇಳಲು ಸಾಧ್ಯವಿಲ್ಲ. ಬದುಕು ಎಷ್ಟೆಲ್ಲ, ವೈವಿಧ್ಯತೆಗಳಿಂದ ಕೂಡಿದೆಯೋ ಈ ತತ್ವಪದಗಳ ಮತ್ತು ಮೌಖಿಕ ಮಹಾಕಾವ್ಯಗಳ ಜಗತ್ತುಗಳೂ ಅಷ್ಟೆಲ್ಲ ವೈವಿಧ್ಯತೆಗಳಿಂದ ಕೂಡಿವೆ. ಶಿಷ್ಟ ಮಹಾಕಾವ್ಯಗಳು ಮತ್ತು ಆಧುನಿಕ ವಿದ್ಯಾವಂತರ ಲಿಖಿತ ಸಾಹಿತ್ಯಗಳು ಸ್ವಲ್ಪ ಹೆಚ್ಚು ಕಡಿಮೆ ಏಕರೂಪಿ ನೀತಿಸಂಹಿತೆ ಮತ್ತು ಜೀವನವಿಧಾನವನ್ನು ರೂಪಿಸುವ ಕಡೆಗೆ ಚಲಿಸಿದರೆ ಮೌಖಿಕ ಸಾಹಿತ್ಯಗಳು ಬಹು ವೈವಿಧ್ಯಮಯವಾದ ಜೀವನ ಮಾರ್ಗಗಳನ್ನು ಕಥಿಸುತ್ತವೆ. ಈ ಮಾತು ಸಾಹಿತ್ಯದ ಅಂತಃಸತ್ವವನ್ನು ಮೇಲು ಕೀಳು- ಹೆಚ್ಚು ಕಮ್ಮಿ ಎಂದು ನಿರ್ವಚಿಸುವ ಮಾತುಗಳಲ್ಲ. ಸ್ವರೂಪ ನಿರ್ವಚನದ ಮಾತುಗಳು.
ಹಾಗೆಂದು ಲಿಖಿತ ಸಾಹಿತ್ಯಗಳಲ್ಲಿ ವೈವಿಧ್ಯತೆ ಇಲ್ಲವೆಂದಲ್ಲ. ಇದು ಪರಂಪರೆಯುದ್ದಕ್ಕೂ ನಮಗೆ ಕಾಣುತ್ತದೆ. ಆಧುನಿಕ ಸಂದರ್ಭದಲ್ಲಂತು ನಾವು ಸಾಹಿತ್ಯಲೋಕವನ್ನು ಸಂವೇದನೆಗಳ ನೆಲೆಯಿಂದ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ-ದಲಿತ, ಸ್ತ್ರೀವಾದ ಹೀಗೆಲ್ಲ ವಿಂಗಡಿಸಿಕೊಂಡಿದ್ದೇವೆ. ಸಂವೇದನೆ ಮತ್ತು ಲೋಕದೃಷ್ಟಿಯ ನೆಲೆಯಿಂದ ಇವೆಲ್ಲವೂ ವೈವಿಧ್ಯತೆ- ಬಹುತ್ವವನ್ನೆ ಪ್ರತಿನಿಧಿಸುತ್ತವೆ. ಇವು ಒಂದೊಂದೂ ಹಲಬಗೆಯ ವೈವಿಧ್ಯತೆಗಳಿಂದ ಕೂಡಿವೆ. ಆದರೆ ಇವುಗಳಲ್ಲಿ ಏಕರೂಪೀಕರಣದ ಚಲನೆಯಿರುವುದು ಕೂಡ ನಿಜ. ಹಾಗಾದರೆ ಸಾಹಿತ್ಯದ ಸಂವೇದನೆಯು ಸಾಹಿತ್ಯದ ಅಂತಃಸತ್ವವಾ? ಅಂತರಾತ್ಮವಾ? ಹೌದು; ಸಾಹಿತ್ಯದ ಅಂತರಾತ್ಮಗಳಲ್ಲಿ ಇದೂ ಕೂಡ ಒಂದು.
ಸಾಹಿತ್ಯವನ್ನು ಒಮ್ಮೆ ರಚಿಸಿದರೆ ಅದು ದಾಖಲೆಯಾಗುವುದು, ನುಡಿಪಠ್ಯವಾಗುವುದು ಶಿಷ್ಟ ಸಾಹಿತ್ಯದ ಮುಖ್ಯ ಲಕ್ಷಣ. ಆದರೆ ಜನಪದವು ಮತ್ತೆ ಮತ್ತೆ ಹೊಸ ಹೊಸ ಬಗೆಯಲ್ಲಿ ರಚನೆಯಾಗುತ್ತಿರುತ್ತದೆ; ರೂಪಾಂತರ ಆಗುತ್ತಿರುತ್ತದೆ. ಈ ಚಲನಶೀಲತೆಯೇ ಇಲ್ಲಿ ಆ ಸಾಹಿತ್ಯದ ಅಂತಃಶಕ್ತಿ. ರಚಿತ ಪಠ್ಯಗಳೂ ಮತ್ತೆ ಮತ್ತೆ ಓದಿಗೆ ಗುರಿಯಾಗುವಾಗ ಅಲ್ಲಿ ಹಲವು ಪಠ್ಯಗಳು ರಚನೆಯಾಗುತ್ತಿರುತ್ತವೆ ಮತ್ತು ನಿರಚನೆ ಆಗುತ್ತಿರುತ್ತವೆ. ಆದರೆ ಮೌಖಿಕ ಸಾಹಿತ್ಯ ಪ್ರತಿಯೊಂದು ಹುಟ್ಟಿನಲ್ಲೂ ಮತ್ತು ಅನುಸಂಧಾನದಲ್ಲು ನಿತ್ಯ ಜನನ, ನಿತ್ಯ ಮರಣ ಅನುಭವಿಸುತ್ತ ಇರುತ್ತದೆ. ಹಾಗಾಗಿ ನಿತ್ಯ ವರ್ತಮಾನಕ್ಕೆ ಸ್ಪಂದಿಸಿ ಸೃಷ್ಟಿಯಾಗುವ ಸದ್ಯದ ಹಂಗು ಏನಿದೆಯಲ್ಲ ಆ ನಿತ್ಯ ಹೊಸತನವೇ ಇಲ್ಲಿನ ಸಾಹಿತ್ಯದ ಅಂತಃಶಕ್ತಿಯಾಗಿದೆ.
ಸಾಹಿತ್ಯಕ್ಕೆ ಅಂತರಾತ್ಮ ಇರುತ್ತದೆ ಎಂದ ಕೂಡಲೇ ದೇಹ ಆತ್ಮ ಇವೆರಡೂ ಬೇರೆ ಬೇರೆ ಎಂದೂ ಹೇಳಿದಂತಾಗುತ್ತದೆ. ಸಾಹಿತ್ಯದ ಹೊರಮೈ ಎಂಬುದು ಚೌಕಟ್ಟು-ಛಂದಸ್ಸು, ಭಾಷೆ, ಪ್ರಕಾರ, ರೂಪ, ಅಲಂಕಾರ ಇತ್ಯಾದಿಯಾದರೆ ಅದರ ಉದ್ದೇಶ, ಆಶಯ, ತಾತ್ವಿಕತೆ, ಗುರಿ, ಅರ್ಥಸಾಧ್ಯತೆಗಳೆಲ್ಲ ಒಳಮನಸ್ಸು ಎಂದಾಗುತ್ತದೆ. ಹಾಗೆ ದೇಹ-ಮನಸ್ಸು; ಒಳಗು-ಹೊರಗು; ದೇಹ-ಜೀವ, ದೇಹ-ಆತ್ಮ ಹೀಗೆ ಬೈನರಿಗಳಲ್ಲಿ ಸಾಹಿತ್ಯವನ್ನು ಒಡೆದು ನೋಡುವುದು ಎಷ್ಟರ ಮಟ್ಟಿಗೆ ಸರಿ? ಹೀಗೆ ನೋಡಿದರೆ ತಿರುಳು, ಸತ್ವ ಅಥವಾ ಆತ್ಮ ಒಳಗೆ ಮಾತ್ರ ಇರುವುದಿಲ್ಲ; ಒಳಗೂ ಹೊರಗೂ ಎಲ್ಲೆಲ್ಲೂ ಇರುತ್ತದೆ. ಈ ಜಿಜ್ಞಾಸೆಯೇ ಎಂಥದ್ದು ಎಂದರೆ ಒನ್ ಟು ಒನ್ ಸಂಬಂಧ ಕಲ್ಪಿಸುವ ರೀತಿಯದ್ದು. ಹಾಗೆ ಯಾವುದನ್ನೂ ಒನ್ ಟು ಒನ್ ಸಂಬಂಧ ಕಲ್ಪಿಸಿ ತರ್ಕಿಸಬಾರದಾದರೂ ಇಲ್ಲಿ ಆ ರೀತಿಯ ಒಂದು ಸಮೀಕರಣವನ್ನು ಚರ್ಚಿಸಬಹುದು; ಮನುಷ್ಯನ ದೇಹದಲ್ಲಿ ಯಾವ ಅಂಗ ಬಹಳ ಮುಖ್ಯವಾದದ್ದು? ಮಿದುಳು? ಹೃದಯ? ಕಿಡ್ನಿ? ಎಲ್ಲವೂ ಮುಖ್ಯವೇ. ಕಣ್ಣು, ಕಿವಿ, ನಾಲಿಗೆ, ಗಂಟಲು, ಕೈ, ಕಾಲು ಎಲ್ಲವೂ ಮುಖ್ಯವೇ. ಅಲ್ಲದೆ ಆತ್ಮ, ಮನಸ್ಸುಗಳೂ ಈ ಸಾಲಿಗೆ ಸೇರದಿದ್ದರೂ ಸೇರುತ್ತವೆ. ಇವು ಅಂಗಗಳಲ್ಲ ಮತ್ತು ಅಂಗಗಳು ಹೌದು. ದೇಹಕ್ಕೆ ಆತ್ಮ ಯಾವುದು? ಮನುಷ್ಯನ ಅಂತರಾತ್ಮ, ಒಳಮನಸ್ಸು ಯಾವುದರಿಂದ ರೂಪಗೊಳ್ಳುತ್ತದೆ? ದೇಹವಿಲ್ಲದೆ ಆತ್ಮವಿಲ್ಲ. ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮವಿಲ್ಲದೆ ದೇಹವಿಲ್ಲ. ಇವೆಲ್ಲ ಸೇರಿಯೇ ದೇಹ. ಹಾಗಾಗಿ ಎಲ್ಲದರಿಂದ ಇಡಿ ಮತ್ತು ಒಂದೊಂದೂ ಇಡಿಯ ಭಾಗವೇ. ಇಂತಹ ಒಟ್ಟಂದ ಏನಿದೆಯಲ್ಲ; ಆ ಒಟ್ಟಂದವನ್ನು ರೂಪಿಸುವಲ್ಲಿ ಎಲ್ಲ ಅಂಗಗಳ ಪಾಲೂ ಅಗತ್ಯ ಮತ್ತು ಅನನ್ಯ. ಈ ಒಟ್ಟಂದವೇ ಸಾಹಿತ್ಯದ ಅಂತಃಶಕ್ತಿ, ಸೌಂದರ್‍ಯ, ಅಂತರಾತ್ಮ. (ಇಂತಹ ಆತ್ಮವಾದವನ್ನು ಅನಾತ್ಮ, ಅಮನಸ್ಕರಿಗಂತು ಒಪ್ಪಿಕೊಳ್ಳಲು ಆಗುವುದೆ ಇಲ್ಲ.)
ಸಾಹಿತ್ಯಪಠ್ಯವನ್ನು ಆಧುನಿಕ ಸಂದರ್ಭದಲ್ಲಿ ನಾವು ಪೂಜಾರ್ಹವೆಂದಾಗಲೀ, ಪವಿತ್ರವೆಂದಾಗಲೀ, ಪ್ರಶ್ನಾತೀತವೆಂದಾಗಲೀ, ಋಷಿವಾಕ್ಯವೆಂದಾಗಲೀ, ದೇವವಾಣಿ ಎಂದಾಗಲೀ ಪರಿಗಣಿಸುವುದಿಲ್ಲ ಎಲ್ಲವೂ ನಮಗೆ ನುಡಿರಚನೆಗಳೇ. ಪ್ರಾಚೀನ ಮೀಮಾಂಸಕರ ಜೊತೆಯಲ್ಲಿಯೇ ನಾವಿಂದು ಲೀವಿಸ್, ಸಸೂರ್ ಡೆರಿಡಾ, ಮಾರ್ಕ್ಸ್, ಫ್ರಾಯ್ಡ್, ಫ್ಯಕೋ, ಸೈದ್, ಗ್ರಾಂಶಿ, ಅಂಬರ್ಟೊ ಇಕೊ ಮೊದಲಾದ ಚಿಂತಕರನ್ನು ಒಳಕ್ಕೆ ತೆಗೆದುಕೊಂಡಿದ್ದೇವೆ. ಸಂಸ್ಕೃತವು ನಮ್ಮನ್ನು ಪ್ರಭಾವಿಸಿದಂತೆ, ನವ ಉದಾರವಾದ, ವಿಕಾಸವಾದ, ವಿಜ್ಞಾನವಾದ, ಇತಿಹಾಸರಚನಾಶಾಸ್ತ್ರ, ಸಬಾಲ್ಟ್ರನಿಸಂ, ಮಾರ್ಕ್ಸ್‌ವಾದ, ಸ್ತ್ರೀವಾದ, ದಲಿತವಾದ, ಆಧುನಿಕೋತ್ತರವಾದ, ಪೌರ್‍ವಾತ್ಯವಾದ, ನಿರಚನವಾದ, ವಾಚಕವಾದ, ಮಾಧ್ಯಮಿಕವಾದ ಹೀಗೆ ಅಸಂಖ್ಯಾತ ವಾದಗಳಿಂದಲೂ ಪ್ರಭಾವಿತರಾಗಿದ್ದೇವೆ. ಹಾಗಾಗಿ ಇಂದು ನಮ್ಮ ಸಾಹಿತ್ಯದ ಪರಿಕಲ್ಪನೆಗಳೇ ಬದಲಾಗಿವೆ. ಸಾಹಿತ್ಯವನ್ನು ಓದುವ ಮತ್ತು ಗ್ರಹಿಸುವ ವಿಧಾನಗಳೂ ಬದಲಾಗಿವೆ. ಸಾಂಸ್ಕೃತಿಕ ಕಾರ್ಖಾನೆಯಲ್ಲಿ, ಶಿಕ್ಷಣವ್ಯಾಪಾರದಲ್ಲಿ ರಾಜಕೀಯ ಮೆಲಾಟಗಳು ಮುಖ್ಯ ಪಾತ್ರವಹಿಸುತ್ತಿವೆ. ದೃಶ್ಯ, ಶ್ರವ್ಯ, ಚಿತ್ರ ಪಠ್ಯಗಳು ನುಡಿಪಠ್ಯಗಳ ಜೊತೆ ಬೆರೆತುಹೋಗಿವೆ ಮತ್ತು ನುಡಿಪಠ್ಯವೇ ಅಂಚಿಗೆ ಸರಿಯುವ ಲಕ್ಷಣಗಳು ಕಾಣತೊಡಗಿವೆ. ಹೀಗಿರುವಾಗ ಸಾಹಿತ್ಯ ಎಂಬ ಸಾಹಿತ್ಯವೇ ಎನ್‌ಡೇಂಜರ್‍ಡ್ ಆಗುತ್ತಿದೆ; ರೂಪಾಂತರ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯದ ಅಂತರಾತ್ಮ ರಂಜನೀಕರಣ, ವಾಣೀಜ್ಯಕರಣಗಳಿಗು ಗುರಿಯಾಗುತ್ತಿದೆ.
ದೃಶ್ಯಮಾಧ್ಯಮಗಳಲ್ಲಿ ಅದರಲ್ಲೂ ಸಿನಿಮಾ. ಸೀರಿಯಲ್, ರಿಯಾಲಿಟಿ ಶೋಗಳಂತಹ ಎಂಟರ್‌ಟೈನ್‌ಮೆಂಟ್ ಇಂಡಸ್ಟ್ರಿಯ ಭಾಗವಾದ ದೃಶ್ಯಪಠ್ಯಗಳಲ್ಲಿ ಸಾಹಿತ್ಯವು ಒಂದು ಉದ್ಯಮವಾಗಿದೆ. ಉದ್ಯಮದ ಭಾಗವಾಗಿದೆ. ಹೀಗಿರುವಾಗ ಜನರ ಅಭಿರುಚಿಯನ್ನು ತಿದ್ದುವುದು ಮತ್ತು ಜನರು ಆಪೇಕ್ಷಿಸುವಂತೆ ಸೃಷ್ಟಿಯಾಗುವುದು ಇವೆರಡೂ ಇಲ್ಲಿ ಕಲಸಿಕೊಂಡುಬಿಟ್ಟಿವೆ. ಪೈಸಾ ವಸೂಲ್ ತತ್ವಜ್ಞಾನ, ಸಕ್ಸಸ್ ಫಾರ್ಮುಲಾ ತತ್ವಜ್ಞಾನಗಳೇ ಸಾಹಿತ್ಯದ ಶಕ್ತಿ, ಸಾಧ್ಯತೆಗಳನ್ನು ಇಲ್ಲಿ ನಿರ್ವಚಿಸುತ್ತಿವೆ. ಭಾವನಾತ್ಮಕತೆ, ಕಾಮಿಡಿ, ಸೆಕ್ಸ್, ರೋಚಕತೆ, ಅಬ್ಬರಗಳೇ ದೃಶ್ಯಪಠ್ಯಗಳನ್ನು ಆಳುತ್ತಿವೆ. ಕಲಾತ್ಮಕತೆ, ವಾಣಿಜ್ಯದೃಷ್ಟಿ, ಇವೆರಡರ ನಡುವಿನ ಸೇತುಜಾತಿ, ರಿಯಾಲಿಟಿ ಹೀಗೆ ಮೂರುನಾಲ್ಕಾಗಿ ದೃಶ್ಯಪಠ್ಯದ ಜಗತ್ತು ಒಡೆದುಕೊಂಡಿದೆ. ಹೀಗಿರುವಾಗ ಇಲ್ಲಿ ಸೃಷ್ಟಿಯಾಗುತ್ತಿರುವ ಸಾಹಿತ್ಯ (ಕತೆ, ಚಿತ್ರಕತೆ, ಗೀತೆ, ಸಂಭಾಷಣೆ ಇತ್ಯಾದಿ ರೂಪದ ಸಾಹಿತ್ಯ) ಶಿಷ್ಟ-ಗಂಭೀರ, ಜನಪದ ಎಂಬ ಸಾಹಿತ್ಯಗಳಿಗಿಂತ ಭಿನ್ನವಾಗಿ ರಚನೆಯಾಗುತ್ತಿದೆ. ಹೀಗಾಗಿ ಸಾಹಿತ್ಯಗಳ ಅಂತರಾತ್ಮಗಳು ಹತ್ತಾರು ಬಗೆಯವಾಗುತ್ತಿವೆ. ದೃಶ್ಯಸಾಧ್ಯತೆ, ಬಿಂಬಸಾಧ್ಯತೆಗಳೂ ಸಾಹಿತ್ಯದ ಶಕ್ತಿ, ಆತ್ಮಗಳಾಗುತ್ತಿವೆ.
ಹಿಂದಿನ ತಪ್ಪುಗಳನ್ನು ಇಂದು ನಮ್ಮ ಬದುಕಿನಲ್ಲಿ ಮಾಡದಿರಲು ನಾವು ಸದಾ ಶ್ರಮಿಸುತ್ತಿರಬೇಕು ಎಂಬುದು ಸಾಹಿತ್ಯದ ಒಂದು ಮುಖ್ಯವಾದ ಸಂದೇಶ. ಸಾಹಿತ್ಯವು ಜ್ಞಾನವನ್ನು ಕೇವಲ ಜ್ಞಾನವಾಗಿ ಮಾತ್ರ ನಿರೂಪಿಸದೆ ಜೀವನವನ್ನಾಗಿ ನಿರೂಪಿಸುತ್ತಿರುತ್ತದೆ. ಎಲ್ಲ ಸಾಹಿತ್ಯದ ಉದ್ದೇಶವೂ ಹಿಂದಣ ಜ್ಞಾನ-ಒಳಿತುಗಳಿಗೆ ರಿಲೆ ಓಟಗಾರರಂತೆ ದುಡಿಯುವುದೇ ಆಗಿದೆ. ಹಿಂದಣ ಅನುಭವ ಮತ್ತು ಜ್ಞಾನವನ್ನು ಮುಂದಣ ಕಥನವನ್ನಾಗಿ ಮಾಡುವುದೇ ಸಾಹಿತ್ಯದ ಉದ್ದೇಶ. ಇದು ಬದುಕನ್ನು ರೂಪಾಂತರಿಸುವ, ವ್ಯಕ್ತಿತ್ವವನ್ನು ರೂಪಾಂತರಿಸುವ ಕೆಲಸವೂ ಹೌದು; ಜ್ಞಾನ, ಆಚಾರಗಳನ್ನು ನಾಳೆಗಳಿಗೆ ದಾಟಿಸುವ ಕೆಲಸವೂ ಹೌದು. ಇವೆಲ್ಲವೂ ಸಾಹಿತ್ಯದ ನಿಜವಾದ ಅಂತರಾತ್ಮಗಳೆ. ಕುವೆಂಪು, ಗಾಂಧಿ, ಅಂಬೇಡ್ಕರ್, ಬಸವ, ಮಹಾವೀರ, ನಾಗಾರ್ಜುನ, ಬುದ್ಧ ಹೀಗೆ ಇಂತಹ ಮತ್ತು ಅಸಂಖ್ಯ ದೇಸಿ ಸಂತರ ಸುಧಾರಣಾವಾದಿ ತತ್ವಜ್ಞಾನಿಗಳ ಪರಂಪರೆಯೇ ನಮ್ಮಲ್ಲಿದೆ. ಇಂಥವರ ಚಿಂತನೆಗಳು ನಮ್ಮೊಳಗೆ ನಿತ್ಯ ಬೆರೆಯುತ್ತ ಬಂದಿವೆ. ಹಾಗೆ ಬೆರೆಯುತ್ತ, ಹರಿಯುತ್ತ ಬರಲು ಸಾಹಿತ್ಯಕಥನ ಒಂದು ಮುಖ್ಯ ವಾಹಕವಾಗಿ ದುಡಿದಿದೆ. ಇದು ಕೇವಲ ಧರ್‍ಮ-ದೇಶದ ಮಾತಲ್ಲ. ಪ್ಲೇಟೋ, ಕನ್‌ಪ್ಯೂಶಿಯಸ್, ಲಾವೊತ್ಸೆ, ವೇದಗಳು, ಜರಾತುಷ್ಟ್ರ, ಪ್‌ತಾ ಹೊತೆಪ್ ಹೀಗೆ ಈ ಪರಂಪರೆ ಬಹಳ ದೊಡ್ಡದು. ಇದು ತತ್ವಜ್ಞಾನದ ಮಾತು ಮಾತ್ರವಲ್ಲ. ಜೀವನ ಮೀಮಾಂಸೆಯನ್ನು ಹೇಳುವ ಸಾಹಿತ್ಯಲೋಕ. ಯಾವ ಸಾಹಿತ್ಯವು ಜೀವನ ಮೀಮಾಂಸೆಯನ್ನು ಚೆನ್ನಾಗಿ ಹೇಳುತ್ತದೋ ಅದೇ ಶಕ್ತಿಯುತವಾದ ಸಾಹಿತ್ಯ. ಆ ಶಕ್ತಿಯೇ ಆ ಸಾಹಿತ್ಯದ ಅಂತರಾತ್ಮ. ಈ ಮಾತು ಜಗತ್ತಿನ ಆದಿ ರಚನೆಯಾದ ಪ್‌ತಾ ಹೊತೆಪ್‌ನ ’ಪ್ರಿಸೆ ಪಪೈರಸ್’ಗು ಅನ್ವಯಿಸುತ್ತದೆ. ಗಿಲ್ಗಮಿಶ್‌ಗು, ಋಗ್ವೇದಕ್ಕು ಅನ್ವಯಿಸುತ್ತದೆ.
ಆಧುನಿಕ ಕನ್ನಡ ಸಾಹಿತ್ಯದ ಬಹಳ ಪ್ರಧಾನವಾದ ತಿರುಳುಗಳು ಕೆಲವೇ ಕೆಲವು. ವಿಚಾರವಾದ ಅಂತಹ ತಿರುಳುಗಳಲ್ಲಿ ಒಂದು ಮುಖ್ಯವಾದ ತಿರುಳು. ಬೇಕನ್, ರೆನೆ, ಡೆಕಾರ್ಟ್ ಮೊದಲಾದವರ ಪ್ರಯೋಗಾತ್ಮಕ, ವೈಜ್ಞಾನಿಕ, ಆಧಾರವಾದಿ ಚಿಂತನೆಗಳು; ಫ್ರಾಯ್ಡ್, ಯೂಂಗ್, ಕಾಮ್ಟ್, ವೆಬರ್ ಮೊದಲಾದವರ ಮನೋವೈಜ್ಞಾನಿಕ, ಸಮಾಜಶಾಸ್ತ್ರೀಯ ಚಿಂತನೆಗಳು; ಡಾರ್ವಿನ್, ಸ್ಪೆನ್ಸರ್ ಮೊದಲಾದವರ ವಿಕಾಸವಾದಿ ಚಿಂತನೆಗಳು; ಪ್ಲೇಟೊ, ಅರಿಸ್ಟಾಟಲ್, ಗಾರ್ಕಿ, ಟಾಲ್‌ಸ್ಟಾಯ್ ಮೊದಲಾದವರ ತತ್ವಶಾಸ್ತ್ರೀಯ ಚಿಂತನೆಗಳು; ಮಾರ್ಕ್ಸ್, ಡೆರಿಡಾ, ಪ್ಯುಕೊ, ಲೀವಿಸ್, ಸಸೂರ್, ಚಾಮಸ್ಕಿ, ಸೈದ್, ಗ್ರಾಂಶಿ ಮೊದಲಾದವರ ಬಹುಕೋನೀಯ ಚಿಂತನೆಗಳು; ಸಿಮೊನ್ ದ ಬೊವಾ, ಬೆಟ್ಟಿಫ್ರೀಡನ್ ಮೊದಲಾದವರ ಸ್ತ್ರೀವಾದಿ ಚಿಂತನೆಗಳು, ಸಬಾಲ್ಟ್ರನ್ ಚಿಂತನೆಗಳು, ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ, ಪೆರಿಯಾರ್, ನಾರಾಯಣಗುರು, ಜೆ.ಪಿ. ಮೊದಲಾದವರ ವಿಚಾರ ಚಿಂತನೆಗಳು, ರಾಮಕೃಷ್ಣ, ಅರಬಿಂದೋ, ರಾಜರಾಮ ಮೋಹನರಾಯ್ ಮೊದಲಾದವರ ಸುಧಾರಣಾವಾದಿ ಚಿಂತನೆಗಳು ಹೀಗೆ ಹತ್ತು ಹಲವು ಚಿಂತನೆಗಳು ಕನ್ನಡ ಆಲೋಚನೆಗಳನ್ನು ರೂಪಿಸಿವೆ. ಇವುಗಳ ಹಿಂದೆ ವಿಚಾರವಾದ, ವಿಜ್ಞಾನವಾದ, ವಿಕಾಸವಾದ, ಮಾರ್ಕ್ಸ್‌ವಾದ, ತಳಸಂಸ್ಕೃತಿವಾದ, ಸ್ತ್ರೀವಾದ ಪರಿಸರವಾದ ಹೀಗೆ ಹತ್ತು ಹಲವು ಆಲೋಚನಾ ಕ್ರಮಗಳು ಕನ್ನಡ ಸಾಹಿತ್ಯದ ಅಂತಃಶಕ್ತಿಯನ್ನು ರೂಪಿಸಿವೆ; ರೂಪಿಸುತ್ತಿವೆ. ದೇಶ, ಭಾಷೆ, ಲಿಂಗ, ಧರ್‍ಮ, ಜಾತಿ ಕೋಮು ನೆಲೆಯ ಹಲವು ಬಗೆಯ ತಾರತಮ್ಯಗಳ ವಿರುದ್ಧ ಹೂಡಿದ ಬಂಡಾಯವಾಗಿ; ಯಥಾಸ್ಥಿತಿವಾದ-ಸಂಪ್ರದಾಯಶರಣತೆಯ ವಿರುದ್ಧದ ದಂಗೆಯಾಗಿ ಕನ್ನಡ ಸಾಹಿತ್ಯವು ಸೃಷ್ಟಿಯಾಗುತ್ತ ಬಂದಿದೆ. ಇದೆಲ್ಲವೂ ಕನ್ನಡ ಸಾಹಿತ್ಯದ ಅಂತಃಶಕ್ತಿ, ಅಂತರಾತ್ಮಗಳೇ.
ಸಮಾಜದಲ್ಲಿರುವ ಹುಳುಕುಗಳನ್ನು ಹೆಕ್ಕುವುದು ಮಾತ್ರವೇ ಸಾಹಿತ್ಯದ ಕೆಲಸ ಅಲ್ಲ. ಒಳಿತುಗಳನ್ನು ದರ್ಶಿಸುವುದು ಕೂಡ ಸಾಹಿತ್ಯದ ಕೆಲಸ. ಬಾಳ್ವೆಗೆ ಸಾಧ್ಯ ಆಗದ ಆದರ್ಶಗಳನ್ನು ಕಟ್ಟಿ ನಿಲ್ಲಿಸುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ; ಬದುಕಲು ಸಾಧ್ಯ ಆಗಬಹುದಾದ ವಾಸ್ತವಿಕ ಮಾದರಿಗಳನ್ನು ಕಟೆಯುವುದು ಸಾಹಿತ್ಯದ ಕೆಲಸ. ಹಾಗಾದಾಗ ಸಾಹಿತ್ಯ ನಮ್ಮ ಅನುಭವಕ್ಕೆ ದಕ್ಕುವ ಕೈಮಾರ್ಗ, ಕೈಗನ್ನಡಿ ಆಗುತ್ತದೆ. ಅಂತಹ ಕಾರ್‍ಯ ಮಾಡಬಲ್ಲ ಶಕ್ತಿಯೇ ಸಾಹಿತ್ಯದ ಅಂತಃಸತ್ವ. ಲೋಕದ ದುಃಖ, ಅಸಮಾನತೆಗಳನ್ನು, ಶೋಷಣೆ, ಭ್ರಷ್ಟತೆ, ಕೇಡು, ಕಾರ್ಪಣ್ಯಗಳನ್ನು ಸಾಹಿತ್ಯ ಖಂಡಿತಾ ದರ್ಶಿಸಬೇಕು. ಆದರೆ; ಲೋಕದಲ್ಲಿ ಇರುವುದೆಲ್ಲವೂ ಇದು ಮಾತ್ರ ಎಂದರೆ ಅದೂ ಪಾರ್ಶ್ವಿಕ ನೋಟವೇ ಆದೀತು. ಸುಖದ ಯುಟೋಪಿಯಾ ಒಂದರ ಕಟ್ಟುವಿಕೆ ಎಷ್ಟು ಅಪಾಯಕಾರಿಯೋ ಕಾಲ್ಪನಿಕ ನರಕದ ಕಟ್ಟುವಿಕೆಯೂ ಅಷ್ಟೆ ಅಪಾಯಕಾರಿ. ವಾಸ್ತವ ನರಕಮಾತ್ರದ ನಿರೂಪಣೆಯೂ ಅಪಾಯಕಾರಿಯೇ. ಕೆಲವು ಕೃತಿಗಳು ಕಪ್ಪು ಬಿಳುಪಿನ ಹಾಗೆ ಒಳಿತು, ಕೆಡುಕಿನ ಚಿತ್ರಣಗಳನ್ನು ಮಾತ್ರ ಕೊಡುತ್ತವೆ. ಮದುಮಗಳು, ಸಂಸ್ಕಾರ, ಗೃಹಭಂಗ, ಚೋಮನ ದುಡಿ, ಒಡಲಾಳ, ಕರ್ವಾಲೋ, ಮುಸ್ಸಂಜೆ ಕಥಾಪ್ರಸಂಗ, ಕಾಡು ಮೊದಲಾದ ಕಾದಂಬರಿಗಳು ಇಂತಹ ಎರಡೂ ಅಲೆಗಳನ್ನು ದಾಟಿದ ಕೃತಿಗಳು.
ಚರಿತ್ರೆಯ ರಚನೆಯೆಂದರೆ ಅದು ಭಿನ್ನ ಕಾಲಘಟ್ಟಗಳಲ್ಲಿ ಮಾನವ ಕಂಡುಕೊಳ್ಳುತ್ತ ಬಂದ ಹೊಸ ಹೊಸ ಜ್ಞಾನಗಳ ಚರಿತ್ರೆ. ಅದು ಪುರಾಣದ ರೂಪದಲ್ಲಿ ಕಾಣಿಸಿಕೊಳ್ಳಬಹುದು, ನೃತ್ಯ, ಸಂಕೇತ, ಸಾಹಿತ್ಯ, ಚಿತ್ರಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು; ದರ್ಶನ, ತತ್ವಜ್ಞಾನ, ವಿಮರ್ಶೆಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು. ವಿಜ್ಞಾನ, ಮಾನವಿಕಜ್ಞಾನಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಈ ರೂಪಗಳು ಯಾವುದೇ ಇರಲಿ ಲೋಕಗ್ರಹಿಕೆಯ ತಿಳಿವುಗಳು ಭಿನ್ನ ಕಾಲಗಳಲ್ಲಿ ಮತ್ತು ದೇಶಗಳಲ್ಲಿ ಹೀಗೆ ಭಾಷೆ, ವಸ್ತು ಸಾಮಗ್ರಿ, ಭಾವನೆ, ಆಚರಣೆ ಹೀಗೆ ಬಹುರೂಪಗಳಲ್ಲಿ ಚಲಿಸುತ್ತ ಬಂದಿವೆ; ರೂಪಾಂತರಗೊಳ್ಳುತ್ತ ಬಂದಿವೆ ಎಂದು ತಿಳಿಸುವುದೇ ಚರಿತ್ರೆ. ಸಾಹಿತ್ಯ ಚರಿತ್ರೆ ಕೂಡ ಇದಕ್ಕೆ ಹೊರತಾದುದಲ್ಲ. ಆದರೆ ನಮ್ಮಲ್ಲಿ ಕಾವ್ಯ-ಶಾಸ್ತ್ರ-ಮೀಮಾಂಸೆಗಳಲ್ಲಿ ಕಾವ್ಯಕ್ಕೆ ಪ್ರಾಚೀನರಲ್ಲಿ ಪ್ರಾಶಸ್ತ್ಯ ಹೆಚ್ಚು. ದಾರ್ಶನಿಕರು, ತತ್ವಜ್ಞಾನಿಗಳು, ವಿಮರ್ಶಕರು, ವಿಜ್ಞಾನಿಗಳು, ಐಟಿಬಿಟಿಗಳು, ನಾನಾ ಬಗೆಯ ತಜ್ಞರು, ಚಿಂತಕರು, ಪಂಡಿತರು, ಸಂಶೋಧಕರು ಮೊದಲಾದವರು ಸಾಹಿತಿಗಳಿಗಿಂತ (ಕೆಲವೊಮ್ಮೆ ಮನರಂಜನಾ ಕಾರ್ಖಾನೆಯ ಕಾರ್ಮಿಕರಿಗಿಂತ) ಕೀಳಾಗಿ ಕಾಣಲ್ಪಡುತ್ತಿದ್ದಾರೆ. ಮನರಂಜನಾ ಉದ್ಯಮದ ಕಾರ್ಮಿಕರು, ಮಾಧ್ಯಮಗಳ ಉದ್ಯಮ ಕಾರ್ಮಿಕರು ಹೀರೋಗಳಾಗಿಯೂ ಮಿಕ್ಕವರು ಅಲ್ಪರಾಗಿಯೂ ಕಾಣಲ್ಪಡುತ್ತಿದ್ದಾರೆ. ನಿಜವಾಗಿಯೂ ನಮ್ಮ ಬದುಕನ್ನು ಕಟ್ಟುತ್ತಿರುವವರು ಯಾರು? ರಂಜನೆಯಿಲ್ಲದ ತಿಳಿವು ಜನರಿಗೆ ತಲುಪುವುದೇ ಕಷ್ಟವಾಗುತ್ತಿದೆಯಲ್ಲ ಯಾಕೆ? ಇದು ಕಲೆಗಳು ಅದರಲ್ಲು ಪ್ರದರ್ಶನ ಕಲೆಗಳು ಉಂಟುಮಾಡಿರುವ ಘಾತವೇ?
ಅಭಿಜಾತ ಕೃತಿಗಳು ಎಂದು ಕರೆಯಬಹುದಾದ ಕೃತಿಗಳೂ ಕಥನವನ್ನು ಆಶ್ರಯಿಸಿಯೆ ಜನಿಸಿವೆ. ಕಥನ ಪ್ರಾಥಮಿಕವಾಗಿ ಆನಂದದ ಮೂಲಕವೆ ಜ್ಞಾನ, ತತ್ವಜ್ಞಾನಗಳನ್ನು ನೀಡುವಂಥದು. ಹೀಗೆ ಆಧುನಿಕ ಸಂದರ್ಭದಲ್ಲು ಆನಂದ, ಜ್ಞಾನ ಮತ್ತು ತತ್ವಜ್ಞಾನಗಳು ಪರಸ್ಪರ ಬೆಸೆದುಕೊಂಡೇ ಇವೆ. ರಂಜನೆ-ಆನಂದ ಇಲ್ಲದ ಚಿಂತನಶೀಲ, ವೈಚಾರಿಕ, ವೈಜ್ಞಾನಿಕ ಬರಹಗಳಿಗೆ ಚಲನೆ ಬಹಳ ಕಡಿಮೆಯಾಗಿದೆ. ಅಥವಾ ಆನಂದದ ಕಲ್ಪನೆಯೇ ಭ್ರಷ್ಟಗೊಂಡಿದೆಯಾ? ಯಾಕೆ ಹೀಗೆ? ಪಾರಂಪರಿಕವಾಗಿ ನಾವು ಕಥನ, ನಾಟಕ, ಪಠಣ, ಪಾರಾಯಣ, ಗಾಯನ, ನರ್ತನ, ಭಜನೆಗಳಿಗೇ ಹೆಚ್ಚು ಹೆಚ್ಚು ಜನರನ್ನು ಒಗ್ಗಿಸುತ್ತ ಬಂದಿದ್ದೇವೆ. ಹಾಗಾಗಿಯೇ ಇಂದು ಅವುಗಳ ಆಧುನಿಕ ಜನ್ಮಾಂತರಗಳಾದ ದೃಶ್ಯಪಠ್ಯಗಳೇ ಹೆಚ್ಚು ಜನಬಳಕೆಯಲ್ಲಿವೆ. ಇಂದಿನ ಸಾಮಾಜಿಕ ಮಾಧ್ಯಮಗಳೂ ಕೂಡ ಇಂತಹ ಇಕ್ಕಟ್ಟಿನಲ್ಲೆ ಇವೆ. ದೃಶ್ಯ-ಚಿತ್ರ-ಡಿಜಿಟಲ್ ರೂಪಗಳಿಗೆ ಇವು ಹೆಚ್ಚು ಒಡ್ಡಿಕೊಂಡಿವೆ. ಇಂತಹ ಸಂದರ್ಭದಲ್ಲಿ ಸಾಹಿತ್ಯದ ಅಂತರಾತ್ಮದ ಬಗ್ಗೆ ಮಾತಾಡುವಾಗ ಈ ರೂಪಾಂತರಗಳು ಏನನ್ನು ಹೇಳುತ್ತಿವೆ? ರಂಜನೆ, ಆನಂದ ಸಾಹಿತ್ಯದ ಒಂದು ಬಹು ಮುಖ್ಯವಾದ ಅಂಗ. ಅಂದ ಹಾಗೆ ಅದು ಆಂತರಾತ್ಮದ ಬಹು ಮುಖ್ಯ ಅಂಗವೂ ಹೌದು. ಆದರೆ ಅದು ಮಾತ್ರವೆ ಅಂತರಾತ್ಮ ಅಲ್ಲ.
ಕುವೆಂಪು ತಮ್ಮ ಮದುಮಗಳು ಕಾದಂಬರಿಯಲ್ಲಿ ಮೊದಲಿಗೆ ’ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ! ... ಇಲ್ಲಿ ಎಲ್ಲಕ್ಕೂ ಇದೆ ಅರ್ಥ, ಯಾವುದೂ ಅಲ್ಲ ವ್ಯರ್ಥ ನೀರೆಲ್ಲ ಊ ತೀರ್ಥ!’ ಎಂದು ಹೇಳಿದ್ದಾರೆ. ಈ ತತ್ವಜ್ಞಾನಕ್ಕೆ ಅನುಗುಣವಾಗಿಯೇ ಕಾದಂಬರಿಯೂ ಇದೆ ಕೂಡ. ಕುವೆಂಪು ತಮ್ಮ ಸಾಹಿತ್ಯ ರಚನೆಯ ಬಗ್ಗೆ ಮಾತನಾಡುತ್ತ ಸಂದರ್ಶನವೊಂದರಲ್ಲಿ ಮತ್ತು ನೆನಪಿನ ದೋಣಿಯಲ್ಲಿ ’ನಾನೊಬ್ಬ ವಿಚಾರವಾದಿ, ನಾನೊಬ್ಬ ತತ್ವಜ್ಞಾನಿ, ಸಾಹಿತ್ಯದ ಉದ್ದೇಶವೇ ವಿಜ್ಞಾನಬುದ್ದಿ, ವಿಚಾರದೃಷ್ಟಿಗಳನ್ನು ಪ್ರತಿಪಾದಿಸುವುದು, ಸಾಹಿತ್ಯದ ಕಾರ್‍ಯವೇ ವಿಚಾರ ಪ್ರಜ್ಞೆಯನ್ನು ಉಂಟುಮಾಡುವುದು. ತತ್ವಜ್ಞಾನವೇ ಸಾಹಿತ್ಯದ ಪರಮೋದ್ದೇಶ...’ ಎಂದೆಲ್ಲ ಹೇಳಿದ್ದಾರೆ ಸಾಹಿತ್ಯದ ಆತ್ಯಂತಿಕ ಫಲ ಆನಂದವನ್ನು ನೀಡುವುದು ಎಂಬ ನಿಲುವು ನಮ್ಮ ಪರಂಪರೆಯಲ್ಲಿ ಇರುವಂತೆಯೇ ಸಾಹಿತ್ಯದ ಆತ್ಯಂತಿಕ ಉದ್ದೇಶವು ಸಮಾಜದ ದುಃಖವನ್ನು ಅಡ್ರೆಸ್ ಮಾಡುವುದು ಎಂಬ ನಿಲುವೂ ನಮ್ಮಲ್ಲಿದೆ. ಹಾಗೆಯೇ ವಿಜ್ಞಾನಬುದ್ದಿ, ವಿಚಾರದೃಷ್ಟಿ ಉಳ್ಳ ಜೀವನತತ್ವಜ್ಞಾನವನ್ನು ನಿರೂಪಿಸುವುದೇ ಸಾಹಿತ್ಯದ ಉದ್ದೇಶ ಮತ್ತು ಗುರಿ ಎಂಬ ನಿಲುವೂ ನಮ್ಮಲ್ಲಿದೆ. ಜೀವನ ಸೌಂದರ್‍ಯವನ್ನು ನಿರೂಪಿಸುವಂತೆಯೆ ಸಾಹಿತ್ಯವು ಕುರೂಪವನ್ನು ನಿರೂಪಿಸುತ್ತದೆ. ಬೇಂದ್ರೆಯವರು ’ಬಡತನವು ಸಾಹಿತ್ಯದ ವಸ್ತು ಏಕಾಗಿದೆ’ ಎಂಬ ಲೇಖನದಲ್ಲಿ ಸಾಹಿತ್ಯದ ವಸ್ತು, ಉದ್ದೇಶಗಳು ಅಂಚಿನ ಜನತೆಯ ದುಃಖವನ್ನು ಕುರಿತವೇ ಆಗಿರಬೇಕು ಎಂಬ ನಿಲುವಿಗೆ ಬರುತ್ತಾರೆ. ಹಾಗೆಯೇ ’ಎನ್ನ ಪಾಡೆನಗಿರಲಿ ಅದರ ಹಾಡನಷ್ಟೆ ನೀಡುವೆ ರಸಿಕ ನಿನಗೆ’, ’ಯಾರಿಗೆ ಬೇಕ್ರೀ ನಿಮ್ಮ ಕವಿತಾ, ಇದ್ದರ ಇಷ್ಟ ಬ್ರೆಡ್ಡ ತಾ ಮ್ಯಾಲಿಷ್ಟು ಬೆಣ್ಣಿ ತಾ’ ಇಂತಹ ಇವರ ಕವಿತೆಯ ಸಾಲುಗಳು ಆನಂದ ಮತ್ತು ದುಃಖ ಹಾಗೂ ಸಾಹಿತ್ಯದ ಉದ್ದೇಶ, ನಿರರ್ಥಕತೆ ಎಲ್ಲವನ್ನು ಹೇಳುತ್ತವೆ. ಅಂದರೆ ಸಾಹಿತ್ಯದ ಉದ್ದೇಶ ಒಂದಲ್ಲ ಹಲವು. ಹಾಗೆಯೇ ಸಾಹಿತ್ಯದ ಅಂತರಾತ್ಮಗಳೂ ಹಲವು.
ಪ್ರತಿರೋಧ, ಬಂಡಾಯ, ಪ್ರಗತಿಶೀಲತೆ, ಪ್ರತಿಮಾದೃಷ್ಟಿ, ನಿಸರ್ಗಪ್ರಿಯತೆ, ಭಾವನಾಸಂವೇದನೆ, ಬುದ್ದಿಸಂವೇದನೆ, ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ದೃಷ್ಟಿ, ದುಃಖದ ನಿರೂಪಣೆ, ಸೌಂದರ್‍ಯಪ್ರಜ್ಞೆ, ವಿಶ್ವಮಾನವಪ್ರಜ್ಞೆ, ತಳಸಂವೇದನೆ, ಅಪವರ್ಗೀಕರಣ, ಆಧ್ಯಾತ್ಮಿಕತೆ, ಅನುಭಾವಿಕತೆ, ಭಕ್ತಿ, ಸಾಂದರ್ಭಿಕತೆ, ಧಾರ್ಮಿಕತೆ, ಜಾತೀಯತೆ, ಜಾತ್ಯತೀತತೆ, ಮಹಿಳಾಸಂವೇದನೆ, ಶಿಶುಪ್ರಜ್ಞೆ, ಮೌಲ್ಯನಿರ್ದೇಶ ಗುಣ, ನೀತಿಪ್ರಧಾನತೆ, ರಂಜಕತೆ, ರೋಚಕತೆ, ಪತ್ತೆದಾರಿಕೆ, ಇತ್ಯಾದಿ ಇತ್ಯಾದಿ ಹೀಗೆ ಅನೇಕ ಗುಣ-ಲಕ್ಷಣ-ಸಂವೇದನೆಗಳು ನಮ್ಮ ಸಾಹಿತ್ಯಗಳಲ್ಲಿ ಇವೆ. ಇವೆಲ್ಲವೂ ಸಾಹಿತ್ಯದ ಅಂತಃಸತ್ವಗಳೇ, ಅಂತರಾತ್ಮಗಳೇ. ಸಾಹಿತ್ಯದ ಸ್ವರೂಪ ಜಿಜ್ಞಾಸೆ, ಪ್ರಯೋಜನ ಮೀಮಾಂಸೆಗಳಷ್ಟೆ ಅಲ್ಲ ಸಾಹಿತ್ಯದ ಕಾರ್‍ಯ-ಹೊಣೆಯ ನೆಲೆಯಿಂದ ನೋಡಿದರೂ ಸಾಹಿತ್ಯದ ಅಂತಃಸತ್ವ, ಅಂತರಾತ್ಮಗಳ ಪರಿಚಯ ಆಗುತ್ತದೆ.
ಕೆಲವರು ತಮ್ಮ ಆದರ್ಶ ಮತ್ತು ಕನಸುಗಳಿಗೆ ಸಾಟಿ ಆಗಬಹುದಾದ ಪಾತ್ರ-ಪ್ರಸಂಗಗಳನ್ನು ಲೋಕದಲ್ಲಿ ನೋಡಲು ಆಗದೆ ಇರುವಾಗ ಸಾಹಿತ್ಯ ಲೋಕದಲ್ಲಿ ಅವುಗಳನ್ನು ಕಂಡುಕೊಂಡು ತೃಪ್ತಿ ಹೊಂದಲು ಬಯಸುತ್ತಾರೆ. ಅಂತಹ ಸಂದರ್ಭದಲ್ಲಿ ನಮ್ಮ ಅಸಹನೆ, ಸಿಟ್ಟು, ಆಕ್ರೋಶಗಳನ್ನು ತಣಿಸುವ ಮತ್ತು ಆ ಮೂಲಕ ಮಾನಸಿಕ ಸಮತೋಲನವನ್ನು ಪಡೆಯುವ ತಾಣವಾಗಿ ಸಾಹಿತ್ಯವನ್ನು ಹಲವರು ಬಳಸುವುದುಂಟು ಅಂತಹ ಸಂದರ್ಭದಲ್ಲಿ ಸಾಹಿತ್ಯವು ನಿರ್ವಹಿಸುವ ಈ ಕಾರ್‍ಯವೇ ಅದರ ಅಂತಃಶಕ್ತಿಯಾಗಿರುತ್ತದೆ. ಕೆಲವೊಮ್ಮೆ ಬಹುತೇಕರಿಗೆ ತಮ್ಮ ದೈನಂದಿನ ಲೋಕದಿಂದ ಬಿಡುಗಡೆ ಬೇಕು ಎನ್ನಿಸುತ್ತದೆ. ಹಾಗೆ ನಿತ್ಯ ಜಂಜಡದಿಂದ ಬಿಡುಗಡೆ ಪಡೆದು ತಮ್ಮದೆ ಸಾಹಿತ್ಯಲೋಕದಲ್ಲಿ ಕಳೆದುಹೋಗಲು ಅಥವಾ ಮುಳುಗಿಹೋಗಲು ಕೆಲವರು ಬಯಸುತ್ತಾರೆ. ಅಂತಹವರಿಗೆ ಜನಪ್ರಿಯ ಕಾದಂಬರಿಗಳು, ಪತ್ತೆದಾರಿ ಕತೆ, ಕಾದಂಬರಿಗಳು ಅಂತಹ ಅಪೇಕ್ಷೆಯನ್ನು ತಣಿಸುತ್ತವೆ. ಕೆಲವು ವ್ಯಕ್ತಿಗಳಿಗೆ ಲೋಕದಲ್ಲಿ ಜನಸಾಂಗತ್ಯ ಇಲ್ಲದೆ ಒಂಟಿತನ ಕಾಡುತ್ತಿರುತ್ತದೆ. ತಮ್ಮ ಒಂಟಿತನವನ್ನು ನೀಗಿಸಿಕೊಳ್ಳಲು ಅಂಥವರು ಸಾಹಿತ್ಯದ ಸಾಂಗತ್ಯ ಬಯಸುತ್ತಾರೆ. ಇನ್ನು ಕೆಲವರು ತಮ್ಮ ಬಿಡುವಿನ ಸಮಯದಲ್ಲಿ ಓದುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ. ಅವರಿಗೆ ಟೈಮ್‌ಪಾಸ್‌ಗಾಗಿ ಓದುವ ಅಭ್ಯಾಸ ಬೆಳೆದಿರುತ್ತದೆ. ಕೆಲವರಿಗೆ ಒಂಟಿ ಪ್ರಯಾಣ ಮಾಡುವಾಗ ಪುಸ್ತಕಗಳ ಜೊತೆ ಇರಬೇಕು ಎನ್ನಿಸುತ್ತದೆ. ಈಗೀಗ ಓದುವ ಹವ್ಯಾಸವು ಸಂಗೀತ ಕೇಳುವ, ಆನ್‌ಲೈನ್ ದೃಶ್ಯಾವಳಿ ವೀಕ್ಷಿಸುವ ಹವ್ಯಾಸವಾಗಿ ಬದಲಾಗುತ್ತಿದೆ. ಆದರೂ ಪುಸ್ತಕ-ಪರದೆ ಓದುವವರೂ ಇದ್ದಾರೆ. ಇಂಥ ಕಡೆ ಸಾಹಿತ್ಯವು ಜನಪ್ರಿಯವಾದ ಎಜುಟೈನ್‌ಮೆಂಟ್ ಸಾಮಗ್ರಿ ಆಗಿ ಬಳಕೆ ಆಗುತ್ತದೆ. ಒಂದು ಕಡೆ ಅಲ್ಪಪ್ರಮಾಣದ ತಿಳುವಳಿಕೆಯೂ ಒದಗಬೇಕು; ಮತ್ತೊಂದು ಕಡೆ ಮನರಂಜನೆ, ಸಂತೋಷವೂ ಸಿಗಬೇಕು. ಇಂತಹ ಅಪೇಕ್ಷೆಗಳನ್ನು ಪೂರೈಸುವ ಸಾಹಿತ್ಯ ಕೂಡ ನಮ್ಮಲ್ಲಿದೆ. ಇಂಥ ಸಾಹಿತ್ಯವನ್ನು ಗಂಭೀರ ಓದುಗರು ಇಷ್ಟಪಡುವುದಿಲ್ಲ. ಹಾಗಾಗಿಯೇ ನಮ್ಮಲ್ಲಿ ಗಂಭೀರ ಮತ್ತು ಜನಪ್ರಿಯ ಎಂಬ ಎರಡು ಒಡಕುಗಳು ಸಾಹಿತ್ಯದಲ್ಲಿ ಇವೆ. ಕೆ.ಎನ್.ಗಣೇಶಯ್ಯನವರು, ತೇಜಸ್ವಿ, ಲಂಕೇಶ್ ಅವರು ಭಿನ್ನವಾಗುವುದು ಇಂತಹ ಕಡೆ. ಇಂಥವರು ಈ ಗಂಭೀರ ಮತ್ತು ಜನಪ್ರಿಯ ಎಂಬ ಒಡಕುಗಳನ್ನು ಒಡೆಯುವಂತೆ ಬರೆದಿದ್ದಾರೆ.
ಮೌಖಿಕ ಮಹಾಕಾವ್ಯಗಳೆಂದು ನಾವು ಕರೆಯುವ ಕಾವ್ಯಗಳನ್ನು ಜನರು ಹಾಗೆ ಕರೆಯುವುದಿಲ್ಲ. ಅವು ಒಂದೊಂದೂ ಭಿನ್ನ ಸಂಪ್ರದಾಯಗಳು. ನಮ್ಮಲ್ಲಿ ಬಸವರಾಜದೇವರ ರಗಳೆ ಇರುವಂತೆಯೇ ಬಸವಪುರಾಣ ಇದೆ; ಹಾಗೆಯೇ ಶರಣಲೀಲಾಮೃತವೂ, ಕರಪಾಲಮೇಳ ಬಸವಪುರಾಣವೂ ಇದೆ. ಹಾಗೆಯೇ ಮಹದೇಶ್ವರ ಸಾಂಗತ್ಯ ಇರುವಂತೆಯೇ ಮಾದಪ್ಪನ ಕತೆ ಇದೆ. ಲಿಖಿತ ಲೋಕಕ್ಕಿಂತ ಭಿನ್ನವಾದ ಅಲಿಖಿತ ಲೋಕವು ನಮ್ಮಲ್ಲಿ ಚರಿತ್ರೆ, ಪರಂಪರೆಗಳನ್ನು ಗೇಯಕಥನಗಳನ್ನಾಗಿಸಿ; ಪ್ರದರ್ಶನ ಕಥನಗಳ್ನನಾಗಿಸಿ ತಲೆಮಾರಿನಿಂದ ತಲೆಮಾರಿಗೆ ದಾಟಿಸುತ್ತ ಬಂದಿದೆ. ಚರಿತ್ರೆಯನ್ನು ಮೌಖಿಕವಾಗಿ ಕಾಪಿಡುವ ಮತ್ತು ದಾಟಿಸುವ ಒಂದು ಮುಖ್ಯ ತಂತ್ರವಾಗಿ ಗೇಯಕಥನಗಳನ್ನು ನಮ್ಮಲ್ಲಿ ರೂಢಿಸಲಾಗಿದೆ. ಚರಿತ್ರೆಯ ಗತ ಇಲ್ಲಿ ಮತ್ತೆ ಮತ್ತೆ ವರ್ತಮಾನದಲ್ಲಿ ಮರುನಿರೂಪಣೆ ಆಗಬಹುದು ಮತ್ತು ಆ ಮೂಲಕ ಅದು ನಿರಂತರ ರೂಪಾಂತರಗೊಳ್ಳುವುದು ಇಲ್ಲಿ ಸಾಮಾನ್ಯ. ಸಾಹಿತ್ಯದ ಹಲವು ನಿಯೋಗಗಳಲ್ಲಿ ಇದೂ ಒಂದು. ಸಾಂಸ್ಕೃತಿಕ ಪರಂಪರೆಯ ವಾಹಕವಾಗಿ ಸಾಹಿತ್ಯ ನಮ್ಮಲ್ಲಿ ನಿರಂತರವಾಗಿ ಬಳಕೆಯಾಗುತ್ತ ಬಂದಿದೆ. ರಂಜನೆ ಮತ್ತು ತಿಳುವಳಿಕೆ ಎರಡೂ ಇಲ್ಲಿ ಬೇರ್ಪಡಿಸಲಾಗದಂತೆ ಬೆರೆತುಹೋಗಿವೆ. ನಿತ್ಯ ಜನರ ಆಚಾರ-ವಿಚಾರವನ್ನು ರೂಪಿಸುವ ಕೆಲಸವನ್ನು ಇಲ್ಲಿ ಸಾಹಿತ್ಯ ನಿರ್ವಹಿಸುತ್ತದೆ. ನಮ್ಮ ರಾಮಾಯಾಣ, ಭಾರತಗಳೂ ಇದೇ ರೀತಿಯ ನಿಯೋಗಗಳಿಗೆ ಗುರಿಯಾಗಿ ಹಲವು ಧಾರೆಗಳಾಗಿ ನಿರೂಪಣೆಗೊಂಡಿವೆ.
ಯಾರದೇ ಸಾಹಿತ್ಯವನ್ನು ತೆಗೆದುಕೊಂಡರೂ ಒಂದೆರಡು ಪ್ಯಾರಾ ಓದುತ್ತಿದ್ದಂತೆ ಇದು ಇವರದೇ ಎಂದು ಹೇಳಲು ಸಾಧ್ಯ. ಅಂತಹ ಅನನ್ಯತೆಯನ್ನು ಕೆಲವು ಲೇಖಕರು ಸಾಧಿಸಿದ್ದಾರೆ. ಪಂಪ, ಹರಿಹರ, ಬಸವ, ಅಲ್ಲಮ, ಕನಕ, ಕುಮಾರವ್ಯಾಸ, ಕುವೆಂಪು, ಬೇಂದ್ರೆ, ಅಡಿಗ, ಕಾರಂತ, ಲಂಕೇಶ್, ತೇಜಸ್ವಿ, ಡಿ.ಆರ್.ನಾಗರಾಜ, ಜಿ.ಎಸ್.ಆಮೂರ, ಕುರ್ತುಕೋಟಿ, ಜಿ.ಎಚ್.ನಾಯಕ, ಇಂಥವರ ಬರವಣಿಗೆಗೆ ಅಂತಹ ಅನನ್ಯತೆ ಇದೆ. ಇವರದ್ದೆ ಎಂದು ಗುರ್ತಿಸಬಲ್ಲ ಲಕ್ಷಣ ಅದು. ಈ ಲಕ್ಷಣವು ನಿರೂಪಣಾ ಕ್ರಮ, ರೂಪಕ ಬಳಕೆಯ ಕ್ರಮ, ಶಬ್ದಪ್ರಯೋಗ ಕ್ರಮ, ನಾದ, ಲಯ, ಬಂಧ, ಒಳನೋಟ ಕ್ರಮ, ತತ್ವಜ್ಞಾನ ಮಂಡನೆ ಇತ್ಯಾದಿ ನೆಲೆಗಳಲ್ಲಿ ಅನನ್ಯವಾಗಿ ವ್ಯಕ್ತವಾಗಬಹುದು. ಇಂತಹ ಅನನ್ಯತೆಯೇ ಅಯಾಯಾ ಲೇಖಕರ ಅಂತಃಸತ್ವ ಎನ್ನಬಹುದು. ಆಯಾಯಾ ಲೇಖಕರ ಸಾಹಿತ್ಯದ ಅಂತರಾತ್ಮ ಎನ್ನಬಹುದು. ಈ ಲೋಕದ ಪ್ರತಿಯೊಂದು ಕಲೆಯ ಉದ್ದೇಶವೂ ಲೋಕವನ್ನು ಇನ್ನಷ್ಟು ಮತ್ತಷ್ಟು ತಿದ್ದುವುದು; ಉತ್ತಮಗೊಳಿಸುವುದು. ಸಾಹಿತ್ಯವೂ ಇದನ್ನೆ ಮಾಡುತ್ತದೆ. ಅದು ಕನ್ನಡಿ ಮಾತ್ರವಲ್ಲ; ಅದು ಕಟು ವಿಮರ್ಶಕ. ಲೋಕವನ್ನು ತಿದ್ದುವುದು ತೀಡುವುದು ಅದರ ಉದ್ದೇಶಗಳಲ್ಲೊಂದು; ಇಂತಹ ಉದ್ದೇಶಗಳ ಮೊತ್ತವೇ ಸಾಹಿತ್ಯದ ಅಂತರಾತ್ಮ.
ಲೋಕದ ಸೌಂದರ್‍ಯವನ್ನು ಗುರ್ತಿಸುವುದು ಸಾಹಿತ್ಯದ ಕೆಲಸ. ಸೌಂದರ್‍ಯ ಪ್ರಜ್ಞೆ ಇಲ್ಲದೆ ಸಾಹಿತ್ಯ ಹುಟ್ಟಲಾರದು. ದುಃಖ, ಕುರೂಪಗಳಿಗೆ ವಿರುದ್ಧವಾದ ಸಂಗತಿ ಆನಂದವೆಂದು ನಮ್ಮ ಜಿಜ್ಞಾಸೆ ಈಗಾಗಲೇ ಗುರ್ತಿಸಿದೆ. ಈ ಆನಂದವು ರಂಜನೆಯನ್ನು ದಾಟಿದ ಮನೋಸ್ಥಿತಿ, ಚೆಲುವು ಅಥವಾ ಸೌಂದರ್‍ಯ ಈ ಆನಂದಕ್ಕಿಂತ ಭಿನ್ನವಾದುದು. ವ್ಯಕ್ತಿ, ಸಮುದಾಯ, ಕಾಲ, ಕೃತಿ, ಜೀವಿ, ಪ್ರಕೃತಿ ಹೀಗೆ ಎಲ್ಲ ಕಡೆಯೂ ಇರುವ ನೈತಿಕ ಸೌಂದರ್‍ಯ, ಬೌದ್ದಿಕ ಸೌಂದರ್‍ಯ, ಭೌತಿಕ ಸೌಂದರ್‍ಯ, ಭಾವುಕ ಸೌಂದರ್‍ಯ, ಗುಣ ಸೌಂದರ್‍ಯ ಹೀಗೆ ಹಲವು ಬಗೆಯಲ್ಲಿ ಇದು ಇರುತ್ತದೆ. ಇದನ್ನು ಗುರ್ತಿಸುವ ಸೌಂದರ್‍ಯ ಪ್ರಜ್ಞೆ ಬರೆಹಗಾರನಿಗೆ ಇದ್ದರೆ ಅದು ಬರೆಹದಲ್ಲು ಇರುತ್ತದೆ. ಇದು ಬರಿ ಬಣ್ಣವಲ್ಲ, ದನಿಯಲ್ಲ, ಆಂಗಿಕವಲ್ಲ, ಅಲಂಕಾರವಲ್ಲ, ವಾಸನೆಯಲ್ಲ, ಪಂಚೇಂದ್ರಿಯಗಳ ಪ್ರಾಥಮಿಕ ಅನುಭವಗಳಲ್ಲ, ಅದನ್ನೆಲ್ಲ ದಾಟಿದ ಲೋಕಸೌಂದರ್‍ಯ, ಚೆಲುವು. ಇದು ಸಹಬಾಳ್ವೆ, ಸಮಾನತೆ, ಜಾತಿಧರ್‍ಮಾತೀತತೆ, ಲಿಂಗ-ಭಾಷೆ-ದೇಶಾತೀತತೆ ಕೂಡ ಆಗಿರಬಹುದು. ದಯೆ, ಧರ್ಮ, ಕ್ಷಮೆ ಮೊದಲಾಗಿಯೂ ಇರಬಹುದು. ಬದುಕಿನ ಸೌಂದರ್‍ಯ ಯಾವುದು ಎಂದರೆ ಏನೆಲ್ಲ ಹೇಳಬಹುದೋ ಅದೇ ಸಾಹಿತ್ಯದ ಸೌಂದರ್‍ಯ, ಸಾಹಿತ್ಯದ ಅಂತರಾತ್ಮ. ಚೆಲುವು ಸದಾ ಸಾಪೇಕ್ಷ. ಅದು ಒಮ್ಮುಖಿ ಅಲ್ಲ. ಅದು ಶಾಶ್ವತ ಸತ್ಯ ಅಲ್ಲ. ಎಂದೂ ಬದಲಾಗದ ಸಾರ್ವಕಾಲಿಕ, ಸಾರ್ವತ್ರಿಕ ಸತ್ಯ ಅಲ್ಲ. ಒಂದು ಭವ್ಯತೆ ಅಥವಾ ಆತ್ಯಂತಿಕ ಸತ್ಯ ಎನ್ನುವುದೇ ಇಲ್ಲದ ಕಲ್ಪನೆ. ಹಾಗೆಯೇ ಸಾಹಿತ್ಯದ ಅಂತಃಶಕ್ತಿ, ಅಂತರಾತ್ಮ ಕೂಡ ಹೀಗೆಯೇ. ಲೋಕಸೌಂದರ್‍ಯವೇ ಸಾಹಿತ್ಯದ ತಿರುಳು. ಅದನ್ನು ಗುರುತಿಸುವುದೇ ಸಾಹಿತ್ಯದ ಕಾರ್‍ಯ ಎನ್ನುವುದಾದರೆ ಅದು ಖಂಡಿತಾ ಸದಾ ಚಲನಶೀಲ.

*

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...